ಹುಲಿ ಪರಿಯೋಜನೆಯು ಭಾರತದ ರಾಷ್ಟ್ರೀಯ ಮೃಗವಾದ ಹುಲಿಯ ಸಂರಕ್ಷಣೆಗೆಂದು 1972ರಲ್ಲಿ ರೂಪಿತವಾಗಿ 1973 ಏಪ್ರಿಲ್ 1ರಂದು ಇಂದಿನ ಉತ್ತರಾಖಂಡದ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಜಾರಿಗೆ ಬಂದ ಯೋಜನೆ.[] ಆಹಾರ ಸರಪಳಿಯ ಬಹುಮುಖ್ಯ ಕೊಂಡಿಯೂ ಜೀವವಿಕಾಸದ ಹಾದಿಯಲ್ಲಿ ನಿರ್ದಿಷ್ಟ ಕಾರಣಗಳಿಂದ ಅವತರಿಸಿದ ಹುಲಿಯ ಸಂಖ್ಯೆ ಕಳವಳಕಾರಿ ಹಂತ ತಲುಪಿದ್ದನ್ನು 1969ರಲ್ಲಿ ದೆಹಲಿಯಲ್ಲಿ ನಡೆದ ಐಯುಸಿಎನ್ ಸಭೆಯಲ್ಲಿ ಗುರುತಿಸಿ, ಇದಕ್ಕಾಗಿ ಒಂದು ಯೋಜನೆ ತಯಾರಿಸಬೇಕೆಂದು ತೀರ್ಮಾನಿಸಲಾಯಿತು. ಅದರ ಪರಿಣಾಮವೇ ಹುಲಿ ಪರಿಯೋಜನೆ. 1970ರಲ್ಲಿ ಹುಲಿ ಬೇಟೆಯ ಮೇಲೆ ನಿರ್ಬಂಧ ಹೇರಲಾಯಿತಾದರೂ ಇದು ಪರಿಣಾಮಕಾರಿಯಾಗಿ ಜಾರಿಯಾದದ್ದು 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಜಾರಿಗೆ ಬಂದ ಅನಂತರವೇ.

೨೦೦೬ರಲ್ಲಿ ಹುಲಿ ಗಣತಿಯನ್ನು ನಡೆಸಲಾಯಿತು. ಈ ಸಮೀಕ್ಷೆಗಳ ಫಲಿತಾಂಶವನ್ನು ಆಧರಿಸಿ, ಒಟ್ಟು ಹುಲಿ ಸಂಖ್ಯೆಯು ೧,೪೧೧ ಎಂದು ಮತ್ತು ೧.೫ ವರ್ಷ ವಯಸ್ಸಿಗಿಂತ ಹೆಚ್ಚಿನ ಹುಲಿಗಳು ೧,೧೬೫ ರಿಂದ ೧,೬೫೭ವರೆಗೆ ವಯಸ್ಕ ಹಾಗೂ ಉಪ ವಯಸ್ಕ ಹುಲಿಗಳಿವೆ ಎಂದು ಅಂದಾಜು ಮಾಡಲಾಯಿತು.[] ಈ ಯೋಜನೆಯ ಕಾರಣದಿಂದ, ೨೦೧೮ರ ವೇಳೆಗೆ ಹುಲಿಗಳ ಸಂಖ್ಯೆ ೨,೬೦೩ - ೩,೩೪೬ ಕ್ಕೆ ಹೆಚ್ಚಿತು ಎಂದು ಸಾಧಿಸಲಾಯಿತು.[] ಹುಲಿ ಪರಿಯೋಜನೆಯ ಯಶಸ್ಸಿಗೆ ಪ್ರಮಾಣವಾಗಿ, ರಾಜಸ್ಥಾನದ ಢೋಲ್‍ಪುರ್-ಕರೌಲಿಯಲ್ಲಿ ಭಾರತದ ೫೫ನೇ ಹುಲಿ ಮೀಸಲು ಪ್ರದೇಶವನ್ನು ಘೋಷಿಸಲಾಯಿತು. ಇದು ಆ ರಾಜ್ಯದ ಐದನೇ ಹುಲಿ ಮೀಸಲು ಪ್ರದೇಶವಾಯಿತು.[]

ನಿರ್ವಹಣೆ ಮತ್ತು ವಿಧಾನಗಳು

ಬದಲಾಯಿಸಿ

ಈ ಯೋಜನೆಯನ್ನು “ಕೇಂದ್ರ ವಲಯ - ಬೆಂಬಲ ವಲಯ” (ಕೋರ್ - ಬಫರ್) ಪರಿಕಲ್ಪನೆಯಿಂದ ಜಾರಿಗೊಳಿಸಲಾಗಿದೆ. ಅಂದರೆ ಕಾಡಿನ ಕೇಂದ್ರ ಭಾಗವನ್ನು ದೃಷ್ಟಿಯಲ್ಲಿಟ್ಟುಕೊಳ್ಳಲಾಗುವುದು. ಬೆಂಬಲ ವಲಯವೆಂದರೆ, ಕೇಂದ್ರ ಭಾಗದ ಸುತ್ತಣ ಕಾಡು. (ಇದು ಸುರಕ್ಷಿತವಾಗಿದ್ದಷ್ಟೂ ಕೇಂದ್ರ ಭಾಗ ಇನ್ನೂ ಹೆಚ್ಚು ಸುರಕ್ಷಿತವಾಗಿರುತ್ತದೆ) ಇಲ್ಲಿನ ಕಾರ್ಯತಂತ್ರವೆಂದರೆ:

  1. ಕಾಡಿನ ಕೇಂದ್ರ ಭಾಗವನ್ನು ಎಲ್ಲ ಮಾನವ ಚಟುವಟಿಕೆಯಿಂದ ದೂರ ಇಡುವುದು, ಬೆಂಬಲ ವಲಯವನ್ನು ಸಂರಕ್ಷಣಾ ದೃಷ್ಟಿಯಿಂದ ಮಾತ್ರ ಅಭಿವೃದ್ಧಿಪಡಿಸುವುದು.
  2. ಈ ಕಾಡುಗಳಲ್ಲಿ ಮಾನವನ ಹಸ್ತಕ್ಷೇಪದಿಂದಾದ ಬದಲಾವಣೆಗಳನ್ನು ಮಾತ್ರ ಸರಿಪಡಿಸಿ, ಉಳಿದವನ್ನು ಪ್ರಕೃತಿಗೆ ಬಿಡುವುದು, ಹಾಗೂ
  3. ಇಲ್ಲಿನ ಪ್ರಾಣಿ ಹಾಗೂ ಸಸ್ಯ ಪ್ರಪಂಚದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ತೀವ್ರ ನಿಗಾ ಇಡುವುದು.

ಮೊದಲಿಗೆ ಒಂಬತ್ತು ರಾಷ್ಟ್ರೀಯ ಉದ್ಯಾನಗಳಲ್ಲಿ ಜಾರಿಗೆ ಬಂದ ಈ ಯೋಜನೆ, ಇಂದು 27ಕ್ಕೂ ಹೆಚ್ಚು ರಾಷ್ಟ್ರೀಯ ಉದ್ಯಾನಗಳಲ್ಲಿ ಜಾರಿಯಲ್ಲಿದೆ. 1980ರ ವರೆಗೆ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿತ್ತು. ಅನಂತರ ರಾಜ್ಯ ಸರ್ಕಾರವೂ ಇದರಲ್ಲಿ ಪಾಲುದಾರಿಕೆಯನ್ನು ಹೊಂದಿ ಹುಲಿ ಸಂರಕ್ಷಣಾ ಕಾರ್ಯದಲ್ಲಿ ಮಹತ್ವದ ಪಾತ್ರವಹಿಸಿತು. ಸರ್ಕಾರೇತರ ಸಂಸ್ಥೆಯಾದ ವಿಶ್ವ ವನ್ಯಜೀವಿ ನಿಧಿ ಹತ್ತು ಲಕ್ಷ ಅಮೇರಿಕ ಡಾಲರ್ ಮೌಲ್ಯದ ಉಪಕರಣ, ಸಾಹಿತ್ಯ ಮತ್ತು ಪರಿಣತಿಯನ್ನು ಒದಗಿಸಿದ್ದು ಒಂದು ಮುಖ್ಯ ಅಂಶ.

ಹುಲಿ, ಕಾಡಿನ ಆರೋಗ್ಯದ ದ್ಯೋತಕ. ಹುಲಿಯನ್ನು ಸಂರಕ್ಷಿಸುವುದು ಎಂದರೆ ಅದರ ಆಹಾರವಾದ ಸಸ್ಯಾಹಾರಿ ಪ್ರಾಣಿಗಳನ್ನೂ ಅವುಗಳಿಗಾಗಿ ಕಾಡಿನ ಸಸ್ಯವರ್ಗವನ್ನು ಸಂರಕ್ಷಿಸುವುದು ಎಂದರ್ಥ. ಇಂತಹ ಒಂದು ಪರಿಸರ ಎಲ್ಲ ಜೀವಿಗಳಿಗೂ ಆಶ್ರಯತಾಣವಾಗುತ್ತದೆ. ಹೀಗಾಗಿ, ಹುಲಿ ಪರಿಯೋಜನೆ ಜೀವಿವೈವಿಧ್ಯದ ಸಂರಕ್ಷಣೆಗೆ ಅಗತ್ಯ ಬುನಾದಿಯನ್ನು ಹಾಕಿಕೊಟ್ಟಿತು. ಹಲವಾರು ಪಂಚವಾರ್ಷಿಕ ಯೋಜನೆಗಳಲ್ಲಿ, ಈ ಯೋಜನೆಗಳಿಗೆ ಒತ್ತು ಕೊಡಲಾಯಿತು. ಹೊಸ ಅರಣ್ಯ ಪ್ರದೇಶಗಳನ್ನು ಕಾಯ್ದಿಟ್ಟ ಅರಣ್ಯಗಳೆಂದು ಘೋಷಿಸಲಾಯಿತು.

ಹುಲಿ ಪರಿಯೋಜನೆಯನ್ನು ಅತ್ಯಂತ ವೈಜ್ಞಾನಿಕವಾಗಿ ತಯಾರಿಸಲಾಗಿದ್ದು ಯಾವೊಂದು ಅರಣ್ಯ ಪ್ರದೇಶವೂ ತನ್ನ ಪ್ರಾಣಿ-ಸಸ್ಯಧಾರಣ ಸಾಮರ್ಥ್ಯ ಮೀರದಂತೆ ನಿರ್ವಹಣಾ ತಂತ್ರವನ್ನು ರೂಪಿಸಲಾಗಿದೆ. ಪ್ರತಿ ಕಾಯ್ದಿಟ್ಟ ಅರಣ್ಯದ ಕೇಂದ್ರ ವಲಯದ ವಿಸ್ತೀರ್ಣ ಕನಿಷ್ಠ ಮುನ್ನೂರು ಚದರ ಕಿಲೋಮೀಟರುಗಳೆಂದು ನಿಗದಿಪಡಿಸಲಾಗಿದೆ. ಈ ವಿಸ್ತೀರ್ಣಕ್ಕೆ ಸೂಕ್ತವಾದ ಬೆಂಬಲ ವಲಯನ್ನು ಸೂಚಿಸಲಾಗಿದೆ. ಪರಿಯೋಜನೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ನಿರ್ವಹಣಾ ಸಮಿತಿಯಿದ್ದು, ಪ್ರತಿ ಕಾಯ್ದಿಟ್ಟ ಅರಣ್ಯ ಕ್ಷೇತ್ರ ಒಬ್ಬ ನಿರ್ದೇಶಕರನ್ನು ಮತ್ತು ನೆರವಿಗೆ ತಾಂತ್ರಿಕ ಸಿಬ್ಬಂದಿಯನ್ನು ಹೊಂದಿರುತ್ತದೆ. ಆಯಾ ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ರಾಜ್ಯದಲ್ಲಿನ ಕಾಯ್ದಿಟ್ಟ ಅರಣ್ಯದಲ್ಲಿ ಯೊಜನೆಯ ಅನುಷ್ಠಾನಕ್ಕೆ ಹೊಣೆಗಾರರಾಗಿರುತ್ತಾರೆ. ಈ ಯೋಜನೆಯ ಮುಖ್ಯ ನಿರ್ದೇಶನಾಲಯ ದೆಹಲಿಯಲ್ಲಿದ್ದು ರಾಷ್ಟ್ರಮಟ್ಟದ ಯೋಜನಾ ನಿರ್ದೇಶಕರಿದ್ದಾರೆ.

ಕ್ಷೇತ್ರದಲ್ಲಿನ ಸಿಬ್ಬಂದಿಗೆ ನಿಸ್ತಂತು ಸಂಪರ್ಕ ಸಾಧನಗಳನ್ನು ನೀಡಲಾಗಿದೆ. ಕಾಡಿನೊಳಗೆ ಗಸ್ತು ಶಿಬಿರಗಳನ್ನು ಸ್ಥಾಪಿಸಲಾಗಿದೆ. ಕಾಡಿನ ಕೇಂದ್ರ ವಲಯದಲ್ಲಿ ವಾಸವಿದ್ದ ಜನರನ್ನು ಮನವೊಲಿಸಿ ಅವರಿಗೆ ಕಾಡಿನ ಹೊರಗೆ ಪುನರ್ವಸತಿ ಕಲ್ಪಿಸುವ ಕಾರ್ಯ ಹಲವಾರು ಕಾಯ್ದಿಟ್ಟ ಅರಣ್ಯಗಳಲ್ಲಿ ಯಶಸ್ವಿಯಾಗಿದೆ. ಇದರಿಂದ ಕಾಡಿನ ಗುಣಮಟ್ಟ ಸುಧಾರಣೆಗೊಂಡು ಆವಾಸದ ಧಾರಣ ಶಕ್ತಿ ಹೆಚ್ಚಾಗಿದೆ.

ಭವಿಷ್ಯದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ವನ್ಯಜೀವಿಗಳ ಕಳ್ಳ ಬೇಟೆ ಹಾಗೂ ಕಾಯ್ದಿಟ್ಟ ಅರಣ್ಯಗಳಲ್ಲಿನ ಅಪರಾಧಗಳನ್ನು ತಡೆಗಟ್ಟುವ ಗುರಿ ಹೊಂದಲಾಗಿದ್ದು ಇದಕ್ಕಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಹಲವಾರು ಕಾಯ್ದಿಟ್ಟ ಅರಣ್ಯಗಳನ್ನು ಭೌಗೋಳಿಕ ಮಾಹಿತಿ ಪದ್ಧತಿ (ಜಿಐಎಸ್) ತಂತ್ರಜ್ಞಾನ ಬಳಸಿ ಸಂಪರ್ಕಿಸಲಾಗಿದ್ದು, ಇವು ಪರಸ್ಪರ ಹಾಗೂ ಕೇಂದ್ರ ಹುಲಿ ಪರಿಯೋಜನಾ ನಿರ್ದೇಶನಾಲಯವನ್ನು ಸಂಪರ್ಕಿಸುತ್ತವೆ.

ಭಾರತದ ಹುಲಿ ನಕಾಶೆ ಹಾಗೂ ಹುಲಿ ಆವಾಸ ಮತ್ತು ಸಂಖ್ಯಾ ಮೌಲ್ಯಮಾಪನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದಕ್ಕೆ ಅಂತರಿಕ್ಷ ವಿಜ್ಞಾನವೂ ಸೇರಿದಂತೆ ಉನ್ನತ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಇದು ಮುಖ್ಯವಾಗಿ ದತ್ತಾಂಶ ಸಂಗ್ರಹಣೆ, ಹುಲಿ ನಕಾಶೆ ತಯಾರಿಕೆ ಹಾಗೂ ಜಿ.ಐ.ಎಸ್. ಮಾದರಿ ತಯಾರಿಕೆ, ಕ್ಷೇತ್ರದಲ್ಲಿ ಮಾಹಿತಿ ಸಂಗ್ರಹಣೆ ಹಾಗೂ ಮೌಲ್ಯಮಾಪನ, ದತ್ತಾಂಶ ನಿರ್ವಹಣೆ, ಪ್ರಸರಣೆ ಹಾಗೂ ಬಳಕೆ ಈ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ಇದು ಪಶ್ಚಿಮ ಘಟ್ಟಗಳೂ ಸೇರಿದಂತೆ ಪ್ರಮುಖ ಹುಲಿ ಆವಾಸಗಳಲ್ಲಿ ಜಾರಿಯಾಗುತ್ತಿದೆ.

ಸರಿಯಾದ ಭೂಬಳಕೆ ನೀತಿ, ಹಣ ಹಾಗೂ ಜನರಲ್ಲಿನ ಜಾಗೃತಿ - ಇವುಗಳ ಕೊರತೆಯಿಂದ ಹಾಗೂ ಜನಸಂಖ್ಯಾ ಸ್ಫೋಟದಿಂದ ವನ್ಯಜೀವಿ ಸಂರಕ್ಷಣೆ ಆತಂಕಗಳನ್ನೆದುರಿಸುತ್ತಿದ್ದು, ಇನ್ನೂ ಸಾವಿರಾರು ಸಮುದಾಯಗಳು ಕಾಡಿನ ಕೇಂದ್ರ ಭಾಗದಲ್ಲಿದ್ದು ಸಮಸ್ಯೆ ಸಾಮಾಜಿಕ ಆಯಾಮವನ್ನು ಪಡೆದುಕೊಂಡಿದೆ. ಒಟ್ಟಾರೆ ಹುಲಿ ಪರಿಯೋಜನೆಯಿಂದ ಸಾಕಷ್ಟು ಉತ್ತಮ ಫಲಿತಾಂಶ ಒದಗಿರುವುದು ನಿಜವೇ ಆದರೂ ಸಾಧಿಸಬೇಕಾಗಿರುವುದು ಬಹಳಷ್ಟಿದೆ. ಆದಾಗ್ಯೂ, ವಿಶ್ವದ ಹುಲಿ ಸಂತತಿಯಲ್ಲಿ ಗಣನೀಯ ಪ್ರಮಾಣದ ಹುಲಿಗಳನ್ನು ಹೊಂದಿರುವ ಭಾರತ ಹುಲಿಗಳ ಉಳಿವಿಗೆ ಆಶಾದಾಯಕ ಪ್ರದೇಶ.

ಹುಲಿ ಪರಿಯೋಜನಾ ಕ್ಷೇತ್ರಗಳು
ರಾಜ್ಯ ಕಾಯ್ದಿಟ್ಟ ಅರಣ್ಯ
ಆಂಧ್ರಪ್ರದೇಶ ನಾಗಾರ್ಜುನ ಸಾಗರ
ಅರುಣಾಚಲ ಪ್ರದೇಶ ನಾಮ್ದಫ

ಪಖೂಯಿ

ಅಸ್ಸಾಂ ಮಾನಸ್ನಮೇರಿ
ಬಿಹಾರ ವಾಲ್ಮೀಕಿ
ಛತ್ತೀಸ್‍ಗಢ್ ಇಂದ್ರಾವತಿ
ಝಾರ್ಖಂಡ್ ಪಲಮಾವ್
ಕರ್ನಾಟಕ ಭದ್ರಾಬಂಡೀಪುರ
ಕೇರಳ ಪೆರಿಯಾರ್
ಮಧ್ಯಪ್ರದೇಶ ಪೇಂಚ್ಕಾನ್ಹಾಬೋರಿ ಸಾತ್ಪುರಾ

ಬಾಂಧವ್‍ಗಢ್

ಪನ್ನಾ

ಮಹಾರಾಷ್ಟ್ರ ಪೇಂಚ್ಮೇಲ್ಘಾಟ್

ತಡೋಬಾ - ಅಂಧೇರಿ

ಮಿಜೋರಮ್ ದಾಮಫ
ಒಡಿಶಾ ಸಿಂಪ್ಲಿಫಾಲ್
ರಾಜಸ್ಥಾನ ಸಾರಿಸ್ಕಾರಣಥಂಬೋರ್
ತಮಿಳುನಾಡು ಕಲಕಾಡ್ ಮುಂಡಾಂತುರಾಯ್
ಉತ್ತರ ಪ್ರದೇಶ ದುಧ್ವಾ
ಉತ್ತರಾಖಂಡ ಕಾರ್ಬೆಟ್
ಪಶ್ಚಿಮ ಬಂಗಾಳ ಬುಕ್ಸಾಸುಂದರಬನ

ಉಲ್ಲೇಖಗಳು

ಬದಲಾಯಿಸಿ
  1. Panwar, H. S. (1987). "Project Tiger: The reserves, the tigers, and their future". In Tilson, R. L.; Sel, U. S. (eds.). Tigers of the world: the biology, biopolitics, management, and conservation of an endangered species. Park Ridge, N.J.: Minnesota Zoological Garden, IUCN/SSC Captive Breeding Group, IUCN/SSC Cat Specialist Group. pp. 110–117. ISBN 9780815511335.
  2. Jhala, Y. V.; Gopal, R. & Qureshi, Q. (2008). Status of the Tigers, Co-predators, and Prey in India (PDF). TR 08/001. National Tiger Conservation Authority, Govt. of India, New Delhi; Wildlife Institute of India, Dehradun. Archived from the original (PDF) on 2 June 2013.
  3. Jhala, Y. V.; Qureshi, Q.; Nayak, A. K. (2020). Status of tigers, co-predators and prey in India 2018 (Report). New Delhi, Dehradun: National Tiger Conservation Authority, Government of India, Wildlife Institute of India. http://moef.gov.in/wp-content/uploads/2020/07/Tiger-Status-Report-2018_For-Web_compressed_compressed.pdf. 
  4. "Dholpur-Karauli: The Latest Addition to India's Network of Tiger Reserves". walkinthewild. 2023.

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: