ರಾಮ ಗಣೇಶ ಗಡ್ಕರಿ

ರಾಮ ಗಣೇಶ ಗಡಕರೀ (1885-1919) ; ಮಹಾರಾಷ್ಟ್ರದ ಮರಾಠಿ ಭಾಷೆಯ ಸುಪ್ರಸಿದ್ಧ ಕವಿ, ನಾಟಕಕಾರ ಮತ್ತು ಹಾಸ್ಯಲೇಖಕ.

ಬದುಕುಸಂಪಾದಿಸಿ

ಗುಜರಾತಿನ ನವಸಾರಿ ಎಂಬಲ್ಲಿ ಹುಟ್ಟಿದ. ಹತ್ತು ವರ್ಷ ತುಂಬುವುದರಲ್ಲಿ ತಂದೆ ಕಾಲವಾದರು. ಅನಂತರದ ವಿಷಮ ಪರಿಸ್ಥಿತಿಯನ್ನೆದುರಿಸಿ 19ನೆಯ ವಯಸ್ಸಿನಲ್ಲಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಕಾಲೇಜು ಸೇರಿದ, ಕಾಲೇಜು ವಿದ್ಯೆ ಹಿಡಿಸಲಿಲ್ಲವಾದ್ದರಿಂದ ಕಿರ್ಲೋಸ್ಕರ್ ನಾಟಕ ಮಂಡಳಿಯಲ್ಲಿ ಚಿಕ್ಕಮಕ್ಕಳ ಶಿಕ್ಷಕನಾಗಿ ಸೇರಿದ. ಅಲ್ಲಿ ಕೊಲ್ಹಟ್ಕರರ ಸ್ನೇಹ ಗಳಿಸಿ ನಾಟಕಮಂಡಳಿಯ ಜೊತೆಗೆ ಊರಿಂದೂರಿಗೆ ಪ್ರವಾಸಮಾಡುತ್ತ ಅನೇಕ ವಿಷಯಗಳ ಬಗ್ಗೆ ಅನುಭವ ಪಡೆದು ಕವನಗಳನ್ನೂ ವಿನೋದಪರ ಲೇಖನಗಳನ್ನೂ ಬರೆದು ಪ್ರಸಿದ್ಧಿ ಹೊಂದಿದ.

ಸಾಹಿತ್ಯಸಂಪಾದಿಸಿ

1911-16 ರ ಐದು ವರ್ಷಗಳ ಅವಧಿಯಲ್ಲಿ ಈತನ ಉತ್ಕøಷ್ಟ ಕವನಗಳು ಬೆಳಕಿಗೆ ಬಂದವು. ಗುಲಾಬಿ ಕೋಡೆ, ರಾಜಹಂಸ, ಮುರಲೀ, ಘುಂಗುರವಾಳಾ ಮುಂತಾದ ಕವನಗಳು ಸರಸವಾಗಿವೆ. ಆಧುನಿಕ ಕವಿ ಕೇಶವಸುತ ಈತನನ್ನು ತುಂಬ ಹೊಗಳಿದ್ದಾನೆ. ಗಡಕರೀ ಕೇಶವಸುತನ ಶಿಷ್ಯನೂ ಆಗಿದ್ದ. ಈತನ ಮರಣಾನಂತರ ಈತನ ಎಲ್ಲ ಕವನಗಳೂ ವಾಗ್ವೈಜಯಂತೀ ಎಂಬ ಸಂಕಲನದಲ್ಲಿ ಪ್ರಕಟವಾಗಿವೆ.

ಸಂಪೂರ್ಣ ಬಾಳಕಾರಾಮ ಎಂಬುದು ಈತನ ವಿನೋದಪರ ಲೇಖನಗಳ ಸಂಗ್ರಹ. ಸಕಾಳಚಾ ಅಭ್ಯಾಸ, ಮೂಕನಾಯಕ, ದೀಡಪಾನೀ ನಾಟಕ ಮುಂತಾದವು ಈತನ ಚಿಕ್ಕ ಪ್ರಹಸನಗಳು.

ಗಡಕರೀ ಹೆಚ್ಚು ಪ್ರಸಿದ್ಧಿ ಹೊಂದಿದ್ದು ನಾಟಕಕಾರನಾಗಿ, ಪ್ರೇಮವಿವಾಹ, ಪುನರ್‍ವಿವಾಹ ಮತ್ತು ವಿಷಮವಿವಾಹಗಳಲ್ಲಿ, ಬರುವ ಸಮಸ್ಯೆಗಳನ್ನುಪಯೋಗಿಸಿಕೊಂಡು ಪ್ರೇಮಸಂನ್ಯಾಸ, ಪತಿವ್ರತೆಯ ಪ್ರಭಾವವನ್ನು ತೋರಿಸುವ ಪುಣ್ಯಪ್ರಭಾವ, ಕುಡಿತದ ದುಷ್ಪರಿಣಾಮವನ್ನು ತೋರಿಸುವ ಏಕಚ ಪ್ಯಾಲ್ಯಾ, ಯಾವುದೇ ಶಿಷ್ಟವಿಷಯ ವನ್ನು ಪ್ರತಿಪಾದಿಸುವ ಭಾವಬಂಧನ-ಇವು ಈತನ ಶ್ರೇಷ್ಠನಾಟಕಗಳು. ರಾಜಸಂನ್ಯಾಸ ಸಂಭಾಜಿಯ ಚರಿತ್ರೆ) ಮತ್ತು ವೇಡ್ಯಾಂಚಾ ಸಂಸಾರ (ಹುಚ್ಚರ ಸಂಸಾರ)-ಇವು ಪೂರ್ಣಗೊಳ್ಳದ ಇತರ ನಾಟಕಗಳು. ನಾಟಕಗಳಿಂದ ಈತ ಮರಾಠೀ ಸಾಹಿತ್ಯದಲ್ಲಿ ಅಮಿತ ಲೋಕಪ್ರಿಯತೆಯನ್ನು ಗಳಿಸಿದ. ತರುಣ ಪೀಳಿಗೆಯನ್ನು ಆಕರ್ಷಿಸುವ ಮೋಹಿನೀವಿದ್ಯೆ ಈತನ ಲೇಖನಗಳಲ್ಲಿದೆ. ಸರಸಪ್ರೇಮಗೀತೆಗಳು, ರಹಸ್ಯಪೊರ್ಣವಾದ ನಾಟ್ಯಕಥಾನಕಗಳು, ಕರುಣ-ಹಾಸ್ಯಗಳ ಪರಮೋತ್ಕರ್ಷವನ್ನು ಸಾಧಿಸುವ, ಹೃದಯವನ್ನು ಕದಡಿಸುವ ನಾಟಕದ ಪ್ರಸಂಗಗಳು, ನಿರರ್ಗಳವಾದ ಅಲಂಕಾರಿಕ ಭಾಷೆ ಇವುಗಳ ಮೂಲಕ ಈತ ತರುಣ ಪೀಳಿಗೆಯ ಕಣ್ಣು ತೆರೆಸಿದ್ದಾನೆ. ಈತ ಯಾವುದೇ ಉಪದೇಶವನ್ನೂ ಆದರ್ಶಗಳನ್ನೂ ಬೋಧಿಸಹೊರಟವನಲ್ಲ. ಉಜ್ವಲ ಕಲ್ಪಕತೆ ಮತ್ತು ಉತ್ಕಟ ಭಾವನೆಗಳನ್ನು ಮೂಡಿಸುವುದರ ಮೂಲಕ ಈತ ಮರಾಠಿ ಸಾಹಿತ್ಯದ ಅತ್ಯಂತ ಲೋಕಪ್ರಿಯ ಬರೆಹಗಾರನಾದ. ಈತನ ಗ್ರಂಥಗಳ ವಿಮರ್ಶನ ಸಾಹಿತ್ಯ ವಿಪುಲವಾಗಿದೆ. ಇಷ್ಟು ಸಾಹಿತ್ಯ ನಿರ್ಮಾಣ ಮರಾಠಿಯಲ್ಲಿ ಬೇರೆ ಯಾವ ಸಾಹಿತಿಯನ್ನು ಕುರಿತೂ ಇಲ್ಲಿಯವರೆಗೆ ಬಂದಿಲ್ಲ. ಇದು ಈತನ ಪ್ರಾಮುಖ್ಯಕ್ಕೆ ಸಾಕ್ಷಿ. *


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: