ಖಡೀ ಬೋಲಿ ಎನ್ನುವುದು ದೆಹಲಿ, ಮೇರಠ್ ಮೊದಲಾದ ಕಡೆ ಬಳಕೆಯಲ್ಲಿರುವ ಗ್ರಾಮೀಣ ನುಡಿ. ಗ್ರಿಯರ್ಸನ್ ಇದನ್ನು ವರ್ನಾಕ್ಯುಲರ್ ಹಿಂದಿ ಎಂದು ಕರೆದರೆ, ಸುನೀತಿ ಕುಮಾರ್ ಚಟರ್ಜಿ ಜನಪದೀಯ ಹಿಂದೂಸ್ತಾನಿ ಎಂದು ಕರೆದಿದ್ದಾರೆ. ಈ ಖಡೀ ಬೋಲಿಯೇ ಶಿಷ್ಟ ಹಿಂದೀ, ಉರ್ದು ಮತ್ತು ಹಿಂದೂಸ್ತಾನಿಯ ಮೂಲಾಧಾರ ಭಾಷೆಯಾಗಿದೆ. ದಿನಬಳಕೆಯ ಶಬ್ದಗಳ ಜೊತೆಗೆ ಸರಳ ಉರ್ದು ಶಬ್ದಗಳಿಂದ ಕೂಡಿದಾಗ ಇದು ಹಿಂದೂಸ್ತಾನಿ ಎನ್ನಿಸಿಕೊಂಡರೆ, ಸಂಸ್ಕೃತ ಶಬ್ದದ ಒಲವು ಹೆಚ್ಚಾದಾಗ ಹಿಂದೀ ಎನ್ನಿಸಿಕೊಳ್ಳುತ್ತದೆ. ಅರಬ್ಬೀ ಪಾರ್ಸಿ ಶಬ್ದಗಳ ಬಾಹುಳ್ಯವಿದ್ದಾಗ ಇದೇ ಉರ್ದುವಾಗುತ್ತದೆ.

ಖಡೀ ಬೋಲಿ ಶಬ್ದ ಅಷ್ಟೇನೂ ಹಳೆಯದಲ್ಲ. ಇದರ ಆರಂಭಿಕ ಅರ್ಥ, ಹೆಸರು, ರೂಪ, ಪ್ರಯೋಗ, ವಿಕಾಸ ಮೊದಲಾದವುಗಳ ಬಗೆಗೆ ವಿದ್ವಾಂಸರಲ್ಲಿ ಏಕಾಭಿಪ್ರಾಯವಿಲ್ಲ. 1803ರ ಸರಿಸುಮಾರಿನಲ್ಲಿ ಖಡೀ ಬೋಲಿ ಎಂಬ ಮಾತಿನ ಪ್ರಯೋಗ ಬರವಣಿಗೆಯಲ್ಲಿ ಕಂಡುಬರುತ್ತದೆ. ಆಧುನಿಕ ಯುಗದಲ್ಲಿ ಇದನ್ನು ಮೊದಲಿಗೆ ಸಾಹಿತ್ಯ ರೂಪದಲ್ಲಿ ಬಳಸಿದವರಲ್ಲಿ ಲಲ್ಲೂ ಲಾಲ್, ಗಿಲ್‌ಕ್ರೈಸ್ಟ್, ಹಾಗೂ ಸದಲ್ ಮಿಶ್ರರ ಹೆಸರು ಉಲ್ಲೇಖನಾರ್ಹ.

ವ್ಯುತ್ಪತ್ತಿ

ಬದಲಾಯಿಸಿ

ಖಡೀ (ಬರೀ) ಎಂದರೆ ವಿಶುದ್ಧ, ಅಪ್ಪಟ-ಎಂದರೆ ಅರಬ್ಬಿ ಪಾರಸೀ ಶಬ್ದರಹಿತವಾದ್ದು ಎಂದು ಅರ್ಥೈಸುವವರು ಖಡೀ ಬೋಲಿಯನ್ನು ಉರ್ದುವಿಗೆ ಹೋಲಿಸಿಕೊಂಡು ತಮ್ಮ ವಾದವನ್ನು ಮಂಡಿಸಿದ್ದಾರೆ. ಹಿಂದೀ ಸಾಹಿತ್ಯದ ಪ್ರಪ್ರಥಮ ಇತಿಹಾಸ ಬರೆದ ಫ್ರೆಂಚ್ ಲೇಖಕ ಗಾಸಾಂದ ತಾಸಿ ಇದನ್ನು ಶುದ್ಧ ಭಾಷೆ ಎಂದರೆ, ಹಿಂದೀ ವ್ಯಾಕರಣವನ್ನು ಬರೆದ ಕೈಲಾಸ (1875) ಅಚ್ಚನುಡಿ ಎನ್ನುತ್ತಾನೆ. ಸುಧಾಕರ ದ್ವಿವೇದಿಯ ಅಭಿಪ್ರಾಯವೂ ಇದೇ. ಚಂದ್ರಬಲಿ ಪಾಂಡೇಯ ಮೊದಲಾದ ವಿದ್ವಾಂಸರೂ ಇದನ್ನೇ ಅನುಮೋದಿಸಿದ್ದಾರೆ. ಎರಡನೆಯ ತಂಡದ ಪ್ರಕಾರ ಖಡೀ ಎಂದರೆ ನಿಂತಿರುವ ಇಲ್ಲದೆ ಎದ್ದ ಎಂದು ಅರ್ಥ. ರಾಜಸ್ಥಾನೀ, ಗುಜರಾತಿ, ಬ್ರಜ ಮೊದಲಾದವು ಪಡೀ ಬೋಲಿಗಳಾದರೆ (ಬಿದ್ದ ಭಾಷೆ) ಸೈನ್ಯ ಹಾಗೂ ಸಮಾಜದ ಬಳಕೆಯಲ್ಲುಳಿದ ಮೀರತ್ತಿನ ಭಾಷೆ ಎದ್ದ ಭಾಷೆ (ಖಡೀ ಬೋಲಿ) ಎಂದು ಚಂದ್ರಧರ್ ಶರ್ಮ ಗುಲೇರಿ ಎಂಬ ವಿದ್ವಾಂಸರ ಮತ.[] ಸುನೀತಿ ಕುಮಾರ್ ಚಟರ್ಜಿಯವರೂ ಇದೇ ವಾದವನ್ನು ಸಮರ್ಥಿಸಿದ್ದಾರೆ.

ಬ್ರಜ ಭಾಷೆಗಿಂತ ಇದು ಕರ್ಕಶವಾದ್ದರಿಂದ ಇಲ್ಲಿನ ಖಡೀ ಶಬ್ದಕ್ಕೆ ಕಠಿಣ, ಕರ್ಕಶ ಎಂಬ ಅರ್ಥವಿದೆಯೆಂದು ಧೀರೇಂದ್ರ ವರ್ಮ, ಕಾಮತಾ ಪ್ರಸಾದ ಗುರು ಮೊದಲಾದವರ ವಾದ.

ಮತ್ತೆ ಕೆಲವರು ಖಡೀ ಎಂದರೆ ಸುಸ್ಥಿರ, ಸುಪ್ರಚಲಿತ, ಸುಸಂಸ್ಕೃತ ಅಥವಾ ಶಿಷ್ಟ ಎಂದು ಅರ್ಥಮಾಡಿದ್ದಾರೆ. ಇದಕ್ಕೆ ವಿರುದ್ಧವಾಗಿ ಅಬ್ದುಲ್ ಹಕ್ ಅವರು ಖಡೀ ಬೋಲಿ ಎಂದರೆ ಅಸಂಸ್ಕೃತ, ಅನಾಗರಿಕ ಆಡುನುಡಿ ಎಂದು ಪ್ರತಿಪಾದಿಸಿದ್ದಾರೆ. ಹೀಗೆಯೆ ಇದನ್ನು ಹೊಸಭಾಷೆ, ಕೃತಕಭಾಷೆ ಎಂದು ಮುಂತಾಗಿ ವ್ಯಾಖ್ಯಾನ ಮಾಡುವ ವಿದ್ವಾಂಸರೂ ಇದ್ದಾರೆ.

ಖಡೀಬೋಲಿ ಮೊದಲು ಎಲ್ಲಿ ಬಳಕೆಯಲ್ಲಿತ್ತು ಎಂಬ ಪ್ರಶ್ನೆಯೂ ಉಂಟು. ಪ್ರಾಚೀನ ಕುರು ಜನಪದದಲ್ಲಿ ಬಳಕೆಯಲ್ಲಿತ್ತೆಂದು ಹೇಳಿ ಇದನ್ನು ಕೌರವೀ (Kauravi) ಎಂದು ಕೆಲವರು ಕರೆದಿದ್ದಾರೆ. ಇವರಲ್ಲಿ ರಾಹುಲ್ ಸಾಂಕೃತ್ಯಾಯನ್ ಒಬ್ಬರು.[] ಇದು ಮೀರತ್ತಿನ ನೆರೆಹೊರೆಯ ಭಾಷೆ ಎಂದು ಗ್ರಿಯರ್ಸನ್, ಚಟರ್ಜಿ, ಧೀರೇಂದ್ರ ವರ್ಮ, ಶ್ಯಾಮಸುಂದರ ದಾಸ್ ಮೊದಲಾದವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಇದು ಕುರು ಪ್ರದೇಶದಲ್ಲಿ ಪ್ರಚಲಿತವಾಗಿದ್ದ ಅಪಭ್ರಂಶದಿಂದ ಹುಟ್ಟಿಕೊಂಡಿತು ಎನ್ನುವುದು ಅವೈಜ್ಞಾನಿಕ ಎಂದು ಮಾತಾಬದಲ್ ಜಾಯಸ್‌ವಾಲರ ವಾದ. ಅವರ ಪ್ರಕಾರ ಖಡೀಬೋಲಿ ವಸ್ತುತಃ ಪೂರ್ವೀ ಪಂಜಾಬ್, ದೆಹಲಿ ಮತ್ತು ಪಶ್ಚಿಮೀ ಉತ್ತರ ಪ್ರದೇಶದ ಆಡುನುಡಿಗಳ ಮಿಶ್ರಣದ ಪರಿನಿಷ್ಠಿತರೂಪ. ಕೆಲವರು ಇದನ್ನು ಕೌರವಿ ಎಂದು ಗುರುತಿಸಿ, ಇದನ್ನು ಸಹಾರನ್‍ಪುರ್‌ದಿಂದ ಆಗ್ರಾವರೆಗಿನ (ಅಂದರೆ ಹಳೆ ದೆಹಲಿಯ ನಿಕಟ ಪೂರ್ವ ಮತ್ತು ಈಶಾನ್ಯ ಭಾಗ) ವ್ಯಾಪಿಸುವ ಭಾಷಾ ಚಾಪದಲ್ಲಿ ಮಾತನಾಡಲಾಗುವ ಭಾಷೆಗೆ ಅನ್ವಯಿಸುತ್ತಾರೆ.[]

ಉತ್ಪತ್ತಿಯ ದೃಷ್ಟಿಯಿಂದ ಶೌರಸೇನೀ ಯ ಅಪಭ್ರಂಶ ಇಲ್ಲವೆ ಅದರ ಸಂಕ್ರಮಣಾವಸ್ಥೆಯ ರೂಪವಾದ ಶೌರಸೇನೀ ಅವಹಟ್ಟದಿಂದ ಖಡೀಬೋಲಿ ಜನಿಸಿತೆಂದು ಸದ್ಯಕ್ಕೆ ಹೇಳಬಹುದು.

ಬಳಕೆಯಲ್ಲಿರುವ ಪ್ರದೇಶಗಳು

ಬದಲಾಯಿಸಿ

ಖಡೀ ಬೋಲಿ ಈ ಕೆಳಕಂಡ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಬಳಕೆಯಲ್ಲಿದೆ. ಮೀರತ್, ಬಿಜನೌರ್, ಮುಜಫ್ಛರ್‌ನಗರ್, ಸಹಾರನಪುರ, ಡೆಹರಾಡೂನಿನ ಬಯಲು ಪ್ರದೇಶ, ಅಂಬಾಲ ಕಾಲಸಿಯಾ, ಪಟಿಯಾಲಾದ ಪೂರ್ವಭಾಗ, ರಾಮಪುರ ಮತ್ತು ಮುರಾದಾಬಾದ್.[] ಬಾಂಗರೂ, ಜಾಟಕೀ ಇಲ್ಲವೆ ಹರಿಯಾಣಿ ಒಂದು ರೀತಿಯಲ್ಲಿ ಪಂಜಾಬ್ ಮತ್ತು ರಾಜಸ್ಥಾನೀ ಮಿಶ್ರಿತ ಖಡೀ ಬೋಲಿ. ಇದು ದೆಹಲಿ, ಕರನಾಲ್, ಹಿಸಾರ್, ಪಟಿಯಾಲಾ, ನಾಭಾ ಮೊದಲಾದ ಕಡೆ ಬಳಕೆಯಲ್ಲಿದೆ. ಖಡೀಬೋಲಿ ಕ್ಷೇತ್ರದ ಎಲ್ಲೆಕಟ್ಟು ಈ ರೀತಿ ಇದೆ. ಪೂರ್ವಕ್ಕೆ ವ್ರಜಭಾಷೆ, ಆಗ್ನೇಯದಲ್ಲಿ ಮೇವಾರಿ, ನೈಋತ್ಯದಲ್ಲಿ ಪಶ್ಚಿಮೀ ರಾಜಸ್ಥಾನೀ, ಪಶ್ಚಿಮದಲ್ಲಿ ಪೂರ್ವೀ ಪಂಜಾಬಿ ಮತ್ತು ಉತ್ತರದಲ್ಲಿ ಪಹಾಡಿ ಬೋಲಿ ಅಥವಾ ಗುಡ್ಡಗಾಡಿನ ಆಡುನುಡಿಗಳು. ಖಡೀ ಬೋಲಿಯ ಎರಡು ಪ್ರಮುಖ ಭೇದಗಳೆಂದರೆ ಪೂರ್ವೀ ಖಡೀ ಬೋಲಿ ಹಾಗೂ ಪಶ್ಚಿಮೀ ಖಡೀ ಬೋಲಿ.

ಖಡೀ ಬೋಲಿಯಲ್ಲಿ ಬಳಕೆಯಲ್ಲಿರುವ ಶಬ್ದರೂಪಗಳ ಮೂಲ ಪ್ರಾಕೃತದ ಕಾಲದಲ್ಲೇ ಕಣ್ಣಿಗೆ ಬೀಳುತ್ತದೆ. ಅಪಭ್ರಂಶ ಕಾಲದಲ್ಲಿ ಅದು ಸ್ಪಷ್ಟವಾಗಿ ಮೈದೋರುತ್ತದೆ. ಉದಾಹರಣೆಗೆ ಹಮ್, ಹಮಾರೀ, ತೂ, ಜೋ, ಹೋ, ಕೈಸ್, ಜೈಸ್ ಮೊದಲಾದ ರೂಪಗಳು ಅಪಭ್ರಂಶದ ಅಂತಿಮ ಕಾಲದಲ್ಲಿ ಗೋಚರವಾಗುತ್ತವೆ. ಆದರೆ ಅವುಗಳ ಪ್ರಯೋಗ ಪರಿಮಿತವಾಗಿತ್ತು. ಸಂಧಿಕಾಲದ ಅವಹಟ್ಟದ ಗ್ರಂಥಗಳಲ್ಲಿ ಖಡೀ ಬೋಲಿಯ ಹಲವು ರೂಪಗಳನ್ನು ಕಾಣಬಹುದು.

ಖಡೀಬೋಲಿಯನ್ನು ದೇವನಾಗರೀ ಲಿಪಿಯಲ್ಲೇ ಬರೆಯುತ್ತಾರೆ.

ಸಾಹಿತ್ಯದಲ್ಲಿ

ಬದಲಾಯಿಸಿ

ಸಾಹಿತ್ಯದಲ್ಲಿ ಖಡೀ ಬೋಲಿಯ ಪ್ರಥಮ ಪ್ರಯೋಗವನ್ನು ಗೋರಖ್‌ನಾಥ, ಅಮೀರ್ ಖುಸ್ರೂ,[] ಬಾಬಾ ಫರೀದ್ ಶೇರ್‌ಗಾಂಜೀ ಮೊದಲಾದವರಲ್ಲಿ ಕಾಣಬಹುದು. ಭೋಲಾನಾಥ ತಿವಾರಿ ಖಡೀ ಬೋಲಿಯ ಉಗಮ ಕ್ರಿ.ಶ.1000ದ ಸರಿಸುಮಾರಿನಲ್ಲಿ ಆಯಿತೆಂದೂ, ಇದರ ಇತಿಹಾಸವನ್ನು ಆದಿಕಾಲ (1000-1500) ಮಧ್ಯಕಾಲ (1500-1800) ಆಧುನಿಕ ಕಾಲ (1800 ರಿಂದ ಈಚೆ) ಎಂದೂ ಹೇಳಿದ್ದಾರೆ. ಪ್ರಾಚೀನತೆಯ ಬಗೆಗೆ ಇಲ್ಲಿ ಹೇಳಿರುವ ಮಾತನ್ನು ಒಪ್ಪಲು ಸಾಕಷ್ಟು ಆಧಾರಗಳು ದೊರಕವು. ಮುಸಲ್ಮಾನರು ಈ ಬೋಲಿಗೆ ಅಂತರಪ್ರಾಂತೀಯ ರೂಪವಿತ್ತರು.

ಈ ಬೋಲಿಯಲ್ಲಿ ಕೆಲವು ಜನಪದ ಗೀತೆಗಳೂ ದೊರೆಯುತ್ತವೆ. ಹಿಂದೀ ಸಾಹಿತ್ಯದ ಆಧುನಿಕ ಕಾಲದ ಆರಂಭವೇ ಖಡೀ ಬೋಲಿಯ ವಿಶೇಷ ಉನ್ನತಿಯಿಂದ ಆಯಿತು. ಮುದ್ರಣಾಲಯ, ವೃತ್ತಪತ್ರಿಕೆ, ವಿಜ್ಞಾನ ಮೊದಲಾದವುಗಳ ಆವಿರ್ಭಾವದಿಂದಾಗಿ ಗದ್ಯದಲ್ಲಿ ಇದು ವಿಶೇಷವಾಗಿ ಬಳಕೆಗೊಂಡಿತು. 19ನೆಯ ಶತಮಾನದ ತರುವಾಯ ಪಂ. ಮಹಾವೀರ ಪ್ರಸಾದ ದ್ವಿವೇದಿಯವರ ಸತತ ಪ್ರಯತ್ನದಿಂದಾಗಿ ಹಿಂದೀ ಎಂದರೆ ಖಡೀ ಬೋಲಿ ಎನ್ನುವಂತಾಗಿ, ಪದ್ಯದ ಮೇಲೂ ಇದರ ಏಕಾಧಿಪತ್ಯ ಸ್ಥಾಪಿತವಾಗಿ ಬ್ರಜಭಾಷೆ ಹಿಂದೆ ಸರಿಯಿತು. ಇಂದು ಇದರ ಸಾಹಿತ್ಯ ವಿಪುಲವಾಗಿ ಬೆಳೆದಿದೆ, ಬೆಳೆಯುತ್ತಿದೆ.

ಜನಪ್ರಿಯ ಸಂಸ್ಕೃತಿಯಲ್ಲಿ

ಬದಲಾಯಿಸಿ

ಭಾರತದ ಮೊದಲ ದೂರದರ್ಶನ ಧಾರಾವಾಹಿಯಾದ ಹಮ್ ಲೋಗ್‍ನಲ್ಲಿ ಖಡೀ ಬೋಲಿಯ ಕೆಲವು ಅಂಶಗಳನ್ನು ಬಳಸಲಾಗಿದ್ದು, ಅದರಲ್ಲಿನ ಮುಖ್ಯ ಕುಟುಂಬವು ಪಶ್ಚಿಮ ಉತ್ತರ ಪ್ರದೇಶದಲ್ಲಿ ಬೇರುಗಳನ್ನು ಹೊಂದಿರುವುದಾಗಿ ಚಿತ್ರಿಸಲಾಗಿತ್ತು.[][]

ಉಲ್ಲೇಖಗಳು

ಬದಲಾಯಿಸಿ
  1. Alok Rai (2001), Hindi nationalism, Orient Blackswan, 2001, ISBN 978-81-250-1979-4, ... on one account, Khari Boli was contrasted with the mellifluousness and soft fluency of Braj Bhasha: khari was understood to refer to the rustic and stiff uncouthness of Khari Boli. The protagonists of Khari Boli returned the compliment: Braj Bhasha was called pari boli – ie supine! ...
  2. Prabhakar Machwe (1998), Rahul Sankrityayan (Hindi Writer)Makera of Indian Literature, Sahitya Akademi, 1998, ISBN 978-81-7201-845-0, ... re-drawing of the map of Hindi-speaking areas, on the basis of the so-called dialects ... He believed that the language spoken in Meerut and Agra was the original mother of Khari boli; he called it Kauravi ... his presidential speech in the Bombay session of the Hindi Sahitya sammelan in 1948, with the strong plea to use Devanagari script for Urdu, provoked bitter controversy and many Urdu speaking Communists saw to it that Rahul was expelled from the Communist Party of India ...
  3. Colin P. Masica (9 September 1993). The Indo-Aryan Languages. Cambridge University Press. p. 28. ISBN 978-0-521-29944-2. Retrieved 26 June 2012.
  4. Syed Abdul Latif (1958), An Outline of the cultural history of India, Oriental Books, 1979, ... Khari Boli is spoken as mother-tongue in the following areas: (1) East of the Ganges, in the districts of Rampur, Bijnor, and Moradabad, Bareilly, (2) between the Ganges and the Jamuna, in the districts of Meerut, Muzaffar Nagar, Azamgarh, Varanasi, May, Saharanpur and in the plain district of Dehradun, and (3) West of the Jamuna, in the urban areas of Delhi and Karnal and the eastern part of Ambala district ...
  5. Kloss, Heinz; McConnell, Grant D., eds. (1978). Les Langues écrites Du Monde: Relevé Du Degré Et Des Modes D'utilisation (The Written Languages of the World: A Survey of the Degree and Modes of Use). Presses Université Laval. pp. 198–199. ISBN 978-2-7637-7186-1. Retrieved 26 June 2012.
  6. Arvind Singhal; Everett M. Rogers (1999), Entertainment-education: a communication strategy for social change, Psychology Press, 1999, ISBN 978-0-8058-3350-8, ... Joshi creatively combined Khari Boli, a much-used, rustic, yet popular derivative of the Hindi language in North India, with conventional Hindi ...
  7. Shibani Roy; S. H. M. Rizvi (1985), Dhodia identity: anthropological approach, B.R. Pub. Corp., 1985, ISBN 9780865907447, ... The written script and spoken language of the urban folk differ from the rural dialect or khari boli. This is the unrefined and crude tongue of the rustic folks of the village ...
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: