ಗೆಡ್ಡೆಕಾಂಡದ ಒಂದು ಬಗೆಯ ಮಾರ್ಪಾಟು: ನೆಲದೊಳಗೇ ಹುದುಗಿ ಬೆಳೆಯುತ್ತದೆ. ಆಹಾರ ಸಂಗ್ರಹಣೆ ಇದರ ಮುಖ್ಯಕಾರ್ಯ. ಇದರಿಂದಾಗಿ ಇದು ಸಾಮಾನ್ಯವಾಗಿ ದಪ್ಪವಾಗಿಯೂ ರಸಭರಿತವಾಗಿಯೂ ಇರುತ್ತದೆ. ಸಸ್ಯಗಳ ಸಂತಾನಾ ಭಿವೃದ್ಧಿಯಲ್ಲೂ ಇದು ಪಾಲುಗೊಳ್ಳುತ್ತದೆ. ಗೆಡ್ಡೆಯ ಬಾಹ್ಯ ರೂಪ ಕಾಂಡದ ರಚನೆಗಿಂತ ಎಷ್ಟು ಭಿನ್ನವಾಗಿರುತ್ತದೆಂದರೆ ಇದನ್ನು ಕಾಂಡ ಎಂದು ಹೇಳಲು ಇದರ ಒಳರಚನೆಯನ್ನು ಪರೀಕ್ಷಿಸ ಬೇಕಾಗುತ್ತದೆ. ಗೆಡ್ಡೆಯಲ್ಲಿ ಹಲವಾರು ರೂಪಗಳಿವೆ. ಇವುಗಳಲ್ಲಿ ಮುಖ್ಯ ವಾದವು ಪ್ರಕಂದ (ರೈಜೋಮ್), ಟ್ಯೂಬರ್, ಬಲ್ಬ್‌ ಮತ್ತು ಕಂದುಗಳು (ಕಾರ್ಮ್).

ಪ್ರಕಂದಸಂಪಾದಿಸಿ

 
ಶುಂಠಿ

ನೆಲದ ಒಳಗಡೆ ಭೂಮಿಗೆ ಸಮಾಂತರವಾಗಿ ಬೆಳೆ ಯುವ ಗೆಡ್ಡೆಯಿದು. ಇದರ ಮೇಲೆ ಗೆಣ್ಣು ಮತ್ತು ಅಂತರ್ಗೆಣ್ಣುಗಳಿವೆ. ಗೆಣ್ಣುಗಳ ಸುತ್ತ ಸಣ್ಣ ಸಣ್ಣ ಹುರುಪೆ ರೂಪದ ಎಲೆಗಳಿವೆ. ಎಲೆಗಳ ಕಂಕುಳುಗಳಲ್ಲಿ ಕಂಡುಬರುವ ಕಂಕುಳು ಮೊಗ್ಗುಗಳು ಬೆಳೆದು ಹೊಸ ಕಾಂಡವನ್ನು ಉತ್ಪತ್ತಿ ಮಾಡಬಹುದು. ಉದಾಹರಣೆ: ಅರಿಸಿನ, ಶುಂಠಿ ಇತ್ಯಾದಿ.

ಟ್ಯೂಬರ್ಸಂಪಾದಿಸಿ

ಇದು ಕೂಡ ಭೂಮಿಗೆ ಸಮಾಂತರವಾಗಿ ನೆಲದ ಒಳಗೆ ಬೆಳೆಯುವ ಗೆಡ್ಡೆ. ಆಲೂಗೆಡ್ಡೆ ಉತ್ತಮ ಉದಾಹರಣೆ. ಆಲೂಗೆಡ್ಡೆ ಗಿಡ ಬೆಳೆಯುತ್ತಿರುವಾಗ ಗಿಡದ ತಳಭಾಗದ ಕಾಂಡದ ಕೆಲವು ಕವಲುಗಳು ತುದಿಯಲ್ಲಿ ಸ್ವಲ್ಪ ಉಬ್ಬಿರುತ್ತವೆ. ಇವೇ ಮುಂದೆ ಟ್ಯೂಬರುಗಳಾಗುತ್ತವೆ. ಗೆಡ್ಡೆಯ ಮೇಲ್ಭಾಗದಲ್ಲಿ ಹಲವಾರು ಕಂಕುಳು ಮೊಗ್ಗುಗಳಿರುತ್ತವೆ. ಇವಕ್ಕೆ ಕಣ್ಣುಗಳು ಎನ್ನುತ್ತಾರೆ. ಇವು ಗೆಡ್ಡೆಯ ಮೇಲೆ ವರ್ತುಲಾಕಾರವಾಗಿ ಜೋಡಣೆಗೊಂಡಿದ್ದು, ಸಹಜ ಕಾಂಡದ ಮೇಲಿನ ಎಲೆಗಳ ಜೋಡಣೆಯನ್ನು ಹೋಲುತ್ತವೆ. ಪ್ರತಿಯೊಂದು ಕಣ್ಣಿನಲ್ಲೂ ಸಣ್ಣ ಸಣ್ಣ ಎಲೆಗಳು ಮತ್ತು ಅವುಗಳ ಹತ್ತಿರ ಪಾಶರ್ವ್‌ಮೊಗ್ಗುಗಳು ಇರುತ್ತವೆ. ಆಲೂಗೆಡ್ಡೆಯನ್ನು ನೆಡುವಾಗ ಕೊನೆಯ ಪಕ್ಷ ಒಂದೊಂದು ಕಣ್ಣಿರುವ ಚೂರುಗಳಾಗಿ ಕತ್ತರಿಸಿ ನೆಡುತ್ತಾರೆ. ಈ ಚೂರುಗಳಿಂದ ಒಂದು ಅಥವಾ ಹೆಚ್ಚು ಕಾಂಡಗಳು ಹೊರಡುತ್ತವೆ. ಪುರ್ತಿಯಾಗಿ ಒಂದು ಗೆಡ್ಡೆಯನ್ನೇ ನೆಟ್ಟಾಗ ತುದಿಮೊಗ್ಗಿನಿಂದ ಮಾತ್ರ ಕಾಂಡ ಹೊರಡುತ್ತದೆ.

 
ಆಲುಗೆಡ್ದೆ

ಆಲೂಗೆಡ್ಡೆಯ ಒಳರಚನೆಯಲ್ಲಿ ಮೆಡ್ಯುಲ, ಪ್ರೋಕೇಂಬಿಯಮ್ ಮತ್ತು ಕಾರ್ಟೆಕ್ಸ್‌ ಎಂಬ ಮೂರು ಭಾಗಗಳನ್ನು ಗುರುತಿಸಬಹುದು. ಎಳೆಯ ಆಲೂಗೆಡ್ಡೆಯಲ್ಲಿ ಕಾಂಡದ ಒಳರಚನೆಯಿದ್ದರೂ ಇದು ಬಲಿಯುತ್ತ ಹೋದಂತೆ ಎಂಡೋಡರ್ಮಿಸ್ ಪದರ ಕಾಣಿಸದಾಗುತ್ತದೆ. ಗೆಡ್ಡೆಯ ಎಪಿಡರ್ಮಿಸಿನ ಆಯುಷ್ಯವೂ ಬಹಳ ಕಡಿಮೆ. ಗೆಡ್ಡೆ ದೊಡ್ಡದಾದಂತೆಲ್ಲ ಎಪಿಡರ್ಮಿಸಿನ ಕೋಶಗಳು ಕೆಳಭಾಗದಲ್ಲಿ ಫೆಲೊಜನ್ ಎಂಬ ಪದರವನ್ನು ಉತ್ಪತ್ತಿ ಮಾಡುತ್ತವೆ. ಫೆಲೊಜನ್ ಪದರದಿಂದ 10-15 ಕೋಶಗಳಷ್ಟು ದಪ್ಪದಾದ ಪೆರಿಡರ್ಮ್ ಅಂಗಾಂಶ ಹುಟ್ಟುತ್ತದೆ. ಹೀಗೆ ಫೆಲೊಜನ್ ಪದರ ಗೆಡ್ಡೆಯ ಆಯುಷ್ಯ ಪುರ್ತಿ ಬದುಕಿದ್ದು, ಗೆಡ್ಡೆ ಬೆಳೆದಂತೆಲ್ಲ ಹೊರಗಡೆ ಹರಿದು ಹೋಗುವ ಕೋಶಗಳ ಬದಲಿಗೆ ಹೊಸ ಪೆರಿಡರ್ಮ್ ಕೋಶಗಳನ್ನು ಉತ್ಪತ್ತಿಮಾಡಿ ಗೆಡ್ಡೆ ಬೆಳೆಯಲು ಸಹಾಯಕವಾಗುತ್ತದೆ.

ಬಲ್ಬ್‌ಸಂಪಾದಿಸಿ

 
ಸುವರ್ಣ ಗೆಡ್ದೆ

ರಸಭರಿತ ಎಲೆಗಳಿಂದ ಆವೃತವಾಗಿರುವ ಒಂದು ಕುಳ್ಳುಕಾಂಡ. ಇದು ಕಾಂಡದ ಮೇಲಿರುವ ಎಲೆಗಳಂತೆ ರಸಭರಿತ ಎಲೆಗಳಲ್ಲಿ ಕೂಡ ಕಂಕುಳು ಮೊಗ್ಗುಗಳು ಇರುತ್ತವೆ. ಈ ಬಗೆಯ ಗೆಡ್ಡೆ ಏಕದಳ ಸಸ್ಯಗಳಲ್ಲಿ ಮಾತ್ರ ಕಾಣಬರುತ್ತದೆ. ಉದಾಹರಣೆ: ಈರುಳ್ಳಿ, ಬೆಳ್ಳುಳ್ಳಿ, ಲಿಲಿ, ಟ್ಯೂಲಿಪ್ ಮುಂತಾದವು.

ಈರುಳ್ಳಿ ಗೆಡ್ಡೆಯ ಒಳರಚನೆಯನ್ನು ಗಮನಿಸಿದರೆ ಕಾಂಡ ಬಲು ಚಿಕ್ಕದಾಗಿದ್ದು ಅದರ ಸುತ್ತ ಎಲೆಗಳು ವರ್ತುಲಾಕಾರವಾಗಿ ಜೋಡಣೆಗೊಂಡಿರುವುದನ್ನು ಕಾಣಬಹುದು. ಕಾಂಡದ ಕೆಳಭಾಗದಲ್ಲಿ ಕೆಲವು ಆಗಂತುಕ ಬೇರುಗಳು ಇವೆ. ಗೆಡ್ಡೆ ಬಲಿತಂತೆಲ್ಲ ಹೊರಗಿನ ಎಲೆಗಳು ಒಣಗಿ ಒಳಗಿನ ರಸಭರಿತ ಎಲೆಗಳನ್ನು ಸಂರಕ್ಷಿಸುತ್ತವೆ.

ಕಂದುಸಂಪಾದಿಸಿ

ಇದು ಪ್ರಕಂದವನ್ನು ಹೋಲುವ ಗೆಡ್ಡೆ. ಪ್ರಕಂದ ಸಮಾಂತರವಾಗಿ ಬೆಳೆದರೆ ಇದು ಮೇಲ್ಮುಖವಾಗಿ ಬೆಳೆಯುತ್ತದೆ. ಇದರ ಒಳ ರಚನೆಯನ್ನು ಪರೀಕ್ಷಿಸಿದರೆ ಕಾರ್ಟಿಕಲ್ ಪದರದಲ್ಲಿ ನಾಳಕೂರ್ಚ ಗಳು ಹರಡಿರುವುದನ್ನು ಗಮನಿಸ ಬಹುದು. ಆಗಂತುಕ ಬೇರುಗಳು ಕಂದಿನ ತಳಭಾಗದಲ್ಲಿರುತ್ತವೆ. ಹೊರಗಡೆ ಪೊರೆಯಂತಿರುವ ಎಲೆಗಳಿವೆ. ಎಲೆಗಳು ಕಂದಿನ ಮೇಲೆ ವರ್ತುಲಾಕಾರವಾಗಿ ಜೋಡಣೆಗೊಂಡಿರುತ್ತವೆ. ಬಲ್ಬಿಗೂ ಕಂದಿಗೂ ಒಂದು ಮುಖ್ಯ ವ್ಯತ್ಯಾಸವೆಂದರೆ, ಕಂದುಗಳಲ್ಲಿ ಕಾಂಡದ ಭಾಗ ಹೆಚ್ಚು, ಎಲೆಗಳ ಸಂಖ್ಯೆ ಕಡಿಮೆ ಮತ್ತು ಅಂತರ್ಗೆಣ್ಣುಗಳ ಉದ್ದ ಹೆಚ್ಚು, ಆರ್ಕಿಡೇಸೀ ಕುಟುಂಬದ ಸಸ್ಯಗಳಲ್ಲಿ ಕಂದನ್ನು ಕಾಣಬಹುದು.

ಎಲ್ಲ ರೀತಿಯ ಗೆಡ್ಡೆಗಳೂ ಆಹಾರವನ್ನು ಶೇಖರಿಸುವುದರಿಂದ ಇವನ್ನು ಆಹಾರವಾಗಿ ಉಪಯೋಗಿಸುವರು. ಉದಾ: ಆಲೂಗಡ್ಡೆ. ಕಾಯಜ ಪ್ರಜನನದ (ವೆಜೆಟೇಟಿವ್ ರಿಪ್ರೊಡಕ್ಷನ್) ಮುಖ್ಯ ಸಾಧನಗಳಾಗಿಯೂ ಇವನ್ನು ಬಳಸಬಹುದು.

ಬಾಹ್ಯ ಸಂಪರ್ಕಗಳುಸಂಪಾದಿಸಿ

"https://kn.wikipedia.org/w/index.php?title=ಗೆಡ್ಡೆ&oldid=537521" ಇಂದ ಪಡೆಯಲ್ಪಟ್ಟಿದೆ