ಪಶ್ಚಿಮ ಘಟ್ಟಗಳ ಮಡಿಲಲ್ಲಿ, ಭದ್ರಾ ನದಿಯ ಹರಿಯುವ ಹೊರನಾಡು ಒಂದುಸುಂದರ ಸ್ಥಳ. ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಹೊರನಾಡಿನಲ್ಲಿರುವ ಅನ್ನಪೂರ್ಣೇಶ್ವರಿ ದೇವಾಲಯದಿಂದಾಗಿ, ಇಂದು ಒಂದು ಪ್ರೇಕ್ಷಣೀಯ ಸ್ಥಳವಾಗಿ ಮತ್ತು ಬಹು ಜನ ಪ್ರವಾಸಿಗರು ಬರುವ ಧಾರ್ಮಿಕ ಸ್ಥಳವಾಗಿ ಹೆಸರುವಾಸಿಯಾಗಿದ್ದರೂ, ಮೂಲತ: ಇದು ಒಂದು ಚಂದದ ತಾಣ. ಇಲ್ಲಿ ಪ್ರಕೃತಿ ಸಂಪತ್ತು ಕಾಲು ಮುರಿದು ಬಿದ್ದಿದೆ ಎಂದರೆ ಅದು ಕ್ಲೀಶೆ ಆದೀತು. ಒಂದು ಕಡೆ ಭದ್ರಾನದಿ , ಇನ್ನೊಂದೆಡೆ ಎತ್ತರವಾದ ಬೆಟ್ಟಗಳು, ಆ ಬೆಟ್ಟದ ಕಿಬ್ಬದಿಗಳಲ್ಲಿ ಅಡಿಕೆ ತೋಟಗಳು, ಅಲ್ಲಲ್ಲಿ ಹಸಿರು ತುಂಬಿದ ಗದ್ದೆಗಳು, ಸುತ್ತಲೂ ವಿವಿಧ ರೀತಿಯ ಮರಗಳು, ಅವುಗಳಲ್ಲಿ ಉಲಿಯುತ್ತಿರುವ ಹಕ್ಕಿಗಳು - ಈ ಚಿತ್ರಣವು ಹೊರನಾಡನ್ನು ಸುಂದರ ಸ್ಥಳವನ್ನಾಗಿ ಮಾಡಿದೆ. ಈ ಬೆಟ್ಟ ಗುಡ್ಡಗಳ ಮಧ್ಯೆ ಇರುವ ದಿಬ್ಬದ ಮೇಲಿರುವ ಅನ್ನಪೂರ್ಣೇಶ್ವರಿ ದೇವಾಲಯವು ಹಸಿರಿನ ಮಧ್ಯೆ ಶೋಭಿಸುತ್ತಿದೆ ಎನ್ನಬಹುದು.

ಹೊರನಾಡು
ಹೊರನಾಡು ನಗರದ ಪಕ್ಷಿನೋಟ
ಹೊರನಾಡು ನಗರದ ಪಕ್ಷಿನೋಟ
ಹೊರನಾಡಿನಲ್ಲಿರುವ ಅನ್ನಪೂರ್ಣೇಶ್ವರಿ ದೇವಸ್ಥಾನದ ಮಹಾದ್ವಾರ

ಹೊರನಾಡು
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಚಿಕ್ಕಮಗಳೂರು
ನಿರ್ದೇಶಾಂಕಗಳು 13.2705° N 75.3414° E
ವಿಸ್ತಾರ {{{area_total}}} km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - {{{population_density}}}/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 577 181
 - +08269
 - 

ಇತಿಹಾಸ

ಬದಲಾಯಿಸಿ

ಲಿಖಿತ ಇತಿಹಾಸವನ್ನು ಮಾತ್ರ ಗಮನಿಸಿದರೆ, ಹೊರನಾಡಿಗೆ ಅಂತಹ ಪುರಾತನ ಲಿಖಿತ ಇತಿಹಾಸ ಇರುವಂತೆ ಕಾಣದು. ಕೆಲವು ನೂರು ವರ್ಷಗಳಿಂದ ಈ ಸ್ಥಳದಲ್ಲಿ ದೇವಾಲಯವಿದ್ದಂತೆ ಕಂಡುಬರುತ್ತದೆ. ಭದ್ರಾ ನದಿಯ ಒಳ ಭಾಗದಲ್ಲಿರುವುದರಿಂದ, ೨೦ ನೆಯ ಶತಮಾನದ ಕೊನೆಯ ದಶಕಗಳ ತನಕವೂ ಇಲ್ಲಿಗೆ ಬರುವುದು ತುಂಬಾ ಕಷ್ಟದ ದಾರಿಯಾಗಿತ್ತು. ಮತ್ತೊಂದೆಡೆ ಪಶ್ಚಿಮಘಟ್ಟದ ಪರ್ವತಗಳು ಕೋಟೆಯಂತೆ ಈ ಪ್ರದೇಶವನ್ನು ಸುತ್ತುವರಿದಿವೆ. ಆದರೆ, ನವ ಶಿಲಾಯುಗದ ಕಾಲದಿಂದ ಇಲ್ಲಿ ಜನವಸತಿ ಇದ್ದ ಸೂಚನೆಗಳಿವೆ. ಈ ಸುತ್ತಲಿನ ಘಟ್ಟ ಪ್ರದೇಶಗಳಲ್ಲಿ ನಿಲುವುಗಲ್ಲುಗಳು ಮತ್ತು ಪುರಾತನ ಜನವಸತಿಯ ಕುರುಹುಗಳು ಕಂಡುಬಂದಿವೆ. ಸನಿಹದ ತುಂಗಾ ನದಿಯಲ್ಲಿರುವ ಭೀಮನ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ಕಲ್ಲುಗಳಿಂದಾಗಿ, ಇಲ್ಲಿನ ಇತಿಹಾಸವನ್ನು ಕನಿಷ್ಟ ೨೫೦೦ ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಬಹುದು. ಆದರೂ, ಆ ರೀತಿ ಖಚಿತವಾಗಿ ಹೇಳಲು, ಹೆಚ್ಚಿನ ಸಂಶೋಧನೆಯ ಅಗತ್ಯವಿದೆ ಎನ್ನಬಹುದು.

ಪರಿಸರ ವೀಕ್ಷಣೆಗೆ ಅವಕಾಶಗಳು

ಬದಲಾಯಿಸಿ

ಇಲ್ಲಿ ಪಕ್ಷಿ ವೀಕ್ಷಣೆಗೆ ವಿಪುಲ ಅವಕಾಶಗಳಿವೆ. ಪಶ್ಚಿಮ ಘಟ್ಟಗಳಲ್ಲಿ ಕಾಣಬರುವ ಅಪರೂಪದ ಪಕ್ಷಿಗಳನ್ನು ವೀಕ್ಷಿಸಲು ಮತ್ತು ಅಧ್ಯಯನ ನಡೆಸಲು ಇಲ್ಲಿ ಅವಕಾಶ ಉಂಟು. ದಟ್ಟವಾದ ಕಾಡುಗಳಿಗಿಂತ,ತೋಟ, ಬಯಲು ಮತ್ತು ಎತ್ತರವಾದ ತೆರೆದ ಪ್ರದೇಶಗಳಲ್ಲಿ ಪಕ್ಷಿಗಳನ್ನು ನೋಡುವುದು ಮತ್ತು ಗುರುತಿಸುವುದು ಸುಲಭ. ಈ ಸುತ್ತಲೂ ತುಂಬಾ ಕಾಡು ಪ್ರದೇಶ ಮತ್ತು ಎತ್ತರವಾದ ಬೆಟ್ಟಗಳು ಇರುವುದು ನಿಜವಾದರೂ, ಕಾಡು ಪ್ರಾಣಿಗಳನ್ನು ನೋಡುವುದು ಇಲ್ಲಿ ಸ್ವಲ್ಪ ಕಷ್ಟವೆಂದೇ ಹೇಳಬಹುದು. ಸುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಹುಲಿ, ಕಾಡೆಮ್ಮೆ, ಜಿಂಕೆ ಮೊದಲಾದ ಪ್ರಾಣಿಗಳು ಇರುವುದು ಸಹಜವಾದರೂ, ಜನರ ಕಣ್ಣಿಗೆ ಅವು ಬೀಳುವುದಿಲ್ಲ ಮತ್ತು ಅವುಗಳನ್ನು ವೀಕ್ಷಿಸಲು ವ್ಯವಸ್ಥೆ ಇಲ್ಲಿ ಇಲ್ಲ.

ಅನ್ನಪೂರ್ಣೇಶ್ವರಿ ದೇವಾಲಯ

ಬದಲಾಯಿಸಿ

ಹೊರನಾಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿದೆ. ಹೊರನಾಡಿನಲ್ಲಿರುವ ಅನ್ನಪೂರ್ಣೇಶ್ವರಿ ದೇವಾಲಯವು ಈಗ ಕರ್ನಾಟಕದಾದ್ಯಂತ ಹೆಸರು ಪಡೆದಿದೆ.ಇದಕ್ಕೆ ಮುಖ್ಯಕಾರಣವೆಂದರೆ, ೧೯೮೦-೧೯೯೦ ರ ದಶಕದಲ್ಲಿ ವಾಹನಗಳು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಅನುಕೂಲವಾದದ್ದರಿಂದ, ಶೃಂಗೇರಿಗೆ ಬರುವ ಪ್ರವಾಸಿಗರು ಅಲ್ಲಿಂದ ೮೦ ಕಿ.ಮೀ.ದೂರ ಇರುವ ಹೊರನಾಡಿಗೂ ಬರತೊಡಗಿದರು. . ಅದಕ್ಕೂ ಹಿಂದೆ, ಇಲ್ಲಿನ ಅನ್ನಪೂರ್ಣೇಶ್ವರಿ ದೇವಾಲಯದ ವೈಶಿಷ್ಟ್ಯವೆಂದರೆ, ಯಾವುದೇ ಸಮಯದಲ್ಲಿ ಭೇಟಿ ಕೊಡುವ ಜನರಿಗೂ ಇಲ್ಲಿ ಊಟ ಅಥವಾ ಉಪಹಾರವನ್ನು ನೀಡುವ ಪದ್ದತಿ ಇತ್ತು - ರಾತ್ರಿ ಬಂದವರಿಗೂ ತಿನಿಸು ಅಥವಾ ಊಟವನ್ನು ಕೊಡುವ ಪದ್ದತಿ ಇಲ್ಲಿತ್ತು. ಕ್ರಮೇಣ ಇಲ್ಲಿಗೆ ಭೇಟಿ ನೀಡುವ ಜನರ ಸಂಖ್ಯೆ ಜಾಸ್ತಿಯಾದಂತೆಲ್ಲ, ವಸತಿ ವ್ಯವಸ್ಥೆ ಮತ್ತಿತರ ವ್ಯವಸ್ಥೆಗಳ ಅನುಕೂಲಗಳು ಹೆಚ್ಚಾದವು ಮತ್ತು ಅಂಗಡಿ ಮುಂಗಟ್ಟುಗಳೂ ತಲೆ ಎತ್ತಿದವು.ಇಲ್ಲಿನ ದೇವಾಲಯದ ಆಳೆತ್ತರದ ಅನ್ನಪೂರ್ಣೇಶ್ವರಿ ವಿಗ್ರಹವು ಆಕರ್ಷಕವಾಗಿದೆ. ವರ್ಷದ ಎಲ್ಲಾ ಕಾಲಗಳಲ್ಲೂ ಇಲ್ಲಿಗೆ ಭೇಟಿ ನೀಡಬಹುದಾದರೂ, ಮಳೆಗಾಲದ ಮೂರು ತಿಂಗಳಿನಲ್ಲಿ ಮಳೆ ವಿಪರೀತವಿರುವುದರಿಂದ, ಸ್ವಲ್ಪ ಅನಾನುಕೂಲವಾಗಬಹುದು.

(ಹೆಚ್ಚಿನ ಮಾಹಿತಿಗೆ ಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡು ನೋಡಿರಿ

ಸಮೀಪದ ಇತರ ಪ್ರೇಕ್ಷಣೀಯ ಸ್ಥಳಗಳು

ಬದಲಾಯಿಸಿ
"https://kn.wikipedia.org/w/index.php?title=ಹೊರನಾಡು&oldid=1051917" ಇಂದ ಪಡೆಯಲ್ಪಟ್ಟಿದೆ