ಖೂಜ಼ಿಸ್ತಾನ್
ಖೂಜ಼ಿಸ್ತಾನ್ ಇರಾನಿನ ನೈಋತ್ಯ ಭಾಗದಲ್ಲಿ ಪರ್ಷಿಯನ್ ಕೊಲ್ಲಿಯ ಮುಖದ ಬಳಿ ಇರುವ ಪ್ರಾಂತ್ಯ.
ಭೌಗೋಳಿಕ ವಿವರಗಳು, ವಾಯುಗುಣ
ಬದಲಾಯಿಸಿಪಶ್ಚಿಮದಲ್ಲಿ ಇರಾಕ್, ಉತ್ತರದಲ್ಲಿ ಲುರಿಸ್ತಾನ್, ಪೂರ್ವದಲ್ಲಿ ಚಹರ್‌ಮಹಲ್ ಮತ್ತು ಇಸ್‌ಫಹಾನ್, ಆಗ್ನೇಯದಲ್ಲಿ ಫಾರ್ಸ್ ಮತ್ತು ದಕ್ಷಿಣದಲ್ಲಿ ಪರ್ಷಿಯನ್ ಖಾರಿ ಇವೆ. ವಿಸ್ತೀರ್ಣ (24,732) ಚ. ಮೈ. ಜನಸಂಖ್ಯೆ (47,10,509) (2016).[೧] ಇದು ಮೆಸೊಪೊಟೇಮಿಯ ಮೈದಾನದ ಒಂದು ಭಾಗ. ಮೈದಾನದ ಪಕ್ಕದಲ್ಲಿರುವ ಜ಼್ಯಾಗ್ರಾಸ್ ಪರ್ವತಶ್ರೇಣಿಯನ್ನು ಇದು ಒಳಗೊಂಡಿದೆ. ಇಲ್ಲಿ ಹರಿಯುವ ಅನೇಕ ನದಿಗಳ ಪೈಕಿ ಕಾರೂನ್ ಮುಖ್ಯವಾದ್ದು. ಡೇಜ಼್ ಇದರ ಒಂದು ಮುಖ್ಯ ಉಪನದಿ. ಕಾರ್ಖೆ, ಜರಾಹಿ ಮತ್ತು ಜೋರೆಹ್ ಇತರ ನದಿಗಳು. ಇವು ಮೆಕ್ಕಲುಮಣ್ಣನ್ನು ತಂದು ಹರಡುತ್ತಿವೆ. ಕೊಲ್ಲಿಯ ಬಳಿಯ ಜವುಗು ನೆಲ ಭರತದಿಂದಾದ್ದು. ಜ಼್ಯಾಗ್ರಾಸ್‌ನ ಮುಂದುಗಡೆ ಇರುವ ತಪ್ಪಲುಬೆಟ್ಟಗಳ ಅಡಿಯಲ್ಲಿ ತೈಲನಿಕ್ಷೇಪವಿದೆ (oil deposit). ಜ಼್ಯಾಗ್ರಾಸ್ ಶ್ರೇಣಿ ದಟ್ಟವಾದ ಕಾಡುಗಳಿಂದಲೂ, ಆಳವಾದ ಕಮರಿಗಳಿಂದಲೂ ಕೂಡಿದೆ.
ಖೂಜ಼ಿಸ್ತಾನದ ಮೈದಾನದ ಕೆಳಭಾಗದ್ದು ಮರುಭೂಮಿಯ ವಾಯುಗುಣ; ಬೇಸಿಗೆ ಶುಷ್ಕ, ತಾಪಕರ. ತೇವ ತುಂಬಿದ ಗಾಳಿ ಖಾರಿಯ ಕಡೆಯಿಂದ ಬೀಸಿದಾಗ ಹವೆ ಬಲು ಧಗೆಯಿಂದ ಕೂಡಿರುತ್ತದೆ. ಚಳಿಗಾಲದಲ್ಲಿ ಮಳೆ; ಮೈದಾನದಲ್ಲಿ ವರ್ಷಕ್ಕೆ 12" ದಿಂದ 20", ಪರ್ವತ ಪ್ರದೇಶಗಳಲ್ಲಿ ಹೆಚ್ಚು.
ಕೃಷಿ, ಜನಜೀವನ
ಬದಲಾಯಿಸಿಖರ್ಜೂರ, ಜಂಬೀರ ಮತ್ತು ಇತರ ಹಣ್ಣುಗಳು, ಕಬ್ಬು, ಹತ್ತಿ, ನೀಲಿ, ಎಳ್ಳು, ಕಲ್ಲಂಗಡಿ, ಕರಬೂಜ ಮತ್ತು ತರಕಾರಿಗಳನ್ನು ನೀರಾವರಿಯಿಂದ ಬೆಳೆಯಲು ಅನುಕೂಲಕರವಾದ ವಾಯುಗುಣ ಇಲ್ಲಿದೆ.
ಇಲ್ಲಿಯ ಜನಸಂಖ್ಯೆಯ ಅರ್ಧಭಾಗ ಅರಬರು. ಇವರು ಮೈದಾನಗಳಲ್ಲಿ ವಾಸಿಸುತ್ತಾರೆ. ಬಖ್ತಿಯಾರಿ, ಲುರ್ ಮುಂತಾದವರೂ ಇದ್ದಾರೆ. ಪಟ್ಟಣಗಳಲ್ಲಿ ಪರ್ಷಿಯನರುಂಟು.[೨][೩][೪] ಅರಬರು ಅಲೆಮಾರಿತನವನ್ನು ಬಿಟ್ಟಿದ್ದರೂ ಭಖ್ತಿಯಾರಿಗಳೂ ಲುರ್ ಜನರೂ ಈಗಲೂ ಅಲೆದಾಡುತ್ತಿರುತ್ತಾರೆ.
ಚರಿತ್ರೆ, ಮುಖ್ಯ ಪಟ್ಟಣಗಳು
ಬದಲಾಯಿಸಿಬೈಬಲ್ಲಿನಲ್ಲಿ ಉಲ್ಲೇಖವಾಗಿರುವ ಈಲಾಮಿನ ಮಧ್ಯಭಾಗವೇ ಖೂಜ಼ಿಸ್ತಾನ. ಇದು ಬಹುತೇಕವಾಗಿ ಪ್ರಾಚೀನ ಸೂಸಿಯೇನ ಪ್ರದೇಶದಲ್ಲಿತ್ತು. ಒಮ್ಮೆ ಇಲ್ಲಿ ಕೃಷಿ, ವ್ಯಾಪಾರಗಳು ಪ್ರವರ್ಧಮಾನ ಸ್ಥಿತಿಯಲ್ಲಿದ್ದುವು. ಆದರೆ ಪಂಗಡಗಳ ಜಗಳ, ಅಭದ್ರತೆ, ದುರಾಡಳಿತದಿಂದ ಕ್ಷೀಣಿಸಿದುವು. ಹಳೆಯ ನೀರಾವರಿ ಕಟ್ಟೆಗಳು ಜೀರ್ಣವಾದುವು. ಪಹ್ಲವಿ ಮನೆತನದ ಅರಸರ ಕಾಲದಲ್ಲಿ ಈ ಪ್ರಾಂತ್ಯದ ಪುನರ್ನಿರ್ಮಾಣಕಾರ್ಯ ಚುರುಕಾಯಿತು. ತೈಲಸಾಧನಗಳ ಅಭಿವೃದ್ಧಿಯಾಯಿತು.
ಪ್ರಾಂತ್ಯದ ಮುಖ್ಯ ಪಟ್ಟಣ ಆವಾಜ಼್. ಜನಸಂಖ್ಯೆ (1,184,788) (2016).[೫] ಇದು ರೈಲ್ವೆ ರಸ್ತೆಗಳ ಸಂಧಿಸ್ಥಳ. ಡೆಜ಼್‍ಫುಲ್ (264,709), ಷೂಷ್ಟಾರ್ (101,878), ರ‍್ಯಾಮ್‍ಹಾರ್ಮೋಜ಼್ (74,285), ಬೆಹ್‌ಬೆಹನ್ (122,604) ಇತರ ಮುಖ್ಯ ಸ್ಥಳಗಳು. ತೈಲೋತ್ಪಾದನೆ ಇಲ್ಲಿಯ ಮುಖ್ಯ ಉದ್ಯಮ.
ಉಲ್ಲೇಖಗಳು
ಬದಲಾಯಿಸಿ- ↑ "Census of the Islamic Republic of Iran, 1395 (2016)". AMAR (in ಪರ್ಶಿಯನ್). The Statistical Center of Iran. p. 06. Archived from the original (Excel) on 21 October 2020. Retrieved 19 December 2022.
- ↑ "Welcome to Encyclopaedia Iranica".
- ↑ "Iranian Provinces: Khuzestan". Iran chamber. Retrieved 2017-03-07.
- ↑ "Khuzestan | Region, Plain, Water, & History | Britannica". www.britannica.com (in ಇಂಗ್ಲಿಷ್). Retrieved 2023-11-05.
- ↑ "Census of the Islamic Republic of Iran, 1395 (2016)". AMAR (in ಪರ್ಶಿಯನ್). The Statistical Center of Iran. p. 06. Archived from the original (Excel) on 21 October 2020. Retrieved 19 December 2022.
ಹೊರಗಿನ ಕೊಂಡಿಗಳು
ಬದಲಾಯಿಸಿ- Houchang E. Chehabi (ed.). "Regional Studies: Khuzistan". Bibliographia Iranica. USA: Iranian Studies Group at MIT. Archived from the original on 2021-11-02. Retrieved 2017-02-11. (Bibliography)