ಮೆಕ್ಕಲು ಎಂದರೆ ನೀರಿನ ಹರಿವಿನಿಂದ ಉಂಟಾದ ಮರಳು, ಮಣ್ಣು ಇತ್ಯಾದಿಗಳ ಅಸಂಗತಶಿಲಾನಿಕ್ಷೇಪ (ಅಲ್ಯೂವಿಯಮ್; ಎಲ್ಯೂವಿಯಮ್). ನದಿಗಳು ಗಿರಿಶಿಖರಗಳಲ್ಲಿ ಹುಟ್ಟಿ, ಕಣಿವೆಗಳ ಮೂಲಕ ಹರಿದು ವಿಶಾಲಬಯಲಲ್ಲಿ ನಿಧಾನವಾಗಿ ಹರಿಯುತ್ತ ಕೊನೆಗೆ ಸರೋವರವನ್ನೊ ಕಡಲನ್ನೊ ಸೇರುತ್ತವೆ. ಶಿಲಾಕ್ಷಯದಿಂದ ನೀರಿನಲ್ಲಿ ತೇಲಿಕೊಂಡು ಬರುವ ಕಲ್ಲಿನ ಹುಡಿ (ರಾಕ್ ಡೆಬ್ರಿಸ್) ನೀರಿನ ವೇಗ ಇಲ್ಲವೆ ರಾಶಿ ಕಡಿಮೆ ಆದಾಗ ಅಲ್ಲಲ್ಲೇ ನಿಕ್ಷೇಪಗೊಳ್ಳುತ್ತದೆ. ಕಣಿವೆಯ ಮೇಲುಗಡೆ ಹೊಳೆಯ ನೀರಿನಲ್ಲಿ ಕೊಚ್ಚಿಕೊಂಡು ಬಂದ ದಪ್ಪದಪ್ಪ ಕಲ್ಲು ಮರಳು ಮಣ್ಣು ಬೀಸಣಿಗೆಯ ಇಲ್ಲವೆ ಶಂಕುವಿನ ಆಕಾರದಲ್ಲಿ ಒಂದೆಡೆ ಶೇಖರವಾಗುತ್ತದೆ. ಇದಕ್ಕೆ ಮೆಕ್ಕಲು ಬೀಸಣಿಗೆ (ಅಲ್ಯೂವಿಯಲ್ ಫ್ಯಾನ್) ಅಥವಾ ಶಂಕು (ಕೋನ್) ಎಂದು ಹೆಸರು. ಮೆಕ್ಕಲು ಶಿಲೆಯಂತೆ ಗಟ್ಟಿಯಾದಾಗ ಅದನ್ನು ಹಳೆಯ ಮೆಕ್ಕಲು (ಓಲ್ಡ್ ಅಲ್ಯೂವಿಯಲ್) ಎಂದು ಕರೆಯುವುದಿದೆ. ಪ್ರಾಚೀನ ಪ್ರವಾಹದಿಂದ ಉಂಟಾದ ನಿಕ್ಷೇಪಗಳು ಅಷ್ಟೇನೂ ಎತ್ತರದವಾಗಿರುವುದಿಲ್ಲ; ಕಣಿವೆ ಬಾಯ ಬಳಿ ಕಡಿದಾಗಿರುತ್ತವೆ. ಪ್ರವಾಹಕಾಲದಲ್ಲಿ ನದಿಯ ವೇಗ ಅತ್ಯಧಿಕ. ಅದು ಹೊತ್ತುಕೊಂಡು ಬರುವ ವಸ್ತುವಿನ ಪ್ರಮಾಣವೂ ಅತ್ಯಧಿಕ. ಉದಾಹರಣೆಗೆ ಚೀನದ ಹ್ಯೊಯಾಂಗ್ ಪೋ ನದಿ ರಭಸದಿಂದ ಹರಿಯುವಾಗ ಬೇಸಗೆಯಲ್ಲಿ ಒಯ್ಯುವ ಮೆಕ್ಕಲಿನ ಪ್ರಮಾಣ ಸಾಮಾನ್ಯವಾಗಿ ಅದು ಹೊತ್ತುತರುವ ಪ್ರಮಾಣದ 400ಪಟ್ಟು ಹೆಚ್ಚಾಗಿರುತ್ತದೆ. ಉತ್ತರ ಭಾರತದಲ್ಲಿ ಹರಿಯುವ ಗಂಗಾನದಿ ಮಳೆಗಾಲದಲ್ಲಿ ಕಡಲಿಗೆ ಸಾಗಿಸುವ ಮೆಕ್ಕಲಿನ ಪ್ರಮಾಣವಾದರೂ ಉಳಿದ ಕಾಲದಲ್ಲಿ ಒಯ್ಯುವ ಹೊರೆಯ 24ಪಟ್ಟು ಇರುತ್ತದೆ. ಉತ್ತರ ಅಮೆರಿಕದ ಮಿಸಿಸಿಪಿ ನದಿ ಪ್ರತಿಯೊಂದು ಮಿನಿಟಿಗೂ 10 ಲಕ್ಷ ಟನ್ ನೀರನ್ನೂ 800 ಟನ್ ಮಣ್ಣನ್ನೂ 200 ಟನ್ ದ್ರಾವ್ಯಲವಣಗಳನ್ನೂ ಕಡಲಿಗೆ ಸುರಿಯುತ್ತದೆ. ಪ್ರಪಂಚದ ನದಿಗಳೆಲ್ಲ ವರ್ಷಂಪ್ರತಿ ಸಾಗರಗಳಿಗೆ ಸೇರಿಸುವ ಈ ಮೊತ್ತ ಸುಮಾರು 1529(107 ಘನಮೀಟರುಗಳು ಎಂಬುದು ಒಂದು ಅಂದಾಜು.

ಅಮೆಜ಼ಾನ್ ಜಲಾನಯನ ಪ್ರದೇಶದಲ್ಲಿ ಮೆಕ್ಕಲು ನದಿನಿಕ್ಷೇಪಗಳು

ಇವೆಲ್ಲವೂ ಶಿಲಾಕ್ಷಯದಿಂದಲೇ ಬಂದವು. ನದಿಯ ನೀರು ಮುಂದಕ್ಕೆ ಹರಿಯುವಾಗ ಅದು ತನ್ನ ಪಾತ್ರದ ಆಳವನ್ನೂ ಅಗಲವನ್ನೂ ಹಿಗ್ಗಿಸುತ್ತ ಹೋಗುತ್ತದೆ; ನೆಲದ ಅಡಿಯನ್ನು ಕೊರೆಯುತ್ತದೆ, ದಡಗಳನ್ನು ಸವೆಸುತ್ತದೆ. ಪ್ರವಾಹಕಾಲದಲ್ಲಿ ಹೊಳೆಗಳು ತಮ್ಮ ದಡಗಳ ಮೇಲೆ ಎರಡೂ ಕಡೆಗಳ ಬಯಲಲ್ಲಿ ವಿಸ್ತಾರಕ್ಕೆ ಫಲವತ್ತಾದ ಮೆಕ್ಕಲುಮಣ್ಣನ್ನು ಹರಡುತ್ತವೆ. ನದಿಯ ನೀರು ಹಿಂದೆ ಸರಿದಾಗ ಉಳಿಯುವ ಈ ಬಯಲಿಗೆ ಪ್ರವಾಹ ಮೈದಾನ (ಫ್ಲಡ್ ಪ್ಲೇನ್) ಎಂದು ಹೆಸರು. ಪರಂಬು ಎಂಬ ಹೆಸರೂ ಇದೆ. ಉತ್ತರ ಭಾರತದಲ್ಲಿರುವ ಸಿಂಧೂ ಗಂಗಾ ಬ್ರಹ್ಮಪುತ್ರನದಿಗಳು ಸುಮಾರು 10-15 ದಶಲಕ್ಷ ವರ್ಷಗಳಿಂದ ಹಿಮಾಲಯ ಪರ್ವತದ ಶಿಲೆಗಳನ್ನು ಸವೆಸುತ್ತ ಬಂದು ಶೇಖರಿಸಿದ ಮೆಕ್ಕಲು ಮಣ್ಣಿನ ರಾಶಿಯೇ ಗಂಗಾ ಸಿಂಧೂ ನದಿಗಳ ಬಯಲು ಎನಿಸಿದೆ. ಪ್ರಪಂಚದ ಅತ್ಯಂತ ಹುಲುಸಾದ ಭೂಭಾಗಗಳ ಪೈಕಿ ಇದೂ ಒಂದು. ಉತ್ತರ ಹಿಮಾಲಯಪರ್ವತ ಮತ್ತು ದಕ್ಷಿಣದ ಪರ್ಯಾಯದ್ವೀಪದ ಮಧ್ಯ ಭಾಗಗಳು ನಿಧಾನವಾಗಿ ತಗ್ಗುತ್ತ ಇರುವ ಭೂಭಾಗಗಳ ಪೈಕಿ ಸೇರಿವೆ. ಇಲ್ಲೆಲ್ಲ ಸಾವಿರಾರು ಮೀಟರುಗಳ ಎತ್ತರದವರೆಗೆ ಮೆಕ್ಕಲು ಮಣ್ಣು ಸಂಗ್ರಹಗೊಂಡಿದೆ. ಇಲ್ಲಿಯ ನೆಲ ಇನ್ನೂ ಪತ್ತೆ ಆಗಿಲ್ಲ. ಆರ್.ಡಿ. ಓಲ್ಡ್‍ಹ್ಯಾಮ್ ಎಂಬ ಭೂವಿಜ್ಞಾನಿ ಇಲ್ಲಿಯ ನೆಲದ ಆಳ 304-457 ಮೀಗಳಷ್ಟು ಎಂದು ಅಂದಾಜು ಮಾಡಿದ್ದ (1917). 1927ರಲ್ಲಿ ಕಲ್ಕತ್ತ ನಗರದ ಸಮೀಪ ಒಂದೆಡೆ 491.33 ಮೀ ಆಳದವರೆಗೆ ಕೊವೆ ಬಿದ್ದಿತ್ತು; 1938ರಲ್ಲಿ 380.06 ಮೀ ಆಳದವರೆಗೆ ಕೊವೆ ಬಿದ್ದಿತ್ತು. ಇ.ಎ. ಗ್ಲೆನ್ನೀ ಎಂಬ ವಿಜ್ಞಾನಿ ಇಲ್ಲಿಯ ಮೆಕ್ಕಲು ನಿಕ್ಷೇಪದ ನೆಲದ ಆಳ ಸುಮಾರು 1981 ಮೀ ಎಂದು ಅಂದಾಜು ಮಾಡಿದ್ದಾನೆ. ಮರಳು ಮಣ್ಣುಗಳ ಪದರಗಳೊಡನೆ ಮೆಕ್ಕಲಿನಲ್ಲಿ ಸಸ್ಯರಾಶಿ ಹಾಗೂ ಕಂಕರೆ (ಅಶುದ್ಧವಾದ ಸುಣ್ಣಕಲ್ಲು); ಪದರಗಳು ಪರ್ಯಾಯವಾಗಿ ಕಾಣಸಿಗುತ್ತವೆ. ಹೊಳೆಯ ನೀರಿನಲ್ಲಿ ತೇಲಿಕೊಂಡೊ ಕೊಚ್ಚಿಕೊಂಡೊ ಬಂದ ಜಲ್ಲಿಕಲ್ಲುಗಳೂ ಮರಳಿನ ಕಣಗಳೂ ಪರಸ್ಪರ ಸಂಘರ್ಷಿಸಿ ದುಂಡನೆಯ ಇಲ್ಲವೆ ಮೊಟ್ಟೆಯ ಆಕಾರ ಪಡೆಯುತ್ತವೆ. ಮರುಭೂಮಿಗಳಲ್ಲಿ ಗಾಳಿ ಬೀಸುವುದರಿಂದ ಬಂದು ಶೇಖರಗೊಳ್ಳುವ ಮರಳಿನ ಕಣಗಳು ಮತ್ತಷ್ಟು ದುಂಡಾಗಿರುತ್ತವೆ. ಅಲ್ಲಿ ಸಿಡಿಲಿನಿಂದ ಕೂಡಿದ ಮಳೆಯಾಗುವುದು ಅಪೂರ್ವ. ಹಾಗೇನಾದರೂ ಆದಾಗ ಉಂಟಾಗುವ ನೀರಿನ ಪ್ರವಾಹದ ವೇಗ ಬಯಲುಸೀಮೆಯಲ್ಲಿ ಸಾಗುವಾಗ ತಗ್ಗುತ್ತದೆ. ಹೀಗಾಗಿ ಮರುಭೂಮಿಯ ಕಣಗಳು ಬಯಲುನೆಲದಲ್ಲಿ ಮೆಕ್ಕಲಾಗಿ ನಿಕ್ಷೇಪಿಸುತ್ತವೆ.

ಮೆಕ್ಕಲು ನಿಕ್ಷೇಪಗಳು: ಮೆಕ್ಕಲಿನೊಂದಿಗೆ ಕೂಡಿಕೊಂಡು ಉಂಟಾಗಿರುವ ಭಾರ ಖನಿಜಕಣ ಸಂಗ್ರಹಣೆ (ಪ್ಲೇಸರ್ ಡಿಪಾಸಿóಟ್ಸ್), ಭೂಮಿಯ ಮೇಲಿನ ಶಿಲಾಶೈಥಿಲ್ಯದಿಂದ ಚೂರಾಗಿರುವ ಕಣಗಳನ್ನು ಗಾಳಿಯಾಗಲಿ ಹರಿವ ನೀರಾಗಲಿ ಮುಂದಕ್ಕೆ ಸಾಗಿಸುವಾಗ ಹಗುರಕಣಗಳು ಮುಂದುಮುಂದಕ್ಕೆ ತೇಲಿಕೊಂಡು ಹೋಗುವಾಗ ಭಾರಖನಿಜಗಳು ಹರಿವಿಗೆ ತಡೆಯುಂಟಾದೆಡೆ ಶೇಖರವಾಗುತ್ತಿರುತ್ತವೆ. ಇವನ್ನು ಹೆಚ್ಚಾಗಿ ನದಿಮೆಕ್ಕಲಿನೊಂದಿಗೆ ಕಾಣುವುದೇ ಸಾಮಾನ್ಯ.

ಎಲ್ಲ ಖನಿಜಗಳೂ ಈ ಕ್ರಮದಲ್ಲಿ ಶೇಖರಣೆಯಾಗುವುದು ಸಾಧ್ಯವಿಲ್ಲ. ಹೀಗಾಗಲೂ ಅವುಗಳಿಗೆ ಮುಖ್ಯವಾಗಿ ಮೂರು ಗುಣಗಳಿರಬೇಕು: ಅಧಿಕ ಸಾಪೇಕ್ಷ ಸಾಂದ್ರತೆ, ರಾಸಾಯನಿಕ ಸಂಯೋಜನೆಯಲ್ಲಿ ಕೆಡದಿರುವುದು ಮತ್ತು ಬಾಳಿಕೆ. ಈ ವಿಶೇಷಗುಣಗಳು ಚಿನ್ನ, ಪ್ಲಾಟಿನಮ್, ತವರ ಮ್ಯಾಗ್ನಟೈಟ್, ಕ್ರೋಮೈಟ್, ಇಲ್ಮನೈಟ್, ತಾಮ್ರ, ರತ್ನಗಳು ಮೊದಲಾದ ಖನಿಜಗಳಲ್ಲಿ ಇರುವುದು ಕಂಡು ಬಂದಿವೆ.

ಮೆಕ್ಕಲು ನಿಕ್ಷೇಪಗಳ ರೂಪಣೆಯಾದರೂ ಮನುಷ್ಯನಿಗೆ ಪ್ರಕೃತಿದತ್ತವಾಗಿ ಬಂದಿರುವ ಭಾಗ್ಯ. ನೂರಾರು ಟನ್ನುಗಳಷ್ಟು ಶಿಲಾಕಣಗಳಲ್ಲಿ ಬೆರೆತುಹೋಗಿರುವ ಹಲವಾರು ಟನ್ನುಗಳಷ್ಟು ಖನಿಜಗಳು ಬೇರ್ಪಟ್ಟು ಒಂದೆಡೆ ಶೇಖರಗೊಳ್ಳುತ್ತವೆ. ಈ ಕಾರ್ಯದಲ್ಲಿ ಖನಿಜಕಣಗಳ ಸಾಪೇಕ್ಷ ಸಾಂದ್ರತೆಯಲ್ಲಿಯ ವ್ಯತ್ಯಾಸ, ಕಣಗಳ ಗಾತ್ರ ಮತ್ತು ಆಕಾರ, ನೀರಿನ ಹರಿವಿನ ವೇಗ ಮೊದಲಾದ ಅಂಶಗಳು ಪ್ರಧಾನ ಪಾತ್ರ ವಹಿಸುತ್ತವೆ. ಅಧಿಕ ಸಾಂದ್ರತೆಯ ಖನಿಜಗಳು ಭಾರವಾಗಿರುವುದರಿಂದ ಅದೇ ಗಾತ್ರದ ಆದರೆ ಕಡಿಮೆ ಸಾಪೇಕ್ಷಸಾಂದ್ರತೆಯ ಖನಿಜಕಣಗಳಿಗಿಂತಲೂ ಬಹುಬೇಗ ನೀರಿನಲ್ಲಿ ಮುಳುಗುತ್ತವೆ. ಈ ತೆರನ ವ್ಯತ್ಯಾಸಗಳು ವಾಯುವಿಗಿಂತಲೂ ನೀರಿನಲ್ಲಿ ಹೆಚ್ಚು ನಿರ್ದಿಷ್ಟವಾಗಿ ಕಂಡುಬರುತ್ತವೆ. ಖನಿಜಗಳ ಮುಳುಗುವಿಕೆಯಾದರೊ ಅವುಗಳ ಹೊರಮೈಯ ಆಕಾರವನ್ನು ಅವಲಂಬಿಸಿದೆ. ಇದೇ ಕಾರಣಕ್ಕಾಗಿ ದುಂಡನೆಯ ಕಣ ಚಪ್ಪಟೆಯಾಗಿರುವ ಪದರುಕಣಗಳಿಗಿಂತಲೂ ಬಹುಬೇಗ ನೀರಿನಲ್ಲಿ ಮುಳುಗುತ್ತದೆ.

ನೀರಿನ ಹರಿವಿನ ವೇಗ, ಅದರಲ್ಲಿಯ ಬದಲಾವಣೆಗಳೂ ಇಲ್ಲಿ ಮುಖ್ಯ. ನೀರಿನ ಹರಿವಿಗೆ ಹಠಾತ್ತನೆ ತಡೆಯುಂಟಾದಾಗ, ಅದರೊಡನಿರುವ ಖನಿಜ ಕಣಗಳು ಅದರಲ್ಲೂ ಭಾರವಾದವು ಶೀಘ್ರಗತಿಯಲ್ಲಿ ಕೆಳಕ್ಕೆ ತಂಗಿ ಶೇಖರಗೊಳ್ಳುತ್ತವೆ. ಉತ್ತಮದರ್ಜೆಯ ಖನಿಜಕಣನಿಕ್ಷೇಪ ಉಂಟಾಗಲು ಇದರ ಜೊತೆಗೆ ಅಧಿಕ ಪ್ರಮಾಣದಲ್ಲಿ ಖನಿಜಗಳ ಸರಬರಾಜು ಅಗತ್ಯ. ಜೊತೆಗೆ ಅಧಿಕ ಪ್ರಮಾಣದ ಶಿಥಿಲೀಕರಣ ಮತ್ತು ಆ ಪ್ರದೇಶದ ನೀರು ವೇಗವಾಗಿ ಹರಿಯಲು ಅನುಕೂಲಕರ ಸನ್ನೀವೇಶವೂ ಇರಬೇಕು. ಹೀಗಾದಲ್ಲಿ ಮಾತ್ರ ಉತ್ತಮ ದರ್ಜೆಯ ಮೆಕ್ಕಲು ನಿಕ್ಷೇಪಗಳು ಉಂಟಾಗಲು ಸಾಧ್ಯ.

ಬೆಟ್ಟದ ಇಳಿಜಾರಿನಲ್ಲಿ ಶಿಥಿಲೀಕರಣ ಉಂಟಾದಲ್ಲಿ ಭಾರಖನಿಜಕಣಗಳು ಹಗುರ ಶಿಲಾಕಣಗಳಿಗಿಂತಲೂ ನಿಧಾನವಾಗಿ ಇಳಿಜಾರಿನಲ್ಲಿ ಮುಂದೂಡಲ್ಪಡುತ್ತವೆ. ಇದರಿಂದ ಕ್ರಮೇಣ ಭಾರಕಣಗಳು ಒಂದೆಡೆ ಶೇಖರವಾಗಿ ಮೆಕ್ಕಲು ನಿಕ್ಷೇಪ ರೂಪುಗೊಳ್ಳುತ್ತದೆ. ಇವುಗಳ ಉತ್ಪತ್ತಿಯಲ್ಲಿ ನೀರಿಗಿಂತ ಗಾಳಿಯೇ ಹೆಚ್ಚಿನ ಪಾತ್ರ ವಹಿಸುತ್ತದೆ. ನದೀದಡದಲ್ಲಿ ಉಂಟಾದ ನಿಕ್ಷೇಪಗಳಿಗೆ ನದೀಮೆಕ್ಕಲು ನಿಕ್ಷೇಪಗಳೆಂದೂ ಸಮುದ್ರ ತೀರ ಪ್ರದೇಶಗಳಲ್ಲಿ ಉಂಟಾಗುವ ನಿಕ್ಷೇಪಗಳಿಗೆ ಕರೆನಿಕ್ಷೇಪಗಳೆಂದೂ ಹೆಸರು. ಮರುಭೂಮಿಗಳಲ್ಲೂ ಈ ಬಗೆಯ ಖನಿಜ ಶೇಖರಣೆಯನ್ನು ಕಾಣಬಹುದು. ಇಂಥಲ್ಲಿ ಗಾಳಿಯದೇ ಪ್ರಧಾನ ಪಾತ್ರವಾಗಿರುವುದರಿಂದ ಇವಕ್ಕೆ ವಾಯುನಿಕ್ಷೇಪಗಳೆಂದು ಹೆಸರು.

ಮೆಕ್ಕಲು ನಿಕ್ಷೇಪಗಳು ಬೆಟ್ಟದ ಇಳಿಜಾರಿನಲ್ಲಿ ಕಂಡುಬರುತ್ತವೆ. ನದಿ ಅಥವಾ ಕರೆಯ ನಿಕ್ಷೇಪಗಳ ಬೆಳೆವಣಿಗೆಯಲ್ಲಿ ಇದು ಮೊದಲ ಹಂತ. ಇವುಗಳಲ್ಲಿ ಭಾರ ಖನಿಜಗಳು ಅಡಿಯಲ್ಲಿದ್ದು ಹಗುರಖನಿಜಗಳಿಂದ ಮುಚ್ಚಿಹೋಗುತ್ತವೆ. ಕ್ರಮೇಣ ಇಳಿಜಾರಿನಲ್ಲಿ ಪ್ರವಹಿಸುವ ಮಳೆಯ ನೀರಿನಿಂದಲೊ ಬೀಸುವ ಗಾಳಿಯಿಂದಲೊ ಮೇಲಿನ ಖನಿಜಗಳು ಕೊಚ್ಚಿಹೋಗಿ ಒಳಗೆ ಹುದುಗಿರುವ ಖನಿಜನಿಕ್ಷೇಪಗಳು ಕಾಣಿಸಿಕೊಳ್ಳುತ್ತವೆ. ಈ ಬಗೆಯ ನಿಕ್ಷೇಪಗಳಲ್ಲಿ ಮುಖ್ಯವಾದವೆಂದರೆ ಚಿನ್ನ ಮತ್ತು ತವರ. ಎಷ್ಟೊ ವೇಳೆ ಮ್ಯಾಂಗನೀಸ್, ಟಂಗಸ್ಟನ್, ಕಯೊನೈಟ್, ಬೆರೈಟ್ ಮತ್ತು ರತ್ನಗಳೂ ಕಂಡುಬರುವುದುಂಟು.

ಆಸ್ಟ್ರೇಲಿಯ, ನ್ಯೂಜ಼ೀಲೆಂಡ್, ದಕ್ಷಿಣ ಅಮೆರಿಕ ಮತ್ತು ಉತ್ತರ ಅಮೆರಿಕದ ಕ್ಯಾಲಿಫೋರ್ನಿಯ ಪ್ರದೇಶಗಳಲ್ಲಿ ಉತ್ತಮ ದರ್ಜೆಯ ಮೆಕ್ಕಲುಚಿನ್ನದ ನಿಕ್ಷೇಪಗಳು ದೊರೆತಿವೆ. ದಕ್ಷಿಣ ಅಮೆರಿಕದ ಗೈಯಾನದಲ್ಲೂ (ಬ್ರಿಟಿಷ್ ಗಿಯಾನ) ಇವು ಕಂಡುಬಂದಿವೆ. ಮಲಯ, ಇಂಡೊನೇಷ್ಯ, ಬರ್ಮ, ಸಯಾಮ್, ನೈಜೀರಿಯ ಮತ್ತು ಆಸ್ಟ್ರೇಲಿಯಗಳಲ್ಲಿ ಈ ವರ್ಗದ ಮ್ಯಾಂಗನೀಸ್ ನಿಕ್ಷೇಪಗಳೂ ಭಾರತದ ಹಲವೆಡೆ ವಿಲ್‍ಫ್ರಮೈಟ್, ಕಯೊನೈಟ್ ಮತ್ತು ಬರೈಟ್ ಖನಿಜನಿಕ್ಷೇಪಗಳೂ ಇವೆ.

ಮೆಕ್ಕಲು ನಿಕ್ಷೇಪಗಳಲ್ಲಿ ನದೀಮೆಕ್ಕಲು ನಿಕ್ಷೇಪಗಳು ಬಲು ಮುಖ್ಯ. ಚಿನ್ನ, ತವರ, ಪ್ಲಾಟಿನಮ್, ಮತ್ತು ರತ್ನಗಳು ಅಧಿಕ ಪ್ರಮಾಣದಲ್ಲಿ ಈ ಬಗೆಯ ನಿಕ್ಷೇಪಗಳಲ್ಲಿ ದೊರೆತಿವೆ. ಖನಿಜವನ್ನು ಒಪ್ಪಮಾಡುವುದೂ ಅಷ್ಟುಕಷ್ಟತರವಲ್ಲ. ಬಹುಶಃ ಗಣಿಗಾರಿಕೆಯ ಪ್ರಾರಂಭ ಈ ಬಗೆಯ ನಿಕ್ಷೇಪಗಳಲ್ಲೇ ಆಗಿರಬಹುದು.

ಚಿನ್ನದ ನಿಕ್ಷೇಪಗಳಲ್ಲಿ ಬಲು ಸೂಕ್ಷ್ಮಕಣಗಳಿಂದ ದೊಡ್ಡ ದೊಡ್ಡ ಗಾತ್ರಗಳವರೆಗಿನ ಚಿನ್ನ ಲಭಿಸುತ್ತದೆ. ಸೂಕ್ಷ್ಮಕಣಗಳಿಗೆ ವರ್ಣಗಳು (ಕಲರ್ಸ್) ಎಂದು ಹೆಸರು. ಗಟ್ಟಿಗಳು ಸಾಮಾನ್ಯವಾಗಿ ಬಟಾಣಿ ಇಲ್ಲವೆ ನೆಲಗಡಲೆ ಕಾಳಿನ ತೂಕದವಿರುತ್ತವೆ. ಇಲ್ಲಿಯ ತನಕ ದೊರೆತ ಗಟ್ಟಿಗಳಲ್ಲೆಲ್ಲ ಆಸ್ಟ್ರೇಲಿಯಾದಲ್ಲಿ ದೊರೆತ ಬಟಾರ್ಟ್ ಎಂಬ ಚಿನ್ನದ ಗಟ್ಟಿಯೇ ಗಾತ್ರದಲ್ಲಿ ಅತ್ಯಂತ ದೊಡ್ಡದು ಎನಿಸಿದೆ. ಭಾರತದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಪಲವನಹಳ್ಳಿಯಲ್ಲಿ ದೊರೆತ ಗಟ್ಟಿಯೊಂದರಲ್ಲಿ ಸುಮಾರು 1.253 ಕೆಜಿಯಷ್ಟು ಚಿನ್ನವಿದ್ದುದಾಗಿ ಹೇಳಲಾಗಿದೆ. ಇಂಥ ನಿಕ್ಷೇಪಗಳು ನದಿಯ ತೀರಗಳಲ್ಲಿದ್ದು ಇವು ಆಕಾರದಲ್ಲಿ ಸಾಮಾನ್ಯವಾಗಿ ಚಪ್ಪಟೆ ತಟ್ಟೆಯಂತೆ ಇರುತ್ತವೆ.

ಪ್ರಪಂಚದಲ್ಲಿ ಉತ್ಪತ್ತಿಯಾಗುವ ಪ್ಲಾಟಿನಮ್ ಲೋಹದ ಹೆಚ್ಚಿನ ಭಾಗ ನದಿ ಮತ್ತು ಸಮುದ್ರತೀರದ ಮೆಕ್ಕಲು ನಿಕ್ಷೇಪಗಳಲ್ಲಿ ದೊರಕುತ್ತದೆ. ಅನೇಕ ಸ್ಥಳಗಳಲ್ಲಿ ಪ್ಲಾಟಿನಮ್ ಚಿನ್ನದೊಡನೆ ನಿಕಟ ಸಂಬಂಧವನ್ನು ತೋರ್ಪಡಿಸುತ್ತದೆ. ಈ ಲೋಹ ಸಹ ಧೂಳಿನಂತಿರುವ ನವುರಾದ ಸೂಕ್ಷ್ಮರೇಕುಗಳಾಗಿಯೊ ಕೆಲವೊಮ್ಮೆ ಸಣ್ಣಸಣ್ಣ ಗಟ್ಟಿಗಳಾಗಿಯೊ ದೊರೆಯುತ್ತದೆ. ಪ್ರಪಂಚದ ಪ್ಲಾಟಿನಮ್ ಉತ್ಪನ್ನದ ಹೆಚ್ಚಿನ ಭಾಗ ರಷ್ಯದ ಯೂರಲ್ ಪ್ರಾಂತ್ಯದಲ್ಲಿಯ ಮೆಕ್ಕಲು ನಿಕ್ಷೇಪಗಳಿಂದ ಬರುತ್ತದೆ. ಇಲ್ಲಿಯ ನದಿಗಳು ಪೇಲಿಯೊಜೊಯಿಕ್ ಕಲ್ಪದ ಪೆರಿಡೊಟೈಟ್ ಎಂಬ ಪ್ಲಾಟಿನಮ್ ಖನಿಜಯುಕ್ತ ಬೇಸಿಕ್ ಶಿಲೆಗಳ ಮೂಲಕ ಹರಿದುಬರುತ್ತದೆ. ಅಮೆರಿಕದ ಕೊಲಂಬಿಯಾ, ಆಸ್ಟ್ರೇಲಿಯದ ಟಾಸ್ಮೇನಿಯ, ನ್ಯೂಸೌತ್ವೇಲ್ಸ್, ಆಫ್ರಿಕದ ಇಥಿಯೋಪಿಯ, ಜಪಾನ್, ಪನಾಮ ಮತ್ತು ಪಾಪ್ಯುವ ದೇಶಗಳ ಮೆಕ್ಕಲು ನಿಕ್ಷೇಪಗಳಲ್ಲೂ ಪ್ಲಾಟಿನಮ್ ದೊರೆಯುತ್ತದೆ.

ವಜ್ರ ಮೊದಲಾದ ರತ್ನಗಳು ಬಹುತೇಕ ಮೆಕ್ಕಲು ನಿಕ್ಷೇಪಗಳಲ್ಲಿ ಕಂಡುಬರುತ್ತದೆ. ಸುಮಾರು 1871 ರಲ್ಲಿ ದಕ್ಷಿಣ ಆಫ್ರಿಕದ ಪ್ರಸಿದ್ಧ ಕಿಂಬರ್ಲಿ ವಜ್ರದ ಗಣಿಗಳಲ್ಲಿ ಕೆಲಸ ಪ್ರಾರಂಭವಾಯಿತು. ಅದಕ್ಕೆ ಮುನ್ನ ಭಾರತ ಮತ್ತು ಬ್ರಜಿಲಿನ ಮೆಕ್ಕಲು ನಿಕ್ಷೇಪಗಳು ಇತಿಹಾಸ ಪ್ರಸಿದ್ಧ ವಜ್ರಗಳಿಗೆ ಮುಖ್ಯ ಆಕರಗಳಾಗಿದ್ದುವು. ಕಾಶ್ಮೀರ, ಶ್ರೀಲಂಕಾ, ಅಮೆರಿಕದ ಉತ್ತರ ಕ್ಯಾರೊಲೀನ ಮತ್ತು ಜಾರ್ಜಿಯ ಪ್ರಾಂತಗಳ ಮೆಕ್ಕಲುಗಳಲ್ಲಿ ಕೆಂಪು, ಮಾಣಿಕ್ಯ, ನೀಲಮಣಿ, ಪಚ್ಚೆ ಮೊದಲಾದ ರತ್ನಗಳು ಸಿಗುತ್ತವೆ.

ಸಮುದ್ರ ನಿಕ್ಷೇಪಗಳು: ಇವು ಕಡಲಕರೆಯ ನಿಕ್ಷೆಪಗಳು. ಇವುಗಳ ಬೆಳೆವಣಿಗೆಯಲ್ಲಿ ಸಮುದ್ರದ ಅಲೆಗಳದೇ ಮುಖ್ಯಪಾತ್ರ. ಜೊತೆಗೆ ತೀರಪ್ರದೇಶದ ಅಲೆಗಳೂ ಈ ಬಗೆಯ ನಿಕ್ಷೇಪಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಒಯ್ಯತ್ತವೆ. ಹೀಗಾದಾಗ ಹಗುರ ಕಣಗಳನ್ನು ಅಲೆಗಳು ಬಲು ವೇಗದಿಂದ ಹೊತ್ತು ಬಹುದೂರಕ್ಕೆ ಸಾಗಿಸುತ್ತವೆ. ಭಾರ ಖನಿಜಕಣಗಳು ಯಾವುವಾದರೂ ಒಂದು ನಿರ್ದಿಷ್ಟ ಸ್ಥಳದಲ್ಲಿ ಶೇಖರಗೊಳ್ಳುತ್ತ ಹೋಗುತ್ತವೆ. ಅಲೆಗಳು ರಭಸದಿಂದ ಕರೆಯನ್ನು ಕೊಚ್ಚಿದಾಗಲೂ ಹಗುರಕಣಗಳು ಬೇರ್ಪಟ್ಟು ದೂರಕ್ಕೆ ಒಯ್ಯಲ್ಪಡುತ್ತವೆ. ಇಂಥ ನಿಕ್ಷೇಪಗಳಲ್ಲಿ ದೊರೆಯುವ ಮುಖ್ಯ ಖನಿಜಗಳು ಎಂದರೆ ಚಿನ್ನ, ಇಲ್ಮನೈಟ್, ರೂಟೈಲ್, ವಜ್ರ, ಮೋನಜೈಟ್, ಕ್ವಾಟ್ರ್ಸ್, ಗಾರ್ನೆಟ್ ಇತ್ಯಾದಿ.

ಸಮುದ್ರತೀರದ ಮೆಕ್ಕಲು ನಿಕ್ಷೇಪಗಳ ಖನಿಜಗಳಾದರೊ ಸಮುದ್ರವನ್ನು ಸೇರುವ ನದೀಮೆಕ್ಕಲು, ಕರಾವಳಿಯ ತೀರಪ್ರದೇಶಗಳ ಶಿಲೆಗಳ ಶಿಥಿಲೀಕರಣ ಇವುಗಳಿಂದ ಉಂಟಾದವು. ಇವುಗಳ ಪೈಕಿ ಅಲಾಸ್ಕ ಪ್ರಾಂತ್ಯದ ನೊವೆ ಎಂಬಲ್ಲಿಯ ಚಿನ್ನದ ನಿಕ್ಷೇಪಗಳು ಸುಪ್ರಸಿದ್ಧ. ಭಾರತದ ಕೇರಳದ ಕರಾವಳಿಯಲ್ಲಿಯ ಈ ತೆರನ ನಿಕ್ಷೇಪಗಳು ಸುಪ್ರಸಿದ್ಧ. ಭಾರತದ ಕೇರಳದ ಕರಾವಳಿಯಲ್ಲಿಯ ಈ ತೆರನ ನಿಕ್ಷೇಪಗಳು ಇಲ್ಮನೈಟ್, ರೂಟೈಲ್, ಮೋನಜೈಟ್, ಗಾರ್ನೆಟ್ ಮುಂತಾದ ಖನಿಜಗಳು ಹೇರಳವಾಗಿ ದೊರೆಯುತ್ತವೆ. ಶ್ರೀಲಂಕಾ, ಬ್ರಜಿಲ್, ಆರ್ಜೆಂಟೀನ, ಅಮೆರಿಕ ಸಂಯುಕ್ತ ಸಂಸ್ಥಾನದ ಫ್ಲಾರಿಡ್, ಕ್ಯಾಲಿಫೋರ್ನಿಯ ಕರಾವಳಿಗಳಲ್ಲೂ ಇಂಥ ನಿಕ್ಷೇಪಗಳಿವೆ. ದಕ್ಷಿಣ ಆಫ್ರಿಕದ ನಾಮಕ್ವಾ ಲ್ಯಾಂಡ್ ಪ್ರದೇಶದ ಸಮುದ್ರತೀರದ ಮೆಕ್ಕಲಿನಲ್ಲಿ 1928 ರಲ್ಲಿ 50 ಮಿಲಿಯನ್ ಡಾಲರ್ ಬೆಲೆ ಬಾಳುವ ಖನಿಜಸಂಪತ್ತು ದೊರೆತಿತ್ತು. ಕೇರಳದ ಕರಾವಳಿಯ ನಿಕ್ಷೇಪಗಳಲ್ಲಿ ಲಾಭದಾಯಕ ರೀತಿಯಲ್ಲಿ ಗಣಿಕೆಲಸ ನಡೆಯುತ್ತಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮೆಕ್ಕಲು&oldid=899331" ಇಂದ ಪಡೆಯಲ್ಪಟ್ಟಿದೆ