ಜಿನಿವಾ

(ಜಿನೀವ ಇಂದ ಪುನರ್ನಿರ್ದೇಶಿತ)

ಸ್ವಿಟ್ಜರ್ಲ್ಯಾನ್ಡ್ ದೇಶದ ಎರಡನೇಯ ಅತಿ ಜನಸಂಖೆಯುಳ್ಳ ನಗರ

ಜಿನಿವಾ
Coordinates: 46°12′N 6°09′E / 46.200°N 6.150°E / 46.200; 6.150
ಜನಸಂಖ್ಯೆ
ಟೆಂಪ್ಲೇಟು:Swiss populations NC
ಸಮಯದ ವಲಯ
ಜಾಲತಾಣville-geneve.ch


ಜಿನೀವನಗರ ರೋನ್ ನದೀಕಣಿವೆಯಲ್ಲಿ, ಜಿನೀವ ಸರೋವರದ ನೈಋತ್ಯ ತುದಿಯಲ್ಲಿದೆ. ಜನಸಂಖ್ಯೆ 1,73,618 (1970). ಜಿನೀವ ವಿಭಾಗದ ಪಶ್ಚಿಮದಲ್ಲಿ ಜುರ ಪರ್ವತಶ್ರೇಣಿಯೂ ದಕ್ಷಿಣ ಮತ್ತು ಪೂರ್ವದಲ್ಲಿ ಸಾಲಿವ್ ಶ್ರೇಣಿಯ ಕಡಿವಾದ ಸುಣ್ಣಕಲ್ಲು ಮೈಯೂ ಇವೆ. ಅಂತರರಾಷ್ಟ್ರೀಯ ಸಮ್ಮೇಳನಗಳ ಮತ್ತು ಸಂಧಾನಗಳ ಕ್ಷೇತ್ರವಾಗಿ, ಬೌದ್ಧಿಕ, ವೈಜ್ಞಾನಿಕ ಹಾಗೂ ಧಾರ್ಮಿಕ ಅಧ್ಯಯನದ ಕೇಂದ್ರವಾಗಿ ಪ್ರಸಿದ್ಧವಾಗಿದೆ.

ರೋನ್ ನದಿಯ ಎರಡೂ ದಂಡೆಗಳ ಮೇಲೆ ಜಿನೀವ ನಗರ ಹಬ್ಬಿದೆ. ಜಿನೀವ ಸರೋವರದಿಂದ ದಕ್ಷಿಣಕ್ಕೆ ಹರಿಯುವ ಈ ನದಿಗೆ ಒಂಬತ್ತು ಸೇತುವೆಗಳಿವೆ. ನದಿಯ ಎಡದಂಡೆಯ ಮೇಲೆ ದಕ್ಷಿಣಕ್ಕೆ ಒಂದು ಬೆಟ್ಟವುಂಟು. ಜಿನೀವ ನಗರ ಮೊದಲು ಅದರ ಮೇಲೆ ಸ್ಥಾಪಿತವಾಗಿತ್ತು. ಅಲ್ಲಿ ಲೌಕಿಕ ಭವನಗಳೂ ಉನ್ನತವಾದ ಸ್ಥಳದ ಮೇಲೆ ಸೇಂಟ್ ಪ್ಯೇರ್ ಕತಿಡ್ರಲೂ (12ನೆಯ ಶತಮಾನ) ಇದ್ದುವು. ಈ ಪುರಾತನ ನಗರದ ಬೀದಿಗಳು ಸುಂದರವಾಗಿ ಅಂಕುಡೊಂಕಾಗಿ ಮೇಲೇರುತ್ತವೆ. ಅವುಗಳ ಹೆಸರುಗಳೂ ಸುಂದರವಾಗಿವೆ. ಬೀದಿಗಳ ಎರಡೂ ಬದಿಗಳಲ್ಲಿರುವ ಭವ್ಯ ಭವನಗಳು 17 ಮತ್ತು 18ನೆಯ ಶತಮಾನಗಳವು. ಸುಪ್ರಸಿದ್ಧ ಫ್ರೆಂಚ್ ತತ್ತ್ವಜ್ಞಾನಿ ಜೀನ್ ಷಾóಕ್ ರೂಸೋ ಹುಟ್ಟಿದ್ದು ಇಲ್ಲಿಯ ಮನೆಯೊಂದರಲ್ಲಿ. ನಗರಭವನ ಪುನರುಜ್ಜೀವನಕಾಲದ ಒಂದು ಕಟ್ಟಡ. ಇದರ ಒಳಕೋಣೆಗಳಲ್ಲಿ 15ನೆಯ ಶತಮಾನದ ವರ್ಣಚಿತ್ರಗಳಿವೆ. ಜಾನ್ ಕ್ಯಾಲ್ವಿನ್, ಜಾನ್‍ನಾಕ್ಸ್ ಮುಂತಾದವರು ಬದುಕಿ ಬೋಧಿಸಿದ ಭವನಗಳೂ ಇಲ್ಲುಂಟು. ಪ್ಲ್ಯಾಸ್ ಡ್ಯು ಬೂರ್-ಡ-ಫೊರ್ ಚೌಕ, ನ್ಯಾಯಾಲಯ, 1559ರಲ್ಲಿ ಕ್ಯಾಲ್ವಿನನಿಂದ ಸ್ಥಾಪಿತವಾದ ಕಾಲೇಜ್ ಡ ಜಿನೀವ-ಇವು ಇತರ ಕೆಲವು ಪ್ರಮುಖ ಕಟ್ಟಡಗಳು. ಇತಿಹಾಸ ಮತ್ತು ಕಲಾ ವಸ್ತುಸಂಗ್ರಹಾಲಯದಲ್ಲಿ ಜಿನೀವದ ಮತ್ತು ಸ್ವಿಟ್‍ಜûರ್ಲೆಂಡಿನ ಅನೇಕ ಅಮೂಲ್ಯ ಕಲಾವಸ್ತುಗಳು, ವರ್ಣಚಿತ್ರಗಳು, ಲೇಸುಗಳು, ಗಡಿಯಾರಗಳು, ಪ್ರಾಚೀನ ಹೂದಾನಿಗಳು, ಎನಾಮಲ್ ವಸ್ತುಗಳು, ಹಳೆಯ ನಗರದ ಕಲಾತ್ಮಕ ಹಳೆಯುಳಿಕೆಗಳು ಇವೆ. ಬೆಟ್ಟದ ತಪ್ಪಲಲ್ಲಿ ಉತ್ತರದ ಕಡೆ, ಸರೋವರಕ್ಕೆ ಹತ್ತಿರದಲ್ಲಿ, ಇರುವುದು ಪ್ಲೇಸ್ ಡ್ಯು ಮೊಲಾರ್. ಇದು ಹಿಂದೆ ರೇವಾಗಿತ್ತು. ಇದರ ಪ್ರವೇಶದ್ವಾರದಲ್ಲಿ ಮಧ್ಯಯುಗದಲ್ಲಿ ಕಟ್ಟಲಾಗಿದ್ದ ಗೋಪುರವನ್ನು ಈಗ ಜೀರ್ಣೋದ್ಧಾರ ಮಾಡಲಾಗಿದೆ. ನಗರದ ಆಗ್ನೇಯ ಭಾಗದಲ್ಲಿರುವ ವಿಹಾರಪಥದ (ಪ್ರಾಮೆನೇಡ್) 300' ಗೋಡೆ 16ನೆಯ ಶತಮಾನದ ಮಹಾ ಮತಸುಧಾರಣೆಯ (ದಿ ರೆಫರ್ಮೇಷನ್) ಸ್ಮಾರಕ (1909-17). ಇದಕ್ಕೆ ಎದುರಾಗಿ ನಾಡಿನ ಮಹಾಧೀಮಂತರ ಮತ ಸುಧಾರಕರ ಪ್ರತಿಮೆಗಳಿವೆ. ವಿಶ್ವವಿದ್ಯಾಲಯ ಕಟ್ಟಡಗಳು (1863-72) ಇರುವುದು ಇದರ ಬಳಿಯಲ್ಲೇ. 1559ರಲ್ಲಿ ಆಕಾಡೆಮಿಯಾಗಿ ಕ್ಯಾಲ್ವಿನನಿಂದ ಸ್ಥಾಪಿತವಾದ ಈ ಸಂಸ್ಥೆ 1872ರಲ್ಲಿ ವಿಶ್ವವಿದ್ಯಾಲಯದ ಸ್ಥಾನಮಾನ ಪಡೆಯಿತು. ಪ್ರಕೃತಿ ವಿಜ್ಞಾನ ವಸ್ತುಸಂಗ್ರಹಾಲಯವೂ ಅಮೂಲ್ಯ ಗ್ರಂಥಾಲಯವೂ ಇಲ್ಲಿವೆ.

ಜಿನೀವದ ಅತ್ಯಂತ ಸುಂದರವಾದ ಪ್ಲೇಸ್ ನೀಫ್ ಚೌಕ ಇರುವುದು ವಿಹಾರ ಪಥದ ಉತ್ತರದಲ್ಲಿ. ಅದರ ನಡುವೆ ಇರುವ ಕಂಚಿನ ಅಶ್ವಾರೂಢನ ಪ್ರತಿಮೆ ಜನರಲ್ ಡ್ಯುಫೂರನದು. ಆ ಚೌಕದಲ್ಲಿರುವ ಕಟ್ಟಡಗಳಲ್ಲಿ ಮುಖ್ಯವಾದವು ಸಂಗೀತ ಅಕಾಡೆಮಿ (ಕನ್ಸರ್ವಾಟ್ವಾರ್), ಗ್ರ್ಯಾಂಡ್ ಥಿಯೇಟರ್ ಮತ್ತು ರಾತ್ ಮ್ಯೂಸಿಯಂ. ಪ್ಲೇಸ್ ನೀಫ್‍ನಿಂದ ಕೆಳಕ್ಕೆ ನದಿಯ ಬಳಿಗೆ ಬಂದರೆ ಸಿಗುವುದು ಪಾಂಟ್ ಡೆ ಲಾ ಟೂರ್ ಲ್‍ಈಲ್ (ದ್ವೀಪ ಗೋಪುರ ಸೇತುವೆ). ಇಲ್ಲಿ 13ನೆಯ ಶತಮಾನದ ಬಿಷಪ್‍ನ ದುರ್ಗದ (ಟೂರ್ ಡೆ ಲ್‍ಈಲ್) ಅವಶೇಷಗಳನ್ನು ಕಾಣಬಹುದು. ನದಿಯಿಂದಾಚೆಗೆ ಇರುವ ಸೇಂಟ್ ಝೆóರ್ವೆ ಜಿಲ್ಲೆಯಲ್ಲಿ ಗಡಿಯಾರ ಎನಾಮೆಲ್ ಮತ್ತು ಒಡವೆ ತಯಾರಿಸುವ ಕುಶಲಕಲೋದ್ಯಮಿಗಳಿದ್ದಾರೆ. ಸೇಂಟ್‍ಝೆóರ್ವೆ ಚರ್ಚು 15ನೆಯ ಶತಮಾನದ್ದು. ನದಿಯ ದಂಡೆಯ ಮೇಲೆ ಸಾಗುವ ರಸ್ತೆಯಲ್ಲಿ ನಡೆದರೆ ಕಾಣಿಸಿಗುವುದು ರೂಸೋನ ಪ್ರತಿಮೆ (1835). ನದಿಯ ಉತ್ತರ ದಂಡೆಯ ಮೇಲಿರುವ ಒಹ್ಟೆಲ್ ನ್ಯಾಸ್ಯಾನ್ಯಾಲ್ ಕಟ್ಟಡದಲ್ಲೇ ರಾಷ್ಟ್ರಗಳ ಕೂಟ (ಲೀಗ್ ಆಫ್ ನೇಷನ್ಸ್) ಮೊದಲು ಇದ್ದದ್ದು. ಜಿನೀವ ಸರೋವರದ ಬಳಿಯಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಘದ ಭವನವಿದೆ. ವಿಶ್ವಸಂಸ್ಥೆಯ ಯೂರೋಪಿಯನ್ ಕಚೇರಿಯಾದ ಪ್ಯಾಲ್ ಡೇ ನ್ಯಾಸ್ಯಾನ್ ಇರುವುದು ಇದರ ಬಳಿಯಲ್ಲೇ. ಕುಂಭಕಲಾ ವಸ್ತುಸಂಗ್ರಹಾಲಯವೂ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯೂ ಇಲ್ಲಿವೆ. ರೋನ್ ನದಿಯ ಬಲದಂಡೆಯಲ್ಲಿ ಇರುವ ಪ್ರದೇಶದಲ್ಲಿ ವಾಲ್ಟೇರ್ ಜೀವಿಸಿದ್ದ ಮನೆಯನ್ನು ನೋಡಬಹುದು. ಇದನ್ನು ಜೀರ್ಣೋದ್ಧಾರ ಮಾಡಲಾಗಿದೆ. ಇಲ್ಲಿ ವಾಲ್ಟೇರನ ಮೊದಲ ಪ್ರಕಾಶನಗಳನ್ನೂ ಅವನ ಕೃತಿಗಳ ಹಸ್ತಪ್ರತಿಗಳನ್ನೂ ಇಡಲಾಗಿದೆ. ಜಿನೀವದ ಸುತ್ತ ಹಸುರು ಪಟ್ಟಿಯಂತೆ ಉದ್ಯಾನಗಳು ಹಬ್ಬಿವೆ.

ಸ್ವಿಸ್ ಸಾಂಸ್ಕøತಿಕ ಜೀವನದ, ಅಂತರರಾಷ್ಟ್ರೀಯ ಚಳವಳಿಗಳ ಕೇಂದ್ರವೆಂದು ಪ್ರಸಿದ್ಧವಾದ ಜಿನೀವ ಒಂದು ಕೈಗಾರಿಕಾನಗರ ಕೂಡ. ಗಡಿಯಾರಗಳು ಇಲ್ಲಿಯ ಮುಖ್ಯ ಉತ್ಪನ್ನ. ಒಡವೆ, ಎನಾಮೆಲ್ ಉಪಕರಣಗಳೂ ವಿಶೇಷವಾಗಿ ತಯಾರಾಗುತ್ತವೆ. ವಿದ್ಯುತ್‍ಯಂತ್ರ, ವೈದ್ಯ ಉಪಕರಣ, ಸೂಕ್ಷ್ಮ ಸಲಕರಣೆ, ಜವಳಿ, ಆಹಾರಪದಾರ್ಥ, ರಸಾಯನ ಮತ್ತು ಮುದ್ರಣ ಕೈಗಾರಿಕೆಗಳೂ ಬ್ಯಾಂಕಿಂಗ್ ಉದ್ಯಮವೂ ಬೆಳದಿವೆ. ಹೋಟೆಲ್ ಉದ್ಯಮ ಪ್ರವರ್ಧಮಾನವಾಗಿದೆ. ಜಿನೀವದಿಂದ ಸ್ವಿಟ್‍ಜರ್ಲೆಂಡಿನ ಇತರ ಮುಖ್ಯ ಸ್ಥಳಗಳಿಗೂ ಫ್ರಾನ್ಸಿಗೂ ರೈಲ್ವೆ ಸಂಪರ್ಕವುಂಟು. ರೈಲ್ವೆ ನಿಲ್ದಾಣ ಇರುವುದು ನದಿಯ ಬಲದಂಡೆಯ ಮೇಲೆ. ನಗರಕ್ಕೆ ವಾಯವ್ಯದಲ್ಲಿ 5 ಕಿ.ಮೀ. ದೂರದಲ್ಲಿ ವಿಮಾನ ನಿಲ್ದಾಣವುಂಟು. ಜಿನೀವ ಸರೋವರದ ಮೇಲೆ ಸ್ಟೀಮರುಗಳು ಸಂಚರಿಸುತ್ತವೆ.

ಇತಿಹಾಸ

ಬದಲಾಯಿಸಿ

ಜಿನೀವ ನಗರ ಇತಿಹಾಸಪೂರ್ವಕಾಲದಲ್ಲೇ (ಕ್ರಿ.ಪೂ. 5-4ನೆಯ ಸಹಸ್ರಮಾನ) ಸರೋವರ ತೀರದ ಒಂದು ಸಮುದಾಯ ಕೇಂದ್ರವಾಗಿತ್ತು. ಅದರ ಅವಶೇಷಗಳು ಇಂದಿಗೂ ಇವೆ. ಜಿನೀವ. ಕೋಟೆಯಿಂದ ರಕ್ಷಿಸಲ್ಪಟ್ಟ ಒಂದು ನಗರವೆಂದು ಸೀಜರ್ ಹೇಳಿದ್ದಾನೆ, ರೋಮನರ ಕಾಲದ ಅವಶೇಷಗಳು ಇಲ್ಲುಂಟು. ಮುಂದೆ ಜಿನೀವ ವಿಯೆನ್ನ ಪ್ರಾಂತ್ಯದ ಸಮುದಾಯಕ್ಕೆ ಸೇರಿದ್ದುದು ದಾಖಲೆಗಳಿಂದ ತಿಳಿದುಬರುತ್ತದೆ. 5ನೆಯ ಶತಮಾನದ ಮಧ್ಯಭಾಗದಲ್ಲಿ ಬರ್ಗಂಡಿಯನರ ಆಡಳಿತಕ್ಕೆ ಇದು ಒಳಪಟ್ಟಿತು; ರೋಮನ್ ಬಿಷಪ್ ಪ್ರಭಾವಕ್ಕೂ ಒಳಗಾಯಿತು. ಅನಂತರ ಅದು ಫ್ರಾಂಕ್ ವಂಶದ ರಾಜರ ಕೈಸೇರಿತು.

13ನೆಯ ಶತಮಾನದ ವೇಳೆಗೆ ಜಿನೀವ ಪ್ರಜೆಗಳು ಒಂದು ಪುರಸಭೆ ರಚಿಸಿಕೊಂಡರು. ಸವಾಯ್‍ನ ಡ್ಯೂಕ್ ಜಿನೀವವನ್ನು ಪಡೆದುಕೊಂಡ. ಅವನ ಮನೆತನದ ಆಡಳಿತಕ್ಕೆ ಜಿನೀವ ಸಂಪೂರ್ಣವಾಗಿ ಸೇರುವ ಮುನ್ನ ಸ್ವಿಸ್ ಸಂಸ್ಥಾನಗಳ ರಚನೆ ಅಸ್ತಿತ್ವಕ್ಕೆ ಬಂತು. ಜಿನೀವದ ಪ್ರಜೆಗಳು ಸ್ವಿಸ್‍ನ ಮೊರೆ ಹೋದರು. 1530ರಲ್ಲಿ ಸ್ವಿಸ್ಸರ ಪ್ರಾಬಲ್ಯದಿಂದಾಗಿ ಸವಾಯ್‍ನ ದೊರೆ ಮತ್ತು ಬಿಷಪರು ಜಿನೀವದ ತಂಟೆಗೆ ಬರುವುದಿಲ್ಲವೆಂದು ಸ್ವಿಸ್ ಆಡಳಿತದೊಡನೆ ಒಪ್ಪಂದ ಮಾಡಿಕೊಂಡರು. 1535ರಲ್ಲಿ ಜಿನೀವ ಪ್ರಾಟೆಸ್ಟಂಟ್ ಮತವನ್ನು ಸ್ವೀಕರಿಸಿತು. 16ನೆಯ ಶತಮಾನದ ಮಧ್ಯದಲ್ಲಿ ಫ್ರೆಂಚ್ ನಿರಾಶ್ರಿತ ಜಾನ್ ಕ್ಯಾಲ್ವಿನ್ ಜಿನೀವದಲ್ಲಿ ನೆಲೆಸಿ, ಸ್ವಾತಂತ್ರ್ಯ ಗಳಿಸಿದ್ದ ಅಲ್ಲಿಯ ಜನರಲ್ಲಿ ಧಾರ್ಮಿಕ ಶಿಸ್ತನ್ನು ರೂಢಿಸಿದ. ಪ್ರಾಟೆಸ್ಟಂಟ್ ಮತಬೋಧಕರಿಗೆ ತರಬೇತಿ ನೀಡುವ ಉದ್ದೇಶದಿಂದ ಅವನು ಇಲ್ಲಿ ಜಿನೀವ ಅಕಾಡೆಮಿಯನ್ನು ಸ್ಥಾಪಿಸಿದ.

ನೆರೆಯ ಫ್ರಾನ್ಸಿನ ರಾಜಕೀಯ ತುಳಿತಕ್ಕೆ ಸಿಕ್ಕಿ ಜಿನೀವ ನೋವು ನಷ್ಟಗಳನ್ನು ಅನುಭವಿಸುತ್ತಲೇ ಇತ್ತು. 18ನೆಯ ಶತಮಾನದಲ್ಲಿ ನೆಪೋಲಿಯನನ ಆಡಳಿತಕ್ಕೆ ಸಿಕ್ಕಿ ನೊಂದ ಈ ನಗರದ ಜನರು ಮತ್ತೆ ಬೇಗ ಸ್ವತಂತ್ರರಾದರು. 1815ರಲ್ಲಿ ಇದು ಸ್ವಿಸ್ ಒಕ್ಕೂಟವನ್ನು ಸೇರಿತು. ಜಿನೀವ 1847ರಲ್ಲಿ ಉದಾರವಾದ ಸಂವಿಧಾನವೊಂದನ್ನು ಸ್ವೀಕರಿಸಿತು. ಮೊದಲು ಇದು ಹಳೆಯ ಕ್ಯಾತೊಲಿಕ್‍ಗಳ ಪರವಾಗಿದ್ದು ರೋಮನ್ ಕ್ಯಾತೊಲಿಕರಿಗೆ ವಿರೋಧವಾಗಿದ್ದರೂ ಅನಂತರ ಅವರ ಬಗ್ಗೆ ಮೆದು ನೀತಿ ತಳೆಯಿತು. 1907ರಲ್ಲಿ ಚರ್ಚ್ ಮತ್ತು ಸರ್ಕಾರಗಳು ಬೇರೆಬೇರೆಯಾಗಲು ಪ್ರಜೆಗಳು ಮತ ನೀಡಿದರು.

ಜಿನೀವದ ಸ್ವಾತಂತ್ರ ಪರಂಪರೆ, ಸ್ವಿಸ್ ತಾಟಸ್ಥ್ಯ ನೀತಿ-ಇವುಗಳಿಂದಾಗಿ ಒಂದನೆಯ ಮಹಾಯುದ್ಧಾನಂತರ ಇಲ್ಲಿ ರಾಷ್ಟ್ರಗಳ ಕೂಟದ (ಲೀಗ್ ಆಫ್ ನೇಷನ್ಸ್) ಕೇಂದ್ರವನ್ನು ಸ್ಥಾಪಿಸಲಾಯಿತು. ಅಂತರರಾಷ್ಟ್ರಿಯ ಕಾರ್ಮಿಕ ಕಚೇರಿಯೂ ಇಲ್ಲಿದೆ. ಎರಡನೆಯ ಮಹಾಯುದ್ಧಾನಂತರ 1947ರಲ್ಲಿ ವಿಶ್ವ ಸಂಸ್ಥೆಯ ಯೂರೋಪಿಯನ್ ಕೇಂದ್ರವನ್ನು ಇಲ್ಲಿ ಸ್ಥಾಪಿಸಲಾಯಿತು.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:


ಜಿನಿವಾದ ಭೂ ದೃಶ್ಯಗಳು( Geneva to the south. Mont Salève (in France) dominates the foreground, with the white summit of Mont Blanc just visible behind it and 70 km away to the southeast. To the left of Mont Blanc is the point of Le Môle).

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಜಿನಿವಾ&oldid=1263710" ಇಂದ ಪಡೆಯಲ್ಪಟ್ಟಿದೆ