ನೆಲ್ಲಿಕಾರು
ಕರಾವಳಿ ತೀರದ ಪ್ರಮುಖ ಜಿನ ಕ್ಷೇತ್ರಗಳಲ್ಲಿ ನೆಲ್ಲಿಕಾರು ಕೂಡ ಒಂದು. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಈ ಪುಟ್ಟ ಗ್ರಾಮಕ್ಕೆ ಕಾರ್ಕಳ- ಮೂಡುಬಿದಿರೆ ಹತ್ತಿರದ ಪಟ್ಟಣಗಳಾಗಿವೆ.[೧][೨] ಕಾರ್ಕಳ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಈ ಪ್ರದೇಶವು ಮೂಡಬಿದಿರೆ- ಮೂಲ್ಕಿ ವಿಧಾನಸಭೆ ಕ್ಷೇತ್ರಕ್ಕೊಳಪಡುತ್ತದೆ ಮತ್ತು ಲೋಕಸಭಾ ಚುನಾವಣೆಗೆ ಮಂಗಳೂರು ಕ್ಷೇತ್ರಕ್ಕೆ ಒಳಪಡುತ್ತದೆ. ಗ್ರಾಮದ ಪಿನ್ ಕೋಡ್ ೫೭೪೧೦೭ ಆಗಿದೆ.[೩] ಮಂಗಳೂರು ತಾಲೂಕಿನ ನೆಲ್ಲಿಕಾರು ಕುದುರೆಮುಖ ಪರ್ವತ ಶ್ರೇಣಿಯ ಹತ್ತಿರದ ಹಳ್ಳಿಯಾಗಿದೆ.[೪] ನೆಲ್ಲಿಕಾರಿನ ಹೆಸರು ಜಿಲ್ಲೆಯ ಒಳಗೂ ಹೊರಗೂ ಹರಡಿದೆ. ಇದಕ್ಕೆ ಮುಖ್ಯಕಾರಣ ಸಮೀಪದ ಗುಡ್ಡಗಳಲ್ಲಿ ದೊರೆಯುವ ಒಂದು ವಿಶಿಷ್ಠ ರೀತಿಯ ಕಪ್ಪುಶಿಲೆಯಾಗಿದೆ. ಕರ್ನಾಟಕದ ನೆಲ್ಲಿಕಾರು ಬಂಡೆಗಳನ್ನು ಕೃಷ್ಣ ಶಿಲಾ ಎಂದು ಕರೆಯಲಾಗುತ್ತದೆ ಏಕೆಂದರೆ ಅವುಗಳ ಬಣ್ಣವು ಕೃಷ್ಣನಂತೆಯೇ ಇರುತ್ತದೆ. ಇದು ನೆಲ್ಲಿಕಾರು ಶಿಲೆಯೆಂದೇ ಪ್ರಸಿದ್ಧಿಯಾಗಿದೆ. ಈ ಬಂಡೆಗಳನ್ನು ದಕ್ಷಿಣ ಭಾರತದಾದ್ಯಂತ ಇರುವ ದೇವಾಲಯಗಳಲ್ಲಿ ದೇವರು ಮತ್ತು ದೇವತೆಗಳ ವಿಗ್ರಹಗಳನ್ನು ಕೆತ್ತಲು ಬಳಸಲಾಗುತ್ತದೆ.[೫]
ನೆಲ್ಲಿಕಾರಿನ ಇತಿಹಾಸ
ಬದಲಾಯಿಸಿನೆಲ್ಲಿಕಾರಿನ ಹಿಂದಿನ ಹೆಸರು ಅಮಲಕಪುರವಾಗಿತ್ತು.[೬] ಊರ ಮಧ್ಯ ವಿಶಾಲ ಪ್ರಾಂಗಣದಲ್ಲಿ ಭಗವಾನ್ ಅನಂತನಾಥ ಸ್ವಾಮಿಯ ದಿವ್ಯ ಬಸದಿಯಿದೆ. ಇದು ಕ್ರಿ.ಶ ೧೪೨೫ ರ ವೇಳೆಗೆ ಸ್ಥಾಪಿತವಾದ ಬಸದಿಯೆಂದು ಇತಿಹಾಸಕಾರರು ಹೇಳುತ್ತಾರೆ. ಮುಖ್ಯವಾಗಿ ವಿಜಯನಗರ ವಾಸ್ತುಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ. ಈ ಶಿಲಾ ಬಸದಿಯು ಎರಡು ಅಂತಸ್ತಿನ ಕಟ್ಟಡವಾಗಿದೆ. ಗರ್ಭಗೃಹದಲ್ಲಿ ವಿರಾಜಮಾನರಾದ ಭಗವಾನ್ ಅನಂತನಾಥ ಸ್ವಾಮಿಯ ಮೂಲವಿಗ್ರಹವು ಹೊಯ್ಸಳ ಶೈಲಿಯಲ್ಲಿದೆ.
ಕಲ್ಯಾಣಕೀರ್ತಿ ಎಂಬ ಜೈನ ಕವಿಯು ಹದಿನಾಲ್ಕನೆಯ ಶತಮಾನದಲ್ಲಿ ಅತಿಶಯ ಬಸದಿಯನ್ನು ನಿರ್ಮಿಸಿದನೆಂದು ಹೇಳಲಾಗುತ್ತದೆ. ದೇವಾಲಯದ ಎದುರಿನ ಹುತ್ತದಲ್ಲಿ ಬ್ರಹ್ಮಯಕ್ಷನ ಮೂರ್ತಿಯು ಕಂಡುಬಂದಿತು ಎಂಬುದು ಇತಿಹಾಸ.[೭] ಈ ವಿಗ್ರಹವನ್ನು ದೇವಾಲಯದಲ್ಲಿ ಪ್ರಧಾನ ದೇವರಾದ ಅನಂತಸ್ವಾಮಿಯೊಂದಿಗೆ ಸ್ಥಾಪಿಸಲಾಗಿದೆ. ಬಸದಿಯ ವಿನ್ಯಾಸ ಮತ್ತು ಮಹತ್ವವು ಜೈನರಿಗೆ ಮಾತ್ರವಲ್ಲದೆ ಇತರರಿಗೂ ಪವಿತ್ರ ಸ್ಥಳವಾಗಿದೆ. ಇದು ಕಳೆದ ಯುಗಕ್ಕೆ ಪ್ರಬಲವಾದ ನಾಸ್ಟಾಲ್ಜಿಕ್ ಭಾವನೆಯನ್ನು ಉಂಟುಮಾಡುತ್ತದೆ.[೮]
ರಥೋತ್ಸವ
ಬದಲಾಯಿಸಿನೆಲ್ಲಿಕಾರು ರಥೋತ್ಸವವು ತನ್ನದೇ ಆದ ವೈಶಿಷ್ಟ್ಯತೆಯಿಂದ ಕೂಡಿದ್ದು, ಅನೂಚಾನವಾಗಿ ನಡೆದುಕೊಂಡು ಬಂದಿದೆ.[೯] ನಾಡಿನ ಜೈನ ಮತ್ತು ಜೈನೇತರರೂ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಪ್ರತೀ ಸಂವತ್ಸರದ ಆದಿ ಪಾಡ್ಯದ ದಿನ ಧ್ವಜಾರೋಹಣವಾಗಿ ಷಷ್ಠಿಯ ತನಕ ವಿದ್ಯುಕ್ತವಾಗಿ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ರಥೋತ್ಸವದ ಮೊದಲ ದಿನ ಅಂದರೆ ಪಂಚಮಿಯಂದು ಭಗವಾನ್ ಚಂದ್ರಪ್ರಭ ಸ್ವಾಮಿಗೆ ಅಟ್ಟಳಿಗೆಯ ಮೇಲೆ ಅಭಿಷೇಕ ಹಾಗೂ ನಿರ್ದಿಷ್ಟವಾದ ಕೆಲವು ಕಟ್ಟೆಗಳಲ್ಲಿ ಕಟ್ಟೆಪೂಜೆ ಉತ್ಸವವು ನಡೆಯುತ್ತದೆ. ಬಸದಿಯ ಒಳಾಂಗಣದಲ್ಲಿ ಕ್ಷೇತ್ರಪಾಲರ ಸ್ಥಂಭವಿದೆ. ಹೊರಗಿನ ವಿಶಾಲ ಪ್ರಾಂಗಣದ ನಾಲ್ಕೂ ಕಡೆಯೂ ಬಸದಿಗೆ ರಕ್ಷಣೆಯ ಕೋಟೆಯಂತೆ ಶ್ರಾವಕರ ಮನೆಗಳಿವೆ.
ನೆಲ್ಲಿಕಾರಿನ ಪ್ರಮುಖರು
ಬದಲಾಯಿಸಿಕಲ್ಯಾಣಕೀರ್ತಿ ಎಂಬ ಯತಿವರ್ಯರು ಇಲ್ಲಿ ಕೈಂಕರ್ಯ ನಡೆಸಿದ್ದರು.[೧೦] ಎಲೆಮರೆಯ ಕಾಯಿಯಂತೆ ಇದ್ದು ಕಾವ್ಯಗಂಗೆಯನ್ನು ಹರಿಸಿದ ಕವಿ ಕಲ್ಯಾಣಕೀರ್ತಿ ನೆಲ್ಲಿಕಾರಿನವರು. ನೆಲ್ಲಿಕಾರಿನ ಬಸದಿ ಇವರ ಕೊಡುಗೆಯಾಗಿದೆ. ಕಲ್ಯಾಣಕೀರ್ತಿಯವರು ತಾಲೂಕಿಗೆ ಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಪ್ರಥಮ ಕನ್ನಡ ಕವಿಯಾಗಿದ್ದರು. ಈತನ ಮೊದಲ ಕಾವ್ಯ ಜಿನಯಜ್ಞ ಫಲೋದಯ ಆಗಿದೆ. ಈ ಕಾವ್ಯ ಕ್ರಿ.ಶ ೧೪೨೮ ರಲ್ಲಿ ಪೂರ್ಣವಾಗಿತ್ತು. ಹಾಗೆಂದು ಕವಿಯೇ ತನ್ನ ಕಾವ್ಯದ ಕೊನೆಯಲ್ಲಿ ತಿಳಿಸಿದ್ದಾರೆ.
ಶಾಸ್ತ್ರಸಾರ ಸಮುಚ್ಚಯ, ಕನ್ನಡಟೀಕು ಬರೆದ ಮುನಿ ಮಾಘನಂದ್ಯಾಚಾರ್ಯರು ಇಲ್ಲಿಯ ಚೈತ್ಯವಾಸಿಗಳಾಗಿದ್ದರು. ಈ ಗ್ರಂಥದಲ್ಲಿ ತಮ್ಮ ಪೂರ್ವವಿಚಾರವನ್ನು ತಿಳಿಸಿರುವುದಿಲ್ಲ. ಆದರೆ ಗ್ರಂಥವನ್ನು ನೆಲ್ಲಿಕಾರಿನ ಬಸದಿಯಲ್ಲಿ ಬರೆದಿದ್ದಾಗಿ ತಿಳಿಸುತ್ತಾರೆ. ಹೊಂಬುಜ ಕ್ಷೇತ್ರದ ಹಿಂದಿನ ಗುರುಗಳಾದ ದೇವೇಂದ್ರಕೀರ್ತಿ ಸ್ವಾಮಿಗಳು, ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಗುರು ಶ್ರೀ ಚಾರುಕೀರ್ತಿ ಸ್ವಾಮಿಗಳವರು ನೆಲ್ಲಿಕಾರಿನವರು. ನೆಲ್ಲಿಕಾರಿನ ಗಣ್ಯರಲ್ಲಿ ದಿವಂಗತ ಎನ್.ಎಸ್.ಜೈನಿಯವರು ಒಬ್ಬ ಶಾಲೆಯ ಶಿಕ್ಷಕ ವೃತ್ತಿಯನ್ನು ನಡೆಸುತ್ತಿದ್ದರು ಜೊತೆಗೆ ಇವರು ಹಿಂದಿ, ಮರಾಠಿ, ಸಂಸ್ಕೃತ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದರು. ಎನ್.ಎಸ್.ಜೈನಿಯವರ ಧರ್ಮಪತ್ನಿ ದಿವಂಗತ ರಾಧಮ್ಮನವರು ಜೈನ ಮಹಿಳೆ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದು ಹಲವಾರು ಭಜನೆ ಕೀರ್ತನೆಗಳನ್ನು ಬರೆದಿದ್ದರು ಹಾಗೂ ವರ್ಧಮಾನಚರಿತ್ರೆಯನ್ನು ಸಾಂಗತ್ಯದಲ್ಲಿ ಬರೆದಿದ್ದರು. ಚಂದಯ್ಯ ಶಾಸ್ತ್ರಿಯವರು ನೆಲ್ಲಿಕಾರಿನ ಬಸ್ತಿಯಲ್ಲಿ ಪ್ರತಿನಿತ್ಯ ಶಾಸ್ತ್ರ ಪಠಣವನ್ನು ಮಾಡಿ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿದವರು ಹಾಗೂ ಭಜನೆ ಕೀರ್ತನೆಗಳನ್ನು ರಚಿಸಿದವರು. ಇನ್ನು ಯಾದವರು ಪ್ರಖಾಂಡ ಪಂಡಿತರಾಗಿದ್ದು ಧವಳ ಗ್ರಂಥದ ಅನುವಾದ ಕಾರ್ಯದಲ್ಲಿ ತೊಡಗಿಸಿಕೊಂಡವರಾಗಿದ್ದರು. ಹಲವಾರು ಭಕ್ತಿಗೀತೆಗಳನ್ನು ರಚಿಸಿ ಹಾಡುವುದು ಮಾತ್ರವಲ್ಲ ಮಕ್ಕಳಿಗೆ ಸಂಗೀತ ಪಾಠವನ್ನು ಕೂಡ ಹೇಳಿಕೊಟ್ಟು ಮಕ್ಕಳಲ್ಲಿ ಜಿನ ಭಕ್ತಿ ಉಂಟು ಮಾಡಿದವರಾಗಿದ್ದರು. ಹೀಗೆ ಒಟ್ಟಿನಲ್ಲಿ ನೆಲ್ಲಿಕಾರಿನಲ್ಲಿ ಧರ್ಮ ಮತ್ತು ಜ್ಞಾನ ಪ್ರಸಾರಕಾರ್ಯವು ನಡೆದಿತ್ತು ಮತ್ತು ಅದು ಈಗಲೂ ನಡೆಯುತ್ತಿದೆ. ನೆಲ್ಲಿಕಾರು, ಶಿಲೆಗಷ್ಟೇ ಅಲ್ಲದೆ ಜೈನ ಸಂಸ್ಕೃತಿ ಹಾಗೂ ಸಾಹಿತ್ಯ ಬೆಳವಣಿಗೆಗೂ ತಾಣವಾಗಿ ಬೆಳೆದು ನಿಂತಿದೆ.
ಉಲ್ಲೇಖಗಳು
ಬದಲಾಯಿಸಿ- ↑ https://www.jainheritagecentres.com/blogs/heritage-highlight/nellikar-vestiges-of-a-bygone-era/
- ↑ https://villageinfo.in/karnataka/dakshina-kannada/mangalore/nellikaru.html
- ↑ https://news.abplive.com/pincode/karnataka/dakshina-kannada/nellikar-pincode-574107.html
- ↑ https://karnataka.census.gov.in/DCHB-PART-A/575.Dakshina%20Kannada.pdf
- ↑ https://thetatva.in/art-culture/use-of-karnatakas-krishna-shila/31343/
- ↑ https://www.jainheritagecentres.com/blogs/heritage-highlight/nellikar-vestiges-of-a-bygone-era/
- ↑ https://kalpa.news/do-you-know-the-specialty-of-nellikaru-jain-basadi-special-article-by-rani-isiri-jain/
- ↑ https://www.jainheritagecentres.com/blogs/heritage-highlight/nellikar-vestiges-of-a-bygone-era/
- ↑ https://www.herenow4u.net/index.php?id=144701
- ↑ https://kalpa.news/do-you-know-the-specialty-of-nellikaru-jain-basadi-special-article-by-rani-isiri-jain/