ಶಿವಪ್ಪ ಗುರುಸಿದ್ದಪ್ಪ ಬಾಳೆಕುಂದ್ರಿ

ಉತ್ತರ ಕರ್ನಾಟಕದ ಮಹಾದಾಯಿಯ ಬಗ್ಗೆ ಕೂಡ ಇವರು ಆಲೋಚಿಸಿದ್ದರು.
(ಎಸ್.ಜಿ.ಬಾಳೆಕುಂದ್ರಿ ಇಂದ ಪುನರ್ನಿರ್ದೇಶಿತ)


ಎಸ್. ಜಿ. ಬಾಳೆಕುಂದ್ರಿಯವರು ಕರ್ನಾಟಕದ ಶ್ರೇಷ್ಠ ನೀರಾವರಿ ತಜ್ಞ ಇಂಜನಿಯರರು. ತಮ್ಮ ಬುದ್ದಿಮತ್ತೆ,ದಕ್ಷತೆ, ಪರಿಶ್ರಮ ಹಾಗು ಪ್ರಾಮಾಣಿಕ ಸೇವೆ ಇವುಗಳಿಗಾಗಿ ಬಾಳೆಕುಂದ್ರಿಯವರು ಕರ್ನಾಟಕದಲ್ಲಿ ಎರಡನೆಯ ವಿಶ್ವೇಶ್ವರಯ್ಯ ಎಂದೇ ಖ್ಯಾತರಾಗಿದ್ದಾರೆ.[೧][೨]

ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ನೀರಾವರಿ ತಜ್ಞರಲ್ಲಿ ನೆನಪಿಗೆ ಬರುವ ಒಂದೇ ಒಂದು ಹೆಸರೆಂದರೆ ಸರ್ ಎಂ ವಿಶ್ವೇಶ್ವರಯ್ಯನವರದು. ಆದರೆ ಅವರಷ್ಟೇ ಸಮರ್ಥರಾದ ಇಂಜಿನಿಯರೊಬ್ಬರು ಉತ್ತರ ಕರ್ನಾಟಕದಲ್ಲಿ ಕನ್ನಡಿಗರಿಗಾಗಿ ನೀರಿನ ಹೋರಾಟ ಮಾಡಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ. ಅವರೇ ಎಸ್ ಜಿ ಬಾಳೆಕುಂದ್ರಿ. ಮೇ 5ರಂದು ಅವರ ಜನ್ಮದಿನ ಆಚರಿಸಲಾಯಿತು.[೩]

ಜನನ ಬದಲಾಯಿಸಿ

ಶಿವಪ್ಪ ಬಾಳೆಕುಂದ್ರಿಯವರು ೧೯೨೨ ಮೇ ೫ರಂದು ಬೆಳಗಾವಿಯಲ್ಲಿ ಜನಿಸಿದರು. ಇವರ ತಾಯಿ ಲಕ್ಷ್ಮೀದೇವಿ; ತಂದೆ ಗುರುಸಿದ್ದಪ್ಪ.[೪]

ಶಿಕ್ಷಣ ಬದಲಾಯಿಸಿ

   ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯ ಅಕ್ಕಿಹೊಂಡದ ಮುನಿಸಿಪಾಲಿಟಿ ಕನ್ನಡ ಶಾಲೆಯಲ್ಲಿ ಮುಗಿಸಿ, ಕೊಪ್ಪೀಕರ ಪ್ರೌಢಶಾಲೆಯಲ್ಲಿ ಎರಡು ವರ್ಷ ಕಲಿತು, ತರವಾಯ ಬೆಳಗಾವಿಯ ಸರದಾರ ಹೈಸ್ಕೂಲ್ ಸೇರಿದರು. 

ಲಿಂಗರಾಜ ಕಾಲೇಜಿನಿಂದ ಇಂಟರ ಸಾಯನ್ಸ್ ವಿಷಯದ ಮೇಲೆ ಅಧ್ಯಯನ ನಡೆಸಿ ತೇರ್ಗಡೆಯಾದರು. ಆ ಬಳಿಕ ಪುಣೆಯಲ್ಲಿದ್ದ ಸರಕಾರಿ ಇಂಜನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದು ೧೯೪೪ರಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು.

೧೯೪೭ರಲ್ಲಿ ಎಡಿನ್ಬರೊ ವಿಶ್ವವಿದ್ಯಾಲಯದಿಂದ ಪ್ರಥಮ ಶ್ರೇಣಿಯಲ್ಲಿ ಪದವಿ ಸಂಪಾದಿಸಿಕೊಂಡರು.

ಉದ್ಯೋಗ ಬದಲಾಯಿಸಿ

೧೯೪೫ರಲ್ಲಿ ಆಗಿನ ಮುಂಬಯಿ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜನಿಯರ ಆದರು. ಮುಂಬಯಿ ಸರಕಾರ ಇವರನ್ನು ನೀರಾವರಿ ವಿಷಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಎಡಿನ್ಬರೊ ವಿಶ್ವವಿದ್ಯಾಲಯಕ್ಕೆ ಕಳುಹಿಸಿತು. ಅನಂತರ ಹಾಲಂಡ್, ಸ್ವಿಡನ್, ಮತ್ತು ಇತರ ಕೆಲವು ಬಾಲ್ಟಿಕ್ ರಾಜ್ಯಗಳನ್ನು ಸಂದರ್ಶಿಸಿದರು. ವಿದೇಶದಿಂದ ಹಿಂದಿರುಗಿದ ನಂತರ ಪುಣೆ ವಿಭಾಗದ ನೀರಾವರಿ ಕಾಲುವೆಗಳ ಕೆಲಸವನ್ನು ನಿರ್ವಹಿಸಿದರು. ನಂತರ ನಾಸಿಕ ಬಳಿ ನಿರ್ಮಾಣವಾಗುತ್ತಿದ್ದ ಗಂಗಾ ಆಣೆಕಟ್ಟಿನ ಉಸ್ತುವಾರಿ ಮಾಡಿದರು. ಆ ಬಳಿಕ ಧೂಲಿಯಾ ಆಣೆಕಟ್ಟು ಮತ್ತು ಅಹ್ಮದ ನಗರ ವಿಭಾಗದ ಉಸ್ತುವಾರಿ ನಿರ್ವಹಿಸಿದರು.

೧೯೫೬ರಲ್ಲಿ ರಾಜ್ಯಗಳ ಪುನರ್ವಿಂಗಡಣೆಯ ನಂತರ ಕರ್ನಾಟಕಕ್ಕೆ ಬಂದ ಬಾಳೆಕುಂದ್ರಿಯವರು ಕೆಲಕಾಲ ಉಪಪ್ರಧಾನ ಇಂಜನಿಯರ ಆಗಿ ಸೇವೆ ಸಲ್ಲಿಸಿದರು. ಆ ನಂತರ ಇವರ ಸೇವೆಯನ್ನು ಕೇಂದ್ರ ಸರಕಾರಕ್ಕೆ ಎರವಲು ನೀಡಲಾಯಿತು. ಅಲ್ಲಿ ಇವರು ಭಾರತ ಸರಕಾರದ ಪ್ಲ್ಯಾನಿಂಗ್ ಕಮಿಶನ್ದ “ನೀರಾವರಿ ಮತ್ತು ಚೈತನ್ಯ” ತಂಡದ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು.

ಈ ಸಮಯದಲ್ಲಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿದ್ದ ಅನ್ಯಾಯವನ್ನು ಬಾಳೆಕುಂದ್ರಿಯವರು ಗಮನಿಸಿ ಕರ್ನಾಟಕದ ಲೋಕಸಭಾ ಸದಸ್ಯರ ಗಮನಕ್ಕೆ ತಂದರು. ಇದರಿಂದ ಪ್ರಭಾವಿತರಾದ ಕರ್ನಾಟಕದ ಮುಖ್ಯ ಮಂತ್ರಿ ಶ್ರೀ ಬಿ.ಡಿ.ಜತ್ತಿಯವರು ಬಾಳೆಕುಂದ್ರಿಯವರನ್ನು ರಾಜ್ಯಕ್ಕೆ ಮರಳಿ ಕರೆಯಿಸಿಕೊಂಡರು. ೧೯೫೯ರಲ್ಲಿ ಮರಳಿ ರಾಜ್ಯಕ್ಕೆ ಬಂದ ನಂತರ ಅಂತರರಾಜ್ಯ ನದಿ ವಿವಾದ ವಿಷಯದ ಹೊಣೆ ಹೊತ್ತುಕೊಂಡ ಬಾಳೆಕುಂದ್ರಿಯವರು ಕರ್ನಾಟಕದ ನ್ಯಾಯಬದ್ಧ ಹಕ್ಕಿಗಾಗಿ ಸಮರ್ಥವಾಗಿ ಹೋರಾಡಿದರು.

೧೯೬೪ರಲ್ಲಿ ಮುಖ್ಯ ಇಂಜನಿಯರ ಆಗಿ ಪದೋನ್ನತಿ ಪಡೆದು, ಬೃಹತ್ ನೀರಾವರಿ ಯೋಜನೆಗಳ ಸಹಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ೧೯೬೭ರಿಂದ ೧೯೭೨ರ ವರೆಗೆ ನೀರಾವರಿ ಇಲಾಖೆಯ ಉತ್ತರ ವಿಭಾಗದ ಮುಖ್ಯ ಇಂಜನಿಯರ ಎಂದು ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಬಾಳೆಕುಂದ್ರಿಯವರು ಘಟಪ್ರಭಾ, ಮಲಪ್ರಭಾ ಹಾಗು ಕೃಷ್ಣಾ ನೀರಾವರಿ ಯೋಜನೆ ಹಾಗು ನಿರ್ಮಾಣಗಳಲ್ಲಿ ಮಹತ್ವದ ಪಾತ್ರ ವಹಿಸಿದರು.

೧೯೭೪ರಿಂದ ೧೯೭೬ರ ವರೆಗೆ ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಆಡಳಿತಾಧಿಕಾರಿಯಾಗಿ ಹಾಗು ೧೯೭೬ರಿಂದ ೧೯೭೭ರ ವರೆಗೆ ನೀರಾವರಿ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ೧೯೭೭ ಮೇದಲ್ಲಿ, ಅಂದರೆ ತಮ್ಮ ೫೫ನೆಯ ವಯಸ್ಸಿನಲ್ಲಿ ಸರಕಾರಿ ಸೇವೆಯಿಂದ ನಿವೃತ್ತರಾದರು.

ನಿವೃತ್ತಿಯ ನಂತರವೂ, ತುಂಗಭದ್ರಾ ಯೋಜನೆಯ ಮಾರ್ಪಾಡಿನ ತಜ್ಞ ಸಲಹಾ ಸಮಿತಿಯ ಅಧ್ಯಕ್ಷ, ಬಾಗಲಕೋಟೆ ಪುನರ್ನಿರ್ಮಾಣ ಮತ್ತು ಪುನರ್ವಸತಿ ಪರಿಶೀಲನಾ ಸಮಿತಿ ಅಧ್ಯಕ್ಷ, ಬೃಹತ್ ನೀರಾವರಿ ಯೋಜನೆಗಳ ನಿಯಂತ್ರಣ ಮಂಡಳದ ಅಧ್ಯಕ್ಷ ಕರ್ನಾಟಕದಲ್ಲಿ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾರಂಭಿಸುವ ಕುರಿತು ನೇಮಿಸಿದ ಏಕಸದಸ್ಯ ಸಮಿತಿ ಅಧ್ಯಕ್ಷ ಹೀಗೆ ವಿವಿಧ ಸಾಮರ್ಥ್ಯಗಳಲ್ಲಿ ಕರ್ನಾಟಕಕ್ಕೆ ಸೇವೆ ಸಲ್ಲಿಸಿದರು. (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ೧-೪-೧೯೯೮ರಂದು ಸಾಕಾರಗೊಂಡಿತು).

ದುರಂತ ಮರಣ ಬದಲಾಯಿಸಿ

ದಿನಾಂಕ ೪-೧-೧೯೯೩ರಂದು ಸಂಜೆ ಬಾಳೆಕುಂದ್ರಿಯವರು ವಾಯುವಿಹಾರಕ್ಕೆ ಹೋದ ಸಮಯದಲ್ಲಿ ಬೇಜವಾಬ್ದಾರಿ ಆಟೊ ಚಾಲಕನೊಬ್ಬ ಡಿಕ್ಕಿ ಹೊಡೆದ ಪರಿಣಾಮವಾಗಿ ಪ್ರಜ್ಞಾಹೀನ ಅವಸ್ಥೆಯಲ್ಲಿ ಅಸ್ಪತ್ರೆಗೆ ಸೇರಿಸಲ್ಪಟ್ಟರು. ೧೯೯೩ ಜನೆವರಿ ೮ರಂದು ಅದೇ ಅವಸ್ಥೆಯಲ್ಲಿಯೆ ಬಾಳೆಕುಂದ್ರಿಯವರು ಕೊನೆಯುಸಿರೆಳೆದರು.

ಶಿವಕಮಲ ಟ್ರಸ್ಟ್ ಬದಲಾಯಿಸಿ

ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ, ವಿಶೇಷತಃ ತಾಂತ್ರಿಕ ಶಿಕ್ಷಣದಲ್ಲಿ ಧನಸಹಾಯ ಮಾಡಲು ಒಂದು ಟ್ರಸ್ಟ ಅನ್ನು ರೂಪಿಸುವದು ಶ್ರೀ ಬಾಳೆಕುಂದ್ರಿ ಹಾಗು ಶ್ರೀಮತಿ ಬಾಳೆಕುಂದ್ರಿಯವರ ಕನಸಾಗಿತ್ತು.

ಶ್ರೀ ಬಾಳೆಕುಂದ್ರಿಯವರ ನಿಧನದ ನಂತರ ಶ್ರೀಮತಿ ಕಮಲಾ ಬಾಳೆಕುಂದ್ರಿಯವರು “ ಶಿವಕಮಲ ಟ್ರಸ್ಟ್ ” ಸ್ಥಾಪಿಸುವ ಮೂಲಕ ತಮ್ಮೀರ್ವರ ಕನಸನ್ನು ನನಸಾಗಿಸಿದರು.

ಸನ್ಮಾನ ಬದಲಾಯಿಸಿ

ತಮ್ಮ ಪ್ರತಿಭೆ, ದಕ್ಷತೆ ಹಾಗು ಸಚ್ಚಾರಿತ್ರ್ಯದಿಂದ ಬಾಳೆಕುಂದ್ರಿಯವರು ಕರ್ನಾಟಕದ ನೀರಾವರಿ ಯೋಜನೆಗಳಿಗೆ ಮಹತ್ವಪೂರ್ಣ ಕಾಣಿಕೆ ನೀಡಿದ್ದಾರೆ ಹಾಗು ಕರ್ನಾಟಕ ನೀರಾವರಿ ಇಲಾಖೆಯಲ್ಲಿ ಎರಡನೆಯ ವಿಶ್ವೇಶ್ವರಯ್ಯ ಎಂದು ಹೆಸರಾಗಿದ್ದಾರೆ.

ಮಲಪ್ರಭಾ ಎಡದಂಡೆ ಕಾಲುವೆಗೆ ಬಾಳೆಕುಂದ್ರಿ ಕಾಲುವೆ ಎಂದು ಹೆಸರಿಟ್ಟು ಸರಕಾರ ಇವರನ್ನು ಗೌರವಿಸಿದೆ.

೧೯೮೭ರಲ್ಲಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಯಿತು.

೧೯೯೮ರಲ್ಲಿ ಬೆಂಗಳೂರಿನ ಇನ್ಸ್ಟಿಟ್ಯೂಶನ್ ಆಫ್ ಇಂಜನಿಯರ್ಸ್ ಸಂಸ್ಥೆಯ ಎದುರಿನ ವೃತ್ತಕ್ಕೆ ಬಾಳೆಕುಂದಿ ವೃತ್ತ ಎಂದು ನಾಮಕರಣ ಮಾಡಲಾಯಿತು.

೧೯೯೯ರಲ್ಲಿ ಘಟಪ್ರಭಾ ಜಲಾಶಯದಲ್ಲಿ ಬಾಳೆಕುಂದ್ರಿಯವರ ಪ್ರತಿಮೆಯನ್ನು ಅನಾವರಣ ಮಾಡಲಾಯಿತು.

೨೦೦೪ರಲ್ಲಿ ಧಾರವಾಡಇನ್ಸ್ಟಿಟ್ಯೂಶನ್ ಆಫ್ ಇಂಜನಿಯರ್ಸ್ ಸಂಸ್ಥೆಯ ಮುಂದಿನ ರಸ್ತೆಗೆ ಎಸ್.ಜಿ.ಬಾಳೆಕುಂದ್ರಿ ಮಾರ್ಗ ಎಂದು ಹೆಸರಿಡಲಾಯಿತು.

ಕರ್ನಾಟಕ ಸರಕಾರವು ೨೦೦೧ರಿಂದ ಪ್ರತಿ ವರ್ಷ ನೀರಾವರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಇಲಾಖೆಯ ಇಂಜನಿಯರರಿಗೆ ಬಾಳೆಕುಂದ್ರಿಯವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದೆ.

ಮೇ ೫, ೨೦೦೬ರಂದು ಅಂದರೆ ಬಾಳೆಕುಂದ್ರಿಯವರ ೮೫ನೆಯ ಜನ್ಮದಿನದಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಆಣೆಕಟ್ಟಿನ ವೃತ್ತದಲ್ಲಿ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.

ಉಲ್ಲೇಖಗಳು ಬದಲಾಯಿಸಿ

  1. "ಎರಡನೇ ವಿಶ್ವೇಶ್ವರಯ್ಯ : ಎಸ್.ಜಿ.ಬಾಳೆಕುಂದ್ರಿ". One India Kannada (in Kannada). 11 May 2010. Retrieved 22 November 2013.{{cite news}}: CS1 maint: unrecognized language (link)
  2. Second Visweswarayya
  3. ಎರಡನೇ ವಿಶ್ವೇಶ್ವರಯ್ಯ : ಎಸ್.ಜಿ.ಬಾಳೆಕುಂದ್ರಿ
  4. "CM announces award in Balekundri's name - Newindpress.com". Archived from the original on 2007-09-29. Retrieved 2017-09-12.