ಮರಾಠಿ ಸಾಹಿತ್ಯ

ಮರಾಠಿ ಭಾಷೆಯ ಸಾಹಿತ್ಯ


ಮರಾಠಿ ಸಾಹಿತ್ಯ ಸಾಕಷ್ಟು ಶ್ರೀಮಂತವಾಗಿದೆ.

ಧ್ಯಾನೇಶ್ವರನ ಕಲ್ಪಿತ ವರ್ಣಚಿತ್ರ

ಪ್ರಾರಂಭದ ಮರಾಠಿ ಸಾಹಿತ್ಯ (ಕ್ರಿ.ಶ. 1800ರ ಪೂರ್ವದಲ್ಲಿ)

ಬದಲಾಯಿಸಿ

ಮಹಾನುಭಾವ ಮತ್ತು ವಾರಕರಿಪಂಥದ ಸಂತರುಗಳು ಬರೆದ ಧಾರ್ಮಿಕ ಬರವಣಿಗೆಗಳಿಂದ ಮರಾಠಿ ಸಾಹಿತ್ಯ ಪ್ರಾರಂಭವಾಯಿತು ಎನ್ನಬಹುದು. ಮಹಾನುಭಾವ ಪಂಥೀಯ ಸಂತರು ಗದ್ಯವನ್ನು ತಮ್ಮ ಮಾಧ್ಯಮವನ್ನಾಗಿ ಉಪಯೋಗಿಸಿದರೆ, ವಾರಕರಿಗಳು ಪದ್ಯವನ್ನು ಆಯ್ದುಕೊಂಡರು. ವಿವೇಕಸಿಂಧು ಗ್ರಂಥವನ್ನು ಬರೆದ ಮುಕುಂದರಾಜ , ಮುಂದೆ ಜ್ಞಾನೇಶ್ವರಿ ಎಂದೇ ಪ್ರಖ್ಯಾತವಾದ , ಭಾವಾರ್ಥ ದೀಪಿಕಾ ( 9000 ದ್ವಿಪದಿಗಳಲ್ಲಿ ರಚಿತವಾದ ಭಗವದ್ಗೀತೆಯ ಭಾಷ್ಯ) ಎಂಬ ಗ್ರಂಥವನ್ನು ಬರೆದ ಜ್ಞಾನೇಶ್ವರ (1275-1296) ಮತ್ತು ನಾಮದೇವ, ಪ್ರಾರಂಭದ ಸಾಹಿತ್ಯಿಕರಲ್ಲಿ ಕೆಲವರು. ವಾರಕರಿ ಪಂಥದ ಸಂತ ಏಕನಾಥ (1528-1599) ಇವರ ನಂತರದವನು. ಮುಕ್ತೇಶ್ವರನು ಮಹಾಭಾರತವನ್ನು ಮರಾಠಿಗೆ ಭಾಷಾಂತರಿಸಿದ. ಸಂತ ತುಕಾರಾಮನೇ ಮೊದಲಾದ ಸಮಾಜ ಸುಧಾರಕರು ತಮ್ಮ ರಚನೆಗಳಿಂದ ಮರಾಠಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ರಾಮದಾಸರ (1608-1681) ದಾಸಬೋಧೆ ಮತ್ತು ಮನಾಚೆ ಶ್ಲೋಕ ಇವು ಈ ಪರಂಪರೆಯ ಪ್ರಸಿಧ್ದ ಕೃತಿಗಳು.

18ನೆಯ ಶತಮಾನದಲ್ಲಿ ಯಥಾರ್ಥದೀಪಿಕಾ ( ವಾಮನ ಪಂಡಿತ), ನಳದಮಯಂತಿ ಸ್ವಯಂವರ (ರಘುನಾಥ ಪಂಡಿತ), ಪಾಂಡವ ಪ್ರತಾಪ, ಹರಿ ವಿಜಯ, ರಾಮವಿಜಯ ( ಶ್ರೀಧರ ಪಂಡಿತ) ಮತ್ತು ಮಹಾಭಾರತ (ಮೋರೋಪಂತ) ಮೊದಲಾದ ಪ್ರಸಿಧ್ದ ಕೃತಿಗಳು ರಚನೆಯಾದವು.

ಆಧುನಿಕ ಕಾಲ ( 1800ರ ನಂತರದ ಕಾಲ)

ಬದಲಾಯಿಸಿ

ಮಹಾರಾಷ್ಟ್ರದಲ್ಲಿ ಹತ್ತೊಂಭತ್ತನೆಯ ಶತಮಾನದ ಕೊನೆ ವಸಾಹತುಶಾಹಿ ಆಧುನಿಕತೆಯ ಕಾಲವಾಗಿತ್ತು . ಆ ಕಾಲದ ಇತರ ಭಾರತೀಯ ಭಾಷಾ ಸಾಹಿತ್ಯದಂತೆ, ಮರಾಠಿ ಸಾಹಿತ್ಯದಲ್ಲಿಯೂ ಇಂಗ್ಲೀಷ್ ಓದಿದ ಬುದ್ಧಿಜೀವಿಗಳ ಪ್ರಾಧಾನ್ಯವಿತ್ತು. It was the age of prose and reason. It was the period of reformist diadicticism and a great intellectual ferment.

1817ರಲ್ಲಿ ಮೊಟ್ಟ ಮೊದಲ ಇಂಗ್ಲೀಷಿನಿಂದ ಮರಾಠಿ ಭಾಷಾಂತರಿತ ಪುಸ್ತಕ ಹೊರಬಂದಿತು. ಮೊಟ್ಟ ಮೊದಲ ಮರಾಠಿ ವೃತ್ತಪತ್ರಿಕೆ ಹೊರಟದ್ದು 1835ರಲ್ಲಿ.ಸಾಮಾಜಿಕ ಸುಧಾರಣೆಯಯ ವಿಷಯವುಳ್ಳ ಪುಸ್ತಕಗಳನ್ನು ಬರೆದ ಮಹನೀಯರೆಂದರೆ, ಬಾಬಾ ಪದಂಜೀ (ಯಮುನಾ ಪರ್ಯಟನ - 1857) , ಮಹಾತ್ಮಾ ಜ್ಯೋತಿಬಾ ಫುಲೆ, ಲೋಕಹಿತವಾದಿ, ಜಸ್ಟೀಸ್ ಮಹದೇವ ಗೋವಿಂದ ರಾನಡೆ, ಹರಿ ನಾರಾಯಣ ಆಪ್ಟೆ (1864-1919) ಇತ್ಯಾದಿ.

ಲೋಕಮಾನ್ಯ ತಿಲಕರು 1880ರಲ್ಲಿ ಪ್ರಾರಂಭಿಸಿದ ಕೇಸರಿ ಪತ್ರಿಕೆಯು ಸಾಹಿತ್ಯಿಕ ಚರ್ಚೆಗೆ ಸೂಕ್ತ ಅಂಕಣವನ್ನು ಒದಗಿಸಿತು. ಮರಾಠಿ ರಂಗಭೂಮಿ ಕೂಡಾ ಈ ಕಾಲದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿತ್ತು. ಸಂಗೀತ ನಾಟಕ ವೆಂಬ ಸಂಗೀತ ಪ್ರಧಾನ ನಾಟಕಗಳ ಪ್ರಕಾರವೂ ಪ್ರಾರಂಭವಾಯಿತು. ಈ ಪ್ರಕಾರದಲ್ಲಿ ಮೊದಲ ನಾಟಕ ವಿ.ಎ.ಭಾವೆ 1841ರಲ್ಲಿ ಬರೆದ ಸೀತಾ ಸ್ವಯಂವರ. ನಂತರ ಕಿರ್ಲೋಸ್ಕರ್ (1843-85) ಮತ್ತು ಜಿ.ಬಿ.ದೇವಳ್ (1854-19l6) ಈ ನಾಟಕಗಳಲ್ಲಿ ಶೃಂಗಾರ ಮತ್ತು ಸಾಮಾಜಿಕ ವಸ್ತುಗಳನ್ನು ಪರಿಚಯಿಸಿದರು. ರಾಜಕೀಯ ವಸ್ತುವುಳ್ಳ ನಾಟಕಗಳ ಸರಣಿ ಪ್ರಾರಂಭವಾದದ್ದು ಕೃಷ್ಣಾಜಿ ಪ್ರಭಾಕರ ಖಾಡಿಲ್ಕರ್ (1872~1948) ಬರೆದ ( ಮುಂದೆ ಈ ನಾಟಕವನ್ನು ನಿಷೇಧಿಸಲಾಯಿತು) ಕೀಚಕವಧ (1910) ನಾಟಕದಿಂದ. ಮುಂದೆ ಈ ಪ್ರಕಾರವನ್ನು ಸಮರ್ಥವಾಗಿ ಮುಂದುವರಿಸಿದವರು ರಾಮ ಗಣೇಶ ಗಡ್ಕರಿ ಮತ್ತು ಪ್ರಹ್ಲಾದ ಕೇಶವ ಆತ್ರೆ. 1960 ಮತ್ತು 70ರ ದಶಕಗಳಲ್ಲಿ ಮರಾಠೀ ರಂಗಭೂಮಿ ಅಮೋಘವಾಗಿ ಬೇಳೆಯಿತು. ಮೋಹನ ಆಗಾಶೆ, ಶ್ರೀರಾಮ ಲಾಗೂ, ಕಾಶೀನಾಥ ಘಾಣೇಕರ್, ಪ್ರಭಾಕರ ಫಣಶೀಕರ್ ರಂತಹ ಯಾವುದೇ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಪ್ರತಿಭಾವಂತ ನಟಸಮೂಹ ಸಾಹಿತ್ಯ ದಿಗ್ಗಜಗಳಾದ ವಸಂತ ಕಾನೇಟ್ಕರ್, ಕುಸುಮಾಗ್ರಜ, ವಿಜಯ್ ತೆಂಡೂಲ್ಕರ್ ಇತ್ಯಾದಿ ವಿರಚಿತ ನಾಟಕಗಳಲ್ಲಿನ ಅಮರ ಪಾತ್ರಗಳಿಗೆ ಜೀವದುಂಬಿದರು.

ಮರಾಠಿ ರಂಗಭೂಮಿಯೊಂದಿಗೇ ಮರಾಠಿ ಚಿತ್ರೋದ್ಯಮವೂ ಬೆಳೆದರೂ, ಚಿತ್ರೋದ್ಯಮಕ್ಕೆ ಸತತ ಯಶಸ್ಸು ದೊರಕಲಿಲ್ಲ. ಭಾರತಲ್ಲಿಯೇ ಮೊಟ್ಟಮೊದಲ ವಾಕಿ ಚಿತ್ರ ತಯಾರಿಸಿದ ದಾದಾಸಾಹೇಬ್ ಫಾಳಕೆ , ಖ್ಯಾತ ನಿರ್ದೇಶಕ ವಿ.ಶಾಂತಾರಾಮ್ ಮೊದಲಾದವರಿಂದ ಮರಾಠಿ ಚಿತ್ಯೋದ್ಯಮ ಸಮಕಾಲೀನ ಹಿಂದಿ ಚಿತ್ರರಂಗಕ್ಕೆ ಗಣನೀಯ ಕೊಡುಗೆ ನೀಡಿತು. ನಿರ್ದೇಶಕ ರಾಜಾ ಪರಾಂಜಪೆ, ಸಂಗೀತ ನಿರ್ದೇಶಕ ಸುಧೀರ್ ಫಡ್ಕೆ, ಸಂಗೀತ ರಚನಕಾರ ಜಿ. ಮಾಡಗೂಳಕರ್ , ನಟ ರಾಜಾ ಗೋಸಾವಿ ಮೊದಲಾದವರು ಒಂದುಗೂಡಿ ಅನೇಕ ಗಮನಾರ್ಹ ಮರಾಠಿ ಚಿತ್ರಗಳನ್ನು ತೆರೆಗಿತ್ತರು. ಅಂದಿನ ಮರಾಠಿ ಆಡುಭಾಷೆಯು ನಾಟಕ, ಸಿನಿಮಾ ಅಷ್ಟಲ್ಲದೇ ಮರಾಠಿ ಸಾಹಿತ್ಯದಿಂದಲೂ ಪ್ರಭಾವಿತವಾಗಿತ್ತು.

ಆಧುನಿಕ ಮರಾಠಿ ಕಾವ್ಯ ಮಹಾತ್ಮಾ ಜ್ಯೋತಿಬಾ ಫುಲೆಯ ಕೃತಿಗಳಿಂದ ಮೊದಲಾಯಿತು. ನಂತರದ ಕವಿಗಳಾದ ಕೇಶವಸುತ, ಬಾಲಕವಿ, ಗೋವಿಂದಾಗ್ರಜ,ಮತ್ತು ರವಿ ಕಿರಣ ಂಂಡಲದ ಕವಿಗಳಾದ ಮಾಧವ ಜೂಲಿಯನ್ ಇತ್ಯಾದಿಗಳು ಸೃಷ್ಟಿಸಿದ ಕಾವ್ಯದಲ್ಲಿ ರಮ್ಯ ಮತ್ತು ವಿಕ್ಟೋರಿಯನ್ ಇಂಗ್ಲೀಷ್ ಕಾವ್ಯದ ಪ್ರಭಾವವಿತ್ತು. ಭಾವತೀವ್ರತೆ ಮತ್ತು ಗೇಯ ಗುಣ ಇವುಗಳ ಪ್ರಧಾನ ಆಂಶವಾಗಿತ್ತು. ಖ್ಯಾತ ವಿಡಂಬನ ಸಾಹಿತಿ ಮತ್ತು ರಾಜಕಾರಣಿ ಪಿ.ಕೆ.ಆತ್ರೆ ಝೆಂಡೂಚೆ ಫುಲೆ ಎಂಬ ಪ್ರಹಸನ ಸಂಕಲನದಲ್ಲಿ ಈ ಕಾವ್ಯ ಪ್ರಕಾರದ ಲೇವಡಿ ಮಾಡಿದರು. ಸಾನೆ ಗುರೂಜಿ (1899-1950) ಮರಾಠಿ ಮಕ್ಕಳ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದರು. ಶ್ಯಾಮಚೀ ಆಯಿ (ಶ್ಯಾಮನ ತಾಯಿ), ಆಸ್ತಿಕ್, ಗೋಡೆ ಶೇವಟ್ ( ಸುಖಾಂತ)ಅವರ ಮುಖ್ಯ ಕೃತಿಗಳು .ಅನೇಕ ಪಾಶ್ಚಿಮಾತ್ಯ ಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ಮರಾಠಿಯಲ್ಲಿ ಸರಳ ರೀತಿಯಲ್ಲಿ ಭಾಷಾಂತರಿಸಿ ಗೋಡೆ ಗೋಷ್ಟಿ (ಮಧುರ ಕಥೆಗಳು) ಎಂಬ ಹೆಸರಿನಲ್ಲಿ ಪ್ರಕಟಿಸಿದರು. ವಿಷ್ಣು ಸಖಾರಾಮ ಖಾಂಡೇಕರ್ (1889-1976) ಬರೆದ ಯಯಾತಿ ಕೃತಿ 1975ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಗಳಿಸಿತು. ಕಾದಂಬರಿ, ಸಣ್ಣ ಕಥೆ , ಪ್ರಬಂಧ ಇತ್ಯಾದಿ ಕ್ಷೇತ್ರಗಳಲ್ಲಿ ಕೈಯಾಡಿಸಿದ ಇವರ ಮುಖ್ಯ ಕೃತಿಗಳೆಂದರೆ ದೋನ ಧ್ರುವ ( ಎರಡು ಧ್ರುವಗಳು) , ಉಲ್ಕಾ, ಕ್ರೌಂಚವಧಾ, ಜಳಲೇಲಾ ಮೊಹರ್ ( ಸುಟ್ಟುಹೋದ ಮೊಹರು) ಮತ್ತು ಅಮೃತವೇಲ್ ( ಅಮೃತ ಬಳ್ಳಿ)

ನಲವತ್ತರ ದಶಕದಲ್ಲಿ ಬಿ.ಎಸ್.ಮರ್ಧೇಕರರ ನವ್ಯಕಾವ್ಯದೊಂದಿಗೆ ಮರಾಠಿ ಸಾಹಿತ್ಯ ಹೊಸ ದಾರಿಯಲ್ಲಿ ಪ್ರವೇಶಿಸಿತು. ಐವತ್ತರ ದಶಕದಲ್ಲಿ'little magazine movement' ವೇಗದಿಂದ ಬೆಳೆಯತೊಡಗಿತು. ಈ ಚಳುವಳಿಯಲ್ಲಿ ಸಂಪ್ರದಾಯವಿರೋಧಿ, ಕ್ರಾಂತಿಕಾರಿ, ಪ್ರಾಯೋಗಿಕ ಕೃತಿಗಳನ್ನು ಪ್ರಕಾಶಿಸಲಾಯಿತು. ಇದು ದಲಿತ ಸಾಹಿತ್ಯದ ಬೆಳವಣಿಗೆಗೂ ಕುಮ್ಮಕ್ಕು ಕೊಟ್ಟಿತು. ಡಾ. ಬಾಬಾಸಾಹೇಬ ಅಂಬೇಡ್ಕರರ ಬೋಧನೆಗಳಿಮಧ ಪ್ರಭಾವಿತವಾಗಿದ್ದ ದಲಿತ ಸಾಹಿತ್ಯ , ಮಧ್ಮಮವರ್ಗೀಯ, ಉಚ್ಚಜಾತೀಯ ಮತ್ತು ನಗರಕೇಂದ್ರಿತವಾಗಿದ್ದ ಪ್ರಸಕ್ತ ಮರಾಠಿ ಸಾಹಿತ್ಯ ವ್ಯವಸ್ಥೆಗೆ ಸವಾಲೆಸೆಯಿತು. ಖ್ಯಾತ ಕಾದಂಬರಿಕಾರ, ಕವಿ ಹಾಗೂ ವಿಮರ್ಶಕ ಭಾಲಚಂದ್ರ ನೇಮಾಡೆಯವರಂತಹ ಬರಹಗಾರರನ್ನು little magazine movement ಬೆಳಕಿಗೆ ತಂದಿತು. ಅರುಣ್ ಕೋಲಾಟ್ಕರ್, ದಿಲೀಪ್ ಚಿತ್ರೆ, ನಾಮದೇವ ಢಸಾಳ್, ವಸಂತ ಅಬಾಜಿ ಡಹಾಕೆ, ಮನೋಹರ ಓಕ್ ಇತ್ಯಾದಿ ನವ್ಯ ಪಂಥೀಯರ ಕಾವ್ಯ ಸಂಕೀರ್ಣವಷ್ಟೇ ಅಲ್ಲದೆ , ವಿವರಗಳಿಂದ ಶ್ರೀಮಂತವಾಗಿ , ಓದುಗರನ್ನು ಬಡಿದೆಬ್ಬಿಸುವಂಥಹವುಗಳಾಗಿದ್ದವು. ಭಾವು ಪಾಧ್ಯೆ, ವಿಲಾಸ್ ಸಾರಂಗ್ , ಶ್ಯಾಮ್ ಮನೋಹರ್ ಮತ್ತು ವಿಶ್ರಾಮ್ ಬೇಡೇಕರ್ ಕೆಲು ಹೆಸರಾಂತ ಕಥೆಗಾರರು.

1990ರ ದಶಕದಲ್ಲಿ ಅಭಿಧನಂತರ ಎಂಬ ನವ್ಯ ಕಾವ್ಯ ಪ್ರಕಾರದೊಂದಿಗೆ ಮರಾಠಿ ಸಾಹಿತ್ಯ ಮತ್ತೊಂದು ಮಜಲನ್ನು ಮೆಟ್ಟಿತು. ಅದರ ನಂತರ ಭರದಿಂದ ಬೆಳೆಯತೊಡಗಿದ ಈ "ಕಿರು ಪತ್ರಿಕಾ ಚಳುವಳಿ" ಯ ಹರಿಕಾರರಾದ ಮನ್ಯಾಜೋಶಿ, ಹೇಮಂತ ದಿವಾಟೆ, ಸಚಿನ್ ಕೇಟ್ಕರ್, ಮಂಗೇಶ್ ಕಾಳೆ, ಸಲಿಲ್ ವಾಘ್ ನಿತಿನ್ ಕುಲಕರ್ಣಿ, ವಜ್ರೇಶ್ ಸೋಲಂಕಿ ಮೊದಲಾದವರು ನವ್ಯೋತ್ತರ ಜೀವನದ ಹೊಸ ಆಯಾಮಗಳನ್ನು ತೆರೆದಿಟ್ಟರು. ಅಭಿಧನಂತರ ಪ್ರಕಾಶನ ಹೊರತಂದ ಕವಿತಾ ಸಂಗ್ರಹಗಳು ಮತ್ತು ಅಭಿಧನಂತರ ನಿಯತಕಾಲಿಕೆಯ ಪ್ರತಿಗಳು ಮರಾಠಿ ಸಾಹಿತ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿವೆ.[][]

ಮರಾಠಿ ಸಾಹಿತ್ಯದಲ್ಲಿ ಇಲ್ಲಿಯವರೆಗೆ ನಾಲ್ಕು ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಗಳಿಸಿದ್ದಾರೆ. ಅವರೆಂದರೆ

ಉಲ್ಲೇಖ

ಬದಲಾಯಿಸಿ