ಸ. ಪ. ಗಾಂವಕರ

ಭಾರತೀಯ ಕಾರ್ಯಕರ್ತ

ಸ.ಪ. ಗಾಂವಕರ (1887 - 1972) ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕನ್ನಡಿಗ. ಶಿಕ್ಷಣ ತಜ್ಞ. ದಕ್ಷ ಆಡಳಿತಗಾರ. ಸಮಾಜ ಸುಧಾರಕ ಮತ್ತು ಕವಿ. ಗಾಂವಕರರನ್ನು ಜನ ಹಲವುವೇಳೆ ಸಜ್ಜನ ಎಂದು ವರ್ಣಿಸುತ್ತಿದ್ದರು.[]

ಸಣ್ಣಪ್ಪ ಪಿ. ಗಾಂವಕರ
ಜನನ(೧೮೮೫-೦೧-೧೧)೧೧ ಜನವರಿ ೧೮೮೫
ಇಂದಿನ ಉತ್ತರ ಕನ್ನಡ, ಕರ್ನಾಟಕ
ಮರಣ1972(1972-00-00) (aged 86–87)
ಅಂಕೋಲಾ
ಕಾವ್ಯನಾಮಸಪ
ರಾಷ್ಟ್ರೀಯತೆಭಾರತೀಯ
ಬಾಳ ಸಂಗಾತಿಹಿರೆಗುತ್ತಿಯ ವೆಂಕಮ್ಮ ಯು. ಕೆರೆಮನೆ

ಸಣ್ಣಪ್ಪ ಪರಮೇಶ್ವರ ಗಾಂವಕರರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ತೊರ್ಕೆ ಗ್ರಾಮದಲ್ಲಿ 11-1-1887 ರಂದು ಜನಿಸಿದರು. ಪರಮೇಶ್ವರ ಗಾಂವಕರರ ಏಳು ಗಂಡುಮಕ್ಕಳ ಪೈಕಿ ಇವರು ನಾಲ್ಕನೆಯವರು. ಪ್ರಾಥಮಿಕ ಶಿಕ್ಷಣದ ಅನಂತರ ಉಪಾಧ್ಯಾಯ ವೃತ್ತಿಗೆ ತರಬೇತು ಪಡೆದರು. ಅನಂತರ ತದಡಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾದರು. ಈ ವೃತ್ತಿಯಲ್ಲಿ ನಿರತರಾಗಿದ್ದಾಗಲೆ ಅವರು ಖಾಸಗಿಯಾಗಿ ವ್ಯಾಸಂಗ ಮಾಡಿ ಧಾರವಾಡದಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿದರು. ಧಾರವಾಡ, ಸಾಂಗ್ಲಿಗಳಲ್ಲಿ ಶಿಕ್ಷಣ ಮುಂದುವರಿಸಿ ನಲ್ವತ್ತನೆಯ ವರ್ಷಕ್ಕೆ ಬಿ. ಎ. ಪದವೀಧರರಾದರು. ಅನಂತರ ಅವರಿಗೆ ಹುಬ್ಬಳ್ಳಿಯ ಸ್ಕೂಲ್ ಬೋರ್ಡಿನ ಆಡಳಿತಾಧಿಕಾರಿಯ ಹುದ್ದೆ ದೊರಕಿತು. 12 ವರ್ಷ ಈ ಹುದ್ದೆ ನಿರ್ವಹಿಸಿ ನಿವೃತ್ತರಾದರು. ಅನಂತರ ಗಾಂಧಿಯವರ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆಮನೆ ವಾಸವನ್ನನುಭವಿಸಬೇಕಾಯಿತು. ಬಂಧನದಿಂದ ಹೊರಬಂದ ಅನಂತರ ಮುಂಬಯಿ ಪ್ರಾಂತ್ಯದಲ್ಲಿ ಖೇರ್ ಮುಖ್ಯಮಂತ್ರಿತ್ವದಲ್ಲಿ ಸ್ಥಾಪಿತವಾದ ಕಾಂಗ್ರೆಸ್ ಸರ್ಕಾರದಲ್ಲಿ ಇವರು ಉಪಮಂತ್ರಿಗಳಾದರು. ಸ್ವಾತಂತ್ರ್ಯಾನಂತರವೂ ರಾಜಕೀಯದಲ್ಲಿ ಇವರು ಹಲವು ವರ್ಷ ದುಡಿದರು. ಅನಂತರ ಇವರ ಮನಸ್ಸು ಅಸ್ಪೃಶ್ಯತಾ ನಿವಾರಣೆ, ದೀನದಲಿತೋದ್ಧಾರ, ಮಹಿಳಾ ಶಿಕ್ಷಣಗಳ ಕಡೆಗೆ ಹರಿಯಿತು. ಜಿಲ್ಲೆಯ ಹಿಂದುಳಿದ ಜನಾಂಗವಾದ ಹಾಲಕ್ಕಿ ಒಕ್ಕಲಿಗರ ಏಳ್ಗೆಗಾಗಿ ಬಹಳ ದುಡಿದರು. ವಾಚನಾಲಯ, ವಿದ್ಯಾರ್ಥಿ ವಸತಿ ಸೌಕರ್ಯ, ರೈತರ ಸಂಘಟನೆ, ಪ್ರೌಢಶಾಲಾ ಸ್ಥಾಪನೆ ಮುಂತಾದ ಹಲವು ಕ್ಷೇತ್ರಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು. ಅಂಕೋಲೆಯಲ್ಲಿ ಕಾಲೇಜು ಸ್ಥಾಪನೆಯಾಗಲು ಇವರೂ ಕಾರಣರು. ಗಾಂಧೀ ತತ್ತ್ವ ಮತ್ತು ಜೀವನವಿಧಾನಗಳ ಶಿಕ್ಷಣ ಪ್ರಚಾರಗಳಿಗಾಗಿ ಇವರು ಗಾಂಧೀನಿವಾಸವನ್ನು ಸ್ಥಾಪಿಸಿದರು. ಗಾಂವಕರರಿಗೆ ಅರವಿಂದರ ತತ್ತ್ವದಲ್ಲೂ ವಿಶೇಷವಾದ ಆಸಕ್ತಿ ಇತ್ತು. ಮತಾಂತರ ಹೊಂದಿದ ಹಿಂದೂಗಳನ್ನು ಪುನಃ ಹಿಂದೂ ಮತಕ್ಕೆ ಸೇರಿಸಿಕೊಳ್ಳಬೇಕೆಂಬ ಆರ್ಯಸಮಾಜದ ವಿಚಾರದಲ್ಲಿ ಇವರಿಗೆ ಶ್ರದ್ಧೆ ಇತ್ತು. ಕೆಲಕಾಲ ಆರ್ಯಸಮಾಜದ ಕಾರ್ಯಕರ್ತರಾಗಿ ಆ ಕೆಲಸ ಮಾಡಿದ್ದೂ ಉಂಟು.

ಇವರು ಕವಿಗಳೂ ಹೌದು. ಇವರ ಮೊದಲನೆಯ ಕವನ ಸಂಕಲನ ಮುಗಿಲು. ರವೀಂದ್ರನಾಥ ಠಾಕೂರರ ಗೀತಾಂಜಲಿಯನ್ನು ಸರಳ ಶೈಲಿಯಲ್ಲಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಪ್ರಕೃತಿ - ಪ್ರೀತಿ , ಪ್ರೇರಣೆ - ಶೋಧನೆ ಇವು ಇವರ ಇನ್ನೆರಡು ಕವನ ಸಂಕಲನಗಳು.

ಉಲ್ಲೇಖಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: