ನೀರಾವರಿ ಎಂದರೆ ನೆಲಕ್ಕೆ ಕೃತಕವಾಗಿ ನೀರಿನ ಅನ್ವಯ (ಇರಿಗೇಶನ್). ಮುಖ್ಯವಾಗಿ ಬೇಸಾಯಕ್ಕೆ ಮಳೆನೀರನ್ನು ಮಾತ್ರ ಆಶ್ರಯಿಸದೆ ಇತರ ನೈಸರ್ಗಿಕ ಮೂಲಗಳಿಂದ-ಉದಾಹರಣೆಗೆ ನದಿ ಸರೋವರ ತೋಡುಬಾವಿಗಳಿಂದ-ನೀರನ್ನು ಒದಗಿಸುವುದು ನೀರಾವರಿಯ ಉದ್ದೇಶ. ನೀರಿನ ಮೂಲ (ಜಲಾಶಯ) ಮತ್ತು ಸಂಗ್ರಹಿತ ಜಲವನ್ನು ಉದ್ದಿಷ್ಟ ನಿವೇಶನಗಳಿಗೆ ಹರಿಸಲು ಕಾಲುವೆಗಳೂ-ಇವು ನೀರಾವರಿಯ ಪ್ರಮುಖಾವಶ್ಯಕತೆಗಳು. ಹೊಳೆಗಳಿಗೆ ಅನುಕೂಲ ಸ್ಥಳಗಳಲ್ಲಿ ಅಡ್ಡವಾಗಿ ಕಟ್ಟೆಕಟ್ಟಿ ಜಲಾಶಯವನ್ನು ನಿರ್ಮಿಸುವುದೂ ಅಲ್ಲಿಂದ ನೀರನ್ನು ಸಾಗಿಸಲು ನಿರ್ದಿಷ್ಟ ಯೋಜನಾನುಸಾರ ಕಾಲುವೆ ತೋಡುಗಳನ್ನು ಕಡೆಯುವುದೂ ನದೀ ನೀರಾವರಿಯಲ್ಲಿ ಅವಶ್ಯವಾಗಿ ಪಾಲಿಸಬೇಕಾದ ವಿಧಿಗಳು. ಎಲ್ಲ ಸಂದರ್ಭಗಳಲ್ಲಿಯೂ ಜಲಾಶಯದ ಮಟ್ಟ ಉದ್ದಿಷ್ಟ ನಿವೇಶನಗಳ ಮಟ್ಟಕ್ಕಿಂತ ಎತ್ತರದಲ್ಲಿ ಇರುವುದು ಅಪೇಕ್ಷಣೀಯ. ಆದರೆ ಎಲ್ಲೆಡೆಗಳಲ್ಲಿಯೂ ಈ ಅನುಕೂಲ ಪರಿಸ್ಥಿತಿ ಇರುವುದು ಅಸಂಭಾವ್ಯ. ಅಂಥಲ್ಲಿ ಜಲಾಶಯದ ಮಟ್ಟದಿಂದ ಎತ್ತರ ಮಟ್ಟಗಳಲ್ಲಿರುವ ನಿವೇಶನಗಳಿಗೆ ನೀರನ್ನು ಒಯ್ಯುವುದು ಹೆಚ್ಚಿನ ಪ್ರಯತ್ನಗಳನ್ನು ಬೇಡುತ್ತದೆ. ಉದಾಹರಣೆಗೆ, ಜಲಾಶಯದಿಂದ ಯಂತ್ರಗಳ ನೆರವು ಪಡೆದು ನೀರನ್ನು ಎತ್ತರ ನೆಲೆಗಳಿಗೆ ಬಲಾತ್ಕಾರವಾಗಿ ಸಾಗಿಸಬೇಕಾಗುವುದು ; ಅನುಕೂಲವಾದ ಎತ್ತರ ಜಾಗದಲ್ಲಿ ನೀರಿನ ಸಂಗ್ರಹಕ್ಕೆ ಸಾಕಷ್ಟು ಅವಕಾಶ ಒದಗಿಸಿ ಅಲ್ಲಿಗೆ ಜಲಾಶಯದಿಂದ ನೀರನ್ನು ಬಲಾತ್ಕಾರವಾಗಿ ಸಾಗಿಸಿ ಅಲ್ಲೊಂದು ಕೃತಕ ಜಲಾಶಯವನ್ನೇ ಸ್ಥಾಪಿಸಬೇಕಾದೀತು. ಇದರಿಂದ ಮತ್ತೆ ಈ ಹಿಂದೆ ಹೇಳಿರುವಂತೆ ನಾಲೆಗಳ ಮೂಲಕ ತಗ್ಗು ಪ್ರದೇಶಗಳಿಗೆ ನೀರನ್ನು ಹರಿಸಬಹುದು.

ಕೇಂದ್ರ ಆಧಾರ ಗೂಟ ನೀರಾವರಿ ವ್ಯವಸ್ಥೆ

ಇತಿಹಾಸ ಬದಲಾಯಿಸಿ

ಕ್ರಿ.ಪೂ. 4000ಕ್ಕೂ ಹಿಂದೆ ಈಜಿಪ್ಟಿನಲ್ಲಿ ನೈಲ್ ನದಿಯ ನೀರಿನಿಂದ ನೀರಾವರಿ ಬಳಕೆಯಲ್ಲಿತ್ತು. ಆಮೇಲೆ ಮೆಸೊಪೊಟೇಮಿಯಲ್ಲಿ ಹೊಳೆಯಿಂದ ನಾಲೆಗಳಿಗೆ ನೀರನ್ನು ತಿರುಗಿಸಲು ಅಣೆಗಳನ್ನು ಕಟ್ಟಿದರು. ಈಜಿಪ್ಟಿನಲ್ಲಿ ನದಿಗೆ ಸಮಾಂತರವಾಗಿ ದಡಗಳಲ್ಲಿ ಎಷ್ಟೊ ಕಿಲೊಮೀಟರ್ ಉದ್ದದ ಸಣ್ಣ ಮಣ್ಣಿನ ಏರಿಗಳನ್ನೂ ಅವುಗಳಿಗೆ ಲಂಬಕೋನವಾಗಿ ಬೇರೆ ಏರಿಗಳನ್ನು ಕಟ್ಟಿ ನೈಲ್ ನದಿಯಲ್ಲಿ ಪ್ರವಾಹ ಬಂದಾಗ ಹೊಳೆಯ ನೀರನ್ನು ಏರಿಗಳ ಮಧ್ಯದ ತೊಟ್ಟಿಗಳೊಳಕ್ಕೆ ಹರಿದು ಸಂಗ್ರಹಗೊಳ್ಳಲು ಬಿಡುತ್ತಿದ್ದರು. ನೈಲ್ ನದಿಯಲ್ಲಿ ಪ್ರತಿವರ್ಷವೂ ಒಂದೇ ಶ್ರಾಯದಲ್ಲಿ ಪ್ರವಾಹ ಬರುವುದಾದರೂ ವರ್ಷದಿಂದ ವರ್ಷಕ್ಕೆ ಈ ನೀರಿನ ಗಾತ್ರದಲ್ಲಿ ಕೊಂಚ ವ್ಯತ್ಯಾಸವಾಗುತ್ತದೆ. ನಾಲೆಗಳ ಮೇಲೆ 1126 ಕಿಲೋಮೀಟರ್‍ಗಳ ಅಂತರದಲ್ಲಿ ನೈಲಾ ಮೀಟರ್ ಎಂಬ ಅಳೆಯುವ ದೊಡ್ಡ ಯಂತ್ರ ಇಟ್ಟು ನೀರನ್ನು ಅಳತೆ ಮಾಡಿ ಪ್ರತಿಯೊಬ್ಬ ರೈತನಿಗೂ ಆತ ಬಳಸಿದ ನೀರಿನ ಮೇಲೆ ಕಂದಾಯ ವಿಧಿಸುತ್ತಿದ್ದರು. ಗದ್ದೆಗಳಿಗೆ ನೀರನ್ನು ತೂಬಿನ ಬಾಗಿಲುಗಳಿಂದ ಬಿಟ್ಟು ಕ್ಲುಪ್ತ ಕಾಲಗಳಲ್ಲಿ ಪಡಿಗಳನ್ನು ಮತ್ತೆ ಮುಚ್ಚುತ್ತಿದ್ದರು. ಈಚೆಗೆ ನೈಲ್ ನದಿಗೆ ಅಡ್ಡ ಅಸ್ವಾನಿನಲ್ಲಿ ಕಲ್ಲುಗಾರೆಯ ಕಟ್ಟೆಯನ್ನು ಕಟ್ಟಿ ನೀರನ್ನು ಹೊಳೆಗೆ ಬಿಟ್ಟು ಅಸ್ಯುಯಿಟಿನಲ್ಲಿ ಒಂದು ಬ್ಯಾರಾಜನ್ನು ಕಟ್ಟಿ ನೀರಿನ ಮಟ್ಟವನ್ನು ಎತ್ತಿ ನಾಲೆಗಳಿಗೆ ಬಿಡುತ್ತಿದ್ದಾರೆ.

ರೋಮನರ ಲಕ್ಷ್ಯ ನಗರಗಳಿಗೆ ಕುಡಿಯುವ ನೀರನ್ನು ಒದಗಿಸುವ ಕಡೆಗೆ ತಿರುಗಿತು. ಅವರ ನೀರಿನ ಕೊಳಾಯಿಗಳು ಮತ್ತು ಮೇಲುಗಾಲುವೆಗಳು ಇಂದಿಗೂ ಹೆಸರುವಾಸಿಯಾಗಿವೆ. ಫ್ರಾನ್ಸಿನಲ್ಲಿ ಅವರು ಕಟ್ಟಿದ ಒಂದು ಮೇಲುಗಾಲುವೆ ಈಗಲೂ ಬಳಕೆಯಲ್ಲಿದೆ.

ಭಾರತದಲ್ಲಿ ನೀರಾವರಿಯ ಕಾಮಗಾರಿಗಳಿಗೆ ಇತಿಹಾಸಪೂರ್ವ ಕಾಲದಿಂದಲೂ ಪ್ರಾಶಸ್ತ್ಯವನ್ನು ಕೊಟ್ಟಿದ್ದಾರೆ. ನಮ್ಮ ಕೆರೆಗಳು, ಅಣೆಕಟ್ಟುಗಳು ಮತ್ತು ನಾಲೆಗಳು ಇಲ್ಲದೆ ಹೋಗಿದ್ದರೆ ಮಳೆಯನ್ನು ನೆಚ್ಚಲಾಗದ ಈ ದೇಶದ ಅನೇಕ ಭಾಗಗಳಲ್ಲಿ ಬೇಸಾಯವೇ ಸಾಧ್ಯವಾಗುತ್ತಿರಲಿಲ್ಲ.

ಉಪಯೋಗ ಬದಲಾಯಿಸಿ

ನೀರಾವರಿಯ ಉಪಯೋಗ ಮುಖ್ಯವಾಗಿ ಬೆಳೆಯನ್ನು ಹೆಚ್ಚಿಸುವುದು ಮತ್ತು ಮಳೆ ಸಾಕಷ್ಟು ಬೀಳದಾಗ ಪೈರನ್ನು ಕಾಪಾಡುವುದು. ಈ ಉಪಯೋಗ ಭೂಮಿಯ ಗುಣ, ಬೀಳುವ ಮಳೆ, ವಾಯುಗುಣ, ಭೂಮಿಗೆ ಬಗ್ಗುವ ಬೆಳೆಗಳು-ಇವನ್ನು ಅವಲಂಬಿಸಿವೆ. ಕರ್ನಾಟಕದ ಮಲೆನಾಡಿನಲ್ಲಿ ಮಳೆ ಸಮೃದ್ಧಿಯಾಗಿ ಸುರಿದು ನೀರಾವರಿಯ ಅವಶ್ಯಕತೆಯೇ ಇಲ್ಲದೆ ಇರಬಹುದು. ಇನ್ನು ಕೆಲವು ಕಡೆ ಬೀಳುವ ಮಳೆ ಸಾಮಾನ್ಯವಾಗಿ ಸಾಕಾದರೂ ಅನಾವೃಷ್ಟಿಯ ಕಾಲದಲ್ಲಿ ತೊಂದರೆ ಆಗಬಹುದು; ಅಥವಾ ಅಕಾಲದಲ್ಲಿ ಬಿದ್ದು ಪೈರಿಗೆ ಉಪಯೋಗವಿಲ್ಲದೆ ಹೋಗಬಹುದು. ಬಯಲು ಸೀಮೆಯಲ್ಲಿ ಸತರಿಯ ಪೈರನ್ನು ಬೆಳೆಯಲು ಮಳೆ ಸಾಲದೆ ಖುಷ್ಕಿ ಪೈರನ್ನೇ ಬೆಳೆಸಬೇಕಾಗುತ್ತದೆ. ನೀರಾವರಿಯ ಪ್ರಯೋಜನ ನಿರ್ಣಯವಾಗುವುದು ಆ ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣದಿಂದ. ಅದು ಒಂದೇ ವರ್ಷದಿಂದ ಬೇರೆ ಬೇರೆ ಪ್ರದೇಶಗಳಲ್ಲಿ ಬದಲಾಗುವುದು ಸರಿಯಷ್ಟೆ. ಒಂದೇ ಊರಿನಲ್ಲಿ ಬೇರೆ ಬೇರೆ ವರ್ಷಗಳಲ್ಲಿಯೂ ಅದು ವ್ಯತ್ಯಾಸವಾಗುತ್ತದೆ.

ಮಲೆನಾಡಿನಲ್ಲಿ ಬೀಳುವ ಮಳೆಯಲ್ಲಿ ಹೆಚ್ಚು ಪಾಲು ನೈಋತ್ಯ ಮಾರುತ ಬೀಸುವಾಗ ಜೂನ್ ತಿಂಗಳಿಂದ ಅಕ್ಟೋಬರಿನ ಮಧ್ಯದ ತನಕವೂ ಸುರಿಯುತ್ತದೆ. ಇದರ ಗಾತ್ರ 450 ಛಿm ನಿಂದ 635 ಛಿm ವರೆಗೂ ವ್ಯತ್ಯಾಸವಾಗುತ್ತದೆ. ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ 900 ಛಿm ಗೂ ಮಿಕ್ಕಿ ಮಳೆಯಾಗುತ್ತದೆ. ಆದರೆ ಪರ್ಯಾಯ ದ್ವೀಪದ ಆಗ್ನೇಯ ಭಾಗದಲ್ಲಿ ಅಕ್ಟೋಬರಿನಿಂದ ಡಿಸೆಂಬರಿನ ಮಧ್ಯದ ತನಕ ಈಶಾನ್ಯ ಮಾರುತ ಬೀಸುವಾಗ ಮಳೆ ಬೀಳುತ್ತದೆ. ಇದನ್ನು ಹೆಚ್ಚು ಮಳೆಯ ವಲಯವೆನ್ನಬಹುದು.

ಪೂರ್ವ ಸಮುದ್ರತೀರದಲ್ಲಿ ಉತ್ತರಕ್ಕೂ ಮದರಾಸಿನಿಂದ ದಕ್ಷಿಣಕ್ಕೆ ತಂಜಾವೂರಿನವರೆಗೂ ಪಶ್ಚಿಮ ತೀರದಲ್ಲಿ ಸಹ್ಯಾದ್ರಿಯ ಪೂರ್ವ ತಪ್ಪಲಿನಲ್ಲಿಯೂ ಉತ್ತರಕ್ಕೆ ಬರೋಡದವರೆಗೂ ವರ್ಷಕ್ಕೆ ಸರಾಸರಿ 100 ಛಿm ಮಳೆ ಆಗುತ್ತದೆ. ಇವನ್ನು ಸರಾಸರಿ ಮಳೆಯ ವಲಯಗಳೆನ್ನಬಹುದು. ಭಾರತದ ಉಳಿದ ಭಾಗಗಳಲ್ಲಿ 100 ಛಿmಗಿಂತ ಕಡಿಮೆ ಮಳೆ ಆಗುತ್ತದೆ. ಕಾಥಿಯವಾಡ ಮೊದಲಾದ ಕಡೆಗಳಲ್ಲಂತೂ 35 ಛಿmಗೂ ಕಡಿಮೆ ಮಳೆ ಬೀಳುತ್ತದೆ. ಇದು ಕಡಿಮೆ ಮಳೆಯ ವಲಯ. ಹಿಮಾಲಯದ ತಪ್ಪಲುಗಳನ್ನು ಬಿಟ್ಟು ಭಾರತದಲ್ಲಿ ಬೀಳುವ ಮಳೆಯ ನೀರನ್ನೆಲ್ಲ ಒಟ್ಟು ದೇಶದ ಮೇಲೆ ಒಂದೇ ಸಮವಾಗಿ ಹರಡಿದರೆ ಸುಮಾರು 100 ಛಿm ಮಳೆ ಆಗುತ್ತದೆ. ಆದರೆ ಬೇರೆ ಬೇರೆ ಪ್ರದೇಶಗಳಲ್ಲಿ ವರ್ಷವೂ ಬೀಳುವ ಮಳೆ ವಿಶೇಷವಾಗಿ ವ್ಯತ್ಯಾಸವಾಗುತ್ತದೆ. ವರ್ಷಕ್ಕೆ 60 ಛಿmಗಿಂತ ಕಡಿಮೆ ಮಳೆ ಬೀಳುವ ಕಡೆ ನೀರಾವರಿಯಿಲ್ಲದೆ ಬೇಸಾಯ ಸಾಧ್ಯವೇ ಇಲ್ಲ. ಹಾಗೆಯೇ 175 ಛಿmಗಿಂತ ಹೆಚ್ಚಾದರೆ ನೀರಾವರಿಯೇ ಬೇಕಿಲ್ಲ. ಈ ಎರಡು ಪ್ರದೇಶಗಳ ಮಧ್ಯೆ ಭಾರತದ ಸುಮಾರು 26 ಲಕ್ಷ ಚಕಿಮೀ ಪ್ರದೇಶಗಳ ಮೇಲೆ ನೀರಾವರಿಯ ನೆರವಿಲ್ಲದೆ ಗದ್ದೆಗಳಲ್ಲಿ ಪೈರುಗಳನ್ನು ಬೆಳೆಸಲಾಗುವುದಿಲ್ಲ. ಕೆಲವು ಪ್ರದೇಶಗಳಲ್ಲಿ ಒಂದೊಂದು ವರ್ಷ ಹುಚ್ಚು ಮಳೆ ಬಿದ್ದು ಪೈರುಗಳೆಲ್ಲ ಕೊಚ್ಚಿಹೋಗಿ ಹೊಳೆಗಳಲ್ಲಿ ಅನಿರೀಕ್ಷಿತವಾದ ಪ್ರವಾಹಗಳು ಬಂದು ತೊಂದರೆ ಆಗುತ್ತದೆ. ಇನ್ನು ಕೆಲವು ವರ್ಷಗಳಲ್ಲಿ ಮಳೆ ಕೆಲವು ಪ್ರದೇಶಗಳಲ್ಲಿ ತೀರ ಕಡಿಮೆ ಆಗಿ ಕ್ಷಾಮ ತಲೆದೋರುತ್ತದೆ. ಇಂಥ ಕಡೆಗಳಲ್ಲಂತೂ ನೀರಾವರಿ ಅತ್ಯವಶ್ಯ. (ಎಚ್.ಸಿ.ಕೆ.)

ನೀರಾವರಿ ವಿಧಾನಗಳು ಬದಲಾಯಿಸಿ

ಮುಖ್ಯವಾದ ನೀರಾವರಿ ವಿಧಾನಗಳನ್ನು ಹೀಗೆ ವಿಂಗಡಿಸಬಹುದು:

  1. ಅಂತರ್ಜಲ ನೀರಾವರಿ
  2. ಕೆರೆ ನೀರಾವರಿ
  3. ಕಾಲುವೆ ನೀರಾವರಿ
  4. ವಿವಿಧೋದ್ದೇಶ ಯೋಜನೆಗಳು

ಅಂತರ್ಜಲ ನೀರಾವರಿ ಬದಲಾಯಿಸಿ

ನೆಲದಡಿ ಅತಿ ಆಳಗಳಲ್ಲಿ ಹರಿಯುತ್ತಿರುವ ನೀರ ಸೆಲೆಯೇ ಅಂತರ್ಜಲ. ಇಂಥ ಅಂತರ್ಜಲ ಮೂಲಗಳನ್ನು ನೀರಾವರಿಗೆ ಬಳಸುವುದು ಪ್ರಾಚೀನ ಕಾಲದಿಂದಲೂ ಇರುವ ಒಂದು ವಿಧಾನ. ಬೇಸಾಯಕ್ಕಾಗಿ ಅಂತರ್ಜಲ ಮೂಲಗಳನ್ನು ಸದುಪಯೋಗಪಡಿಸಲು ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳ ಪ್ರಾಶಸ್ತ್ಯ ಕೊಡಲಾಗಿದೆ. ಅಂತರ್ಜಲ ಸಮೀಕ್ಷೆಗಳನ್ನು ನಡೆಸಿ ಯಾವ ಪ್ರದೇಶದಲ್ಲಿ ಬಾವಿಗಳನ್ನು ತೋಡಿ ಸಾಕಷ್ಟು ನೀರು ಪಡೆಯಲು ಅವಕಾಶವಿದೆ ಎಂಬುದನ್ನು ಭೂಗರ್ಭತಜ್ಞರು ತಿಳಿಸುತ್ತಾರೆ. ಇಂಥ ಸಮೀಕ್ಷೆಗಳ ಆಧಾರದ ಮೇಲೆ ಅಂತರ್ಜಲ ಮೂಲವನ್ನು ನೀರಾವರಿಗೆ ಸಂಪೂರ್ಣವಾಗಿ ಬಳಸುವ ಪ್ರಯತ್ನ ನಡೆದಿದೆ. ಬಾವಿಗಳಲ್ಲಿ ಎರಡು ಬಗೆಗಳುಂಟು: (i) ನೆಲಬಾವಿಗಳು; (ii) ಕೊಳವೆಬಾವಿಗಳು. ಭಾರತದಲ್ಲಿ 30 ಲಕ್ಷಕ್ಕಿಂತಲೂ ಹೆಚ್ಚು ನೆಲಬಾವಿಗಳಿವೆ ಎಂಬುದು ಒಂದು ಅಂದಾಜು. ಉತ್ತರ ಪ್ರದೇಶ, ಪಂಜಾಬ್, ತಮಿಳುನಾಡು ಮತ್ತು ಮಹಾರಾಷ್ಟ್ರಗಳಲ್ಲಿ ಇವು ವಿಶೇಷವಾಗಿವೆ. ಒಂದು ನೆಲ ಬಾವಿ ಸರಾಸರಿ 2 ಹೆಕ್ಟೇರ್ ಜಮೀನಿನ ವ್ಯವಸಾಯಕ್ಕೆ ನೀರನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ. ನೆಲದ ಮೇಲ್ಮೈಯಲ್ಲಿ ನೀರು ದೊರೆಯುವಂತಿದ್ದು ಹೆಚ್ಚು ಆಳದ ಬಾವಿಗಳ ಅಗತ್ಯ ಇಲ್ಲದಿರುವೆಡೆಗಳಲ್ಲಿ ಇಂಥ ಬಾವಿಗಳಿಂದಲೇ ನೀರನ್ನು ಒದಗಿಸಿಕೊಳ್ಳಬಹುದು. ಆದರೆ ಸಾಕಷ್ಟು ನೀರು ಪಡೆಯಲು ಹೆಚ್ಚು ಆಳಕ್ಕೆ ಹೋಗಬೇಕಾದರೆ ಕೊಳವೆ ಬಾವಿಗಳ ನಿರ್ಮಾಣ ಯುಕ್ತ. ಕೊಳವೆ ಬಾವಿ ಸಾಮಾನ್ಯವಾಗಿ ಇಪ್ಪತ್ತರಿಂದ ನೂರೈವತ್ತು ಮೀಟರುಗಳ ಆಳದವರೆಗೆ ಹೋಗುತ್ತದೆ. ಕೊರೆಯುವ ಯಂತ್ರಗಳಿಂದ ಇವುಗಳ ನಿರ್ಮಾಣ ಸಾಧ್ಯ. ನೆಲಬಾವಿಗಿಂತ ಅಧಿಕ ಮೊತ್ತದಲ್ಲಿ ಕೊಳವೆ ಬಾವಿಯಲ್ಲಿ ನೀರು ದೊರಕಿ ಹೆಚ್ಚು ಪ್ರದೇಶದಲ್ಲಿ ಬೇಸಾಯ ಮಾಡಲು ಸಾಧ್ಯವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಉತ್ತರ ಪ್ರದೇಶದಲ್ಲಿ ಕೊಳವೆ ಬಾವಿಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿವೆ.

ಬಾವಿಗಳಿಂದ ನೀರೆತ್ತಲು ವಿದ್ಯುತ್ತಿನ ಸಹಾಯದಿಂದ ಕೆಲಸ ಮಾಡುವ ಪಂಪುಗಳ ಬಳಕೆ ಈಗ ಸರ್ವೇ ಸಾಮಾನ್ಯ. ಈ ರೀತಿ ಎತ್ತಿದ ನೀರು ಸಣ್ಣ ಕಾಲುವೆಗಳ ಮೂಲಕ ಬೇಸಾಯದ ಜಮೀನಿಗೆ ಹರಿಯುತ್ತದೆ. ಈ ವಿಧಾನದಲ್ಲಿ ಹೆಚ್ಚು ನೀರು ಅಪವ್ಯಯವಾಗುತ್ತದೆ. ನೀರಿನ ಅಭಾವವಿರುವಲ್ಲಿ ಆದಷ್ಟು ಮಿತವಾಗಿ ನೀರನ್ನು ಬಳಸಿ ಬೆಳೆಗೆ ಅನುಕೂಲವಾಗುವಂತೆ ಮಾಡುವುದು ಅಗತ್ಯ. ಈ ಕಾರಣದಿಂದ ಸಿಂಪಡಿಕೆ ನೀರಾವರಿ ವಿಧಾನ ಬಳಕೆಗೆ ಬಂದಿದೆ. ಬಾವಿಯಿಂದ ಎತ್ತಿದ ನೀರನ್ನು ಒತ್ತಡ ಕೊಳವೆಯ ಮೂಲಕ ಬೆಳೆಗೆ ಸಿಂಪಡಿಸುವುದೇ ಇದರಲ್ಲಿ ಅನುಸರಿಸುವ ವಿಧಾನ.

ಉಲ್ಬಣ ನೀರಾವರಿಯ ಉಪಯೋಗ ಬದಲಾಯಿಸಿ

ನೀರನ್ನು ಶೇಖರಿಸಿ ಬೇಸಾಯಕ್ಕೆ ಬಳಸುವ ಸಲುವಾಗಿ ಕೈಗೊಂಡಿರುವ ಕ್ರಮಗಳಲ್ಲಿ ಕೆರೆಗಳ ನಿರ್ಮಾಣ ಮುಖ್ಯವೂ ಹೌದು, ಪ್ರಾಚೀನವೂ ಹೌದು. ಈ ಕೆರೆಗಳು ಸಾಮಾನ್ಯವಾಗಿ ಮಣ್ಣಿನ ಏರಿ ಹಾಕಿ ಕಟ್ಟಿದಂಥವು. ನಾಲ್ಕಾರು ಹೆಕ್ಟೇರುಗಳಿಗೆ ನೀರು ಒದಗಿಸುವ ಸಣ್ಣದರಿಂದ ಹಿಡಿದು ನಲ್ವತ್ತು ಐವತ್ತು ಹೆಕ್ಟೇರುಗಳಿಗೆ ನೀರಿ ಒದಗಿಸುವ ದೊಡ್ಡದರವರೆಗೆ ಕೆರೆಗಳ ನಿರ್ಮಾಣವಾಗಿದೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ತಮಿಳು ನಾಡಿನಲ್ಲಿ ಕೆರೆಗಳು ವಿಶೇಷವಾಗಿವೆ. ಸುತ್ತುಮುತ್ತಲಿಂದ ಮಳೆಯ ನೀರು ಹರಿದು ಬಂದು ತುಂಬುವ ಸಣ್ಣ ಕೆರೆಗಳುಂಟು. ನದಿಗೆ ಸಣ್ಣ ಅಡ್ಡಕಟ್ಟೆ ಹಾಕಿ ಕಾಲುವೆಗೆ ನೀರು ಬರುವಂತೆ ಮಾಡಿ ಅದರಿಂದ ತುಂಬಿಸುವ ಕೆರೆಗಳೂ ಉಂಟು. ಕೆರೆ ನೀರಾವರಿಯ ಒಂದು ಸಮಸ್ಯೆ ಏನೆಂದರೆ ಮೆಕ್ಕಲು ತುಂಬಿಕೊಳ್ಳುವುದರಿಂದ ಕೆರೆಯಲ್ಲಿ ಶೇಖರವಾಗುವ ನೀರಿನ ಗಾತ್ರ ಕಡಿಮೆಯಾಗಿ ಬೇಸಾಯಕ್ಕೆ ಸಾಕಷ್ಟು ನೀರು ಒದಗುವುದಿಲ್ಲ. ಆಗಾಗ್ಗೆ ಹೂಳೆತ್ತುವ ಮತ್ತು ಏರಿಯನ್ನು ಭದ್ರಗೊಳಸಿವು ಕೆಲಸ ಮಾಡಬೇಕಾಗುತ್ತದೆ.

ಕಾಲುವೆ ನೀರಾವರಿ ಬದಲಾಯಿಸಿ

ಕಾಲುವೆಗಳಿಂದ ಬೇಸಾಯದ ಭೂಮಿಗೆ ನೀರನ್ನು ಒದಗಿಸುವುದು ಇನ್ನೊಂದು ನೀರಾವರಿ ವಿಧಾನ. ನದಿ ಹರಿದುಹೋಗುವಾಗ ಯಾವುದೋ ಸ್ಥಳದಲ್ಲಿ ಪ್ರಯತ್ನವಿಲ್ಲದೆ ಅಂದರೆ ನದಿಯ ನೀರಿಗೆ ಯಾವ ತಡೆಯನ್ನೂ ಒಡ್ಡದೆ ಅದು ಕಾಲುವೆಗೆ ಹೋಗುವಂತಿರಬಹುದು. ಅಂಥ ಸ್ಥಳದಿಂದ ಕಾಲುವೆಯ ಮೂಲಕ ಬೇಸಾಯಕ್ಕೆ ನೀರನ್ನು ಒದಗಿಸಿಕೊಳ್ಳಬಹುದು. ಆದರೆ ಇಂಥ ಅನುಕೂಲ ಪರಿಸ್ಥಿತಿ ವಿಶೇಷವಾಗಿ ಒದಗಿರುವುದರಿಂದ ನೀರಾವರಿಗೆ ಇದರಿಂದ ದೊರಕಿರುವ ಪ್ರಯೋಜನ ಅತ್ಯಲ್ಪ. ನದಿಗೆ ಅಡ್ಡಲಾಗಿ ಸಣ್ಣ ಅಣೆಕಟ್ಟೆ ಹಾಕಿ ನೀರಿನ ಮಟ್ಟವನ್ನು ಹೆಚ್ಚಿನ ಕಾಲುವೆಗೆ ನೀರು ಹರಿಯುವಂತೆ ಮಾಡುವ ಮೂಲಕ ಕಾಲುವೆ ನೀರಾವರಿ ಸೌಲಭ್ಯ ದೊರಕಿಸುವ ಪ್ರಯತ್ನವೂ ನಡೆದಿದೆ. ಈ ವ್ಯವಸ್ಥೆಯಲ್ಲಿ ನೀರಿನ ಶೇಖರಣೆಗೆ ಅವಕಾಶವಿರುವುದಿಲ್ಲ. ನದಿಯಲ್ಲಿ ಸಾಕಷ್ಟು ಪ್ರವಾಹ ಇದ್ದಾಗ ಮಾತ್ರ ಕಾಲುವೆಗೆ ನೀರು ಹರಿದು ವ್ಯವಸಾಯಕ್ಕೆ ಅನುಕೂಲವಾಗುತ್ತದೆ. ಉಳಿದ ಕಾಲದಲ್ಲಿ ವ್ಯವಸಾಯಕ್ಕೆ ನೀರು ಒದಗುವುದಿಲ್ಲ. ಆದ್ದರಿಂದ ನೀರಾವರಿ ಸೌಲಭ್ಯವನ್ನು ಹೆಚ್ಚಿಸಲು ಪ್ರವಾಹ ಕಾಲದಲ್ಲಿ ದೊರಕುವ ಅಧಿಕ ಗಾತ್ರದ ನೀರನ್ನು ಶೇಖರಿಸಿ ಇಟ್ಟುಕೊಂಡು ವರ್ಷದ ಅಧಿಕ ಭಾಗದಲ್ಲಿ ಅದರ ಬಳಕೆಯಾಗುವಂತೆ ಮಾಡಲು ಸುವ್ಯವಸ್ಥೆ ಮಾಡುವ ಪ್ರಯತ್ನ ಪ್ರಪಂಚಾದ್ಯಂತ ವಿಶೇಷವಾಗಿ ನಡೆದಿದೆ.

ವಿವಿಧೋದ್ದೇಶ ಯೋಜನೆಗಳು ಬದಲಾಯಿಸಿ

ಹೆಚ್ಚಿನ ಮೊತ್ತದಲ್ಲಿ ಶೇಖರಿಸಿ ಸಾವಿರಾರು ಹೆಕ್ಟೇರುಗಳಿಗೆ ನೀರನ್ನು ಸರಬರಾಜು ಮಾಡಲು ಯುಕ್ತ ಸ್ಥಳದಲ್ಲಿ ನದಿಗೆ ಅಡ್ಡವಾಗಿ ಭಾರಿ ಕಟ್ಟೆ ನಿರ್ಮಿಸಿ ಬೃಹತ್ ಜಲಾಶಯವನ್ನು ಸ್ಥಾಪಿಸುವುದೊಂದೇ ಯುಕ್ತ ಮಾರ್ಗ. ಇಂಥ ಬೃಹತ್ ಜಲಾಶಯಗಳು ಎಲ್ಲ ದೇಶಗಳಲ್ಲಿಯೂ ನಿರ್ಮಾಣವಾಗಿವೆ. ಈಜಿಪ್ಟಿನ ಅಸ್ವಾನ್ ಮತ್ತು ಭಾರತದ ಭಕ್ರಾ-ನಂಗಲ್ ಇಂಥ ವ್ಯವಸ್ಥೆಗೆ ಉತ್ತಮ ಉದಾಹರಣೆಗಳು. ಬೃಹತ್ ಜಲಾಶಯದಿಂದ ಬೇಸಾಯಕ್ಕೆ ನೀರು ಪಡೆಯುವುದಷ್ಟೇ ಅಲ್ಲದೆ ಇತರ ಕೆಲವು ಅನುಕೂಲತೆಗಳನ್ನು ಪಡೆಯಬಹುದು. ಆದ್ದರಿಂದಲೇ ಬೃಹತ್ ಜಲಾಶಯ ಯೋಜನೆಗಳನ್ನು ವಿವಿಧೋದ್ದೇಶ ಯೋಜನೆಗಳೆಂದು ಕರೆದಿರುವುದು. ಬೇಸಾಯಕ್ಕೆ ನೀರನ್ನು ಒದಗಿಸುವುದರ ಜೊತೆಗೆ ಇವು ವಿದ್ಯುದುತ್ಪಾದನೆ, ನೆರೆ ಹಾವಳಿ ತಡೆ, ಜಲಮಾರ್ಗ ಮತ್ತು ಮೀನುಗಾರಿಕೆ ಅಭಿವರ್ಧನೆ ಹಾಗೂ ವಿಹಾರ ಕೇಂದ್ರಗಳ ಸ್ಥಾಪನೆಗೆ ಅನುಕೂಲತೆ ಒದಗಿಸುತ್ತವೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ನೀರಾವರಿ&oldid=1174542" ಇಂದ ಪಡೆಯಲ್ಪಟ್ಟಿದೆ