ಪ್ರಾಣಿಗಳಲ್ಲಿ ಗಂಟಲು ಕಟ್ಟುವಿಕೆ
ಪ್ರಾಣಿಗಳು ಆಹಾರವನ್ನು ಸೇವಿಸುವಾಗ ಆಕಸ್ಮಿಕವಾಗಿ ಅನ್ನನಾಳದಲ್ಲಿ ಆಹಾರಪದಾರ್ಥ ಸಿಕ್ಕಿಹಾಕಿಕೊಳ್ಳುವುದು (esophageal obstruction). ಇದರಿಂದ ಅನ್ನನಾಳದ ಒಳ ಆವರಣ ಮುಚ್ಚಿಹೋಗುತ್ತದೆ. ಸಾಮಾನ್ಯವಾಗಿ ಎಲ್ಲ ಪ್ರಾಣಿಗಳಲ್ಲಿ ಈ ಬವಣೆ ಕಾಣಬರುವುದು. ಕುದುರೆ, ಹಸು, ನಾಯಿ ಮುಂತಾದ ಪ್ರಾಣಿಗಳು ಬಹು ಬೇಗನೆ ಈ ಅಪಾಯಕ್ಕೆ ಒಳಗಾಗುತ್ತವೆ. ಆಹಾರ ಅನ್ನನಾಳದಲ್ಲಿ ನಿಲ್ಲಲು ಅನೇಕ ಕಾರಣಗಳುಂಟು. ಅವು ಪ್ರಾಣಿಗಳ ಆಹಾರ, ಆಹಾರಕ್ರಮ ಮುಂತಾದವುಗಳ ಮೇಲೆ ಅವಲಂಬಿತವಾಗಿವೆ.
ಕುದುರೆ
ಬದಲಾಯಿಸಿಸಾಕುಪ್ರಾಣಿಗಳಲ್ಲೆಲ್ಲ ಕುದುರೆ ಈ ಬೇನೆಗೆ ಬಹಳ ಬೇಗ ಒಳಗಾಗುವುದು. ತನಗೆ ಇಷ್ಟವಾದ ಆಹಾರ ಸಿಕ್ಕಿದಾಗ ಕುದುರೆ ಅದನ್ನು ಗಬಗಬನೆ ತಿನ್ನುವುದು. ಹೀಗೆ ಅವಸರವಾಗಿ ತಿನ್ನುವಾಗ ಆಹಾರದ ತುತ್ತು ಉಂಡೆಯಾಗಿ ಅನ್ನನಾಳದಲ್ಲಿ ಅಡಚಿಕೊಳ್ಳವುದುಂಟು.[೧][೨] ಆಗ ಆಹಾರ ಮುಂದೆ ಹೋಗದಂತೆ ನಿಲ್ಲುತ್ತದೆ. ಇದರಿಂದ ಅನ್ನನಾಳ ಬಂಧಿತವಾಗುವುದು. ಕುದುರೆ ಮರಿಗಳಲ್ಲಿ ಔಷಧಿಯ ದೊಡ್ಡ ಗುಳಿಗೆಗಳನ್ನು ಕೊಟ್ಟಾಗಲೂ ಈ ಪರಿಸ್ಥಿತಿ ಉಂಟಾಗುವುದು. ಒಮ್ಮೊಮ್ಮೆ ಅನ್ನನಾಳದಲ್ಲಿ ಉರಿಯೂತವಿದ್ದು, ಅದರಿಂದ ಅನ್ನನಾಳ ತನ್ನ ಸ್ವಭಾವಿಕ ಕ್ರಿಯೆಯನ್ನು ಮಾಡಲು ಅಸಮರ್ಥವಾಗುವುದು. ಅಂಥ ವೇಳೆಯಲ್ಲಿ ಈ ಗಂಟಲು ಬೇನೆ ಕಾಣಿಸಿಕೊಳ್ಳುವುದುಂಟು. ಗಂಟಲು ಕಟ್ಟಿದಾಗ ಕುದುರೆ ಆಹಾರ ತಿನ್ನುವುದನ್ನು ನಿಲ್ಲಿಸಿ ಕುತೂಹಲ ದೃಷ್ಟಿಯಿಂದ ಕಿವಿಗಳನ್ನು ಹಿಂದಕ್ಕೆ ಮುಂದಕ್ಕೆ ಅಲ್ಲಾಡಿಸುತ್ತ ಇರುವುದು. ನುಂಗಲು ಹವಣಿಸಿ ಅದು ಸಾಧ್ಯವಾಗದೆ ನರಳುವುದು ಜೊಲ್ಲು ವಿಪರೀತವಾಗುವುದು. ಬಾಯಿಯಲ್ಲಿ ಉಳಿದಿರುವ ಅರ್ಧಂಬರ್ಧ ಆಹಾರ ಹಾಗೂ ಜೊಲ್ಲು ಮೂಗಿನ ಮೂಲಕ ಹೊರಬರುವುದು. ಉಸಿರುಕಟ್ಟಿದಂತಾಗಿ ಕೆಮ್ಮುವುದು. ನುಲಿತದ ಇತರ ಲಕ್ಷಣಗಳನ್ನು ತೋರಿಸುವುದು. ಕುದುರೆ ಮರಿಯಲ್ಲಿ ಬಾಯಿಯ ಮೂಲಕ ಕುಡಿದ ಹಾಲು ಮೂಗಿನ ಮೂಲಕ ಹೊರಬರುವುದು. ಕಾಳುಗಳಿಂದ ಹಾಗೂ ಮೆದು ಆಹಾರ ಪದಾರ್ಥದಿಂದ ಅನ್ನನಾಳ ಬಂಧಿತವಾಗಿದ್ದರೆ ಬಾಯಿಯಲ್ಲಿ ಉತ್ಪತ್ತಿಯಾಗುವ ಲಾಲಾರಸದಿಂದ ಮುಂದೆ ಅಡಚಿದ ಆಹಾರವಸ್ತು ಕರಗಿ ಹೋಗುವುದು. ಈ ಅಡಚಣೆ ಕೆಲವು ಗಂಟೆಗಳೊಳಗಾಗಿ ಅಥವಾ ಒಂದೆರಡು ದಿವಸಗಳೊಳಗಾಗಿ ನಿವಾರಣೆಯಾಗುವುದು. ಉಸಿರಾಡುವಾಗ ಆಹಾರವಸ್ತುವಿನ ಕಣಗಳು ಪುಪ್ಪುಸಗಳನ್ನು ಸೇರುವುದರಿಂದ ನ್ಯೂಮೊನಿಯ ಬೇನೆ ಬರಬಹುದು. ಇಷ್ಟೆಲ್ಲ ಆದರೂ ಜೀವಭಯವಿರುವುದಿಲ್ಲ. ಕುದುರೆಗೆ ಹೆಚ್ಚಾಗಿ ನೀರು ಕುಡಿಯಲು ಬಿಡಬೇಕು. ಮುಂದೆ ಆಹಾರ ತಿನ್ನಲು ಬಿಡಬಾರದು. ವೇದನಾ ನಿವಾರಕಗಳನ್ನು ಕೊಡಬಹುದು.
ಹಸು
ಬದಲಾಯಿಸಿಹಸುಗಳಲ್ಲಿ ಸಹ ಕುದುರೆಯಲ್ಲಿ ಆಗುವ ರೀತಿಯಲ್ಲಿ ಗಂಟಲು ಕಟ್ಟುವುದುಂಟು.[೩] ಕುದುರೆಗಳಂತೆಯೇ ಹಸುಗಳು ಕೂಡ ತಮಗೆ ಬೇಕಾದ ಆಹಾರ ಸಿಕ್ಕಿದರೆ ಗಬಗಬನೆ ತಿನ್ನುತ್ತವೆ. ಹೀಗಾಗಿ ಗಂಟಲು ಕಟ್ಟುತ್ತದೆ. ಆಲೂಗಡ್ಡೆ, ಜೋಳದ ದಿಂಡು, ಗೆಡ್ಡೆಗಳು, ಹಲಸು ಹಣ್ಣಿನ ಸೆವಾಲೆ, ಈರುಳ್ಳಿ, ಕೋಸು, ಮಾವಿನ ಓಟೆ, ತಾಟಿನುಂಗಿನ ಕಾಯಿ ಹಾಗೂ ಅಡುಗೆ ಮನೆಯಿಂದ ಹೊರಗೆ ಹಾಕಿದ ತರಕಾರಿ ಚೂರುಗಳು, ಕೆಟ್ಟುಹೋದ ತರಕಾರಿಗಳು, ಬೀದಿಯ ಬದಿಯಲ್ಲಿ ಸಿಗುವ ಇತರ ವಸ್ತುಗಳು ಇತ್ಯಾದಿ ಅನೇಕ ಪದಾರ್ಥಗಳನ್ನು ಹಸುಗಳು ತಿನ್ನುವುದರಿಂದ ಈ ಬೇನೆ ಉಂಟಾಗುವುದು. ಅನ್ನನಾಳಕ್ಕಿಂತ ದೊಡ್ಡದಾದ ಆಹಾರ ವಸ್ತುಗಳು ಬೇನೆ ಬರಲು ಪ್ರಮುಖ ಕಾರಣ. ಗಂಟಲು ಕಟ್ಟಿದ ಸ್ಥಿತಿಯಲ್ಲಿ ಕುದುರೆಯಲ್ಲಿ ಕಾಣಬರುವ ರೋಗಲಕ್ಷಣಗಳೇ ಹಸುವಿನಲ್ಲೆ ಕಾಣಬರುವುದು. ಅಲ್ಲದೇ ಹಸುಗಳಿಗೆ ಹೊಟ್ಟೆ ಊದುತ್ತದೆ. ಚಿಕಿತ್ಸೆಯ ಮೊದಲ ಹಂತವಾಗಿ ಈ ಹೊಟ್ಟೆಯೂತವನ್ನು ಇಳಿಸಬೇಕು. ಅನ್ನನಾಳದಲ್ಲಿ ಸಿಕ್ಕಿಹಾಕಿಕೊಂಡಿರುವ ಆಹಾರವನ್ನು ಹಾಗೆಯೇ ಮೇಲಕ್ಕೆ ಬರುವಂತೆ ನಿಧಾನವಾಗಿ ಮೇಲೆ ನೀವಿ ಅಡಚಿಕೊಂಡಿದ್ದ ಆಹಾರ ಬಾಯಿಗೆ ಬಂದ ಒಡನೆ ಹೊರಗೆ ತೆಗೆಯಬೇಕು. ಗಂಟಲಿನ ಮೂಲಕ ನಿಧಾನವಾಗಿ ಗಂಟಲನಳಿಕೆಯನ್ನು ಒಳಹೊಗಿಸಿ ಅಡಚಿರುವ ಆಹಾರವನ್ನು ನೂಕಬೇಕು. ಇದರಿಂದ ಕಟ್ಟಿಕೊಂಡಿದ್ದ ಅನ್ನನಾಳ ಸರಿಹೋಗುವುದು.
ಇತರ ಪ್ರಾಣಿಗಳಲ್ಲಿ
ಬದಲಾಯಿಸಿಇತರ ಪ್ರಾಣಿಗಳಲ್ಲಿಯೂ ಸಹ ಇದೇ ರೀತಿಯ ಬೇನೆ ಕಂಡುಬರುವುದು. ನಾಯಿಗಳಲ್ಲಿ ಮೂಳೆ ತಿನ್ನುವುದರಿಂದ, ರಬ್ಬರ್‌ಚಂಡನ್ನು ನುಂಗುವುದರಿಂದ ಹಾಗೂ ಇತರ ಪದಾರ್ಥಗಳಿಂದ ಗಂಟಲು ಕಟ್ಟುವಿಕೆ ತೋರಿಬರುವುದು.
ಉಲ್ಲೇಖಗಳು
ಬದಲಾಯಿಸಿ- ↑ ""Should You Feed Beet Pulp?" Equus magazine, accessed via equisearch.com June 28, 2010". Archived from the original on May 15, 2009. Retrieved June 28, 2010.
- ↑ Warren, Lori K. "Horse Feeding Myths and Misconceptions Archived January 25, 2010, ವೇಬ್ಯಾಕ್ ಮೆಷಿನ್ ನಲ್ಲಿ." Horse Industry Section, Alberta Agriculture, Food and Rural Development. Web site accessed June 28, 2010
- ↑ https://www.veterinaryhandbook.com.au/Diseases.aspx?diseasenameid=193