ರೋಹಿತ ವಿಜ್ಞಾನವು ದ್ರವ್ಯದಿಂದಾಗುವ ಬೆಳಕು ಮತ್ತು ಇತರ ವಿಕಿರಣದ ಉತ್ಸರ್ಜನೆ ಹಾಗೂ ಅಪಶೋಷಣೆಯನ್ನು, ವಿಕಿರಣದ ಅಲೆಯುದ್ದವನ್ನು ಅವಲಂಬಿಸಿರುವ ಪ್ರಕ್ರಿಯೆಗಳಾಗಿ ಅಧ್ಯಯನ ಮಾಡುವ ವಿಜ್ಞಾನ ವಿಭಾಗ (ಸ್ಪೆಕ್ಟ್ರೋಸ್ಕೋಪಿ).[][] ಎಲೆಕ್ಟ್ರಾನ್, ಪ್ರೊಟಾನ್ ಮತ್ತು ಅಯಾನುಗಳಂಥ ಕಣಗಳ ನಡುವಣ ಹಾಗೂ ಇತರ ಕಣಗಳೊಂದಿಗೆ ಇವುಗಳ ಅಂತರ್ವರ್ತನೆಯನ್ನು ಸಂಘಟ್ಟನಶಕ್ತಿಯ (ಕೊಲಿಶನ್ ಎನರ್ಜಿ) ಫಲನ ಎಂದು ಪರಿಗಣಿಸಿ ಮಾಡುವ ಅಧ್ಯಯನಗಳನ್ನೂ ಈ ವಿಜ್ಞಾನದ ವ್ಯಾಪ್ತಿಗೆ ಇತ್ತೀಚೆಗೆ ಸೇರಿಸಲಾಗಿದೆ. ರೋಹಿತವಿಶ್ಲೇಷಣೆ ಇದರ ಪ್ರಮುಖ ಅಧ್ಯಯನ ವಿಧಾನ. ಇದು ಪರಮಾಣು ಮತ್ತು ಕಣಗಳಿಗೆ ಸಂಬಂಧಿಸಿದ ಮೂಲಭೂತ ಸಿದ್ಧಾಂತಗಳ ವಿಕಾಸದಲ್ಲಿ ಮಹತ್ತ್ವದ ಪಾತ್ರವಹಿಸಿದೆ.

ರೋಹಿತ ವಿಜ್ಞಾನದ ಒಂದು ಉದಾಹರಣೆ: ಅಶ್ರಗವು ಬಿಳಿ ಬೆಳಕನ್ನು ಅದರ ಘಟಕ ಬಣ್ಣಗಳಾಗಿ ಚದರುವ ಮೂಲಕ ಅದನ್ನು ವಿಶ್ಲೇಷಿಸುತ್ತದೆ.

ವಿದ್ಯುತ್ಕಾಂತ ರೋಹಿತದ ಯಾವ ಘಟಕವನ್ನು ಅವಲಂಬಿಸಿ ಅಧ್ಯಯನ ಮಾಡಲಾಗುತ್ತಿದೆ ಎಂಬುದನ್ನು ಆಧರಿಸಿ ರೋಹಿತವಿಜ್ಞಾನದ ಶಾಖೆಗಳನ್ನು ಗುರುತಿಸುವುದುಂಟು (ಉದಾ: ದ್ಯುತಿ; ಎಕ್ಸ್‌ಕಿರಣ; ಸೂಕ್ಷ್ಮತರಂಗ ರೋಹಿತವಿಜ್ಞಾನಗಳು). ವಿಕಿರಣದ ಆಕರವನ್ನು ಅಥವಾ ವಿಶಿಷ್ಟ ಪ್ರಕ್ರಿಯೆಯನ್ನು ಆಧರಿಸಿ ಅವನ್ನು ಗುರುತಿಸುವುದೂ ಉಂಟು (ಉದಾ: ಲೇಸರ್; ರಾಮನ್; ಪ್ರತಿದೀಪ್ತಿ ರೋಹಿತವಿಜ್ಞಾನಗಳು).

ವಿಕಾಸದ ಮೈಲುಗಲ್ಲುಗಳು

ಬದಲಾಯಿಸಿ

ಸೂರ್ಯಪ್ರಕಾಶ ಏಳು ಬಣ್ಣಗಳ ಸಂತತಪಟ್ಟಿ ಎಂದು ಅಶ್ರಗದ ನೆರವಿನಿಂದ ಐಸಾಕ್ ನ್ಯೂಟನ್ (1642-1727) ತೋರಿಸಿದಂದು (1664) ರೋಹಿತಾಧ್ಯಯನದ ಆರಂಭ.[] ವಿಲಿಯಮ್ ಹರ್ಷೆಲ್ (1738-1822) ತಾಪಮಾಪಕಗಳ ನೆರವಿನಿಂದ ವಿವಿಧ ಬಣ್ಣದ ಬೆಳಕುಗಳು ಒದಗಿಸುವ ಉಷ್ಣದ ಪರಿಮಾಣಗಳ ಅಧ್ಯಯನ ಮಾಡುತ್ತಿದ್ದಾಗ ಅವಕೆಂಪು ವಿಕಿರಣದ ಆವಿಷ್ಕಾರ (1800). ಯೋಹಾನ್ ವಿಲ್‌ಹೆಲ್ಮ್ ರಿಟ್ಟರ್ (1776-1810) ಬೆಳ್ಳಿಯ ಕ್ಲೋರೈಡಿನ ಮೇಲೆ ಸೌರರೋಹಿತದ ಪರಿಣಾಮ ಅಧ್ಯಯನ ಮಾಡುವಾಗ ಅತಿನೇರಿಳೆ ಕಿರಣದ ಆವಿಷ್ಕಾರ (1801). ಥಾಮಸ್ ಯಂಗ್ (1773-1829) ಸೌರರೋಹಿತದ ಏಳು ಬಣ್ಣದ ಬೆಳಕುಗಳ ಅಲೆಯುದ್ದವನ್ನು ಬೆಳಕಿನ ತರಂಗಸಿದ್ಧಾಂತದ ಅನ್ವಯ ಲೆಕ್ಕಿಸುತ್ತಿದ್ದಾಗ ಬೆಳಕಿನ ಬಣ್ಣಕ್ಕೂ ಅದರ ಅಲೆಯುದ್ದಕ್ಕೂ ನಡುವಣ ಸಂಬಂಧದ ಪತ್ತೆ (1802). ಸೌರ ರೋಹಿತದಲ್ಲಿ ಫ್ರಾನ್‌ಹೊಫರ್ ರೇಖೆಗಳು ಎಂದು ಕರೆಯುತ್ತಿರುವ ಅನೇಕ ಕಪ್ಪು ಗೆರೆಗಳ ಮತ್ತು ಅವುಗಳ ಪೈಕಿ ಕೆಲವಕ್ಕೆ ತಾಗಿಕೊಂಡಿದ್ದ ಉಜ್ಜ್ವಲ ರೇಖೆಗಳ(ಅರ್ಥಾತ್ ಶೋಷಣರೋಹಿತದ ಮತ್ತು ಉತ್ಸರ್ಜನರೋಹಿತದ) ಅಸ್ತಿತ್ವವನ್ನು ಜೊಸೆಫ್ ವಾನ್ ಫ್ರಾನ್‌ಹೊಫರ್ (1787-1826) ಪತ್ತೆಹಚ್ಚಿದ (1814).[] ಗಸ್ಟಾವ್ ರಾಬರ್ಟ್ ಕಿರ್ಖಫ್ (1824-87) ಈ ವಿದ್ಯಮಾನದ ಪ್ರಾಮುಖ್ಯವನ್ನು ವಿಶದೀಕರಿಸಿ ಪ್ರತಿಯೊಂದು ಶುದ್ಧ ಪದಾರ್ಥಕ್ಕೂ ಅದ್ವಿತೀಯ ರೋಹಿತವಿರುವ ಅಂಶವನ್ನು ತಿಳಿಸಿದ. ಈತ ಮತ್ತು ರಾಬರ್ಟ್ ವಿಲ್‌ಹೆಲ್ಮ್ ಬುನ್ಸೆನ್ (1811-99) ಸೌರರೋಹಿತದ ಮತ್ತು ಲಭ್ಯ ಶುದ್ಧ ಧಾತುಗಳ ಜ್ವಾಲೆ ಅಥವಾ ಕಿಡಿ ಉಂಟುಮಾಡುವ ರೋಹಿತದ ರೇಖೆಗಳನ್ನು ವ್ಯವಸ್ಥಿತವಾಗಿ ಹೋಲಿಸುವುದರ ಮೂಲಕ ಸೌರವಾಯುಮಂಡಲದ ರಾಸಾಯನಿಕ ವಿಶ್ಲೇಷಣೆ ಮಾಡಿದ್ದು (1861) ರೋಹಿತರಾಸಾಯನಿಕ ವಿಶ್ಲೇಷಣೆ ಮತ್ತು ಖಭೌತವಿಜ್ಞಾನದ ಸೃಷ್ಟಿಗೆ ಕಾರಣವಾಯಿತು. ಹೈಡ್ರೊಜನ್ನಿನಿಂದ ಹೊಮ್ಮುವ ರೋಹಿತರೇಖೆಗಳ ಆವೃತ್ತಿಗಳು ಅಥವಾ ಅಲೆಯುದ್ದ   ಎಂಬ ಸರಳ ಸಂಖ್ಯಾ ಪ್ರರೂಪದಲ್ಲಿ (λ=ಅಲೆಯುದ್ದ; RH=ಸ್ಥಿರ; n=2ಕ್ಕಿಂತ ಹೆಚ್ಚಿನ ಪೂರ್ಣಾಂಕ) ಇರುವುದನ್ನು ಯೋಹಾನ್ ಜೇಕಬ್ ಬಾಮರ್ (1825-98) ತೋರಿಸಿದ (1885). ಈ ಪ್ರರೂಪಕ್ಕೆ ಒಪ್ಪುವ ಹೈಡ್ರೊಜನಿನ ಪರಮಾಣು ಮಾದರಿಯೊಂದನ್ನು ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್ (1885-1962) ಮಂಡಿಸಿದ (1913). ಅಧಿಕ ಪರಮಾಣು ಅಂಕದ ಪರಮಾಣು ರೋಹಿತಗಳ ವಿವರಣೆ ಮತ್ತು ಪರಮಾಣುವಿನ ವಿವಿಧ ಶಕ್ತಿ ಮಟ್ಟಗಳ ಮಧ್ಯೆ ರೋಹಿತರೇಖೆಗಳ ಉಗಮಕ್ಕಾಗಿ ನಡೆಯುವ ಸಂಕ್ರಮಣಗಳ ಸಂಭವನೀಯತೆಗಳ ಲೆಕ್ಕಾಚಾರ ಈ ಮಾದರಿಯಿಂದ ಸಾಧ್ಯವಾಗಲಿಲ್ಲ. ಕ್ವಾಂಟಮ್ ಮೆಕ್ಯಾನಿಕ್ಸ್‌ನ ನೆರವಿನಿಂದ ಈ ದೋಷ ನಿವಾರಿಸಲು ವರ್ನರ್ ಕಾರ್ಲ್ ಹೈಸನ್‌ಬರ್ಗ್ (1901-76) ಮತ್ತು ಇರ್ವಿನ್ ಶ್ರೋಡಿಂಗರ್ (1887-1961) ಪ್ರಯತ್ನಿಸಿದರು (1925-26). ವೂಲ್ಫ್‌ಗಾಂಗ್ ಪೌಲಿ (1900-58) ಮತ್ತು ಮ್ಯಾಕ್ಸ್ ಬಾರ್ನ್ (1882-1970) ಈ ಅಧ್ಯಯನವನ್ನು ಯಶಸ್ವಿಯಾಗಿ ಮುಂದುವರಿಸಿದರು. ಹೈಡ್ರೊಜನ್ ರೋಹಿತದ ಸೂಕ್ಷ್ಮ ಸಂರಚನೆಯನ್ನು ಕ್ವಾಂಟಮ್ ಮೆಕ್ಯಾನಿಕ್ಸ್ ಮತ್ತು ಸಾಪೇಕ್ಷತಾ ಸಿದ್ಧಾಂತಗಳ ನೆರವಿನಿಂದ ಪಾಲ್ ಆಡ್ರಿಯನ್ ಮೌರಿಸ್ ಡಿರಾಕ್ (1902-84) ವಿವರಿಸಿದ (1928). ಹೈಡ್ರೊಜನ್ ಪರಮಾಣುವಿನ ಕನಿಷ್ಠ ಶಕ್ತಿಮಟ್ಟ ಮತ್ತು 1ನೇ ಉದ್ರಿಕ್ತ ಶಕ್ತಿಮಟ್ಟ ಇವುಗಳ ನಡುವಿನ ಸಂಕ್ರಮಣಕ್ಕೆ ಸಂವಾದಿಯಾದ ವಿಕಿರಣದ ಆವೃತ್ತಿಯನ್ನು 1940ರ ದಶಕದಲ್ಲಿ ರಿಚರ್ಡ್ ಫಿಲಿಪ್ಸ್ ಫೆಯ್ನ್‌ಮ್ಯಾನ್ (1918-88), ಜೂಲಿಯನ್ ಸೆಯ್ಮೋರ್ ಶ್ವಿಂಗರ್ (1918-94) ಮತ್ತು ಶಿನಿಚಿರೊ ಟೊಮೊನಾಗ (1906-79) ಎಂಬವರು ಕ್ವಾಂಟಮ್ ಎಲೆಕ್ಟ್ರೊಡೈನಾಮಿಕ್ಸ್ ನೆರವಿನಿಂದ ನಿಖರವಾಗಿ ವಿವರಿಸಿದರು.

ರೋಹಿತ ವಿಶ್ಲೇಷಣೆ

ಬದಲಾಯಿಸಿ

ರೋಹಿತ ವಿಶ್ಲೇಷಣೆಯ ಎಲ್ಲ ಪ್ರಯೋಗಗಳಲ್ಲಿ ಕೆಲವು ಸಾಮಾನ್ಯ ಅಂಶಗಳಿವೆ.

  1. ವಿಕಿರಣದ ಅಥವಾ ಬೆಳಕಿನ ಆಕರ.
  2. ವಿಕಿರಣವನ್ನು ಘಟಕ ಅಲೆಯುದ್ದಗಳಾಗಿ ಪ್ರತ್ಯೇಕಿಸಬಲ್ಲ, ಅರ್ಥಾತ್, ವಿಕಿರಣದ ರೋಹಿತ ಸೃಷ್ಟಿಸಬಲ್ಲ ವಿಕ್ಷೇಪಕ (ಡಿಸ್ಪರ್ಸರ್).
  3. ರೋಹಿತದ ವಿವರಗಳನ್ನು ದಾಖಲಿಸಲು ಹಾಗೂ ವೀಕ್ಷಿಸಲು ನೆರವು ನೀಡುವ ಸಂಸೂಚಕ (ಡಿಟೆಕ್ಟರ್).
  4. ಅಲೆಯುದ್ದಗಳ ಮತ್ತು ತೀವ್ರತೆಗಳ ಮಾಪನ, ಮತ್ತು
  5. ಮಾಪನಗಳ ಅರ್ಥೈಸುವಿಕೆ.

ಜ್ವಾಲೆಗಳು, ಜ್ವಲಿಸುತ್ತಿರುವ ಟಂಗ್‌ಸ್ಟನ್ ತಂತು, ವಿದ್ಯುತ್ ವಿಸರ್ಜನಗಳು ಇವು ಅಲೆಯುದ್ದ ವ್ಯಾಪ್ತಿ ಅಧಿಕವಾಗಿರುವ, ಅರ್ಥಾತ್, ಅಗಲ ಪಟ್ಟೆಯ (ಬ್ರಾಡ್ ಬ್ಯಾಂಡ್) ಬೆಳಕಿನ ಆಕರಗಳು. ಲೇಸರ್ ಆಕರಗಳು ಮತ್ತು ವಿವಿಕ್ತವಾದ ಖಚಿತ ಮೌಲ್ಯಗಳುಳ್ಳ ಅಲೆಯುದ್ದದ ವಿಕಿರಣ ಒದಗಿಸುವ ಗ್ಲೈಸರ್ ವಿಸರ್ಜನ ನಳಿಗೆಗಳು ರೇಖಾರೋಹಿತದ ಆಕರಗಳು. ಪರೀಕ್ಷಿಸಬೇಕಾದ ಪದಾರ್ಥದಿಂದ ಏಕವರ್ಣೀಯವೂ ತೀವ್ರವೂ ಆದ ಬೆಳಕನ್ನು ಹೊಮ್ಮಿಸಬೇಕಾದಾಗ ಲೇಸರ್ ಆಕರವೇ ಬೆಳಕಿನ ಆಕರ.

ಅಧ್ಯಯನದ ಉದ್ದೇಶವನ್ನಾಧರಿಸಿ ವಕ್ರೀಭವನ, ವಿವರ್ತನ (ಡಿಫ್ರಾಕ್ಷನ್) ಮತ್ತು ವ್ಯತಿಕರಣ (ಇಂಟರ್‌ಫಿರೆನ್ಸ್) ಈ ವಿದ್ಯಮಾನಗಳ ಪೈಕಿ ಒಂದನ್ನು ಉಂಟುಮಾಡಬಲ್ಲ ಸಾಧನವೇ ವಿಕಿರಣದ ವಿಕ್ಷೇಪಕ (ಉದಾ: ಅಶ್ರಗ, ಗ್ರೇಟಿಂಗ್).

ದ್ಯುತಿವಿದ್ಯುತ್, ರೇಡಿಯೊಮೆಟ್ರಿಕ್, ಫೋಟೊಗ್ರಾಫಿಕ್ ವಿಧಾನಗಳಿಂದ ರೋಹಿತದ ವಿವರಗಳನ್ನು ವೀಕ್ಷಿಸಲು ಮತ್ತು ದಾಖಲಿಸಲು ಸಾಧ್ಯ. ಪ್ರತಿಯೊಂದು ವಿಧಾನಕ್ಕೂ ಅದರದ್ದೇ ಆದ ಇತಿಮಿತಿಗಳಿವೆ. ಶಾಶ್ವತ ದಾಖಲೆ ಒದಗಿಸುವ ವಿಧಾನ ಎಂಬ ಕಾರಣಕ್ಕಾಗಿ ಫೋಟೊಗ್ರಫಿಯ ಬಳಕೆ ಹೆಚ್ಚು. ಫೋಟೊಗ್ರಾಫಿಕ್ ಫಲಕಗಳು, ಫೋಟೊಮಲ್ಟಿಪ್ಲಾಯರ್ಸ್ ಮತ್ತು ಫೋಟೊಕಂಡಕ್ಟರ್‌ಗಳು ವ್ಯಾಪಕ ಬಳಕೆಯ ಸಂಸೂಚಕಗಳು.

ವಿಕಿರಣವನ್ನು ಪದಾರ್ಥದ ಮೂಲಕ ಹಾಯಿಸಿದಾಗ ಲಭ್ಯವಾಗುವ ಶಕ್ತಿ ನಷ್ಟವಾದ ಅಲೆಯುದ್ದಗಳನ್ನು ಶೋಷಣ (ಸಾರ್ಪ್ಷನ್) ರೋಹಿತ ವಿಜ್ಞಾನದಲ್ಲಿಯೂ ಪರೀಕ್ಷಿಸಬೇಕಾದ ಪದಾರ್ಥವನ್ನು ಉದ್ರೇಕಿಸಿದಾಗ ಅದು ಉತ್ಸರ್ಜಿಸುವ ವಿಕಿರಣದ ಅಲೆಯುದ್ದಗಳನ್ನು ಉತ್ಸರ್ಜನ ರೋಹಿತ ವಿಜ್ಞಾನದಲ್ಲಿಯೂ ಅಳೆಯಲಾಗುತ್ತದೆ.

ಅನ್ವಯಗಳು

ಬದಲಾಯಿಸಿ

ಅನೇಕ ಕ್ಷೇತ್ರಗಳಲ್ಲಿ ರೋಹಿತವಿಜ್ಞಾನದ ಅನ್ವಯ ಉಂಟು. ರೋಹಿತ ವಿಶ್ಲೇಷಣೆಯಿಂದ ಪರಮಾಣು ಮತ್ತು ಅಣುಗಳ ಸಂರಚನೆಯ ಅಧ್ಯಯನ ಸಾಧ್ಯವಾಗಿದೆ.[] ಎಕ್ಸ್ ಕಿರಣ ವಿವರ್ತನೆಯಿಂದ ಡಿಎನ್‌ಎ ಅಣುವಿನ ಸಂರಚನೆಯ ಸುಳಿವು ಸಿಕ್ಕಿದ್ದು ಈಗ ಇತಿಹಾಸ. ಯಾವುದೇ ಮಿಶ್ರಣದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಇರುವ ಘಟಕವನ್ನೂ ರೋಹಿತ ವಿಶ್ಲೇಷಣೆಯಿಂದ ಪತ್ತೆ ಮಾಡಬಹುದು. 1020 ಪರಮಾಣುಗಳ ಪೈಕಿ ಒಂದು ಭಿನ್ನವಾದುದಾಗಿದ್ದರೂ ಪತ್ತೆಮಾಡಬಹುದು. ಮಲಿನಕಾರಿಗಳ ಅಸ್ತಿತ್ವ ಮತ್ತು ಪ್ರಮಾಣ ನಿರ್ಧರಿಸಲು ಇದು ಉಪಯುಕ್ತ. ಬ್ರಹ್ಮಾಂಡಗಳ ರೋಹಿತ ಮತ್ತು ನಕ್ಷತ್ರ ರೋಹಿತಗಳಿಂದ ಆ ಕಾಯಗಳಲ್ಲಿರುವ ಧಾತುಗಳ ಪತ್ತೆಯೂ ಸಾಧ್ಯ.[][] ಲೇಸರ್ ತಂತ್ರವಿದ್ಯೆಯ ನೆರವಿನಿಂದ ರೋಹಿತರೇಖೆಯಲ್ಲಿ ಆಗುವ 1015ರ ಒಂದು ಅಂಶದಷ್ಟು ಆವೃತ್ತಿಪಲ್ಲಟವನ್ನೂ (ಫ್ರೀಕ್ವೆನ್ಸಿ ಶಿಫ್ಟ್) ಅಳೆಯಬಹುದು. ಇದರಿಂದಾಗಿಯೇ ಬ್ರಹ್ಮಾಂಡಗಳ ರೋಹಿತದಲ್ಲಿ ಡಾಪ್ಲರ್ ಪಲ್ಲಟ ಪತ್ತೆಯಾಯಿತು; ಬ್ರಹ್ಮಾಂಡಗಳು ಪರಸ್ಪರ ದೂರ ಸರಿಯುತ್ತಿರುವ ಸಂಗತಿಯೂ ತಿಳಿಯಿತು. ಬ್ರಹ್ಮಾಂಡದ ದೂರಕ್ಕೂ ಡಾಪ್ಲರ್ ಪಲ್ಲಟಕ್ಕೂ ಇರುವ ರೇಖೀಯ ಸಂಬಂಧವನ್ನು ಆವಿಷ್ಕರಿಸಿದಾತ (1929) ಎಡ್ವಿನ್ ಪೊವೆಲ್ ಹಬ್ಬಲ್ (1889-1953). ಮಹಾಬಾಜಣೆಯಿಂದ (ಬಿಗ್ ಬ್ಯಾಂಗ್) ವಿಶ್ವದ ಉಗಮವಾಯಿತು ಎಂಬ ಕಲ್ಪನೆಯನ್ನು ಮಂಡಿಸಿದವ(1927) ಅ್ಯಬ್ಬೆ ಜಾರ್ಜ್ ಎಡ್ವರ್ಡ್ ಲೆಮೆಟರ್ (1894-1966). ಈ ಕಲ್ಪನೆ ಸರಿಯಾಗಿದ್ದಲ್ಲಿ ‘ಹಿನ್ನೆಲೆ ವಿಕಿರಣ’ ಇಂದೂ ಎಲ್ಲೆಡೆ ವ್ಯಾಪಿಸಿರಬೇಕು ಎಂದೂ ಅನುಮಾನಿಸಲಾಗಿತ್ತು. ಸೂಕ್ಷ್ಮತರಂಗಗಳ (ಮೈಕ್ರೊವೇವ್) ರೋಹಿತ ಅಧ್ಯಯನದಿಂದ ಇಂಥ ಒಂದು ವಿಕಿರಣ ಇರುವುದು ಪತ್ತೆಯಾಯಿತು (1965). ಕಾಂತಕ್ಷೇತ್ರದಲ್ಲಿ ಇರುವ ನ್ಯೂಕ್ಲಿಯಸ್ಸುಗಳಿಂದ ಹೊಮ್ಮುವ ರೇಡಿಯೊ ಆವೃತ್ತಿಯ ರೋಹಿತ ಅಧ್ಯಯನದಿಂದ ಕಾಂತೀಯ ಅನುರಣನ ಬಿಂಬನ (ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್, ಎಮ್‌ಆರ್‌ಐ) ತಂತ್ರ ವಿಕಸಿಸಿತು. ಎಕ್ಸ್ ಕಿರಣ ಫೊಟೊಗ್ರಫಿಯಿಂದ ಸಾಧ್ಯವಾಗದ ಆಂತರಿಕ ಮೃದು ಊತಕಗಳ ಅಧ್ಯಯನ ಈ ತಂತ್ರದಿಂದ ಸಾಧ್ಯ.

ಉಲ್ಲೇಖಗಳು

ಬದಲಾಯಿಸಿ
  1. Duckett, Simon; Gilbert, Bruce (2000). Foundations of Spectroscopy. Oxford Science Publications. ISBN 978-0198503354.
  2. Crouch, Stanley R.; Skoog, Douglas A.; Holler, F. J. (2007). Principles of instrumental analysis. Australia: Thomson Brooks/Cole. ISBN 9780495012016.
  3. “Isaac Newton and the problem of color,” Steven A. Edwards, Ph.D. AAAS, https://www.aaas.org/isaac-newton-and-problem-color
  4. Andrew Fraknoi; David Morrison (October 13, 2016). "OpenStax Astronomy".
  5. Brian Bowers (2001). Sir Charles Wheatstone FRS: 1802-1875 (2nd ed.). IET. pp. 207–208. ISBN 978-0-85296-103-2.
  6. ”Spectra and What They Can Tell Us,” NASA https://imagine.gsfc.nasa.gov/science/toolbox/spectra1.html
  7. Brand, John C. D. (1995). Lines of Light: The Sources of Dispersive Spectroscopy, 1800 - 1930. Gordon and Breach Publishers. p. 57. ISBN 978-2884491624.


ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: