ಪ್ರಾಥಮಿಕ ಶಿಕ್ಷಣವು ಸಾಂಪ್ರದಾಯಿಕ ಶಿಕ್ಷಣದ ಮೊದಲ ಹಂತ. ಶಾಲಾ ಶಿಕ್ಷಣವನ್ನು ಎಲ್ಲ ದೇಶಗಳಲ್ಲೂ ಸಾಮಾನ್ಯವಾಗಿ ಪ್ರಾಥಮಿಕ ಮತ್ತು ಪ್ರೌಢ ಎಂದು ಎರಡು ಹಂತಗಳಾಗಿ ಏರ್ಪಡಿಸುತ್ತಾರೆ. ಕೆಲವು ದೇಶಗಳಲ್ಲಿ ಇವೆರಡರ ನಡುವೆ ಮಾಧ್ಯಮಿಕ ಎಂಬ ಮತ್ತೊಂದು ಹಂತವೂ ಏರ್ಪಟ್ಟಿದೆ.

ಪಾಶ್ಚಾತ್ಯ ದೇಶಗಳಲ್ಲಿ ಪ್ರಾಥಮಿಕ ಶಿಕ್ಷಣ 5-7 ವರ್ಷಕ್ಕೆ ಪ್ರಾಂಭವಾಗುತ್ತದೆ. ಏಷ್ಯದ ರಾಷ್ಟ್ರಗಳಲ್ಲೂ ಇದೇ ಪ್ರವೃತ್ತಿ ಕಂಡುಬರುತ್ತದೆ. ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಸಾಮಾನ್ಯವಾಗಿ ಈ ಶಿಕ್ಷಣ ಪ್ರಾರಂಭವಾಗುವುದು 6 ವರ್ಷಕ್ಕೆ 5 ವರ್ಷ 9 ತಿಂಗಳಿನ ಮಕ್ಕಳು ಬೌದ್ಧಿಕವಾಗಿ ಮಾನಸಿಕವಾಗಿ ಮೊದಲ ತರಗತಿಗೆ ಸೇರಲು ಅರ್ಹರಾಗಿರುತ್ತಾರೆಂದು ಹಿಲ್‍ಡ್ರೆಸ್ ಎಂಬ ಶಿಕ್ಷಣತಜ್ಞನ ಅಭಿಪ್ರಾಯ. ಆ ವಯಸ್ಸಿಗೆ ಬರುವವರೆಗೆ ಮಕ್ಕಳು ಮನೆಯಲ್ಲೊ ನರ್ಸರಿ ಶಾಲೆಯಲ್ಲೊ ಪೂರ್ವಭಾವಿ ಶಿಕ್ಷಣ ಪಡೆಯಬೇಕಾಗಿರುತ್ತದೆ.

ಇಂಗ್ಲೆಂಡ್ ಅಮೆರಿಕ ಮೊದಲಾದ ಪಾಶ್ಚಾತ್ಯದೇಶಗಳಲ್ಲಿ ಪ್ರೈಮರಿ ಶಿಕ್ಷಣದ ಅವಧಿ 6 ವರ್ಷ ಭಾರತದ ಅನೇಕ ಪ್ರಾಂತ್ಯಗಳಲ್ಲಿ 5 ವರ್ಷ ಅವಧಿಯ ಪ್ರಾಥಮಿಕ ಶಿಕ್ಷಣವೂ ಅನಂತರ ಮೂರು ವರ್ಷದ ಮಾಧ್ಯಮಿಕ ಶಿಕ್ಷಣವೂ ಜಾರಿಯಲ್ಲಿದೆ. ಕರ್ನಾಟಕದಲ್ಲಿ ಹಾಲಿ ಇರುವಂತೆ ಪ್ರಾಥಮಿಕ ಶಿಕ್ಷಣ 7 ವರ್ಷ ಅವಧಿಯ ಒಂದು ಅಖಂಡ ಹಂತ. ಈ ಶಿಕ್ಷಣ 6ರಿಂದ 12 ವರ್ಷದ ತನಕ ಇರತಕ್ಕದ್ದೆಂದು ಸೂಚಿಸಿದೆ. ವರ್ಧಾ ಶಿಕ್ಷಣ ಯೋಜನೆಯಲ್ಲಿ ಮೂಲ ಶಿಕ್ಷಣದ ಅವಧಿಯನ್ನು 7 ವರ್ಷವೆಂದು ನಿಗದಿಮಾಡಿದೆ.

ವಿದ್ಯಾಭ್ಯಾಸದ ವಿಶಾಲ ಧ್ಯೇಯವೇ ಈ ಶಿಕ್ಷಣಕ್ಕೂ ಅನ್ವಯಿಸುತ್ತದೆ. ಓದುವುದು, ಬರೆಯುವುದು, ಗಣಿಸುವುದು_ಇವನ್ನು ಕಲಿಯುವುದರ ಜೊತೆಗೆ ಸಮಾಜ ಜೀವನವನ್ನು ಉತ್ತಮಗೊಳಿಸಲು ಜನಾಂಗದ ಸಂಸ್ಕøತಿಯನ್ನು ಪರಿಷ್ಕರಿಸಿ, ಪುಷ್ಟಿಗೊಳಿಸಿ ಮುಂದುವರಿಸಲು ಸಹಾಯವಾಗಿರಬೇಕು. ಈ ಶಿಕ್ಷಣ ಮುಗಿದ ಅನಂತರ ಅನೇಕ ಮಂದಿ ಪಾಠಶಾಲೆಯನ್ನು ಬಿಡುವರಾದ್ದರಿಂದ ಇದು ಒಂದು ರೀತಿಯಲ್ಲಿ ಸ್ವಯಂಪೂರ್ಣವಾಗಿರಬೇಕು ಮತ್ತು ಮುಂದಿನ ಹಂತದ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಒಯ್ಯುವಂತೆಯೂ ಇರಬೇಕು. ಆದ್ದರಿಂದ ಎಲ್ಲರಿಗೂ ಅಗತ್ಯವಾದ ಭಾಷೆ, ಗಣಿತ, ಭೂ ವಿವರಣೆ, ಪ್ರಜಾಧರ್ಮ, ಆರೋಗ್ಯ ಕೈಕೆಲಸಗಳು, ಚಿತ್ರಕಲೆ, ವಿಜ್ಞಾನ ಮುಂತಾದ ವಿಷಯಗಳಲ್ಲಿ ಶಿಕ್ಷಣ ಕೊಡುವುದು ಆವಶ್ಯಕ. ಈ ಹಂತದಲ್ಲಿ ವೃತ್ತಿಶಿಕ್ಷಣಕ್ಕೆ ಸ್ಥಾನವಿಲ್ಲ.

ಮಕ್ಕಳು ಮೊದಲು ಮಾತೃಭಾಷೆಯನ್ನು ಕಲಿಯಬೇಕು. ಶಿಕ್ಷಣ ಮಾಧ್ಯಮವು ಅದೇ ಆಗಿರಬೇಕು. 11 ವರ್ಷ ವಯಸ್ಸಿನತನಕವೂ ಅವರ ಮೇಲೆ ಪರಭಾಷೆಯ ಹೊರೆ ಹೊರಿಸಬಾರದು. ಇದರ ಅನ್ವಯ ಭಾರತದಲ್ಲಿ ಸಾಮಾನ್ಯವಾಗಿ 5ನೆಯ ತರಗತಿಯಲ್ಲಿ ಇಂಗ್ಲಿಷಿನ ಅಭ್ಯಾಸವನ್ನೂ ಇತರ ದೇಶಗಳಲ್ಲಿ ಬೇರೊಂದು ಪರಭಾಷೆಯ ಅಭ್ಯಾಸವನ್ನೂ ಪ್ರಾರಂಭಿಸುತ್ತಾರೆ.

ಸ್ವಾತಂತ್ರ್ಯಾನಂತರ ಭಾರತದಲ್ಲಿ ಗಾಂಧಿಯವರ ಮೂಲಶಿಕ್ಷಣವನ್ನೂ ರಾಷ್ಟ್ರೀಯ ಶಿಕ್ಷಣ ಪದ್ಧತಿಯನ್ನೂ ಮಾದರಿಯಾಗಿ ಅಂಗೀಕರಿಸಲಾಯಿತು. ಪ್ರಾಂತ್ಯಗಳು ಮೊದಲ ಹಂತದಲ್ಲಿ ಈಗ ಮೂಲಶಿಕ್ಷಣವನ್ನೇ ಜಾರಿಗೆ ತಂದಿವೆ. ಇತರ ಕೆಲವು ಪ್ರಾಂತ್ಯಗಳಲ್ಲಿ ಮೂಲಶಿಕ್ಷಣ ಮಾದರಿಯ ಪಾಠಶಾಲೆಗಳು ಸ್ಥಾಪಿಸಲ್ಪಟ್ಟಿವೆ.

ಪ್ರಾಥಮಿಕ ಶಿಕ್ಷಣದ ಹೊಣೆ ಆಯಾ ಸರ್ಕಾರದ ಹೊಣೆ ಎಂಬ ತತ್ವವನ್ನು ಎಲ್ಲ ರಾಷ್ಟ್ರಗಳೂ ಒಪ್ಪಿಕೊಂಡಿವೆ. ಮುಂದುವರೆದ ಎಲ್ಲ ಪಾಶ್ಚಾತ್ಯ ಪೌರಸ್ತ್ಯ ರಾಷ್ಟ್ರಗಳಲ್ಲೂ ಅದು ಉಚಿತವೂ ಕಡ್ಡಾಯವೂ ಆಗಿದೆ. ಭಾರತದಲ್ಲಿ ಉಚಿತ ಕಡ್ಡಾಯ ಶಿಕ್ಷಣ 1961-62ರ ಸಾಲಿನಿಂದ ಎಲ್ಲ ಪ್ರಾಂತ್ಯಗಳಲ್ಲೂ ಜಾರಿಗೆ ಬಂದಿದೆ. ಒಟ್ಟಾರೆ ಶಿಕ್ಷಣ ಪ್ರಾಂತೀಯ ಸರ್ಕಾರಗಳ ವ್ಯಾಪ್ತಿಗೆ ಒಳಪಟ್ಟ ವಿಷಯವಾಗಿರುವುದರಿಂದ ಪ್ರಾಥಮಿಕ ಶಿಕ್ಷಣದ ಜವಾಬ್ದಾರಿಯನ್ನೂ ಅವೇ ವಹಿಸಿಕೊಂಡಿವೆ. ಖಾಸಗಿ ಸಂಸ್ಥೆಗಳು ನಡೆಸುವ ಶಾಲೆಗಳು ಸರ್ಕಾರದ ಮಾನ್ಯತೆ ಪಡೆದಿರಬೇಕೆಂದು ನಿಯಮವಿದೆ.

ಶಾಲಾದಿನದ ವೇಳೆಯ ಬಗ್ಗೆ ಹೆಚ್ಚಿನ ವೈವಿಧ್ಯ ಉಂಟು. ದಿನಕ್ಕೆ 5 ಗಂಟೆ ಕೆಲಸ ಎಂಬುದನ್ನು ಬಹಳ ರಾಷ್ಟ್ರಗಳು ಒಪ್ಪಿವೆ. ಪಾಠಶಾಲೆಗೆ ಸರ್ಕಾರದ ಮಾನ್ಯತೆ ದೊರೆಯಲು ವರ್ಷದಲ್ಲಿ ಶಾಲೆ ಕೆಲಸಮಾಡಬೇಕಾದ ದಿನಗಳ ಕನಿಷ್ಠಸಂಖ್ಯೆಯನ್ನು ಪ್ರತಿ ಸರ್ಕಾರ ನಿಗದಿಮಾಡುತ್ತದೆ. ಕರ್ನಾಟಕದಲ್ಲಿ ಪ್ರತಿದಿನ 5 ಗಂಟೆಯಂತೆ ವರ್ಷಕ್ಕೆ 220 ದಿನ ಕೆಲಸಮಾಡಬೇಕೆಂದು ನಿಯಮವಿದೆ.

ಕೆಳ ತರಗತಿಗಳಲ್ಲಿ 30-35 ಮಕ್ಕಳೂ ಮೇಲಿನ ತರಗತಿಗಳಲ್ಲಿ 40-45 ಮಕ್ಕಳೂ ಇದ್ದು ಒಟ್ಟಿನಲ್ಲಿ ಶಿಕ್ಷಕ ಬೋಧಕ ಪ್ರಮಾಣ 1:40 ಇರಬಹುದು. ಗಾತ್ರವೊಂದೇ ತರಗತಿಯ ದಕ್ಷತೆಗೆ ಆಧಾರ ಎನ್ನಲು ಹೆಚ್ಚು ಪ್ರಮಾಣಗಳಿಲ್ಲ.

ಈ ಹಂತದಲ್ಲಿ ಶಿಕ್ಷಕರು ಹೆಂಗಸರಾಗಿರುವುದು ಉತ್ತಮ. ಅವರು ಸ್ವಭಾವತಃ ಹೆಚ್ಚು ತಾಳ್ಮೆಯುಳ್ಳವರು. ಮಕ್ಕಳಿಗೆ ಮಾತೃಸ್ಥಾನದಲ್ಲಿರುವವರು. ಪಾಶ್ಚತ್ಯ ರಾಷ್ಟ್ರಗಳಲ್ಲಿ ಸ್ತ್ರೀ ಶಿಕ್ಷಕರೇ ಹೆಚ್ಚು. ಈ ಧೋರಣೆ ಭಾರತದಲ್ಲಿ ಈಗ ಹೆಚ್ಚು ಹೆಚ್ಚಾಗಿ ಕಂಡುಬರುತ್ತದೆ. ಇತ್ತೀಚಿನವರೆಗೂ ಭಾರತದಲ್ಲಿ ಪ್ರಾಥಮಿಕ ಶಾಲೆಯ ಉಪಾಧ್ಯಾಯ ವೃತ್ತಿಗೆ ವಿಧಿಸಲಾಗಿದ್ದ ಕನಿಷ್ಠ ಅರ್ಹತೆ ಸಾಮಾನ್ಯವಾಗಿ 7ನೆಯ ತರಗತಿ ಪರೀಕ್ಷೆಯೇ ಆಗಿತ್ತು. ಈಗ ಅನೇಕ ಪ್ರಾಂತ್ಯಗಳು ಎಸ್.ಎಸ್.ಎಲ್.ಸಿ.ಯನ್ನೇ ಕನಿಷ್ಠ ಅರ್ಹತೆಯಾಗಿ ಪರಿಗಣಿಸಿವೆ. ಜೊತೆಗೆ ವೃತ್ತಿಶಿಕ್ಷಣವೂ ಮುಖ್ಯವಾಗಿ ಇರಬೇಕಾದರ್ಹತೆ. ಪಾಶ್ಚಾತ್ಯ ದೇಶಗಳಲ್ಲಿ ಪದವೀಧರರಂಥ ಹೆಚ್ಚು ಅರ್ಹತೆಯುಳ್ಳವರೂ ಪ್ರಾಥಮಿಕ ಶಾಲೆಗಳಲ್ಲಿ ಉಪಾಧ್ಯಾಯರಾಗಿರುವುದುಂಟು.

ಪ್ರಜೆಗಳ ಪ್ರಬುದ್ಧ ಬುದ್ಧಿಬಾಹುಗಳೇ ದೇಶದ ಸಂಪತ್ತು. ಮಕ್ಕಳ ಪ್ರಚ್ಚನ್ನ ಶಕ್ತಿಸಾಮಥ್ರ್ಯಗಳು ವ್ಯರ್ಥವಾಗದೆ ಪ್ರಕಾಶಕ್ಕೆ ಬರಬೇಕಾದರೆ ಕಡ್ಡಾಯ ಶಿಕ್ಷಣ ಅಗತ್ಯ ಪ್ರಜಾಪ್ರಭುತ್ವವನ್ನು ಒಪ್ಪಿರುವ ದೇಶಗಳಲ್ಲಂತೂ ಇದು ಅತ್ಯಗತ್ಯ. ಇದನ್ನರಿತ ಪಾಶ್ಚಾತ್ಯ ರಾಷ್ಟ್ರಗಳು ಇಪ್ಪತ್ತನೆಯ ಶತಮಾನದ ಆದಿಯಿಂದಲೂ ತಂತಮ್ಮ ದೇಶಗಳಲ್ಲಿ ಕಡ್ಡಾಯ ಶಿಕ್ಷಣವನ್ನು ಜಾರಿಗೆ ತಂದವು. ಭಾರತದಲ್ಲಿ ಕಡ್ಡಾಯ ಶಿಕ್ಷಣವು 1911ರಿಂದ ಪ್ರಾರಂಭವಾಯಿತು. ಅಂದಿನಿಂದ 1961ರ ತನಕ ದೇಶದ ವಿವಿಧ ಪ್ರಾಂತ್ಯಗಳಲ್ಲಿ ಆದರೆ ಪ್ರಗತಿ ಬೇರೆ ಬೇರೆಯಾಗಿತ್ತು. 1961ರಿಂದ ರಾಜ್ಯಾಂಗದ 45ನೆಯ ವಿಧಿಯಂತೆ ಎಲ್ಲ ಪ್ರಾಂತ್ಯಗಳೂ ಕಡ್ಡಾಯ ಶಿಕ್ಷಣದ ಕಾನೂನನ್ನು ಜಾರಿಗೆ ತಂದಿವೆ. ಈ ಮಕ್ಕಳು ಸರ್ಕಾರ ನಿರ್ಧರಿಸುವ ಗರಿಷ್ಠ ವಯೋಪರಿಮಿತಿಯವರೆಗೂ ಅಥವಾ ಕನಿಷ್ಠ ತರಗತಿಯವರೆಗೂ ತಮ್ಮ ವ್ಯಾಸಂಗವನ್ನು ಮುಂದುವರಿಸಲೇಬೇಕು. ಪಾಠಶಾಲೆಯ ವೇಳೆಯಲ್ಲಿ ಯಾರೂ ಮಕ್ಕಳನ್ನು ದುಡಿಮೆಗೆ ಹಚ್ಚಲಾಗದು. ಪಾಶ್ಚಾತ್ಯ ದೇಶಗಳಲ್ಲಿ ಕಡ್ಡಾಯ ಶಿಕ್ಷಣದ ಅವಧಿ ಸಾಮಾನ್ಯವಾಗಿ 5-6 ವರ್ಷದಿಂದ 14-15 ವರ್ಷದ ತನಕವೂ ಇದ್ದು ಪ್ರೌಢ ಶಿಕ್ಷಣಕ್ಕೂ ಅನ್ವಯಿಸುತ್ತದೆ. ಭಾರತದಲ್ಲಿ ಈ ಅವಧಿ 6ನೆಯ ವಯಸ್ಸಿನಿಂದ 5 ವರ್ಷ ಅವಧಿಯದಾಗಿದ್ದು ಪ್ರಾಥಮಿಕ ಹಂತಕ್ಕೆ ಮಾತ್ರ ಅನ್ವಯಿಸುತ್ತದೆ. ಈ ಅವಧಿ 6ರಿಂದ 14 ವಯಸ್ಸಿನತನಕ 8 ವರ್ಷದ್ದಾಗಿರಬೇಕೆಂದು ತಜ್ಞರ ಮತ.

ಕಡ್ಡಾಯ ಹಾಜರಿ ಯೋಜನೆ ಎಂಬುದು ಮೇಲಿನ ಯೋಜನೆಯ ಮಾರ್ಪಟ್ಟ ಒಂದು ವ್ಯವಸ್ಥೆ. ಇದರ ಪ್ರಕಾರ ಎಲ್ಲ ಮಕ್ಕಳನ್ನೂ ಪಾಠಶಾಲೆಗೆ ಸೇರಿಸಬೇಕೆಂಬ ಒತ್ತಾಯವಿಲ್ಲ. ಆದರೆ ಪಾಠಶಾಲೆಗೆ ದಾಖಲಾದ ಮಕ್ಕಳು ಸರ್ಕಾರ ನಿಗದಿ ಮಾಡಿರುವ ಅವಧಿಯವರೆಗೂ ಶಾಲೆಯನ್ನು ಬಿಡುವಂತಿಲ್ಲ. ಶಿಕ್ಷಣದಲ್ಲಿ ಅಪವ್ಯಯವನ್ನು ತಪ್ಪಿಸುವುದು ಬಹುಮುಖ್ಯ. ಲಿನ್‍ಲಿತ್‍ಗೊ ಸಮಿತಿಯೂ ಹಾರ್ಟಾಗ್ ಸಮಿತಿಯೂ ಈ ರೀತಿ ಅಭಿಪ್ರಾಯಪಟ್ಟಿವೆ.

ಪ್ರಪಂಚದ ಎಲ್ಲ ದೇಶಗಳಲ್ಲೂ ಒಬ್ಬನೇ ಒಬ್ಬ ಶಿಕ್ಷಕನಿರುವ ಹಲವು ಪ್ರಾಥಮಿಕ ಶಾಲೆಗಳಿವೆ. ಅನೇಕ ಪಾಠಶಾಲೆಗಳಲ್ಲಿ ಒಂದಕ್ಕಿಂತ ಹಚ್ಚು ತರಗತಿಗಳಿದ್ದರೂ ಮಕ್ಕಳ ಒಟ್ಟು ಸಂಖ್ಯೆ ಕಡಿಮೆಯಾಗಿರುವುದರಿಂದ ಹೆಚ್ಚುಮಂದಿ ಶಿಕ್ಷಕರನ್ನು ನಿಯಮಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಇರುವ ಒಬ್ಬ ಶಿಕ್ಷಕನೇ ಒಂದಕ್ಕಿಂತ ಹೆಚ್ಚು ತರಗತಿಗಳಿಗೆ ಏಕಕಾಲದಲ್ಲಿ ಬೋಧಿಸಬೇಕಾಗುತ್ತದೆ. ಭಾರತದಲ್ಲಿ ಈಗ ಸುಮಾರು ಶೇಕಡಾ 40ರಷ್ಟು ಏಕಶಿಕ್ಷಕ ಪ್ರೈಮರಿ ಪಾಠಶಾಲೆಗಳಿವೆ. ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಇಂಥ ಶಾಲೆಗಳು ಬಹುಸಂಖ್ಯೆಯಲ್ಲಿವೆ. ಸಾರ್ವತ್ರಿಕ ಕಡ್ಡಾಯ ಪ್ರಾಥಮಿಕ ಶಿಕ್ಷಣಯೋಜನೆಯ ಅನ್ವಯ ಮತ್ತು ವಿಸ್ತರಣಗಳ ಪರಿಣಾಮವಾಗಿ ಎಲ್ಲ ದೇಶಗಳಲ್ಲೂ ಈ ಬಗೆಯ ಶಾಲೆಗಳು ಅಪೇಕ್ಷಣೀಯವಲ್ಲದಿದ್ದರೂ ಅನಿವಾರ್ಯವಾಗಿವೆ.

ಏಕಶಿಕ್ಷಕ ಪಾಠಶಾಲೆಗಳು ಸುಗಮವಾಗಿ ಕೆಲಸಮಾಡಲು, (1) ಮಕ್ಕಳ ಒಟ್ಟು ಸಂಖ್ಯೆ 40ಕ್ಕೆ ಮೀರಬಾರದು, (2) ನಾಲ್ಕಕ್ಕಿಂತಲೂ ಹೆಚ್ಚು ತರಗತಿಗಳಿರಬಾರದು, (3) ಶಿಕ್ಷಕರ ಅರ್ಹತೆ ಎಸ್.ಎಸ್.ಎಲ್.ಸಿ. ಗೆ ಕಡಿಮೆ ಇರಬಾರದು (4) ಶಿಕ್ಷಕರಿಗೂ ಶಾಲಾತನಿಖಾಧಿಕಾರಿಗಳಿಗೂ ಏಕಶಿಕ್ಷಕ ಪಾಠಶಾಲೆಗಳ ಸಂವಿಧಾನ ವ್ಯವಸ್ಥೆ ಆಡಳಿತ ಮತ್ತು ಬಹುತರಗತಿಗಳ ಬೋಧನೆ-ಇವುಗಳಲ್ಲಿ ತರಬೇತು, ಮಾರ್ಗದರ್ಶನ ಕೊಡಬೇಕು, (5) ಪಾಠಶಾಲೆಯಲ್ಲಿ ಅತ್ಯಗತ್ಯವಾದ ಪಾಠೋಪಕರಣಗಳಾದರೂ ಇರಬೇಕು, (6) ಶಾಲಾಕಟ್ಟಡ ಸಾಕಷ್ಟು ವಿಶಾಲವಾಗಿರಬೇಕು, (7) ಮಕ್ಕಳನ್ನು ಸಕಾಲಕ್ಕೆ ಪಾಠಶಾಲೆಗೆ ಸೇರಿಸಬೇಕು, (8) ವಿಷಯ ಬೋಧನೆ ಕೈಕಸುಬು ಮತ್ತು ವ್ಯಾಯಾಮ ಇವುಗಳಿಗೆ ಮಕ್ಕಳನ್ನು ಅವರವರ ಬುದ್ಧಿಶಕ್ತಿಯ ಮಟ್ಟ, ಸಾಮಥ್ರ್ಯ ಮತ್ತು ವಯಸ್ಸಿಗೆ ಅನುಗುಣವಾಗಿ ಉಪಾಧ್ಯಾಯರು ವರ್ಗೀಕರಿಸಬೇಕು (9) ಉಪಾಧ್ಯಾಯರು ವೇಳಾ ಪತ್ರಿಕೆಯನ್ನು ಬಹುತರಗತಿಯ ಶಿಕ್ಷಣಕ್ಕೆ ಅನುಕೂಲಿಸುವಂತೆ ತಯಾರಿಸಬೇಕು, (10) ಶಿಕ್ಷಣ ಕಾರ್ಯದಲ್ಲಿ ಉಪಾಧ್ಯಾಯರು ವಿದ್ಯಾರ್ಥಿ ಮುಖಂಡರ ನೆರವನ್ನು ಪಡೆಯಬಹುದು, (11) ಪ್ರತಿ ತರಗತಿಯೂ ಸರದಿ ಪ್ರಕಾರ ಒಂದೇ ಹೊತ್ತು ಕೆಲಸ ಮಾಡುವುದು ಅಗತ್ಯ.

ಗ್ರಂಥಸೂಚಿ

ಬದಲಾಯಿಸಿ
  • India 2009: A Reference Annual (53rd edition), New Delhi: Additional Director General (ADG), Publications Division, Ministry of Information and Broadcasting, Government of India, .
  • "Organisation of Primary Education". Eurydice - European Commission (in ಇಂಗ್ಲಿಷ್). 10 October 2017.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: