ಮೋಹಿನಿಯಾಟ್ಟಂ

ಕೇರಳದಲ್ಲಿ ಕಂಡುಬರುವ ಒಂದು ಶಾಸ್ತ್ರೀಯ ಭಾರತೀಯ ನೃತ್ಯ
(ಮೋಹಿನಿಯಾಟಂ ಇಂದ ಪುನರ್ನಿರ್ದೇಶಿತ)

'ಮೋಹಿನಿಯಾಟ್ಟಂ (Mohiniyattam) , (ಕೆಲವೊಮ್ಮೆ Mohiniattam ಎಂದೂ ನಮೂದಿಸಲಾಗಿದೆ (ಮಲಯಾಳಂ:മോഹിനിയാട്ടം), ಕೇರಳ ಮೂಲದ ಸಾಂಪ್ರದಾಯಿಕ ದಕ್ಷಿಣ ಭಾರತೀಯ ನೃತ್ಯ ಶೈಲಿ. ತಮಿಳು ಮೂಲದ ನಟ್ಟುವಾನರ (ನೃತ್ಯ ಗುರು) ಹಾಗೂ ತಂಜಾವೂರು ಚತುಷ್ಟಯರಲ್ಲಿ ಒಬ್ಬರಾದ ವಡಿವೇಲು, ಈ ನೃತ್ಯರೂಪವನ್ನು ಅಭಿವೃದ್ಧಿಗೊಳಿಸಿದರು. ಎಂಟು ಭಾರತೀಯ ಶಾಸ್ತ್ರೀಯ ನೃತ್ಯ ರೂಪಗಳಲ್ಲಿ ಇದೂ ಒಂದು. ಮಹಿಳೆಯರು ಒಂಟಿಯಾಗಿ ಪ್ರದರ್ಶಿಸುವ ಬಹಳ ಸುಲಲಿತ ನೃತ್ಯವಿದು. ಮೋಹಿನಿಯಾಟ್ಟಂ ಎಂಬ ಪದವು, 'ಮೋಹಿನಿ' (ನೋಡುಗರನ್ನು ಮರುಳಾಗಿಸುವ ಮಹಿಳೆ) ಹಾಗೂ 'ಆಟಂ' (ಸುಲಲಿತ ಹಾಗೂ ಅಪ್ಯಾಯಮಾನವಾದ ಶಾರೀರಿಕ ಚಲನವಲನಗಳು ) ಎಂಬ ಎರಡು ಪದಗಳ ಸಂಯೋಗದಿಂದ ಮೂಡಿಬಂದಿದೆ. ಮೋಹಿನಿಯಾಟ್ಟಂ ಎಂಬುದು ಮೋಹಿನಿಯ ನೃತ್ಯ ' ಎಂದರ್ಥ ನೀಡುತ್ತದೆ. ಶ್ರೀವಿಷ್ಣು ಮೋಹಿನಿಯ ವೇಷದಲ್ಲಿದ್ದ ಬಗ್ಗೆ ಎರಡು ಕಥೆಗಳಿವೆ. ಒಂದು ಕಥೆಯಲ್ಲಿ, ದೇವತೆಗಳು-ಅಸುರರು ಕ್ಷೀರಸಾಗರ ಮಥನ ಮಾಡಿ ಅಮೃತವನ್ನು ತೆಗೆದ ನಂತರ, ಅಸುರರನ್ನು ಅಮೃತದಿಂದ ದೂರವಿಡಲು ವಿಷ್ಣು ಮೋಹಿನಿಯ ವೇಷದಲ್ಲಿ ಗೋಚರಿಸುವನು.

ಮೋಹಿನಿಯಾಟ್ಟಂ ನೃತ್ಯ ಪ್ರದರ್ಶಿಸುತ್ತಿರುವವರು
ಮೋಹಿನಿಯಾಟ್ಟಂ ನೃತ್ಯ ಕಲಾವಿದರು ಪ್ರದರ್ಶಿಸುತ್ತಿರುವ ಒಂದು ಭಂಗಿ

ಎರಡನೆಯ ಕಥೆಯಲ್ಲಿ, ಭಸ್ಮಾಸುರನೆಂಬ ರಾಕ್ಷಸನಿಂದ ಶಿವನನ್ನು ರಕ್ಷಿಸಲು ವಿಷ್ಣು ಮೋಹಿನಿಯ ರೂಪದಲ್ಲಿ ಗೋಚರಿಸುವನು. ವಿಷ್ಣುವಿನ ಅವತಾರವನ್ನು ಮೂಲವಾಗಿಟ್ಟುಕೊಂಡು ಮೋಹಿನಿಯಾಟ್ಟಂ ಎಂಬ ಹೆಸರು ಬಳಕೆಯಾಗಿದ್ದರೂ, ವಿಷ್ಣು ಅಥವಾ ಕೃಷ್ಣ ದೇವರನ್ನು ನೆಚ್ಚಿ ನಮನ ಸಲ್ಲಿಸುವುದು ಈ ನೃತ್ಯದ ಧ್ಯೇಯವಾಗಿದೆ. ದೇವದಾಸಿಗಳು ದೇವಾಲಯಗಳಲ್ಲಿ ಈ ನೃತ್ಯ ಮಾಡುತ್ತಿದ್ದರು. ಆದರೂ ಈ ನೃತ್ಯದಲ್ಲಿ ಕೂತು ಮತ್ತು ಕೊಟ್ಟಿಯಾಟಂನ ಅಂಶಗಳಿವೆ. ಮೋಹಿನಿಯಾಟ್ಟಂ ಎಂಬುದು ನೃತ್ಯ ಮತ್ತು ಪದ್ಯ-ಪಂಕ್ತಿಗಳುಳ್ಳ ನಾಟಕ.

ಭರತನಾಟ್ಯಂ ಮತ್ತು ಕಥಕ್ಕಳಿ ಎಂಬ ದಕ್ಷಿಣ ಭಾರತದ ಎರಡು ನೃತ್ಯ ರೂಪಗಳ ಪ್ರಭಾವಗಳು ಮತ್ತು ಅಂಶಗಳನ್ನು ಈ ನೃತ್ಯವು ಹೊಂದಿದೆ. ತಂಜಾವೂರು ಚತುಷ್ಟಯರಲ್ಲಿ ಒಬ್ಬರಾದ ವಡಿವೇಲು, ಈ ನೃತ್ಯವನ್ನು ಮೊದಲ ಬಾರಿಗೆ ರಾಜ ಸ್ವಾತಿ ತಿರುನಾಳ್‌ ಆಸ್ಥಾನದಲ್ಲಿ ಪ್ರದರ್ಶಿಸಿ ಪರಿಚಯಿಸಿದರು. ಈ ನೃತ್ಯವು ಅಗಲವಾದ ನಡುವನ್ನು ಸುಲಲಿತವಾಗಿ ತೂಗಾಡಿಸುವ ಹಾಗೂ ನೆಟ್ಟಗೆ ನಿಂತ ಭಂಗಿಯನ್ನು ಅಕ್ಕಪಕ್ಕಕ್ಕೆ ನಯವಾಗಿ ಚಲಿಸುವ ಕಲೆಯನ್ನು ಒಳಗೊಂಡಿದೆ. ಮೋಹಿನಿಯಾಟ್ಟಂನ ತಾಣ ಕೇರಳ ರಾಜ್ಯದಲ್ಲಿ ಹೇರಳವಾಗಿರುವ, ಮೆಲ್ಲನೆ ಓಲಾಡುವ ತಾಳೆ ಮರಗಳು ಹಾಗೂ ನಿಧಾನಗತಿಯಲ್ಲಿ ಸುಗಮವಾಗಿ ಚಲಿಸುವ ನದಿಗಳನ್ನು ನೆನಪು ಮಾಡುವಂತಹ ನೃತ್ಯವಾಗಿದೆ. ಮೋಹಿನಿಯಾಟ್ಟಂನಲ್ಲಿ 'ಅಟವುಕಲ್'‌ ಎನ್ನಲಾದ 40 ವಿವಿಧ ಮೂಲಭೂತ ಚಲನವಲನಗಳಿವೆ.

20ನೆಯ ಶತಮಾನದ ಉತ್ತರಾರ್ಧದಲ್ಲಿ ಮೋಹಿನಿಯಾಟ್ಟಂ ನೃತ್ಯದ ಪುನಶ್ಚೇತನಕ್ಕೆ 'ಮೂರು ಆಧಾರಸ್ತಂಭಗಳು' ಎನ್ನಲಾದ ಶ್ರೀ ಸ್ವಾತಿ ತಿರುನಾಳ್‌ ರಾಮ ವರ್ಮ, ಶ್ರೀ ವಲ್ಲತೊಳ್‌ ನಾರಾಯಣ ಮೆನನ್‌ (ಮಹಾ ಕವಿ ಹಾಗೂ ಕೇರಳ ಕಲಾಮಂಡಲಮ್‌ ಸಂಸ್ಥೆಯ ಸಂಸ್ಥಾಪಕ) ಹಾಗೂ ಶ್ರೀಮತಿ ಕಲಾಮಂಡಲಂ ಕಲ್ಯಾಣಿಕುಟ್ಟಿ ಅಮ್ಮ (ಮೋಹನಿಯಾಟಂ ನೃತ್ಯದ ಜನನಿ) ಕಾರಣರಾಗಿದ್ದಾರೆ. ಗುರು ಕಲ್ಯಾಣಿಕುಟ್ಟಿ ಅಮ್ಮ ಇಂತಹ ನೃತ್ಯ ರೂಪದ ಹಿಂದಿನ ವಿಸ್ಮಯಕಾರಿ ಹಿನ್ನೆಲೆಯನ್ನು ಸ್ಪಷ್ಟಗೊಳಿಸಿದರು. ನೈಜ ಮಾಹಿತಿ, ಸಾಮಾಜಿಕ ಮತ್ತು ಐತಿಹಾಸಿಕ ವಿಕಸನಗಳನ್ನು ಆಧರಿಸಿ ಜನರ ಮನವೊಲಿಸುವಂತಹ ವಿವರಣೆ ನೀಡಿದರು. ಸ್ವರ್ಗದಿಂದ ಇಳಿದುಬಂದ ವಿಸ್ಮಯಕಾರಿ ಮೋಹಿನಿಯ ನೃತ್ಯಕ್ಕಿಂತಲೂ ಹೆಚ್ಚಾಗಿ, ಒಬ್ಬ ಸುಂದರಿಯ ಲಲಿತ ನೃತ್ಯ ಎಂದು ವ್ಯಾಖ್ಯಾನಿಸಿದರು.

ಮೋಹಿನಿಯಾಟ್ಟಂಗೆ ಧರಿಸಬೇಕಾದ ಉಡುಪಿನಲ್ಲಿ, ಅಂಚಿನಲ್ಲಿ ತಿಳಿ ಚಿನ್ನದ ಕಸೂತಿ (ಕಸವು) ಹಾಕಿರುವ ಬಿಳಿಯ ಸೀರೆಯೂ ಸೇರಿದೆ. ಮುದ್ರಾಗಳ (ಕೈ, ಹಸ್ತ ಮತ್ತು ಬೆರಳುಗಳಿಂದ ಸೂಚಿಸುವ ಹಾವಭಾವಗಳು) ವಿಸ್ತೃತ ವಿವರಣಗಳನ್ನು ಹೊಂದಿರುವ 'ಹಸ್ತ ಲಕ್ಷಣದೀಪಿಕಾ'ದ ಶಾಸ್ತ್ರೀಯ ಪಠ್ಯಗಳನ್ನು ಈ ಮೋಹಿನಿಯಾಟ್ಟಂ ನೃತ್ಯವು ಅನುಸರಿಸುತ್ತದೆ.

ಮೋಹಿನಿಯಾಟ್ಟಂನ ಹಾಡುಗಾರಿಕೆಯ ಸಂಗೀತವು ಲಯಬದ್ಧ ರಚನೆಗಳಲ್ಲಿ ವಿಭಿನ್ನತೆ (ಚೊಲ್ಲು )ಗಳನ್ನು ಒಳಗೊಂಡಿದೆ. ಈ ನೃತ್ಯದ ಗೀತೆಗಳು ಮಣಿಪ್ರವಾಳಂ ಭಾಷೆಯಲ್ಲಿವೆ (ಸಂಸ್ಕೃತ ಮತ್ತು ಮಲಯಾಳಂ ಭಾಷೆಗಳ ಮಿಶ್ರಣ). ಗೀತೆಗಳನ್ನು ಹಿನ್ನೆಲೆಯಲ್ಲಿ ಹಾಡುತ್ತಿರುವಾಗಲೇ, ಮೋಹಿನಿಯಾಟ್ಟಂ ನೃತ್ಯ ಪ್ರದರ್ಶಿಸುತ್ತಿರುವ ನೃತ್ಯಕಲಾವಿದೆಯು ಸುಲಲಿತ ಮುದ್ರಗಳು ಮತ್ತು ಹೆಜ್ಜೆಗಳೊಂದಿಗೆ ನೃತ್ಯ ಮಾಡುವರು. ನೃತ್ಯ ಕಲಾವಿದೆಯು ಅತಿಯಾಗಿ ಮೋಹಗೊಳಿಸದೆ, ಸೌಮ್ಯ ಹಾಗೂ ಅಪ್ಯಾಯಮಾನ ರೀತಿಯಲ್ಲಿ ತಮ್ಮ ಕಣ್ಣುಗಳ ಮೂಲಕ ನೃತ್ಯದ ಹಾವಭಾವಗಳನ್ನು ಪ್ರದರ್ಶಿಸುವರು.

ಇವನ್ನೂ ನೋಡಿ

ಬದಲಾಯಿಸಿ
  • ಅನುರಾಗ್‌ ಪಾಗ್ಲೂ ದೇಬ್‌ - ಅಂತರರಾಷ್ಟ್ರೀಯ ಖ್ಯಾತಿಯ ನೃತ್ಯ ಕಲಾವಿದ, ತಮ್ಮ ಪಾಗಲೂ ಶೈಲಿಯ ಮೋಹಿಯಾಟಂ ಒಂದಿಗೆ.
  • ಕಥಕ್ಕಳಿ
  • ಕೂಡಿಯಾಟಂ
  • ಕಲಾಮಂಡಲಂ ಕಲ್ಯಾಣಿಕುಟ್ಟಿ ಅಮ್ಮ
  • ಮಾಣಿ ಮಾಧವ ಚಾಕ್ಯಾರ್‌
  • ನಾಟ್ಯಕಲ್ಪದ್ರುಮಂ
  • ಥುಳಳ್‌
  • ಪಂಚವಾದ್ಯಂ
  • ಕೇರಳ ಕಲಾಮಂಡಲಂ
  • ಕನನ್‌ ರೇಲೆ - ನೃತ್ಯಕಲಾವಿದ
  • ಸುನಂದಾ ನಾಯರ್ - ನೃತ್ಯ ಕಲಾವಿದೆ
  • ಕಲಾಮಂಡಲಂ ಲೀಲಮ್ಮ - ನೃತ್ಯ ಕಲಾವಿದೆ
  • ಸ್ಮಿತಾ ರಾಜನ್‌ - ನೃತ್ಯ ಕಲಾವಿದೆ
  • ದೇವಾಶೀಷ್‌ ಪ್ರಧಾನ್‌ (ಬೋಟು ಮಹಾರಾಜ್‌)- ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾ ಮೂಲದ ನೃತ್ಯ ಕಲಾವಿದ http://www.botumaharaj.co.in[ಶಾಶ್ವತವಾಗಿ ಮಡಿದ ಕೊಂಡಿ]

ಹೊರಗಿನ ಕೊಂಡಿಗಳು

ಬದಲಾಯಿಸಿ