ಕುವೈತ್ (ಅರೇಬಿಕ್: دولة الكويت) ಏಷ್ಯಾ ಖಂಡದ ಪರ್ಷಿಯನ್ ಕೊಲ್ಲಿಯ ಕರಾವಳಿಯಲ್ಲಿರುವ ಒಂದು ಸ್ವತಂತ್ರ ಅರಬ್ ದೇಶ. ಇದರ ದಕ್ಷಿಣದಲ್ಲಿ ಸೌದಿ ಅರೇಬಿಯ ಮತ್ತು ಉತ್ತರ ಹಾಗು ಪಶ್ಚಿಮದಲ್ಲಿ ಇರಾಕ್ ದೇಶಗಳಿವೆ. ಕುವೈತ್ ಎಂದರೆ ಅರಬಿಕ್ ಭಾಷೆಯಲ್ಲಿ ನೀರಿನ ಹತ್ತಿರ ಕಟ್ಟಿರುವ ಕೋಟೆ ಎಂದು ಅರ್ಥ.[] ಇದರ ಜನಸಂಖ್ಯೆ ಸುಮಾರು ೩.೧ ದಶಲಕ್ಷ. ವಿಸ್ತೀರ್ಣ 5,800 ಚ. ಮೈ.

ಕುವೈತ್ ರಾಜ್ಯ
دولة الكويت
Dawlat al-Kuwayt
Flag of ಕುವೈತ್
Flag
Anthem: Al-Nasheed Al-Watani
Location of ಕುವೈತ್
Capitalಕುವೈತ್ ನಗರ
Largest cityರಾಜಧಾನಿ
Official languagesಅರಬಿಕ್
Demonym(s)Kuwaiti
Governmentಸಾಂವಿಧಾನಿಕ ವಂಶೀಯ ಎಮಿರೇಟ್[]
• ಎಮಿರ್
ಸಬಃ ಅಲ್-ಅಹ್ಮದ್ ಅಲ್-ಜಬರ್ ಅಲ್-ಸಬಃ
ನಾಸ್ಸಿರ್ ಮೊಹಮ್ಮದ್ ಅಲ್-ಅಹ್ಮದ್ ಅಲ್-ಸಬಃ
ಸ್ವಾತಂತ್ರ್ಯ
ಜೂನ್ ೧೯, ೧೯೬೧
• Water (%)
ಅತ್ಯಲ್ಪ
Population
• 2007 estimate
3,399,637[] (n/a)
GDP (PPP)೨೦೦೭ estimate
• Total
$130.239 ಶತಕೋಟಿ (೫೬ನೆಯ)
• Per capita
$50,343 (೩ನೆಯ)
GDP (nominal)೨೦೦೭ estimate
• Per capita
$33,687
HDI (೨೦೦೬)Increase 0.912
Error: Invalid HDI value · ೨೯ನೆಯ
Currencyಕುವೈತಿ ದಿನಾರ್ (KWD)
Time zoneUTC+3 (AST)
• Summer (DST)
UTC+3
Driving sideright
Calling code965
Internet TLD.kw

ಕುವೈತ್ ನಗರ ಇದರ ರಾಜಧಾನಿ ನಗರ.

ಕರಾವಳಿಯ ಬಳಿ ಇರುವ ಅನೇಕ ದ್ವೀಪಗಳು ಇದಕ್ಕೆ ಸೇರಿವೆ. ಇವುಗಳ ಪೈಕಿ ಫೇಲಕಾ ಮುಖ್ಯವಾದದ್ದು ಈ ದ್ವೀಪದಲ್ಲಿ ಕ್ರಿ. ಪೂ. 2500ರಷ್ಟು ಪ್ರಾಚೀನವಾದ ಅವಶೇಷಗಳು ದೊರಕಿವೆ. ಕುವೈತ್ ಮರಳುಗಾಡಿನಿಂದ ಕೂಡಿದ ಪ್ರದೇಶ. ಕುವೈತ್ ನಗರದ ಪಶ್ಚಿಮಕ್ಕೆ 18 ಮೈ. ದೂರದಲ್ಲಿ ಅಲ್ ಜಹ್ರಾ ಎಂದು ಒಂದು ಸಣ್ಣ ಓಯಸಿಸ್ ಇದೆ. ಕುವೈತ್‍ನಲ್ಲಿ ಬೇಸಗೆಯಲ್ಲಿ ಸೆಕೆ ವಿಪರೀತ. ವಾತಾವರಣದಲ್ಲಿ ತೇವಾಂಶ ಬಲು ಕಡಿಮೆ, ಚಳಿಗಾಲದಲ್ಲಿ ವಾಯುಗುಣ ಹಿತಕರವಾಗಿದೆ. ಆದರೆ ಆಗಾಗ್ಗೆ ಬೀಸುವ ಬಿರುಗಾಳಿ ದೂಳಿನಿಂದ ಕೂಡಿರುತ್ತದೆ. ಮಳೆ ಸಾಮಾನ್ಯವಾಗಿ ಬಲು ಕಡಿಮೆ, ಅದೂ ಚಳಿಗಾಲದಲ್ಲಿ.

ಚರಿತ್ರೆ

ಬದಲಾಯಿಸಿ

ಕುವೈತ್ ಎನ್ನುವ ಹೆಸರು ಕುತ್ (ಸಣ್ಣಕೋಟೆ) ಎನ್ನುವುದರಿಂದ ಬಂದಿದೆ ಎಂದು ಪ್ರತೀತಿ. ಅನೇಕ ಬುಡಕಟ್ಟಿನ ಮೂರು ಗುಂಪುಗಳು ತಮ್ಮ ಅಲೆಮಾರಿ ಜೀವನವನ್ನು ತೊರೆದು ಕುವೈತ್‍ನಲ್ಲಿ ನೆಲಸಿದುವು. ಈಗಿನ ಅಸ್-ಸಬಾ ರಾಜವಂಶ ಆರಂಭವಾದ್ದು 1756ರಲ್ಲಿ. ಷೇಖ್ ಸಬಾ ಅಬ್ದುಲ್ ರಹೀಂ ಇದರ ಮೂಲಪುರುಷ. ಕುವೈತನ್ನು ತುರ್ಕಿಗಳು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಹವಣಿಸಿದಾಗ ಆಗ ಆಳುತ್ತಿದ್ದ ಷೇಖ್ 1899ರಲ್ಲಿ ಬ್ರಿಟನಿನೊಡನೆ ಒಂದು ಕೌಲು ಮಾಡಿಕೊಂಡ. ಬರ್ಲಿನ್-ಬಾಗ್ದಾದ್ ರೈಲ್ವೆಯನ್ನು ಅಲ್ಲಿಯ ವರೆಗೂ ವಿಸ್ತರಿಸಬೇಕೆಂಬ ಜರ್ಮನ್ ಅಪೇಕ್ಷೆಯನ್ನು ಆತ ತಳ್ಳಿಹಾಕಿದ. ತುರ್ಕಿಯೊಡನೆ 1914ರಲ್ಲಿ ಯುದ್ಧ ಆರಂಭವಾದಾಗ ಬ್ರಿಟನ್ನು ಕುವೈತನ್ನು ತನ್ನ ರಕ್ಷಣೆಗೆ ಒಳಪಟ್ಟ ಸ್ವತಂತ್ರರಾಜ್ಯವೆಂದು ಸಾರಿತು. ನಜ್ದ್ (ಇಂದಿನ ಸೌದಿ ಅರೇಬಿಯ) ಒಡನೆ ಕುವೈತಿನ ಸಂಬಂಧ ಸೌಹಾರ್ದಯುತವಾಗಿರಲಿಲ್ಲ. ಅದು ವಹಾಬಿಗಳ ಆಕ್ರಮಣಕ್ಕೆ ಒಳಗಾಗಿತ್ತು. ಕುವೈತಿಗೂ ನಜ್ದಿಗೂ ನಡುವೆ 1922ರಲ್ಲಿ ಉಕೇರ್ ಕೌಲು ಏರ್ಪಟ್ಟಿತ್ತು. ಕುವೈತಿನ ಆಗ್ನೇಯಕ್ಕೆ ಸು. 2,200 ಚ.ಮೈ. ನೆಲವನ್ನು ತಟಸ್ಥ ಪ್ರದೇಶವೆಂದು ಸಾರಲಾಯಿತು. ಇದೇ ರೀತಿ 1923 ರಲ್ಲಿ ಇರಾಕ್ ಮತ್ತು ಕುವೈತ್ ನಡುವಣ ಗಡಿಯ ನಿಷ್ಕರ್ಷೆಯೂ ಆಯಿತು. ಆದರೆ ಬ್ರಿಟನಿಗೂ ಕುವೈತಿಗೂ ನಡುವೆ 1899ರಲ್ಲಿ ಆಗಿದ್ದ ಕೌಲನ್ನು ಈ ದೇಶಗಳು ಪರಸ್ಪರ ಒಡಂಬಡಿಕೆಯಿಂದ ವಿಸರ್ಜಿಸಿ ಕುವೈತಿನ ಸಂಪೂರ್ಣ ಸ್ವಾತಂತ್ರ್ಯವನ್ನು ಸಾರಿದಾಗ (1961), ಕುವೈತ್ ಇರಾಕಿನ ಒಂದು ಭಾಗ ಎಂದು ಇರಾಕಿನ ಪ್ರಧಾನಿ ಘೋಷಿಸಿದ. ಕುವೈತಿಗೆ ಆಕ್ರಮಣದ ಅಪಾಯ ಒದಗಿ ಬಂತು. ಕುವೈತಿನ ದೊರೆ ಬ್ರಿಟನಿನ ಸೇನಾ ನೆರವು ಬೇಡಿದ. ಬ್ರಿಟನಿನ ನೆರವಿನ ಆಗಮನದಿಂದ ಇರಾಕಿನ ಕೈಕಟ್ಟಿದಂತಾಯಿತು. ಇರಾಕ್-ಕುವೈತ್ ಸಂಬಂಧ ಕ್ರಮೇಣ ಸುಧಾರಿಸಿತು.

1967ರ ಜೂನ್ 5ರಂದು ಇಸ್ರೇಲ್-ಈಜಿಪ್ಟ್‍ಗಳ ನಡುವೆ ಯುದ್ಧ ಸಂಭವಿಸಿತು. ಜೂನ್ 6ರಂದು ಇದು ಅಮೆರಿಕ ಮತ್ತು ಬ್ರಿಟನ್‍ಗಳಿಗೆ ಎಣ್ಣೆ ಸರಬರಾಜನ್ನು ನಿಲ್ಲಿಸಿತು. 1968ರಲ್ಲಿ ಇರಾನ್ ಮತ್ತು ಸಂಯುಕ್ತ ಅರಬ್ ಗಣರಾಜ್ಯಗಳ ನಡುವೆ ಮಧ್ಯಸ್ಥಿಕೆ ವಹಿಸಿತು. 1969ರ ಏಪ್ರಿಲ್‍ನಲ್ಲಿ ಸೌದಿ ಆರೇಬಿಯದ ದೊರೆ ಫೈಸಲ್ ಕುವೈತಿನ ವಿದೇಶಾಂಗ ಮಂತ್ರಿ ಅರಬ್ ರಾಜ್ಯಗಳ ಕೂಟಕ್ಕೆ ತಮ್ಮ ಬೆಂಬಲ ಸೂಚಿಸಿದ.

ಕುವೈತಿನ ಕೃಷಿ ಬಹಳ ಸೀಮಿತವಾದುದು. ಇದು ಆಹಾರ ಹಣ್ಣು ತರಕಾರಿಗಳ ವಿಚಾರದಲ್ಲಿ ಬಹುಮಟ್ಟಿಗೆ ಪರವಾಲಂಬಿ. ಕೃಷಿ ಉತ್ಪನ್ನದಲ್ಲಿ ಹೆಚ್ಚಳ ಸಾಧ್ಯವಿಲ್ಲದಿರುವುದಕ್ಕೆ ಈ ರಾಷ್ಟ್ರದ ಭೌಗೋಳಿಕ ಪರಿಸ್ಥತಿಯೇ ಕಾರಣ. ಹೆಚ್ಚಾಗಿ ಮರಳು ಕಾಡಿನಿಂದ ಆವೃತವಾಗಿರುವ ಈ ದೇಶದಲ್ಲಿ ಅಂಜೂರ, ಧಾನ್ಯ ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದರೂ ಪ್ರಗತಿ ಗಮನಾರ್ಹವಾಗಿ ನಡೆದಿಲ್ಲ. ಸರ್ಕಾರ 90 ಎಕರೆಗಳ ಪ್ರಾಯೋಗಿಕ ಭೂಮಿಯಲ್ಲಿ ತಾನೇ ಕೃಷಿ ನಡೆಸುತ್ತಿದ್ದು, ಹೊಸ ಹೊಸ ವಿಧಾನಗಳ ಬಗ್ಗೆ ಪ್ರಚಾರಮಾಡುತ್ತಿದೆ. ತನ್ನ ಜಮೀನಿನಲ್ಲಿ ಹೈನು ಉದ್ಯಮವನ್ನು ಸಹ ಸರ್ಕಾರ ಕೈಗೊಂಡಿದೆ. ಇದರಿಂದ ಉತ್ತೇಜಿತರಾಗಿರುವ ಖಾಸಗಿ ಜನರು ಸಹ ಪಶುಪಾಲನೆಯ ಉದ್ಯಮವನ್ನು ಈಚೆಗೆ ಹೆಚ್ಚು ಹೆಚ್ಚಾಗಿ ಕೈಗೊಳ್ಳುತ್ತಿದ್ದಾರೆ ನೀರಿನ ಕೊರತೆಯೇ ಈ ದೇಶದ ಕೃಷಿ ವಿಸ್ತರಣೆಗಿರುವ ದೊಡ್ಡ ಸಮಸ್ಯೆ. ಆದರೆ ಷಾಟ್-ಅಲ್-ಅರಬ್ ನೀರಾವರಿ ಯೋಜನೆಯಿಂದಾಗಿ ನೀರು ದೊರೆಯುವಂತಾದಾಗ ಇಲ್ಲಿಯ ಕೃಷಿ ಉದ್ಯಮ ವಿಸ್ತಾರವಾಗುವ ಸಾಧ್ಯತೆ ಬಹಳ ಇದೆ. ಈ ಯೋಜನೆಯಿಂದಾಗಿ 7 ಕೋಟಿ ಗ್ಯಾಲನ್ ನೀರು ಕೃಷಿ ಹಾಗೂ ತೋಟಗಾರಿಕೆಗೆ ಸರಬರಾಜಾಗುವ ಸಾಧ್ಯತೆ ಇದೆ. ಅಂತರ್ಜಲ ನಿಕ್ಷೇಪಗಳನ್ನು ಪತ್ತೆಹಚ್ಚಲಾಗಿದೆ. ಕೃಷಿ ವಿಸ್ತರಣೆ, ಜಲ ಲಭ್ಯತೆ ಮತ್ತು ಭೂಸಾರಪರೀಕ್ಷೆಗಳಿಗಾಗಿ ಸರ್ಕಾರ ಒಂದು ತೀವ್ರ ಸಮೀಕ್ಷೆ ಕೈಗೊಂಡಿದೆ. ಮತ್ಸ್ಯೋದ್ಯಮಕ್ಕೆ ಪ್ರೋತ್ಸಾಹ ನೀಡುತ್ತಿದೆ.

ಕೈಗಾರಿಕೆಗಳು

ಬದಲಾಯಿಸಿ

ತೈಲಕೈಗಾರಿಕೆಗೆ ಕುವೈತಿನಲ್ಲಿ ಪ್ರಥಮಸ್ಥಾನ. ಇತರ ಉತ್ಪಾದನ ಕೈಗಾರಿಕೆಗಳು ಈ ಅರ್ಥವ್ಯವಸ್ಥೆಯಲ್ಲಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ಬೆಳೆದಿಲ್ಲ. ಕುವೈತಿನಲ್ಲಿ ಉತ್ಪಾದಿತವಾಗುವ ತೈಲದಲ್ಲಿ ಸುಮಾರು 92% ರಷ್ಟು ಬ್ರಿಟಿಷ್-ಅಮೆರಿಕನ್ ತೈಲಸಂಸ್ಥೆಗಳ ಅಧೀನದಲ್ಲಿದೆ. ತೈಲಕ್ಷೇತ್ರದಿಂದ ರಾಷ್ಟ್ರೀಯ ಉತ್ಪನ್ನಕ್ಕೆ ಸೇ. 61ರಷ್ಟು ಕಾಣಿಕೆ ಸಲ್ಲುತ್ತದೆ. ಸರ್ಕಾರದ ಆದಾಯದ ಸೇ. 94ರಷ್ಟು ಬರುವುದು ತೈಲಕ್ಷೇತ್ರದಿಂದ. ತೈಲ ಉತ್ಪಾದನೆ ಮತ್ತು ಅದರ ವಿತರಣೆಯಲ್ಲಿ 7,000 ಜನ ಉದ್ಯೋಗಿಗಳಿದ್ದಾರೆ. ಒಟ್ಟು ಕಾರ್ಮಿಕರಲ್ಲಿ ಸೇ. 3.8ಕ್ಕೆ ಈ ರಂಗ ಉದ್ಯೋಗವನ್ನೊದಗಿಸುತ್ತಿದೆ.

1967ರಲ್ಲಿ ಕುವೈತಿನ ಪರಿಷ್ಕøತ ತೈಲ ಉತ್ಪಾದನೆ 99,13.20.000 ಅಮೆರಿಕನ್ ಬ್ಯಾರೆಲ್‍ಗಳಷ್ಟಿತ್ತು. ಇದು ಪ್ರಪಂಚದ ಒಟ್ಟು ಉತ್ಪಾದನೆಯ ಸೇ. 8 ರಷ್ಟು. ಈ ಉತ್ಪಾದನೆಯಲ್ಲಿ ಸುಮಾರು 93.4 ಕೋಟಿ ಬ್ಯಾರೆಲ್‍ಗಳನ್ನುರಫ್ತುಮಾಡಲಾಯಿತು. ತೈಲಕ್ಷೇತ್ರದಿಂದ 1966-67ರಲ್ಲಿ ಸರ್ಕಾರಕ್ಕೆ 23.19 ಕೋಟಿ ಕುವೈತ್ ದೀನಾರ್‍ಗಳ ವರಮಾನ ಬಂತು. ತೈಲ ಉತ್ಪಾದನೆಯಲ್ಲಿ ಕುವೈತಿನದು ವಿಶ್ವದಲ್ಲಿ ನಾಲ್ಕನೆಯ ಸ್ಥಾನ. ರಫ್ತಿನಲ್ಲಿ ಎರಡನೆಯ ಸ್ಥಾನ. ತೈಲ ಉತ್ಪಾದನ ವೆಚ್ಚ ಸಹ ಈ ದೇಶದಲ್ಲಿ ಬಹಳ ಕಡಿಮೆ.

ತೈಲಕೈಗಾರಿಕೆಯನ್ನುಳಿದು ಇತರ ಕೈಗಾರಿಕೆಗಳು ಕುವೈತಿನಲ್ಲಿ ಹೆಚ್ಚಾಗಿ ಪ್ರಗತಿ ಹೊಂದಿಲ್ಲ. ಕಚ್ಚಾಸಾಮಗ್ರಿಯ ಕೊರತೆ, ನೀರಿನ ಅಭಾವ, ಕಾರ್ಮಿಕರ ವೇತನದ ಹೆಚ್ಚಳ-ಇವು ಮುಖ್ಯ ಕಾರಣಗಳು. ಇತರ ಕೈಗಾರಿಕೆಗಳಲ್ಲಿ ಇಟ್ಟಿಗೆ, ಹೆಂಚು, ಶೀತೋಪಕರಣಗಳು, ಸಣ್ಣ ಎಂಜಿನಿಯರಿಂಗ್ ವಸ್ತುಗಳು, ಸಿಮೆಂಟ್, ಉಪ್ಪು, ಕ್ಲೋರಿನ್ ಮತ್ತು ಅಮೃತಶಿಲೆ-ಇವು ಮುಖ್ಯ. ಕೈಗಾರಿಕಾ ರಂಗದಲ್ಲಿ ಕುವೈತಿನ ಇತ್ತೀಚಿನ ಗಮನಾರ್ಹ ಸಾಧನೆಯೆಂದರೆ, ಅದು 1966ರಲ್ಲಿ ಸ್ಥಾಪಿಸಿದ ಪೆಟ್ರೋಕೆಮಿಕಲ್ ಗುಂಪಿನ ಈ ಬೃಹತ್ ಉದ್ಯಮ. ಈ ಗುಂಪಿನ ಕೈಗಾರಿಕೆಗಳು ಅಮೋನಿಯ, ಯೂರಿಯ, ಸಲ್ಫ್ಯೂರಿಕ್ ಆಮ್ಲ, ಅಮೋನಿಯಂ ಸಲ್ಫೇಟ್ ಉತ್ಪಾದಿಸುತ್ತವೆ. 1967ರಲ್ಲಿ ತೈಲಶುದ್ಧೀಕರಣ ಉದ್ಯಮವೊಂದು ಸ್ಥಾಪಿತವಾಯಿತು. ಕುವೈತ್‍ನಲ್ಲಿ ವಿಶ್ವದಲ್ಲಿಯೇ ದೊಡ್ಡದಾದ ಸಮದ್ರಜಲಬಟ್ಟಿ ಇದೆ. ಹೊಸಕೈಗಾರಿಕೆಗಳಿಗೆ ಉತ್ತೇಜನ ನೀಡಲು ಸರ್ಕಾರ ಬಹುವಾಗಿ ಶ್ರಮಿಸುತ್ತಿದೆ. ಕಟ್ಟಡ ಉದ್ಯಮವೂ ಬೆಳೆಯುತ್ತಿದೆ. ದೋಣಿ ಕಟ್ಟುವುದು ಇನ್ನೊಂದು ಮುಖ್ಯಉದ್ಯಮ.

ಆಡಳಿತ ಮತ್ತು ಸಾಮಾಜಿಕ ಸ್ಥಿತಿ

ಬದಲಾಯಿಸಿ

ಕುವೈತ್ ರಾಜ್ಯದ ಹೆಚ್ಚು ಸಂಖ್ಯೆಯ ಜನ ರಾಜಧಾನಿಯಾದ ಕುವೈತ್‍ನಲ್ಲಿ ವಾಸಿಸುತ್ತಾರೆ. ಇವರಲ್ಲಿ ಅಕ್ಕಪಕ್ಕದ ರಾಜ್ಯಗಳಿಂದ ಬಂದ ಅರಬರೂ ಇರಾನಿಯನರೂ ಪಾಕಿಸ್ತಾನರೂ ಭಾರತದವರೂ ಬ್ರಿಟಿಷ್ ಮತ್ತು ಅಮೆರಿಕನರೂ ಇದ್ದಾರೆ. ಕುವೈತಿನ ಷೇಖನೇ ಆ ದೇಶದ ಪ್ರಧಾನ ಮಂತ್ರಿ. 4 ಮಂದಿ ಚುನಾಯಿತರೂ ಷೇಖರಿಂದ ನೇಮಕವಾದ 10 ಮಂದಿ ಸದಸ್ಯರೂ ಇರುವ ಒಂದು ಮಂತ್ರಿ ಮಂಡಲವಿದೆ. 21 ವರ್ಷ ತುಂಬಿದ ಗಂಡಸರೆಲ್ಲ ಓಟುಮಾಡುವ ಹಕ್ಕನ್ನು ಪಡೆದಿದ್ದಾರೆ. ಅಲ್ಲಿ ಚುನಾಯಿತ ಪ್ರಜಾಪ್ರತಿನಿಧಿ ಸಭೆಯಿದೆ. ಮಂತ್ರಿಮಂಡಲದ ಸಹಾಯಕ್ಕೆ ಸುಮಾರು 4,000 ಸರ್ಕಾರಿ ಅಧಿಕಾರಿಗಳಿದ್ದಾರೆ. ರಾಜ್ಯವನ್ನು ಕುವೈತ್ (ರಾಜಧಾನಿ), ಅಹಮದಿ ಮತ್ತು ಹವಾಲಿ ಎಂಬುದಾಗಿ ಮೂರು ಆಡಳಿತ ಪ್ರಾಂತ್ಯಗಳನ್ನಾಗಿ ವಿಂಗಡಿಸಲಾಗಿದೆ.

ಕುವೈತ್ ಆಯವ್ಯಯದ ಮುಂಗಡಪತ್ರವನ್ನು ಪ್ರಜಾಪ್ರತಿನಿಧಿಸಭೆಯಲ್ಲಿ ಮಂಡಿಸ ಬೇಕು. ಆದರೆ ಆಯವ್ಯಯದ ಮುಂಗಡ ಪತ್ರವನ್ನಾಗಲಿ, ಅಭಿವೃದ್ಧಿ ಕಾರ್ಯಕ್ರಮಗಳನ್ನಾಗಲಿ ಸಾರ್ವಜನಿಕವಾಗಿ ಪ್ರಕಟಪಡಿಸುವುದಿಲ್ಲ. ದೇಶದಲ್ಲಿ ಉಚಿತ ಶಿಕ್ಷಣವೂ ವೈದ್ಯಕೀಯ ಸೌಲಭ್ಯವೂ ಜಾರಿಯಲ್ಲಿವೆ. ರಾಜ್ಯಾದಾಯವನ್ನು ರಸ್ತೆಗಳು, ಬಂದರುಗಳು ಮತ್ತು ಕಟ್ಟಡಗಳ ನಿರ್ಮಾಣಕ್ಕೂ ವಿದ್ಯಾಭ್ಯಾಸ, ವೈದ್ಯಕೀಯ ಸೌಲಭ್ಯ, ನೀರು ಮತ್ತು ವಿದ್ಯುಚ್ಚಕ್ತಿಯನ್ನು ಒದಗಿಸಲೂ ಬಳಸುತ್ತಾರೆ. ಕುವೈತ್‍ನ ನಾಣ್ಯ ಕುವೈತ್ ದೀನಾರ್.

ಕುವೈತ್ ನಗರ ಅತ್ಯಂತ ಆಧುನಿಕವಾದ್ದು. ಅಗಲವಾದ ರಸ್ತೆಗಳು, ಹೊಸ ಮಾರುಕಟ್ಟೆ ಮತ್ತು ದೊಡ್ಡ ಕಟ್ಟಡಗಳಿಂದ ಕೂಡಿದ ಈ ನಗರದ ಬಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಒಳ್ಳೆಯ ಬಂದರು.

ತೈಲಾದಾಯದ ವಿತರಣೆಯ ಮುಖ್ಯ ಮಾಧ್ಯಮ ಕುವೈತ್ ಸರ್ಕಾರ. ಸರ್ಕಾರವೇ ಅತ್ಯಂತ ಹೆಚ್ಚಿನ ಉದ್ಯೋಗಗಳನ್ನು ನೇಮಿಸಿಕೊಂಡಿರುವ ಸಂಸ್ಥೆ. ಉದ್ಯೋಗಸ್ಥರಲ್ಲಿ ಸೇ. 46ರಷ್ಟಕ್ಕೆ ಸರ್ಕಾರ ಉದ್ಯೋಗವನ್ನೊದಗಿಸಿದೆ. ಕುವೈತ್ ಸರ್ಕಾರ ವಿದ್ಯಾಭ್ಯಾಸ ಮತ್ತು ಆರೋಗ್ಯಕ್ಕಾಗಿ ತನ್ನ ಪ್ರಜೆಗಳ ಮೇಲೆ ಮಾಡುತ್ತಿರುವ ತಲಾ ವೆಚ್ಚ ಪ್ರಪಂಚದಲ್ಲೇ ಅತ್ಯಧಿಕವಾದ್ದು ಎಂದು ಅಂದಾಜುಮಾಡಲಾಗಿದೆ. ಇಡೀ ಪಶ್ಚಿಮ ಏಷ್ಯದಲ್ಲಿ ಕುವೈತ್‍ನ ನೌಕರರಿಗೆ ದೊರೆಯುವ ವೇತನ ಗರಿಷ್ಠ ಮಟ್ಟದ್ದು. ತನ್ನ ಕಾರ್ಯಕ್ರಮಗಳ ಪ್ರಗತಿಗಾಗಿ ಕುವೈತ್ ಪಂಚವಾರ್ಷಿಕ ಯೋಜನೆಯೊಂದನ್ನು ರೂಪಿಸಿಕೊಂಡಿದೆ. ವರ್ಷಕ್ಕೆ ಸೇ. 5ರ ಬೆಳೆವಣಿಗೆ ಸಾಧಿಸುವುದು ಯೋಜನೆಯ ಗುರಿ.

ಸಾರಿಗೆ

ಬದಲಾಯಿಸಿ

ರಸ್ತೆಸಾರಿಗೆ, ವಿಮಾನಸಾರಿಗೆ ಮತ್ತು ಜಲಸಾರಿಗೆ ಕುವೈತ್ ಅರ್ಥವ್ಯವಸ್ಥೆಯಲ್ಲಿ ಬಹಳ ಮುಖ್ಯವಾದವು. ರೈಲುಮಾರ್ಗವಿಲ್ಲ. ಪಶ್ಚಿಮ ಏಷ್ಯದ ಬಂದರುಗಳಲ್ಲಿ ಕುವೈತ್‍ಗೆ ಮುಖ್ಯವಾದ್ದು. ಅನೇಕ ಅಂತರರಾಷ್ಟ್ರೀಯ ವಿಮಾನಸಂಸ್ಥೆಗಳು ಕುವೈತ್‍ಗೆ ಸಂಪರ್ಕ ಕಲ್ಪಿಸಿವೆ.

ವಾಣಿಜ್ಯ

ಬದಲಾಯಿಸಿ

ವಿದೇಶೀ ವಾಣಿಜ್ಯರಂಗದಲ್ಲಿ ಕುವೈತ್ ಯಾವ ತೊಡಕನ್ನೂ ಎದುರಿಸುತ್ತಿಲ್ಲ. ತನ್ನ ಆಮದಿಗೆ ಬೇಕಾದ ಹಣಕ್ಕೆ ಯಾವ ಕೊರತೆಯೂ ಇಲ್ಲ. ಆಹಾರ, ಯಂತ್ರಸಾಮಗ್ರಿ ಮತ್ತು ಸಾರಿಗೆ ಸಲಕರಣೆಗಳನ್ನು ಮುಖ್ಯವಾಗಿ ಅಮೆರಿಕ ಸಂಯುಕ್ತ ಸಂಸ್ಥಾನ, ಗ್ರೇಟ್ ಬ್ರಿಟನ್, ಜಪಾನ್ ಮತ್ತು ಜರ್ಮನಿಗಳಿಂದ ಅದು ಆಮದು ಮಾಡಿಕೊಳ್ಳುತ್ತದೆ. ತೈಲ ಇದರ ಮುಖ್ಯ ರಫ್ತುವಸ್ತು.

ಉಲ್ಲೇಖಗಳು

ಬದಲಾಯಿಸಿ

[] [] []

  1. Nominal.
  2. Kuwaiti Citizens approx. one million (1,055,602) and approx. two million (2,345,100) non-nationals (31/12/2007).
  3. Kuwait (History) - the name is a diminutive of an Arabic word meaning fortress built near water
  4. https://www.nationsonline.org/oneworld/kuwait.htm
  5. "ಆರ್ಕೈವ್ ನಕಲು". Archived from the original on 2016-05-21. Retrieved 2018-08-31.
  6. https://www.bbc.co.uk/news/world-middle-east-14644252

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕುವೈತ್&oldid=1241057" ಇಂದ ಪಡೆಯಲ್ಪಟ್ಟಿದೆ