ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ, ಶಿರಳಗಿ
ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯು ಸಿದ್ಧಾಪುರ ತಾಲೂಕಿನ ಶಿರಳಗಿ ಎಂಬ ಊರಿನಲ್ಲಿದೆ.[೧] ಸಿದ್ಧಾಪುರ ಪೇಟೆಯಿಂದ ಇಲ್ಲಿಗೆ ೬ ಕಿಲೋಮೀಟರ್ ದೂರವಿದ್ದು, ಈ ಪೇಟೆಯಿಂದ ಸೊರಬಕ್ಕೆ ೨೦ ಕಿ.ಮೀ ಹಾಗೂ ಚಂದ್ರಗುತ್ತಿಗೆ ಸ್ಥಳಕ್ಕೆ ೧೦ ಕಿಲೋಮೀಟರ್ ದೂರವಿದೆ.
ಇತಿಹಾಸ
ಬದಲಾಯಿಸಿಬೀಳಗಿಯ ಅರಸ ಸೋಮಶೇಖರನ ಕ್ರಿ.ಶ ೧೭೭೦ ಒಂದು ತಾಮ್ರ ಶಾಸನವು ಇದನ್ನು ಶಿರುವಳಿಗೆ ಎಂದು ಕರೆದಿದೆ. ಹಿಂದೊಮ್ಮೆ ಈ ಸ್ಥಳವನ್ನು ಸಿದ್ಧಾಪುರ ದೇವಾಲಯದ ಶ್ರೀ ಗಂಗಾಧರೇಶ್ವರ ದೇವರಿಗೆ ಉಂಬಳಿ ಬಿಡಲಾಗಿತ್ತು. ಇಲ್ಲಿ ಕೆಲವು ವೀರಗಲ್ಲು ಮತ್ತು ಮಾಸ್ತಿ ಕಲ್ಲುಗಳನ್ನು ಕಾಣಬಹುದು. ಈ ಪರಿಸರದಲ್ಲಿ ತುಂಬಾ ಜೈನ ಕುಟುಂಬಗಳು ಇಲ್ಲದಿರುವುದರಿಂದ ಈ ಜಿನಾಲಯಕ್ಕೆ ಇಲ್ಲಿಯ ಪುರೋಹಿತರ ಕುಟುಂಬಗಳು ಬಂದು ಇಲ್ಲಿಯ ವಿಶೇಷ ಕಾರ್ಯಕ್ರಮಗಳಲ್ಲಿ, ಮುಖ್ಯವಾಗಿ ನೂಲ ಹುಣ್ಣಿಮೆಯ ದಿನ ಭಾಗವಹಿಸುತ್ತಾರೆ. ಈ ಬಸದಿಯು ಸೋಂದಾ ಮಠಕ್ಕೆ ಸೇರಿದೆ. ಈ ಬಸದಿಯನ್ನು ಪ್ರಸಿದ್ಧ ಕದಂಬ ವಂಶಸ್ಥರು ಅಥವಾ ಬೀಳಗಿಯ ಅರಸು ಮನೆತನದವರು ಸುಮಾರು ೮೦೦ ವರ್ಷಗಳ ಹಿಂದೆ ಕಟ್ಟಿಸಿದ್ದರು ಎಂದು ಹೇಳಲಾಗುತ್ತಿದೆ.
ಒಳಾಂಗಣ ಶಿಲಾನ್ಯಾಸ
ಬದಲಾಯಿಸಿಪರಿಸರದಲ್ಲಿ ಕೆಲವು ಜೈನ ಮುನಿಗಳ ನಿಷಿಧಿಗಳು ಇದ್ದು ಅವುಗಳ ಪೈಕಿ ಕೆಲವಲ್ಲಿ ಬರವಣಿಗೆಯ ಫಲಕಗಳು ಇವೆ. ಗರ್ಭಗೃಹ ಮಾತ್ರ ಶಿಲಾಮಯವಾಗಿದ್ದು ಉಳಿದಂತೆ ಹೆಂಚಿನ ಮಾಡನ್ನು ಹೊಂದಿದೆ. ಗರ್ಭಗೃಹದಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿಯ ಮೂಲಬಿಂಬದ ಜೊತೆಗೆ, ಶ್ರೀ ಚಂದ್ರನಾಥ, ಶಾಂಥಿನಾಥ, ಪಾರ್ಶ್ವನಾಥ, ರತ್ನತ್ರಯ ಮೂರ್ತಿಗಳು ಮತ್ತು ಪಂಚಲೋಹದ ೨೪ ತೀರ್ಥಂಕರರ ಮೂರ್ತಿಗಳು ಹಾಗೂ ಮಾತೆ ಪದ್ಮಾವತಿಯ ಮೂರ್ತಿ, ಜ್ವಾಲಿನಿ, ಕೂಷ್ಮಾಂಡಿನಿ ದೇವಿಯರ ಮೂರ್ತಿಗಳಿವೆ. ಬಸದಿಯನ್ನು ಪ್ರವೇಶಿಸುವಾಗ ದ್ವಾರಬಂಧನ ಮೇಲ್ಗಡೆಯಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಕೆಳಭಾಗದಲ್ಲಿ ದ್ವಾರಪಾಲಕರ ಮೂರ್ತಿಗಳಿವೆ. ಒಳಗಿನ ಪ್ರಾರ್ಥನಾ ಮಂಟಪದಲ್ಲಿ ಗಂಟೆಗಳು, ಜಾಗಟೆಗಳು ಮತ್ತು ಪಂಚವಾದ್ಯಗಳನ್ನು ಜೋಡಿಸಲಾಗಿದೆ. ಇಲ್ಲಿ ಎಲ್ಲಾ ದೇವರಿಗೆ ಪ್ರತಿದಿನ ಪೂಜೆ ನಡೆಯುತ್ತದೆ. ಪೂರ್ವಕ್ಕೆ ಮುಖ ಮಾಡಿ ಆಸೀನರಾಗಿರುವ ಪದ್ಮಾವತಿ ದೇವಿಯ ಶಿಲೆಯ ಮೂರ್ತಿಗೆ ಪ್ರತಿದಿನ ಅಲಂಕರಿಸಿ ಪೂಜೆ ಮಾಡುತ್ತಾರೆ. ಮೂರ್ತಿಯ ಕಾಲಿನ ಬಳಿ ಸರ್ಪ ಇದೆ. ಒಂಭತ್ತು ಬಾಯಿಗಳುಳ್ಳ ನಾಗಫಣದ ಕೆಳಗಿರುವ ಶ್ರೀ ಪಾರ್ಶ್ವನಾಥ ಸ್ವಾಮಿಯ ಖಡ್ಗಾಸನ ಭಂಗಿಯ ಶಿಲಾಮೂರ್ತಿಯು ೧೫ ಇಂಚು ಎತ್ತರವಿದೆ. ಬಸದಿಯ ಎಡಭಾಗದಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದ್ದು, ಅಲ್ಲಿ ಪಂಚಲೋಹದ ಮೂರ್ತಿ ಇದೆ. ಗುಂಡು, ತ್ರಿಶೂಲಗಳು, ೫ ನಾಗರಕಲ್ಲುಗಳು ಕೂಡ ಇವೆ.[೨]
ಪೂಜಾ ವಿಧಾನ
ಬದಲಾಯಿಸಿಶ್ರೀ ಪಾರ್ಶ್ವನಾಥ ಸ್ವಾಮಿಗೆ ಎಲ್ಲಾ ರೀತಿಯ ಅಭಿಷೇಕ ಪೂಜಾದಿಗಳನ್ನು ಮಾಡಲಾಗುತ್ತದೆ. ಮೂಲಮಂತ್ರ ಜಪ ಮಾಡುವುದು, ಕಲಿಕುಂಡ ಆರಾಧನೆ ಮತ್ತು ಸಮಯ ಸಂದರ್ಭಕ್ಕೆ ತಕ್ಕಂತೆ ವಿಶೇಷ ಪೂಜೆ ಮಾಡಲಾಗುತ್ತದೆ. ಹಿಂದುಗಳು ಇಲ್ಲಿಗೆ ಬಂದು ಕಾಣಿಕೆ, ಹರಕೆ ಪೂಜೆ ಮಾಡಿಸುತ್ತಾರೆ. ಇಲ್ಲಿ ಬೆಳಿಗ್ಗೆ ೮ ಗಂಟೆಗೆ ಪೂಜೆ ಮತ್ತು ಸಂಜೆ ೬:೩೦ ರಿಂದ ೮:೦೦ ರ ಒಳಗೆ ಆರತಿ, ಭಜನೆ ಆಗುತ್ತದೆ. ಇಲ್ಲಿ ಪ್ರತಿವರ್ಷ ಯುಗಾದಿ ಹಬ್ಬದ ನಂತರ ಶುಕ್ಲಪಕ್ಷದಲ್ಲಿ ವಾರ್ಷಿಕೋತ್ಸವ ನಡೆಯುತ್ತದೆ. ಜೈನಧರ್ಮದ ಎಲ್ಲಾ ಹಬ್ಬಗಳನ್ನು ಇಲ್ಲಿ ಆಚರಿಸಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ https://www.bharatibiz.com/en/shri-parshwanath-padmavathi-kshetrapala-099724-05109
- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ೪೧೨-೪೧೩.