ಗೆಜೆಟಿಯರ್
ಗೆಜೆಟಿಯರ್ಎಂದರೆ ಸ್ಥಳಗಳ, ಪ್ರದೇಶಗಳ, ದೇಶಗಳ ಹೆಸರುಗಳನ್ನೂ ಅವನ್ನು ಕುರಿತ ವಿವರಗಳನ್ನೂ ಒಳಗೊಂಡ ಕೋಶ. ಗೆಜೆಟುಗಳಲ್ಲಿ ಅಥವಾ ವೃತ್ತಪತ್ರಿಕೆಗಳಲ್ಲಿ ಬರೆಯುವವನನ್ನು ಗೆಜೆಟಿಯರ್ ಎಂದು ಕರೆಯುವ ಪರಿಪಾಟಿ 18ನೆಯ ಶತಮಾನದಲ್ಲಿ ಇತ್ತು. ವೃತ್ತಪತ್ರಿಕೆಯನ್ನೂ ಈ ಹೆಸರಿನಿಂದ ಕರೆಯುತ್ತಿದ್ದದ್ದುಂಟು. ಸ್ಥಳಗಳ, ಪ್ರದೇಶಗಳ, ದೇಶಗಳ ವಿವರಣೆ, ಇತಿಹಾಸ, ಅಂಕಿ-ಅಂಶ ಮುಂತಾದವನ್ನು ಸುದೀರ್ಘವಾಗಿ ಒಳಗೊಂಡ ಕೋಶಸದೃಶ ಗ್ರಂಥಗಳನ್ನು ಭೌಗೋಳಿಕ ನಿಘಂಟು ಎಂದು ಕರೆಯುವುದುಂಟಾದರೂ ಮೇಲೆ ಹೇಳಿದ ಹೆಸರು ಹೆಚ್ಚು ವಾಡಿಕೆಯಲ್ಲಿದೆ. ವರ್ಣಾನುಕ್ರಮದಲ್ಲಿ ನದಿ, ಪರ್ವತ, ಗ್ರಾಮ, ನಗರ ಮುಂತಾದವುಗಳ ಬಗ್ಗೆ ಮಾಹಿತಿ ನೀಡುವ ಕೋಶವೆಂಬ ಈ ಶಬ್ದದ ಅರ್ಥ ಕ್ರಮೇಣ ವಿಸ್ತೃತವಾಗಿ, ಯಾವುದಾದರೊಂದು ದೇಶದ, ಪ್ರದೇಶದ, ವಿಭಾಗದ ರಾಜಕೀಯ, ಐತಿಹಾಸಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಔದ್ಯೋಗಿಕ ವಿಷಯಗಳ ಸಮಗ್ರ ವಿವರಗಳನ್ನು ತಿಳಿಸುವ ಗ್ರಂಥವೆಂದು ಇದು ಪ್ರಸಿದ್ಧಿ ಹೊಂದಿತು. ಯಾವುದಾದರೊಂದು ಪ್ರದೇಶದ ಭೌಗೋಳಿಕ ಸೂಚಿ ಎಂಬ ಅರ್ಥದಲ್ಲಿ ಈ ಶಬ್ದವನ್ನು 1704ರಲ್ಲಿ ಲಾರೆನ್ಸ್ ಎಕಾರ್ಡ್ ಎಂಬುವನು ಬಳಸಿದ. 6ನೆಯ ಶತಮಾನದ ಆರಂಭದಲ್ಲಿ ಬೈಜಾ಼ಂಟಿಯಮ್ನ ಸ್ಟೀವೆನ್ ಎಂಬಾತ ಈ ಬಗೆಯ ಕೃತಿಯನ್ನು ರಚಿಸಿದ್ದ. ಆದರೆ ದುರದೃಷ್ಟದಿಂದ ಈ ಗ್ರಂಥದ ಕೆಲವು ತುಣುಕುಗಳು ಮಾತ್ರ ದೊರೆತಿವೆ.
ಗೆಜೆಟಿಯರ್‍ನ ಇತಿಹಾಸ
ಬದಲಾಯಿಸಿಈಗಿನ ಗೆಜೆಟಿಯರುಗಳಿಗೆ ಹೋಲಿಸಬಹುದಾದ ಒಂದು ಕೃತಿ ಹೊರಬಂದದ್ದು 16ನೆಯ ಶತಮಾನದಲ್ಲಿ. ಇದು ಚಾಲ್ರ್ಸ್ ಸ್ಟೀವೆನ್ಸನಿಂದ ರಚಿತವಾಗಿ ಜಿನೀವದಿಂದ ಪ್ರಕಟವಾದ ಡಿಕ್ಷನೇರಿಯಮ್ ಹಿಸ್ಟಾರಿಕೊ-ಜಿಯಾಗ್ರಫಿಕಮ್ (1565). ಇದರ ತರುವಾಯ ಫೆರೈನ ಲೆಕ್ಸಿಕನ್ ಜಿಯಾಗ್ರಫಿಕಮ್ (1627), ಬಾದ್ರಾದನ ಜಿಯಾಗ್ರಫಿಯಾ ಆರ್ಡಿನೆ ಲಿಟರೇರಮ್ ಡಿಸ್ಪೊಸಿಟಾ (1682), ಲೇ ಮಾರ್ಟಿನೈರನ ಡಿಕ್ಷನೇರ್ ಜಿಯಾಗ್ರಫಿಕ್ ಹಿಸ್ಟಾರಿಕ್ ಎಟ್ ಕ್ರಿಟಿಕ್ (1726) ಮತ್ತು ಇವುಗಳ ಆಧಾರದ ಮೇಲೆ ರಚಿತವಾದ ಇತರ ಹಲವು ವಿಷಯ ಕೋಶಗಳು ಪ್ರಕಟಗೊಂಡವು. ಜರ್ಮನ್ ಭೂಗೋಳಶಾಸ್ತ್ರಜ್ಞ ಜಿ.ಎಚ್. ಹ್ಯಾಸೆಲನ ಜಿಯಾಗ್ರಫಿಶ್ಚ್-ಸ್ಟ್ಯಾಟಿಸ್ಟಿಕ್ ಹ್ಯಾಂಡ್ವೊರ್ಟರ್ಬಕ್ (1817) ಸಂಶೋಧನಾತ್ಮಕವಾದ, ಮುಂದಿನ ಗೆಜೆಟಿಯರುಗಳಿಗೆ ಮಾದರಿಯಾದ ಕೃತಿ. ಕೆಲವು ಮುಖ್ಯವಾದ ಇಂಗ್ಲಿಷ್ ಮತ್ತು ಅಮೆರಿಕನ್ ಗೆಜೆಟಿಯರುಗಳೆಂದರೆ ಕ್ರಟ್ವೆಲನ ಯೂನಿವರ್ಸಲ್ ಗೆಜೆಟಿಯ (1808), ದಿ ಎಡಿನ್ಬರ್ಗ್ ಗೆಜೆಟಿಯರ್ (1817-22), ಮ್ಯಾಕ್ ಕುಲಕ್‍ನ ಜಿಯಾಗ್ರಫಿಕಲ್ ಡಿಕ್ಷನರಿ (1851), ಬ್ಲಾಕಿಯ ಇಂಪೀರಿಯಲ್ ಗೆಜೆಟಿಯರ್ (1850), ಲಿಪಿನ್ಕಾಟ್ನ ಪ್ರೊನೌನ್ಸಿಂಗ್ ಗೆಜೆಟಿಯರ್ ಆಫ್ ದಿ ವಲ್ರ್ಡ್ (1855, 1911 ಮತ್ತು 1922), ಮೆರಿಯಮ್ - ವೆಬ್ಸ್ಟರ್ನ ಜಿಯಾಗ್ರಫಿಕಲ್ ಡಿಕ್ಷನರಿ (1949). ಡಿಕ್ಷನೇರ್ ಜಿಯಾಗ್ರಾಫಿಕ್ ಯೂನಿವರ್ಸಲ್ (ಫ್ರೆಂಚ್), ರಿಟರ್ನ ಜಿಯಾಗ್ರಫಿಶ್ಚ್ ಸ್ಟ್ಯಾಟಿಸ್ಟಿಕ್ (ಜರ್ಮನ್), ಗ್ಯಾರೊಲೋನ ಡಿಜಿಯೊನರಿಯೋ ಜಿಯಾಗ್ರಫಿಕೋ ಯೂನಿವರ್ಸಲೆ (ಇಟಲಿ, 1898) ಮತ್ತು ಹಂಟರನ ಗೆಜೆಟಿಯರ್ ಆಫ್ ಇಂಡಿಯ- ಇವು ಕೆಲವು ಗಮನಾರ್ಹ ಗೆಜೆಟಿಯರುಗಳು. ಜಾನ್‍ಸನ್‍ನ ಡಿಕ್ಷನರಿ ಆಫ್ ಜಿಯಾಗ್ರಫಿ (1850), ವಿವಿನ್ ದ ಸೇಂಟ್ ಮಾರ್ಟಿನ್‍ನ ನೋವೆ ಡಿಕ್ಷನೈರೆ ಡೆ ಜಿಯಾಗ್ರಫಿಯೆ (1879-1900), ಲಾಂಗ್ಮನ್ಸ್ ಗೆಜೆಟಿಯರ್ ಆಫ್ ದಿ ವಲ್ರ್ಡ್ (1895), ಕೆಂಡೆಯ ಜಿಯಾಗ್ರಾಫಿಶ್ಚ್ ವೊರ್ಟೆರ್ಬಕ್ (1921), ಎವಾಲ್ಡ್ ಎಚ್. ಎ. ಬಾನ್ಸೆಯ ಲೆಕ್ಸಿಕನ್ ಡರ್ ಜಿಯಾಗ್ರಫಿಯೆ (1923), ರೇನಾಲ್ಡ್‌ನ ಕಾಂಪ್ರೆಹೆನ್ಸಿವ್ ಅಟ್ಲಾಸ್ ಮತ್ತು ಗೆಜೆಟಿಯರ್ ಆಫ್ ದಿ ವಲ್ರ್ಡ್ (1925) ಮುಂತಾದವು ಇತರ ಕೆಲವು ಪ್ರಸಿದ್ಧ ಗೆಜ಼ಿಟಿಯರುಗಳು. ಇವುಗಳಲ್ಲಿ ಅನೇಕ ಗೆಜ಼ಿಟಿಯರುಗಳು ಹೊಸ ಆವೃತ್ತಿಗಳನ್ನು ಕಂಡಿವೆ. ಲಾಂಗ್ಮನ್ಸ್‌ನ ಗೆಜೆಟಿಯರ್ ಆಫ್ ದಿ ವಲ್ರ್ಡ್ ಎಂಬ ಕೃತಿಯನ್ನು ಲಂಡನಿನ ಟೈಮ್ಸ್ ಪತ್ರಿಕೆ ಪಡೆದು ದಿ ಟೈಮ್ಸ್ ಗೆಜೆಟಿಯರ್ ಎಂದು ಪುನಃ ಪ್ರಕಟಿಸಿತು. ಇಟಲಿಯ ನ್ಯೂಮನ್, ರಷ್ಯದ ಸಮೈನಾವ್ ಮತ್ತು ಭಾರತದಲ್ಲಿ ಹಂಟರ್ ಪ್ರಖ್ಯಾತ ಗೆಜೆಟಿಯರ್ ಲೇಖಕರಾಗಿದ್ದರು. ಎಡ್ವರ್ಡ್ ಥಾರ್ನ್ಟನ್ನನ ಗೆಜೆಟಿಯರ್ (1844) ಮತ್ತು ವಾಲ್ಟರ್ ಹ್ಯಾಮಿಲ್ಟನನ ಈಸ್ಟ್ ಇಂಡಿಯ ಗೆಜೆಟಿಯರ್ (1895) ಅವರ ಪ್ರಯತ್ನಗಳಿಂದ ಪ್ರಕಟವಾದುವು.
ಪ್ರಾಚೀನ ಭಾರತದಲ್ಲಿ
ಬದಲಾಯಿಸಿಒಂದು ದೃಷ್ಟಿಯಿಂದ ಗೆಜ಼ಿಟಿಯರಿನಂಥ ಸಾಹಿತ್ಯದ ರಚನೆ ಪ್ರಾದೇಶಿಕ ವರ್ಣನೆಗಳನ್ನೊಳಗೊಂಡ ಅನೇಕ ಪುರಾಣಗಳ ಕಾಲದಿಂದಲೇ ಪ್ರಾರಂಭವಾಯಿತೆನ್ನಬಹುದು. ಒಂದು ದೇಶದ ಭೌಗೋಳಿಕ ಲಕ್ಷಣಗಳು, ಅಲ್ಲಿಯ ಜನರ ರಾಜಕೀಯ ಸಾಮಾಜಿಕ ಹಾಗೂ ಆರ್ಥಿಕ ಜೀವನ ಇವನ್ನು ಕುರಿತು ಪ್ರವಾಸಿಗಳು ನೀಡುವ ವೃತ್ತಾಂತಗಳು ಸಾಹಿತ್ಯದ ಒಂದು ಬಗೆಯೆಂದು ಸಾಕಷ್ಟು ಪ್ರಾಚೀನ ಕಾಲದಲ್ಲಿ ಪರಿಚಿತವಾಗಿವೆ. ಇವನ್ನು ಕೂಡ ಕೆಲವೊಮ್ಮೆ ಗೆಜ಼ಿಟಿಯರ್ ವರ್ಗಕ್ಕೆ ಸೇರಿಸಲಾಗಿದೆ. ಪ್ರ.ಶ.ಪು. 6ನೆಯ ಶತಮಾನದಲ್ಲಿ ಸ್ಕೈಲಾಕ್ಸ್, ಇನ್ನೂರು ವರ್ಷಗಳ ಅನಂತರ ಮೆಗಾಸ್ತನೀಸ್-ಇವರು ಭಾರತದ ಬಗ್ಗೆ ವೃತ್ತಾಂತಗಳನ್ನು ವರದಿಮಾಡಿದರು. ಕೌಟಿಲ್ಯನ ಅರ್ಥಶಾಸ್ತ್ರ ಮೌರ್ಯಕಾಲೀನ ಭಾರತದ ಬಗ್ಗೆ ಭೌಗೋಳಿಕ ಮತ್ತಿತರ ವಿಷಯಗಳ ಅಂಕಿ-ಅಂಶ ಸಹಿತವಾದ ಅಮೂಲ್ಯ ವಿವರಗಳನ್ನೊದಗಿಸುತ್ತದೆ. ಆಲ್ಬೆರೂನಿಯ ಇಂಡಿಕಾ ಸೂಕ್ಷ್ಮ ಅವಲೋಕನ ಮತ್ತು ವೈಜ್ಞಾನಿಕ ವಿಶ್ಲೇಷಣೆಗಳಿಗೆ ಉದಾಹರಿಸಬಹುದಾದ ಕೃತಿ. ಅಬುಲ್ ಫಜಲನ ಐನೇ ಅಕ್ಬರಿ ವ್ಯವಸ್ಥಿತ ಸಂಶೋಧನೆ ಹಾಗೂ ಅಸಾಧಾರಣ ಪ್ರಯತ್ನಗಳ ಫಲ; ಅಕ್ಬರನ ರಾಜ್ಯ ಪದ್ಧತಿ, ಆಗಿನ ಕಾಲದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ, ಸೈನ್ಯ ಪರಿವೀಕ್ಷಣೆ ಮುಂತಾದ ವಿವರಗಳನ್ನು ನೀಡುವ ಗ್ರಂಥ. ಮೊಗಲ್ ಹಾಗೂ ಮರಾಠಾ ರಾಜ್ಯಗಳಲ್ಲಿ ಅಲ್ಲಲ್ಲಿಯ ಮುಖ್ಯ ಸ್ಥಳಗಳಲ್ಲಿ ಅಖ್ಬಾರನ್ವೀಸ್ ಎಂಬ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಅವರು ತಮ್ಮ ಮೇಲಧಿಕಾರಿಗಳಿಗೆ ಆಗಾಗ್ಗೆ ವಿಶೇಷ ವಿವರಣೆಗಳನ್ನುಳ್ಳ ಪತ್ರಿಕೆಗಳನ್ನು ಕಳುಹಿಸುತ್ತಿದ್ದರು. ಬ್ರಿಟಿಷ್ ಅಧಿಕಾರಿಗಳಿಗೆ ತಮ್ಮ ಆಡಳಿತದಲ್ಲಿದ್ದ ಪ್ರದೇಶಗಳ ಪರಿಚಯ ಮಾಡಿಕೊಡಲು ಗೆಜ಼ಿಟಿಯರ್ ರಚನೆ ಆವಶ್ಯಕವಾಯಿತು. ಭೂಗೋಳ, ಇತಿಹಾಸ, ನಿಸರ್ಗಸಂಪತ್ತು, ಉದ್ಯೋಗ, ವ್ಯಾಪಾರ, ಪಶುಪಕ್ಷಿ, ಅರಣ್ಯ, ನದೀನಾಲೆಗಳು, ಜನ, ಜಾತಿ, ಸಮೂಹ, ರೀತಿ ನೀತಿಗಳು, ಧರ್ಮ ಮತ್ತು ಧರ್ಮಭೇದಗಳು, ಸಾಂಸ್ಕ್ರತಿಕ ಜೀವನ, ಭಾಷಾವಿವರ, ಸಾಹಿತ್ಯ ಇತ್ಯಾದಿಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ಗೆಜೆಟಿಯರ್ ರಚನೆ ಆರಂಭವಾಯಿತು.
ಬ್ರಿಟಿಷರ ಕಾಲ
ಬದಲಾಯಿಸಿಈಸ್ಟ್ ಇಂಡಿಯ ಕಂಪನಿಯ ಕಾಲದಲ್ಲೆ 1843ರಲ್ಲಿ ಮುಂಬಯಿ ಇಲಾಖೆಯಲ್ಲಿ ಅಲ್ಲಿಯ ಜಿಲ್ಲೆಗಳ ಬಗ್ಗೆ ಅಂಕಿ-ಅಂಶ ಸಹಿತವಾದ ವಿವರಗಳನ್ನು ಕೊಡುವ ಕೆಲಸ ಆರಂಭವಾಯಿತು. 1857ರಲ್ಲಿ ರಿಚರ್ಡ್ ಟೆಂಪಲ್ ಎಂಬಾತ ಮಧ್ಯ ಭಾರತದ ಜಿಲ್ಲಾ ಗೆಜ಼ಿಟಿಯರುಗಳನ್ನು ರಚಿಸುವ ಕಾರ್ಯವನ್ನು ಕೈಗೊಂಡ. ಮುಂಬಯಿಯ ಜಿಲ್ಲಾ ಗೆಜ಼ಿಟಿಯರ್ ನಿರ್ಮಾಣ 1874ರಲ್ಲಿ ಆರಂಭವಾಗಿ 1884ರಲ್ಲಿ ಪುರ್ಣಗೊಂಡಿತು. ಮುಂದೆ 27 ವರ್ಷ ಇವುಗಳ ಮುದ್ರಣಕಾರ್ಯ ನಡೆಯಿತು. 1869ರಲ್ಲಿ ವಿಲಿಯಮ್ ಹಂಟರ್ ಇಂಪೀರಿಯಲ್ ಗೆಜೆಟಿಯರ್ ಆಫ್ ಇಂಡಿಯವನ್ನು ತಯಾರಿಸುವ ಬೃಹತ್ ಯೋಜನೆಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದ. ಈ ಯೋಜನೆಗೆ 1871ರಲ್ಲಿ ಮಾನ್ಯತೆ ದೊರೆಯಿತು. 1881ರಲ್ಲಿ ಇದರ ಒಂಬತ್ತು ಸಂಪುಟಗಳು ಪ್ರಕಟವಾದುವು. ಇದರ ಪರಿಷ್ಕೃತ ಆವೃತ್ತಿ 14 ಸಂಪುಟಗಳಲ್ಲಿ 1885-87ರಲ್ಲಿ ಹೊರಬಂತು. ಇವುಗಳಲ್ಲಿ ದಿ ಇಂಡಿಯನ್ ಎಂಪೈರ್ ಎಂಬ ಸಂಪುಟವೂ ಸೇರಿದೆ. ಇಂಪೀರಿಯಲ್ ಗೆಜೆಟಿಯರನ್ನು ಭಾರತೀಯ ಜೀವನ ಮತ್ತು ಸಂಸ್ಕೃತಿಗಳ ಎಲ್ಲ ಅಂಶಗಳನ್ನೊಳಗೊಂಡ ವ್ಯಾಪಕ ಅಧ್ಯಯನಕ್ಕೆ ಅರ್ಹವಾದ, ಅಧಿಕೃತವಾದ ಗೆಜ಼ಿಟಿಯರ್ ಎಂದು ಪರಿಗಣಿಸಲಾಯಿತು. ಲಾರ್ಡ್ ಕರ್ಜನ್ ಇಂಪೀರಿಯಲ್ ಗೆಜ಼ಿಟಿಯರ್ಗಳ ಪುನರ್ ಮುದ್ರಣಕ್ಕೆ ಆಜ್ಞೆ ನೀಡಿದ. ಹೊಸ ವಿಷಯಗಳನ್ನು ಸೇರಿಸಿ 1904-1909ರಲ್ಲಿ 26 ಸಂಪುಟಗಳಲ್ಲಿ ಇವನ್ನು ಪ್ರಕಟಿಸಲಾಯಿತು. ಮೊದಲ 4 ಸಂಪುಟಗಳು ಹಂಟರನ ಇಂಡಿಯನ್ ಎಂಪೈರ್ನ ಪರಿಷ್ಕೃತ ಪಾಠ. ಮುಂದಿನ 20 ಸಂಪುಟಗಳು ಅಕಾರಾದಿಯಲ್ಲಿವೆ. ಕೊನೆಯ ಎರಡು ಸಂಪುಟಗಳು ಸೂಚಿ ಹಾಗೂ ಭೂಪಟಗಳನ್ನೊಳಗೊಂಡಿವೆ. ಸ್ವಾತಂತ್ರ್ಯಾನಂತರ ಇಂಪೀರಿಯಲ್ ಗೆಜೆಟಿಯರಿನ ಎರಡನೆಯ ಆವೃತ್ತಿಯ ಪುನರ್ಮುದ್ರಣ ಹೊರಬಿದ್ದಿದೆ. ಇದನ್ನು ಪುನರ್ಮುದ್ರಣವೆನ್ನುವುದಕ್ಕಿಂತ ಸರ್ವವಿಧದಲ್ಲೂ ಪರಿಷ್ಕೃತವಾದ ಹೊಸ ಆವೃತ್ತಿಯೆಂದೇ ಪರಿಗಣಿಸಬಹುದಾಗಿದೆ. ದಿ ಇಂಡಿಯನ್ ಎಂಪೈರ್ ಎಂಬ ಹಿಂದಿನ ಒಂದು ಸಂಪುಟ ಈಗ ವಿವರಣಾತ್ಮಕ, ಐತಿಹಾಸಿಕ, ಆರ್ಥಿಕ, ಆಡಳಿತ ಸಂಬಂಧಿ ಎಂದು ನಾಲ್ಕು ಸಂಪುಟಗಳಾಗಿ ಬೆಳೆದಿದೆ.
1867ರಲ್ಲಿ ಭಾರತದ ಸ್ಟೇಟ್ ಸೆಕ್ರೆಟರಿಯ ಆಜ್ಞೆಯ ಪ್ರಕಾರ ಎಲ್ಲ ಪ್ರಾಂತ್ಯಗಳ ಗೆಜ಼ಿಟಿಯರುಗಳನ್ನು ಸಿದ್ಧಪಡಿಸುವ ಸೂಚನೆ ಬಂದದ್ದರಿಂದ 1874ರಲ್ಲಿ ಜೇಮ್ಸ್ ಕ್ಯಾಂಪ್ಬೆಲನ ನೇತೃತ್ವದಲ್ಲಿ ಈ ಕಾರ್ಯ ಆರಂಭವಾಗಿ 1884ರ ವರೆಗೆ ನಡೆಯಿತು. 1877-1904ರ ನಡುವೆ ಬಾಂಬೆ ಗೆಜೆಟಿಯರಿನ 33 ಸಂಪುಟಗಳು ಪ್ರಕಾಶಗೊಂಡುವು. ಇವುಗಳಲ್ಲಿ 18 ಜಿಲ್ಲೆಗಳ ಜೊತೆಗೆ ಬರೋಡ, ಕೊಲ್ಲಾಪುರ ಮುಂತಾದ ಸಂಸ್ಥಾನಗಳೂ ಸಮಾವೇಶವಾಗಿವೆ. ಇದಕ್ಕೂ ಮೊದಲು, ಕೊಲ್ಲಾಪುರದಲ್ಲಿ ರಾಜಪ್ರತಿನಿಧಿಯಾಗಿದ್ದ ಮೇಜರ್ ಗ್ರಹಾಮ್ ಕೊಲ್ಲಾಪುರ ಅಡ್ಮಿನಿಸ್ಟ್ರೇಷನ್ ರಿಪೋರ್ಟ್ ಎಂಬ ಗೆಜೆಟಿಯರನ್ನು ಸಿದ್ಧಪಡಿಸಿ ಪ್ರಕಟಿಸಿದ (1843-44). ಬಹಳ ಸೊಗಸಾಗಿರುವ, ಇತರ ಗೆಜೆಟಿಯರುಗಳಿಗೆ ಮಾದರಿಯಾಗಿರುವ ಇದು ರಾಜಕಾರ್ಯನಿರ್ವಾಹಕರಿಗೆ ಬೇಕಾದ ಮಾಹಿತಿಗಳನ್ನೊದಗಿ ಸುತ್ತದೆ. ಬಾಂಬೆ ಗೆಜೆಟಿಯರ್ ಮಾದರಿಯನ್ನನುಸರಿಸಿ ಬೆಂಗಾಲ್ ಗೆಜೆಟಿಯರ್ ಮತ್ತು ಇಂಪೀರಿಯಲ್ ಗೆಜೆಟಿಯರ್‍ಗಳು ಸಿದ್ಧವಾದುವು. ಹಾಗೆಯೇ ಮದ್ರಾಸ್ ಗೆಜೆಟಿಯರ್ ಹಾಗೂ ಮೈಸೂರ್ ಗೆಜೆಟಿಯರ್‍ಗಳು ಪ್ರಕಟವಾದುವು. ಆಡಳಿತ ನಡೆಸುವರಿಗೆ ನೆರವಾಗಲು ಅನೇಕ ರೀತಿಯ ಬರಹಗಳು ಗ್ರಂಥಗಳು ಮತ್ತು ಶಿಲಾಶಾಸನಗಳು ಇದ್ದವು. ಸ್ಥಳಪುರಾಣಗಳು ಈ ವರ್ಗಕ್ಕೆ ಸೇರುತ್ತವೆ. ಕೆಳದಿಕೋಟೆಯ ಸಂಪೂರ್ಣವಿವರಗಳನ್ನು ಅಧಿಕಾರಿಗಳಿಗೆ ಮಾರ್ಗದರ್ಶನಮಾಡಲು ಸಹಾಯಮಾಡುವ ದಿಕ್ಕಿನಲ್ಲಿ ಈಗಾಗಲೇ 'ಆರೇಳು ತಾಳೇಗರಿ'ಗಳು ಸಿಕ್ಕಿವೆ. 'ವರಾಹಮಿಹೀರ'ನ 'ಬೃಹತ್ ಸಂಹಿತೆ' ಇಂತಹದೇ ಒಂದು ಕೃತಿ. ಆಯಿನೆ ಅಕ್ಬರಿ' 'ಅಕ್ಬರ'ನ ಕಾಲದ ಪ್ರಾಂತ್ಯಾವಾರು ವಿವರಗಳ ಸಹಿತ, ಇದೇ ಉದ್ದೇಶ್ಯದಿಂದ ರಚಿತವಾಗಿತ್ತು. ಹೀಗೆ ಬೇರೆ ಬೇರೆ ಕಾಲಗಳ ಪ್ರಕಟವಾಗಿದ್ದ ನಾನಾ ಮಾಹಿತಿಗಳ ಸಂಕಲನದ ರೂಪದಲ್ಲಿ ಪ್ರಕಟಿಸುವ ಜಾಣತನವನ್ನು ಬ್ರಿಟಿಷ್ ಅಧಿಕಾರಿಗಳು ತೋರಿಸಿದರು.ಹಿಂದೆ 'ಇಂಗ್ಲೀಷ್ ಅಧಿಕಾರಿಗಳು' ಭಾರತಕ್ಕೆ ಬಂದಾಗ ಇಲ್ಲಿನ ಮಳೆ,ಬೆಳೆ, ಜನ, ಅವರ ರೂಢಿ, ಸಂಪ್ರದಾಯ, ಆಚಾರ ವ್ಯವಹಾರಗಳು, ದೇಶದ ಸಂಪನ್ಮೂಲಗಳ ವಿವರಗಳು,ಇವುಗಳ ಪರಿಚಯ ಅಗತ್ಯವೆನ್ನಿಸಿತ್ತು.
ಸ್ವಾತಂತ್ರ್ಯೋತ್ತರದಲ್ಲಿ
ಬದಲಾಯಿಸಿನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕವೂ 'ಗೆಜೆಟಿಯರ್' ಪ್ರಟಿಸುವ ಪರಿಪಾಠ ಮುಂದುವರೆಯಿತು. ಹೆಚ್ಚುತ್ತಿರುವ ಜೀವನಶೈಲಿ, ಮತ್ತು ಆಡಳಿತಗಳ ಸಂಕೀರ್ಣತೆಯ ವಿವರಗಳು ಜನರಿಗೆ ಅಗತ್ಯವಾಗುತ್ತಿರುವುದೇ ಅದಕ್ಕೆ ಕಾರಣವೆಂದರೆ,'ಊರುಗಳ ಸೂಚಿ' ಎಂಬರ್ಥದಲ್ಲಿ ಇದು ಮೊದಲು ಬಳಕೆಗೆ ಬಂದರೂ, ಇದರ 'ಮೂಲಾರ್ಥ' ಈಗ ಬದಲಾಗಿದೆ. ಅದು ನಿಜವಾಗಿ ಪ್ರದೇಶ, ಜಿಲ್ಲೆ, ಅಥವಾ ರಾಜ್ಯ, 'ಪರಿಚಯಕೋಶ'ವೆಂಬ ಅರ್ಥದಲ್ಲಿ ಪರಿಗಣಿಸಲಾಗುತ್ತಿದೆ. ಇದರ ಸಂಕಲನ ಪ್ರಮುಖ ಉದ್ದೇಶ್ಯ. ಒಂದು ರಾಜ್ಯ ಅಥವಾ ಜಿಲ್ಲೆಯ ಆಡಳಿತಕ್ಕೆ ನೇಮಕವಾಗುವ ಅಧಿಕಾರಿ, ಜಿಲ್ಲಾಧಿಕಾರಿ, ಜಿಲ್ಲಾ ಪೋಲೀಸ್ ಅಧಿಕಾರಿ, ತಹಸೀಲ್ದಾರ, ಇತ್ಯಾದಿ ಇವರಿಗೆ, ತಾವು ಅಡಳಿತ ನಡೆಸುವ ಭೂಭಾಗದ ಪೂರ್ತಿ ಅರಿವು ಮತ್ತು ಪರಿಚಯ ಹಾಗೂ ಅಲ್ಲಿನ ಸ್ಥಿತಿಗತಿಗಳ ಸಮಸ್ಯೆಗಳ ಪರಿಚಯ ಅಗತ್ಯ. ಒಮ್ಮೆ ಪ್ರಕಟವಾದ ಇಂತಹ ಸಂಪುಟ ಒಂದು 'ಮಾದರಿ ಅನ್ವೇಷಣೆ' (ಸ್ಯಾಂಪಲ್ ಸರ್ವೆ)ಯಂತೆ ಸಹಾಯಕವಾಗುತ್ತದೆ. ಸ್ವಾತಂತ್ರ್ಯಾನಂತರ ಅನೇಕ ಸಂಸ್ಥಾನಗಳ ವಿಲೀನೀಕರಣ, ರಾಜ್ಯ ಪುನರ್ವಿಂಗಡಣೆ ಇತ್ಯಾದಿಗಳಿಂದಾಗಿ ಹೊಸ ಗೆಜೆಟಿಯರುಗಳ ರಚನೆಯ ಆವಶ್ಯಕತೆಯುಂಟಾಯಿತು. ಇದಕ್ಕಾಗಿ ಕೇಂದ್ರ ಸರ್ಕಾರ ಭಾರತೀಯ ಗೆಜೆಟಿಯರ್ ಇಲಾಖೆಯೊಂದನ್ನು ಆಯೋಜಿಸಿತು. ಎಲ್ಲ ರಾಜ್ಯಗಳು ಪ್ರತ್ಯೇಕವಾಗಿ ಇಲ್ಲವೆ ರಾಜ್ಯ ಪುರಾತತ್ತ್ವ, ರಾಜ್ಯ ಪತ್ರಾಗಾರ ಅಥವಾ ರಾಜ್ಯ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಗಳಲ್ಲಿ ಆಯಾ ರಾಜ್ಯದ ಜಿಲ್ಲಾವಾರು ಗೆಜ಼ಿಟಿಯರ್ಗಳನ್ನು ಸಿದ್ಧಪಡಿಸಲು ವಿಭಾಗವೊಂದನ್ನು ತೆರೆಯಲಾಯಿತು. ರಾಜ್ಯಪ್ರತಿನಿಧಿಗಳ ಗೋಷ್ಠಿಯೊಂದನ್ನು 1955ರಲ್ಲಿ ಕರೆಯಲಾಯಿತು. ಮುಂಬಯಿ ರಾಜ್ಯದಲ್ಲಿ ಆ ಮೊದಲೇ (1949) ಈ ಕಾರ್ಯ ಆರಂಭವಾಗಿತ್ತು. ಬ್ರಿಟಿಷರ ಕಾಲದ ಗೆಜೆಟಿಯರುಗಳು ಅವರ ಅಧಿಕಾರಿಗಳಿಗೆ ಉಪಯುಕ್ತವಾಗುವಂತೆ ರಚಿತವಾಗಿದ್ದುವು. ಆದರೆ ಹೊಸ ಗೆಜೆಟಿಯರುಗಳ ತಯಾರಕರು ಯಾವುದೇ ಬಗೆಯ ಪುರ್ವಗ್ರಹಪೀಡಿತರಾಗದೆ ವಸ್ತುನಿಷ್ಠವಾಗಿ ವಿಷಯಗಳನ್ನು ನಿರೂಪಿಸುವ, ವಾದಗ್ರಸ್ತ ವಿಷಯಗಳ ಚರ್ಚೆಗೆ ಇಳಿಯದೆ ಅವಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನೂ ವಾಚಕರಿಗೆ ಒದಗಿಸುವ ನಿಯಮವನ್ನು ಪಾಲಿಸಿಕೊಂಡು ಬಂದರು. ಅಂದಿನ ಮತ್ತು ಈಗಿನ ಆವಶ್ಯಕತೆಗಳನ್ನು ಲಕ್ಷಿಸಿ ಹೊಸ ಹೊಸ ವಿಷಯಗಳನ್ನು ಸೇರಿಸುವ ನಿಯಮಾವಳಿಯನ್ನು ಹಾಕಿಕೊಳ್ಳಲಾಯಿತು. ಜಿಲ್ಲಾ ಗೆಜ಼ಿಟಿಯರುಗಳಲ್ಲಿ ಆಯಾ ಜಿಲ್ಲೆಗಳ ವಾಸ್ತವಿಕ ಚಿತ್ರ ಮೂಡಿಬರುವಂತೆ, ಅವನ್ನು ರೂಪಿಸಲು ನಿಶ್ಚಯಿಸಲಾಯಿತು. ವಿವಿಧ ರಾಜ್ಯಗಳಲ್ಲಿ ರೂಢಿಯಲ್ಲಿರುವ ವಿಷಯಗಳು ಪರಸ್ಪರ ಪರಿಚಯವಾಗುವಂತೆ, ಅವುಗಳ ಬಗ್ಗೆ ಇರುವ ತಪ್ಪು ತಿಳಿವಳಿಕೆಗಳು ದೂರವಾಗುವಂತೆ ರಾಷ್ಟ್ರೀಯ ಏಕತಾಭಾವ ಜನತೆಯಲ್ಲಿ ಮೂಡಿ ಬರುವಂತೆ ಭಾರತೀಯ ಗೆಜ಼ಿಟಿಯರುಗಳನ್ನು ರಚಿಸಬೇಕೆಂಬ ಸೂಚನೆಗಳನ್ನು ಸ್ವೀಕರಿಸಲಾಯಿತು ಹಾಗೂ ಅಧ್ಯಾಯಗಳ ರಚನೆಯಲ್ಲಿ ಎಲ್ಲ ರಾಜ್ಯಗಳು ಏಕರೂಪತೆ ಕಾಯ್ದುಕೊಳ್ಳುವಂತೆ ಸೂಚಿಸಲಾಯಿತು.
೧೯ ನೆಯ ಶತಮಾನದಲ್ಲಿ
ಬದಲಾಯಿಸಿಹಂಟರ್ ಎಂಬ ಆಂಗ್ಲ ವಿದ್ವಾಂಸ, ಇಂಡಿಯ ಗೆಜೆಟಿಯರ್ ನ್ನು ೧೯ ನೆಯ ಶತಮಾನದಲ್ಲಿ ಪ್ರಟಿಸಿದ. ಬ್ರಿಟಿಷ್ ಪ್ರಾಂತ್ಯಗಳಾದ ಮುಂಬಯಿ ಹಾಗೂ ಮದ್ರಾಸ್ ಗಳಲ್ಲೂ ೧೯ ನೇ ಶತಮಾನದ ಅಂತ್ಯದ ಹೊತ್ತಿಗೆ ಜಿಲ್ಲಾ ಗೆಜೆಟಿಯರ್ ಗಳು ಬರಲಾರಂಭಿಸಿದವು. ಮದ್ರಾಸ್ ನಲ್ಲಿ ಅವನ್ನು ಮಾನ್ಯುಯಲ್ ಎಂದು ಕರೆಯುತ್ತಾರೆ.
ಮೈಸೂರು ಸಂಸ್ಥಾನದಲ್ಲಿ
ಬದಲಾಯಿಸಿಲೂಯಿಸ್ ರೈಸ್ ಎಂಬ ಆಂಗ್ಲ ವಿದ್ವಾಂಸರು, ೧೮೭೮, ಮತ್ತು ೧೮೯೭ ರಲ್ಲಿ, 'ಮೈಸೂರ್ ಗೆಜೆಟಿಯರ್' ಗೆ ಪ್ರಕಟಿಸಿದ್ದು, ಅವು ತಲಾ ಎರಡು ಸಂಪುಟಗಳಲ್ಲಿ ಹೊರಬಂದವು. 'ರೈಸ್' ಒಬ್ಬ ಗಣ್ಯ ಇತಿಹಾಸಜ್ಞರು.ಕನ್ನಡ, ಸಂಸ್ಕೃತ ಬಲ್ಲವರಾಗಿದ್ದರು. 'ಎಪಿಗ್ರಾಫಿಕಾ ಕರ್ನಾಟಿಕಾ' ಎಂಬ 'ಶಾಸನಗಳ ಬೃಹತ್ ಸಂಪುಟ'ಗಳನ್ನು ರಚಿಸಿದರು. ದಕ್ಷಿಣ ಕರ್ನಾಟಕದ ಇತಿಹಾಸಕ್ಕೆ ಸೂಕ್ತ ತಳಹದಿಯನ್ನು ಕೊಟ್ಟರು. ಮೈಸೂರಿನ ಗೆಜ಼ಿಟಿಯರನ್ನು ಸಿದ್ಧಪಡಿಸಬೇಕೆಂಬ ವಿಚಾರ ಬಂದಿದ್ದು 1867ರಲ್ಲಿ. ಆದರೆ, ಕಾರಣಾಂತರದಿಂದ ಮೈಸೂರು ಮತ್ತು ಕೋಲಾರ ಜಿಲ್ಲೆಗಳಿಗೆ ಸಂಬಂಧಿಸಿದ ಎರಡು ಸಂಪುಟಗಳು ಮಾತ್ರ ಹೊರಬಂದವು. ಈ ಸಂಪುಟಗಳನ್ನು ಕ್ರಮವಾಗಿ ಎಚ್.ವೆಲ್ಲೆಸ್ಲಿ ಹಾಗೂ ಬಿ. ಕೃಷ್ಣಯ್ಯಂಗಾರ್ ಸಂಪಾದಿಸಿದ್ದರು. ಅಂದಿನ ವಿದ್ಯಾಧಿಕಾರಿ ಗಳಾಗಿದ್ದ ಬಿ.ಎಲ್. ರೈಸ್ ಅವರಿಗೆ ಗೆಜ಼ಿಟಿಯರ್ ತಯಾರಿಸುವ ಕಾರ್ಯವಹಿಸಲಾಗಿ ಅದರಂತೆ 1876-77ರಲ್ಲಿ ಮೂರು ಸಂಪುಟಗಳಲ್ಲಿ ಮೈಸೂರು ಹಾಗೂ ಕೊಡಗು ರಾಜ್ಯ ಗೆಜ಼ಿಟಿಯರ್ಗಳನ್ನು ಇವರು ಹೊರತಂದರು. ಮೈಸೂರು ಸಂಸ್ಥಾನವನ್ನು ಕುರಿತಾದ 2 ಸಂಪುಟಗಳಲ್ಲಿ ಮೊದಲನೆಯದು ಸಂಸ್ಥಾನದ ಬಗ್ಗೆಯೂ ಎರಡನೆಯದು ಅಂದಿನ ಎಂಟು ಜಿಲ್ಲೆಗಳ ಬಗ್ಗೆಯೂ ಮಾಹಿತಿ ನೀಡುತ್ತವೆ. 1897ರಲ್ಲಿ ರೈಸರೇ ಈ ಎರಡು ಗೆಜ಼ಿಟಿಯರ್ ಸಂಪುಟಗಳನ್ನು ಪರಿಷ್ಕರಿಸಿ ಪ್ರಕಟಿಸಿದರು. ಈ ಆವೃತ್ತಿ ಸಮಕಾಲೀನ ಐತಿಹಾಸಿಕ ಸಂಶೋಧನೆಗಳನ್ನು ಸಹ ಒಳಗೊಂಡಿತ್ತು. 1877ರಲ್ಲಿ ಹಂಟರ್ನ ಸಂಪಾದಕತ್ವದಲ್ಲಿ ಭಾರತಕ್ಕೆ ಸಂಬಂಧಿಸಿದಂತೆ ಇಂಪೀರಿಯಲ್ ಗೆಜ಼ಿಟಿಯರಿನ ಸಂಪುಟಗಳು ಹೊರಬಂದವು. ಅವುಗಳಲ್ಲಿ ಅಂದಿನ ಮೈಸೂರು ಹಾಗೂ ಕೊಡಗು ಪ್ರಾಂತ್ಯಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ರೈಸ್ ಅವರೇ ಪುರೈಸಿಕೊಟ್ಟಿದ್ದು ಅನಂತರ 1909ರ ಸುಮಾರಿನಲ್ಲಿ ಅವುಗಳನ್ನು ಸಂಗ್ರಹಿಸಿ ಪ್ರೊವಿಂಡೆಯಲ್ ಗೆಜ಼ಿಟಿಯರ್ ಮಾಲಿಕೆಯಲ್ಲಿ ಪುಸ್ತಕರೂಪದಲ್ಲಿ ಪ್ರಕಟಿಸಿದರು.
1911ರ ಜನಗಣತಿಯ ಸಂಬಂಧದಲ್ಲಿ ಮೈಸೂರ್ ಗೆಜ಼ಿಟಿಯರಿನ ಹೊಸ ಆವೃತ್ತಿಯನ್ನು ಸಿದ್ಧಪಡಿಸಬೇಕೆಂದು ಅಂದಿನ ಮೈಸೂರು ಸರ್ಕಾರ ನಿರ್ಣಯಿಸಿ, 1914ರಲ್ಲಿ ಈ ಕಾರ್ಯವನ್ನು ಪುರಾತತ್ತ್ವ ಇಲಾಖೆಯ ನಿರ್ದೇಶಕರಾಗಿದ್ದ ಆರ್. ನರಸಿಂಹಾಚಾರ್ಯರಿಗೆ ವಹಿಸಿತು. ಅವರ ಅನಂತರ ವಿ.ಆರ್. ತ್ಯಾಗರಾಜಅಯ್ಯರ್ ಈ ಕಾರ್ಯವನ್ನು ವಹಿಸಿಕೊಂಡರು. 1924ರಲ್ಲಿ ಸಿ. ಹಯವದನ ರಾಯರನ್ನು ಇದರ ಸಂಪಾದಕರನ್ನಾಗಿ ನೇಮಿಸಲಾಯಿತು. ಮೈಸೂರ್ ಗೆಜ಼ಿಟಿಯರಿನ ಹೊಸ ಆವೃತ್ತಿ ಏಳು ಸಂಪುಟಗಳಲ್ಲಿ 1926-27ರಲ್ಲಿ ಹೊರಬಂತು. ಹಿಂದಿನ ಮೊದಲ ಸಂಪುಟ ಈಗ ವಿವರಣಾತ್ಮಕ, ಐತಿಹಾಸಿಕ, ಆರ್ಥಿಕ, ಆಡಳಿತ ಎಂದು ನಾಲ್ಕು ಸಂಪುಟಗಳಾಗಿ ಬೆಳೆಯಿತು. ಎರಡು ಸಂಪುಟಗಳು ಮೈಸೂರು ಸಂಸ್ಥಾನದ ಅಂದಿನ ಜಿಲ್ಲೆಗಳಿಗೆ ಸಂಬಂಧಿಸಿದ್ದು. ಏಕೀಕರಣದ ತರುವಾಯ ಕರ್ನಾಟಕದ ವ್ಯಾಪ್ತಿಗೆ ಹಲವಾರು ರಾಜ್ಯಗಳಿಂದ ಭೂ ಪ್ರದೇಶಗಳು ವಿಲೀನಗೊಂಡವು. ಆ ವೇಳೆಗಾಗಲೇ ಆಯಾ ಪ್ರದೇಶಗಳಲ್ಲಿ ಗೆಜೆಟಿಯರ್ಗಳು ಪ್ರಕಟಗೊಂಡಿದ್ದವು. 1870ರಲ್ಲಿ ಕೊಡಗು ಪ್ರಾಂತ್ಯದ ಗೆಜೆಟಿಯರನ್ನು ರೆವರೆಂಡ್ ಜಿ. ರಿಚರ್ ಅವರೂ; 1883-84ರಲ್ಲಿ ಬಿಜಾಪುರ, ಧಾರವಾಡ, ಬೆಳಗಾವಿ ಹಾಗೂ ಕೆನರ (ಉತ್ತರ ಕನ್ನಡ) ಗೆಜೆಟಿಯರ್ಗಳನ್ನು ಜೇಮ್ಸ್ ಎಂ. ಕ್ಯಾಂಪ್ಬೆಲ್ ಅವರೂ; ದಕ್ಷಿಣ ಕನ್ನಡ ಜಿಲ್ಲೆಯ ಮ್ಯಾನ್ಯುಯಲ್‍ನ ಮೊದಲ ಸಂಪುಟವನ್ನು 1894ರಲ್ಲಿ ಜಾನ್ ಸ್ಟರ್ರಕ್ ಹಾಗೂ ಎರಡನೆಯ ಸಂಪುಟವನ್ನು 1895ರಲ್ಲಿ ಹೆರಾಲ್ಡ್ ಎ. ಸ್ಟುವರ್ಟ್ ಅವರೂ; ಬಳ್ಳಾರಿ ಜಿಲ್ಲೆಯ ಮ್ಯಾನ್ಯುಯಲ್ ಅನ್ನು 1872ರಲ್ಲಿ ಜಾನ್ ಕೆಲ್ಸೆಲ್ ಹಾಗೂ ಅದರ ಪರಿಷ್ಕೃತ ಆವೃತ್ತಿಯನ್ನು 1904ರಲ್ಲಿ ವಿಲಿಯಂ ಫ್ರಾನ್ಸಿಸ್ ಅವರೂ ಪ್ರಕಟಿಸಿದರು. ಅಲ್ಲದೆ ಈ ಎಲ್ಲ ಗೆಜ಼ಿಟಿಯರ್ಗಳಿಗೂ ಬೇರೆ ಬೇರೆ ಸಂದರ್ಭಗಳಲ್ಲಿ ಪುರವಣೆಗಳನ್ನು ಹೊರತರಲಾಯಿತು. ಕಳೆದ ಶತಮಾನದ ಆದಿಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸೇರಿದ ಬೀದರ್, ಗುಲ್ಬರ್ಗಾ ಹಾಗೂ ರಾಯಚೂರು ಗೆಜ಼ಿಟಿಯರ್ ಗಳು ಪ್ರಕಟವಾದಂತೆ ತಿಳಿದುಬರುತ್ತದೆ. ಆದರೆ ಅವುಗಳ ಪುರವಣೆಗಳು ಸ್ವಾತಂತ್ರ್ಯಾ ನಂತರ ಪ್ರಕಟವಾಗಿದ್ದು ಲಭ್ಯವಿವೆ. ಹಿಂದೆ ಕ್ಯಾಂಪ್ಬೆಲ್ ಪ್ರಕಟಿಸಿದ್ದ ಮುಂಬಯಿ ಕರ್ನಾಟಕ ಪ್ರಾಂತ್ಯದ ನಾಲ್ಕು ಗೆಜ಼ಿಟಿಯರ್ಗಳನ್ನು 1893ರಲ್ಲಿ ವೆಂಕಟರಂಗೋಕಟ್ಟಿ ಯವರು ಕನ್ನಡಕ್ಕೆ ಸಂಕ್ಷಿಪ್ತಾನುವಾದ ಮಾಡಿ ಒಂದು ಸಂಪುಟದಲ್ಲಿ ಪ್ರಕಟಿಸಿದರು. ೧೯೩೦ರ ದಶಕದಲ್ಲಿ ರಾವ್ ಬಹದ್ದೂರ್ ವಿ.ಹಯವದನ ರಾಯರು,'ಮೈಸೂರು ಗೆಜೆಟಿಯರ'ನ್ನು 'ಐದು ಸಂಪುಟಗಳ ಬೃಹತ್ ಗಾತ್ರ'ದಲ್ಲಿ ಪ್ರಕಟಿಸಿದರು.
ಕರ್ನಾಟಕ ಏಕೀಕರಣದ ಬಳಿಕ
ಬದಲಾಯಿಸಿಸನ್ ೧೯೫೮ ರಲ್ಲಿ ಮೈಸೂರು ರಾಜ್ಯದಲ್ಲಿ ಗೆಜೆಟಿಯರ್ ಇಲಾಖೆ ಸ್ಥಾಪಿತವಾಯಿತು ಮತ್ತು ೧೯೯೨ ರ ವರೆಗೆ ಆಗ ಇದ್ದ ೨೦ ಜಿಲ್ಲೆಗಳ ಗೆಜೆಟಿಯರ್ ಗಳನ್ನು ಆಂಗ್ಲಭಾಷೆಯಲ್ಲಿ ಪ್ರಕಟಿಸಲಾಯಿತು. ಇದಲ್ಲದೆ, ಸುಮಾರು, ೨,೬೦೦ ಪುಟಗಳ ಕರ್ನಾಟಕ ರಾಜ್ಯ ಗೆಜೆಟಿಯರ್ ಒಟ್ಟು ೨ ಸಂಪುಟಗಳಲ್ಲಿ ಹೊರಬಂದಿತು. ಮುಂದೆ ಕೊಡಗು ಜಿಲ್ಲೆಯಿಂದ ಆರಂಭಿಸಿ ಕನ್ನಡದಲ್ಲಿ ಪುನರ್ನಿಮಿತ ಜಿಲ್ಲಾ ಗೆಜೆಟಿಯರ್ ಗಳು ಬರಲಾರಂಭಿಸಿದವು. ಇದಲ್ಲದೆ ಇದರ ಇಂಗ್ಲೀಷ್ ಆವೃತ್ತಿಗಳೂ ಬರಲಾರಂಭಿಸಿವೆ.
ಕರ್ನಾಟಕ ಗೆಜೆಟಿಯರ್‍ನ ಇತ್ತೀಚೆಗಿನ ಬೆಳವಣಿಗೆ
ಬದಲಾಯಿಸಿಜಿಲ್ಲಾ ಗೆಜ಼ಿಟಿಯರುಗಳ ರಚನೆಯಲ್ಲಿ ಹತ್ತೊಂಬತ್ತು ಅಧ್ಯಾಯಗಳನ್ನು ಕೊಡಲು ನಿಶ್ಚಯಿಸಲಾಯಿತು. ಅವುಗಳ ವಿವರ ಹೀಗಿದೆ :
ಸಾಮಾನ್ಯ ಭೂವಿವರಣೆಗೆ ನದಿಗಳು, ನೀರಾವರಿ, ಖನಿಜ, ಪಶುಪಕ್ಷಿ, ವನಸ್ಪತಿ ಮತ್ತು ವಾಯುಗುಣ, ಇತಿಹಾಸ, ಜನ, ಜೀವನ, ಭಾಷೆಗಳು, ಇತ್ಯಾದಿ ಕೃಷಿ ಮತ್ತು ನೀರಾವರಿ, ಅರಣ್ಯ ಇತ್ಯಾದಿ ಕೈಗಾರಿಕೆಗಳು, ಬ್ಯಾಂಕಿಂಗ್, ವಾಣಿಜ್ಯ, ಸಾರಿಗೆ, ಸಂಪರ್ಕ, ಇತರ ಉದ್ಯೋಗಗಳು, ಆರ್ಥಿಕ ಪ್ರವೃತ್ತಿಗಳು, ಸಾಮಾನ್ಯ ಆಡಳಿತ, ಕಂದಾಯ ಆಡಳಿತ, ಕಾನೂನು ಮತ್ತು ಶಿಸ್ತು, ನ್ಯಾಯಪಾಲನೆ, ಇತರ ಇಲಾಖೆಗಳು, ಸ್ಥಳೀಯ ಆಡಳಿತ, ಶಿಕ್ಷಣ ಮತ್ತು ಸಂಸ್ಕೃತಿ, ವೈದ್ಯ, ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ಸೌಲಭ್ಯಗಳು, ಸಾರ್ವಜನಿಕ ಮತ್ತು ಸ್ವಯಂಸೇವಕ ಸಾಮಾಜಿಕ ಸಂಸ್ಥೆಗಳು, ಇತ್ಯಾದಿ, ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳು, ವ್ಯಾಪಾರ ಕೇಂದ್ರಗಳು, ಇತ್ಯಾದಿ. ಹೀಗೆ ಜಿಲ್ಲಾ ಗೆಜ಼ಿಟಿಯರುಗಳು ಪ್ರತಿಯೊಂದು ಜಿಲ್ಲೆಯೊಳಗಿರುವ ಹಳ್ಳಿ ಮತ್ತು ಊರುಗಳ ಐತಿಹಾಸಿಕ ಹಿನ್ನೆಲೆ ಹಾಗೂ ಸಮಕಾಲೀನ ವಿವರಗಳನ್ನು ನೀಡುತ್ತವೆ.
ಕರ್ನಾಟಕದಲ್ಲಿ ಪ್ರತ್ಯೇಕವಾಗಿ ಗೆಜ಼ಿಟಿಯರ್ ಇಲಾಖೆ ಆರಂಭಗೊಂಡಿದ್ದು ಇತ್ತೀಚೆಗೆ ತಾಲ್ಲೂಕು ಗೆಜ಼ಿಟಿಯರ್ಗಳನ್ನು ಪ್ರಕಟಿಸಲು ಕ್ರಮಕೈಗೊಂಡಿದ್ದು ಮೊದಲಿಗೆ ಮೈಸೂರು ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಕುರಿತು ಗೆಜ಼ಿಟಿಯರ್ಗಳನ್ನು ಹೊರತರಲಾಗಿದೆ. ಪ್ರಸ್ತುತ ಇದು ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದ ಒಂದು ವಿಭಾಗವಾಗಿ ಕಾರ್ಯ ನಿರ್ವಹಿಸುತ್ತಿದೆ. 1958ರಲ್ಲಿ ಇಲಾಖೆ ಆರಂಭವಾಗುವ ವೇಳೆಗೆ ಧಾರವಾಡ ಜಿಲ್ಲಾ ಗೆಜ಼ಿಟಿಯರನ್ನು ಮಹಾರಾಷ್ಟ್ರ ಸರ್ಕಾರವೇ ಪ್ರಕಟಿಸಿತ್ತು. ಅನಂತರ 1990ರ ವೇಳೆಗೆ ರಾಜ್ಯದ ಅಂದಿನ ಇಪ್ಪತ್ತೊಂದು ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಆಂಗ್ಲ ಭಾಷೆಯಲ್ಲಿ ಗೆಜ಼ಿಟಿಯರ್ ಸಂಪುಟಗಳನ್ನು ಹೊರತರಲಾಯಿತು. ಅಲ್ಲದೆ ಇಡೀ ರಾಜ್ಯಕ್ಕೆ ಸಂಬಂಧಿಸಿದಂತೆ 1982-83ರಲ್ಲಿ ಎರಡು ಭಾಗಗಳಲ್ಲಿ ಆಂಗ್ಲ ಭಾಷೆಯಲ್ಲಿಯೂ, ಅದರ ಕನ್ನಡಾನುವಾದವನ್ನು ಮೂರು ಸಂಪುಟಗಳಲ್ಲಿ 1984-86ರ ಅಭಿವೃದ್ಧಿಯಲ್ಲಿಯೂ ಪ್ರಕಟಿಸಲಾಯಿತು. 1994ರಲ್ಲಿ ಆಂಗ್ಲ ಭಾಷೆಯಲ್ಲಿ ಹಾಗೂ 1996ರಲ್ಲಿ ಕನ್ನಡದಲ್ಲಿ ರಾಜ್ಯ ಗೆಜೆ಼ಟಿಯರ್ಗಳ ಪುರವಣೆಗಳನ್ನು ಮುದ್ರಿಸಲಾಯಿತು. ಈ ಮೊದಲೇ ಕೇಂದ್ರ ಗೆಜ಼ಿಟಿಯರ್ ಇಲಾಖೆ ಸ್ಥಗಿತಗೊಂಡಿದ್ದು ರಾಜ್ಯಸರ್ಕಾರವೇ ಕನ್ನಡ ಭಾಷೆಯಲ್ಲಿ ಪರಿಷ್ಕೃತ ಗೆಜ಼ಿಟಿಯರ್ಗಳನ್ನು ಹೊರತರಲು ಉದ್ದೇಶಿಸಿತು. ಅದರಂತೆ ಕೊಡಗು, ಧಾರವಾಡ, ಗುಲ್ಬರ್ಗಾ, ಬಿಜಾಪುರ, ಮಂಡ್ಯ ಹಾಗೂ ಕೋಲಾರ ಜಿಲ್ಲಾ ಗೆಜೆ಼ಟಿಯರ್ಗಳನ್ನು 1992-2005ರ ಅವಧಿಯಲ್ಲಿ ಹೊರತರಲಾಯಿತು. ಇವುಗಳ ಆಂಗ್ಲ ಆವೃತ್ತಿಯನ್ನು ಹೊರತರುವ ಯೋಜನೆ ಕಾರ್ಯರೂಪದಲ್ಲಿದ್ದು, 1993-2004ರ ಅವಧಿಯಲ್ಲಿ ಕೊಡಗು, ಧಾರವಾಡ ಹಾಗೂ ಗುಲ್ಬರ್ಗಾ ಜಿಲ್ಲೆಯ ಅನುವಾದಿತ ಆವೃತ್ತಿ ಪ್ರಕಟವಾಗಿದೆ. ಪರಿಷ್ಕೃತ ಗೆಜೆ಼ಟಿಯರುಗಳಲ್ಲಿ ಕೆಲವು ಅಧ್ಯಾಯಗಳನ್ನು ಪುನರ್ರೂಪಿಸಲಾಗಿದೆ.
ಈ ಮಧ್ಯೆ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ಉಪಯೋಗವಾಗುವಂತೆ ರಾಜ್ಯ ಗೆಜ಼ಿಟಿಯರ್ಗಳ ರೂಪದಲ್ಲಿಯೇ ಕರ್ನಾಟಕ ಕೈಪಿಡಿಗಳನ್ನು ಪ್ರಕಟಿಸಲಾಗಿದೆ. 1996ರಲ್ಲಿ ಹ್ಯಾಂಡ್ ಬುಕ್ ಆಫ್ ಕರ್ನಾಟಕ ಎಂಬ ಆಂಗ್ಲ ಆವೃತ್ತಿ ಹೊರಬಂದಿದ್ದು 2001 ಹಾಗೂ 2005ರಲ್ಲಿ ಇದನ್ನು ಆಯಾ ವರ್ಷಗಳ ವರೆಗಿನ ಮಾಹಿತಿಯೊಂದಿಗೆ ಎರಡು ಬಾರಿ ಪುನರ್ಮುದ್ರಿಸಲಾಯಿತು. 1996ರಲ್ಲಿಯೇ ಕರ್ನಾಟಕ ಕೈಪಿಡಿಯ ಕನ್ನಡ ಅವತರಣಿಕೆಯಲ್ಲಿ ಪ್ರಕಟಿಸಲಾಯಿತು.
ಗೆಜೆ಼ಟಿಯರ್ ಇಲಾಖೆಯ ಇನ್ನೊಂದು ಯೋಜನೆಯೆಂದರೆ ಸ್ವಾತಂತ್ರ್ಯ ಪುರ್ವದಲ್ಲಿ ಪ್ರಕಟಗೊಂಡು ಈಗ ಅಲಭ್ಯವಾಗಿರುವ ಗೆಜೆ಼ಟಿಯರ್ಗಳ ಪುನರ್ಮುದ್ರಣ ಕಾರ್ಯ. ಇದರಡಿಯಲ್ಲಿ ಕ್ಯಾಂಪ್ಬೆಲ್ರವರ ಬಿಜಾಪುರ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಗೆಜೆ಼ಟಿಯರ್ಗಳು, ಸ್ಟರ್ರಕ್ ಹಾಗೂ ಸ್ಟುವರ್ಟ್ ಅವರ ದಕ್ಷಿಣ ಕನ್ನಡ ಜಿಲ್ಲಾ ಮ್ಯಾನ್ಯುಯಲ್ಗಳು, ಕೆಲ್ಸೆಲ್ ಹಾಗೂ ಫ್ರಾನ್ಸಿಸ್ ಅವರ ಬಳ್ಳಾರಿ ಜಿಲ್ಲಾ ಗೆಜೆ಼ಟಿಯರ್ಗಳು ಹಾಗೂ ಬಿ. ಎಲ್. ರೈಸ್ ಅವರ ಮೈಸೂರು ಹಾಗೂ ಕೊಡಗಿಗೆ ಸಂಬಂಧಿಸಿದ ಮೂರು ಸಂಪುಟಗಳ ಗೆಜೆ಼ಟಿಯರ್ಗಳು ಪುನರ್ಮುದ್ರಣಗೊಂಡಿವೆ. ಗೆಜೆ಼ಟಿಯರ್ ಇಲಾಖೆಯ ಇನ್ನೊಂದು ಮಹತ್ತ್ವದ ಕಾರ್ಯವೆಂದರೆ ಪ್ರಕಟವಾದ ಎಲ್ಲ ಗೆಜೆ಼ಟಿಯರ್ಗಳನ್ನು ಸಿ.ಡಿ. ಅವತರಣಿಕೆಯಲ್ಲಿ ರೂಪುಗೊಳಿಸಿ ವೆಬ್ಸೈಟ್ನಲ್ಲಿ ಅಳವಡಿಸಿ, ಆಸಕ್ತರಿಗೆ ಉಚಿತವಾಗಿ ಪಡೆಯಲು (ಡೌನ್ಲೋಡ್ ಹಾಗೂ ಮುದ್ರಣ ಸೌಲಭ್ಯ) ಅವಕಾಶ ಕಲ್ಪಿಸಿರುವುದು. 2003ರಲ್ಲಿ ಇಂಪೀರಿಯಲ್ ಗೆಜೆ಼ಟಿಯರ್ ಸೇರಿದಂತೆ ಸುಮಾರು ಎಂಬತ್ತು ಗೆಜೆ಼ಟಿಯರ್ಗಳನ್ನು ಒಂಬತ್ತು ಸಿ.ಡಿ. ಗಳಲ್ಲಿ ಅಡಕಗೊಳಿಸಿ ಹೊರತರಲಾಯಿತು. 2005ರಲ್ಲಿ ಮತ್ತೆ ಸಿ.ಡಿ.ಗಳ ಪುನರ್ ಆವೃತ್ತಿಯನ್ನು ಹೊರತರಲಾಯಿತು. ಕಿಯೋಕ್ಸ್ ಸ್ಪರ್ಷ ಪರದೆಯಲ್ಲಿಯೂ ಸಿ.ಡಿ. ಗಳನ್ನು ಅಳವಡಿಸಿದ್ದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಧಾರವಾಡ ವಿಶ್ವವಿದ್ಯಾಲಯದ ಗ್ರಂಥಾಲಯ ವಿಭಾಗದಲ್ಲಿ ಕಿಯೋಕ್ಸ್ ಯಂತ್ರೋಪಕರಣಗಳನ್ನು ಇರಿಸಲಾಗಿದೆ. 2001ರಲ್ಲಿ ಕರ್ನಾಟಕ ರಾಜ್ಯ ಗೆಜೆ಼ಟಿಯರ್ ಇಲಾಖೆಯ ವತಿಯಿಂದ ಅಖಿಲ ಭಾರತ ಮಟ್ಟದಲ್ಲಿ ಎಲ್ಲ ರಾಜ್ಯಗಳ ಗೆಜೆ಼ಟಿಯರ್ ಮುಖ್ಯ ಸಂಪಾದಕರುಗಳನ್ನು ಆಹ್ವಾನಿಸಿ ಸಮ್ಮೇಳನವೊಂದನ್ನು ಆಯೋಜಿಸಲಾಗಿತ್ತು.
ವಾರ್ಷಿಕ ಪುರವಣೆ
ಬದಲಾಯಿಸಿರಾಜ್ಯ ಗೆಜೆಟಿಯರ್ ಬಂದ ಒಂದು ದಶಕದ ನಂತರ ಅದರ ವಾರ್ಷಿಕ ಪುರವಣಿ ಕನ್ನಡನಾಡಿನ ಜನರಿಗೆ ಉಪಲಭ್ದವಾಯಿತು. ಈಗ ಪುನರ್ವಿಮರ್ಶಿತ ೧೨-೧೩ ಜಿಲ್ಲೆಗಳ ಗೆಜೆಟಿಯರ್ ಗಳು ಜನರ ಕೈಸೇರಿವೆ. ಇನ್ನೂ ಕೆಲವು ಜಿಲ್ಲೆಗಳ ಗೆಜೆಟಿಯರ್ ಗಳು ಬರುವುದಿದೆ.
- ತುಮಕೂರು,
- ಚಿತ್ರದುರ್ಗ,
- ಬೀದರ್, ಮೊದಲಾದ ಜಿಲ್ಲೆಗಳು.
ಗೆಜೆಟಿಯರ್ ಬಗ್ಗೆ ಸದಭಿಪ್ರಾಯಗಳು
ಬದಲಾಯಿಸಿ೧೯೯೨ ರಲ್ಲಿ ಪುನರ್ವಿಮರ್ಶಿತ ಮೈಸೂರು ಗೆಜೆಟಿಯರ್ ಪ್ರಕಟವಾದಾಗ ಜಿಲ್ಲಾ ಯೋಜನೆಗಳನ್ನು ಸಿದ್ಧಪಡಿಸಿ ಕಾರ್ಯಾನ್ವಯಮಾಡಲು ಮೊದಲು ೬ ರಿಂದ ೮ ತಿಂಗಳು ಹಿಡಿಯುತ್ತಿತ್ತು. ಈ ಪ್ರಕಟಣೆಯಾದ ಬಳಿಕ ಅದರಲ್ಲಿ ಸಿಕ್ಕ ಉಪಯುಕ್ತಮಾಹಿತಿಗಳ ಸಹಾಯದಿಂದ ಒಂದು ತಿಂಗಳ ಅವಧಿಯಲ್ಲೇ ಕೆಲಸ ಪ್ರಾರಂಭಿಸಲು ಅನುಕೂಲವಾಯಿತೆಂದು ಆಗಿನ ಜಿಲ್ಲಾ ಪರಿಷತ್ತಿನ ಪ್ರಮುಖ-ಕಾರ್ಯದರ್ಶಿಗಳು ಗೆಜೆಟಿಯರ್ ಶಾಖೆಯ ಅಧಿಕಾರಿವರ್ಗವನ್ನು ಅಭಿನಂದಿಸಿದ್ದಾರೆ.
ಜನಸಾಮಾನ್ಯರ ಆದ್ಯತೆಗಳಿಗಾಗಿ 'ಕಿರುಹೊತ್ತಿಗೆ'ಯ ಪ್ರಕಾಶನ
ಬದಲಾಯಿಸಿಆಗಿನ 'ಗೆಜೆಟಿಯರ್ ಇಲಾಖೆಯ ಸಲಹಾ ಸಮಿತಿಯ ಸದಸ್ಯ'ರಲ್ಲಿ ಪ್ರಮುಖರೊಬ್ಬರಾಗಿದ್ದ,ನಿವೃತ್ತ ಐ.ಎ.ಎಸ್.ಅಧಿಕಾರಿ,ಕೆ. ಬಾಲಸುಬ್ರಹ್ಮಣ್ಯಂ ಸೂಚಿಸಿದ್ದಂತೆ,'ಎ ಹ್ಯಾಂಡ್ ಬುಕ್ ಆಫ್ ಕರ್ನಾಟಕ ಮತ್ತು ಅದರ ಕನ್ನಡ ಭಾಷಾಂತರದ ಕೈಪಿಡಿಯನ್ನು ೧೯೯೫ ಹಾಗೂ ೧೯೯೬ ರಲ್ಲಿ ಕ್ರಮವಾಗಿ ಪ್ರಕಟಿಸಲಾಯಿತು. ಇವುಗಳು ೩-೪ ಆವೃತ್ತಿಗಳಲ್ಲಿ ಹೊರಬಂದು ಜನಸಾಮಾನ್ಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದತಯ ರೂಪದಲ್ಲಿ ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಉಪಯೋಗವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಕಟವಾಗುತ್ತಿರುವ ಸಂಪುಟಗಳು ಜಿಲ್ಲೆಯ ಮತ್ತು ರಾಜ್ಯದ ಅತಿ-ಸುಂದರ ಭಾವಚಿತ್ರಗಳನ್ನೂ ಒಳಗೊಂಡಿವೆ. ಜಿಲ್ಲೆಗಳ ಭೌಗೋಲಿಕ ಚಿತ್ರಣ, ರಾಜ್ಯದ ವಿಶಿಷ್ಟ ಪ್ರಾಣಿಗಳು, ಪ್ರಕೃತಿ ಸಂದರ್ಯ, ಭೂಗರ್ಭ ಸಂಪತ್ತು, ಸಸ್ಯಗಳು, ವಿವಿಧ ಬುಡಕಟ್ಟಿನ ಜನಸಮುದಾಯಗಳು, ಜಾತಿ, ಧರ್ಮ, ಪಂಥ, ವಿವರಗಳು, ಕೋಟೆಗಳು, ಭವ್ಯವಾದ ದೇವಾಲಯಗಳು,ಮಸೀದಿಗಳು, ಇಗರ್ಜಿಗಳು,ಬಸದಿಗಳು, ಕೆರೆಕೊತ್ತಲಗಳು,ನದಿಗಳು,ಪರ್ವತಗಳು,ಕೃಷಿ,ನೀರಾವರಿ, ವ್ಯಾಪಾರ, ಸಾರಿಗೆ ವ್ಯವಸ್ಥೆ,ವಾಣಿಜ್ಯ, ಕೈಗಾರಿಕಾ ಸ್ಥಾವರಗಳು,ಕ್ರೀಡೆ, ಮನರಂಜನೆ, ಸಾಹಿತ್ಯ, ಗಿರಿಧಾಮಗಳು,ಸಮುದ್ರ ದಡಗಳ ಸಚಿತ್ರ ದಾಖಲೀಕರಣಗಳು ಮಹತ್ವದ ಮಾಹಿತಿಗಳನ್ನು ಒದಗಿಸುವಲ್ಲಿ ಸಹಾಯವಾಗಿವೆ.ಕ್ಷಾಮಗಳು, ಪ್ರವಾಹ ಬಂದ ಪ್ರಕರಣಗಳು ಸಂಪನ್ಮೂಲದ ಪರಿಸ್ಥಿತಿ ಇವೆಲ್ಲವೂ ಓದುಗರಿಗೆ ವಿವರಗಳು ತಿಳಿಯುವಂತೆ ನೀಡಲಾಗುವುದು. ಆಡಳಿತಗಾರರಿಗೆ ಜಿಲ್ಲೆಗೆ, ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಲು ಈ ಮೇಲಿನ ವಿವರಗಳು ಸಾಧನವಾಗಿವೆ. ಎಲ್ಲಾ ಅಧ್ಯಾಯಗಳಲ್ಲೂ ಅಂಕಿ-ಅಂಶಗಳೊಂದಿಗೆ ಮಾಹಿತಿ ಇರುತ್ತದೆ.
ಗೆಜೆಟಿಯರ್ ನ ಕೊನೆಯ ಅಧ್ಯಾಯಗಳಲ್ಲಿ
ಬದಲಾಯಿಸಿಪುಸ್ತಕದ ಕೊನೆಯ ಪುಟಗಳಲ್ಲಿ ಮುಖ್ಯ ಊರುಗಳ ಅಕ್ಷರಾನುಕ್ರಮಣಿಕೆಯಲ್ಲಿ ಪರಿಚಯವಿರುತ್ತದೆ. (ಇದನ್ನೇ ವಾಸ್ತವವಾಗಿ ಹಿಂದೆ ಗೆಜೆಟಿಯರ್ ಎಂದು ಗುರುತಿಸುತ್ತಿದ್ದರು). ಇಲ್ಲಿ ಊರಿನ ಹೆಸರೇ ಪ್ರಾಮುಖ್ಯ. ಅಲ್ಲಿರುವ ಐತಿಹಾಸಿಕ,ಹಾಗೂ ಧಾರ್ಮಿಕ ಕೇಂದ್ರಗಳು, ಸಾಂಸ್ಕೃತಿಕ ಮಹತ್ವಗಳನ್ನೆಲ್ಲಾ ಚರ್ಚಿಸಲಾಗುವುದು.
ಉದ್ಧರಿಸಿದ ಲೇಖನ
ಬದಲಾಯಿಸಿಲೇಖಕರು : 'ಗ್ಯಾಜೆಟಿಯರ್' ಎಂಬ ಪ್ರದೇಶ ಪರಿಚಯ ಕೋಶ-'ಡಾ. ಸೂರ್ಯನಾಥ ಕಾಮತ್', 'ವಿಜಯ ಕರ್ನಾಟಕ', ಮಂಗಳವಾರ, ಸೆಪ್ಟೆಂಬರ್, ೨೦೧೧, ಬೆಂಗಳೂರು