ಪ್ರಾಕೃತ ಭಾಷೆ
ಜೈನಾಗಮ ಮತ್ತು ಪ್ರಾಕೃತ ಭಾಷೆ :
ಜೈನಾಗಮ ಗ್ರಂಥಗಳು ಪ್ರಾಕೃತ ಸಾಹಿತ್ಯದ ಒಂದು ಪ್ರಮುಖಾಂಶವಾಗಿದೆ. ಜೈನಮತ ಈ ಯುಗದಲ್ಲಿ ಕಾಲಾನುಕಾಲಕ್ಕೆ ಧರ್ಮಪ್ರಚಾರದ ಹೊಣೆಯನ್ನು ಹೊತ್ತಿರುವ ಇಪ್ಪತ್ತು ನಾಲ್ಕು ತೀರ್ಥಂಕರರನ್ನು ಅಂಗೀಕರಿಸುತ್ತದೆ. ಕೃಷ್ಣನ ದಾಯಾದಿಯಾದ ನೇಮಿನಾಥ ಅವರಲ್ಲಿ ಇಪ್ಪತ್ತೆರಡನೆಯವ. ಇಪ್ಪತ್ತಮೂರನೆಯವ ಪಾಶ್ರ್ವನಾಥ. ಈತ ಇತಿಹಾಸ ಪುರುಷನೆಂಬುದನ್ನು ಈಗ ಒಪ್ಪಿಕೊಳ್ಳಲಾಗಿದೆ. ನಿಗಠನಾಟಿಪುತ್ತನೆಂದು ಬೌದ್ದ ಗ್ರಂಥಗಳು ಯಾವಾತನನ್ನು ಹೇಳುತ್ತವೊ ಆತ ತೀರ್ಥಂಕರರಲ್ಲಿ ಕೊನೆಯವನಾದ ಮಹಾವೀರ (ಕ್ರಿ.ಪೂ. 599-527). ಆತ ಬುದ್ದನ ಸಮಕಾಲೀನ ಮತ್ತು ಆತನಿಗಿಂತ ಹಿರಿಯವ. ಆತನಂತೆ ರಾಜವಂಶದವ, ಮಗಧ ರಾಜವಂಶದ ಬಳಗಕ್ಕೆ ಸೇರಿದವ ಭಾರತದಲ್ಲಿ ಧಾರ್ಮಿಕ ಜ್ಞಾನ ಸಂಪತ್ತೆಲ್ಲ ಗುರುವಿನಿಂದ ಶಿಷ್ಯನಿಗೆ ಬಾಯಿಪಾಠದ ಮೂಲಕ ತಲೆಯಿಂದ ತಲೆಮಾರಿಗೆ ಲಭ್ಯವಾಗುತ್ತಿತ್ತಷ್ಟೆ. ಮಹಾವೀರನ ಮತ್ತು ಆತನ ಶಿಷ್ಯರ ಉಪದೇಶಗಳು ಅರ್ಧಮಾಗಧಿಯಲ್ಲಿರುವ ಜೈನಾಗಮದ ಮೂಲಕ ನಮಗೆ ದೊರೆತಿವೆ. ಹೀಗೆ ಅವು ತಲೆಯಿಂದ ತಲೆಮಾರಿಗೆ ಇಳಿದುಬರುವಲ್ಲಿ ಅನೇಕ ಕಷ್ಟಕಾರ್ಪಣ್ಯಗಳಿಗೆ ಒಳಗಾಗಿವೆ. ದುಷ್ಕಾಲಗಳ ಪ್ರಯುಕ್ತ, ಅದರಲ್ಲೂ ಕ್ಷಾಮವೊಂದು ತಲೆದೋರಿದುದ್ದರಿಂದ ಸುಮಾರು ನಾಲ್ಕನೆ ಶತಮಾನದಲ್ಲಿ ಪಾಟಲೀಪುತ್ರದಲ್ಲಿ ನೆರೆದ ಪಂಡಿತ ಮಂಡಲಿ ಅವನ್ನು ಒಂದು ಕ್ರಮಕ್ಕೆ ತರುವ ಏರ್ಪಾಡನ್ನು ಕೈಕೊಳ್ಳುವ ಅವಶ್ಯಕತೆಯುಂಟಾಯಿತು. ಇದಾದ ತರುವಾಯ ಕಾಲಾನುಕಾಲಕ್ಕೆ ಸ್ಕಂಡಿಲ, ನಾಗಾರ್ಜುನ ಮತ್ತು ದೇವದ್ರ್ಧಿ ಇತ್ಯಾದಿ ಶ್ರೇಷ್ಠ ವಿದ್ವಾಂಸರು ಇಂಥ ಪ್ರಯತ್ನಗಳನ್ನು ಕೈಗೊಂಡರು. ವ್ಯಕ್ತಿಗಳ ಸ್ವಂತ ಕೃತಿಗಳೆನಿಸಿದ ಕೆಲವು ಗ್ರಂಥಗಳೂ ಇವೆ. ಕ್ರಿ.ಶ. ಐದನೆಯ ಶತಮಾನದ ಮಧ್ಯದಲ್ಲಿ ದೇವದ್ರ್ಧಿಯ ಮುಂದಾಳುತನದಲ್ಲಿ ವಲ್ಲಭೀ ಪಂಡಿತ ಮಂಡಲಿ ಈ ಆಗಮವನ್ನು, ಅದು ಈಗ ನಮಗೆ ಉಪಲಬ್ಧವಾಗಿರುವಂತೆ ಕ್ರಮಪಡಿಸಿ, ಪುನವ್ರ್ಯವಸ್ಥೆಗೊಳಿಸಿ, ಪರಿಷ್ಕರಿಸಿ, ಬರೆಹಕ್ಕೆ ಇಳಿಸಿತು. ಇದಕ್ಕಿಂತ ಹಿಂದಿನ ಆಗಮ ಪಾಠಗಳ ಪಟ್ಟಿಗಳು, ಪ್ರಾಯಶಃ ಹಿಂದಿನ ಸಂಕಲನಗಳಲ್ಲಿ ವರ್ಗೀಕೃತವಾಗಿರುವಂತೆ, ಈ ಆಗಮದಲ್ಲಿಯೆ ನಮಗಾಗಿ ಸಂರಕ್ಷಿತವಾಗಿವೆ. ಅತ್ಯಂತ ಪುರಸ್ಕøತವಾದ, ಪ್ರಾಯಶಃ ವಲ್ಲಭಿಯ ಪಂಡಿತ ಮಂಡಲಿಯಿಂದಲೆ ಇರಬಹುದು, ವಿಂಗಡಿಕೆ ಯಾವುದೆಂದರೆ, ಆಗಮದಲ್ಲಿ ಆಚಾರಂಗ ಸೂತ್ರಕೃತಾಂಗ ಮುಂತಾದ ಹನ್ನೊಂದು ಅಂಗಗಳು; ಔಪಪತಿಕ, ರಾಜಪ್ರಶ್ನೀಯ ಇತ್ಯಾದಿ ಹನ್ನೆರಡು ಉಪಾಂಗಗಳು. ಚತುಶ್ಚರಣ, ಆತುರಪ್ರತ್ಯಾಖ್ಯಾನ ಮುಂತಾದ ಹತ್ತು ಪ್ರಕೀರ್ಣಗಳು, ನಿಶೀಥ, ಮಹಾನಿಶೀಥ ಇತ್ಯಾದಿ ಆರು ಜೇಡಸೂತ್ರಗಳು, ನಾಂದೀ ಮತ್ತು ಅಣುಯೋಗ ದ್ವಾರಗಳೆಂಬ ಎರಡು ವೈಯಕ್ತಿಕ ಗ್ರಂಥಗಳು, ಉತ್ತರಾಧ್ಯಯನ, ಅವಶ್ಯಕ, ದಶವೈಕಾಲಿಕ ಮೊದಲಾದ ನಾಲ್ಕು ಮೂಲ ಸೂತ್ರಗಳು. ಹದಿನಾಲ್ಕು ಪೂರ್ವಗಳನ್ನು ಒಳಗೊಂಡ ದೃಷ್ಟಿವಾದವೆಂಬ ಹನ್ನೆರಡನೆಯ ಅಂಗ ಈಗ ನಷ್ಟವಾಗಿದೆ. ಆಗಮದಲ್ಲಿಯ ವಿಷಯಗಳು ವಿಧವಿಧವಾಗಿವೆ. ಅಂದಿನ ಕಾಲದಲ್ಲಿ ಮನುಷ್ಯನ ಬುದ್ದಿಗೆ ಎಟಕಿರುವ ಜ್ಞಾನದ ಪ್ರತಿಯೊಂದು ಶಾಖೆಗೂ ಅದು ಆಕರವಾಗಿದೆ. ಆಚಾರಂಗ ದಶವೈಕಾಲಿಕ ಮೊದಲಾದ ಗ್ರಂಥಗಳು ಮಹಾವೀರನ ಕಾಲದಲ್ಲಿ ಪೂರ್ವಭಾರತದಲ್ಲಿ ಬಳಕೆಯಲ್ಲಿದ್ದ ರಾಜತ್ವದ ವರ್ಣನೆಗಳನ್ನು ಒಳಗೊಂಡಿವೆ. ಜೀವಾಭಿಗಮ ಮುಂತಾದವು ಜೀವವುಳ್ಳ ಪ್ರಾಣಿಗಳ ವಿಷಯದಲ್ಲಿ ಜೈನರ ಭರವಸೆ ಎಂಥದೆಂಬುದನ್ನು ಸಮಗ್ರವಾಗಿ ಚರ್ಚಿಸುತ್ತವೆ. ಉಪಾಸಕದಶಾಃ, ಪ್ರಶ್ನವ್ಯಾಕರಣಾನಿ ಮುಂತಾದವು ಗೃಹಸ್ಥನ ಧ್ಯೇಯಗಳನ್ನೂ ಅವನು ಪಾಲಿಸಬೇಕಾದ ನಿಯಮಗಳನ್ನೂ ನಿರೂಪಿಸುತ್ತವೆ. ಜ್ಞಾತಾಧರ್ಮಕಥಾಃ, ವಿಪಾಕಶುತ ಮತ್ತು ನಿರಯಾವಲಿಯಾ ಓ ಎಂಬವು ತಮ್ಮೆಲ್ಲ ಪ್ರಕಾರಗಳಲ್ಲೂ ನೀತಿಯನ್ನೇ ಬೋಧಿಸುವ ಪಾವನ ಕಥೆಗಳನ್ನು ಹೇಳುತ್ತವೆ. ಉಪದೇಶವೇ ಅವುಗಳ ಉದ್ದೇಶ. ಸೂರ್ಯಪ್ರಜ್ಞಪ್ತಿ ಮುಂತಾದವು ಜೈನಾಗಮದಲ್ಲಿಯ ಸೃಷ್ಟಿಕ್ರಮವನ್ನು ವರ್ಣಿಸುತ್ತವೆ. ಸೂತ್ರಕೃತಾಂಗ, ಉತ್ತರಾಧ್ಯಯನ ಇತ್ಯಾದಿಗಳು ಒಳ್ಳೆ ಹೊಳಪುಳ್ಳ ನೀತಿಬೋಧೆಗಳನ್ನೂ ದಾರ್ಶನಿಕ ಪ್ರಸಂಗಗಳನ್ನೂ ವಿನೋದವುಳ್ಳ ಅಖ್ಯಾಯಿಕೆಗಳನ್ನೂ ಒಳಗೊಂಡಿವೆ. ಹಾಗೂ ಅವುಗಳ ಕೆಲವು ಪ್ರಕರಣಗಳು ಪ್ರಾಚೀನ ಭಾರತದ ವಿರಕ್ತರ ಕಾವ್ಯದ ಒಳ್ಳೆಯ ಮಾದರಿಗಳಾಗಿವೆ. ನಂದೀ ಎಂಬುವ ಜೈನದರ್ಶನದ ಪ್ರಮಾಣ ಪ್ರಮೇಯಗಳ ವಿವೇಚನೆಯನ್ನು ವಿವರವಾಗಿ ಮಾಡಿದ್ದಾನೆ. ಭಗವತೀ ಮುಂತಾದ ಗ್ರಂಥಗಳು ತಾವು ಒಳಗೊಂಡಿರುವ ವಿಷಯಗಳ ದೃಷ್ಟಿಯಿಂದ ವಿಶ್ವಕೋಶಗಳಂತಿವೆ. ಕೆಲವು ಕಥೆಗಳು ಅರಿಷ್ಟನೇಮಿ ಎಂಬವನ ಕಾಲದಲ್ಲಿ ನಡೆದಂಥವು. ಕೆಲವೆಡೆಗಳಲ್ಲಿ ಪಾಶ್ರ್ವ ಮತ್ತು ಮಹಾವೀರನ ಶಿಷ್ಯರು ಸಂವಾದಿಸುತ್ತಿದ್ದಾರೆ. ಅನೇಕ ಪ್ರವಚನಗಳಲ್ಲಿಯ ಉಪದೇಶ ಮಹಾವೀರ ಮತ್ತು ಆತನ ಶಿಷ್ಯರದೆಂದು ಹೇಳಲಾಗಿದೆ.
ದೇವದ್ರ್ಧಿ ಈಗಾಗಲೆ ಉಪಲಬ್ಧವಾಗಿದ್ದ ಜೈನಾಗಮ ಪಾಠಗಳನ್ನು ಕ್ರಮಪಡಿಸಿ ಪರಿಷ್ಕರಿಸಿ ಪ್ರಾಯಶಃ ವರ್ಣನೆಗಳನ್ನೂ ಪಾಠಭಾಗಗಳನ್ನೂ ಒಂದು ಗ್ರಂಥದಲ್ಲಿ ಬರುವ ಪರ್ಯಾಯ ಶಬ್ದಗಳನ್ನೂ ಒಂದು ಮಟ್ಟಕ್ಕೆ ತಂದು ಮತ್ತು ಇತರ ಗ್ರಂಥಗಳಲ್ಲಿ ಇವನ್ನು ವಣ್ಣೋ, ಜಾವ ಇತ್ಯಾದಿ ಪದಗಳಿಂದಲೂ ಸಂಖ್ಯೆಗಳಿಂದಲೂ ಸೂಚಿಸಿ ಸಮಂಜಸವಾದ ಒಂದು ಸಮಗ್ರತೆ ಬರುವಂತೆ ಮಾಡಿದ್ದಾನೆ. ಅಲ್ಲಿ ಬರುವ ಪ್ರಕರಣಾಂತರ ಸೂಚನೆಗಳು ಒಬ್ಬನ ಕೈವಾಡವನ್ನೇ ತೋರುತ್ತವೆ. ಈಗಿನ ಉಪಾಂಗಗಳ ವಿಷಯ ಅಂಗಗಳಷ್ಟೇ ಹಳೆಯದಾಗಿದ್ದರೂ ಅಂಗಗಳಿಗೆ ಹೊಂದಿರುವಂತೆ ಉಪಾಂಗಗಳ ವಿಂಗಡಣೆ ಪ್ರಾಯಶಃ ಪಾಟಲೀಪುತ್ರದ ಮಂಡಲಿಯಿಂದೀಚೆಗೆ ಮಾಡಿದ ಒಂದು ಹೊಸ ಬದಲಾವಣೆಯಿರಬಹುದು. ಆಗಮದಲ್ಲಿ ಉಳಿದುಕೊಂಡಿರುವ ಹಿಂದಿನ ಪಟ್ಟಿಗಳಲ್ಲಿ ಇದು ಕಾಣಬರುವುದಿಲ್ಲ. ಇಂಥ ವರ್ಗರಚನೆಯಿಂದ ಪ್ರಶ್ನವ್ಯಾಕರಣಾನಿ ಎಂಬಂಥ ಗ್ರಂಥಗಳ ಒಳಪಡಿಗಳು ಪಲ್ಲಟಗೊಂಡಂತೆ ಭಾಸವಾಗುತ್ತದೆ. ಕೊನೆಯ ಪರಿಷ್ಕರಣದವರೆಗೂ ಈ ಮರು ಹೊರಳಿಕೆಗಳೂ ಭಾಗಗಳ ಎಡೆಮಾಡಿಸುವಿಕೆಯೂ ಜರಗುತ್ತಲೇ ಇದ್ದುವು. ಈಗಲೂ ಅವನ್ನು ಗುರುತಿಸಬಹುದು. ಕೆಲವೆಡೆಗಳಲ್ಲಿ ಒಳಪಡಿಯನ್ನು ಬೇರೆ ತರದಲ್ಲಿ ಓರಣಗೊಳಿಸುವುದು ಅವುಗಳ ದೃಷ್ಟಿಯಲ್ಲಿತ್ತೆಂಬುದನ್ನು ಕೆಲವು ನಿರ್ಯುಕ್ತಿಗಳು ವಿಶದವಾಗಿ ಸೂಚಿಸುತ್ತವೆ. ಷ್ಯೂಬ್ರಿಂಗ್ ಎಂಬಾತ ಸೂತ್ರ ಕೃತಾಂಗದ ಕೆಲವು ವಾಕ್ಯಗಳು ಸಮಂಜಸವಾದ ಅರ್ಥವನ್ನು ಕೊಡುವಂತೆ ಅವುಗಳ ಮರುಜೋಡಣೆ ಹೇಗೆ ಆಗಬೇಕೆಂಬುದನ್ನು ತೋರಿಸಿಕೊಟ್ಟಿದ್ದಾನೆ. ಪ್ರಕೀರ್ಣಗಳು ಅಧಿಕ ಸಂಖ್ಯೆಯಲ್ಲಿ ಇದ್ದರೂ ಅವುಗಳಲ್ಲಿ ಕೆಲವನ್ನು ಮಾತ್ರ ಆಗಮದಲ್ಲಿ ಸೇರಿಸಿದ್ದಾರೆ.
ಅರ್ಧಮಾಗಧಿಯ ಆಗಮವನ್ನು ಕ್ರಿ.ಶ. ಐದನೆಯ ಶತಮಾನದಲ್ಲಿ ಪರಿಷ್ಕರಿಸಿದ್ದರೂ ಅದರ ಅರ್ಧಕ್ಕಿಂತ ಹೆಚ್ಚಿನ ಮತ್ತು ಹುರುಳಾದ ಭಾಗ ಕ್ರಿ.ಪೂ. ನಾಲ್ಕನೆಯ ಶತಮಾನದ ಪಾಟಲೀಪುತ್ರದ ಮಂಡಲಿಯದರಷ್ಟು ಹಳೆಯದು. ಸಾಂಪ್ರದಾಯಿಕ ವಚನಗಳ ಜತೆಗೆ ಆಗಮದಲ್ಲಿ ಗ್ರೀಕರ ಜೋತಿಷ್ಯವನ್ನು ಕುರಿತ ಮಾತುಗಳಿಲ್ಲದಿರುವುದೂ ಅದರ ಪ್ರಾಚೀನ ಪಾಠ ಭಾಗಗಳ ಛಂದಸ್ಸು ಮತ್ತು ಭಾಷೆ ಇವುಗಳ ರೀತಿಯೂ ಇದನ್ನು ಪ್ರಮಾಣಿಸುತ್ತವೆ. ಆಚಾರಾಂಗ ಮತ್ತು ಸೂತ್ರ ಕೃತಾಂಗಗಳ ಮೊದಲ ಭಾಗಗಳು ಆಗಮದ ಪ್ರಾಚೀನತಮವಾದ ಸ್ತರಗಳೆಂದು ಭಾವಿಸಲಾಗಿದೆ. ಜೇಡಸೂತ್ರಗಳ ಕೆಲವು ಪ್ರವಚನಗಳನ್ನೂ ಉತ್ತರಾಧ್ಯಯನದ ಕೆಲವು ಉಪದೇಶಗಳನ್ನೂ ಭಗವತೀ ಎಂಬುದನ್ನೂ ಇವುಗಳ ಜತೆಗೆ ಇರಿಸಬಹುದು. ಮೇಲೆ ವಿವರಿಸಿರುವ ಆಗಮ ಶ್ವೇತಾಂಬರರಿಗೆ ಮಾತ್ರ ಪ್ರಮಾಣ ಗ್ರಂಥವಾಗಿದೆ. ದಿಗಂಬರರು ಅದನ್ನು ಚೊಕ್ಕ ಎಂದು ಒಪ್ಪಿಕೊಳ್ಳುವುದಿಲ್ಲ. ಇದಕ್ಕೆ ಪ್ರತಿಯಾದ ಆಗಮ ಅವರಿಗಿದೆ. ಶ್ವೇತಾಂಬರ ಸಂಪ್ರದಾಯದ ಪ್ರಕಾರ, ಹದಿನಾಲ್ಕು ಪೂರ್ವರ ಜ್ಞಾನನಿಧಿ ಕೊರೆಯಾಗುತ್ತ ಬಂತು ಮತ್ತು ದೇವದ್ರ್ಧಿಯ ಕಾಲಕ್ಕೆ ಪೂರ್ವರನ್ನು ಒಳಗೊಂಡಿದ್ದ ಹನ್ನೆರಡನೆಯ ಆಗಮ ಕಣ್ಮರೆಯಾಯಿತು. ಆಗ ಈಗ ಇತ್ತೀಚಿಗಿನ ವ್ಯಾಖ್ಯಾನಗಳೂ ಪೂರ್ವರ ಗಾಥೆಗಳನ್ನು ಪ್ರಾಯಶಃ ಸಂಪ್ರದಾಯದ ಸ್ಮರಣೆಯಿಂದಲೇ ಏನೋ ಎತ್ತಿ ಹೇಳುತ್ತವೆ. ದಿಗಂಬರರಲ್ಲಿಯೂ ಅಂಗದ ಜ್ಞಾನ ಕ್ರಮೇಣ ಕಳೆದುಹೋದ ವಿಷಯದಲ್ಲಿ ಇಂಥದೇ ಒಂದು ಐತಿಹ್ಯವುಂಟು. ಆಗಮನ ಕಳೆದುಹೋಯಿತೆಂಬ ಹೇಳಿಕೆಯನ್ನು ಸಮರ್ಥಿಸಲು ಸ್ವಲ್ಪ ವಿವರಣೆ ಅವಶ್ಯಕ. ಮಠಗಳ ಪಾಠಶಾಲೆಗಳಲ್ಲಿ ಈ ಪವಿತ್ರ ಗ್ರಂಥಗಳ ವ್ಯಾಸಂಗ ನಡೆಯುತ್ತಿತ್ತೆಂಬುದಕ್ಕೂ ಅನೇಕ ವೇಳೆ ದೇಶದ ಬೇರೆ ಬೇರೆ ಭಾಗಗಳಲ್ಲಿ ಪರಸ್ಪರ ಸಂಪರ್ಕವಿಲ್ಲದೆಯೆ, ಉಪಾಧ್ಯಾಯರು ಶಿಷ್ಯರಿಗೆ ಈ ವಿದ್ಯೆಯನ್ನು ಕಲಿಸಿಕೊಡುತ್ತಿದ್ದರೆಂಬುದಕ್ಕೂ ಸಾಕಷ್ಟು ಆಧಾರಗಳಿವೆ. ವಿಸ್ಮøತಿಯ ದೆಸೆಯಿಂದಲೊ ವ್ಯಾಸಂಗ ಅನುಸ್ಯೂತವಾಗಿ ನಡೆಯಲಾಗದ ಕಾರಣದಿಂದಲೊ. ಶಾಸ್ತ್ರ ಪ್ರಕ್ರಿಯೆಗಳ ವಿವರಗಳು ಅಸ್ಪಷ್ಟವಾಗಿರುವುದರಿಂದಲೊ ಆಗಮ ವಿದ್ಯಾನಿಷ್ಣಾತರು ಗತಿಸಿಹೋದ ದೆಸೆಯಿಂದಲೊ-ಇವೇ ಮುಂತಾದ ಕಾರಣಗಳಿಂದ ಒಂದು ಮತ್ತೊಂದು ಪಾಠಶಾಲೆಗಳಲ್ಲಿ ಈ ಶಾಸ್ತ್ರಭಾಗದ ಅಭ್ಯಾಸ ಖಿಲವಾಗಿರಬಹುದು. ಒಂದು ಪಾಠಶಾಲೆಯಲ್ಲಿ ಯಾವುದಾದರೊಂದು ವಿಶಿಷ್ಟ ಶಾಖೆಯ ಅಭ್ಯಾಸ ವಿವರವಾಗಿ ನಡೆದು ಅದು ಅಲ್ಲಿ ಸುಸಂರಕ್ಷಿತವಾಗಿದ್ದರೆ. ಅದೇ ಸಮಯದಲ್ಲಿ ಬೆಳೆದ ಮತತತ್ತ್ವಗಳಲ್ಲಿ ಮೂಡಿದ ಕೆಲವು ಭಿನ್ನತೆಗಳ ದೆಸೆಯಿಂದ ಇತರರು ಅದನ್ನು ಕ್ರಮೇಣ ಸ್ವೀಕರಿಸದಿರುವುದುಂಟು. ಇಂಥ ಕಾರಣದಿಂದಲೇ ಪ್ರಾಯಶಃ ದಿಗಂಬರರು ಅಂಗಗಳನ್ನು ನಿರಾಕರಿಸಿದುದು ಮತ್ತು ಶ್ವೇತಾಂಬರರು ದೃಷ್ಟಿವಾದ ಖಿಲವಾಯಿತೆಂದು ಹೇಳುವುದು. ಹೀರಾಲಾಲರು ದೃಷ್ಟಿವಾದದ ಕೆಲವು ಭಾಗಗಳು ಸತ್ಕರ್ಮಪ್ರಾಭೃತ ಮತ್ತು ಕಷಾಯ ಪ್ರಾಭೃತಗಳ ಪ್ರಾಕೃತ ಸೂತ್ರಗಳ ತಳಹದಿಯಾಗಿವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಸೂತ್ರಗಳು ಸಂಸ್ಕøತ ಮತ್ತು ಪ್ರಾಕೃತಗಳ ದೊಡ್ಡ ವ್ಯಾಖ್ಯಾನಗಳೊಡನೆ ಬೆಳಕಿಗೆ ಬಂದಿವೆ. ಇವುಗಳ ಮಿತವ್ಯಾಸಂಗದಿಂದ ನಮಗೆ ತಿಳಿದುಬಂದಿರುವುದೇನೆಂದರೆ. ಒಂದಾನೊಂದು ಕಾಲದಲ್ಲಿ ದಿಗಂಬರ ಶ್ವೇತಾಂಬರರಿಬ್ಬರಿಗೂ ಸಾಧಾರಣವಾಗಿದ್ದ ಸಾಹಿತ್ಯವೊಂದಿತ್ತು. ಈಗಿನ ದಿನದಲ್ಲಿಯೂ ಇಬ್ಬರಿಗೂ ಸಮಾನವಾದ ವಿಷಯ ಅವವೇ ಪದಗಳಿಂದ ನಿರೂಪಿತವಾಗಿರುವುದನ್ನು ಇಬ್ಬರ ಪ್ರಾಚೀನ ಸಾಹಿತ್ಯದಲ್ಲಿಯೂ ಕಾಣಬಹುದು. ಪ್ರಾಚೀನ ಚೈನ ಸಾಹಿತ್ಯದ ಮತ್ತು ಅದರೊಳಗಿನ ತತ್ತ್ವದ ಸಮಗ್ರ ವಿವೇಚನೆ ಜೈನರ ಈ ಎರಡು ಪಂಗಡಗಳೂ ಸಂರಕ್ಷಿಸಿಕೊಂಡು ಬಂದಿರುವ ಪ್ರಾಚೀನ ಗ್ರಂಥಗಳ ತುಲನಾತ್ಮಕ ವ್ಯಾಸಂಗದಿಂದ ಮಾತ್ರ ಸಾಧ್ಯ.
ಜೈನಾಗಮ ಬೇರೆ ಬೇರೆ ಮೂಲಗಳಿಂದಲೂ ಕಾಲಗಳಿಂದಲೂ ಪ್ರಾಪ್ತವಾದ ಅನೇಕ ಕೃತಿಗಳನ್ನೊಳಗೊಂಡಿದೆ. ಮತ್ತು ಅದರ ಸಾಹಿತ್ಯ ಸ್ವರೂಪವನ್ನು ತೂಕ ಮಾಡಿ ಹೇಳುವುದು ಕಷ್ಟ. ಆಗಮದ ಪರಿಷ್ಕರಣ ಯಾವ ಸಂಶಯಕ್ಕೂ ಎಡೆಗೊಡದೆ ಸತ್ತ್ವತಃ ಬೇರೆಯೆಂದು ತೋರುವ ಕೃತಿಗಳ ಭಾಗಗಳನ್ನೂ ಒಟ್ಟಿಗೆ ತಂದಿದೆ. ಕೆಲವು ಗದ್ಯದಲ್ಲಿ ಕೆಲವು ಪದ್ಯದಲ್ಲಿ ಇವೆ. ಮತ್ತೆ ಕೆಲವು ಪದ್ಯ ಮತ್ತು ಗದ್ಯ ಇವೆರಡರಿಂದಲೂ ಕೂಡಿವೆ. ಆಚಾರಾಂಗದ ಗದ್ಯ ಪದ್ಯದ ತುಣುಕುಗಳು ಒಂದರೊಡನೊಂದು ಹೆಣೆದುಕೊಂಡಿವೆ. ಈ ದೆಸೆಯಿಂದ ಅದನ್ನು ವ್ಯಾಖ್ಯಾನಿಸುವಾಗ ಅನೇಕ ಕ್ಲೇಶಗಳು ಎದ್ದು ತೋರುತ್ತವೆ. ಹಳೆಯ ಗದ್ಯ ಗ್ರಂಥಗಳ ಶೈಲಿ ಅಷ್ಟು ಬಿಗಿಯಾಗಿಲ್ಲ. ಯಾಂತ್ರಿಕವಾಗಿ ಅನೇಕ ಮಾತುಗಳು ಪುನರಾವರ್ತನೆಗೊಂಡಿವೆ. ಅರ್ಥಗರ್ಭಿತವಾದ ಸೂತ್ರಪ್ರಾಯದ ವಾಕ್ಯಗಳು ಕೆಲವು ಕೃತಿಗಳಲ್ಲಿ ಕಂಡುಬರುತ್ತದೆ. ಔಪದೇಶಿಕ ಭಾಗಗಳು ಉದಾರವಾದ ಶೈಲಿಯಲ್ಲಿ ಅಚ್ಚುಕಟ್ಟಾಗಿ ತಮ್ಮ ಉಪದೇಶಗಳನ್ನು ನಿರ್ವಹಿಸುತ್ತವೆ. ಒಂದು ನೆಲೆಗಟ್ಟಿಗೊಳಪಟು ವರ್ಣನೆಗಳು, ಸಾಹಿತ್ಯಕ ಪರಿಣಾಮಕ್ಕೆಳಸಿ, ಅನಿಯತವಾದ ಸಮಾಸಪದಗಳಿಂದ ಕೂಡಿ. ಹಗುರಗೆಟ್ಟ ರಚನೆಯಲ್ಲಿವೆ. ಮಠಗಳಲ್ಲಿನ ಜೀವನಕ್ರಮದ ನಿಯಮಗಳು ವಿವರಗಳಿಂದ ತುಂಬಿವೆ. ಮತೀಯ ಸಿದ್ಧಾಂತದ ಪ್ರವಚನಗಳು ಒಳ್ಳೆಯ ಪ್ರಮಾಣದಲ್ಲಿ ಕ್ರಮಬದ್ಧವಾದ ನಿರೂಪಣೆಗಳನ್ನೊಳಗೊಂಡಿವೆ. ದೃಷ್ಟಾಂತ ಕಥೆಗಳನ್ನೂ ಸಂಕೇತಾರ್ಥವುಳ್ಳ ಉಪಮೆಗಳನ್ನೂ ಒಳಗೊಂಡಿರುವ ಅಖ್ಯಾಯಿಕೆಗಳಿವೆ. ತಪೋಧಿಕರ ಆದರ್ಶ ಕಥೆಗಳಿವೆ. ಸಿದ್ಧಾಂತಕ್ಕೆ ಸಂಬಂಧಪಟ್ಟ ಚರ್ಚೆಗಳಿವೆ. ಪಾಶ್ರ್ವ, ಮಹಾವೀರ ಮತ್ತು ಇತರ ಸಮಕಾಲೀನರ ಜೀವನ ಚರಿತ್ರೆಗಳ ವಿವರಗಳ ಜೊತೆಗೆ, ಆಗಮವನ್ನು ಪಾಳೀಗ್ರಂಥಗಳೊಡನೆ ಅಭ್ಯಾಸ ಮಾಡಿದ್ದೇ ಆದರೆ ಅಂದಿನ ಜನಜೀವನ ಹೇಗಿತ್ತು, ಅವರ ಆಲೋಚನೆಗಳು ಹೇಗೆ ಹರಿಯುತ್ತಿದ್ದುವು ಎಂಬ ವಿಚಾರದಲ್ಲಿ ಬೆಲೆಯುಳ್ಳ ವಿಷಯಗಳು ತಿಳಿದು ಬರುತ್ತವೆ.
ಮಹಾವೀರ ಅರ್ಧ ಮಾಗಧಿಯಲ್ಲಿ ತನ್ನ ಉಪದೇಶಗಳನ್ನು ಮಾಡಿದ ಎಂಬುದಾಗಿ ಹೇಳಲಾಗಿದೆ. ಆದುದರಿಂದ ಆಗಮ ಭಾಷೆ ಅದು. ಪ್ರಾಚೀನ ಭಾಗಗಳು ಆರ್ಷೇಯವಾದ ಭಾಷಾರೂಪಗಳನ್ನೂ ಶೈಲಿಯನ್ನೂ ಕಾಪಾಡಿಕೊಂಡು ಬಂದಿವೆ. ಇವು ಮುಂದಿನ ಕೃತಿಗಳಲ್ಲಿ ಕಂಡುಬರುವುದಿಲ್ಲ. ಮತ್ತು ಕ್ರಿಸ್ತಶಕದ ಪ್ರಾರಂಭದ ಶತಮಾನಗಳಲ್ಲಿ ಸಾಹಿತ್ಯ ಭಾಷೆಯಾಗಿ ಬೆಳೆಯುತ್ತಿದ್ದ ಮಹಾರಾಷ್ಟ್ರೀ ಭಾಷೆಯಲ್ಲಿ ಎದ್ದು ಕಾಣುವ ಕೆಲವು ಮಾತಿನೊಲುಮೆಗಳ ಪ್ರಭಾವ ಇಲ್ಲಿ ಎದ್ದು ಕಾಣುತ್ತದೆ. ಉಪದೇಶವನ್ನು ಬಾಯಿಮಾತುಗಳ ಮೂಲಕ ಮಾಡುವುದರಿಂದಲೂ ಅದರಲ್ಲೂ ಶ್ವೇತಾಂಬರರಲ್ಲಿ ಮುನಿಗಳು ಪ್ರಾಕೃತವನ್ನು ಆಗಾಗಲೇ ಧಾರ್ಮಿಕ ಪ್ರಸಂಗಗಳ ಭಾಷೆಯನ್ನಾಗಿ ಉಪಯೋಗಿಸುತ್ತಿದ್ದುದಲ್ಲದೆ ಸಾಹಿತ್ಯೋಪಕರಣವಾಗಿಯೂ ಬಳಸುತ್ತಿದ್ದುದರಿಂದಲೂ ಇಂಥ ನವೀಕರಣ ಅನಿವಾರ್ಯವಾಯಿತು. ಇಬ್ಬರಿಗೂ ಸಾಮಾನ್ಯವಾದ ಪದ್ಯಗಳಲ್ಲಿ ದಿಗಂಬರರ ಪಾಠಗಳು ಶಬ್ದೋಚ್ಚಾರದ ನಡುವೆ ಬರುವ ವ್ಯಂಜನಗಳನ್ನು ಮೃದುಗೈಯುತ್ತವೆ. ಆದರೆ ಶ್ವೇತಾಂಬರ ಪಾಠಗಳೊ ವ್ಯಂಜನಗಳ ಕೈಬಿಟ್ಟು ಸ್ವರಗಳನ್ನು ಮಾತ್ರ ಉಳಿಸಿಕೊಳ್ಳುತ್ತವೆ.
ಪಾಟಲೀಪುತ್ರದ ಮಂಡಲಿಗೆ ಮುಂಚೆ, ಚಂದ್ರಗುಪ್ತ ಮೌರ್ಯನ ಕಾಲದಲ್ಲಿ, ಜೈನಮುನಿಗಳ ತಂಡವೊಂದು, ಬರಗಾಲ ಬಂದಿದ್ದರಿಂದ, ಭದ್ರಬಾಹುವಿನ ಮುಂದಾಳುತನದಲ್ಲಿ ದಕ್ಷಿಣ ದೇಶಕ್ಕೆ ವಲಸೆ ಹೋಯಿತು. ಮತಗ್ರಂಥಗಳ ಜ್ಞಾನಭಂಡಾರ ವಿಸ್ಮøತಿಗೊಳಗಾಗುವ ಭೀತಿಯಿಂದ ಬರಗಾಲ ಮುಗಿದ ಮೇಲೆ, ಮುನಿಗಳ ಮಂಡಲಿಯೊಂದನ್ನು ಪಾಟಲೀಪುತ್ರದಲ್ಲಿ ಆಗಮವನ್ನು ಸಂಗ್ರಹಿಸಲು ಕರೆಸಿಕೊಳ್ಳಲಾಯಿತು. ಆದರೆ ಅಲ್ಲಿ ಸಂಕಲಿತವಾದ ಆಗಮವನ್ನು ದಕ್ಷಿಣಕ್ಕೆ ವಲಸೆ ಹೋದವರು ಅಂಗೀಕರಿಸಲಿಲ್ಲ. ಬರಗಾಲದ ಪರಿಸ್ಥಿತಿಗಳು ಪ್ರಾಯಶಃ ಮಗಧದಲ್ಲಿ ಉಳಿದುಕೊಂಡ ಜೈನಮುನಿಗಳ ಮತ್ತು ದಕ್ಷಿಣಕ್ಕೆ ವಲಸೆಹೋದವರ ಆಚಾರ ವ್ಯವಹಾರಗಳಲ್ಲಿ ವ್ಯತ್ಯಾಸವನ್ನುಂಟು ಮಾಡಿದವೆನ್ನಬೇಕು. ಅದಕ್ಕಿಂತಲೂ ಮುಂಚೆಯೇ ಸಿದ್ಧಾಂತಗಳಲ್ಲೂ ಆಚಾರಗಳಲ್ಲೂ ಭಿನ್ನತೆಗಳೇರ್ಪಟ್ಟಿರಬೇಕು. ಅಂದರೆ ವಿದ್ವಾಂಸರು ಜೈನಾಗಮವನ್ನು ಶ್ವೇತಾಂಬರ ಮತ್ತು ದಿಗಂಬರಗಳೆಂಬ ಎರಡು ವಿಭಾಗಗಳಾಗಿ ಒಡೆದುದಕ್ಕೆ ಇದೇ ಬೀಜವೆಂದು ಎಣಿಸುತ್ತಾರೆ. ಕೆಲಮಟ್ಟಿಗೆ ಇದು ದಿಗಂಬರರೇಕೆ ಪಾಟಲೀಪುತ್ರದ ಅರ್ಧ ಮಾಗದಿಯ ಆಗಮವನ್ನು ಅಂಗೀಕರಿಸುವುದಿಲ್ಲವೆಂಬುದನ್ನು ವಿವರಿಸುತ್ತದೆ. ಸಮಾಜದ ಧಾರ್ಮಿಕಾವಶ್ಯಕತೆಗಳನ್ನು ಪೂರೈಸಿ ಕೊಡಲು, ಇವರು ತಮ್ಮ ಸ್ಮøತಿಯಿಂದ ಕೆಲವು ಟಿಪ್ಪಣಿಗಳನ್ನು ಬರಹಕ್ಕಿಳಿಸಿದರು. ಇವು ಜೈನರ ಪ್ರತ್ಯಾಗಮವೆಂದು ಪರಿಗಣಿಸಬಹುದಾದ ಅನೇಕ ಪ್ರಾಕೃತಗ್ರಂಥಗಳ ರೂಪದಲ್ಲಿ ನಮಗೆ ಉಳಿದುಕೊಂಡು ಬಂದಿವೆ. ಇವುಗಳಲ್ಲಿ ಪ್ರಾಚೀನವಾದವು, ದೃಷ್ಟಿವಾದದ ಶೇಷಗಳಾದ ಸತ್ಕರ್ಮ ಮತ್ತು ಕಷಾಯ ಪ್ರಾಭೃತ ಎಂಬವು. ವೀರಾಸನ-ಜಿನಸೇನನ ವ್ಯಾಖ್ಯಾನಗಳು ತಮಗಿಂತ ಮುಂಚಿನ ವ್ಯಾಖ್ಯಾನಗಳನ್ನು ಒಳಗೊಂಡಿವೆ. ಮತ್ತು ಅವು ಮೂಲಸೂತ್ರಗಳೊಂದಿಗೆ ಎಷ್ಟೊಂದು ಸಾಂಪ್ರದಾಯಿಕ ವಿವರಗಳು ಸಂಬದ್ಧವಾಗಿದ್ದವೆಂಬುದನ್ನು ತೋರಿಕೊಡುತ್ತವೆ. ಅವು ಭಾರತದ ಮತಗಳಲ್ಲಿ ಜೈನಮತದ ಅಪೂರ್ವ ವೈಶಿಷ್ಟ್ಯವನ್ನು ಎತ್ತಿತೋರಿಸುವ ಕರ್ಮ ಎಂಬ ಗಹನವಾದ ತತ್ತ್ವವನ್ನು ವಿವರವಾಗಿ ಪ್ರತಿಪಾದಿಸುತ್ತವೆ. ಪ್ರತ್ಯಾಗಮದ ಕೃತಿಗಳಲ್ಲಿ ವಟ್ಟಕೇರ ಎಂಬಾತನ ಮೂಲಾಚಾರ ಮತ್ತು ಶಿವಾರ್ಯನ ಆರಾಧನಾ ಎಂಬವು ಆಗಮದೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿವೆ. ಮತ್ತು ಸಂನ್ಯಾಸ ಜೀವನದ ವಿಸ್ತಾರವಾದ ವಿವರಣೆಗಳನ್ನೂ ಅದರ ನಿಯಮ ನಡೆವಳಿಕೆಗಳನ್ನೂ ಕೊಡುತ್ತವೆ. ಪ್ರಾಕೃತ ಭಕ್ತಿಗಳು, ನಿತ್ಯ ಹೇಳುವ ಒಂದು ಬಗೆಯ ಸ್ತೋತ್ರ ಪ್ರಬಂಧಗಳು.
ಅನೇಕ ಗ್ರಂಥಗಳು ಕುಂದಕುಂದನವೆಂದು ಹೇಳಲಾಗಿದೆ, ಆದರೆ ಅವುಗಳಲ್ಲಿ ಕೆಲವು ಮಾತ್ರ ನಮಗುಳಿದು ಬಂದಿವೆ. ಆತನ ಪಂಚಾಸ್ತಿಕಾಯ ಮತ್ತು ಪ್ರವಚನ ಸಾರ ಎಂಬವು ಜೈನರ ಸೃಷ್ಟಿಕ್ರಮ ಮತ್ತು ಭಾಷಾರ್ಥ ನಿರ್ಣಯವನ್ನು ಕ್ರಮಬದ್ದವಾಗಿ ನಿರೂಪಿಸುತ್ತವೆ. ಮತ್ತು ಆತನ ಸಮಯಸಾರ ಧಾರ್ಮಿಕ ಶ್ರದ್ಧೆಯಿಂದ ತುಂಬಿದೆ. ಯತಿವೃಷಭನ ತಿಲೋಯ ಪಣ್ಣಿತ್ತಿ ಎಂಬುದು ಅನೇಕ ವಿಷಯಗಳನ್ನೊಳಗೊಂಡಿರುವ ಆಕರಗ್ರಂಥ. ಸಾಂಪ್ರದಾಯಿಕ ವಿಷಯಗಳ ಆಧಾರದ ಮೇಲೆ ಸಂಕಲಿತವಾದ ಮತ್ತು ರಚಿತವಾದ ಈ ಗ್ರಂಥಗಳೆಲ್ಲವೂ ಕ್ರಿಸ್ತಶಕದ ಆದಿಮ ಶತಮಾನಗಳಿಗೆ ಸೇರಿದವುಗಳೆನ್ನಬಹುದು.
ಪ್ರಾಕೃತ ಸಾಹಿತ್ಯದ ಬಹುಭಾಗ ವ್ಯಾಖ್ಯಾನ, ವಿವರಣಾತ್ಮ ನಿರ್ವಚನ ಉದಾಹೃತ ಕಥಾಪ್ರಸರಣ, ವಿಷಯಗಳ ಕ್ರಮವಿಭಾಗ ಇವುಗಳ ರೂಪದಲ್ಲಿ ಆಗಮದ ಸುತ್ತು ಬೆಳೆದುಕೊಂಡಿದೆ. ಕೆಲವು ಆಗಮ ಪಾಠಗಳ ಮೇಲೆ ನಿರ್ಯುಕ್ತಿಗಳೆಂಬ ಪದ್ಯರೂಪದ ವಾಖ್ಯಾನಗಳಿವೆ. ಇವು ಆಯಾ ವಿಷಯಗಳನ್ನು ಪ್ರಶ್ನೋತ್ತರ ರೂಪದಲ್ಲಿ ವಿವರಿಸುತ್ತವೆ. ಇವುಗಳ ಕರ್ತೃ ಭದ್ರಬಾಹುವೆಂದು ಹೇಳುತ್ತಾರೆ. ಇವು ದೇವದ್ರ್ಧಿಯ ಮಂಡಳಿಗಿಂತ ನಿಸ್ಸಂಶಯವಾಗಿ ಹಿಂದಿನವು. ಅವುಗಳಲ್ಲಿ ಕೆಲವು ತಮ್ಮ ಕ್ರಮಬದ್ಧ ನಿರೂಪಣೆ, ವಿವರಗಳ ನಿಷ್ಕ್ರಷ್ಟತೆ ಮತ್ತು ವಾದಗಳ ಗಟ್ಟಿತನಗಳಿಂದ ಮಹಾಪಂಡಿತರ ಶ್ರದ್ಧಾಪೂರ್ಣ ವ್ಯಾಸಂಗಕ್ಕೆ ತಕ್ಕವಾದವು. ಉದಾಹರಣೆಗೆ, ಜಿನಭದ್ರಕ್ಷಮಾಶ್ರಮಣ (ಕ್ರಿ.ಶ. 609) ಅವಶ್ಯಕ ನಿರ್ಯುಕ್ತಿಯ ಮೇಲೆ ಒಂದು ದೊಡ್ಡ ಭಾಷ್ಯವನ್ನು ಬರೆದ. ಇದರ ಸುತ್ತಲೂ ಸಾಹಿತ್ಯದೊಂದು ಚಿಕ್ಕ ಲೋಕವೆ ಬೆಳೆದುಕೊಂಡಿದೆ. ಕೆಲವು ಕೃತಿಗಳ ಮೇಲೆ ಭಾಷ್ಯ ಮತ್ತು ಚೂರ್ಣೀ ವ್ಯಾಖ್ಯಾನಗಳು ಲಭ್ಯವಾಗಿವೆ. ಭಾಷ್ಯವೆಂಬುದು ಗ್ರಂಥದ ವಿಸ್ತಾರವಾದ ಪ್ರಾಕೃತ ವ್ಯಾಖ್ಯಾನ; ನಿರ್ಯುಕ್ತಿಯ ಪದ್ಯಗಳನ್ನು ಅಳವಡಿಸಿ ಕೆಲವನ್ನು ಪರ್ಯಾಪ್ತಗೊಳಿಸುತ್ತ ಈ ಭಾಷ್ಯ ಬೆಳೆಯುತ್ತದೆ. ಚೂರ್ಣಿಯೋ ದಿಗ್ಬ್ರಮೆ ಹಿಡಿಸುವಂತೆ ಸಂಸ್ಕøತವನ್ನೂ ಪ್ರಾಕೃತವನ್ನೂ ಬೆರೆಸಿರುವ ಗದ್ಯಶೈಲಿಯಲ್ಲಿ ಬರೆದ ಟಿಪ್ಪಣಿ. ಜೀವದಾಸ ಮಹತ್ತರ ತನ್ನ ನಂದೀ ಚೂರ್ಣಿಯನ್ನು ಕ್ರಿ.ಶ. 676ರಲ್ಲಿ ಬರೆದ