[[]]

ಜೋಳ
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
ಸೋರ್ಗಮ್

Species

About 30 species, see text

ಜೋಳವು ಸೋರ್ಗಮ್ ವರ್ಗದಲ್ಲಿನ ಹುಲ್ಲುಗಳ ಜಾತಿಯ ಬೇಸಾಯ ಮತ್ತು ವಾಣಿ ಸಸ್ಯಗಳನ್ನು ಧಾನ್ಯ, ನಾರು ಮತ್ತು ಮೇವಿಗಾಗಿ ಬಳಸಲಾಗುತ್ತದೆ. ಸಸ್ಯಗಳನ್ನು ವಿಶ್ವಾದ್ಯಂತ ಹೆಚ್ಚು ಉಷ್ಣ ವಾಯುಗುಣವಿರುವಲ್ಲಿ ಬೆಳೆಸಲಾಗುತ್ತದೆ. ವಾಣಿಜ್ಯ ಸಾರ್ಗಮ್ ಜಾತಿಗಳು ಉಷ್ಣವಲಯದ ಮತ್ತು ಉಪಉಷ್ಣವಲಯದ ಪ್ರದೇಶಗಳಾದ ಆಫ್ರಿಕಾ, ಏಷ್ಯಾಗಳ ಸ್ಥಳೀಯ ಸಸ್ಯಗಳಾಗಿವೆ, ಒಂದು ಜಾತಿಯು ಮೆಕ್ಸಿಕೋದ ದೇಶೀಯ ಬೆಳೆಯಾಗಿದೆ.

ಜೋಳವು ಹಲವು ಆಫ್ರಿಕಾ, ಏಷ್ಯಾದ ದೇಶಗಳ ಆಹಾರ ಧಾನ್ಯವಾಗಿದೆ. ಜೋಳದ ೨೫ ಜೀವಸಂಕುಲಗಳಲ್ಲಿ ೧೭ ಜೀವಸಂಕುಲಗಳು ಆಸ್ಟ್ರೇಲಿಯಕ್ಕೆ ಸ್ಥಳೀಯವಾಗಿವೆ. ಇದಲ್ಲದೆ ಇವುಗಳಲ್ಲಿ ಕೆಲವರ ವ್ಯಾಪ್ತಿಯು ಆಫ್ರಿಕಾ, ಏಶಿಯಾ, ಮಧ್ಯಅಮೆರಿಕ ಮತ್ತು ಕೆಲವೊಂದು ಹಿಂದೂ ಹಾಗೂ ಶಾಂತಿ ಮಹಾಸಾಗರದ ದ್ವೀಪಗಳಿಗೆ ಹರಡಿದೆ[] ಸಾಮಾನ್ಯವಾಗಿ ಸಾಗುವಳಿ ಮಾಡುವ ಜೋಳವು ಸೋರ್ಗಮ್ ಬೈಕಾಲರ ಜೀವಸಂಕುಲಕ್ಕೆ ಸೇರಿದೆ.

ಜೋಳ ಪದವನ್ನು ಕನ್ನಡದಲ್ಲಿ ಜೋಳದ ಸಸ್ಯ ಹಾಗೂ ಕಾಳಿಗೂ (ಧಾನ್ಯ) ಬಳಸಲಾಗುತ್ತದೆ. ಇಂಗ್ಲೀಶ್ ಸಂವಾದಿ ಪದಗಳು ಜೋವರ್ ಅಥವಾ ಸೋರ್ಗಮ್. ಇದು ಭಾರತದ ಪ್ರಮುಖ ಕಿರುಧಾನ್ಯಗಳಲ್ಲಿ (ಮಿಲೆಟ್ ಅಥವಾ ಸಿರಿಧಾನ್ಯ) ಒಂದು. ಜಾಗತಿಕ ಧಾನ್ಯ ಉತ್ಪಾದನೆಯಲ್ಲಿ ಅದು ಐದನೆಯ ಸ್ಥಾನದಲ್ಲಿದೆ []. ಭಾರತದಲ್ಲಿ ಬೆಳೆಯುವ ಧಾನ್ಯಗಳಲ್ಲಿ ಅದರ ಸ್ಥಾನ ಐದನೆಯದು (ಮೆಕ್ಕೆಜೋಳ ಮತ್ತು ಸಜ್ಜೆಯ ನಂತರದ ಸ್ಥಾನ). []. ಭಾರತದ ಜೋಳ ಉತ್ಪಾದನೆಯಲ್ಲಿ ಕರ್ನಾಟಕದ ಸ್ಥಾನ ಮಹಾರಾಷ್ಟ್ರ ನಂತರ ಎರಡನೆಯದು[]. ಅಮೆರಿಕ ಸಂಯುಕ್ತ ಸಂಸ್ಥಾನಗಳಂತಹ ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಇದನ್ನು ಪ್ರಮುಖವಾಗಿ ಪಶು ಆಹಾರವಾಗಿ ಬಳಸಿದರೆ, ಭಾರತದ ಕೆಲವು ಭಾಗಗಳಲ್ಲಿ ಮತ್ತು ಹಲವು ಆಫ್ರಿಕಾ ಹಾಗೂ ಏಷಿಯಾದ ದೇಶಗಳಲ್ಲಿ ಮಾನವ ಆಹಾರವಾಗಿ ಧಾನ್ಯವನ್ನು ಬಳಸಲಾಗುತ್ತದೆ. ಕರ್ನಾಟಕದ ಉತ್ತರ ಭಾಗದಲ್ಲಿ ಜೋಳ ಪ್ರಮುಖ ಆಹಾರ ಧಾನ್ಯಗಳಲ್ಲೊಂದು.

ಹುಟ್ಟು

ಬದಲಾಯಿಸಿ

ಈಗ ಬೆಳೆಯಲಾಗುತ್ತಿರುವ ಜೋಳದ ವನ್ಯ ಸಸ್ಯ ಸಂಬಂಧಿಗಳು ಸಹಾರದ ದಕ್ಷಿಣಕ್ಕಿರುವ ಆಫ್ರಿಕಾಕ್ಕೆ ಸೀಮಿತವಾಗಿದೆ. ಜೊಹರಿ ಮತ್ತು ಹಾಫ್ “ಬಹುಶಹ” ಎಮೆನ್ ಮತ್ತು ಸೂಡಾನ್‌ಗಳ ಸಹ ಎಂದು ಸೇರಿಸುವ ಮೂಲಕ ಇಲ್ಲಿಯೂ ಇದನ್ನು ಬೆಳೆಯಾಗಿಸುವುದು ಅಥವಾ ವನ್ಯಸಸ್ಯಗಳಿಂದ ಒಂದು ಬೆಳೆಯನ್ನಾಗಿ ಅಭಿವೃದ್ಧಿ ಪಡಿಸಿರಬಹುದು ಎಂದು ಸೂಚಿಸುತ್ತಾರೆ[]. ಭಾರತೀಯ ಉಪಖಂಡದಲ್ಲಿನ ಅತಿ ಪುರಾತನ ಜೋಳದ ಇರುವಿಕೆಯನ್ನು ಹರಪ್ಪ ಪೂರ್ವದ ಹಂತಗಳಲ್ಲಿ ಪತ್ತೆಹಚ್ಚಲಾಗಿದೆ (ಕ್ರಿ ಪೂ ೨೭೫೦-೨೫೦೦). ಇಂದು ಪ್ರಮುಖವಾಗಿ ಈ ಬೆಳೆಯನ್ನು ಬೆಳೆಯುವ ಪ್ರದೇಶವಾದ ಮಹಾರಾಷ್ಟ್ರದಲ್ಲಿ ಇದರ ಇರುವಿಕೆಯನ್ನು ಅಹೆಮದ್‌ನಗರ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳ ದೈಮಾಬಾದ್‌ನಲ್ಲಿನ ಸವಲ್ಡ ಹಂತ ಮತ್ತು ನಂತರದ ಹಂತಗಳಲ್ಲಿ (ಕಾಲಮಾನ I ಕ್ರಿ ಪೂ ೨೨೦೦-೨೦೦೦) ಪತ್ತೆಹಚ್ಚಲಾಗಿದೆ.[]

ಜೋಳದ ಇರುವಿಕೆಯನ್ನು ಅದರ ಮೂಲವೆಂದು ಗುರುತಿಸಿಲಾದ ಆಫ್ರಿಕಾದ ಪ್ರದೇಶಗಳಲ್ಲಿ ಪತ್ತೆಹಚ್ಚಿರುವ ಕಾಲಮಾನ ಭಾರತ ಮತ್ತು ಪಾಕಿಸ್ತಾನಗಳಲ್ಲಿ ಪತ್ತೆಯಾದ ಕಾಲಮಾನಕ್ಕಿಂತ ಹಿಂದೆ ಹೋಗುವುದಿಲ್ಲ. ಈ ಪ್ರದೇಶದಲ್ಲಿ ಪತ್ತೆಯಾದ ಪುರಾತನ ಜೋಳದ ವನ್ಯಸಸ್ಯಗಳ ಇರುವಿಕೆ ಕ್ರಿ ಪೂ ೮೦೦-೬೦೦ರಷ್ಟು ಹಿಂದೆ ಹೋದರೆ, ಬೆಳೆದ ಸಸ್ಯಗಳ ಇರುವಿಕೆ ಕ್ರಿ ಪೂ ೧೦೦ರವರೆಗೆ ಹಿಂದೆ ಹೋಗುತ್ತದೆ. ಜೋಹರಿ ಮತ್ತು ಹಾಫ್ ಜೋಳ ಇಲ್ಲಿ ಪತ್ತೆಯಾದ ಕಾಲಕ್ಕೂ ಮುಂಚೆಯೇ ಬೆಳೆಯಲಾಯಿತು ಮತ್ತು ಅದು ಬಹಳ ಮುಂಚೆಯೇ ಭಾರತೀಯ ಉಪಖಂಡಕ್ಕೆ ವಲಸೆ ಹೋಯಿತು ಎಂದು ಸೂಚಿಸುತ್ತದೆ ಎನ್ನುತ್ತಾರೆ. []

ಮುಸ್ಲಿಂ ಕೃಷಿ ಕ್ರಾಂತಿಯ[] ಪರಿಣಾಮವಾಗಿ ಜೋಳವು ಮಧ್ಯ ಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ಯುರೋಪುಗಳಿಗೆ ಹರಡಿತು.

ಸಾಗುವಳಿ ಮತ್ತು ಉಪಯೋಗ

ಬದಲಾಯಿಸಿ

ಜೋಳದ ಧಾನ್ಯಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕ ಸಂಯುಕ್ತ ಸಂಸ್ಥಾನವು ಅದನ್ನು ಪ್ರಧಾನವಾಗಿ ಕುಕ್ಕಟ (ಪೌಲ್ಟ್ರಿ) ಮತ್ತು ಪಶು ಆಹಾರವಾಗಿ ಬಳಸುತ್ತದೆ. ಆದರೆ ಇದರ ಧಾನ್ಯವು ಮಹಾರಾಷ್ಟ್ರ, ಉತ್ತರ ಮತ್ತು ಪೂರ್ವ ಕರ್ನಾಟಕ, ಆಂಧ್ರ ಪ್ರದೇಶದ ರಾಯಲಸೀಮ ಭಾಗಗಳಲ್ಲಿ ಪ್ರಧಾನವಾಗಿ ಜೋಳದ ರೊಟ್ಟಿಯಾಗಿ ಬಳಕೆಯಲ್ಲಿದೆ. ಇದರ ಸೊಪ್ಪೆ (ಕಾಂಡವು) ಪಶುಗಳ ಆಹಾರವಾಗಿ ಬಳಕೆಯಲ್ಲಿದೆ.

ಧಾನ್ಯ ಜೋಳದ ಸಾಗುವಳಿ

ಬದಲಾಯಿಸಿ

ನಿರ್ದಿಷ್ಟ ವರುಷದಲ್ಲಿ ಜೋಳವು ಅತಿ ಹೆಚ್ಚು ಧಾನ್ಯ ಇಳುವರಿ ನೀಡಬೇಕಾದರೆ ಸರಾಸರಿ ತಾಪಮಾನ ೨೫° ಸೆಲ್ಸಿಯಸ್ ಇರಬೇಕಾಗುತ್ತದೆ. ದಿನದ ತಾಪಮಾನ ೩೦° ಸೆ (ಸೆಲ್ಸಿಯಸ್) ಇದ್ದಾಗ ಅತಿಹೆಚ್ಚು //ದ್ಯುತಿಸಂಶ್ಲೇಷಣೆ ಇರುತ್ತದೆ. ರಾತ್ರಿಯ ತಾಪಮಾನ ಕೆಲವು ದಿನಗಳಿಗೂ ಹೆಚ್ಚು ೧೩° ಸೆ. ಕಡಿಮೆಯಾದರೆ ಗಿಡದ ಧಾನ್ಯ ಉತ್ಪಾದನೆಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಮಣ್ಣಿನ ತಾಪಮಾನ ೧೭° ಸೆ. ಆಗುವವರೆಗೂ ಬೀಜ ನಾಟುವುದು ಉಪಯುಕ್ತವಲ್ಲ. ಅದು ೪೫° ಸೆ. ನಷ್ಟು ಹೆಚ್ಚಿನ ಉಷ್ಟಾಂಶವನ್ನು ತಾಳಿಕೊಳ್ಳ ಬಲ್ಲದು ಆದರೆ ೮° ಸೆ. ಗೂ ಕಡಿಮೆ ತಾಪಮಾನವು ಹೂಬಿಡುವುದು ಮತ್ತು ಪರಾಗಸಂಪರ್ಕಕ್ಕೆ ದಕ್ಕೆಯುಂಟು ಮಾಡುತ್ತದೆ. ಹೂಬಿಡುವ ಹಂತದಲ್ಲಿ ೧೩°ಸೆ ಕಡಿಮೆ ತಾಪಮಾನ ಕಾಳುಕಟ್ಟುವುದರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಇದನ್ನು ಉತ್ತರ ಭಾರತದಲ್ಲಿ ಹಿಂಗಾರಿನಲ್ಲಿ ಬೆಳೆಯುವುದಿಲ್ಲ.[] ಉಷ್ಣವಲಯದಲ್ಲಿ ಬೆಳೆಯ ಬಹುದಾದ (ಮತ್ತು ಬೆಳೆಯುತ್ತಿರುವ) ಇನ್ನೊಂದು ಧಾನ್ಯ ಭತ್ತಕ್ಕೆ ಹೋಲಿಸಿದರೆ ಇದರ ನೀರಿನ ಅಗತ್ಯ ಕಡಿಮೆ.[] ಸಾಮಾನ್ಯವಾಗಿ ಜೋಳವನ್ನೂ ಒಳಗೊಂಡು ಎಲ್ಲಾ ಬೆಳೆಗಳ ಸಾಗುವಳಿ ಪದ್ಧತಿಗಳು ಒಂದು ಕೃಷಿ ವಲಯದಿಂದ ಇನ್ನೊಂದು ಕೃಷಿ ವಲಯಕ್ಕೆತುಸು ಭಿನ್ನವಾಗುತ್ತವೆ. ಹೀಗಾಗಿ ಇಲ್ಲಿನ ಜೋಳದ ಸಾಗುವಳಿಯ ವಿವರಗಳು ಹೆಚ್ಚಾಗಿ ಭಾರತಕ್ಕೆ ಸೀಮಿತವಾಗಿವೆ.

  • ಬಿತ್ತನೆಯ ವಿವರಗಳು: ಭಾರತದಲ್ಲಿ ಈ ಬೆಳೆಯನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆಯಲ್ಲಿಯೂ ಬೆಳೆಯಲಾಗುತ್ತದೆ. ಅತ್ಯುತ್ತಮ ಹೆಕ್ಟೇರಿನಲ್ಲಿನ ಸಸ್ಯಗಳ ಸಂಖ್ಯೆ ನಿರಾವರಿಯಲ್ಲಿ (ಎಲ್ಲಾ ಕಾಲಗಳಲ್ಲಿಯೂ) ೧,೫೦,೦೦೦ ದಿಂದ ೨,೦೦,೦೦೦ ಇದ್ದರೆ ಈ ಸಂಖ್ಯೆ ಖುಷ್ಕಿಯಲ್ಲಿ ೧,೩೫,೦೦೦ ವಿರುತ್ತದೆ. ೪೫x೧೫ ಸೆಂಮೀ ಅಥವಾ ೬೦x೧೦ ಸೆಂಮೀಗಳ ಮೂಲಕ ಪಡೆಯ ಬಹುದು. ಇದನ್ನು ಹೆಕ್ಟೇರಿಗೆ ೮-೧೦ ಕೆಜಿ ಬಿತ್ತುವ ಮೂಲಕ ಪಡೆಯ ಬಹುದು. ಇದನ್ನು ಬಿತ್ತನೆಯು ಮೊಳೆತ ನಂತರ ದಟ್ಟಣೆ ಕಡಿಮೆ ಮಾಡುವ ಮೂಲಕ ಸಾಧಿಸಬಹುದು. ಬಹಳಷ್ಟು ಹೆಚ್ಚು ಇಳುವರಿಯ ಮತ್ತು ಹೈಬ್ರಿಡ್ ತಳಿಗಳು ೯೦-೧೨೦ ದಿನಗಳಲ್ಲಿ ಕಟಾವಿಗೆ ಬರುತ್ತವೆ.[]
  • ತಳಿಗಳು: ಹಲವು ಸುಧಾರಿತ ಹಾಗೂ ಹೈಬ್ರಿಡ್ ತಳಿಗಳನ್ನು ಬಿತ್ತನೆಗೆ ಶಿಪಾರಸು ಮಾಡಲಾಗಿದೆ. ಕರ್ನಾಟಕಕ್ಕೆ ಸೀಮಿತವಾಗಿ ಈ ತಳಿಗಳ ಯಾದಿಯನ್ನು ಕೆಳಗಿನ ಕೋಷ್ಟಕದಲ್ಲಿ ಕೊಡಲಾಗಿದೆ.
ಕರ್ನಾಟಕಕ್ಕೆ ಶಿಫಾರಸು ಮಾಡಿರುವ ಜೋಳದ ತಳಿಗಳು[]
ಸುಧಾರಿತ ತಳಿಗಳು ಹೈಬ್ರಿಡ್ ತಳಿಗಳು ಷರಾ
ಸಿಎಸ್‌ಬಿ ೧೦೬೬, ಡಿಎಸ್‌ವಿ ೧, ಡಿಎಸ್‌ವಿ ೨ ಸಿಹೆಚ್‌ಎಸ್ ೧, ಸಿಹೆಚ್‌ಎಸ್ ೬, ಸಿಹೆಚ್‌ಎಸ್ ೧೪, ಸಿಹೆಚ್‌ಎಸ್ ೧೭ ಕಡಿಮೆ ಮಳೆಯ ಪ್ರದೇಶ
ಸಿಎಸ್‌ವಿ ೧೦, ಸಿಎಸ್‌ವಿ ೧೧, ಸಿಎಸ್‌ವಿ ೧೩, ಸಿಎಸ್‌ವಿ ೧೫

ಎಸ್‌ಪಿವಿ ೪೬೨, ಡಿಎಸ್‌ವಿ ೩ (ಮಿಡ್ಜ್ ಪ್ರತಿರೋಧ ಹೊಂದಿದೆ)

ಸಿಹೆಚ್‌ಎಸ್ ೧೦, ಸಿಹೆಚ್‌ಎಸ್ ೧೩, ಸಿಹೆಚ್‌ಎಸ್ ೧೬. ಸಿಹೆಚ್‌ಎಸ್ ೧೮ ಸಾಮಾನ್ಯ ಮಳೆಯ ಪ್ರದೇಶ
  • ನೀರಿನ ಅಗತ್ಯ: ಜೋಳವನ್ನು ಪ್ರಮುಖವಾಗಿ ಮುಂಗಾರಿನಲ್ಲಿ ಮಳೆ ಆಧಾರಿತವಾಗಿ ಮತ್ತು ಹಿಂಗಾರಿನಲ್ಲಿ ಉಳಿದ ತೇವಾಂಶದ ಮೇಲೆ ಬೆಳೆಯಲಾಗುತ್ತದೆ. ಅದರ ನೀರಿನ ಅಗತ್ಯವು ಮುಂಗಾರು ಮತ್ತು ಹಿಂಗಾರಿನಲ್ಲಿ ೩೦೦ - ೫೦೦ ಮಿಮೀ (ಮಿಲ್ಲೀ ಮೀಟರ್) ಹಾಗೂ ಬೇಸಿಗೆಯಲ್ಲಿ ೬೦೦ – ೭೦೦ ಮಿಮೀ ಇರುತ್ತದೆ. ನೀರಾವರಿಯ ಅನುಕೂಲವಿದ್ದ ಕಡೆ ಮುಖ್ಯವಾಗಿ ಸಂದಿಗ್ಧ ಹಂತಗಳಾದ ತೆನೆ ಮೂಡುವ ಸಮಯ, ಕೊನೆ ಎಲೆಯ ಸಮಯ, ಹೂಬಿಡುವ ಸಮಯ ಮತ್ತು ಕಾಳು ಕಟ್ಟುವ ಸಮಯದಲ್ಲಿ ತಪ್ಪದೆ ನೀರಿನ್ನು ಕೊಡಬೇಕು. []
ಆಯ್ದ ಧಾನ್ಯಗಳ ನೀರಿನ ಅಗತ್ಯ[]
ಧಾನ್ಯ ನೀರಿನ ಅಗತ್ಯ

ಮಿಮೀಗಳಲ್ಲಿ

ಭತ್ತ ೯೦೦ - ೨೫೦೦
ಗೋದಿ ೪೫೦ - ೬೫೦
ಜೋಳ ೪೫೦ - ೬೫೦
ಮೆಕ್ಕೆ ಜೋಳ ೫೦೦ - ೮೦೦
ರಾಗಿ ೪೦೦ - ೪೫೦
  • ಕಳೆ ಹತೋಟಿ: ಕಳೆಗಳ ನಿಯಂತ್ರಣ ಬಿತ್ತನೆಯ ನಂತರದ ೩೦-೪೫ ದಿನಗಳು ಅತಿ ಮುಖ್ಯವಾದವು. ಈ ಸಮಯದಲ್ಲಿ ಬೆಳೆಯು ನಡುವಿನ ಕಳೆ ನಿಯಂತ್ರಣದಲ್ಲಿಡಬೇಕು. ಕಳೆ ಹತೋಟಿ ಸರಿಯಾಗಿರದಿದ್ದಲ್ಲಿ ಶೇ ೨೦-೬೦ ರಷ್ಟು ಇಳುವರಿ ತಗ್ಗಬಹುದು. ಸಾಮಾನ್ಯ ವಿಧಾನವು ಕೈಯಿಂದ ಕುರ್ಚಿಗಿ (ಕುಡುಗೋಲು ಹೋಲುವ ಅದಕ್ಕೂ ಸಣ್ಣ ಸಾಧನ) ಮತ್ತು ಎತ್ತುಗಳ ನೊಗಕ್ಕೆ ಕಟ್ಟಿದ ಕಳೆಗುದ್ದಲಿ ಬಳಸಿ ತೆಗೆಯ ಬಹುದು. ಒಂದು ಕಿಲೊ (ಒಂದು ಹೆಕ್ಟೇರಿಗೆ) ಅಟ್ರಾಜಿನ್‌ನನ್ನು ೮೦೦-೧೦೦೦ ಲೀಟರು ನೀರಿನಲ್ಲಿ ಬೆರಸಿ ಬೆಳೆ ನಾಟುವ ಪೂರ್ವದಲ್ಲಿ ಸಿಂಪಡಿಸುವುದು ಕಳೆಯ ಹತೋಟಿಯ ಒಂದು ರೀತಿ. ಇದೇ ರೀತಿ ಜೋಳದಲ್ಲಿ ಬಳಸಬಹುದಾದ ಇನ್ನೊಂದು ನಾಟು ಪೂರ್ವ ಕಳೆನಾಶಕ ಪ್ರೋಮೆಟ್ರೈನೆ. ಇದನ್ನು ಹೆಕ್ಟೇರಿಗೆ ಒಂದು ಕಿಲೊನಂತೆ ಬಳಸಬೇಕು. ಒಮ್ಮೆ ಕಳೆನಾಶಕದ ಬಳಕೆ ಮತ್ತು ಬಿತ್ತನೆಯ ೩೫-೪೦ ದಿನಗಳ ನಂತರ ಕೈಯಿಂದ ಕಳೆತೆಗೆಯುವುದು ಕಳೆಯನ್ನು ಉತ್ತಮವಾಗಿ ನಿಯಂತ್ರಿಸಲು ಸಾಕಾಗುತ್ತದೆ. ಜೋಳದ ಸಾಲುಗಳ ನಡುವೆ ಅಂತರ ಬೆಳೆಯಾಗಿ ಅಲಸಂಡೆ ಬೆಳೆಯುವುದು ಸಹ ಜೋಳದ ಕಳೆಯನ್ನು ಹತೋಟಿಯಲ್ಲಿಡಬಲ್ಲದು.[]
  • ಕೊಯ್ಲು, ಒಕ್ಕಣೆ ಮತ್ತು ಇಳುವರಿ: ಕಾಂಡ ಮತ್ತು ಎಲೆಗಳು ಒಣಗುವುದನ್ನು ಕಾಯದೆ ಕಾಳು ಗಟ್ಟಿಯಾಗಿ, ಅದರ ತೇವಾಂಶ ಶೇ೨೫ರಷ್ಟು ಆದಾಗ ಜೋಳವನ್ನು ಕಟಾವು ಮಾಡಬಹುದು. ಸಾಮಾನ್ಯವಾಗಿ ಕೊಯ್ಲಿಗೆ ಎರಡು ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಇವು ತೆನೆ ಕೊಯ್ಯುವುದು ಅಥವಾ ಕಾಂಡವನ್ನು ನೆಲದ ಬುಡದಿಂದ ತುಸು ಮೇಲೆ ಕೊಯ್ಯುವುದು. ಮುಂದುವರೆದ ದೇಶಗಳಲ್ಲಿ ಕಟಾವಿಗೆ ಯಂತ್ರಗಳನ್ನು ಬಳಸಲಾಗುತ್ತದೆ. ತೆನೆ ಕೊಯ್ಲಿನ ನಂತರ ಒಕ್ಕಣೆಯ ಪ್ರದೇಶದಲ್ಲಿ ಸಂಗ್ರಹಿಸಿ ೩—೪ ದಿನ ಸೂರ್ಯನ ಬಿಸಿಲಿಗೆ ಒಣಗಿದ ನಂತರ ಒಕ್ಕಲಾಗುತ್ತದೆ (ಕಾಳು ಬೇರ್ಪಡಿಸುವುದು). ತೆನೆಯೊಂದಿಗೆ ಕಾಂಡವನ್ನು ಕೊಯ್ದ ಸಂದಂರ್ಭದಲ್ಲಿ ಅವುಗಳನ್ನು ಅನುಕೂಲಕರ ಕಟ್ಟುಗಳಾಗಿ ಬಿಗಿಯಲಾಗುತ್ತದೆ ಮತ್ತು ಎರಡು ಮೂರು ದಿನ ಒಣಗಿದ ನಂತರ ತೆನೆಯನ್ನು ಕೊಯ್ದು ಕಾಂಡವನ್ನು ಬೇರ್ಪಡಿಸಲಾಗುತ್ತದೆ. ತೆನೆಗಳನ್ನು ಕಟ್ಟಿಗೆಯಿಂದ ಬಡಿಯುವ ಮೂಲಕವಾಗಲಿ ಅಥವಾ ಎತ್ತುಗಳ ಕಾಲಕೆಳಗೆ ತುಳಿಯಿಸುವ ಮೂಲಕವಾಗಲಿ ಜೋಳದ ಕಾಳು ಬೇರ್ಪಡಿಸುವಿಕೆಯನ್ನು ಮಾಡಲಾಗುತ್ತದೆ. ಕಾಳು ಬೇರ್ಪಡಿಸುವಿಕೆಗೆ ಯಂತ್ರಗಳೂ ಲಭ್ಯವಿವೆ. ಹೀಗೆ ಬೇರ್ಪಡಿಸಿದ ಕಾಳುಗಳನ್ನು ೬-೭ ದಿನ ಬಿಸಿಲಲ್ಲಿ ಒಣಗಿಸಬೇಕು ಹಾಗೂ ಕಾಳಿನ ತೇವಾಂಶವು ಶೇ ೧೩-೧೫ ಇದ್ದರೆ ಕಾಳು ಸಂಗ್ರಹಿಸುವುದು ಸುರಕ್ಷಿತ. ಕಾಳಿನ ಇಳುವರಿಯು ೨.೫ ರಿಂದ ೩.೫ ಟನ್‌/ಹೆ (ಒಂದು ಹೆಕ್ಟೇರಿಗೆ ಟನ್ನುಗಳು) ರವೆರಗೂ ಇದ್ದು, ಸೊಪ್ಪೆಯು ೧೫ ರಿಂದ ೧೭ ಟನ್/ಹೆ ದೊರೆಯುತ್ತದೆ. ನೀರಾವರಿಯಲ್ಲಿ ಸುಧಾರಿತ ಬೇಸಾಯ ಪದ್ಧತಿಗಳ ಮೂಲಕ ಹೆಕ್ಟೇರಿಗೆ ೫ ಟನ್ನು ಧಾನ್ಯ ಹಾಗೂ ೧೦ ರಿಂದ ೧೨.೫ ಟನ್ ಒಣ ಮೇವು ಪಡೆಯ ಬಹುದು.[]
ಹೆಚ್ಚು ಜೋಳ ಉತ್ಪಾದಿಸುವ ದೇಶಗಳು — ೨೦೦೮[೧೦]
ದೇಶ ಉತ್ಪಾದನೆ

(ದಶಲಕ್ಷ ಟನ್ನುಗಳಲ್ಲಿ)

ಅಮೆರಿಕ ಸಂಯುಕ್ತ ಸಂಸ್ಥಾನ ೧೨.೦
ನೈಜೀರಿಯ ೯.೩
ಭಾರತ ೭.೯
ಮೆಕ್ಸಿಕೊ ೬.೬
ಸೂಡಾನ್ ೩.೯
ಆಸ್ಟ್ರೇಲಿಯ ೩.೧
ಅರ್ಜೆಂಟೈನ ೨.೯
ಚೀನಾ ೨.೫
ಇಥಿಯೋಪಿಯ ೨.೩
ಬ್ರೇಜಿಲ್ ೨.೦
ಜಾಗತಿಕ ಉತ್ಪಾದನೆ ೬೫.೫ Mt
ಬಿತ್ತನೆಯ ಪ್ರದೇಶ, ಉತ್ಪಾದನೆ ಮತ್ತು ಇಳುವರಿ (೨೦೦೯-೨೦೧೦)[]
ರಾಜ್ಯ ಪ್ರದೇಶ

(ದಶಲಕ್ಷ ಹೆಕ್ಟೇರುಗಳು)

ಉತ್ಪಾದನೆ

(ದಶಲಕ್ಷ ಟನ್ನುಗಳಲ್ಲಿ)

ಇಳುವರಿ

(ಕಿಲೊ/ಹೆಕ್ಟೇರಿಗೆ)

ಮಹಾರಾಷ್ಟ್ರ ೪.೧೮ ೩.೫೭ ೮೫೪
ಕರ್ನಾಟಕ ೧.೩೭ ೧.೪೧ ೧೦೨೭
ಮಧ್ಯಪ್ರದೇಶ ೦.೪೫ ೦.೫೬ ೧೨೬೭
ಆಂಧ್ರಪ್ರದೇಶ ೦.೩೯ ೦.೪೪ ೧೧೩೫
ತಮಿಳುನಾಡು ೦.೨೪ ೦.೨೨ ೯೨೯
ಭಾರತ ೭.೭೯ ೬.೭ ೮೬೦
  • ಗೊಬ್ಬರ ಮತ್ತು ಕ್ರಿಮಿಕೀಟಗಳಿಂದ ರಕ್ಷಣೆ: ಶಿಪಾರಸು ಮಾಡಿದ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಹಾಗೂ ರಸಗೊಬ್ಬರಗಳನ್ನು ಕೊಡುವುದು (ಅದರಲ್ಲಿಯೂ ವಿಶೇಷವಾಗಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್) ಅಗತ್ಯವಿದೆ. ಜೋಳವನ್ನು ಬಾಧಿಸುವ ಮುಖ್ಯ ಕೀಟಗಳು: ಸುಳಿ ನೊಣ, ಚಿಕ್ಕಣ ದುಂಬಿ, ಮಿಡತೆ, ಕಾಂಡ ಕೊರೆಯುವ ಹುಳು, ಸುಳಿ ತಿಗಣೆ ಮತ್ತು ತೆನೆ ತಿಗಣೆ. ಬಾಧಿಸುವ ಮುಖ್ಯ ರೋಗಗಳು: ತುಕ್ಕು ರೋಗ, ಕೇದಿಗೆ ರೋಗ, ಎಲೆ ಚುಕ್ಕೆ ರೋಗ, ಎಲೆ ಮಚ್ಚಿಗರೋಗ, ಜೋನಿ ರೋಗ, ಕಾಂಡದ ಕಪ್ಪು ಕೊಳೆ ರೋಗ ಮತ್ತು ಕಾಡಿಗೆ ರೋಗ. ಇವುಗಳಿಂದ ಕಾಪಾಡಲು ಶಿಪಾರಸು ಮಾಡಿದ ಕ್ರಿಮಿನಾಶಕಗಳನ್ನು ಸಿಂಪಡಿಸ ಬೇಕಾದ ಅಗತ್ಯವಿರುತ್ತದೆ. ಇಂತಹ ಗೊಬ್ಬರ ಮತ್ತು ಕ್ರಿಮಿಕೀಟಗಳಿಂದ ರಕ್ಷಣೆಗೆ ಕ್ರಿಮಿನಾಶಗಳು ಸಿಂಪಡಿಸುವುದನ್ನು ಕೃಷಿ ವಿಶ್ವವಿದ್ಯಾಲಯಗಳು (ಅಥವಾ ಸರಕಾರ) ಅಧಿಕ ಇಳುವರಿಗೆ ಸುಧಾರಿತ ಬೇಸಾಯದ ಕ್ರಮಗಳಾಗಿ ಸೂಚಿಸುತ್ತವೆ.[೧೧]
 
ಪಾಪ್‌ಕಾರ್ನ್ ಮತ್ತು ಜೋಳದ ಪಾಪ್‌ಕಾರ್ನ್
  • ಆಹಾರವಾಗಿ ದಕ್ಷಿಣ ಭಾರತದ ಜೋಳದ ರೊಟ್ಟಿಗಳ ರೂಪದಲ್ಲಿಯಲ್ಲದೆ ಆಹಾರವಾಗಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಬಳಸುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿ ಗಂಜಿಯಂತಹ ಮಂದ ಆಹಾರವಾಗಿ ತಯಾರಿಸುತ್ತಾರೆ. ಉತ್ತರ ಸೋತೊನಲ್ಲಿ ಇದನ್ನು ಮಾಬೆಲೆ ಎಂದು ಕರೆದರೆ ಇಂಗ್ಲೀಶ್‌ನಲ್ಲಿ ಇದನ್ನು ಕಂದು ಗಂಜಿ ಎಂದು ಕರೆಯುತ್ತಾರೆ. ಹುದುಗಿಸುವಿಕೆಯ ಮೂಲಕ ಇಥಿಯೋಪಿಯಾದಲ್ಲಿ ಇಂಜೆರ ಎಂದು ಕರೆಯಲಾದ ಮತ್ತು ಸುಡಾನಿನಲ್ಲಿ //ಕಿಸ್ರಾ ಎಂದು ಕರೆಯಲಾದ ರೊಟ್ಟಿಯನ್ನು ತಯಾರಿಸಲಾಗುತ್ತದೆ. ಅರಬ್ ಆಹಾರದಲ್ಲಿ ಗಂಜಿ, ಸೂಪ್‌ಗಳಂತಹ ಹಲವು ಆಹಾರಗಳನ್ನು ತಯಾರಿಸಲಾಗುತ್ತದೆ. ಮೆಕ್ಕೆಜೋಳದಂತೆ ಅದನ್ನು ಪಾಪ್‌ಕಾರ್ನ್ ಸಹ ಮಾಡಬಹುದು ಆದರೆ ಹಾಗೆ ಮಾಡಿದ ಕಾರ್ನ್ ತುಸು ಸಣ್ಣದಾಗಿರುತ್ತದೆ.
೧೦೦ ಗ್ರಾಂ ಜೋಳದಲ್ಲಿನ ಮುಖ್ಯ ಪೋಷಕಾಂಶಗಳು[೧೨]
ಪೋಷಕಾಂಶ ಪ್ರಮಾಣ
ಶಕ್ತಿ (ಇಕ್ಯಾಲ್‌ಗಳಲ್ಲಿ) ೩೪೯
ತೇವಾಂಶ (ಗ್ರಾಂ) ೧೨
ಪ್ರೋಟೀನ್ (ಗ್ರಾಂ) ೧೦
ಕೊಬ್ಬು (ಗ್ರಾಂ)
ಖನಿಜ (ಗ್ರಾಂ)
ನಾರು (ಗ್ರಾಂ)
ಕಾರ್ಬೊಹೈಡ್ರೇಟ್ (ಗ್ರಾಂ) ೭೩
ಕ್ಯಾಲ್ಸಿಯಂ (ಮಿಲ್ಲಿ ಗ್ರಾಂ) ೨೫
ರಂಜಕ (ಮಿಲ್ಲಿ ಗ್ರಾಂ) ೨೨೨
ಕಬ್ಬಿಣ (ಮಿಲ್ಲಿ ಗ್ರಾಂ)
  • ಮಧ್ಯಸಾರ ಪಾನೀಯವಾಗಿ: ಜೋಳವು ಚೀನಾದಲ್ಲಿ ಮಧ್ಯಸಾರವನ್ನು ತಯಾರಿಸಲು ಬಳಸುವ ಪ್ರಮುಖ ಪದಾರ್ಥ. ಆಫ್ರಿಕಾದ ದಕ್ಷಿಣದ ಪ್ರದೇಶಗಳಲ್ಲಿ ಇದನ್ನು ಗ್ಲುಟೆನ್ ಇಲ್ಲದ (ಈ ಪದಾರ್ಥವು ಬಾರ್ಲಿ ಮತ್ತು ಗೋದಿಯಲ್ಲಿ ಇರುತ್ತದೆ) ಬೀರು ತಯಾರಿಸಲು ಬಳಸಲಾಗುತ್ತದೆ.
  • ಪಶು ಆಹಾರವಾಗಿ: ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಅದನ್ನು ಪಶು ಆಹಾರವಾಗಿ ಬಳಸಲಾಗುತ್ತದೆ. ಅದರಲ್ಲಿರುವ ಪೋಷಕಾಂಶಗಳು ಮೆಕ್ಕೆಜೋಳಕ್ಕೆ ಹೋಲುವುದರಿಂದ ಮೆಕ್ಕೆಜೋಳದ ಬದಲಿಯಾಗಿ ಜೋಳ ಬಳಕೆಯಾಗುತ್ತದೆ. ಕೆಲವು ಹೈಬ್ರಿಡುಗಳನ್ನು ಸಾಮಾನ್ಯವಾಗಿ ಹಕ್ಕಿಗಳ ತಿನ್ನದಂತೆ ಮಾಡಲು ಅಭಿವೃದ್ಧಿ ಪಡಿಸಿದ ಕಾರಣಕ್ಕೆ ಅದರಲ್ಲಿ ಟ್ಯಾನಿನ್ ಮತ್ತು ಫೆನಾಲಿಕ್ ಪದಾರ್ಥಗಳು ಹೆಚ್ಚು ಇರುತ್ತವೆ. ಹೀಗಾಗಿ ಸಂಸ್ಕರಿಸಿದ ನಂತರವೇ ಅದನ್ನು ಪಶುಗಳಿಗೆ ಆಹಾರವಾಗಿ ನೀಡಬಹುದು.

ಜೋಳದ ಭವಿಷ್ಯ

ಬದಲಾಯಿಸಿ

ತಂಜಾನಿಯದಲ್ಲಿ ಮುಂದೆ ವಾತಾವರಣ ಬದಲಾವಣೆಯ ಕಾರಣಕ್ಕೆ ಮಳೆ ಕಡಿಮೆಯಾಗಿ ಮೆಕ್ಕೆಜೋಳದ ಬದಲು ಹೆಚ್ಚು ಬರಗಾಲ ತಾಳಿಕೊಳ್ಳು ಶಕ್ತಿಯುಳ್ಳ ಜೋಳವನ್ನು ಬೆಳೆಯುವ ಸಾಧ್ಯತೆ ಹೆಚ್ಚಾಗಿದೆ. ಇಕ್ರಿಸಾಟ್‌ (ಐಸಿಆರ್‌ಐಎಸ್‌ಎಟಿ) ನೇತೃತ್ವದ ಹೋಪ್‌ ಪ್ರಾಜೆಕ್ಟನ ಪ್ರಯತ್ನದಿಂದಾಗಿ ಇತ್ತೀಚೆಗೆ ಸರಕಾರವು ಬೀಜ ಸಬ್ಸಿಡಿ ಕಾರ್ಯಕ್ರಮದಲ್ಲಿ ಜೋಳದ ಸುಧಾರಿತ ತಳಿಗಳನ್ನು ಸೇರಿಸಿದೆ ಮತ್ತು ರಸಗೊಬ್ಬರ ಸಬ್ಸಿಡಿ ಕಾರ್ಯಕ್ರಮದಲ್ಲಿ ಸೇರಿಸಲು ಮೊದಲ ಸಲ ಒಪ್ಪಿಕೊಂಡಿದೆ. ಇದರ ಅರ್ಥವೆಂದರೆ ಸರಕಾರವು ಬೀಜ ಕಂಪೆನಿಗಳಿಂದ ಬೀಜವನ್ನು ಕೊಂಡು ರೈತರಿಗೆ ಮಾರುಕಟ್ಟೆಯ ಅರ್ದ ಬೆಲೆ ಮಾರುತ್ತದೆ. ತಂಜಾನಿಯದ ರೈತರು ಸುಧಾರಿತ ತಳಿಗಳು ವೇಗವಾಗಿ ಬೆಳೆಯುತ್ತವೆ, ಅವಕ್ಕೆ ಕಡಿಮೆ ಕೂಲಿಗಳ ಅಗತ್ಯವಿದೆ ಮತ್ತು ರೋಗ ಮತ್ತು ಕೀಟಗಳಿಗೆ ಹೆಚ್ಚು ಪ್ರತಿರೋಧ ತೋರುತ್ತವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.[೧೩]

ಭಾರತದಲ್ಲಿ ಜೋಳದ ಉತ್ಪನ್ನ ಕಡಿಮೆಯಾಗುತ್ತಿದೆ. ೧೯೬೦-೬೧ರಲ್ಲಿ ಇದ್ದ ೯.೮ ದಶಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯು (ಬಿತ್ತನೆಯ ಪ್ರದೇಶ ೧೯.೪ ದಶಲಕ್ಷ ಹೆಕ್ಟೇರ್) ೨೦೦೩-೦೪ಕ್ಕೆ ೭.೩ ದಶಲಕ್ಷ ಟನ್ನಿಗೆ (ಬಿತ್ತನೆಯ ಪ್ರದೇಶ ೯.೫ ದಶಲಕ್ಷ ಹೆಕ್ಕೇಟಿರಿಗೆ) ಕುಸಿದಿದೆ. ಇದು ಕೆಲವು ನಿರ್ದಿಷ್ಟ ಧಾನ್ಯಗಳ ಪರ ನೀತಿಯಿಂದಾಗಿ ಎಂದು ಹೇಳಲಾಗಿದೆ.[೧೪]

ಉಲ್ಲೇಖಗಳು ಮತ್ತು ಟಿಪ್ಪಣಿಗಳು

ಬದಲಾಯಿಸಿ

ಪ್ರಮುಖ ಆಧಾರ: ವಿಕಿಪೀಡಿಯ ಇಂಗ್ಲೀಶ್ ಲೇಖನ Commercial sorghum[ಶಾಶ್ವತವಾಗಿ ಮಡಿದ ಕೊಂಡಿ]

  1. English Wikipedia Sorghum link https://en.wikipedia.org/wiki/Sorghum access date 2016-07-14
  2. Awika M. Joshep, "Chapter1 Major Cereal Grains Production and Use around the World" access date 2016-07-14
  3. “Normal (average of 2005-06 - 2009-10) Area, Production and Yield of Major Crops in India” access date 2016-07-14 (from Direcorate of Economics and Statistics, Department of Agriculture, Govt of India.
  4. ೪.೦ ೪.೧ ”Area, Production and Yield of Jowar in major Producing States”, Agropedia, access date 2016-07-14
  5. ೫.೦ ೫.೧ Daniel Zohary and Maria Hopf, Domestication of plants in the Old World, third edition (Oxford: University Press, 2000),p. 89 (Wikipedia English Commercia sorghum reference)
  6. Sing, Purushottam “Chapter8 History of Millet Cultivation in India” in Editors. Lallanji Gopal and V. C. Srivastav (2008), Concept Publishing Company, History of Agriculture in India, Up to C. 1200 A.D., pages 107-108.
  7. ಮುಸ್ಲಿಂ ಸಂಸ್ಕೃತಿಯ ಪ್ರದೇಶಗಳಲ್ಲಿ ಕ್ರಿ ಶ ೮ ರಿಂದ ೧೩ನೆಯ ಶತಮಾನಗಳ ವರೆಗೆ ನಡೆದ ಮತ್ತು ಅರಬ್ ಕ್ರಾಂತಿಯ ಭಾಗವಾದ ಕೃಷಿಯಲ್ಲಿನ ಬದಲಾವಣೆಗಳು
  8. ೮.೦ ೮.೧ ೮.೨ ೮.೩ ೮.೪ ೮.೫ Gangaiah B, “Agronomy – Kharif Crops Millets Sorghum (Jowar) Pearl Millet (Bajra) Finger Millet” Archived 2017-11-18 ವೇಬ್ಯಾಕ್ ಮೆಷಿನ್ ನಲ್ಲಿ. access date 2016-07-14
  9. ೯.೦ ೯.೧ ”Irrigation Water Requirement of Crops” access date 2016-07-14
  10. "FAOSTAT". FOOD AND AGRICULTURE ORGANIZATION OF THE UNITED NATIONS (From english wikipedia Sorghum commercial). Archived from the original on 2012-04-07. Retrieved 2010-05-21.
  11. ಅಧಿಕ ಇಳುವರಿಗೆ ಸುಧಾರಿತ ಬೇಸಾಯ ಕ್ರಮಗಳು (ಕರ್ನಾಟಕ ಈಶಾನ್ಯ ಪ್ರದೇಶದಲ್ಲಿ (ಪ್ರದೇಶ ೧, ವಲಯ ೧ ಮತ್ತು ೨)), ಕೃಷಿ ವಿಶ್ವವಿದ್ಯಾಲಯ, ದಾರವಾಢ ಮತ್ತು ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಬೆಂಗಳೂರು ೧೯೯೭
  12. ”Cereal Grains and Products - Common Foods Jowar” acess date 2016-07-14
  13. Wangari, C. ICRISAT Tanzania's government signs off on sorghum Thomson Reuters Foundation, 22 July 2013 (reference from English wikipedia Commercial Sorghum )
  14. Mondal, Puja, “State wise Jowar Cultivation and Distribution in India” access date 2016-07-14

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಜೋಳ&oldid=1226804" ಇಂದ ಪಡೆಯಲ್ಪಟ್ಟಿದೆ