ಸೋಮನಾಥಪುರ

ಕರ್ನಾಟಕದ ಪುರಾತನ ಹಿಂದೂ ದೇವಾಲಯ

ಸೋಮನಾಥಪುರ ಮೈಸೂರು ನಗರದಿಂದ ೩೦ ಕಿ.ಮಿ ದೂರದಲ್ಲಿರುವ ಒಂದು ಪಟ್ಟಣ. ಇದು ಹೊಯ್ಸಳರು ಕಟ್ಟಿಸಿದ ಕೇಶವ ದೇವಾಲಯಕ್ಕೆ ಹೆಸರುವಾಸಿ. ಈ ದೇವಾಲಯವನ್ನು ೧೨೬೮ರಲ್ಲಿ ಹೊಯ್ಸಳ ಸಾಮ್ರಾಜ್ಯದಲ್ಲಿ ದಂಡನಾಯಕನಾಗಿದ್ದ ಸೋಮ ಎಂಬಾತನು ಕಟ್ಟಿಸಿದನು. ಇದು ಇಂದು ಕರ್ನಾಟಕದ ಪ್ರೇಕ್ಷಣೀಯ ಸ್ಥಳವಾಗಿ ಬೆಳೆದಿದೆ.

left ಕೇಶವ ದೇವಾಲಯ ಮುಂಭಾಗ

ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು....ರಾಷ್ಟ್ರಕವಿ ಕುವೆಂಪು ತಮ್ಮ ಭಾವಪೂರ್ಣ ಕವನದ ಒಂದೇ ಒಂದು ಸಾಲಿನಲ್ಲಿ ಕರ್ನಾಟಕದ ಶಿಲ್ಪಕಲೆಗೆ ಸೂಕ್ತ ಗೌರವ ಮನ್ನಣೆ ನೀಡಿದ್ದಾರೆ. ಕರ್ನಾಟಕ ಕಲೆಗಳ ತವರು, ಶಿಲ್ಪಕಲೆಗಳ ಬೀಡು, ಬೇಲೂರು, ಹಳೆಬೀಡು, ಸೋಮನಾಥಪುರಗಳನ್ನು ನೋಡಿದಾಗ ಕುವೆಂಪು ಹೇಳಿದಂತೆ ಪ್ರತಿಯೊಬ್ಬ ಪ್ರವಾಸಿಗನೂ ಶಿಲ್ಪಿಯ ಕಲಾತ್ಮಕತೆಗೆ ತಲೆ ಬಾಗಿಯೇ ಬಾಗುತ್ತಾನೆ.ಇಂಥ ಒಂದು ಕಲಾಶ್ರೀಮಂತಿಕೆಯ ತಾಣ ಮೈಸೂರಿಗೆ 38 ಕಿ.ಮೀ. ದೂರದಲ್ಲಿರುವ ಸೋಮನಾಥಪುರ. ಪ್ರಶಾಂತ ಪರಿಸರದಲ್ಲಿರುವ ಈ ಶಿಲ್ಪಕಲಾವೈಭವದ ದೇಗುಲವನ್ನು ಪ್ರವೇಶಿಸಿದರೆ ಆಗುವ ಸಂತೋಷ ಅಪರಿಮಿತ. ಹುಲ್ಲುಹಾಸಿನ ನಡುವೆ ಸಾಗಿ ನಾಲ್ಕು ಮೆಟ್ಟಿಲೇರುತ್ತಿದ್ದಂತೆಯೇ ಹೊಸದೊಂದು ಶಿಲ್ಪಕಲಾಲೋಕವೇ ತೆರೆದುಕೊಳ್ಳುತ್ತದೆ. ಜೀವಕಳೆಯಿಂದ ಕಂಗೊಳಿಸುತ್ತಿರುವ ಶಿಲ್ಪವೈಭವವನ್ನು ಕಂಡಾಗ ರೋಮಾಂಚನವಾಗುತ್ತದೆ. ಶಿಲ್ಪಿಯ ಜಾಣ್ಮೆ, ಚಾಕಚಕ್ಯತೆ ಕೌಶಲಕ್ಕೆ ಶಿರಬಾಗುತ್ತದೆ.

ಐತಿಹ್ಯ: 13ನೆಯ ಶತಮಾನದಲ್ಲಿ ಸೋಮನಾಥಪುರ ಒಂದು ಪುಟ್ಟ ಅಗ್ರಹಾರವಾಗಿತ್ತು. ಚತುರ್ವೇದಿಮಂಗಲ ವಿದ್ಯಾನಿಧಿಪ್ರಸನ್ನ ಸೋಮನಾಥಪುರ ಎಂಬುದು ಇದರ ಪೂರ್ವ ಹೆಸರು. ಇಲ್ಲಿರುವ 7 ಶಾಸನಗಳು ಈ ಅಪೂರ್ವ ದೇವಾಲಯದ ಬಗ್ಗೆ ಹಾಗೂ ಕಲೆಗೆ ಹಾಗೂ ವಿದ್ಯೆಗೆ ಆಗರವಾಗಿದ್ದ ಈ ಊರಿನ ಬಗ್ಗೆ ಮಹತ್ವದ ಮಾಹಿತಿ ಒದಗಿಸುತ್ತವೆ. ಹೊಯ್ಸಳರ ದೊರೆ ಮುಮ್ಮಡಿ ನರಸಿಂಹನ ದಂಡನಾಯಕನಾಗಿದ್ದ ಸೋಮನಾಥ 1258ರ ಸುಮಾರಿನಲ್ಲಿ ನಿರ್ಮಿಸಿ, ತನ್ನ ಹೆಸರನ್ನೇ ಇಟ್ಟು ಸೋಮನಾಥಪುರವೆಂದು ಕರೆದ. ಪ್ರಶಾಂತವಾಗಿ ಕಾವೇರಿ ನದಿ ಹರಿಯುವ ಈ ಸ್ಥಳದಲ್ಲಿ ಹಲವು ದೇವಾಲಯಗಳನ್ನು ನಿರ್ಮಿಸಿದ ಎನ್ನುತ್ತದೆ ಇತಿಹಾಸ.

ವಿಶಾಲವಾದ ಸ್ಥಳದಲ್ಲಿ ನಕ್ಷತ್ರಾಕಾರದ ಜಗತಿಯ ಮೇಲೆ ನಿರ್ಮಿಸಲಾಗಿರುವ ಈ ದೇಗುಲ ಪೂರ್ವಾಭಿಮುಖವಾಗಿದ್ದು ಜಗತಿಯ ಸುತ್ತಲೂ ಇಡೀ ದೇವಾಲಯವನ್ನೇ ಆನೆಗಳು ಹೊತ್ತಿವೆಯೇನೋ ಎಂದು ಭಾಸವಾಗುವಂತೆ ಸುಂದರ ಗಜಶಿಲ್ಪಗಳನ್ನು ಕೆತ್ತಲಾಗಿದೆ. ಶಿಖರಪ್ರಾಯ: ಸೋಮನಾಥಪುರದ ದೇವಾಲಯದ ಸೌಂದರ್ಯಕ್ಕೆ ಶಿಖರಪ್ರಾಯವಾಗಿರುವುದು ಮೂರು ಶಿಖರಗಳೇ. ಹೀಗಾಗೇ ಇದನ್ನು ತ್ರಿಕುಟಾಚಲವೆನ್ನುತ್ತಾರೆ. ಹದಿನಾರು ಕೋಣೆಗಳ ನಕ್ಷತ್ರಾಕಾರದ ವಿನ್ಯಾಸದ ಮೇಲೆ ರಚಿತವಾಗಿರುವ ಶಿಖರಗಳು ದೇವಾಲಯ ರಮ್ಯತೆಯನ್ನು ನೂರ್ಮಡಿಗೊಳಿಸಿವೆ. ಎಲ್ಲ ಹೊಯ್ಸಳ ದೇವಾಲಯದಲ್ಲಿರುವಂತೆ ಮುಖಮಂಟಪ, ನವರಂಗ, ಗರ್ಭಗೃಹ, ಸುಖನಾಸಿಗಳು ಇಲ್ಲೂ ಇವೆ. ಮಧ್ಯದ ಭುನವೇಶ್ವರಿಯಲ್ಲಿ ಅಷ್ಟದಿಕ್ಪಾಲಕರು, ಅದರ ಮೇಲೆ 32 ತೊಲೆಗಳಿಂದ ಮಾಡಿದ ಕಮಾನು, ಅದರ ಮಧ್ಯದಲ್ಲಿ ತೂಗಾಡುವ ರೀತಿಯ ಕಮಲದ ಮೊಗ್ಗು ಮನಮೋಹಕ. ಈ ದೇವಾಲಯದಲ್ಲಿ ಮೂರು ಗರ್ಭಗೃಹಗಳಿದ್ದು, ಉತ್ತರ ಗರ್ಭಗೃಹದಲ್ಲಿ ಜನಾರ್ದನ ದಕ್ಷಿಣ ಗರ್ಭಗೃಹದಲ್ಲಿ ತ್ರಿಭಂಗಿಯಲ್ಲಿ ನಿಂತ ವೇಣುಗೋಪಾಲ ವಿಗ್ರಹ ಇದೆ. ಮಧ್ಯದ ಗರ್ಭಗೃಹದಲ್ಲಿ ಯಾವ ವಿಗ್ರಹವೂ ಇಲ್ಲ. ಹಿಂದೆ ಇಲ್ಲಿ ವಿಗ್ರಹ ಇತ್ತೆಂದು ಹೇಳಲಾಗುತ್ತದೆ. ಇಂದು ಈ ದೇವಾಲಯದಲ್ಲಿ ಹಲವು ಭಗ್ನಗೊಂಡ ವಿಗ್ರಹಗಳನ್ನು ಕಂಡಾಗ ಮನಸ್ಸು ವ್ಯಾಕುಲಗೊಳ್ಳುತ್ತದೆ. 19ನೆಯ ಶತಮಾನದಲ್ಲಿ ಆಂಗ್ಲವಿದ್ವಾಂಸರು ಈ ದೇವಾಲಯದ ಶಿಲ್ಪಕಲಾವೈಭವ ಕಂಡು ಅದರ ಮಾಹಿತಿ ಮುದ್ರಿಸಿದ ಕಾರಣ, ಅಂದಿನ ಮೈಸೂರು ಅರಸರು ಈ ದೇವಾಲಯವನ್ನು ಸ್ವಲ್ಪಮಟ್ಟಿಗೆ ಅಭಿವೃದ್ಧಿಪಡಿಸಿದರು. 1924ರಲ್ಲಿ ಬಿದ್ದುಹೋಗಿದ್ದ ಗೋಡೆಗಳ ದುರಸ್ತಿ ಮಾಡಿ, ದೇವಾಲಯ ಶಿಥಿಲವಾಗದಂತೆ ಭದ್ರಗೊಳಿಸಲಾಯಿತು. 1953ರಲ್ಲಿ ಈ ದೇವಾಲಯದ ಒಳಭಾಗದ ಅಪರಿಮಿತ ಸೌಂದರ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲೆಂದು ವಿದ್ಯುದ್ದೀಪದ ವ್ಯವಸ್ಥೆ ಮಾಡಲಾಗಿದೆ.