ಗೀತಾಂಜಲಿ
ಗೀತಾಂಜಲಿ ಕವಿವರ್ಯ ರಬೀಂದ್ರನಾಥ ಟ್ಯಾಗೋರ್ ಅವರ (1861-1941) ಭಕ್ತಿ ಅಥವಾ ಅನುಭಾವಗೀತಗಳ ಸಂಕಲನವಿದು. ಒಂದೇ ಹೆಸರಿನ ಈ ಗ್ರಂಥ ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟವಾಗಿದ್ದರೂ ಆವೃತ್ತಿಗಳು ಏಕರೂಪವಾಗಿರದೆ ಬಹು ಭಿನ್ನವಾಗಿವೆ. ಗೀತಾಂಜಲಿಯ ಬಂಗಾಳಿ ಆವೃತ್ತಿ 1909-10ರಲ್ಲಿ ಪ್ರಕಟಿತವಾಗಿದ್ದು ಒಟ್ಟು 157 ಗೀತಗಳನ್ನು ಒಳಗೊಂಡಿದೆ; ಇಂಗ್ಲಿಷ್ ಆವೃತ್ತಿಯಲ್ಲಿಯೋ ಒಟ್ಟು 103 ಪದ್ಯಗಳಿದ್ದು ಅವು ಕವಿವರ್ಯರ ನಾನಾ ಬಂಗಾಳಿ ಕವನ ಸಂಕಲಗಳಿಂದ ಆಯ್ದವುಗಳಾಗಿ ಅವರಿಂದಲೇ ಹೃದ್ಯ ಗದ್ಯದಲ್ಲಿ ಅನುವಾದಿತವಾದವಾಗಿವೆ. ಈ 103 ಪದ್ಯಗಳಲ್ಲಿ 51 ಮಾತ್ರ ಗೀತಾಂಜಲಿಯೊಳಗಿನವು; ಮಿಕ್ಕ 52 ಪದ್ಯಗಳಲ್ಲಿ ಗೀತಿಮಾಲ್ಯದಿಂದ 17, ನೈವೇದ್ಯದಿಂದ 16, ಖೇಯಾದಿಂದ 11, ಶಿಶುವಿನಿಂದ 3 ಮತ್ತು ಚೈತಾಲಿ, ಸ್ಮರಣ, ಕಲ್ಪನಾ ಉತ್ಸರ್ಗ, ಅಚಲಾಯತನ ಎಂಬುವುಗಳಿಂದ ಒಂದೊಂದು -ಹೀಗೆ ಆಯ್ದುಕೊಳ್ಳಲಾಗಿದೆ. ಈ ಎಲ್ಲ ಬಂಗಾಳಿ ಗ್ರಂಥಗಳು ಗೀತಾಂಜಲಿಗಿಂತ ಮೊದಲು ಎಂದರೆ 1900ರ ಎಡಬಲದಲ್ಲಿ ರಚಿತವಾದವು. ನೈವೇದ್ಯವೇ ಕವಿಯ ಭಕ್ತಿಗೀತಗಳ ಪ್ರಥಮ ಸಂಕಲನ. ಸ್ಮರಣವೆಂಬುದು 1902ರಲ್ಲಿ ತೀರಿಕೊಂಡ ಕವಿಪತ್ನಿಯ ಸ್ಮರಣ ಗೀತಗಳ ಸಂಕಲನ.
ಲೇಖಕರು | ರಬೀಂದ್ರನಾಥ ಟ್ಯಾಗೋರ್ |
---|---|
ಮೂಲ ಹೆಸರು | গীতাঞ্জলি |
ದೇಶ | ಭಾರತ |
ಭಾಷೆ | ಇಂಗ್ಲಿಷ್, ಬಂಗಾಳಿ |
ವಿಷಯ | Devotion to God |
ಪ್ರಕಾರ | ಕವಿತೆಗಳು |
ಪ್ರಕಟವಾದ ದಿನಾಂಕ | 1910 |
ಇಂಗ್ಲೀಷ್‌ನಲ್ಲಿ ಪ್ರಕಟಗೊಂಡಿದ್ದು | 1912 |
ಗೀತಾಂಜಲಿಯ ಇತಿವೃತ್ತ
ಬದಲಾಯಿಸಿ- ಇಂಗ್ಲಿಷ್ ಗೀತಾಂಜಲಿ 1912ರಲ್ಲಿ ಕವಿ ಇಂಗ್ಲೆಂಡಿನಲ್ಲಿದ್ದಾಗ, ಅಲ್ಲಿಯ ಆಂಗ್ಲ ಕವಿವರ್ಯ ಡಬ್ಲೂ. ಬಿ. ಯೇಟ್ಸ್ ನ ಮುನ್ನುಡಿಯೊಂದಿಗೆ ಮೊತ್ತಮೊದಲು ಅಚ್ಚಾಯಿತು. ಮುಖ್ಯವಾಗಿ ಈ ಆವೃತ್ತಿಗೇನೆ ವಿಶ್ವದ ಸರ್ವೋಚ್ಚ ಸಾಹಿತ್ಯಿಕ ಗೌರವವೆನಿಸಿದ ನೊಬೆಲ್ ಪ್ರಶಸ್ತಿ (ಬಹುಮಾನ) 1913ರಲ್ಲಿ ದೊರೆಯಿತು. ಹೀಗೆ ರಬೀಂದ್ರರನ್ನು ವಿಶ್ವಕವಿಗಳನ್ನಾಗಿ ಮಾಡಿದ ಅಮರ ಕೃತಿಯೇ ಗೀತಾಂಜಲಿ. ಈ ಕೃತಿ ಲೋಕಪ್ರಿಯವಾಗಲು ಕಾರಣಪುರುಷರಾದ ಆಂಗ್ಲ ಚಿತ್ರಶಿಲ್ಪಿವರ್ಯ ವಿಲಿಯಂ ರೊಥೇನ್ಸ್ಟೇನ್ ಅವರಿಗೆ ಇದು ಅರ್ಪಿತವಾಗಿದೆ.
- ಈ ಕಿರು ಗ್ರಂಥ ಪ್ರಪಂಚದ ಸುಮಾರು 35 ಭಾಷೆಗಳಲ್ಲಿ ಗದ್ಯ ಇಲ್ಲವೆ ಪದ್ಯದಲ್ಲಿ ಅನುವಾದಿತವಾಗಿದ್ದು ಇಂಗ್ಲಿಷ್ ಆವೃತ್ತಿ ಲಕ್ಷಗಟ್ಟಲೇ ಪ್ರಸಾರವುಳ್ಳ 50 ಮುದ್ರಣಗಳನ್ನು ಇದುವರೆಗೆ ಕಂಡಿದೆ. ಕೆಲವು ಭಾಷೆಗಳಲ್ಲಂತೂ ಬೇರೆ ಬೇರೆ ಅನುವಾದಕರಿಂದ ರೂಪಾಂತರಗೊಂಡ ನಾಲ್ಕೈದು ಆವೃತ್ತಿಗಳೂ ಬೆಳಕಿಗೆ ಬಂದದ್ದುಂಟು. ಕನ್ನಡದಲ್ಲಿಯೇ ಹಲವಾರು ಅನುವಾದಗಳು ಪುಸ್ತಕರೂಪದಲ್ಲಿ ಪ್ರಕಟವಾಗಿದ್ದು ಅವುಗಳಲ್ಲಿ ಒಂದು ನೇರವಾಗಿ ಬಂಗಾಳಿ ಆವೃತ್ತಿಯಿಂದ ಗೀತರೂಪದಲ್ಲಿ ಕನ್ನಡಿಸಲ್ಪಟ್ಟಿದೆ. (ಪ್ರಹ್ಲಾದ ನರೇಗಲ್ಲ); ಉಳಿದ ಅನುವಾದಗಳು ಇಂಗ್ಲಿಷ್ ಆವೃತ್ತಿಯಿಂದ ಕನ್ನಡಕ್ಕೆ ಇಳಿದಿವೆ (ಸ.ಪ. ಗಾಂವಕರ, ಮೃತ್ಯುಂಜಯ ಬಸವಯ್ಯ ಬೂದಿಹಾಳಮಠ, ಶಣೈ, ಮಹಿಪಾಲ ದೇಸಾಯಿ, ಸುಧಾ ಅಡುಕಳ, ನವೀನ್ ಹಳೆಮನೆ, ಗಿರೀಶ ಚಂದ್ರಕಾಂತ ಜಕಾಪುರೆ ಮತ್ತು ಸಿ ಮರಿಜೋಸೆಫ್)
- ರಬೀಂದ್ರರ 80 ವರ್ಷಗಳ ತುಂಬು ಬಾಳುವೆಯಲ್ಲಿ 1905ರಿಂದ 1941 ರವರೆಗಿನ ಅವಧಿ ನಿಜಕ್ಕೂ ಮಹತ್ತ್ವದ್ದಾಗಿದೆ.
- ಭಕ್ತಿಗೀತಗಳ ಉದಯ, ನವೋನವನಾಟಕಗಳ ನಿರ್ಮಾಣ, ಸ್ವದೇಶಿ ಚಳವಳಿ, ರಾಷ್ಟ್ರೀಯತೆ, ಮನುಷ್ಯಕುಲದೈಕ್ಯ -ಇಂಥ ಅಪೂರ್ವಸಂಘಟನೆಗಳ ಹಿನ್ನೆಲೆಯಲ್ಲಿ ರಚಿತವಾದ ಮಹಾಕೃತಿಯೇ ಗೀತಾಂಜಲಿ.
- ಪಾಶ್ಚಾತ್ಯ ಕವಿ ಯೇಟ್ಸ್ ಗೀತಾಂಜಲಿಗೆ ಬರೆದ ಮುನ್ನುಡಿ ಯಲ್ಲಿ ಹೀಗೆ ಹೇಳುತ್ತಾರೆ: ‘ಟ್ಯಾಗೋರರು ಭಾರತೀಯ ಸಂಸ್ಕೃತಿಯಂತೆ ಅಂತರಾತ್ಮವನ್ನು ಶೋಧಿಸುವುದರಲ್ಲಿ ತೃಪ್ತಿಪಡುತ್ತಾರೆ. ಅಂತರಂಗದ ಅಧಿನಾಯಕನ ಅಂತಃಪ್ರೇರಣೆಗೆ ತಮ್ಮನ್ನು ಕೊಟ್ಟುಕೊಂಡು ಬಿಡುತ್ತಾರೆ. ಜಗತ್ತಿನ ಬೇರಾವ ಸಾಹಿತ್ಯದಲ್ಲಿಯೂ ಸಿಗದ ಅದೊಂದು ಸರಳ ಸುಂದರ ಮುಗ್ದತೆ ಇಲ್ಲಿ ಕಂಡು ಬರುವುದು..., ನಮಗೆ ಅತೀವ ಅಪರಿಚಿತವಾಗಿರುವ ಅದೊಂದು ಸಂಸ್ಕೃತಿಯು ಜನಾಂಗವೂ ಈ ಭಾವಕಾವ್ಯದ ಭಾವಲೋಕದಲ್ಲಿ ಕಂಡುಬರುವುವು.’
- ಕನ್ನಡದಲ್ಲಿ ಟ್ಯಾಗೋರರ ಚರಿತ್ರಕಾರರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಗೀತಾಂಜಲಿಯಲ್ಲಿ ಕಂಡುಬರುವ ದೈವಸಿದ್ಧಿಯನ್ನು ಹೀಗೆ ಪ್ರಶಂಸಿ ಸಿದ್ದಾರೆ. ‘ಕವಿವರರು ತಮ್ಮ ಬಾಳಿನಲ್ಲಿ ಭಗವಂತನ ಲೀಲೆಯನ್ನು ಕಂಡಿದ್ದಾರೆ. ಟ್ಯಾಗೋರರ ಜೀವ ಹತ್ತಾರು ಸಲ ಕರೆದಿದೆ; ಅದರ ದೈವ ಅದಕ್ಕೆ ಓ ಎಂದು ಉತ್ತರ ಕೊಟ್ಟಿದೆ.’
- ಟ್ಯಾಗೋರರ ದೈವ ಅವರ ಒಡನಾಡಿ; ತನ್ನ ಸಿಂಹಾಸನವನ್ನುಳಿದು ಅವರ ಜೊತೆಗೆ ಆಡಬಂದಿರುವ ರಾಜ; ಅವರನ್ನು ಹಾಡಹೇಳಿ ಸಂತೋಷಿಸುವ ಪ್ರಭು; ಅವರ ತಪ್ಪುಗಳನ್ನು ಮನ್ನಿಸುವ ಅವರ ಗುಣಕ್ಕೆ ಮೆಚ್ಚುವ ಸದಾ ಅವರನ್ನು ಹಿಡಿದು ಮೇಲಕ್ಕೆ ಎತ್ತುವ ಸಹೃದಯ. ಟ್ಯಾಗೋರರು ಬಾಳು ದೇವರ ಲೀಲೆಯೆಂದರಿತು ಅವನ ನಿಯಮವನ್ನು ಸದಾ ದೃಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ; ಸೋತು ಬಿದ್ದಂದು ನನ್ನನ್ನು ಹಿಡಿದೆತ್ತು ಎಂದು ದೈವವನ್ನು ಬೇಡಿಕೊಂಡಿದ್ದಾರೆ. ಆ ದೈವ ತಮ್ಮನ್ನು ಹಿಡಿದೆತ್ತಿ ಸಲಹುತ್ತಿರುವುದನ್ನು ಅನುಭವಿಸಿದ್ದಾರೆ.’
- ಸರೋಜಿನಿ ನಾಯ್ಡು ಅವರು ಒಂದೆಡೆ ಟ್ಯಾಗೋರರ ಬಗ್ಗೆ ಬರೆಯುತ್ತ ಸ್ವೀಡನ್, ನಾರ್ವೆ, ಫ್ರಾನ್ಸ್, ಜರ್ಮನಿ, ಇಟಲಿ, ಅಮೆರಿಕ, ಕೆನಡ ಮೊದಲಾದ ದೇಶಗಳಲ್ಲಿ ಟ್ಯಾಗೋರರ ಮತ್ತು ಅವರ ಗೀತಾಂಜಲಿಯ ಬಗೆಗೆ ಜನರಲ್ಲಿ ಹೇಗೆ ಅದರ ಕುತೂಹಲಗಳು ಇದ್ದವೆಂಬುದನ್ನು ಚೆನ್ನಾಗಿ ಬಣ್ಣಿಸಿ ದ್ದಾರೆ. ಆ ದೇಶಗಳಲ್ಲಿ ಮನೆಮನೆಯಲ್ಲೂ ಈ ಗ್ರಂಥದ ಪ್ರತಿಗಳು ಇದ್ದವೆಂದೂ ಬುಡಾಪೆಸ್ಟ್ ನಗರದ ಆಸ್ಪತ್ರೆಯೊಂದರಲ್ಲಿ ಪ್ರತಿಯೊಬ್ಬ ರೋಗಿಯ ತಲೆದಿಂಬಿನ ಬುಡದಲ್ಲಿ ಗೀತಾಂಜಲಿಯ ಒಂದೊಂದು ಪ್ರತಿ ಇದ್ದುದನ್ನು ಕಂಡು ತಾವು ಬೆರಗಾದುದಾಗಿಯೂ ಅವರು ತಿಳಿಸುತ್ತಾರೆ.
ಪದ್ಯಗಳು
ಬದಲಾಯಿಸಿ- ಗೀತಾಂಜಲಿಯ ಯಾವುದೇ ಆವೃತ್ತಿಯ ಗೀತಗಳಲ್ಲಿಯ ಭಾವಾವೇಗಗಳನ್ನು ಸನ್ನಿವೇಶಗಳನ್ನು ವಿಶ್ಲೇಷಿಸಿ ನೋಡಿದಾಗ ಅವುಗಳಲ್ಲಿ ಈ ಮುಂದಿನ ಏಳು ನೆಲೆಗಳನ್ನು ನಾವು ಕಾಣುತ್ತೇವೆ:
- ಭಗವತ್ ಪ್ರಾರ್ಥನೆಯ ಪದ್ಯಗಳು : ಬಾಳಿನಲ್ಲಿಯ ಆಶೆನಿರಾಶೆಗಳಲ್ಲಿ ಹೊಯ್ದಾಡುತ್ತ ಉಚ್ಚಜೀವನಕ್ಕಾಗಿ ಅಲವರಿಯುವ ಹಿರಿಹಂಬಲದ ಪದ್ಯಗಳು :
ಅಂತರಂಗವನು ಅರಳಿಸು ಒಲವೇ, ಅಂತಃಕರಣದ ಒಳನಲಿವೇ !
ನಿರ್ಮಲಗೊಳಿಸೈ ಉಜ್ಜ್ವಲಗೊಳಿಸೈ ಸುಂದರಗೊಳಿಸೈ ಓ ಚೆಲುವೇ !
ನವನವ ರೂಪದಿ ಬಾರೈ ಪ್ರಾಣದಲಿ
ವಿಧವಿಧ ವರ್ಣದಿ ಗಂಧದಿ ಗಾನದಲಿ
- * *
ಸಂಕಟದಲಿ ಸಂರಕ್ಷಿಸು ಎಂಬುದು ನನ್ನ ಪ್ರಾರ್ಥನೆಯೆ ಅಲ್ಲಾ !
ಸಂಕಟದಲಿ ಭಯವಿರದಿರೆ ಸಾಕೈ ಹೆಚ್ಚಿನ ಬಯಕೆಯೆ ಇಲ್ಲಾ !
- * *
ಇಕೋ ನನ್ನ ಈ ಶಿರವ ಬಾಗಿಸಿಕೊ ಚರಣಧೂಳಿತಲದಿ
ಸಕಲ ಈ ಅಹಂಕಾರ ಮುಳುಗಿಸೈ ನನ್ನ ನಯನಜಲದಿ !
ನನ್ನಯ ಬಾಳೊಳು ನಿನ್ನಯ ಲೀಲೆಯು ಒಡಮೂಡಿರಲೆಂದು
ಸುಂದರನೇ ಓ ಬಂದಿಹೆನೋ ಈ ಭವದಲಿ ನಾನಿಂದು
- * *
ಒಂದೆ ನಮಸ್ಕಾರ ಪ್ರಭೋ ಒಂದೆ ನಮಸ್ಕಾರಾ !
ಒಂದೆ ನಮಸ್ಕಾರದಲ್ಲಿ ಇಂದು ನಿನ್ನ ಚರಣದಲ್ಲಿ
ದೇಹವೆಲ್ಲ ಚಾಚಲಿ-ವಿಶ್ವವೆಲ್ಲ ತೋಚಲಿ
ಒಂದೆ ನಮಸ್ಕಾರದಿ -ಸಕಲ ಸಂಸಾರದಿ !
ಬಾಳುವೆಯ ಸಾಧನೆಯಲ್ಲಿ ಅಂತರ್ಮುಖತೆಯ ಮತ್ತು ಆತ್ಮ ವಿಕಾಸದ ಹಂತಗಳನ್ನು ಸೂಕ್ಷ್ಮವಾಗಿ ಬಣ್ಣಿಸುವ ಮನೋವಿಶ್ಲೇಷಣೆಯ ಪದ್ಯಗಳು :
ಕೊರಗಿಸಿವೆ ಬಹು ಆಸೆ ಪ್ರಾಣವ ಗಾಸಿಗೊಳಿಸುತೆ ಪೀಡಿಸಿ !
ಪೊರೆಯುತಿಹೆ, ಪ್ರಿಯ ವಂಚಕನೆ, ಈ ಆಸೆಗಳ ಹುಡಿಗೂಡಿಸಿ !
- * *
ನಿನ್ನನು ಕಾಣುವ ಪುಣ್ಯವೆ ಇರದಿರೆ ನನ್ನೀ ಜೀವನದಿ-
ನಿನ್ನನೆ ಪಡೆಯದೆ ಖಿನ್ನತೆ ಉಳಿಯಲಿ ಪ್ರಭುವೇ ಈ ಮನದಿ !
ಕರುಣದ ಕಥೆಯಿದು ಮರೆಯದೆ ಇರಲೈ ಎಂದಿಗು ಸ್ಮರಣದಲಿ
ಕೊರಗಿದು ಜನ್ಮಾಂತರದಲಿ ಸಾಗಲಿ ಸ್ವಪ್ನದಿ ಶಯನದಲಿ !
- * *
ತಡವೇಕೆ ತಡವೇಕೆ ಈ ಹೂವ ಕೊಯ್ದುಕೊಳ್ಳೈ
ಹುಡಿಗೂಡುವುದೊ ಎಂಬ ಸ್ನೇಹಮಯ ಭಯವ ತಳ್ಳೈ !
ಇಂದು ಹೂವೊಳು ಬಣ್ಣ ಕಳಕಳಿಸುತಿರುವಾಗಲೇ
ಗಂಧ ಮಕರಂದಗಳು ನಳನಳಿಸುತಿರುವಾಗಲೇ
ಚೆನ್ನ, ಇಕೊ ಕೊಯ್ದುಕೋ ಇಲ್ಲದ ವಿಲಂಬ ಬೇಡೈ
ಬಿನ್ನವಿಸುವೆನು ಕರದಿ ಮೆಲ್ಲನೆಯ ಮುದ್ದಿ ಸಾಡೈ !
ಜೀವಾತ್ಮ ವಿಶ್ವಾತ್ಮನೊಂದಿಗೆ ಸಹಯೋಗ ಗೈಯುತ್ತ ಸಮರಸನಾಗಿ ಆನಂದಿಸುವ ಅನುಭವಗೀತೆಗಳು :
ಅಹಹ, ನನ್ನಯ ದೇವ, ತುಂಬುತ ತುಂಬುತಲಿ ತನುಪ್ರಾಣವ
ಇಹದಿ ಈಗಳೆ ಮಾಡಬಯಸುವೆ ಯಾವ ಅಮೃತದ ಪಾನವ ?
ನನ್ನ ಕಣ್ಣೋಳು ನಿನ್ನ ವಿಶ್ವವ ಕಂಡುಕೊಳ್ಳುತ ನಲಿವೆಯಾ?
ನಿನ್ನ ಹಾಡನೆ ಕೇಳಿಕೊಳ್ಳಲು, ಕವಿಯೇ ಕಿವಿಯೊಳು ಸುಳಿವೆಯಾ ? * * *
ಓವೊ ನೀನಿಹೆ ನನ್ನ ಬಾಳ್ವೆಯ ಕೊನೆಯ ಗಳಿಗೆಯ ಪೂರ್ಣತೆ !
ಸಾವೆ, ನನ್ನಯ ಸಾವೆ, ಒಡನುಡಿ ಕಿವಿಯೊಳೇ ಆ ಈ ಕಥೆ !
- * *
ಹೊರಡುವ ದಿನದೊಳು ಒರೆಯಲು ಬಳಗಕೆ ನನ್ನೊಳು ಈ ಮಾತೊಂದಿರಲಿ!
ಕಂಡುದುದೆಲ್ಲಾ ಉಂಡುದುದೆಲ್ಲಾ ಉಪಮಾತೀತವೆ ಎಂದಿರಲಿ !
ನಿಸರ್ಗನಿಷ್ಠ ಕವಿ ಪ್ರತಿ ವರ್ಷ ನಾನಾ ಋತುಗಳಲ್ಲಿ ಮತ್ತು ಪಂಚಮಹಾಭೂತ ಗಳಲ್ಲಿ ಭಗವಂತನ ಬಹುಮುಖಗಳನ್ನು ಕಂಡು ಕೊಂಡಾಡುವ ಪ್ರಕೃತಿ ಪ್ರೇಮದ ಪದ್ಯಗಳು :
ಇಂದು ಬಸಂತನು ಬಂದಿಹನೈ ಬಾಗಿಲಲಿ
ನಿಂದಿಹನೈ ಬಾಳ್ದೇಗುಲಲಿ
ಕುಂಠಿತವಿರೆ ಅವಗುಂಠಿತವಿರೆ ತವ ಜೀವನಾ
ಎಂಥ ವಿಡಂಬನೆಯೋ ಅವನಾ !
- * *
ಮತ್ತೆ ಬಂತಾಷಾಢಮಾಸವು ಮುಚ್ಚುತಲಿ ಆಕಾಶವಾ
ವೃಷ್ಟಿಯೊಳಗಿನ ಕಂಪು ಭರದಲಿ ಬಂತು ಗಾಳಿಗೆ ಅಹ ಅಹಾ
- * *
ಇಂದು ಮೇಘದಲಿ ಜಲ ವೇಗದಿಂದಲಿ ತುಂಬಿ ಧೋಧೋಗರೆವುದು !
ಮುಗಿಲ ಕರುಳನು ಬಗಿದು ವ್ಯಾಕುಲಧಾರೆ ಸಂತತ ಹರಿವುದು !
ಶಾಲಿಬನದಲಿ ಗಾಳಿ ತೂಗುಯ್ಯಾಲೆಯಲಿ ಗುಡುಗುಡುಗಿರೆ
ನೀರು ಹರಿವುದು ಮೇರೆವರಿಯುತ ನೆಲದ ನೆಲೆಯೇ ಅಡಗಿರೆ
ಅಂತರಂಗದೊಳೆಂಥ ಕಳವಳ ! ಬಾಗಿಲಡೆತಡೆ ಒಡೆದಿದೆ
ಭದ್ರ ಹೃದಯದಿ ಭಾದ್ರಪದದೊಳು ಮರುಳಿನಾಟವು ನಡೆದಿದೆ!
- * *
ಬಾರೆ ಬಾರೌ ಶರದಲಕ್ಷ್ಮಿಯೆ ಶುಭ್ರಮೇಘದ ರಥದಲಿ
ನೀಲ ನಿರ್ಮಲ ಪಥದಲಿ
ಬೆಳಗಿ ತೊಳಗುವ ಶಾಂತಿಶ್ಯಾಮಲ ವನದಿ ಗಿರಿಪರ್ವತದಲಿ
ಶಿಶಿರ ಶೀತಲ ಶ್ವೇತ ಶತದಲ ಮುಕುಟ ಧರಿಸುತ ಧ್ರುತದಲಿ
ನಿನ್ನ ಆ ಬಂಗಾರಬೀಣೆಯ ಮಿಡಿದು ಮಧುಮಧು ತಾನದಿ
ನುಡಿಸು ಇಂಚರ ಧ್ಯಾನದಿ !
ಪ್ರವೃತ್ತಿಮಾರ್ಗದ ಪ್ರೇಯಃಪಥದ ಜಯಘೋಷವನ್ನು ಗೈವ ಉತ್ಸಾಹಮಯ ಉಜ್ಜ್ವಲ ಪದ್ಯಗಳು :
ಜಗದ ಈ ಆನಂದಯಜ್ಞಕೆ ಬಂತು ನನಗೆ ನಿಮಂತ್ರಣಾ !
ಸೊಗದ ಬಾಳ್ ಇದು; ಧನ್ಯಧನ್ಯವು ಇಂತು ಮಾನವ ಜೀವನಾ !
ಸಾಕು ಸಾಕೀ ಭಜನೆ ಪುಜನೆ ಸಾಕು ಈ ಆರಾಧನೆ !
ದೇಗುಲದ ಕದ ಬಿಗಿದು ಮೂಲೆಯೊಳೇಕೆ ಪಡುತಿಹೆ ವೇದನೆ ?
- * *
ಎನಿತೊ ಅರಿಯದಂಥ ಜನರ ಗುರುತುಗೊಳಿಸಿಹೆ !
ಎನಿತೊ ಮನೆಯೊಳೆನಗೆ ಸ್ಥಳವನಿರಿಸಿ ಬೆಳೆಸಿಹೆ !
- * *
ಅಧಮರಲಿ ಅಧಮರಾದವರ ಅಡಿಯಲ್ಲಿ
ಕಳೆದು ಕಂಗೆಟ್ಟವರ ಕಟ್ಟಕಡೆಯಲ್ಲಿ ನಿನ್ನಡಿಯು ರಾಜಿಸುವುದು !
ಬಡವರಲಿ ಬಡವರಾದವರ ಬುಡದಲ್ಲಿ
ದೀನರಲಿ ದೀನರಾದವರ ದಡದಲ್ಲಿ ನಿನ್ನಡಿಯು ರಾಜಿಸುವುದು !
ನಾದಪ್ರಿಯ ಕವಿ ತನ್ನ ಹೃದಯದಲಿ ಗಾನದೊಂದಿಗೆ ಧ್ಯಾನಸ್ಥನಾದಾಗ ತನ್ಮಯತೆಯನ್ನು ಪಡೆಯುವ ಸ್ವಾನಂದಾನುಭೂತಿಯ ಪದ್ಯಗಳು :
ಎಂತು ಹಾಡುತಲಿರುವೆಯೋ ಗುಣವಂತ ! ನನಗತಿ ವಿಸ್ಮಯಾ !
ಇಂತು ಕೇಳುತ ಕೇಳುತಲಿ ಏಕಾಂತದಲಿ ಮತಿ ತನ್ಮಯಾ !
ನಿನ್ನ ಇನಿದನಿ ತುಳುತುಳುಕುತಿದೆ ಬೆಳಕ ಭುವನದಿ ಚೆಲ್ಲುತ
ಚೆನ್ನ! ತವಸ್ವರ ಕುಸುರುತಿದೆ-ಆ ಪುಳಕ ಗಗನದಿ ಗೆಲ್ಲುತ !
- * *
ಗಾನದಿಂದಲೆ ಒಳಗು ಹೊರಗೂ ನಿನ್ನನರಸುವೆ ಮನದಲಿ
ನನ್ನ ಇಡಿ ಜೀವನದಲಿ !
ನನ್ನ ಹಾಡಿವು ನನ್ನನೊಯ್ದಿವೆ ದೂರದೂರಕೆ ದೂರಕೆ
ಚಾರುಗೃಹಗಳ ದ್ವಾರಕೆ !
ಕವಿ ಸಾಕ್ಷಾತ್ತಾಗಿ ಭಗವಂತನ ಬಿಂಬಾನುಭವವನ್ನು ಪಡೆದು ಅದನ್ನು ಪ್ರತಿಬಿಂಬಿಸುವ ಅಂತಃಸತ್ತ್ವದ ಪದ್ಯಗಳು. ಭಗವಂತ ಭಕ್ತನಿಗೆ ರಾಜ, ಒಡೆಯ, ಗೆಳೆಯ, ಮಾತೆ, ಪಿತ, ಪತಿ, ಎಂಬುದಾಗಿ ತೋರುತ್ತಾನೆ. ಭಗವಂತನಿಗಾಗಿ ಭಕ್ತನ ಅಭಿಸಾರವೂ ಭಕ್ತನಿಗಾಗಿ ಭಗವಂತನ ಅಭಿಸಾರವು ಇಲ್ಲಿ ವರ್ಣಿತವಾಗಿವೆ :
ಬಳಿಯಲಿ ಬಂದನು ಕೆಲದಲಿ ಕುಳಿತನು ಅರಿವೆ ಆಗ್ಗೆ ಇಲ್ಲಾ
ಎಂಥಾ ನಿದ್ದೆಯು ಬಂತೋ ಕಣ್ಣಿಗೆ ಬರಿದು ಭಾಗ್ಯವೆಲ್ಲಾ
ನೀರವ ನಿಶೆಯಲಿ ತೋರಿದನಾತನು ಕನಸೋ ನನಗಂತೂ !
ಪಾಣಿಯೊಳಿಂಪಿನ ಬೀಣೆಯ ಬಾಜನೆ ! -ಕನಸಿಗು ಸವಿಬಂತು !
- * *
ನನ್ನಲಿ ಬೆರೆಯಲು ಎಂದಿನ ದಿನದಿಂದಿಲ್ಲಿಗೆ ಬರುತಿರುವಿ !
ನಿನ್ನನು ತಡೆಯಲು ಯಾರಿಹರಾರ್ಪರು ಇಲ್ಲವೊ ಚಂದ್ರ-ರವಿ !
- * *
ಬೆಳಕಿನ ಬೆಳಕೇ ಬೆಳಕಿಗೆ ಬೆಳಕನು ಸುರಿಯುತ ನೀ ಬಂದೆ !
ಕಳೆಯಿತು ಕತ್ತಲೆ, ಬೆಳಕೋ ಬೆಳಕಿದೆ ನನ್ನಯ ಕಣ್ಮುಂದೆ !
- * *
ಇಲ್ಲಿಯೆ ಹಾಡನು ಮುಗಿಸಲು ಬಯಸುವೆ ಎಲ್ಲಿದೆಯೋ ಕೊನೆಯು ?
ತವ ಸಭೆಯಿಂದಿದೆ ಪುನರಾದೇಶವು ತಪ್ಪಿತು ಯೋಜನೆಯು !
ಹೀಗೆ ಗೀತಗಳ ಅಂಜಲಿ, ಇಷ್ಟದೈವಕ್ಕೆ ಕವಿಯಿಂದ ಅನಂತ ರೀತಿಯಲ್ಲಿ ಅರ್ಪಿತವಾಗಿದೆ.