ಲೋಕಸಭಾ ಕ್ಷೇತ್ರ. ತುಮಕೂರು

ತುರುವೇಕೆರೆ
city
Shankareshvara temple, a Hoysala construction of 1260 AD
Shankareshvara temple, a Hoysala construction of 1260 AD
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆತುಮಕೂರು
Elevation
೭೯೪ m (೨,೬೦೫ ft)
Population
 (2011)
 • Total೧೪,೧೯೪
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (IST)
ಪಿನ್ ಕೋಡ್
572227
Nandi (bull) in the Gangadeshvara temple is made of soap stone
ಶಂಕರೇಶ್ವರ ದೇವಸ್ಥಾನ

ತುರುವೇಕೆರೆ. ಕಲ್ಪತರುನಾಡು ತುಮಕೂರು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರವಾಗಿರುವ ಪಟ್ಟಣ.

ಇತಿಹಾಸಸಂಪಾದಿಸಿ

ದುಮ್ಮನಹಳ್ಳಿ ಎಂಬುದು ದುಮ್ಮಿ ಒಡೆಯರ ಪಾಳೆಯಪಟ್ಟಾಗಿತ್ತು. ಹೊಸಹಳ್ಳಿಯಲ್ಲಿ ಹೊಯ್ಸಳರ ಕಾಲದ ಕಲ್ಲೇಶ್ವರ ದೇವಾಲಯವಿದೆ. ಕಡಸೂರಿನ ಭೈರವ ದೇವಾಲಯ ಪ್ರಸಿದ್ಧವಾದ್ದು. ಮಾಯಸಂದ್ರದಲ್ಲಿ ಮಾಯಮ್ಮ, ಕೊಲ್ಲಾಪುರದಮ್ಮ ದೇವಾಲಯಗಳಿವೆ. ಮಾಯಸಂದ್ರಕ್ಕೆ ಹತ್ತಿರವಿರುವ ರಾಮಸಾಗರದಲ್ಲಿರುವ ವರದರಾಜ ದೇವಾಲಯ ಹೆಸರಾದ್ದು. ನಾಗಲಾಪುರದಲ್ಲಿ ಹೊಯ್ಸಳರ ಕಾಲದ ಪಾಳುಬಿದ್ದಿರುವ ವಿಷ್ಣು ಮತ್ತು ಶಿವ ದೇವಾಲಯಗಳಿವೆ.

ಸಂಪಿಗೆ ತೆಂಗಿನ ತೋಟಗಳಿಗೆ ಪ್ರಸಿದ್ಧ. ಇಲ್ಲಿ ವೆಂಕಟರಮಣಸ್ವಾಮಿ ದೇವಾಲಯವಿದೆ. ಸೂಳೆಕೆರೆಯಲ್ಲಿ ಹೊಯ್ಸಳ ಶೈಲಿಯ ಈಶ್ವರ ದೇವಾಲಯವೂ ವೀರಭದ್ರನ ದೇವಸ್ಥಾನವೂ ಇದೆ. ತಂಡದಲ್ಲಿಯ ಹೊಯ್ಸಳ ಶೈಲಿಯ ಚೆನ್ನಕೇಶವ ದೇವಾಲಯ ಪ್ರಸಿದ್ಧವಾದ್ದು. ಇದಲ್ಲದೆ ಇಲ್ಲಿ ಮಲ್ಲೇಶ್ವರ ಮತ್ತು ಈಶ್ವರ ದೇವಾಲಯಗಳಿವೆ. ಈಶ್ವರ ದೇವಾಲಯ ದ್ರಾವಿಡ ಶೈಲಿಯದು.

ಭೌಗೋಳಿಕ ನೆಲೆಸಂಪಾದಿಸಿ

ದಕ್ಷಿಣದಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು, ನೈಋತ್ಯದಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕು, ಪಶ್ಚಿಮ ಮತ್ತು ಉತ್ತರದಲ್ಲಿ ತಿಪಟೂರು ತಾಲ್ಲೂಕು, ಈಶಾನ್ಯ ಮತ್ತು ಪೂರ್ವದಲ್ಲಿ ಗುಬ್ಬಿ ತಾಲ್ಲೂಕು, ಆಗ್ನೇಯದಲ್ಲಿ ಕುಣಿಗಲ್ ತಾಲ್ಲೂಕು-ಇವು ಈ ತಾಲ್ಲೂಕಿನ ಮೇರೆಗಳು. ತಾಲ್ಲೂಕಿನಲ್ಲಿ ತುರುವೇಕೆರೆ. ದಂಡಿನಶಿವರ, ಮಾಯಸಂದ್ರ ಮತ್ತು ದಬ್ಬೆಘಟ್ಟ ಹೋಬಳಿಗಳಿವೆ. ತುರುವೇಕೆರೆ ಮತ್ತುಅಮ್ಮಸಂದ್ರ ಪಟ್ಟಣಗಳೂ 233 ಗ್ರಾಮಗಳೂ ಇರುವ ಈ ತಾಲ್ಲೂಕಿನ ವಿಸ್ತೀರ್ಣ 770.6ಚ.ಕಿಮೀ. (297 .5 ಮೈ.), ಜನಸಂಖ್ಯೆ ೧,೬೮,೯೯೪ (೨೦೧೧).[೧]

ಮೇಲ್ಮೈ ಲಕ್ಷಣಸಂಪಾದಿಸಿ

ತಾಲ್ಲೂಕು ಅಲೆಯಲೆಯಾಗಿ ಏರಿಳಿಯುವ ಮೈದಾನದಿಂದ ಕೂಡಿದೆ. ಅಲ್ಲಲ್ಲಿ ಎತ್ತರವಾಗಿ ದಟ್ಟವಾಗಿ ಬೆಳೆದ ಮರಗಳ ತೋಪುಗಳುಂಟು. ಬಂಡೆಗಳೂ ಗುಡ್ಡಗಳೂ ವಿರಳ. ತಾಲ್ಲೂಕಿನ ನೆಲ ಸ್ಥೂಲವಾಗಿ ದಕ್ಷಿಣಕ್ಕೆ ಇಳಿಜಾರಾಗಿದೆ. ಇಲ್ಲಿ ಜೀವನದಿಗಳು ಯಾವುವೂ ಇಲ್ಲ. ತುಮಕೂರು ತಾಲ್ಲೂಕಿನ ದೇವರಾಯನ ದುರ್ಗದಲ್ಲಿ ಹುಟ್ಟುವ ಶಿಂಷಾ ನದಿ ನೈಋತ್ಯಾಭಿಮುಖವಾಗಿ ಗುಬ್ಬಿ ತಾಲ್ಲೂಕಿನ ಮೂಲಕ ಹರಿದು, ತುರುವೇಕೆರೆ ತಾಲ್ಲೂಕನ್ನು ಅದರ ಪೂರ್ವಭಾಗದಲ್ಲಿ ಪ್ರವೇಶಿಸಿ, ದಕ್ಷಿಣಾಭಿಮುಖವಾಗಿ ಮುಂದುವರಿದು, ತುರುವೇಕೆರೆಗೆ ನೀರುಣಿಸುವ ನಾಗಹೊಳೆಯನ್ನು ಕಲ್ಲೂರಿನ ಸಮೀಪದಲ್ಲಿ ಕೂಡಿಕೊಂಡು ಕುಣಿಗಲು ತಾಲ್ಲೂಕಿಗೆ ಹರಿಯುತ್ತದೆ. ತುರುವೇಕೆರೆ ತಾಲ್ಲೂಕಿನಲ್ಲಿ ಈ ನದಿ ಹರಿಯುವ ದೂರ ಸು. 14 ಕಿಮೀ.

ಹವಾಗುಣಸಂಪಾದಿಸಿ

ತಾಲ್ಲೂಕಿನ ವಾಯುಗುಣ ಒಟ್ಟಿನಲ್ಲಿ ಹಿತಕರ, ವರ್ಷವನ್ನು ನಾಲ್ಕು ಋತುಗಳಾಗಿ ವಿಂಗಡಿಸಬಹುದು. ಡಿಸೆಂಬರ್‍ನಿಂದ ಫೆಬ್ರುವರಿಯ ವರೆಗೆ ಶುಭ್ರ ಶುಷ್ಕ ಹವೆ. ಮಾರ್ಚ್‍ನಿಂದ ಮೇ ವರೆಗೆ ಬಿಸಿಲು ಅಧಿಕ. ಜೂನ್‍ನಿಂದ ಸೆಪ್ಟೆಂಬರ್‍ವರೆಗೆ ಮುಂಗಾರಿನ ಕಾಲ. ಅಕ್ಟೋಬರ್‍ನಿಂದ ನವೆಂಬರ್‍ವರೆಗಿನದು ಮುಂಗಾರಿನ ಅನಂತರದ ಕಾಲ. ಈ ಕಾಲದಲ್ಲೂ ಮಳೆಯಾಗುತ್ತದೆ. ವಾರ್ಷಿಕ ಸರಾಸರಿ ಮಳೆ 708 .9 ಮಿಮೀ.

ಕೃಷಿ ಮತ್ತು ವಾಣಿಜ್ಯಸಂಪಾದಿಸಿ

ತಾಲ್ಲೂಕಿನಲ್ಲಿ ನೀರಾವರಿಗೆ ಒದಗಿರುವ ಕೆರೆಗಳ ಸಂಖ್ಯೆ 77; ಬಾವಿಗಳು 407 (1966-67). ನಾಲೆಗಳಿಲ್ಲ. ತಾಲ್ಲೂಕಿನಲ್ಲಿ 54,200 ಎಕರೆ ಕೆಂಪು ಮಣ್ಣಿನ ಭೂಮಿ; 10,000 ಎಕರೆ ದಪ್ಪ ಮರಳಿನ ನೆಲ; 10,500 ಎಕರೆ ಮರಳುಬೆರೆತ ಫಲವತ್ತಾದ ಜೇಡಿಮಣ್ಣಿನ ಜಮೀನು. 75,489 ಎಕರೆ ನೆಲ ಕೆಂಪು ಜೇಡಿಮಣ್ಣಿನಿಂದ ಕೂಡಿದ್ದು; 1,500 ಎಕರೆ ಕಪ್ಪುಮಣ್ಣಿನ ಭೂಮಿ. ಈ ತಾಲ್ಲೂಕಿನ ವ್ಯವಸಾಯಯೋಗ್ಯ ಭೂಮಿಯಲ್ಲಿ 1,00,598 ಎಕರೆ ನೆಲ ಸಾಗುವಳಿಗೆ ಒಳಪಟ್ಟಿತ್ತು (1955-66). 1,383 ಎಕರೆಗಳಲ್ಲಿ ಅರಣ್ಯವೂ 43,241 ಎಕರೆಗಳಲ್ಲಿ ಹುಲ್ಲುಗಾವಲೂ ಇದ್ದುವು. 1966-67ರಲ್ಲಿ 51,628 ಎಕರೆ ನೆಲದಲ್ಲಿ ರಾಗಿ, 4,585 ಎಕರೆಗಳಲ್ಲಿ ಬತ್ತ, 4,900 ಎಕರೆಗಳಲ್ಲಿ ಹಾರಕ, 258 ಎಕರೆಗಳಲ್ಲಿ ನವಣೆ, 4,554 ಎಕರೆಗಳಲ್ಲಿ ಹುರುಳಿ, 2,984 ಎಕರೆಗಳಲ್ಲಿ ಅವರೆ, 2,038 ಎಕರೆಗಳಲ್ಲಿ ತೊಗರಿ, 358 ಎಕರೆಗಳಲ್ಲಿ ನೆಲಗಡಲೆ, 80 ಎಕರೆಗಳಲ್ಲಿ ಕಬ್ಬು ಬೆಳೆಯುತ್ತಿದ್ದುವು. ತೆಂಗಿನ ತೋಟಗಳಿಗೆ ಮೀಸಲಾದ ಜಮೀನು 14,275 ಎಕರೆ. ತಾಲ್ಲೂಕಿನಲ್ಲಿ ಪಶುಪಾಲನೆಗೂ ಗಮನ ನೀಡಲಾಗಿದೆ.ತುರುವೇಕೆರೆಯಲ್ಲಿ ತಾಲ್ಲೂಕು ಮಟ್ಟದ ಪಶುವೈದ್ಯಾಲಯವೂ ಮಾಯಸಂದ್ರ,ತಂಡಗ ಮತ್ತು ದಂಡಿನಶಿವರಗಳಲ್ಲಿ ಗ್ರಾಮಮಟ್ಟದ ಪಶುವೈದ್ಯಾಲಯಗಳೂ ಇವೆ. ತುರುವೇಕೆರೆಯಲ್ಲೂ ತಾಲ್ಲೂಕಿನ ಇತರ ಕಡೆಗಳಲ್ಲೂ ಮೀನುಸಾಕಣೆ ನಡೆಯುತ್ತದೆ. ತಾಲ್ಲೂಕಿನ ದೊಡ್ಡ ಕೈಗಾರಿಕೆಯೆಂದರೆ ಸಿಮೆಂಟ್ ತಯಾರಿಕೆ. ದಂಡಿನಶಿವರ ಹೋಬಳಿಯಲ್ಲಿರುವ ಈ ಕಾರ್ಖಾನೆ ತುರುವೇಕೆರೆ ಪಟ್ಟಣದಿಂದ 19/ ಕಿ ಮೀ ದೂರದಲ್ಲಿದೆ. ವಿದ್ಯುತ್ತು, ಕಚ್ಚಾಸಾಮಗ್ರಿ, ಕಾರ್ಮಿಕರ ಸರಬರಾಜು, ಸಾರಿಗೆ-ಈ ಎಲ್ಲ ಸೌಲಭ್ಯಗಳನ್ನೂ ಪಡಿದಿರುವ ಈ ಸ್ಥಳದಲ್ಲಿ ಸಿಮೆಂಟ್ ಕಾರ್ಖಾನೆ 1960ರಲ್ಲಿ ಸ್ಥಾಪಿತವಾಯಿತು.ಕೈಗಾರಿಕೆಗೆ ಅಗತ್ಯವಾದ ಮುಖ್ಯ ಕಚ್ಚಾ ಸಾಮಗ್ರಿಯಾದ ಸುಣ್ಣಕಲ್ಲು ಈ ಸುತ್ತಿನಲ್ಲಿ ಹೇರಳವಾಗಿ ದೊರಕುತ್ತದೆ.

ಸಂಪರ್ಕಸಂಪಾದಿಸಿ

ಬೆಂಗಳೂರು-ಅರಸೀಕೆರೆ ರೈಲುಮಾರ್ಗದ ಒಂದು ನಿಲ್ದಾಣವಾದ ಅಮ್ಮಸಂದ್ರ ಈ ಕಾರ್ಖಾನೆಯ ಈಶಾನ್ಯಕ್ಕೆ 16ಕಿಮೀ. ದೂರದಲ್ಲಿದೆ. ಬೆಂಗಳೂರು-ಹೊನ್ನಾವರ ಹೆದ್ದಾರಿ ಇರುವುದು 18 ಕಿಮೀ. ದೂರದಲ್ಲಿ. ನೇಯ್ಗೆ ಇಲ್ಲಿಯ ಒಂದು ಮುಖ್ಯ ಸಣ್ಣ ಕೈಗಾರಿಕೆ. ಮಾವಿನಕೆರೆ ಒಂದು ಮುಖ್ಯ ನೇಯ್ಗೆ ಕೇಂದ್ರ. ಇಲ್ಲಿಯ ನೇಯ್ಗೆ ಬಟ್ಟೆಗಳು ಪ್ರಸಿದ್ಧವಾಗಿವೆ. ಮುನಿಯೂರು, ದಂಡಿನಶಿವರ ಮತ್ತು ಮಾವಿನಕೆರೆ ಗ್ರಾಮಗಳಲ್ಲಿ ಹತ್ತಿ ಮತ್ತು ರೇಷ್ಮೆ ನೇಕಾರರ ಸಹಕಾರ ಸಂಘಗಳಿವೆ.

ಶೈಕ್ಷಣಿಕಸಂಪಾದಿಸಿ

ತಾಲ್ಲೂಕಿನಲ್ಲಿ 138 ಕಿರಿಯ ಪ್ರಾಥಮಿಕ ಮತ್ತು 30 ವಿಸ್ತøತ ಪ್ರಾಥಮಿಕ ಶಾಲೆಗಳೂ 7 ಮಾದರಿ ಮಾಧ್ಯಮಿಕ ಶಾಲೆಗಳೂ (1968) ಎರಡು ಪ್ರೌಢಶಾಲೆಗಳೂ (1966-67) ಇವೆ. ತಾಲ್ಲೂಕು ಕೇಂದ್ರದಲ್ಲಿ ಹೆರಿಗೆ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯಕೇಂದ್ರವೂ ಮಾಯಸಂದ್ರ, ದಂಡಿನಶಿವರ, ಬಾಣಸಂದ್ರ, ತಂಡಗ ಮುಂತಾದೆಡೆಗಳಲ್ಲಿ ಔಷಧಾಲಯಗಳೂ ಇವೆ.

ಪಟ್ಟಣಸಂಪಾದಿಸಿ

ನಿರ್ಮಾಣಸಂಪಾದಿಸಿ

ತುರುವೇಕೆರೆ ಪಟ್ಟಣ ರಾಷ್ಟ್ರೀಯ ಹೆದ್ದಾರಿ ೧೫೦ಎ ನಲ್ಲಿ .ಮೈಸೂರಿನಿಂದ ೧೧೦ ಕಿ ಮೀ ದೂರದಲ್ಲಿದೆ ತುರುವೇಕೆರೆ ಪಟ್ಟಣ ತಾಲ್ಲೂಕಿನ ಕೇಂದ್ರ. ಇಲ್ಲೊಂದು ಪುರಸಭೆ ಇದೆ. ಜನಸಂಖ್ಯೆ 14.194 (2011). 13 ನೆಯ ಶತಮಾನದ ನಡುಗಾಲದಲ್ಲಿ ಇದನ್ನು ಹೊಯ್ಸಳ ದೊರೆ 3ನೆಯ ನರಸಿಂಹನ ಹೆಸರಿನಲ್ಲಿ ಸರ್ವಜ್ಞ ಶ್ರೀ ವಿಜಯ ನರಸಿಂಹ ಎಂಬ ಅಗ್ರಹಾರವಾಗಿ ಆ ದೊರೆಯ ದಂಡನಾಯಕ ಸೋಮಣ್ಣ ದಣ್ಣಾಯಕ ನಿರ್ಮಿಸಿದನೆಂದು ಹೇಳಲಾಗಿದೆ. ತಿರುಮಕೂಡ್ಲು ನರಸೀಪುರ ತಾಲ್ಲೂಕಿನಲ್ಲಿರುವ ಸೋಮನಾಥಪುರವನ್ನು ನಿರ್ಮಿಸಿದವನೂ ಇವನೇ ಎಂದು ತಿಳಿದುಬರುತ್ತದೆ. ಈ ಪಟ್ಟಣಕ್ಕೆ ತುರುವೇಕೆರೆ ಎಂಬ ಹೆಸರು ಬಂದಿರುವುದಕ್ಕೆ ಇದರ ಉತ್ತರಕ್ಕಿರುವ ಈ ಹೆಸರಿನ ಕೆರೆಯೇ ಕಾರಣ. 16 ನೆಯ ಶತಮಾನದಲ್ಲಿ ಇದನ್ನು ಹಾಗಲವಾಡಿಯ ಸಾಳನಾಯಕ ಗೆದ್ದುಕೊಂಡು ಇದರ ಆಡಳಿತವನ್ನು ತನ್ನ ಸೋದರರಾದ ಚಿಕ್ಕನಾಯಕ ಮತ್ತು ಅಣ್ಣೇನಾಯಕರಿಗೆ ವಹಿಸಿಕೊಟ್ಟನೆಂದು ಕಾಣುತ್ತದೆ. ಇವರು ಇಲ್ಲಿಯ ಹೊರಕೋಟೆಯನ್ನು ನಿರ್ಮಿಸಿದರಲ್ಲದೆ ಕೆರೆಯನ್ನು ವಿಸ್ತರಿಸಿದರು. ಇನ್ನೂ ಹಲವು ಕಾಮಗಾರಿಗಳನ್ನು ನಡೆಸಿದರು. 1676 ರಲ್ಲಿ ಮೈಸೂರು ದೊರೆ ಚಿಕ್ಕದೇವರಾಯ ಇದನ್ನು ವಶಪಡಿಸಿಕೊಂಡ. ಇಲ್ಲಿ ಪೂರ್ವ ತುದಿಯಲ್ಲಿ ಬಸವನ ಗುಡಿಯೊಂದಿದೆ. ಇದರ ಮುಂದೆ ಇರುವ ಎರಡು ಕಲ್ಲಿನ ಕಂಬಗಳ ಮೇಲೆ ಅಡ್ಡಲಾಗಿರುವ ತೊಲೆಯಲ್ಲಿ ಕಬ್ಬಿಣದ ಬಳೆಗಳಿವೆ. ತುರುವೇಕೆರೆ ಒಂದು ಕಾಲದಲ್ಲಿ ಹತ್ತಿಯ ವ್ಯಾಪಾರದ ಕೇಂದ್ರವಾಗಿತ್ತೆಂದೂ ಊರಿನ ಈ ಭಾಗಕ್ಕೆ ಅರಳೇಪೇಟೆ ಎಂಬ ಹೆಸರಿತ್ತೆಂದು ಇಲ್ಲಿಗೆ ಬಂದ ಹತ್ತಿಯ ಪಿಂಡಿಗಳನ್ನು ಇಲ್ಲಿ ತಕ್ಕಡಿಯಲ್ಲಿ ತೂಗಿ ಬೇರೆ ಬೇರೆ ಸ್ಥಳಗಳಿಗೆ ಕಳಿಸಲಾಗುತ್ತಿತ್ತೆಂದೂ ಇಲ್ಲಿಯ ತೂಕ ನಿಖರವಾದದ್ದೆಂದು ಎಲ್ಲರೂ ನಂಬುತ್ತಿದ್ದರೆಂದೂ ಹೇಳಲಾಗಿದೆ.

ದೇವಾಲಯಗಳುಸಂಪಾದಿಸಿ

ತುರುವೇಕೆರೆ ದೇವಾಲಯಗಳ ಪೈಕಿ ಶಂಕರೇಶ್ವರ ಮತ್ತು ಗಂಗಾಧರೇಶ್ವರ ದೇವಾಲಯಗಳು ಪ್ರಸಿದ್ಧವಾದವು. ಗಂಗಾಧರೇಶ್ವರ ದೇವಾಲಯ ಮುಂದಿನ ಕರಿಕಲ್ಲು ಬಸವನಮೂರ್ತಿ ಸುಂದರವಾದ್ದು. ಬೇಟೆರಾಯನ ದೇವಾಲಯದ ಶಿಲ್ಪ ಅಕರ್ಷಕವಾಗಿದೆ.

ಇತಿಹಾಸಸಂಪಾದಿಸಿ

  • ಈ ತಾಲ್ಲೂಕಿನಲ್ಲಿ ಐತಿಹಾಸಿಕ ಹೊಯ್ಸಳರ ಕಾಲದ ಗಂಗಾಧರೇಶ್ವರ ದೇವಸ್ಥಾನವಿದೆ. ತುರುವೇಕೆರೆ ಒಂದು ಇತಿಹಾಸ ಪ್ರಸಿದ್ಧ ಸ್ಥಳ. ಇಲ್ಲಿನ ಶ್ರೀ ಬೇಟೆರಾಯಸ್ವಾಮಿ ದೇವಸ್ಥಾನ, ಶ್ರೀ ಗಂಗಾಧರೇಶ್ವರ ದೇವಸ್ಥಾನ, ಮೂಲೇ ಶ್ರೀ ಶಂಕರೇಶ್ವರ ದೇವಸ್ಥಾನ, ಶ್ರೀ ಚನ್ನಿಗರಯಸ್ವಾಮಿ ದೇವಸ್ಥಾನಗಳು ಹೊಯ್ಸಳರ ಕಾಲದ ದೇವಸ್ಥಾನಗಳಾಗಿದ್ದರೆ ಊರ ಗ್ರಾಮ ದೇವತೆ ಶ್ರೀ ಉಡುಸಲಮ್ಮ ದೇವಸ್ಥಾನ, ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನಗಳಿಂದ ತುರುವೇಕೆರೆ ಪ್ರಖ್ಯಾತವಾಗಿದೆ. ಸಮೀಪದ ಬದರಿಕಾಶ್ರಮ ಪ್ರವಾಸಿಗರನ್ನು ಆಕರ್ಷಿಸುತ್ತದೆ. *ತುರುವೇಕೆರೆಯಲ್ಲಿನ ಶ್ರೀ ಅಚಲಾನಂದರು ಸ್ಥಾಪಿಸಿದ್ದರೆನ್ನಲಾದ ನೂರ ಒಂದು ದೇವರ ದೇವಸ್ಥಾನ ಸಾಲಿಗ್ರಾಮಗಳ ದೇವಸ್ಥಾನವಾಗಿದೆ. ಸಮೀಪದ ಮಲ್ಲಾಘಟ್ಟ ಕೆರೆಯು ಪ್ರವಾಸಿ ತಾಣವಾಗಿದೆ. ಅಲ್ಲದೆ ತುರುವೇಕೆರೆ ಇಂದ ತಾಳ್ಕೆರೆ ರಸ್ತೆಯ ಕಡೆಗೆ ಸುಮಾರು ೫.ಕೀ ಮೀ ದೂರದ ಮಾದಿಹಳ್ಳಿ ಗ್ರಾಮದಲ್ಲಿ ಪ್ರಸಿದ್ದ ಶ್ರೀ ಹುತ್ತುಸಿದ್ದೇಶ್ವರ ಸ್ವಾಮಿಯ ದೇವಸ್ದಾನವಿದೆ. ಇಲ್ಲಿ ಪ್ರತಿ ಸೊಮವಾರದಂದು ವಿಶೇ‍‌‍‍ಶ ಪೂಜೆ ಮತ್ತು ಪ್ರತಿ ಹುಣ್ಣಿಮೆಯ ದಿನ ಸ್ವಾಮಿಯ ವಿಶೇಷ ಪೂಜೆಯೊಂದಿಗೆ ಅನ್ನದಾನವು ನೆರವೆರುತ್ತದೆ.

ಜನ ಜೀವನಸಂಪಾದಿಸಿ

ತುರುವೇಕೆರೆಯಲ್ಲಿ ಪ್ರತಿ ಸೋಮವಾರ ಸ೦ತೆ ನಡೆಯುತ್ತದೆ. ಸುತ್ತ ಮುತ್ತಲಿನ ಹಳ್ಳಿಯ ಜನರು ಇಲ್ಲಿಗೆ ಬ೦ದು ವ್ಯಾಪಾರ ಮಾಡುತ್ತಾರೆ.

ಸೌಲಭ್ಯಗಳುಸಂಪಾದಿಸಿ

ವಿನೋಬಾ ನಗರ, ಸುಬ್ರಹ್ಮಣ್ಯನಗರ, ಗಾಂಧಿನಗರ ಬಡಾವಣೆಗಳಿಂದ ಕೂಡಿದ ತುರುವೇಕೆರೆಯಲ್ಲಿ ವಿದ್ಯುಚ್ಛಕ್ತಿ ಮತ್ತು ಕುಡಿಯುವ ನೀರಿನ ವ್ಯವಸ್ಥೆಯಿದೆ. ಪುರಸಭೆಯ ಆಶ್ರಯದಲ್ಲಿ ಒಂದು ಫ್ರೌಢಶಾಲೆಯನ್ನೂ ಒಂದು ಶಿಶುವಿಹಾರವನ್ನೂ ನಡೆಸಲಾಗುತ್ತಿದೆ. ಪೌರಸಭೆಯ ಅಡಳಿತಕ್ಕೊಳಪಟ್ಟ ಪ್ರದೇಶದ ವಿಸ್ತೀರ್ಣ 1.30 ಚ.ಮೈ. ತುರುವೇಕೆರೆಯಲ್ಲಿ ರೆಗ್ಯುಲೇಟೆಡ್ ಮಾರುಕಟ್ಟೆಯಿದೆ. ಕೊಬ್ಬರಿ, ತೆಂಗಿನಕಾಯಿ, ಬೆಲ್ಲ, ರಾಗಿ, ಜೋಳ, ಅಡಕೆ ಮುಂತಾದವು ಇಲ್ಲಿ ವ್ಯಾಪಾರವಾಗುವ ಸರಕುಗಳು. ತುರುವೇಕೆರೆಯಿಂದ ಜಿಲ್ಲೆಯ ಇತರ ಮುಖ್ಯ ಸ್ಥಳಗಳಿಗೂ ತಾಲ್ಲೂಕಿನ ಹಲವು ಎಡೆಗಳಿಗೂ ರಸ್ತೆಗಳಿವೆ ; ಬಸ್ಸು ವ್ಯವಸ್ಥೆಯೂ ಇದೆ.

ಸಂಪರ್ಕಸಂಪಾದಿಸಿ

ಇದು ಬೆ೦ಗಳೂರಿನಿ೦ದ ೧೩೨ ಕಿ.ಮಿ. ದೂರದಲ್ಲಿದೆ.ಬೆ೦ಗಳೂರಿನ ಮೆಜಸ್ಟಿಕ್ ಬಸ್ ನಿಲ್ದಾಣದಿ೦ದ ಪ್ರತಿ ಅರ್ಧ ತಾಸಿಗೊಮ್ಮೆ ಕೆ. ಎಸ್.ಆರ್.ಟಿ.ಸಿ. ಬಸ್ ಗಳಿವೆ. ತುರುವೇಕೆರೆ ತಾಲ್ಲೂಕು 2013 ಬರ ಪೀಡಿತ ಪ್ರದೇಶವಾಗಿದೆ

ಉಲ್ಲೇಖಗಳುಸಂಪಾದಿಸಿ

  1. "Turuvekere (05540)".


ಹೊರಗಿನ ಕೊಂಡಿಗಳುಸಂಪಾದಿಸಿ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: