ಧೀರೇಂದ್ರ ಗೋಪಾಲ್

ಭಾರತೀಯ ನಟ

ಧೀರೇಂದ್ರ ಗೋಪಾಲ್ (ಜನನ:ಏಪ್ರಿಲ್ ೧೨,೧೯೪೮ - ಮರಣ:ಡಿಸೆಂಬರ್ ೨೫,೨೦೦೦) ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲೊಬ್ಬರು. ಧೀರೇಂದ್ರ ಗೋಪಾಲ್ ಅಂದರೆ ಮನಮೋಹಕವಾಗಿ ಸಂಭಾಷಣೆ ಹೇಳುತ್ತಿದ್ದ ಒಂದು ಸುಂದರ ಕಲಾಭಿವ್ಯಕ್ತಿ ನಮ್ಮ ಕಣ್ಣೆದುರು ಬಂದು ನಿಲ್ಲುತ್ತದೆ. ಅವರು ಮಾಡಿದ್ದು ಹೆಚ್ಚು ಖಳ ಪಾತ್ರಗಳು. ಆದರೆ ಅವರ ಪಾತ್ರಗಳ ಹೊರಮುಖದ ಖಳತನವೇನೇ ಇದ್ದರೂ, ಅವರೊಳಗೆ ಅಡಗಿದ್ದ ಅಧ್ಬುತ ಅಭಿನಯ ಪ್ರತಿಭೆ, ಅದು ಹೊರಹೊಮ್ಮಿಸುತ್ತಿದ್ದ ಸಂಭಾಷಣಾ ಚತುರತೆ ಕನ್ನಡ ಕಲಾ ರಸಿಕರನ್ನು ಅಪಾರವಾಗಿ ಸೆಳೆದಿದೆ.

ಧೀರೇಂದ್ರ ಗೋಪಾಲ್
ಜನನಏಪ್ರಿಲ್ ೧೨, ೧೯೪೦
ಹಾಸನ ಜಿಲ್ಲೆಯ ಹೊಳೆನರಸೀಪುರದ ಜೋಡಿಗುಬ್ಬಿ ಗ್ರಾಮ
ಮರಣಡಿಸೆಂಬರ್ ೨೫, ೨೦೦೦
ವೃತ್ತಿರಂಗಭೂಮಿ ಮತ್ತು ಚಲನಚಿತ್ರ ಕಲಾವಿದ

ಧೀರೇಂದ್ರ ಗೋಪಾಲರು ಏಪ್ರಿಲ್ 12, 1940ರಂದು ಹೊಳೆನರಸೀಪುರದ 'ಜೋಡಿಗುಬ್ಬಿ' ಗ್ರಾಮದಲ್ಲಿ ಜನಿಸಿದರು. ಅವರ ಅಂದಿನ ಹೆಸರು ಹೆಚ್.ಎನ್. ಗೋಪಾಲರಾವ್ ಎಂದು.

ರಂಗಭೂಮಿಯಲ್ಲಿ

ಬದಲಾಯಿಸಿ
  • ಧೀರೇಂದ್ರ ಗೋಪಾಲರಿಗೆ ಬಾಲ್ಯದಿಂದಲೂ ಅಭಿನಯ ಕಲೆಯಲ್ಲಿ ಅಪಾರವಾದ ಆಸಕ್ತಿ. ಒಮ್ಮೆ ಶಾಲೆಯಲ್ಲಿ ಅವರ ಏಕಪಾತ್ರಾಭಿನಯವನ್ನು ಕಂಡು ಮೆಚ್ಚಿಕೊಂಡ ಗುಬ್ಬಿ ವೀರಣ್ಣನವರು, ಅವರಿಗೆ ತಮ್ಮ ನಾಟಕ ತಂಡವನ್ನು ಸೇರಲು ಆಹ್ವಾನ ನೀಡಿದರು. 'ವಾಲಿ'ಯ ಪಾತ್ರದ ಮೂಲಕ ರಂಗಭೂಮಿಗೆ ಪದಾರ್ಪಣೆ ಮಾಡಿದವರು, ದೇವೇಂದ್ರ, ದುರ್ಯೋಧನನ ಪಾತ್ರದಿಂದ ಪ್ರಸಿದ್ಧಿ ಪಡೆದರು.
  • ಯುವ ಧೀರೇಂದ್ರ ಗೋಪಾಲರು ‘ಎಚ್ಚಮ ನಾಯಕ’ನ ಪಾತ್ರದಲ್ಲಿ ವಿಜ್ರಂಭಿಸಿದರು. ಅಂದಿನಿಂದ ಅವರು ಹಿಂತಿರುಗಿ ನೋಡಲಿಲ್ಲ. ರಂಗಭೂಮಿಯಲ್ಲಿ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದ ಧೀರೇಂದ್ರ ಗೋಪಾಲರ ನಾಟಕಗಳಲ್ಲಿ. 'ಸರ್ವಮಂಗಳ ನಾಟಕ ಸಭಾ'ದ ಟಿಪ್ಪು ಸುಲ್ತಾನ್ ಪ್ರಖ್ಯಾತಗೊಂಡಿತ್ತು. 'ಮುದುಕನ ಮದುವೆ' ಧೀರೇಂದ್ರ ಗೋಪಾಲರ ಮತ್ತೊಂದು ಪ್ರಸಿದ್ಧ ನಾಟಕ. .

ಚಲನಚಿತ್ರ ರಂಗದಲ್ಲಿ

ಬದಲಾಯಿಸಿ
  • ಒಮ್ಮೆ ನಿರ್ದೇಶಕ ಸಿ. ವಿ. ಶಿವಶಂಕರ್ ಅವರಿಂದ ಪುಟ್ಟ ಪಾತ್ರವೊಂದಕ್ಕೆ ಆಹ್ವಾನಿತರಾಗಿದ್ದ ಧೀರೇಂದ್ರ ಗೋಪಾಲ್ ಮುಂದೆ ಪುಟ್ಟಣ್ಣ ಕಣಗಾಲರ ‘ನಾಗರಹಾವು’ ಚಿತ್ರದಲ್ಲಿ ಹೆಚ್ಚು ಪರಿಚಿತಗೊಂಡರು. ‘ಪಡುವಾರ ಳ್ಳಿ ಪಾಂಡವರು’ ಚಿತ್ರದಲ್ಲಿನ ಅವರ ಹಳ್ಳಿಯ ಗೌಡನ ಪಾತ್ರದ ನಿರ್ವಹಣೆಯಂತೂ ಕನ್ನಡ ಚಿತ್ರರಂಗದ ಮಹತ್ವದ ಅಭಿವ್ಯಕ್ತಿಗಳಲ್ಲೊಂದು ಎನಿಸುವಂತೆ ಚಿತ್ರರಸಿಕರ ಮನದಲ್ಲಿ ಉಳಿಯುವಂತೆ ಮಾಡಿದೆ.
  • ‘ಪಡುವಾರಳ್ಳಿ ಪಾಂಡವರು’ ಚಿತ್ರದ ಧೀರೇಂದ್ರ ಗೋಪಾಲ್ ಮತ್ತು ಮುಸುರಿ ಕೃಷ್ಣಮೂರ್ತಿ ಜೋಡಿ ಮಾಡಿದ ಮೋಡಿ, ಖಳನಾಯಕನ ಪಾತ್ರ ನಿರ್ವಹಣೆಗಳಿಗೊಂದು ಹೊಸ ಭಾಷ್ಯವನ್ನೇ ಬರೆದಂತದ್ದು. ಮುಂದೆ ಧೀರೇಂದ್ರ ಗೋಪಾಲರು ಹೆಚ್ಚು ಹೆಚ್ಚು ಒಂದೇ ರೀತಿಯ ಖಳ ಪಾತ್ರಗಳಲ್ಲಿಯೇ ಹೆಚ್ಚು ಅಭಿನಯಿಸಿದರು ಎಂಬುದು ನಿಜವಾದರೂ ಅವರ ಭಾವಾಭಿನಯ ಮತ್ತು ಸಂಭಾಷಣಾ ರೀತಿ ಚಿತ್ರರಸಿಕರನ್ನು ಸಾಕಷ್ಟು ಮೋಡಿ ಮಾಡಿತ್ತು ಎಂಬುದಂತೂ ನಿಜ.
  • ಸುಮಾರು 180 ಚಿತ್ರಗಳಲ್ಲಿ ನಟಿಸಿದ ಧೀರೇಂದ್ರ ಗೋಪಾಲರು ಅಭಿನಯಿಸಿದ ಕೆಲವು ಚಿತ್ರಗಳನ್ನು ಹೆಸರಿಸುವುದಾದರೆ ‘ನಾಗರಹಾವು’, ‘ಪಡುವಾರಳ್ಳಿ ಪಾಂಡವರು’, ‘ನಂಜುಂಡಿ ಕಲ್ಯಾಣ’, ‘ಚಕ್ರವ್ಯೂಹ’, ‘ಸಾಹಸ ಸಿಂಹ’, ‘ಖೈದಿ’, ‘ಗಜಪತಿಯ ಗರ್ವಭಂಗ’, ‘ಅಣ್ಣಯ್ಯ’, ‘ಗಡಿಬಿಡಿ ಗಂಡ’ ಮುಂತಾದವು ನೆನಪಾಗುತ್ತವೆ. ಎಸ್. ನಾರಾಯಣ್ ನಿರ್ದೇಶನದ 'ಅಂಜಲಿ ಗೀತಾಂಜಲಿ' ಧೀರೇಂದ್ರ ಗೋಪಾಲರ ಕೊನೆಯ ಚಿತ್ರ.

ಧ್ವನಿಸುರುಳಿಗಳಲ್ಲಿ ಮೂಡಿದ ಪ್ರತಿಧ್ವನಿ

ಬದಲಾಯಿಸಿ

ಧೀರೇಂದ್ರ ಗೋಪಾಲರ ಮತ್ತೊಂದು ಪ್ರಸಿದ್ಧಿಯ ಕ್ಷೇತ್ರವೆಂದರೆ ಅವರ ಧ್ವನಿ ಸುರುಳಿಗಳು. ನಾಡು ಕಂಡ ಅತ್ಯುತ್ತಮ ಸಂಭಾಷಣಾ ಚತುರರಲ್ಲೊಬ್ಬರಾದ ಧೀರೇಂದ್ರ ಗೋಪಾಲರು ತಮ್ಮೀ ಪ್ರತಿಭೆಯನ್ನು ಧ್ವನಿ ಸುರುಳಿ ಗಳಿಗೆ ಸಮರ್ಥವಾಗಿ ಬಳಸಿಕೊಂಡು ಹಲವಾರು ಪ್ರಸಿದ್ಧ ಧ್ವನಿಸುರುಳಿ ಗಳನ್ನು ಮಾರುಕಟ್ಟೆಗೆ ತಂದಿದ್ದರು. ರಾಜಕೀಯ ವಿಡಂಭನಾ ನಿರೂಪಣೆಗಳಿಗಾಗಿ ಅವರೂ ಮೂನ್ನೂರಕ್ಕೂ ಹೆಚ್ಚು ರೀತಿಯ ಧ್ವನಿ ವೈವಿಧ್ಯಗಳನ್ನು ಬಳಸಿದ್ದರು ಎಂದು ಹೇಳಲಾಗಿದೆ.

ಪ್ರಶಸ್ತಿ ಗೌರವಗಳು

ಬದಲಾಯಿಸಿ

ಧೀರೇಂದ್ರ ಗೋಪಾಲರಿಗೆ ಕರ್ನಾಟಕ ನಾಟಕ ಅಕಾಡೆಮಿ ಗೌರವ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿದ್ದವು.

ಕೆಲವು ಕಾಲ ಅನಾರೋಗ್ಯಕ್ಕೊಳಗಾಗಿದ್ದ ಧೀರೇಂದ್ರ ಗೋಪಾಲರು ಡಿಸೆಂಬರ್ ೨೫, ೨೦೦೦ವರ್ಷದಂದು ಈ ಲೋಕವನ್ನಗಲಿದರು. ತಮ್ಮ ಅಪೂರ್ವ ಪ್ರತಿಭೆಯ ಮೂಲಕ ಕಲಾ ಲೋಕದಲ್ಲಿ ಅವರು ತಮ್ಮ ನೆನಪನ್ನು ಉಳಿಸಿಹೋಗಿದ್ದಾರೆ.

ಇವರ ಅಭಿನಯದ ಕೆಲವು ಚಿತ್ರಗಳು

ಬದಲಾಯಿಸಿ
  1. ನಾಗರ ಹಾವು
  2. ಪಡುವಾರಳ್ಳಿ ಪಾಂಡವರು
  3. ಸಾಹಸಸಿಂಹ
  4. ಚಕ್ರವ್ಯೂಹ
  5. ನಂಜುಂಡಿ ಕಲ್ಯಾಣ
  6. ನಾಗ ಕಾಳ ಭೈರವ
  7. ಮುತ್ತಿನಂಥ ಅತ್ತಿಗೆ
  8. ಗಜಪತಿ ಗರ್ವಭಂಗ
  9. ಕಲ್ಯಾಣ ಮಂಟಪ
  10. ಕೆಂಪು ಗುಲಾಬಿ
  11. ಅಣ್ಣಯ್ಯ
  12. ಯಮಲೊಕದಲ್ಲಿ ವೀರಪ್ಪನ್
  13. ತಿಮ್ಮರಾಯ
  14. ಬೊಂಬಾಟ್ ಹೆ೦ಡತಿ
  15. ಹಲೋ ಸಿಸ್ಟರ್
  16. ಚೋರ್ ಗುರು ಚಂಡಳ್ ಶಿಷ್ಯ
  17. ಶ್ರೀ ರಾಮಚಂದ್ರ

ಪ್ರಶಸ್ತಿಗಳು

ಬದಲಾಯಿಸಿ
  • ೧೯೯೮ - ರಾಜ್ಯೋತ್ಸವ ಪ್ರಶಸ್ತಿ.