ವಾರಕರಿ ಪಂಥ

ವರ್ಕರಿ ಎಂಬುದು ಹಿಂದೂ ಧರ್ಮರದ ಭಕ್ತಿ ಆಧ್ಯಾತ್ಮಿಕ ಸಂಪ್ರದಾಯದೊಳಗೆ ಸಂಪ್ರದಾಯವಾಗಿದ್ದು,ಭೌಗೋಳಿಕವಾಗಿ ಭಾರತ
(ವಾರಕರಿ ಇಂದ ಪುನರ್ನಿರ್ದೇಶಿತ)

ವಾರಕರಿ ಪಂಥ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಪ್ರಚಲಿತವಿರುವ ಭಕ್ತಿಮಾರ್ಗದ ಒಂದು ಶಾಖೆ. ಮರಾಠಿಯಲ್ಲಿ ವಾರಕರಿ ಎಂದರೆ ಮತ್ತೆಮತ್ತೆ ಯಾತ್ರೆಮಾಡುವವರು ಎಂದು. ಈ ಸಂಪ್ರದಾಯದ ಅನುಯಾಯಿಗಳು ಪ್ರತಿ ವರ್ಷಕ್ಕೆ ಎರಡು ಬಾರಿ,ಆಷಾಢ ಮತ್ತು ಕಾರ್ತೀಕ ಮಾಸಗಳ ಶುಕ್ಲ ಪಕ್ಷದ ಏಕಾದಶಿಯಂದು, ನೂರಾರು ಮೈಲಿ ನಡೆದುಕೊಂಡು ಪಂಢರಪುರಕ್ಕೆ ಯಾತ್ರೆ ಹೋಗುವುದರಿಂದ ಈ ಹೆಸರು ಬಂದಿದೆ. ಈ ಯಾತ್ರೆಗೆ ಮರಾಠಿಯಲ್ಲಿ ವಾರಿ ಎಂದು ಕರೆಯುತ್ತಾರೆ. ಭಕ್ತಿ ಮಾರ್ಗದಲ್ಲಿ ಯಾರು ಯಾತ್ರೆಮಾಡುತ್ತಾರೋ ಅವರು ವಾರಕರಿಗಳು. ವಾರಕರಿಗಳ ಆರಾಧ್ಯದೈವ ಪಂಢರಪುರದ ವಿಠ್ಠಲ ಅಥವಾ ವಿಠೋಬಾ. ಇವನು ಶ್ರೀಕೃಷ್ಣನ ಇನ್ನೊಂದು ರೂಪ. ಮಹಾರಾಷ್ಟ್ರದ ಸಂತರುಗಳಾದ ಜ್ಞಾನೇಶ್ವರ, ನಾಮದೇವ, ತುಕಾರಾಮ, ಚೋಖಾ ಮೇಲಾ, ಏಕನಾಥ ಮೊದಲಾದವರು ತಮ್ಮ ಪ್ರವಚನಗಳ ಮೂಲಕ ಈ ಸಂಪ್ರದಾಯವನ್ನು ಬಲಪಡಿಸಿದರು.ವಾರಕರಿಗಳು ತಮ್ಮ ತಮ್ಮ ಊರುಗಳಿಂದ ಈ ಸಂತರ ಪಲ್ಲಕ್ಕಿಗಳನ್ನು ಹೊತ್ತು ಪಂಢರಪುರಕ್ಕೆ ನಡೆದೇ ಸಾಗುತ್ತಾರೆ.

ಹಿನ್ನೆಲೆ

ಬದಲಾಯಿಸಿ

ಇತಿಹಾಸಕಾರರ ಪ್ರಕಾರ ಈ ವಾರಕರಿ ಸಂಪ್ರದಾಯ 13ನೆಯ ಶತಮಾನದಲ್ಲಿದ್ದ ಜ್ಞಾನೇಶ್ವರನಿಗಿಂತ ಹಳೆಯದು. ಆದರೆ ಸಂತರ ಮೂಲ ಗ್ರಾಮಗಳಿಂದ ಪಲ್ಲಕ್ಕಿಗಳಲ್ಲಿ ಅವರ ಪಾದುಕೆಗಳನ್ನು ಒಯ್ಯುವ ಪದ್ಧತಿಯನ್ನು 1685ರಲ್ಲಿ ಪ್ರಾರಂಭಿಸಿದವನು ತುಕಾರಾಮನ ಕಿರಿಯ ಮಗ ನಯನ ಮಹಾರಾಜ. ಮುಂದೆ 1820ರ ದಶಕದಲ್ಲಿ ಹೈಬತ್ ರಾವ್ ಬುವಾ ಮತ್ತು ಸಂತ ತುಕಾರಾಮನ ಪೀಳಿಗೆಯವರು ಈ ಪದ್ಧತಿಯಲ್ಲಿ ಇನ್ನೂ ಬದಲಾವಣೆಗಳನ್ನು ತಂದರು. ಈಗ ಮಹಾರಾಷ್ಟ್ರದ ವಿವಿಧೆಡೆಗಳಿಂದ ಸುಮಾರು ನಲವತ್ತು ಪಲ್ಲಕ್ಕಿಗಳು ಪಂಢರಪುರ ತಲುಪುತ್ತವೆ ಎಂದು ಅಂದಾಜಿದೆ.

ಐತಿಹಾಸಿಕ , ಸಾಮಾಜಿಕ ಮಹತ್ವ

ಬದಲಾಯಿಸಿ

13ನೆಯ ಶತಮಾನದಿಂದ 18ನೆಯ ಶತಮಾನದವರೆಗೆ, ಸುಮಾರು ಆರುನೂರು ವರ್ಷಗಳ ಕಾಲ , ವಾರಕರಿ ಪಂಥವು ಮಹಾರಾಷ್ಟ್ರ ಜನಸಾಮಾನ್ಯರ ಜೀವನದಲ್ಲಿ ಅಗಾಧ ಪರಿಣಾಮ ಬೀರಿತು. ದೇವರೇ ಪರಮ ಸತ್ಯ ಎಂದು ಪ್ರತಿಪಾದಿಸುವ ವಾರಕರಿಗಳು , ಎಲ್ಲಾ ಮಾನವರೂ ಸಮಾನರು ಎಂದೂ ನಂಬುತ್ತಾರೆ. ವೈಯಕ್ತಿಕ ನೆಲೆಯಲ್ಲಿ ತ್ಯಾಗ, ಸರಳತೆ, ಕ್ಷಮೆ, ಇಂದ್ರಿಯಾಸಕ್ತಿಗಳನ್ನು ಗೆಲ್ಲುವುದು, ಶಾಂತಿಯುತ ಸಹಬಾಳ್ವೆ, ಅನುಕಂಪ, ಅಹಿಂಸೆ, ಪ್ರೇಮ, ವಿನಯ ಈ ವಿಷಯಗಳಿಗೆ ಈ ಪಂಥವು ಬಹಳ ಒತ್ತು ಕೊಡುತ್ತದೆ. ವಾರಕರಿಗಳು ಪರಸ್ಪರರನ್ನು "ಬ್ರಹ್ಮ"ನೆಂದೇ ತಿಳಿದು ನಮಸ್ಕರಿಸುವುದು ಇವರ ವಿನಯಶೀಲತೆಗೊಂದು ಉದಾಹರಣೆ. ಮರಾಠಿ ಸಂತರುಗಳು ಈ ಮೌಲ್ಯಗಳಿಂದ ಭಕ್ತಿಪಂಥದ ನೆಲೆಗಟ್ಟನ್ನು ಕಟ್ಟಿದರು. ಕೆಳಜಾತಿಯ ಜನರು ಮತ್ತು ಮಹಿಳೆಯರು ಜೀವನವನ್ನು ನೋಡುವ ದೃಷ್ಟಿಯನ್ನು ಬದಲಾಯಿಸುವ ಪ್ರಯತ್ನವನ್ನು ವಾರಕರಿ ಪಂಥ ಮಾಡಿತು. ಮಾನವನಿಗೆ ಲೌಕಿಕ ಜೀವನ ನಡೆಸುತ್ತಿರುವಾಗಲೂ , ನಿರ್ಲಿಪ್ತತೆ ಇರಬೇಕು ಮತ್ತು ಎಂತಹ ಕಷ್ಟ ಬಂದರೂ ತಾನು ನಂಬಿದ ಸತ್ಯವನ್ನು ಬಿಡದೆ ನಡೆಯಬೇಕು. ಜ್ಞಾನೇಶ್ವರ ಮತ್ತು ತುಕಾರಾಮನಂಥ ಸಂತರುಗಳ ಬರವಣಿಗೆಯಿಂದ ಜನಸಾಮಾನ್ಯರೂ ಇಂತಹ ಚಾರಿತ್ರ್ಯವನ್ನು ಮೈಗೂಡಿಸಿಕೊಳ್ಳಲು ಸಾಧ್ಯವಾಯಿತು.

ವಾರಕರಿ ಪಂಥದ ಸಂತರು ದೈವಸಾಕ್ಷಾತ್ಕಾರಕ್ಕೆ ಸುಲಭದ ದಾರಿಯನ್ನು ತೋರಿಸಿದರು. ಇವರಲ್ಲಿ ಪ್ರತಿಯೊಬ್ಬರೂ ಸರಳಭಾಷೆಯಲ್ಲಿರುವ ಸಣ್ಣಸಣ್ಣ ಗೀತೆಗಳ ಕಿರುಪುಸ್ತಕಗಳನ್ನು ಬರೆದರು. ಜನಗಳ ಬಾಯಲ್ಲಿ ಇದು ಹರಿಪಾಠ ಎಂಬ ಹೆಸರಿನಿಂದ ಜನಪ್ರಿಯವಾಯಿತು. ಪ್ರತಿಯೊಬ್ಬ ಸಂತನೂ ತನ್ನದೇ ಆದ ವಿಶಿಷ್ಟ ಗ್ರಾಮೀಣ, ಮಧುರ ಶೈಲಿಯಲ್ಲಿ ವಿಷ್ಣುನಾಮ ಜಪಿಸಿ , ಮನದಲ್ಲಿ ದೇವರೊಂದಿಗೆ ಐಕ್ಯರಾದಂತೆ ಭಾವಿಸುವ ಪ್ರಕ್ರಿಯೆಯ ಫಲವನ್ನು ಕುರಿತು ಬರೆದಿದ್ದಾನೆ. ಅಂತಹ ಸ್ಥಿತಿಯಲ್ಲಿ , ಮನಸ್ಸು ಎಲ್ಲಾ ಆಸೆಗಳನ್ನೂ , ಕೆಟ್ಟ ಆಲೋಚನೆಗಳನ್ನೂ ಮೆಟ್ಟಿ ನಿಲ್ಲುತ್ತದೆ. ಈ ವಿಚಾರಧಾರೆ ಜನಸಾಮಾನ್ಯರು ಒಂದುಗೂಡಲಿಕ್ಕೆ ಸಹಾಯಮಾಡಿತು.