ಏಷ್ಯನ್ ಕ್ರೀಡೆಗಳು
ನವದೆಹಲಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ, 1951ರ ಮಾರ್ಚ್ 4 ರಂದು ಬೆಳಗಿದ ಏಷ್ಯನ್ ಕ್ರೀಡಾಜ್ಯೋತಿ, ಐದು ದಶಕಗಳ ನಂತರವೂ ಉಜ್ವಲವಾಗಿ ಬೆಳಗುತ್ತಿದೆ. ಒಲಿಂಪಿಕ್ ಕ್ರೀಡೆಗಳ ಮಾದರಿಯಲ್ಲೇ, ಅಂದು ಆರಂಭವಾದ ಏಷ್ಯನ್ ಕ್ರೀಡೆಗಳು, ನಾಲ್ಕು ವರ್ಷಗಳಿಗೊಮ್ಮೆ, ಏಷ್ಯ ಖಂಡದ ಅತ್ಯುನ್ನತ ಕ್ರೀಡಾಕೂಟವಾಗಿ ನಡೆಯುತ್ತಿದೆ.
ಎರಡನೆಯ ಮಹಾಯುದ್ಧದಲ್ಲಿ ತತ್ತರಿಸಿಹೋಗಿದ್ದ ಏಷ್ಯದ ರಾಷ್ಟ್ರಗಳಲ್ಲಿ ಹೊಸ ಚೇತನ ಮೂಡಿಸುವ, ಆರ್ಥಿಕ ಶಕ್ತಿ ಚಿಗುರಿಸುವ ಕನಸು ಕಂಡವರು ಪಂ. ಜವಾಹರಲಾಲ್ ನೆಹರೂ. ಗುರುದತ್ತ ಸೋಂಧಿ, ಅಂತೋನಿ ಡಿಮೆಲ್ಲೊ, ಪಾಟಿಯಾಲಾದ ಮಹಾರಾಜ ಯದುವೇಂದ್ರ ಸಿಂಹ ಅವರ ಪ್ರಯತ್ನಕ್ಕೆ, ಏಷ್ಯದ ರಾಷ್ಟ್ರಗಳು ಬೆಂಬಲ ಸೂಚಿಸಿದವು. 1949ರಲ್ಲಿ ಏಷ್ಯನ್ ಗೇಮ್ಸ್ ಫೆಡರೇಷನ್ ಅಸ್ತಿತ್ವಕ್ಕೆ ಬರುವುದರೊಂದಿಗೆ ಏಷ್ಯದ ಕ್ರೀಡಾ ಆಂದೋಲನಕ್ಕೆ ಚಾಲನೆ ದೊರೆಯಿತು. ‘ಕ್ರೀಡೆಯನ್ನು ಕ್ರೀಡಾಕೆಚ್ಚಿನಿಂದಲೇ ಆಡಿ’ ಎಂಬ ನೆಹರೂ ಸಂದೇಶವೇ, ಮೊದಲ ಏಷ್ಯನ್ ಕ್ರೀಡೆಗಳ ಧ್ಯೇಯವಾಕ್ಯವಾಗಿತ್ತು.
ಒಲಿಂಪಿಕ್ ಕ್ರೀಡೆಗಳಂತೆ, ಏಷ್ಯನ್ ಕ್ರೀಡೆಗಳನ್ನೂ ರಾಜಕೀಯ ಭಾದಿಸಿದೆ. ಎಂಟನೆಯ ಏಷ್ಯನ್ ಕ್ರೀಡೆಗಳನ್ನು 1982ರಲ್ಲಿ ನಡೆಸುವ ಜವಾಬ್ದಾರಿ ಭಾರತದ ಮೇಲೆ ಬಿದ್ದಿತ್ತು. ಆದರೆ, ಭಾರತದಂಥ ಬಡದೇಶದಲ್ಲಿ, ಏಷ್ಯನ್ ಕ್ರೀಡೆಗಳಿಗೆ ನೂರಾರು ಕೋಟಿ ರೂ. ಖರ್ಚು ಮಾಡುವುದು ವ್ಯರ್ಥ ಎಂಬ ಅಭಿಪ್ರಾಯ ರಾಜಕಾರಣಿಗಳಲ್ಲಿ ಮೂಡಿತ್ತು. ಆದರೆ, 1980ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಇಂದಿರಾ ಗಾಂಧೀ, ತಮ್ಮ ತಂದೆ ಬೆಳಗಿದ್ದ ಕ್ರೀಡಾಜ್ಯೋತಿ ನಂದುವಂತೆ ಮಾಡಲು ಸಿದ್ಧರಿರಲಿಲ್ಲ. ನವದೆಹಲಿಯಲ್ಲಿ ಏಷ್ಯನ್ ಕ್ರೀಡೆಗಳು ಯಶಸ್ವಿಯಾಗಿ ನಡೆದವು. ಅದೇ ವರ್ಷ, ಅಂದರೆ 1982ರಲ್ಲಿ ‘ಏಷ್ಯನ್ ಗೇಮ್ಸ್ ಫೆಡರೇಷನ್’ ಎಂಬುದು ‘ಏಷ್ಯನ್ ಒಲಿಂಪಿಕ್ ಕೌನ್ಸಿಲ್’ ಎಂದು ಬದಲಾಯಿತು.
ಏಷ್ಯನ್ ಕ್ರೀಡೆಗಳಿಗೆ ಚಾಲನೆ ನೀಡಿದ ಭಾರತವೇ ಪದಕಪಟ್ಟಿಯಲ್ಲಿ ಒಮ್ಮೆಯೂ ಅಗ್ರಸ್ಥಾನ ಪಡೆದಿಲ್ಲ. ಮೊದಲ ಏಷ್ಯನ್ ಕ್ರೀಡೆಗಳ (1951) ಪದಕಪಟ್ಟಿಯಲ್ಲಿ ಜಪಾನ್ ಅಗ್ರಸ್ಥಾನ ಗಳಿಸಿದ್ದರೆ, ಭಾರತ 15 ಚಿನ್ನ, 16 ಬೆಳ್ಳಿ, 21 ಕಂಚಿನ ಪದಕಗಳೊಡನೆ ಎರಡನೇ ಸ್ಥಾನ ಗಳಿಸಿತ್ತು.
1962ರಲ್ಲಿ, ಜಕಾರ್ತದಲ್ಲಿ ನಡೆದ ನಾಲ್ಕನೆಯ ಏಷ್ಯನ್ ಕ್ರೀಡೆಗಳಲ್ಲಿ ಭಾರತ 10 ಚಿನ್ನ, 13 ಬೆಳ್ಳಿ, 11 ಕಂಚಿನ ಪದಕಗಳೊಡನೆ ಮೂರನೇ ಸ್ಥಾನ ಗಳಿಸಿತ್ತು. ಅಲ್ಲಿಂದ 2002ರ ಕ್ರೀಡೆಗಳ ವರೆಗೆ ಭಾರತ ಮೊದಲ ಮೂರರಲ್ಲಿ ಸ್ಥಾನ ಪಡೆದೇ ಇಲ್ಲ. ಜಪಾನ್ 1951 ರಿಂದ
1978ರವರೆಗೆ ಅಗ್ರಸ್ಥಾನದಲ್ಲಿತ್ತು. 1974ರ ಟೆಹರಾನ್ ಕ್ರೀಡೆಗಳಿಂದ ಏಷ್ಯನ್ ಕ್ರೀಡಾಕುಟುಂಬದಲ್ಲಿ ಸ್ಥಾನ ಪಡೆದ ಚೀನ, 1982ರಲ್ಲಿ ಜಪಾನನ್ನು ಪದಕಪಟ್ಟಿಯಲ್ಲಿ ಎರಡನೆಯ ಸ್ಥಾನಕ್ಕೆ ದೂಡಿದ ಅನಂತರ, ಇದುವರೆಗೂ ಅಗ್ರಸ್ಥಾನ ಬಿಟ್ಟುಕೊಟ್ಟಿಲ್ಲ.
ಬುಸಾನ್ನಲ್ಲಿ 2002ರಲ್ಲಿ ನಡೆದ 14ನೇ ಏಷ್ಯನ್ ಕ್ರೀಡೆಗಳಲ್ಲೂ ಚೀನಕ್ಕೇ ಅಗ್ರಸ್ಥಾನ. ಚೀನ ಒಟ್ಟು 150 ಚಿನ್ನ, 84 ಬೆಳ್ಳಿ, 74 ಕಂಚಿನ (ಒಟ್ಟು 308) ಪದಕಗಳೊಡನೆ ತನ್ನ ಪ್ರಭುತ್ವವನ್ನು ಮತ್ತೊಮ್ಮೆ ಮೆರೆಯಿತು. ದಕ್ಷಿಣ ಕೊರಿಯ (96+80+84=260) ಎರಡನೆಯ ಸ್ಥಾನ ಪಡೆದರೆ, ಜಪಾನ್ (44+73+72=189) ಮೂರನೆಯ ಸ್ಥಾನ ಗಳಿಸಿತು. ಭಾರತ 11 ಚಿನ್ನ, 12 ರಜತ, 13 ಕಂಚಿನ (ಒಟ್ಟು 36) ಪದಕಗಳೊಡನೆ ಏಳನೆಯ ಸ್ಥಾನ ಗಳಿಸಿತು.
ಏಷ್ಯನ್ ಕ್ರೀಡೆಗಳಲ್ಲಿ ಭಾರತದ ಸಾಧನೆಯ ಬಗ್ಗೆ ಕೇಳಿದರೆ ಮೊದಲು ನೆನಪಾಗುವ ಹೆಸರು ಪಿ.ಟಿ. ಉಷಾ. ಈ ಓಟದ ರಾಣಿಗೆ ‘ಚಿನ್ನದ ರಾಣಿ’ ಎಂದು ಹೆಸರು ಬಂದಿದ್ದು ಏಷ್ಯನ್ ಕ್ರೀಡೆಗಳ ಮೂಲಕವೇ. 1986ರ ಸೋಲ್ ಏಷ್ಯನ್ ಕ್ರೀಡೆಗಳಲ್ಲಿ ನಾಲ್ಕು ಚಿನ್ನ ಮತ್ತು ಒಂದು ರಜತ ಪದಕ ಗೆದ್ದರು. ಉಷಾ ಅನಂತರ ಅಂಥ ಸಾಧನೆಯನ್ನು ತೋರದಿದ್ದರೂ, ಅವರಂತೆ ಏಷ್ಯನ್ ಕ್ರೀಡೆಗಳಲ್ಲಿ ಯಶಸ್ವಿಯಾದ ಅಥ್ಲೀಟ್ ಮತ್ತೊಬ್ಬರಿಲ್ಲ. 14ನೇ ಏಷ್ಯನ್ ಕ್ರೀಡೆಗಳ ಪದಕ ಪಟ್ಟಿ
ದೇಶ | ಚಿನ್ನ | ಬೆಳ್ಳಿ | ಕಂಚು | ಒಟ್ಟು |
---|---|---|---|---|
ಚೀನ | 150 | 84 | 74 | 308 |
ದಕ್ಷಿಣ ಕೊರಿಯ | 96 | 80 | 84 | 260 |
ಜಪಾನ್ | 44 | 73 | 72 | 189 |
ಕಜ಼ಖ್ಸ್ತಾನ್ | 20 | 26 | 30 | 76 |
ಉಜ್ಬೆಕಿಸ್ತಾನ್ | 15 | 12 | 24 | 51 |
ಥೈಲ್ಯಾಂಡ್ | 14 | 19 | 10 | 43 |
ಭಾರತ | 11 | 12 | 13 | 36 |
ಚೈನೀಸ್ ತೈಪೆ | 10 | 17 | 25 | 52 |
ಉತ್ತರ ಕೊರಿಯ | 9 | 11 | 13 | 36 |
ಇರಾನ್ | 8 | 14 | 14 | 36 |
ಸೌದಿ ಅರೇಬಿಯ | 7 | 1 | 1 | 9 |
ಮಲೇಷಿಯ | 6 | 8 | 16 | 30 |
ಸಿಂಗಪುರ | 5 | 2 | 10 | 17 |
ಇಂಡೊನೇಷ್ಯ | 4 | 7 | 12 | 23 |
ವಿಯೆಟ್ನಾಮ್ | 4 | 7 | 7 | 18 |
ಹಾಂಗ್ಕಾಂಗ್ | 4 | 6 | 11 | 21 |
ಖತಾರ್ | 4 | 5 | 8 | 17 |
ಫಿಲಿಪೈನ್ಸ್ | 3 | 7 | 16 | 26 |
ಬಹ್ರೈನ್ | 3 | 2 | 2 | 7 |
ಕುವೈತ್ | 2 | 1 | 5 | 8 |
ಶ್ರೀಲಂಕ | 2 | 1 | 3 | 6 |
ಪಾಕಿಸ್ತಾನ | 1 | 6 | 6 | 13 |
ಕಿರ್ಗಿಸ್ತಾನ್ | 1 | 5 | 6 | 12 |
ಮಯನ್ಮಾರ್ | 1 | 5 | 6 | 12 |
ತುರ್ಕ್ಮೆನಿಸ್ತಾನ್ | 1 | 2 | 1 | 4 |
ಮಂಗೊಲಿಯ | 1 | 1 | 12 | 14 |
ಲೆಬನಾನ್ | 1 | 0 | 0 | 1 |
ತಜ್ಕಿಸ್ತಾನ್ | 0 | 2 | 4 | 6 |
ಮಕಾಉ | 0 | 2 | 2 | 4 |
ಅರಬ್ ಸಂಯುಕ್ತ ಸಂಸ್ಥಾನಗಳು | 0 | 2 | 1 | 3 |
ಬಾಂಗ್ಲಾದೇಶ | 0 | 1 | 0 | 1 |
ನೇಪಾಲ | 0 | 0 | 3 | 3 |
ಸಿರಿಯ | 0 | 0 | 3 | 3 |
ಜೋರ್ಡಾನ್ | 0 | 0 | 2 | 2 |
ಲಾವೋಸ್ | 0 | 0 | 2 | 2 |
ಆಫ್ಘಾನಿಸ್ತಾನ | 0 | 0 | 1 | 1 |
ಬ್ರೂನೈ | 0 | 0 | 1 | 1 |
ಪ್ಯಾಲೆಸ್ಟೈನ್ | 0 | 0 | 1 | 1 |
ಯೆಮೆನ್ | 0 | 0 | 1 | 1 |
ಒಟ್ಟು | 427 | 421 | 502 | 1,350 |
(ಜಿ.ಎಸ್.)
ಹದಿನೈದನೆಯ ಏಷ್ಯನ್ ಕ್ರೀಡೆಗಳು 2006ರಲ್ಲಿ ಖತಾರಿನ ದೋಹಾದಲ್ಲಿ ನಡೆದವು. ಹದಿನಾರನೆಯ ಏಷ್ಯನ್ ಕ್ರೀಡೆಗಳು 2010ರಲ್ಲಿ ಚೀನದ ಗುವಾಂಗ್ಜೋ ಎಂಬಲ್ಲಿ ನಡೆದವು.
ಸ್ಥಾನ | ರಾಷ್ಟ್ರ | ಚಿನ್ನ | ಬೆಳ್ಳಿ | ಕಂಚು | ಒಟ್ಟು |
---|---|---|---|---|---|
1 | ಚೀನ | 1,342 | 900 | 653 | 2,895 |
2 | ದಕ್ಷಿಣ ಕೊರಿಯ | 957 | 980 | 913 | 2,850 |
3 | ಜಪಾನ್ | 696 | 606 | 761 | 2,063 |
4 | ಇರಾನ್ | 159 | 161 | 175 | 495 |
5 | ಕಜ಼ಖ್ಸ್ತಾನ್ | 140 | 141 | 200 | 481 |
6 | ಭಾರತ | 139 | 178 | 285 | 602 |
ಈಚೆಗೆ 2014ರಲ್ಲಿ ಹದಿನೇಳನೆಯ ಏಷ್ಯನ್ ಕ್ರೀಡೆಗಳು ದಕ್ಷಿಣ ಕೊರಿಯಾದ ಇಂಚಿಯಾನ್ ಎಂಬಲ್ಲಿ ನಡೆದವು. 2018ರ ಹದಿನೆಂಟನೆಯ ಏಷ್ಯನ್ ಕ್ರೀಡೆಗಳು ಇಂಡೊನೇಷ್ಯದ ಜಕಾರ್ತದಲ್ಲಿ ನಡೆಯತಕ್ಕದ್ದೆಂದು ತೀರ್ಮಾನವಾಗಿದೆ.
ಕೊರಿಯದ ಇಂಚಿಯಾನಿನಲ್ಲಿ ನಡೆದ 17ನೆಯ ಏಷ್ಯನ್ ಕ್ರೀಡೆಗಳಲ್ಲಿ ವಿಜೇತ ದೇಶಗಳ ಪೈಕಿ ಎಂಟನೆಯ ಸ್ಥಾನವನ್ನು ಪಡೆದಿರುವ ಭಾರತ 11 ಚಿನ್ನದ ಪದಕಗಳನ್ನು, 10 ಬೆಳ್ಳಿ ಪದಕಗಳನ್ನು ಹಾಗೂ 36 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದು ಒಟ್ಟು 57 ಪದಕಗಳನ್ನು ಸಂಪಾದಿಸಿದೆ. ಮೊದಲ ಸ್ಥಾನದಲ್ಲಿರುವ ಚೀನ ಪಡೆದಿರುವ ಪದಕಗಳ ಸಂಖ್ಯೆ ಒಟ್ಟು 342 ಆಗಿದ್ದು ಇದರಲ್ಲಿ ಚಿನ್ನ-151, ಬೆಳ್ಳಿ-108 ಮತ್ತು ಕಂಚು-83 ಸೇರಿವೆ.
ಉಲ್ಲೇಖಗಳು
ಬದಲಾಯಿಸಿ