ಸೋಮಚಾಪ
ಸೋಮಚಾಪ ಚಂದ್ರನ ಬೆಳಕಿನಿಂದ ಉಂಟಾಗುವ ಕಾಮನಬಿಲ್ಲು. ಇದನ್ನು ಬಿಳಿ ಕಾಮನಬಿಲ್ಲು ಎಂದು ಸಹ ಕರೆಯಲಾಗುತ್ತದೆ. ಸಾಮಾನ್ಯವಾಗಿ ಚಂದ್ರನ ಬೆಳಕು ಮಂದವಾಗಿರುವುದರಿಂದ ಸೋಮಚಾಪದ ಹೊಳಪು ಕಡಿಮೆ ಮತ್ತು ಅದನ್ನು ಗುರುತಿಸುವುದು ತುಸು ತ್ರಾಸದಾಯಕ ಕೂಡ. ಸೋಮಚಾಪವು ಯಾವಾಗಲೂ ಆಗಸದಲ್ಲಿ ಚಂದ್ರನ ಸ್ಥಾನಕ್ಕೆ ವಿರುದ್ಧ ದಿಕ್ಕಿನಲ್ಲಿ ಘಟಿಸುತ್ತದೆ. ಸೋಮಚಾಪದ ಹೊಳಪು ಕಡಿಮೆ ಇರುವುದರಿಂದ ಬರಿಗಣ್ಣಿಗೆ ಅದರಲ್ಲಿನ ಬಣ್ಣಗಳನ್ನು ಬೇರೆಬೇರೆಯಾಗಿ ನೋಡುವುದು ಸಾಮಾನ್ಯವಾಗಿ ಕಷ್ಟಕರ. ಬಹುಮಟ್ಟಿಗೆ ಸೋಮಚಾಪ ಕಣ್ಣಿಗೆ ಬಿಳಿಯ ಬಣ್ಣದ್ದಾಗಿ ಕಾಣಿಸುವುದು.
ಹುಣ್ಣಿಮೆಯ ಆಸುಪಾಸಿನ ದಿನಗಳಲ್ಲಿ ಸೋಮಚಾಪವನ್ನು ಕಾಣುವ ಸಂಭವ ಹೆಚ್ಚು. ಚಂದ್ರನು ಕೆಳ ಆಗಸದಲ್ಲಿದ್ದು ರಾತ್ರಿಯ ಆಗಸವು ಕಪ್ಪಾಗಿರುವಾಗ ಚಂದ್ರನ ಸ್ಥಾನದ ವಿರುದ್ಧ ದಿಕ್ಕಿನಲ್ಲಿ ಮಳೆ ಬೀಳುತ್ತಿರುವ ಸನ್ನಿವೇಶದಲ್ಲಿ ಸೋಮಚಾಪ ಉಂಟಾಗುತ್ತದೆ. ಸೋಮಚಾಪದ ಘಟಿಸುವಿಕೆಗೆ ಇಷ್ಟು ಬಗೆಯ ಪೂರ್ವಾವಶ್ಯಕತೆಗಳಿರುವ ಕಾರಣದಿಂದಾಗಿ ಕಾಮನಬಿಲ್ಲಿಗೆ ಹೋಲಿಸಿದಾಗ ಇದು ಒಂದು ಅಪರೂಪದ ವಿದ್ಯಮಾನವಾಗಿದೆ. ಆದರೆ ಜಲಪಾತಗಳ ಆಸುಪಾಸಿನಲ್ಲಿ ಸೋಮಚಾಪದ ಸಂಭವನೀಯತೆ ಹೆಚ್ಚು. ಕೆಲವೊಮ್ಮೆ ಅತಿ ಅಪರೂಪವಾಗಿ ಮಂಜುಮುಸುಕಿದ ವಾತಾವರಣದಲ್ಲಿ ಚಂದ್ರನ ಸುತ್ತಲೂ ಸೋಮಚಾಪ ಕಾಣಿಸಿಕೊಳ್ಳುತ್ತದೆ. ವಿಶ್ವದಲ್ಲಿ ಸೋಮಚಾಪ ಹೆಚ್ಚಾಗಿ ಘಟಿಸುತ್ತಲೇ ಇರುವ ತಾಣಗಳು ಬಲು ಕಡಿಮೆ. ಅವುಗಳಲ್ಲಿ ಅಮೇರಿಕದ ಕಂಬರ್ಲ್ಯಾಂಡ್ ಜಲಪಾತ, ಹವಾಯ್‌ನ ವೈಮಿಯಾ ಮತ್ತು ಆಫ್ರಿಕಾದ ವಿಕ್ಟೋರಿಯಾ ಜಲಪಾತಗಳು ಪ್ರಸಿದ್ಧ.