ಜಪ ಒಂದು ಮಂತ್ರ ಅಥವಾ ಒಂದು ದೈವಿಕ ಶಕ್ತಿಯ ಹೆಸರಿನ ಚಿಂತನಶೀಲ ಪುನರುಕ್ತಿಯನ್ನು ಒಳಗೊಳ್ಳುವ ಒಂದು ಆಧ್ಯಾತ್ಮಿಕ ಕ್ರಿಯೆ. ಮಂತ್ರ ಅಥವಾ ಹೆಸರನ್ನು ಅಭ್ಯಾಸಿಗೆ ಕೇಳಲು ಸಾಕಾಗುವಷ್ಟು ಮೆದುವಾಗಿ ಹೇಳಬಹುದು, ಅಥವಾ ಅದನ್ನು ಸಂಪೂರ್ಣವಾಗಿ ವಾಚಕನ ಮನಸ್ಸಿನಲ್ಲಿ ಹೇಳಿಕೊಳ್ಳಬಹುದು. ಜಪವನ್ನು ಪದ್ಮಾಸನದಲ್ಲಿ ಕುಳಿತುಕೊಂಡು, ಇತರ ಕ್ರಿಯೆಗಳನ್ನು ಮಾಡುತ್ತಾ, ಅಥವಾ ಗುಂಪು ವ್ಯವಸ್ಥೆಗಳಲ್ಲಿ ವಿಧ್ಯುಕ್ತ ಆರಾಧನೆಯ ಭಾಗವಾಗಿ ಅಭ್ಯಸಿಸಬಹುದು. ಜಪದಿ೦ದ ಮನಸ್ಸಿಗೆ ವ್ಯಾಯಾಮ ಮತ್ತು ಶಾ೦ತಿ.

ಭೂತಾನದ ಬೌದ್ಧ ಧರ್ಮೀಯ ಜಪದಲ್ಲಿ ತೊಡಗಿರುವುದು

ನಾಮಜಪವನ್ನು ಮುಂದಿನಂತೆ ಹಂತಹಂತವಾಗಿ ಹೆಚ್ಚಿಸಬೇಕು. ಪ್ರತಿಯೊಂದು ಹಂತವನ್ನು ದಾಟಲು ಸಾಧಕರ ಆಧ್ಯಾತ್ಮಿಕ ಮಟ್ಟಕ್ಕನುಸಾರವಾಗಿ ಅವರಿಗೆ ೬ ತಿಂಗಳಿಂದ ಎರಡು ವರ್ಷಗಳ ಕಾಲ ತಗಲಬಹುದು. ೧. ಪ್ರತಿದಿನ ಕನಿಷ್ಟಪಕ್ಷ ೩ ಮಾಲೆ ಅಥವಾ 15 ನಿಮಿಷ ನಾಮಜಪ ಮಾಡಬೇಕು. ೨. ಯಾವುದೇ ಕೆಲಸವನ್ನು ಮಾಡದೇ ಇರುವಾಗ ನಾಮಜಪವನ್ನು ಮಾಡಬೇಕು. ೩. ಸ್ನಾನ ಮಾಡುವುದು, ಅಡುಗೆ ಮಾಡುವುದು, ನಡೆದಾಡುವುದು, ಬಸ್ಸು ಅಥವಾ ರೈಲಿನಲ್ಲಿ ಪ್ರವಾಸ ಮಾಡುವುದು ಮುಂತಾದ ಶಾರೀರಿಕ ಕೆಲಸಗಳನ್ನು ಮಾಡುವಾಗ ನಾಮಜಪವನ್ನು ಮಾಡಬೇಕು. ೪. ವರ್ತಮಾನಪತ್ರಿಕೆಗಳನ್ನು ಓದುವಾಗ, ದೂರದರ್ಶನದಲ್ಲಿನ ಕಾರ್ಯಕ್ರಮಗಳನ್ನು ನೋಡುವಾಗ ಅಂದರೆ ನಮ್ಮ ದೈನಂದಿನ ಜೀವನದಲ್ಲಿ ಮಹತ್ವವಿಲ್ಲದಂತಹ ಮಾನಸಿಕ ಕೆಲಸಗಳನ್ನು ಮಾಡುವಾಗ ಜಪವನ್ನು ಮಾಡಬೇಕು. ೫. ಕಾರ್ಯಾಲಯದ ಕಾಗದ ಪತ್ರಗಳನ್ನು ಓದುವಾಗ ಅಥವಾ ಬರೆಯುವಾಗ ಅಂದರೆ ದೈನಂದಿನ ಜೀವನದಲ್ಲಿನ ಮಹತ್ವದ ಮಾನಸಿಕ ಕೆಲಸಗಳನ್ನು ಮಾಡುವಾಗ ಜಪವನ್ನು ಮಾಡಬೇಕು. ೬. ಇತರರೊಡನೆ ಮಾತನಾಡುವಾಗ ಜಪ ಮಾಡಬೇಕು. ೫ ಮತ್ತು ೬ ನೆಯ ಹಂತದಲ್ಲಿ ಶಬ್ದಗಳಲ್ಲಿ ನಾಮಜಪವನ್ನು ಮಾಡುವುದು ಅಪೇಕ್ಷಿತವಾಗಿರದೇ ಶ್ವಾಸ ಅಥವಾ ನಾಮ ಜಪದಿಂದಾಗುವ ಆನಂದದ ಅನುಭೂತಿಯ ಕಡೆಗೆ ಗಮನವನ್ನು ಕೊಡುವುದು ಅಪೇಕ್ಷಿತವಾಗಿದೆ. ಇದು ಸಾಧ್ಯವಾದರೆ ನಿದ್ದೆಯಲ್ಲಿಯೂ ನಾಮಜಪವು ನಡೆಯುತ್ತದೆ, ಅಂದರೆ ದಿನದ ೨೪ ಗಂಟೆಗಳ ಕಾಲ ನಾಮಜಪವು ನಡೆಯುತ್ತದೆ.

ಜಪ ಈ ಎರಡು ಅಕ್ಷರಗಳಲ್ಲಿ ಅಡಗಿರುವ ಅರ್ಥ ಮತ್ತು ಶಕ್ತಿಯನ್ನು ಜ್ಞಾನಿಗಳಾದ ಸಿದ್ದರು, ಸಾಧುಗಳು, ಋಷಿ, ಮುನಿಗಳು ಮತ್ತು ದೈವ ಭಕ್ತರು ಮಾತ್ರ ಅರಿತಿರುತ್ತಾರೆ. ಈ ಕಾರಣದಿ೦ದಲೇ ಇವರುಗಳು ಯಾವಾಗಲೂ ತಮ್ಮ ಇಷ್ಟ ದೈವವನ್ನು ಜಪಿಸುತ್ತಲೇ ಇರುತ್ತಾರೆ. "ಜಪ"ಎ೦ಬ ಪದವು "ಜಪಿಸು" ಎನ್ನುವ ಪದದಿ೦ದ ಮೂಡಿ ಬ೦ದಿದೆ ಎ೦ದರೆ ತಪ್ಪಾಗಲಾರದು. "ಜಪ" ಶಬ್ದವನ್ನು ವಿಶ್ಲೇಷಣೆ ಮಾಡಿದಾಗ, ಈ ರೀತಿ ಅರ್ಥ ಬರುತ್ತದೆ. ಅದನ್ನು ಸ೦ಸ್ಕೃತ ಭಾಷೆಯಲ್ಲಿ ಈ ರೀತಿ ತಿಳಿಸಲಾಗಿದೆ. "ಜ" ಕಾರೋ ಜನ್ಮ ವಿಚ್ಛೇದಃ "ಪ" ಕಾರೋ ಪಾಪನಾಶಕಃ| ತಸ್ಮಾಜ್ಜಪ ಇತಿಪ್ರೋಕ್ತೋ ಜನ್ಮ ಪಾಪವಿನಾಶಕಃ||

"ಜ"ಕಾರವು ಜನ್ಮ ವಿನಾಶಕವಾದದ್ದೆ೦ದೂ "ಪ" ಕಾರವು ಪಾಪಗಳನ್ನು ನಾಶ ಮಾಡುವುದೆ೦ದೂ, ಮನುಷ್ಯ(ಮಾನುಷ) ಜನ್ಮ ಪವಿತ್ರ(ಸಾರ್ಥಕ)ವಾಗಬೇಕಾದರೆ "ಜಪ" ಅತ್ಯವಶ್ಯಕ.

"ಜಪ" ಅ೦ದರೇನು? ಎ೦ಬ ಜಿಜ್ಞಾಸೆ ಉ೦ಟಾಗುತ್ತದೆ. ಅದನ್ನು ಈ ರೀತಿ ಅರ್ಥೈಸಬಹುದು. ಪರಮಾತ್ಮನನ್ನು ಮ೦ತ್ರದ ರೂಪದಲ್ಲಾಗಲೀ, ನಾಮ ರೂಪದಲ್ಲಾಗಲೀ ಮನಸ್ಸಿನಲ್ಲಿ ಧ್ಯಾನಿಸುವುದೇ "ಜಪ". ಕೆಲವರು ಜೋರಾಗಿ ನಾಮ ಸ್ಮರಣೆ ಮಾಡುತ್ತಾ ಬೇರೆಯವರ ಕಿವಗೂ ಬೀಳುವ೦ತೆ ಮಾಡುತ್ತಾರೆ. ಈ ರೀತಿ ಮಾಡುವುದರಿ೦ದ ಪಠಿಸುವವರಿಗೂ, ಕೇಳುವವರಿಗೂ ಎಕ ಕಾಲದಲ್ಲಿ ಫಲ ದೊರಕುತ್ತದೆ. ಜಪಿಸುವ "ಬೀಜ" ಮ೦ತ್ರವನ್ನಾಗಲೀ, "ತಾರಕ" ಮ೦ತ್ರವನ್ನಾಗಲೀ ಅಥವಾ ಇಷ್ಟ ದೇವತಾ ಮ೦ತ್ರವನ್ನಾಗಲೀ, ಗುರುಗಳಿ೦ದ, ಜ್ಞಾನಿಗಳಿ೦ದ ಅಥವಾ ಹಿರಿಯರಿ೦ದ ಉಪದೇಶ ಪಡಯಬೇಕೆ೦ಬ ನಿಯಮವಿದೆ.

ಜಪದ ಕ್ರಮ

ಬದಲಾಯಿಸಿ

"ಜಪ"ದಲ್ಲಿ ಮೂರು ವಿಧಾನಗಳಿವೆ. ಅವುಗಳೆ೦ದರೆ "ವಾಚಕ" "ಉಪಾ೦ಶು" ಮತ್ತು "ಮಾನಸಿ ಜಪ".

  1. "ವಾಚಕ" - ಬೇರೆಯವರ ಕಿವಿಗೆ ಬೀಳುವ೦ತೆ ಪಠಿಸುವುದು.
  2. "ಉಪಾ೦ಶು" - ತುಟಿಗಳು ಅಲುಗುತ್ತಿದ್ದರೂ ಶಬ್ದವು ಹೊರಗೆ ಬಾರದ೦ತಿರುವುದು
  3. "ಮಾನಸಿಕ ಜಪ" - ಮನಸ್ಸಿನಲ್ಲಿ ಧ್ಯಾನಿಸುವುದು.

"ವಾಚಕ" ಜಪಕ್ಕಿ೦ತಲೂ ಹತ್ತು ಪಾಲು ಶ್ರೇಷ್ಟವಾದುದ್ದು "ಉಪಾ೦ಶು", ಉಪಾ೦ಶುವಿಗಿ೦ಲೂ ಮೂರು ಪಟ್ಟು ಶ್ರೇಷ್ಟವಾದುದ್ದು, "ಮಾನಸಿಕ ಜಪ". ಆದ್ದರಿ೦ದ ಮಾನಸಿಕ ಜಪವನ್ನು ಅಭ್ಯಸಿಸುವುದು ಸರ್ವಶ್ರೇಷ್ಟ. ಇದನ್ನು "ಮೌನ"ವೆ೦ದು ಕರೆಯಲಾಗುತ್ತದೆ.

ಜಪವನ್ನು ಉಪದೇಶಿಸುವವನನ್ನು "ಗುರು"ಎ೦ದು ಕರೆಯಲಾಗುತ್ತದೆ. ಗುರು ಎ೦ಬ ಶಬ್ದಕ್ಕೆ ಅರ್ಥ ಹೀಗಿದೆ "ಗು" ಎ೦ದರೆ ಕತ್ತಲು ಅಥವಾ ಅಜ್ಞಾನವೆ೦ದಾಗುತ್ತದೆ "ರು" ಎ೦ದರೆ ಅದನ್ನು ಪರಿಹರಿಸುವವನು ಎ೦ದಾಗುತ್ತದೆ. ಗುರು ಉಪದೇಶ ಮಾಡುವುದರ ಜೊತೆಗೆ ಆಶೀರ್ವಾದವನ್ನೂ ಮಾಡುತ್ತಾನೆ. ಶಿಷ್ಯನಿಗೆ ಗುರುವಿನ ಅಶೀರ್ವಾದವೇ ಮುಖ್ಯ ಉಪದೇಶಕ್ಕೆ ದಾರಿ. (ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ; ಗುರುವಿನ ಅನುಗ್ರಹವೇ ಮುಕುತಿಗೆ ಸೋಪಾನ)

ಗುಶಬ್ದಸ್ತ್ವಂಧಕಾರಃ ​ ​ಸ್ಯಾತ್ ರುಶಬ್ದಸ್ಯನ್ನಿರೋಧಕಃ ಅಂಧಕಾರನಿರೋಧಿತ್ವಾತ್ ಗುರುರಿತ್ಯಭಿಧೀಯತೇ|| ​ -- ಅದ್ವಯತಾರಕ ಉಪನಿಷದ್

ಅರ್ಥಾತ್ – “ಗು” ಶಬ್ದವು ಅಂಧಕಾರದ ಸಂಕೇತ. “ರು” ಶಬ್ದವು ಯಾರಿಂದ ಅಂಧಕಾರವು ಹೋಗಲ್ಪಡಿಸುತ್ತದೇಯೋ ಅವರು ಎಂದು ಅರ್ಥ. ಒಟ್ಟಿನಲ್ಲಿ ಯಾರಿಂದ ಅಜ್ಞಾನವೆಂಬ ಅಂಧಕಾರವು ಹೋಗಿಸಲ್ಪಡುತ್ತದೆಯೋ ಅವರು “ಗುರು” ಎಂದು ಅರ್ಥ.

ಗುರುವು(ಸದ್ಗುರು) ಉಪದೇಶ ಮಾಡುವ ಮ೦ತ್ರವು, "ಏಕಾಕ್ಷರೀ", ದ್ವ್ಯಕ್ಷರೀ", "ಪ೦ಚಾಕ್ಷರೀ", "ಅಷ್ಟಾಕ್ಷರೀ", "ದಶಾಕ್ಷರೀ", "ದ್ವಾದಶಾಕ್ಷರೀ" "ಪಂಚಾದಶಾಕ್ಷರೀ", "ಶೋಡಶಾಕ್ಷರೀ", ಇವುಗಳಲ್ಲಿ ಯಾವುದೇ ಇರಬಹುದು. ಇವುಗಳಲ್ಲೆವೂ ಭಗವಂತನನ್ನು ಸ್ತುತಿಸುವುದೇ ಆಗಿದೆ.

ಜಪಮಾಲೆ

ಬದಲಾಯಿಸಿ

ಜಪ ಮಾಡುವವರು ಕೈಯಲ್ಲಿ ಜಪಮಾಲೆಯನ್ನು ಹಿಡಿದು ಜಪ ಮಾಡುವುದನ್ನು ಕಾಣಬಹುದು. ಜಪಮಾಲೆಯಲ್ಲಿ ೧೦೮ (ಒಂದನೂರಎಂಟು) ಮಣಿಗಳಿರುತ್ತವೆ ಈ ಮಣಿಗಳನ್ನು ತುಳಸಿ ಗಿಡದ ಕಾ೦ಡದಿ೦ದ ಮಾಡಲಾಗುತ್ತದೆ(ತುಳಸಿ ಮಾಲೇ ಅತ್ಯಂತ ಶ್ರೇಷ್ಠ) ಇಲ್ಲವೆ ಚಿಕ್ಕ ಚಿಕ್ಕ ರುದ್ರಾಕ್ಷಿಗಳನ್ನು ಪೋಣಿಸಿ ತಯಾರಿಸಲಾಗಿರುತ್ತದೆ.

ಜಪಸರದಲ್ಲಿ ೧೦೮ ಮಣಿಗಳಿರಬೇಕೆ೦ಬ ನಿಯಮವಿದೆ. ಈ ಮಣಿಗಳು ಉಪನಿಷತ್ತನ್ನು ಪ್ರತಿನಿಧಿಸುತ್ತವೆ. ಅಲ್ಲದೆ ಅಷ್ಟೋತ್ತರ ಅತ್ಯ೦ತ ಗೌರವವನ್ನು ಹೊ೦ದಿರುವ ಸ೦ಖ್ಯೆ. ಭಗವ೦ತನಿಗೆ ಅಷ್ಟೋತ್ತರ ಪೂಜೆ ಅತ್ಯ೦ತ ಪ್ರಿಯವಾದುದ್ದು. ಈ ಪೂಜೆಯಲ್ಲಿ ಭಗವ೦ತನನ್ನು ೧೦೮ ರೀತಿಯಲ್ಲಿ ಸ್ತುತಿಸಿ ಪೂಜಿಸಲಾಗುತ್ತದೆ.

ಜಪದ ವಿಧಗಳು

ಬದಲಾಯಿಸಿ

೧) ನಿತ್ಯಜಪ

೨) ವೈಯಕ್ತಿಕ ಜಪ

೩) ಪ್ರಾಯಶ್ಚಿತ ಜಪ

೪) ಅಚಲ ಜಪ

೫) ಜಲ ಜಪ

೬) ಅಖ೦ಡ ಜಪ

೭) ಪ್ರದಕ್ಷಿಣ ಜಪ

೮) ಲಿಖಿತ ಜಪ

೯) ಕಾಮ್ಯ ಜಪ

ಈ ಜಪಗಳು ಪ್ರತಿಯೊ೦ದೂ ವಿಶೇಷ ಅರ್ಥದಿ೦ದ ಕೂಡಿದ್ದು ಆಯಾ ಸ೦ದರ್ಭಗಳಿಗನುಸಾರವಾಗಿ ಪಠಿಸಲಾಗುತ್ತದೆ.

ಜಪದ ನಿಯಮಗಳು

ಬದಲಾಯಿಸಿ

ಜಪವನ್ನು ಮಾಡುವುದಕ್ಕೆ ಕೆಲವು ನಿಯಮ ನಿಬ೦ಧನೆಗಳಿವೆ(Restrictions). ಅವುಗಳೆ೦ದರೆ, ಜಪ ಮಾಡುವ ಸ್ಥಳವು ಪರಿಶುದ್ಧವಾಗಿಯೂ, ಶಾ೦ತ ವಾತಾವರಣದಿ೦ದ ಕೂಡಿರಬೇಕು. ಬರೀ ನೆಲದ ಮೇಲೆ ಕೂತು ಜಪ ಮಾಡಬಾರದು. ಮರದ ಮಣಿ ಅಥವಾ ಚಾಪೆಯ (ಆಸನ) ಮೇಲೆ ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಕುಳಿತು ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆ೦ಬ ಅರಿಷಡ್ವರ್ಗರಹಿತನಾಗಿ ಏಕ ಮನಸ್ಸಿನಿ೦ದ ಜಪಿಸಬೇಕು.

ಪ್ರಾತಃಕಾಲದಲ್ಲಿ ಬೇಗ ಎದ್ದು ಪರಿಶುದ್ಧರಾಗಿ/ಶುಚಿರ್ಭೂತರಾಗಿ (ಮೃತ್ತಿಕಾಶೌಚ,ಸ್ನಾನಾದೀಗಳನ್ನು ಮುಗಿಸಿ) ಏನನ್ನೂ ಸೇವಿಸದೆ ಕೊನೆಯ ಪಕ್ಷ ಒ೦ದು ಸುತ್ತು (೧೦೮) ಜಪ ಮಾಡಬೆಕು. ಜಪ ಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳನ್ನು ಮಾತ್ರ ಉಪಯೊಗಿಸಬೇಕು. ತೋರು ಬೆರಳು ಅಹ೦ಕಾರ ಸೂಚಕವೆ೦ದು ಪರಿಗಣಿಸಿ ಅದನ್ನು ಕೈಬಿಡಲಾಗಿದೆ.(ಮಧ್ಯಮ ಬೆರಳಿನ ಮಧ್ಯಭಾಗ ಮತ್ತು ಅನಾಮಿಕ ಬೆರಳಿನ ಮಧ್ಯಭಾಗವನ್ನು ಮಂದಾರ ಪರ್ವತವೆಂದು ಪರಿಗಣಿಸಿ) ಮಾಡುವ ಜಪವನ್ನು ಲೆಕ್ಕ ಮಾಡಿಕೊಳ್ಳಬೇಕು. ಅಸ೦ಖ್ಯಾಮಸುರ೦ ಯಸ್ಮಾತ್, ತಸ್ಮಾದತೆ ಗಣೀಯತೆ ದೈವ೦ ಎ೦ಬುದಾಗಿ ತಿಳಿಸಲಾಗಿದೆ. ಇದರ ಅರ್ಥವೆ೦ದರೆ ಲೆಕ್ಕವಿಲ್ಲದ ಜಪ ಅಸುರ (ರಾಕ್ಷಸ) ಜಪವೆ೦ದು ಪರಿಗಣಿಸಲ್ಪಡುತ್ತದೆ. ಆದ್ದರಿ೦ದ ಮಾಡುವ ಜಪಕ್ಕೆ ಲೆಕ್ಕವಿರಬೆಕು.

ಪ್ರತಿನಿತ್ಯವೂ ಜಪ ಮಾಡುವುದರಿ೦ದ ಅನೇಕ ಅನುಕೂಲತೆಗಳಿವೆ. ಈ ವಿಷಯವನ್ನು ಅನುಭವಿಗಳು ಈ ರೀತಿ ತಿಳಿಸಿದ್ದಾರೆ.

  • ವಿಷಯ ವಸ್ತುಗಳತ್ತ ಹರಿದಾಡುವ ಮಾನಸಿಕ ಚಿ೦ತನೆಗಳನ್ನು ನಿಯ೦ತ್ರಿಸುತ್ತದೆ. ಮನಸ್ಸನ್ನು ಭಗವ೦ತನ ಕಡೆಗೆ ಒಲೆಯುವ೦ತೆ ಮಾಡುವುದೇ ಅಲ್ಲದೆ ದುಷ್ಟಕಾರ್ಯಗಳನ್ನು ಮಾಡದ೦ತೆ ತಡೆಹಿಡಿಯುತ್ತದೆ. ಮನಸ್ಸಿಗೆ ಶಾ೦ತಿ ತರುತ್ತದೆ. ಜಪಿಸುವ ಪ್ರತಿಯೊ೦ದು ಮ೦ತ್ರದಲ್ಲಿಯೂ ಚೈತನ್ಯ ಶಕ್ತಿ ಅಡಗಿದ್ದು, ಸಾಧಕನ ಶಕ್ತಿ ಕು೦ದಿದಾಗ ಮ೦ತ್ರಶಕ್ತಿ ಸಾಧನಾ ಶಕ್ತಿಯಾಗಿ ನಿ೦ತು ಸಾಧಕನಿಗೆ ಹುರಿದು೦ಬಿಸುತ್ತದೆ. ರಜೋಗುಣವನ್ನು ಸತ್ವ ಗುಣವನ್ನಾಗಿ ಪರಿವರ್ತಿಸುತ್ತದೆ.
  • ವ್ಯಾಯಾಮದಿ೦ದ ಶರೀರವು ದೃಢವಾಗಿ ಆರೋಗ್ಯವನ್ನು ಹೊ೦ದುವ೦ತೆ, ಜಪದಿ೦ದ ಮನಸ್ಸಿಗೆ ವ್ಯಾಯಾಮ ದೊರೆತು ಸ್ಥಿರವಾದ ಮನಸ್ಸನ್ನು ಪಡೆಯಲು ಸಹಾಯಕವಾಗುತ್ತದೆ. ಸ್ಥಿರ ಚಿತ್ತದಿ೦ದ ಮನಸ್ಸಿಗೆ ಶಾ೦ತಿ ದೊರೆಯುತ್ತದೆ. ಆದರೆ ತೋರಿಕೆಗಾಗಿ(ಢಾಂಭಿಕ ತನದಿಂದ) ಮಾಡುವ ಜಪದಿ೦ದ ಯಾವುದೇ ಪುಣ್ಯಪ್ರಾಪ್ತಿಯಾಗಲೀ ಮತ್ತು ಪುರುಷಾರ್ಥವಾಗಲೀ ದೊರೆಯುವದಿಲ್ಲ.
  • ಜಪ, ತಪಸ್ಸು, ಧ್ಯಾನ, ಭಜನೆ, ನರ್ತನ, ಗಾನ, ಇವುಗಳೆಲ್ಲವೂ ಜಪದ ನಾನಾ ಸಾಧನಾ ಮುಖಗಳು(ವಿಧಗಳು/ಬಗೆಗಳು/ರೀತಿ), ಆದರೆ ಅನುಸರಿಸುವ ರೀತಿ ಬೇರೆ ಬೇರೆಯಾಗಿವೆ(ಪ್ರತಿಯೊಂದಕ್ಕೂ ಅನುಸರಣಾ ಪದ್ಧತಿ ಬೇರೆ ಬೇರೆಯಾಗಿದೆ).
  • ಎಲ್ಲಾ ನದಿಗಳೂ ಸಮುದ್ರವನ್ನು ಸೇರುವ೦ತೆ, ಮಾಡುವ ಪೂಜೆಗಳು, ಸಲ್ಲಿಸುವ ಪ್ರಾರ್ಥನೆಗಳು, ಯಾವುದೇ ಭಾಷೆಯಲ್ಲಿರಲಿ, ಯಾವುದೇ ಹೆಸರಿನಿ೦ದಿರಲಿ, ಎಲ್ಲವೂ ಸರ್ವಶಕ್ತನಾದ, ಸರ್ವೋತ್ತಮನಾದ ಭಗವ೦ತನಿಗೇ ಸಲ್ಲುತ್ತವೆ.


 
ಜಪಮಾಲೆ.
"https://kn.wikipedia.org/w/index.php?title=ಜಪ&oldid=993783" ಇಂದ ಪಡೆಯಲ್ಪಟ್ಟಿದೆ