ಲೀಲಾವತಿ (೧೯೩೮ - ೦೮ ಡಿಸೆಂಬರ್ ೨೦೨೩) ದಕ್ಷಿಣ ಭಾರತದ ನಟಿ. ಕನ್ನಡದಲ್ಲಿ ಪ್ರಧಾನವಾಗಿ ನಟಿಸುವುದರೊಂದಿಗೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಸುಮಾರು ೬೦೦ ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ ಡಾ. ರಾಜಕುಮಾರ್ ಪ್ರಶಸ್ತಿಯನ್ನು ೧೯೯೯-೨೦೦೦ನೇ ಸಾಲಿನಲ್ಲಿ ಪಡೆದ ಲೀಲಾವತಿ ಅವರು, 'ತುಮಕೂರು ವಿಶ್ವವಿದ್ಯಾಲಯ'ದ ಗೌರವ ಡಾಕ್ಟರೇಟ್ ಪದವಿಯನ್ನು ೨೦೦೮ರಲ್ಲಿ ಪಡೆದರು.

ಲೀಲಾವತಿ
ಮೈಸೂರಿನ ಕಲಾಮಂದಿರದಲ್ಲಿ ಲೀಲಾವತಿ
ಜನನ
ಲೀಲಾ ಕಿರಣ್

೧೯೩೮
ವೃತ್ತಿ(ಗಳು)ನಟಿ, ನಿರ್ಮಾಪಕಿ, ಲೇಖಕಿ, ಸಮಾಜಸೇವಕಿ[]
ಸಕ್ರಿಯ ವರ್ಷಗಳು೧೯೫೮–೨೦೦೯
ಮಕ್ಕಳುವಿನೋದ್ ರಾಜ್
ಜಾಲತಾಣPersonal website

ವೈಯಕ್ತಿಕ ಜೀವನ

ಲೀಲಾ ಕಿರಣ್ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಹುಟ್ಟಿದರು. ನಾಟಕ, ರಂಗಭೂಮಿ ಬಗೆಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದ ಲೀಲಾ ಅವರು ವೃತ್ತಿಜೀವನ ಆರಂಭಿಸಿದ್ದು ಮೈಸೂರಿನಲ್ಲಿ. ವೃತ್ತಿರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಮುನ್ನ ಕೆಲವೆಡೆ ಮನೆ ಕೆಲಸವನ್ನೂ ಅವರು ನಿರ್ವಹಿಸಿದ್ದರು.

ಲೀಲಾವತಿ ಅವರ ಮಗ ವಿನೋದ್ ರಾಜ್ ಕನ್ನಡ ಚಿತ್ರರಂಗದ ಖ್ಯಾತ ನಟ. ಪ್ರಸ್ತುತ ತಾಯಿ-ಮಗ ಇಬ್ಬರೂ ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.

ಚಿತ್ರ ಜೀವನ

ಲೀಲಾವತಿ ಅವರು ೧೯೪೯ರಲ್ಲಿ ಶಂಕರ್ ಸಿಂಗ್ ಅವರ ನಾಗಕನ್ನಿಕ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಅವರು ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು. ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ಸುಬ್ಬಯ್ಯ ನಾಯ್ಡು ಅವರ ‘ಭಕ್ತ ಪ್ರಹ್ಲಾದ’ದಲ್ಲಿ ಕೂಡಾ ಅಭಿನಯಿಸಿದರು. ಹಲವಾರು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿದರು.

ನಾಯಕಿಯಾಗಿ ಅವರು ಅಭಿನಯಿಸಿದ ಮೊದಲ ಚಿತ್ರ ಮಾಂಗಲ್ಯ ಯೋಗ. ಡಾ. ರಾಜ್ ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಚಿತ್ರ ರಣಧೀರ ಕಂಠೀರವ.

ರಾಣಿ ಹೊನ್ನಮ್ಮ ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಜನಪ್ರಿಯವಾಯಿತು. ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹೀಗೆ ಹಲವಾರು ಚಿತ್ರಗಳ ನಾಯಕಿಯಾದರು. ಕೆಲಚಿತ್ರಗಳಲ್ಲಿ ನಾಯಕನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ನಾಯಕಿಯಾಗಿ ಗುರುತಿಸಿಕೊಂಡಿದ್ದರು.

೭೦ರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ಲೀಲಾವತಿಯವರು ತಮ್ಮನ್ನು ತೊಡಗಿಸಿಕೊಂಡರು. ನಾಯಕಿಯಾಗಿ, ಅಮ್ಮನಾಗಿ, ಅಜ್ಜಿಯಾಗಿ ನಾನಾಬಗೆಯ ಪೋಷಕಪಾತ್ರಗಳಲ್ಲಿ ನಟಿಸಿದರು. ಅವುಗಳಲ್ಲಿ ಗೆಜ್ಜೆ ಪೂಜೆ, ಸಿಪಾಯಿ ರಾಮು, ನಾಗರಹಾವು, ಭಕ್ತ ಕುಂಬಾರ ಮುಂತಾದ ಚಿತ್ರಗಳು ಪ್ರಮುಖವಾದವು.

ಪ್ರಶಸ್ತಿ-ಪುರಸ್ಕಾರಗಳು

  • ೨೦೦೮ - ತುಮಕೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
  • ೨೦೦೬ - ಅತ್ತ್ಯುತ್ತಮ ಪೋಷಕನಟಿ ಫಿಲಂಫೇರ್ ಕನ್ನಡ - ಕನ್ನಡದ ಕಂದ
  • ೧೯೯೯-೨೦೦೦ - ಡಾ. ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ
  • ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು:
  1. ಅತ್ತ್ಯುತ್ತಮ ಪೋಷಕನಟಿ ಪ್ರಶಸ್ತಿ
    1. ೧೯೬೦-೭೦ - ಗೆಜ್ಜೆಪೂಜೆ
    2. ೧೯೭೧-೭೨ - ಸಿಪಾಯಿ ರಾಮು
    3. ೧೯೮೯-೯೦ - ಡಾಕ್ಟರ್ ಕೃಷ್ಣ

ಸಮಾಜಸೇವೆ

ನೆಲಮಂಗಲದ ಸುತ್ತಮುತ್ತ ವಾಸಿಸುವ ಜನರ ಆರೋಗ್ಯ ಸೇವೆಗಾಗಿ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆಯೊಂದನ್ನು ಲೀಲಾವತಿ ಕಟ್ಟಿಸಿದ್ದಾರೆ.

ಆಯ್ದ ಚಿತ್ರಗಳ ಪಟ್ಟಿ

ಉಲ್ಲೇಖಗಳು

"https://kn.wikipedia.org/w/index.php?title=ಲೀಲಾವತಿ&oldid=1198801" ಇಂದ ಪಡೆಯಲ್ಪಟ್ಟಿದೆ