ಸಾಲಿಮ್ ಅಲೀ

ಭಾರತೀಯ ಪಕ್ಷಿಶಾಸ್ತ್ರಜ್ಞ
(ಸಾಲಿಮ್ ಅಲಿ ಇಂದ ಪುನರ್ನಿರ್ದೇಶಿತ)

ಡಾ. ಸಾಲಿಮ್ ಅಲಿ (ನವೆಂಬರ್ ೧೨, ೧೮೯೬ - ಜುಲೈ ೨೭, ೧೯೮೭)[] ಇವರು ಭಾರತದ ಪ್ರಸಿದ್ಧ ಪಕ್ಷಿವಿಜ್ಞಾನಿ ಮತ್ತು ನಿಸರ್ಗವಾದಿಯಾಗಿದ್ದರು. ಇವರ ಪೂರ್ಣ ಹೆಸರು ಸಲೀಂ ಮೊಯುಜುದ್ದೀನ್ ಅಬ್ದುಲ್ ಅಲಿ. ಇವರನ್ನು ಭಾರತದ ಪಕ್ಷಿಯ ಮನುಷ್ಯ (ಬರ್ಡ್ ಮ್ಯಾನ್ ಆಫ್ ಇಂಡಿಯಾ) ಎಂದು ಕರೆಯಲ್ಪಡುತ್ತಿದ್ದರು. ಇವರು ಮೊಟ್ಟಮೊದಲ್ ಬಾರಿಗೆ ವೈಜ್ಞಾನಿಕ ರೀತಿಯಲ್ಲಿ ಪಕ್ಷಿಗಳ ಅಭ್ಯಾಸದ ಬಗ್ಗೆ ಗಮನ ಹರಿಸಿದರು, ಈ ನಿಟ್ಟಿನಲ್ಲಿ ಇವರ ಪುಸ್ತಕಗಳು ತುಂಬಾ ಸಹಾಯಕಾರಿಯಾಗಿವೆ.

Salim Ali
ಜನನ(೧೮೯೬-೧೧-೧೨)೧೨ ನವೆಂಬರ್ ೧೮೯೬
ಬಾಂಬೆ, ಬಾಂಬೆ ಪ್ರೆಸಿಡೆನ್ಸಿ, ಬ್ರಿಟಿಷ್ ಇಂಡಿಯಾ
ಮರಣ20 June 1987(1987-06-20) (aged 90)
ಬಾಂಬೆ, ಮಹಾರಾಷ್ಟ್ರ, ಭಾರತ ರಾಷ್ಟ್ರೀಯತೆ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಪಕ್ಷಿ ವಿಜ್ಞಾನ
ಜೀವ ವಿಜ್ಞಾನ
ಗಮನಾರ್ಹ ಪ್ರಶಸ್ತಿಗಳುಪದ್ಮಭೂಷಣ (1958)
ಪದ್ಮ ವಿಭೂಷನ್ (1976)
ಕನ್ಸರ್ವೇಷನ್ ಲೀಡರ್ಶಿಪ್ಗಾಗಿ ಜೆ. ಪಾಲ್ ಗೆಟ್ಟಿ ಪ್ರಶಸ್ತಿ (1975)
ಸಂಗಾತಿತೆಹ್ಮಿನ ಅಲಿ
 
Yellow-throated sparrow

ತಂದೆ ಮೋಯಿಜುóದ್ದೀನ್. ತಾಯಿ ಜೀನತ್ ಉನ್ನೀಸಾ. ಮೋಯಿಜುóದ್ದೀನರದ್ದು ತುಂಬು ಕುಟುಂಬ. ಐದು ಜನ ಗಂಡು ಮಕ್ಕಳು (ಹಶಮ್ ಆಲಿ, ಹಮೀದ್ ಆಲಿ, ಜಬೀರ್ ಆಲಿ ಮತ್ತು ಸಲೀಂ ಆಲಿ) ಮತ್ತು ನಾಲ್ವರು ಹೆಣ್ಣು ಮಕ್ಕಳು ( ಆಶ್ರಫ್, ಅಖ್ತರ್, ¥sóÀರಾತ್ ಮತ್ತು ಕಾಮೋ). ಆದರೆ ಈ ತುಂಬು ಕುಟುಂಬದಲ್ಲಿ ಬಾಳಿ ಮಕ್ಕಳ ಅಭ್ಯುದಯವನ್ನು ನೋಡುವ ಭಾಗ್ಯ ಈ ದಂಪತಿಗಳಿಗಿರಲಿಲ್ಲ. ಸಲೀಂ ಆಲಿ ಅವರು ಒಂದು ವರ್ಷದವರಾಗಿದ್ದಾಗ ಮೋಯಿಜುóದ್ದೀನ್, ಮೂರು ವರ್ಷದವರಾಗಿದ್ದಾಗ ಜೀನತ್ ಉನ್ನೀಸಾ ನಿಧನರಾದರು. ಆದರೆ, ಈ ಕೊರತೆಯ ನೆರಳೂ ಮಕ್ಕಳ ಮೇಲೆ ಬೀಳದಂತೆ ಸಾಕಿ ಸಲಹಿದವರು ಸ್ವಂತ ಮಕ್ಕಳಿಲ್ಲದ ಸೋದರ ಮಾವ ಅಮೀರುದ್ದೀನ್ ತಯಾಬ್ಜಿ ಮತ್ತು ಅತ್ತೆ ಹಮೀದಾ ಬೇಗಂ. ಈ ಕರುಣಾಮಯಿ ದಂಪತಿಗಳು ಸಲೀಂ ಆಲಿ ಸಹೋದರ ಸಹೋದರಿಯರನ್ನಲ್ಲದೆ ಇತರೆ ಅನೇಕ ಬಂಧುಗಳ ಮಕ್ಕಳನ್ನೂ ಅನಾಥರನ್ನೂ ತಮ್ಮ ಮನೆಯಲ್ಲಿರಿಸಿಕೊಂಡು ಸಲಹಿದರು. ಸಲೀಂ ಮುಂದೆ ಇದನ್ನು ಸ್ಮರಿಸಿಕೊಂಡು ಹೇಳುತ್ತಾರೆ "ಅವರು ನಮಗೆ ಯಾವ ತಂದೆ - ತಾಯಿಗಿಂತಲೂ ಹೆಚ್ಚು ಬೇಕಾದವರಾಗಿದ್ದರು".

ಮಕ್ಕಳಿಂದ ತುಂಬಿ ಹೋಗಿದ್ದ ಮನೆಯಲ್ಲಿ ಸಲೀಂ ಮತ್ತು ಸಹೋದರರು ಸಂತೋಷವಾಗಿ ತಮ್ಮ ಬಾಲ್ಯವನ್ನು ಕಳೆದರು. ಹಕ್ಕಿಗಳ ಬಗ್ಗೆ ಆಸಕ್ತಿ ಆ ಮನೆಯಲ್ಲಿ ಯಾರಿಗೂ ಇರಲಿಲ್ಲ. ಪ್ರಕೃತಿ ಸಂರಕ್ಷಣೆ ಎಂಬುದು ಹಾಸ್ಯಾಸ್ಪದವಾದ ಮಾತಾಗಿದ್ದ ಆ ಕಾಲ ಶಿಕಾರಿಗಳ ಸುವರ್ಣ ಯುಗ ಎಂದೇ ಗುರುತಿಸಬಹುದು. ಹೀಗಿದ್ದರೂ ಸಲೀಂ ತಮ್ಮ ಸಹೋದರ ಸುಲೇಮಾನ್‍ನನೊಡಗೂಡಿ ಅಡುಗೆಯವನ ಸಹಾಯದಿಂದ ಅಡುಗೆಗೆಂದು ತಂದ ಹಕ್ಕಿಗಳನ್ನು ಸಂರಕ್ಷಿಸಿ ಒಂದು ಗುಪ್ತ ಪಕ್ಷಿ ಸಂಗ್ರಾಹಲಯವನ್ನು ನಡೆಸುತಿದ್ದರು. ಆದರೆ, ಆ ಬಂಧನದಲ್ಲಿದ್ದ ಆ ಹಕ್ಕಿಗಳು ಹೆಚ್ಚು ಕಾಲ ಉಳಿಯದೆ ಸಾವನ್ನಪ್ಪುತಿದ್ದವು.

ಸಾಂಪ್ರದಾಯಿಕ ಮುಸ್ಲಿಂ ಕುಟುಂಬವಾದ ಈ ಮನೆಯಲ್ಲಿ ಕೋಳಿಯ ಬದಲಿಗೆ ಆಗ ಮಾರುಕಟ್ಟೆಯಲ್ಲಿ ಧಂಡಿಯಾಗಿ ಸಿಗುತಿದ್ದ ಇತರೆ ಹಕ್ಕಿಗಳನ್ನು ತಂದು ಶಾಸ್ತ್ರೋಕ್ತವಾಗಿ ಅದರ ಗಂಟಲು ಸೀಳಿ (ಹಲಾಲ್ ಮಾಡಿ) ಅಡುಗೆಗೆ ಬಳಸಲಾಗುತಿತ್ತು. ಈ ಪರಿಪಾಠವೇ ವಿಶ್ವಕ್ಕೆ "ಸಲೀಂ ಆಲಿ" ಎಂಬ ಭಾರತದ ಮಟ್ಟಿಗೆ ಪಕ್ಷಿ ಅಧ್ಯಯನಕ್ಕೆ ಪರ್ಯಾಯ ಪದವೇ ಆದ ಅದ್ಭುತ ಮಾನವನನ್ನು ನೀಡಿದ್ದು. ಒಮ್ಮೆ ತಾನು ಶಿಕಾರಿ ಮಾಡಿದ ಹಕ್ಕಿಯನ್ನು ಸಂಪ್ರದಾಯದ ಪ್ರಕಾರ ಹಲಾಲ್ ಮಾಡಲು ನೋಡಿದಾಗ ಆ ಹಕ್ಕಿಯ ಗಂಟಲಿನ ಮೇಲೆ ಹಳದಿ ಮಚ್ಚೆಯಿದ್ದದ್ದು ಸಲೀಂ ಆಲಿಯವರಿಗೆ "ಇದು ಒಬ್ಬ ಸಂಪ್ರಾದಯಸ್ಥ ಮುಸ್ಲಿಂ ತಿನ್ನಬಹುದಾದ ಹಕ್ಕಿಯೇ?" ಎಂಬ ಸಂಶಯ ಮೂಡಿತು. ಈ ಬಗ್ಗೆ "ಫತ್ವಾ" ಪಡೆಯಲು ಕುಟುಂಬದ ಶಿಕಾರಿಯಾಗಿದ್ದ ಮಾವನನ್ನು ಸಲೀಂ ಸಂಪರ್ಕಿಸಿದರು. ಅವರಿಗೆ ಈ ಹಕ್ಕಿಯ ಗುರುತು ತಿಳಿಯಲಿಲ್ಲ. ಆಗ ಅವರು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ (ಮುಂಬಯಿ ನಿಸರ್ಗ ಇತಿಹಾಸ ಸಂಸ್ಥೆ - ಬಿಎನ್‍ಎಚ್‍ಎಸ್) ಗೌರವ ಕಾರ್ಯದರ್ಶಿಗೆ ಈ ಪಕ್ಷಿಯನ್ನು ಗುರುತಿಸುವಂತೆ ಕೋರಿ ಒಂದು ಪತ್ರಬರೆದು ಸಲೀಂ ಕೈಗಿತ್ತು ಬಿಎನ್‍ಎಚ್‍ಎಸ್‍ಗೆ ಕಳುಹಿಸಿದರು.

ಭಾರತದ ಹಕ್ಕಿ ಮನುಷ್ಯನ ಕತೆ ನಿಜದಲ್ಲಿ ಇಲ್ಲಿಂದ ಪ್ರಾರಂಭವಾಗುತ್ತದೆ. ಆಗ ಬಿಎನ್‍ಎಚ್‍ಎಸ್‍ನ ಗೌರವ ಕಾರ್ಯದರ್ಶಿಯಾಗಿದ್ದ ವಾಲ್ಟರ್ ಸಾಮ್ಯುಯೇಲ್ ಮಿಲ್ಲರ್ಡ್‍ರನ್ನು ಸಲೀಂ ಭೇಟಿಯಾಗಿದರು. ಅವರು ಆ ಹಕ್ಕಿಯನ್ನು ಸುಮ್ಮನೆ ಗುರುತಿಸಿ ಹಿಂದಕ್ಕೆ ಕಳುಹಿಸಿದ್ದರೆ ಏನಾಗುತಿತ್ತೋ. ಆದರೆ, ಮಿಲ್ಲರ್ಡ್ ಹಾಗೆ ಮಾಡಲಿಲ್ಲ! ಹಕ್ಕಿಯನ್ನು ನೋಡುತಿದ್ದಂತೆಯೇ ಅದನ್ನು "ಹಳದಿಗಂಟಲಿನ ಗುಬ್ಬಚ್ಚಿ (ಪೆಟ್ರೊನಿಯಾ ಜಾಂತೋಕೋಲಿಸ್)" ಎಂದು ಗುರುತಿಸಿದರು, ಜೊತೆಗೆ ಬಾಲಕ ಸಲೀಂಗೆ ಅಂದಿನ ಬಿಎನ್‍ಎಚ್‍ಎಸ್‍ನ ಸಂಗ್ರಹದಲ್ಲಿದ್ದ ಚರ್ಮಸುಲಿದು ಹೂರಣ ತುಂಬಿ ಇಟ್ಟಿದ್ದ ಹಕ್ಕಿಗಳನ್ನೆಲ್ಲಾ ಪರಿಚಯಮಾಡಿಸುತ್ತಾ ಬಂದರು. ಪ್ರಭೇದಗಳು, ಉಪಪ್ರಭೇದಗಳು ಅವುಗಳಲ್ಲಿನ ಸೂಕ್ಷ್ಮ ವ್ಯತ್ಯಾಸ ಇವೆಲ್ಲವನ್ನೂ ವಿವರಿಸುತ್ತಾ ಸಂಗ್ರಹಾಗಾರವನ್ನೆಲ್ಲಾ ತೋರಿಸಿದರು[] . ಹಾಗೆ ಪಕ್ಷಿಗಳ ಚರ್ಮ ಸುಲಿದು, ಹೂರಣ ತುಂಬುವ ಕೆಲಸ ಮಾಡುತ್ತಿದ್ದವರನ್ನು ಪರಿಚಯಿಸಿದರು. ಕೊನೆಗೆ ಪಕ್ಷಿಗಳ ಬಗ್ಗೆ ಅಂದು ಲಭ್ಯವಿದ್ದ ಅಮೂಲ್ಯ ಪುಸ್ತಕಗಳನ್ನು ಸಹ ಪರಿಚಯಿಸಿದರು. ಇದರಿಂದ ಬಾಲಕ ಸಲೀಂ ಮೇಲಾದ ಪರಿಣಾಮ ಅಷ್ಟಿಷ್ಟಲ್ಲ. ಈ ಪುಸ್ತಕಗಳಲ್ಲಿ ಎಡ್ವರ್ಡ್ ಹ್ಯಾಮಿಲ್ಟನ್ ಅಟ್ಕೆನ್ ಅವರ 'ಕಾಮನ್ ಬರ್ಡ್ಸ್ ಆಫ್ ಬಾಂಬೆ ಮತ್ತು ಎ ನ್ಯಾಚುರಲಿಸ್ಟ್ ಆನ್ ದ ಪ್ರಾಲ್ ಎಂಬ ಪುಸ್ತಕಗಳು ಸಲೀಂ ಆಲಿಯವರಿಗೆ ಜೀವನದುದ್ದಕ್ಕೂ ಒಂದು ಗೀಳಿನಂತೆಯೇ ಅಂಟಿಕೊಂಡಿದ್ದವು. ವಿಲ್ಲರ್ಡ್ ಅವರ ಈ "ಕೃಪೆ"ಯನ್ನು ಸಲೀಂ ಆಲಿ ಅನೇಕ ಸಂದರ್ಶನಗಳಲ್ಲಿ ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ಈ ಘಟನೆಯಾದ ಅನಂತರ ತಮ್ಮ ಬದುಕಿನ ಗುರಿ ತಿಳಿದ ಸಾಧಕನಂತೆ ಕಾರ್ಯವೆಸಗ ತೊಡಗಿದ ಸಲೀಂ ಮುಂದೆಂದೂ ಹಿಂದಿರುಗಿ ನೋಡಲಿಲ್ಲ. ಭಾರತದಲ್ಲಿ ಶೈಶವಾವಸ್ಥೆಯಲ್ಲೂ ಇದ್ದಿರದ ಪಕ್ಷಿಗಳ ಅಧ್ಯಯನ ಇವರ ಏಕಮೇವ ಗುರಿಯಾಯಿತು.

ತಮ್ಮ ಇತರ ಸಹೋದರಿಯರೊಂದಿಗೆ ಜನಾನ ಮೆಡಿಕಲ್ ಮಿಷನ್ ಶಾಲೆಗೆ ಹೆಣ್ಣು ಮಕ್ಕಳ ಪ್ರೌಢಶಾಲೆಗೆ ಸೇರಿದರು. ಇಲ್ಲಿ ಬಾಲಕರು ಮಾಧ್ಯಮಿಕ ಶಾಲೆಯವರೆಗೆ ಓದಲು ಅವಕಾಶವಿತ್ತು. ಅನಂತರ ಸಂತ. ಜೇóವಿಯರ್ ಶಾಲೆಯನ್ನು ಸೇರಿದರು. ಒಬ್ಬ ಸಾಧಾರಣ ಬುದ್ದಿಮತ್ತೆಯ ವಿದ್ಯಾರ್ಥಿಯಾಗಿದ್ದ ಸಲೀಂ ಆಲಿಗೆ ಶಾಲಾ ದಿನಗಳಲ್ಲಿ ಬಂದ ಒಂದೇ ಒಂದು ಬಹುಮಾನವೆಂದರೆ ಒಳ್ಳೆಯ ನಡತೆಗಾಗಿ ಇರಿಸಿದ್ದ 'ಅವರ್ ಅನಿಮಲ್ ಪ್ರೆಂಡ್ಸ್" ಪುಸ್ತಕ ಬಹುಮಾನ! ಮುಂದೆ ತಮ್ಮ ಶಾಲಾದಿನಗಳನ್ನು ನೆನೆಸಿಕೊಂಡು ಸಲೀಂ ಹೇಳುತ್ತಾರೆ "..ಶಾಲೆಯ ಅ ತಿಳಿಗೇಡಿ ಲೆಕ್ಕಗಳನ್ನು ಮಾಡುವ ಬದಲು ಕಾಡಿನಲ್ಲಿ ಹಕ್ಕಿಗಳನ್ನು ಅಟ್ಟಿಕೊಂಡು ತಿರುಗುವುದು ಎಷ್ಟೋಪಾಲು ಸಂತೋಷದಾಯಕ ಕೆಲಸ...ಕಳೆದ ಅರ್ಧ ಶತಮಾನಕ್ಕೂ ಹೆಚ್ಚುಕಾಲ ಪಕ್ಷೀವೀಕ್ಷಣೆಯನ್ನು ಅದು ನೀಡುವ ಆತ್ಮಸಂತೋಷಕ್ಕಾಗಿ ಮಾಡಿದ್ದೇನೆ. ಪಕ್ಷಿವೀಕ್ಷಣೆ, ಅಧ್ಯಯನ ನನಗೆ ಈ ಯಾಂತ್ರಿಕ ಜಗತ್ತಿನ ಸಂದಿಗ್ಥ ನಾಗರಿಕತೆಯಿಂದ ಪಾರಾಗಿ ಕಣ್ಮನಗಳಿಗೆ ಆನಂದ ತುಂಬುವ ವಾತಾವರಣದಲ್ಲಿ ಆಶ್ರಯ ಪಡೆಯಲು ಇದು ಸಕಾರಣವಾದ ಸಬೂಬು. ಇದನ್ನು ಪಲಾಯನವಾದ ಎನ್ನಬಹುದು. ಆದರೆ ಈ ಪಲಾಯನವಾದ ಸಮರ್ಥನೆಯನ್ನೇನು ಹುಡುಕಬೇಕಾಗಿಲ್ಲ" ಎನ್ನುತ್ತಾರೆ.

ಶಿಕ್ಷಣ

ಬದಲಾಯಿಸಿ

ಶಿಕ್ಷಣ ತ್ಯಜಿಸಿದ ಸಲೀಂ ಬರ್ಮಾದಲ್ಲಿ ಸಹೋದರ ನಡೆಸುತಿದ್ದ ಗಣಿಯನ್ನು ಸೇರಿಕೊಂಡರು. ಈ ಗಣಿ ಬರ್ಮಾದಲ್ಲಿತ್ತು. (ಇಂದಿನ ಮಾಯನ್ಮಾರ್). ಅಲ್ಲಿನ ಮಾನವನಿಂದ ಹಾನಿಗೊಳಗಾಗದ ಕಾಡುಗಳಲ್ಲಿ ಸಾಕಷ್ಟು ಪಕ್ಷಿವೀಕ್ಷಣೆಮಾಡಲು ಸಲೀಂಗೆ ಅವಕಾಶಗಳು ಸಿಕ್ಕವು. 1914 ರಿಂದ 1917ವರೆಗೆ ಮತ್ತು ಮುಂದೆ 1919ರಿಂದ 1923ರವರೆಗೆ ಬರ್ಮಾದಲ್ಲಿದ್ದರು. ಅವರು ಹಿಂದಿರುಗಲು ಕಾರಣ ಅವರ ಜೀವನ ಪಕ್ಷಿಗಳಾಗಿತ್ತೇ ಹೊರತು ವ್ಯಾಪಾರ ವ್ಯವಹಾರವಲ್ಲ. ಎರಡನೇ ಬಾರಿ ಬರ್ಮಾಗೆ ಹೋಗುವ ಮುನ್ನ ಸಲೀಂ ಆಲಿಯವರಿಗೆ 1918ರ ಡಿಸೆಂಬರ್‍ನಲ್ಲಿ ಮುತ್ತಿನ ವ್ಯಾಪಾರಿ ಸಿ.ಎ. ಲತೀಫ್‍ರ ಪುತ್ರಿ ತೆಹ್ಮೀನಾರೊಂದಿಗೆ ವಿವಾಹವಾಯಿತು. ಕಾನ್ವೆಂಟ್ ಶಿಕ್ಷಣ ಪಡೆದು ವಿದೇಶದಲ್ಲಿದ್ದವರಗಿದ್ದರೂ ಸಲೀಂ ಆಲಿಯವರೊಂದಿಗಿನ ಕಾಡುಗಳಲ್ಲಿನ ಜೀವನಕ್ಕೆ ಹೊಂದಿಕೊಂಡರು. ತೆಹ್ಮೀನಾರಿಗೆ ಇಂಗ್ಲಿಷ್ ಭಾಷೆಯ ಮೇಲೆ ಅದ್ಭುತ ಹಿಡಿತವಿತ್ತು. ಸಲೀಂ ಆಲಿ ಹಸ್ತಪ್ರತಿಗಳನ್ನು ಸಿದ್ಧಪಡಿಸುವಾಗ ಭಾಷೆಯನ್ನು ಸರಳಮಾಡುವುದರಲ್ಲಿ ಇವರು ಸಾಕಷ್ಟು ಸಹಾಯ ಮಾಡಿದರು. ಆದರೆ, ಪುಸ್ತಕ ಪ್ರಕಟವಾದುದನ್ನು ನೋಡಲು ತೆಹ್ಮೀನಾ ಬದುಕಿರಲಿಲ್ಲ. ಪಕ್ಷಿಗಳ ಅಧ್ಯಯನವನ್ನು ಮುಂದುವರಿಸಲು ಒತ್ತಾಸೆಯಾಗಿದ್ದ ಹಾಗೂ ಆರ್ಥಿಕವಾಗಿ ಅತ್ಯಂತ ದುರ್ಭರವಾಗಿದ್ದ ಕಾಲದಲ್ಲೂ ಎದೆಗುಂದದೆ, ಸಲೀಂ ಆಲಿಯವರ ಎಲ್ಲ ಕೆಲಸಕ್ಕೆ ಸ್ಫೂರ್ತಿಯಾಗಿದ್ದ ತೆಹ್ಮೇನಾ 1939ರಲ್ಲಿ ಒಂದು ಶಸ್ತ್ರಚಿಕೆತ್ಸೆಯಾದನಂತರ ನಂಜೇರಿ ತೀರಿಹೋದರು. ತೆಹ್ಮೀನಾ ಇಲ್ಲದ ಡೆಹರಾಡೂನ್‍ನಲ್ಲಿ ಇರಲು ಸಾಧ್ಯವಾಗದೆ ಮುಂಬಯಿಗೆ ಬಂದು ನೆಲೆಸಿದರು. ಮಕ್ಕಳಿರದಿದ್ದ ಸಲೀಂ ಆಲಿ ಮರು ವಿವಾಹವಾಗಲಿಲ್ಲ. ಮುಂದೆ ಒಂದು ಸಂದರ್ಶನದಲ್ಲಿ "..ನನ್ನ ಜೀವನದ ದೊಡ್ಡ ಅದೃಷ್ಟವೆಂದರೆ, ಮಡದಿ ತೆಹ್ಮೀನಾ. ಈಗ ಹಿಂದಿರುಗಿ ನೋಡಿದರೆ ನನ್ನ ಸಾಧನೆಗಳಿಗೆ ಪ್ರಮುಖ ಕಾರಣ ಅವಳೇ ಎಂದೆನಿಸುತ್ತದೆ. ಏಕೆಂದರೆ ಏಕಾಭಿಪ್ರಾಯದ ಸಂಗಾತಿ ಇಲ್ಲದೇ ಏನ್ನನ್ನೂ ಸಾಧಿಸಲಾಗುವುದಿಲ್ಲ" ಎಂದು ನೆನೆಪಿಸಿಕೊಂಡಿದ್ದಾರೆ.

ಸೇಂಟ್ ಜೇóವಿಯರ್ ಕಾಲೇಜಿನಲ್ಲಿ ವಾಣಿಜ್ಯ ಮತ್ತು ಲೆಕ್ಕಪತ್ರಗಳ ಅಧ್ಯಯನಕ್ಕೆ ಸೇರಿದ ಸಲೀಂ ತಮ್ಮ ಅಧ್ಯಯನಕ್ಕೆ ಪ್ರಾಣಿಶಾಸ್ತ್ರವನ್ನೂ ಸೇರಿಸಿಕೊಂಡರು. ಪ್ರಾಣಿಶಾಸ್ತ್ರದ ತರಗತಿಗಳಾಗುತ್ತಲೇ ಬಿಎನ್‍ಎಚ್‍ಎಸ್‍ಗೆ ದೌಡಾಯಿಸುತಿದ್ದ ಇವರು, ದಿನ ಗಟ್ಟಲೆ, ವಾರಗಟ್ಟಲೆ ಅಲ್ಲಿನ ಗ್ರಂಥಾಲಯ ಹಾಗೂ ಸಂಗ್ರಾಹಾಲಯದಲ್ಲಿ ಅಧ್ಯಯನನಿರತರಾಗಿಬಿಡುತಿದ್ದರು. ಎರಡು ವರ್ಷಗಳ ಕಾಲ ಮುಂಬಯಿನ ಪ್ರಿನ್ಸೆಸ್ ಆಫ್ó ವೇಲ್ಸ್ ಪ್ರಕೃತಿ ಇತಿಹಾಸ ಸಂಗ್ರಹಾಲಯದಲ್ಲಿ ಮಾರ್ಗದರ್ಶಕ-ಉಪನ್ಯಾಸಕರಾಗಿದ್ದರು.[][]. ಆದರೆ, ಹೇಳಿದ್ದನ್ನೇ ಹೇಳುವ ಈ ಕೆಲಸ ಅವರಿಗೆ ಬೇಸರ ತರಿಸಿತು. ಪಕ್ಷಿಶಾಸ್ತ್ರದ ಅಧ್ಯಯನ ಮಾಡಲು ತವಕಿಸುತಿದ್ದ ಅವರಿಗೆ ಅಂದಿನ ಭಾರತದ ಯಾವುದೇ ಕಾಲೇಜಿನಲ್ಲಿ ಈ ವಿಜ್ಞಾನದ ಶಾಖೆಗಳಿರಲಿಲ್ಲ. ಆನಂತರ ಇಂಗ್ಲೆಂಡ್ ಹಾಗೂ ಜರ್ಮನಿಯಲ್ಲಿ ಅಧ್ಯಯನಕ್ಕೆ ಅವಕಾಶ ಇರುವದನ್ನು ಮನಗೊಂಡ ಸಲೀಂ, ಕೊನೆಗೆ ಬರ್ಲಿನ್ ವಿಶ್ವವಿದ್ಯಾನಿಲಯದ ಪ್ರೊ|| ಎರ್ವಿನ್ ಸ್ಟ್ರೆಸ್‍ಮನ್‍ಅವರ ಮಾರ್ಗದರ್ಶನದಲ್ಲಿ ಪಕ್ಷಿಶಾಸ್ತ್ರವನ್ನು ಕ್ರಮಬದ್ಧವಾಗಿ ಅಧ್ಯಯನಮಾಡಿದರು. ಅವರ ಬರ್ಲಿನ್ ವಾಸದಲ್ಲಿ ಪರಿಚಿತರಾದ ಅನೇಕ ಪಕ್ಷಿಶಾಸ್ತ್ರ ವಿದ್ವಾಂಸರಿಂದ ಪಕ್ಷಿಗಳ ಬಗ್ಗೆ ಅಧ್ಯಯನ ನಡೆಸುವುದು, ಸರ್ವೇಕ್ಷಣೆ ಹಾಗೂ ಉಂಗುರ ತೊಡಿಸಿ ಮಾಡುವ ಅಧ್ಯಯನಗಳ ಬಗ್ಗೆ ಪ್ರಾಯೋಗಿಕ ತರಬೇತಿ ಪಡೆದರು. ಪಕ್ಷಿ ವಲಸೆಯನ್ನು ಅಧ್ಯಯನ ಮಾಡಿದರು. ಇವೆಲ್ಲದರ ಸಾರ್ಥಕ ಪ್ರಯೋಜನವನ್ನು ಸಲೀಂ ಆಲಿ ಭಾರತದಲ್ಲಿ ಸರ್ವೇಕ್ಷಣೆಗಳನ್ನು ನಡೆಸುವಾಗ ಪಡೆದುಕೊಂಡರು.

ವೃತ್ತಿ ಜೀವನ

ಬದಲಾಯಿಸಿ

ವಿಶ್ವದರ್ಜೆ ತರಬೇತಿ ಮುಗಿಸಿ ಭಾರತಕ್ಕೆ ಮರಳಿದ್ದಾಗ ಅವರಿಗೆದುರಾಗಿದ್ದು, ನಿರುದ್ಯೋಗ. ಆರ್ಥಿಕ ಕಾರಣಗಳಿಗಾಗಿ ಅವರ ಹುದ್ದೆಯನ್ನು ರದ್ದುಮಾಡಲಾಗಿತ್ತು. ಈ ನಿರುದ್ಯೋಗ ಪರ್ವದಲ್ಲಿ ಸಲೀಂ ಆಲಿ ತಮಗೆ ದೊರೆತಿದ್ದ ತರಬೇತಿಯ ಯುಕ್ತ ಬಳಕೆಗೆ ಒಂದು ಪರಿಯೋಜನೆಯನ್ನು ಸಿದ್ಧಪಡಿಸಿದರು. ಆಗ ಭಾರತದ ಯಾವುದೇ ಸಂಸ್ಥಾನಗಳ ಪಕ್ಷಿಗಳ ಸರ್ವೇಕ್ಷಣೆ ನಡೆದಿರಲಿಲ್ಲ. ಈ ಕಾರ್ಯ ಕೈಗೆತ್ತಿಕೊಳ್ಳುವುದಾಗಿ ಸಲೀಂ ಆಲಿ ತೀರ್ಮಾನಿಸಿದರು. "ಸರ್ವೇಕ್ಷಣಾ ಪರಿಯೋಜನೆಗಳು ಬಿಎನ್‍ಎಚ್‍ಎಸ್ ಮೂಲಕ ನಡೆಯುವುದು. ಪ್ರಾಯೋಜಕರು ಕೇವಲ ಸರ್ವೇಕ್ಷಣೆಯ ವೆಚ್ಚ ನೀಡುವುದು; ತಮ್ಮ ಸೇವೆ ಸಂಪೂರ್ಣ ಉಚಿತ" ಈ ಸೂತ್ರದ ಮೇಲೆ ಸರ್ವೇಕ್ಷಣಾ ಕಾರ್ಯಯೋಜನೆ ಸಿದ್ಧಪಡಿಸಿದ್ದರು. ಅಂದಿನ ಅನೇಕ ಸಂಸ್ಥಾನಗಳ ರಾಜ ಮಹಾರಾಜರುಗಳು, ಅಧಿಕಾರಿಗಳು ಈ ಯೋಜನೆಯನ್ನು ಸ್ವಾಗತಿಸಿದರು. ಹೀಗಾಗಿ ಭಾರತದ ಅನೇಕ ಸಂಸ್ಥಾನಗಳ ಪಕ್ಷಿ ಸರ್ವೇಕ್ಷಣೆ ಸಾಧ್ಯವಾಯಿತು. ಜೊತೆಗೆ, ಸಲೀಂ ಆಲಿಯವರಿಗೆ ಪಕ್ಷಿಗಳ ಸರ್ವೇಕ್ಷಣೆಯಲ್ಲಿ ತೊಡಗಿಕೊಳ್ಳಲು ಆಂಶಿಕವಾಗಿ ಪ್ರೇರಕವಾಗಿದ್ದ ಸ್ಟವರ್ಟ್‍ರ "ಫೌನಾ ಆಫ್ ಬ್ರಿಟಿಷ್ ಇಂಡಿಯಾ" ಪುಸ್ತಕದ ವಿಮರ್ಶೆಯಲ್ಲಿದ್ದ " ....ಇಡೀ ಪುಸ್ತಕದಲ್ಲಿ ಭಾರತೀಯ ಪ್ರಕೃತಿ ಶಾಸ್ತ್ರಜ್ಞರಿಗೆ ಎಂದು ಹೆಸರಿಸಬಹುದಾದ ಕೊಡುಗೆ ಏನೂ ಇಲ್ಲ. ಬಹುಶಃ ಯೂರೋಪಿಯನ್ನರು ಭಾರತ ಬಿಟ್ಟು ಹೋದರೆ, ಆ ಭೂಭಾಗದ ಜೀವಿವೈವಿಧ್ಯದ ವರದಿಗಳು ನಿಂತೇ ಹೋಗುತ್ತವೆ" ಎಂಬ ಭವಿಷ್ಯವಾಣಿಯನ್ನು ಸುಳ್ಳುಮಾಡಿತು. ಬ್ರಿಟೀಷರಲ್ಲದವರಿಗೆ ಸಾಮಾನ್ಯವಾಗಿ ದೊರಕದ ಬ್ರಿಟಿಷ್ ಪಕ್ಷಿಶಾಸ್ತ್ರಜ್ಞರ ಸುವರ್ಣಪದಕ ಸಲೀಂ ಆಲಿ ಅವರಿಗೆ ದೊರಕಿಸಿತು(1967).

ಈ ಪರಿಯೋಜನೆಗಾಗಿ ಪ್ರಾರಂಭವಾದ ಪಕ್ಷಿಯಾತ್ರೆ ಸಲೀಂ ಆಲಿಯವರ ಜೀವನದ ಕೊನೆಯ ಒಂದು ವರ್ಷದವರೆಗೂ ಮುಂದುವರೆಯಿತು. ಉತ್ತರದಲ್ಲಿ ಕಾಶ್ಮೀರದಿಂದ ದಕ್ಷಿಣದ ಕೇರಳ ಮತ್ತು ಪೂರ್ವದಲ್ಲಿ ಕಚ್‍ನಿಂದ ಪಶ್ಚಿಮದ ಮಿಶ್ಮಿ ಪರ್ವತಗಳವರಗೆ ಇವರ ಪಕ್ಷಿಗಾಗಿ ಅಲೆದಾಟ ಸಾಗಿತ್ತು. ಇವುಗಳಲ್ಲಿನ ಮುಖ್ಯ ಸರ್ವೇಕ್ಷಣೆಗಳೆಂದರೆ: ಹೈದರಾಬಾದ್ ಸಂಸ್ಥಾನದ ಪಕ್ಷಿ ಸರ್ವೇಕ್ಷಣೆ, 1931/32 ಟ್ರಾವೆಂಕೂರ್ ಮತ್ತು ಕೊಚಿನ್ ಸಂಸ್ಥಾನಗಳ ಪಕ್ಷಿ ಸರ್ವೇಕ್ಷÀಣೆ, 1933 ರಾಜಪಠಾಣ ಸಂಸ್ಥಾನದ ಬಹವಾಲ್‍ಪುರ ಪ್ರದೇಶದ ಸರ್ವೇಕ್ಷಣೆ 1934/39 ಕಛ್ ಪ್ರದೇಶದ ಸರ್ವೇಕ್ಷಣೆ, 1945 ಗುಜರಾತ್ ಪ್ರದೇಶದ ಸರ್ವೇಕ್ಷಣೆ, 1946 ಪೂರ್ವ ಹಿಮಾಲಯದ ಮಿಶ್ಮಿ ಪರ್ವತಗಳಲ್ಲಿ ನಡೆಸಿದ ಮೊದಲ ಸರ್ವೇಕ್ಷಣೆ, 1948 ಬಸ್ಟಾರ್ ಪ್ರದೇಶದ ಸರ್ವೇಕ್ಷಣೆ, 1949 ಸಿಕ್ಕಿಂ ಪ್ರದೇಶದ ಸರ್ವೇಕ್ಷಣೆ, 1955 ಭೂತಾನ್‍ನಲ್ಲಿ ನಡೆಸಿದ ಸರ್ವೇಕ್ಷಣೆಗಳು, 1966, 1973

 
Label for a specimen collected by Salim Ali during his Mysore State survey

ಈ ಸರ್ವೇಕ್ಷಣೆಗಳಿಂದ ಮಹತ್ವದ ವೈಜ್ಞಾನಿಕ ಫಲಿತಾಂಶಗಳು ದೊರೆಯುವುದರೊಂದಿಗೆ, ಭಾರತದಲ್ಲಿನ ಪಕ್ಷಿಗಳ ಬಗೆಗೆ ಅಗಾಧ ಪ್ರಮಾಣದ ಮಾಹಿತಿ ಸಂಗ್ರಹಿತವಾದವು. ಈ ಸರ್ವೇಕ್ಷಣಾ ಸಮಯದಲ್ಲಿ ಅವರು ಅನೇಕ ಹೊಸ ಸಂಗತಿಗಳನ್ನು ವರದಿ ಮಾಡಿದರು. ಮರುಭೂಮಿ ಪ್ರದೇಶಗಳಲ್ಲಿ ಅತಿನೇರಳೆ ಕಿರಣಗಳ ಪ್ರಭಾವದಿಂದ ಅಲ್ಲಿನ ಪಕ್ಷಿ ಪ್ರಾಣಿಗಳ ಬಣ್ಣ ಪೇಲವವಾಗುವುದು ತಿಳಿದ ವಿಷಯವಾಗಿತ್ತು. ಆದರೆ, ಮಳೆ ಬಂದು ಈ ಕಿರಣಗಳ ಪ್ರಭಾವ ಕಡಮೆಯಾದಂತೆಯೇ ಇದೇ ಪ್ರಾಣಿಗಳ ಬಣ್ಣ ಗಾಢವಾಗುತ್ತದೆ ಎಂಬುದನ್ನು ಸಲೀಂ ಆಲಿ ಪತ್ತೆಹಚ್ಚಿದರು. ಇದೇ ಕಛ್ ಪ್ರದೇಶದಲ್ಲಿ ಐದು ಲಕ್ಷಕ್ಕೂ ಹೆಚ್ಚು ಪ್ಲೇಮಿಂಗೋಗಳು ವಂಶಾಭಿವೃದ್ಧಿ ನಡೆಸುವುದನ್ನು ಅಧ್ಯಯನಮಾಡುತ್ತಾ, ಅಲ್ಲಿಯೇ ಅವೋಸೆಟ್ ಹಕ್ಕಿಗಳು ಮತ್ತು ಪ್ಲೆಮಿಂಗೋ ಬಳಸಿ ಬಿಟ್ಟ ಗೂಡನ್ನು ಬಳಸುತ್ತಿದ್ದ ಹೆಜ್ಜಾರ್ಲೆಗಳ ವರ್ತನೆಯನ್ನು ವರದಿಮಾಡಿದರು.

ಸರ್ವೇಕ್ಷಣೆಯ ಸಮಯದಲ್ಲಿ ಹಕ್ಕಿಗಳ ಸಂಗ್ರಹವನ್ನೂ ಮಾಡಿದ್ದರಿಂದ ಬಿಎನ್‍ಎಚ್‍ಎಸ್‍ನ ಹಾಗೂ ಇತರ ಪ್ರಾಕೃತಿಕ ಇತಿಹಾಸ ಸಂಗ್ರಹಾಲಯಗಳ ಹಕ್ಕಿ ಸಂಗ್ರಹವೂ ಬೆಳೆಯಿತು. ಸಂಗ್ರಹಕ್ಕಾಗಿ ಹಕ್ಕಿಗಳನ್ನು ಕೊಲ್ಲುವ ವಿಷಯವಾಗಿ ಸಲೀಂ ಆಲಿ ಒಮ್ಮೊಮ್ಮೆ ಭಾವುಕರಾಗುತಿದ್ದರು. ಆನಂತರ “ಅಧ್ಯಯನ ಹಾಗೂ ಸಂರಕ್ಷಣೆಗಾಗಿ ಕೆಲವು ಹಕ್ಕಿಗಳನ್ನು ಕೊಲ್ಲಬೇಕಾಗುತ್ತದೆ” ಎಂದು ಸಮಾಧಾನ ಹೇಳಿಕೊಳ್ಳುತ್ತಿದ್ದರು! ಅವರ ಅವಿರತ ಶ್ರಮದ ಫಲವಾಗಿ ಇಂದು ಬಿಎನ್‍ಎಚ್‍ಎಸ್‍ನಲ್ಲಿ ದೊಡ್ಡ ಸಂಗ್ರಹ ಅಧ್ಯಯನಾಸಕ್ತರಿಗೆ ಲಭ್ಯವಿದೆ.

ಸಲೀಂ ಆಲಿಯವರ ಮಹತ್ತರ ಕೊಡುಗೆಗಳಲ್ಲಿ ಒಂದು ಅವರು ನೇಕಾರ ಹಕ್ಕಿಗಳ ಸಂತಾನಾಭಿವೃದ್ಧಿ ಸಮಯದ ಕುತೂಹಲಕಾರಿ ನಡವಳಿಕೆಯನ್ನು ಕಂಡುಹಿಡಿದದ್ದು. ಇವುಗಳಲ್ಲಿ ಗಂಡುಗಳು ನಾರಿನಿಂದ ಗೂಡನ್ನು ಅರ್ಥರಚಿಸಿ, ಹೆಣ್ಣಿನ ಅನುಮೋದನೆಗೆ ಕಾಯುತ್ತವೆ! ಗೂಡನ್ನು ಹೆಣ್ಣು ಒಪ್ಪಿ ಅದರಲ್ಲಿ ಪ್ರವೇಶಿಸಿದರೆ, ಗಂಡು ಆ ಗೂಡನ್ನು ಪೂರ್ಣಗೊಳಿಸುತ್ತದೆ. ಮುಂದೆ ಗಂಡು ಹೆಣ್ಣುಗಳ ಮಿಲನವಾಗಿ ಹೆಣ್ಣು ಮೊಟ್ಟೆ ಇಡುತ್ತದೆ. ಒಂದು ಪಕ್ಷ ಗೂಡು ಒಪ್ಪಿಗೆಯಾಗದಿದ್ದಲ್ಲಿ ಆ ಗೂಡನ್ನು ಅಷ್ಟಕ್ಕೇ ಬಿಟ್ಟು ಇನ್ನೊಂದು ಗೂಡನ್ನು ರಚಿಸುತ್ತದೆ. ಒಪ್ಪಿದ ಹೆಣ್ಣು ಮುಂದೆ ಮೊಟ್ಟೆ ಇಟ್ಟು ಮರಿಮಾಡಿದರೆ, ಗಂಡು ಇನ್ನೊಂದು ಗೂಡು ರಚಿಸಿ ಮತ್ತೊಂದು ಹೆಣ್ಣಿಗಾಗಿ ಕಾಯುತ್ತದೆ. ಬಹು ಪತ್ನಿತ್ವ ಈ ಹಕ್ಕಿಗಳಲ್ಲಿನ ಪದ್ಧತಿ[] . ಆ ಅಧ್ಯಯನ ಕ್ಷೇತ್ರಕಾರ್ಯದ ಪ್ರಾಮುಖ್ಯತೆಯನ್ನು ಸ್ಥಾಪಿಸಿತು. ಕ್ಷೇತ್ರಕಾರ್ಯ ಆಧಾರಿತ ಸಂಶೋಧನಾ ಲೇಖನಗಳು ಬರತೊಡಗಿತು. ಒಂದು ರೀತಿಯಲ್ಲಿ ಈ ಕ್ಷೇತ್ರಕಾರ್ಯಕ್ಕೆ ಮಹತ್ವ ತಂದುಕೊಟ್ಟಿದ್ದೂ ಸಲೀಂ ಆಲಿಯವರ ಒಂದು ಹೆಗ್ಗಳಿಕೆ.

ಸಮರ್ಥ ಲೇಖಕ

ಬದಲಾಯಿಸಿ
 
An interpretation centre at Ranganathittu Bird Sanctuary named after Salim Ali

ತಮ್ಮ ಸರ್ವೇಕ್ಷಣೆಗಾಗಿ ರಾಷ್ಟ್ರದಾದ್ಯಂತ ಪ್ರವಾಸ ಮಾಡುತಿದ್ದಾಗ ಕಂಡು ಹಿಡಿದ ಪಕ್ಷಿಧಾಮ ಕರ್ನಾಟಕದ ರಂಗನ ತಿಟ್ಟು. ಇದನ್ನು ಪತ್ತೆಮಾಡಿದ್ದಲ್ಲದೆ ಅದಕ್ಕೆ ಸೂಕ್ತ ರಕ್ಷಣೆ ಕೊಡಿಸುವಲ್ಲಿಯೂ ಇವರು ಸಫಲರಾದರು. ಕರ್ನಾಟಕದೇವರಾಯನದುರ್ಗಕ್ಕೆ ಇವರು ನಾಲ್ಕು ಬಾರಿ ಭೇಟಿ ನೀಡಿದ್ದರು. ತಮ್ಮೆಲ್ಲ ಅಲೆದಾಟದಿಂದ ಲಭ್ಯವಾದ ಜ್ಞಾನವನ್ನು ಪುಸ್ತಕಗಳ ಮೂಲಕ ಜಗತ್ತಿನೊಂದಿಗೆ ಹಂಚಿಕೊಂಡರು. ಪ್ರತಿ ಕ್ಷೇತ್ರಕಾರ್ಯದಲ್ಲೂ ಜಾಗರೂಕತೆಯಿಂದ ತಮ್ಮ ಸುಂದರವಾದ ಕೈಬರಹದಲ್ಲಿ ಮಾಡಿಕೊಂಡ ಟಿಪ್ಪಣಿ ಪುಸ್ತಕದಿಂದ ಮಾಹಿತಿಯನ್ನು ಪ್ರತಿ ಪ್ರಭೇದಕ್ಕೆ ಅವರು ಇರಿಸಿದ್ದ ಪ್ರತ್ಯೇಕ ಪುಸ್ತಕಕ್ಕೆ ವರ್ಗಾಯಿಸುತಿದ್ದರು. ಇವುಗಳ ಸಹಾಯದಿಂದ ಬಂದ ಪುಸ್ತಕಗಳಲ್ಲಿ ಮುಖ್ಯವಾದದ್ದು “ದಿ ಬುಕ್ ಆಫ್ ಇಂಡಿಯನ್ ಬರ್ಡ್ಸ್” 1941ರಲ್ಲಿ ಪ್ರಕಟವಾಯಿತು. ಬಹಳ ಜನಪ್ರಿಯವಾದ ಈ ಪುಸ್ತಕ ಮುಂದೆ ಹಲವಾರು ಮುದ್ರಣಗಳನ್ನು ಕಂಡು, ಇದೀಗ (2006)ಹದಿಮೂರನೆ ಪರಿಷ್ಕರಣದ ಎರಡನೇ ಮುದ್ರಣದಲ್ಲಿದೆ. ಇದರಿಂದ ಬಂದ ಹಣ ಸಲೀಂ ಆಲಿಯರಿಗೆ ತಮ್ಮ ಸಾಲ ತೀರಿಸಲು ಉಪಯೋಗವಾಯಿತು. ಇದು ಹಿಂದಿ, ಪಂಜಾಬಿ ಹಾಗೂ ಉರ್ದು ಭಾಷೆಗಳಿಗೆ ಅನುವಾದಗೊಂಡಿದೆ. ಲೀಯಿಪ್ ಫುತೇಆಲಿಯೊಂದಿಗೆ ಬರೆದ "ಸಾಮಾನ್ಯ ಪಕ್ಷಿಗಳು" ಪುಸ್ತಕ ನ್ಯಾಷನಲ್ ಬುಕ್ ಟ್ರಸ್ಟ್ ಮೂಲಕ ದೇಶದ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ. ಮುಂದೆ ಇವರ ಪ್ರಕಟಣೆಗಳು ಅವಿರತ ಕ್ಷೇತ್ರಕಾರ್ಯ, ಅಧ್ಯಯನ (ಸಲೀಂ ಆಲಿ ಒಬ್ಬ ಗೀಳು ಹಿಡಿದಂತಂಹ ಓದುಗಾರರಾಗಿದ್ದರು)ಮುಂದುವರೆದಂತೆ ಕಡಿಮೆಯಾಗದೆ ಮುಂದುವರೆದಿದ್ದು ಪಕ್ಷಿಶಾಸ್ತ್ರದ ಪಾಲಿಗೆ ಒಂದು ವರ. 'ದಿ ಬರ್ಡ್ಸ್ ಆಫ್ ಕಛ್, 195, 'ಹಿಲ್ ಬರ್ಡ್ಸ್ ಆಫ್ ಇಂಡಿಯ 1949, ದಿ ಬರ್ಡ್ಸ್ ಆಫ್ ಕೇರಳ (ಮೂರನೆ ಮುದ್ರಣ 1985), ಬರ್ಡ್ಸ್ ಆಫ್ ಸಿಕ್ಕಿಂ, 1962, ದಿ ಫೀಲ್ಢ್ ಗೈಡ್ ಟು ದ ಬರ್ಡ್ಸ್ ಆಫ್ ಈಸ್ಟ್ರನ್ ಹಿಮಾಲಯಾಸ್, 1977. ಅವರ ಬರಹ ಜೀವನದ ದೈತ್ಯ ಸಾಧನೆ ಎಂದರೆ ಹತ್ತು ಸಂಪುಟಗಳಲ್ಲಿ ಪ್ರಕಟವಾದ 'ದಿ ಹ್ಯಾಂಡ್ ಬುಕ್ ಆಫ್ ಬರ್ಡ್ಸ್ ಆಫ್ ಇಂಡಿಯಾ ಅಂಡ್ ಪಾಕಿಸ್ಥಾನ್ ಅವರ ನಿಡುಗಾಲದ ಗೆಳೆಯ ಡಾ. ಸಿಡ್ನಿ ಡಿಲ್ಲಾನ್ ರಿಪ್ಲೈ (ಸ್ಮಿತ್‍ಸೋನಿಯನ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದವರು) ಇದರ ಸಹ ಲೇಖಕರು. ಈ ಪುಸ್ತಕಕ್ಕಾಗಿ ಸಲೀಂ ಆಲಿ ದಿನಕ್ಕೆ 12 ರಿಂದ 15 ಗಂಟೆಗಳ ಕೆಲಸಮಾಡುತಿದ್ದರು. ಪುಸ್ತಕದ ಮೊದಲ ಕರಡು ಪ್ರತಿಯನ್ನು ಸ್ವತಃ ತಯಾರಿಸಿದರು. ಇದರ ಎಲ್ಲ ಹತ್ತು ಸಂಪುಟಗಳು ಆರೇ ವರ್ಷಗಳಲ್ಲಿ ಪ್ರಕಟವಾಯಿತೆಂದರೆ (198-74) ಸಲೀಂ ಆಲಿಯವರ ಕರ್ತೃತ್ವ ಶಕ್ತಿಯ ಅರಿವಾಗುತ್ತದೆ.

ಪಕ್ಷಿ ಸಂರಕ್ಷಕ

ಬದಲಾಯಿಸಿ

ಕೇವಲ ಪಕ್ಷಿಗಳ ಅಧ್ಯಯನ ಮಾತ್ರ ಇವರಿಗೆ ತೃಪ್ತಿನೀಡುತ್ತಿರಲಿಲ್ಲ. ಅವುಗಳ ಸಂರಕ್ಷಣೆಗೆ ಪಣ ತೊಟ್ಟು ಕೆಲಸಮಾಡಿದವರು ಸಲೀಂ ಆಲಿ. ಅವರ ಅವಿರತ ಪ್ರಯತ್ನದಿಂದ ಸಾಧಿತವಾದದ್ದು ಭರತಪುರ ವನ್ಯ ಧಾಮ. ರಾಜರ ಖಾಸಗೀ ಬೇಟೆ ಪ್ರದೇಶವಾಗುವ ಅಪಾಯವಿದ್ದ ಈ ಕಾಡನ್ನು ವನ್ಯಜೀವಿಧಾಮವನ್ನಾಗಿಸಿದ್ದು ಸಲೀಂ ಆಲಿಯವರ ಪರಿಶ್ರಮ. ಕೇರಳದ ಮೌನಕಣಿವೆ ಕಾಡಿನ ಹೋರಾಟ ತಂದ ವಿಜಯ, ಭಾರತದ ಪರಿಸರ ಪರ ಹೋರಾಟದ ಮಹತ್ವದ ಮೈಲುಗಲ್ಲು. ಇದರಲ್ಲಿ ಸಲೀಂ ಆಲಿಯವರದು ಮಹತ್ವದ ಪಾಲು.

ನಾಶವಾಗಿ ಹೋಗಿದೆ ಎಂದೇ ನಂಬಲಾಗಿದ್ದ ಹನಿಗೈಡ್ ಪಕ್ಷಿಯನ್ನು ಪತ್ತೆ ಮಾಡಿದ ಶ್ರೇಯ ಸಲೀಂ ಆಲಿ ಅವರ ತಂಡಕ್ಕೆ ಸಲ್ಲುತ್ತದೆ. 150ವರ್ಷಗಳಿಂದ ಕಂಡಿರದಿದ್ದ ಈ ಅಪರೂಪದ ಹಕ್ಕಿಯನ್ನು ಭೂತಾನ್ ಪಕ್ಷಿ ಸರ್ವೇಕ್ಷಣೆ ಸಮಯದಲ್ಲಿ ಈ ತಂಡ ಕಂಡಿತ್ತು. ಸಲೀಂ ಆಲಿ ಭಾರತದಲ್ಲಿ ಕಂಡುಬರುವ ಹಕ್ಕಿಗಳಲ್ಲಿ ಅನೇಕವನ್ನು ಮೊದಲಬಾರಿಗೆ ಗುರುತಿಸಿದರು. ಉಪಪ್ರಭೇದಗಳನ್ನು ಪತ್ತೆಹಚ್ಚಿ ವರ್ಗೀಕರಣವನ್ನು ಸರಿಪಡಿಸಿದರು. ಇತರ ಪಕ್ಷಿಶಾಸ್ತ್ರಜ್ಞರು ಪತ್ತೆಹಚ್ಚಿದ ಹೊಸ ಪ್ರಭೇದ ಅಥವಾ ಹೊಸ ಉಪಪ್ರಭೇದಕ್ಕೆ ಸಲೀಂ ಆಲಿ ಅವರ ಮತ್ತು ಅವರ ಪತ್ನಿ ತೆಹ್ಮೀನರ ಹೆಸರಿಟ್ಟು ಅವರಿಗೆ ಗೌರವತೋರಿದ್ದಾರೆ ಅವೆಂದರೆ: ಬಿಳಿಗಣ್ಣ ಹಕ್ಕಿ (ಜೊóಸ್ಟೆರೋಪ್ಸ್ ಪಲಪೆಬ್ರೊಸ ಸಲೀಂಆಲಿ), ರಕ್ ಬುಶ್ ಕ್ವೇಯಿಲ್ (ಪೆರಡಿಕ್ಯಲ ಅರ್‍ಗೂಂಡಾ ಸಲೀಂಆಲಿ) ಹಾಡ್‍ಸನ್ಸ್ ಸ್ಕಿಮಿಟಾರ್ ಬ್ಯಾಬ್ಲರ್ (ಪೊಮಟೊರ್ಹಿನಸ್ ಹಾರ್ಸ್‍ಫಿóಲ್ಡೈ ಸಲೀಂಆಲಿ) ಫಿನ್ಸ್ ನೇಕಾರ ಹಕ್ಕಿ (ಪ್ಲೋಸಿಯಸ್ ಮೆಗರಿಂಚಸ್ ಸಲೀಂಆಲಿ)[][] ದಿ ಗೋಲ್ಡ್ ಕ್ರೆಸ್ಟ್ (ರೆಗುಲುಸ್ ರೆಗುಲುಸ್ ಸಲೀಂಆಲಿ) ಎಮೆರಾಲ್ಡ್ ಡೊವ್ (ಚಾಲ್ಕೊಫಾಪ್ಸ್ ಇಂಡಿಕಾ ಸಲೀಂಆಲಿ) ಹೊಬಣ್ಣದ ಬೆನ್ನಿನ ಮರಕುಟುಕದ ಒಂದು ಉಪಪ್ರಭೇದ ಡಿನೊಪಿಯಮ್ ಬೆಂಗಾಲೆನ್ಸ್ ತೆಹ್ಮೀನೇ ಇತ್ಯಾದಿ.[]. ಸಲೀಂ ಆಲಿ ಆಗಾಗ್ಗೆ ಹೇಳುತ್ತಿದ್ದುದುಂಟು "ಸಪ್ರತಿ ಪಕ್ಷಿ ವೀಕ್ಷಕನೂ ಪಕ್ಷಿಗಳಲ್ಲಿ ಹೊಸದಾದ ಅಥವಾ ಆಶ್ಚರ್ಯಕರವಾದ ವಿಚಾರಗಳನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ಆದರೆ, ಎಚ್ಚರಿಕೆಯಿಂದ ನಿರ್ವಹಿಸಿದ ದೀರ್ಘಾವಧಿ ಪಕ್ಷಿವೀಕ್ಷಣೆ ಹಾಗೂ ಅಧ್ಯಯನ ಆನಂದದ ಮೂಲವಾಗುತ್ತದೆ. ಒಂದು ಅಹ್ಲಾದಕರ ಹವ್ಯಾಸವಾಗುತ್ತದೆ". ಇಷ್ಟೆಅಲ್ಲದೆ, ವಿಜ್ಞಾನದ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಗೌರವಗಳು

ಬದಲಾಯಿಸಿ

ಬ್ರಿಟಿಷ್ ಪಕ್ಷಿ ಶಾಸ್ತ್ರಜ್ಞರ ಒಕ್ಕೂಟದ ಚಿನ್ನದ ಪದಕ, ವನ್ಯಜೀವಿ ಸಂರಕ್ಷಣೆಗಾಗಿ ಪ್ರತಿಷ್ಠಿತ ಜೆ. ಪಾಲ್‍ಗೆಟ್ಟಿ ಅಂತರರಾಷ್ಟ್ರೀಯ ಪ್ರಶಸ್ತಿ, ಭಾರತೀಯ ರಾಷ್ಟ್ರೀಯ ವಿಜ್ಞಾನ ಆಕಾಡೆಮಿಯ - ಸಿ.ವಿ. ರಾಮನ್ ಪದಕ, ದೆಹಲಿ, ಆಂಧ್ರ ಮತ್ತು ಅಲಿಘಡ ಮುಸ್ಲಿಂ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಹಾಗೂ ಭಾರತ ಸರ್ಕಾರದಿಂದ ೧೯೫೮ರಲ್ಲಿ ಪದ್ಮಭೂಷಣ ಮತ್ತು ೧೯೭೬ರಲ್ಲಿ ಪದ್ಮವಿಭೂಷಣ[] ಪ್ರಶಸ್ತಿಗಳು ಇವರ ಸಾಧನೆಯನ್ನುಸರಿಸಿ ಬಂದವು.೧೯೮೫ರಲ್ಲಿ ಇವರನ್ನು ರಾಜ್ಯಸಭೆಗೆ ನಾಮಕರಣ ಮಾಡಲಾಯಿತು.[] ಪಾಲ್‍ಗೆಟ್ಟಿ ಪ್ರಶಸ್ತಿಯಿಂದ ಬಂದ ಹಣದಲ್ಲಿ ಸಿಂಹಪಾಲುನ್ನು ಬಿಎನ್‍ಎಚ್‍ಎಸ್ ಸಂಸ್ಥೆಗೆ ನೀಡಿ "ಸಲೀಂ ಆಲಿ ಪ್ರಕೃತಿ ಸಂರಕ್ಷಣಾ ನಿಧಿ" ಸ್ಥಾಪಿಸಿದರು. ಇದರಿಂದ ಆನೇಕ ಉಪಯುಕ್ತ ಅಧ್ಯಯನಗಳು ನಡೆದಿವೆ. ಸಲೀಂ ಆಲಿಯವರ ಸಂದೇಶಗಳಲ್ಲೊಂದು: " ಪಕ್ಷಿಗಳನ್ನು ವೀಕ್ಷಿಸುವುದರಿಂದಲೇ ಜೀವಿಸುವುದು ಸಾಧ್ಯವಿಲ್ಲ ಎಂದು ಮನುಷ್ಯ ಹೇಳುತ್ತಾನೆ. ಅದು ನಿಜ. ಆದರೆ, ಕೇವಲ ಆಹಾರದಿಂದಲೇ ಮನುಷ್ಯ ಜೀವಿಸಲು ಸಾಧ್ಯವಿಲ್ಲ ಎಂಬುದೂ ನಿಜ. ಕೆಲಸದಿಂದ ನಿವೃತ್ತಿಯಾದ ಆನಂತರ ಕೇವಲ ಗಡಿಯಾರ ನೋಡುವುದರಲ್ಲೇ ಕಾಲಕಳೆಯುತ್ತಾನೆ. ಇದಕ್ಕೆ ಬದಲು ಪಕ್ಷಿವೀಕ್ಷಣೆ ಪ್ರಾರಂಭಿಸಿದರೆ ನಿಸರ್ಗದಲ್ಲಿ ವೇಳೆಯನ್ನು ಕಳೆಯುವುದರಿಂದ ಅವನ ಆರೋಗ್ಯ ಮತ್ತು ಆಯಸ್ಸು ವೃದ್ಧಿಸುವುದೆಂದು ಅವನು ತಿಳಿಯಬೇಕು"

ಸರಳ ಜೀವನ

ಬದಲಾಯಿಸಿ

ಅತ್ಯಂತ ಸರಳ ಮಾನವರಾಗಿದ್ದ ಸಲೀಂ ಆಲಿ, ತಮ್ಮ ಶ್ರೀಮಂತಿಕೆಯ ಸಮಯದಲ್ಲೂ ಯಾವುದೇ ರೀತಿಯ ವೈಭವದ ಜೀವನ ನಡೆಸಿದವರಲ್ಲ. ತಮ್ಮ ಕಾರ್ಯಗಳಿಗಾಗಿ ಪ್ರಾಯೋಜಕರಿಂದ ಪಡೆದುಕೊಳ್ಳುತ್ತಿದ್ದ ಹಣದ ಪ್ರತಿಯೊಂದು ಪೈಸೆಗೂ ಲೆಕ್ಕಕೊಟ್ಟು ಉಳಿದ ಹಣವನ್ನು ಹಿಂದಿರುಗಿಸುತ್ತಿದ್ದರು. ಅವರ ಮಾತು ಹಾಸ್ಯಮಿಳಿತವಾಗಿದ್ದರೂ ಲೋಕಾಭಿರಾಮ ಕಡಿಮೆ. ಕಡಿಮೆ ಸಮಯದಲ್ಲಿ ಹೇಳಬಹುದಾದದಕ್ಕೆ ಹೆಚ್ಚು ಸಮಯ, ಹೆಚ್ಚು ಪದಗಳನ್ನು ಪೋಲುಮಾಡಬಾರದೆಂದು ಹೇಳುತಿದ್ದರು. ಯಾವುದೇ ಸಮಿತಿ, ಉಪ ಸಮಿತಿಗಳಲ್ಲಿ ಸೇರಲು ಬಯಸುತ್ತಿರಲಿಲ್ಲ. ಸಮ್ಮೇಳನಗಳಲ್ಲಿ ಚರ್ಚೆ ವೈಜ್ಞಾನಿಕವಾಗಿ ಹಗುರಾಗಿ ಕಂಡರೆ, ತಮ್ಮ ಶ್ರವಣ ಸಾಧನವನ್ನು ನಿಷ್ಕ್ರಿಯಗೊಳಿಸಿ ಸ್ವಸ್ಥವಾಗಿ ಕುಳಿತುಬಿಡುತಿದ್ದರು. ಸದಾ ಕೆಲಸವನ್ನಷ್ಟೇ ಬಯಸಿದ, ಮಾಡಿದ ಕರ್ಮಯೋಗಿ ಸಲೀಂ ಆಲಿ. ಅದಕ್ಕಾಗಿ ತಮ್ಮ ಆರೋಗ್ಯವನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳುತ್ತಿದ್ದರು. ತಮ್ಮ ಜೀವನದ ಕೊನೆಯ ವರ್ಷದವರೆಗೂ ಕ್ಷೇತ್ರಕಾರ್ಯ ಮಾಡುತ್ತಿದ್ದರು. ತಮ್ಮ ಆರೋಗ್ಯದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಒಮ್ಮೆ ಕೆಲವರು ತಮ್ಮ ಕ್ಷೇತ್ರಕಾರ್ಯಕ್ಕೆ ಸಲೀಂ ಆಲಿ ಅವರನ್ನು ಕರೆಯಬೇಕೆಂದು ಬಯಸಿ, ಈ ವಯಸ್ಸಿನಲ್ಲಿ ಅವರಿಗೆ ಕ್ಷೇತ್ರಕಾರ್ಯ ಕಷ್ಟವಾಗಬಹುದೆಂದು ಭಾವಿಸಿ ಸಲಹೆಯನ್ನಷ್ಟೇ ಕೇಳೋಣ ಎಂದು ತೀರ್ಮಾನಿಸಿ ಇವರಲ್ಲಿಗೆ ಬಂದಾಗ, ಸಲೀಂ ಆಲಿ ಸೈಬೀರಿಯಾದ ಕೊಕ್ಕರೆಗಳನ್ನು ಹುಡುಕಿಕೊಂಡು ದುರ್ಗಮ ಹಿಮಾಲಯದ ಬೆಟ್ಟಗಳಲ್ಲಿ ಅಲೆಯುತ್ತಿದ್ದರು! ಆಗ ಅವರ ವಯಸ್ಸು 84. ಗುಜರಾತಿನ ವಾನ್ಸ್ಡ ರಾಷ್ಟ್ರೀಯ ಉದ್ಯಾನವನದಲ್ಲಿ ಕೈಗೊಂಡ ಕ್ಷೇತ್ರಕಾರ್ಯ ಅವರ ಜೀವನದ ಕೊನೆಯದು. ಆಗ ಅವರ ವಯಸ್ಸು 90 ದಾಟಿತ್ತು.

ಸ್ವಲ್ಪ ಕಾಲ ಪ್ರಾಸ್ಟೇಟ್ ಕ್ಯಾನ್ಸರ್‍ನಿಂದ ಬಳಲಿದ ಸಲೀಂ ಆಲಿ, ಜೂನ್ 20, 1987ರಂದು ತಮ್ಮ 91ನೇ ವಯಸ್ಸಿನಲ್ಲಿ ನಿಧನರಾದರು.

ಉಲ್ಲೇಖಗಳು

ಬದಲಾಯಿಸಿ
  1. Perrins, Christopher (1988). "Obituary:Salim Moizuddin Abdul Ali". Ibis. 130 (2): 305–306. doi:10.1111/j.1474-919X.1988.tb00986.x.
  2. ೨.೦ ೨.೧ Nandy, Pritish (14 July 1985). "In search of the Mountain Quail". The Illustrated Weekly of India. pp. 8–17.
  3. Ali (1985):55
  4. Ali, S (1931). "The nesting habits of the Baya (Ploceus philippinus)". J. Bombay Nat. Hist. Soc. 34 (4): 947–964.
  5. Abdulali, H. (1960). "A new race of Finn's Baya, Ploceus megarhynchus Hume". J. Bombay Nat. Hist. Soc. 57 (3): 659–662.
  6. Ali, Salim and Whistler, Hugh (1943). "The birds of Mysore. Part V". J. Bombay Nat. Hist. Soc. 44 (2): 206–220.{{cite journal}}: CS1 maint: multiple names: authors list (link)
  7. Whistler, H and N B Kinnear (1934). "The Vernay scientific survey of the Eastern Ghats. (Ornithological Section). Part VIII". J. Bombay Nat. Hist. Soc. 37 (2): 281–297.
  8. "Padma Awards" (PDF). Ministry of Home Affairs, Government of India. 2015. Archived from the original (PDF) on ಅಕ್ಟೋಬರ್ 15, 2015. Retrieved July 21, 2015.
  9. Anon (2005). Nominated members of the Rajya Sabha (PDF). Rajya Sabha Secretariat, New Delhi.

ಭಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: