ಜ್ಯೋತಿಲಕ್ಷ್ಮಿ

ಜ್ಯೋತಿಲಕ್ಷ್ಮಿ ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯ ಸುಮಾರು ೩೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ನಾಯಕಿಯಾಗಿ ಅಭಿನಯಿಸಿದ ಜ್ಯೋತಿಲಕ್ಷ್ಮಿ ನಂತರದಲ್ಲಿ ಕ್ಯಾಬರೆ ನರ್ತಕಿಯಾಗಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ[೧]. ಮಲಯಾಳಂನ ಮುರಪ್ಪೆಣ್ಣು(೧೯೬೫) ಮತ್ತು ಹಿಂದಿಯ ಪಾಯಲ್ ಕಿ ಝಂಕಾರ್(೧೯೬೮) ಚಿತ್ರಗಳಲ್ಲಿ ನಾಯಕಿಯಾಗಿ ಸ್ಮರಣೀಯ ಅಭಿನಯ ನೀಡಿದ ಜ್ಯೋತಿಲಕ್ಷ್ಮಿ ೧೯೭೦ರ ದಶಕದಲ್ಲಿ ಪ್ರಖ್ಯಾತ ಕೌಬಾಯ್ ಶೈಲಿಯ ಚಿತ್ರಗಳ ನಿರ್ದೇಶಕ ಕೆ.ಎಸ್.ಆರ್.ದಾಸ್ ಅವರ ಪಿಲ್ಲಾ ಪಿಡುಗ(೧೯೭೨) ಮತ್ತು ರಾಣಿ ಔರ್ ಜಾನಿ(೧೯೭೩) ಮುಂತಾದ ಕೆಲವು ಮಹಿಳಾ ಪ್ರಧಾನ ಸಾಹಸಮಯ ಚಿತ್ರಗಳಲ್ಲಿ ನಾಯಕಿಯಾಗಿ ಚಿತ್ರರಸಿಕರ ಮನರಂಜಿಸಿದ್ದಾರೆ. ಜ್ಯೋತಿಲಕ್ಷ್ಮಿಯವರ ಪ್ರಮುಖ ಕನ್ನಡ ಚಿತ್ರಗಳೆಂದರೆ ಕುಳ್ಳ ಏಜೆಂಟ್ ೦೦೦(೧೯೭೨) ಮತ್ತು ಕೌಬಾಯ್ ಕುಳ್ಳ(೧೯೭೩). ಅನೇಕ ಚಿತ್ರಗಳಲ್ಲಿ ಋಣಾತ್ಮಕ ಛಾಯೆಯ ಮತ್ತು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು ಗಮನಾರ್ಹ ಅಭಿನಯ ನೀಡಿದ್ದಾರೆ [೨] [೩][೪][೫].

ಜ್ಯೋತಿಲಕ್ಷ್ಮಿ
ಜನನ
ಜ್ಯೋತಿ

೨ ನವೆಂಬರ್ ೧೯೪೮
ತಂಜಾವೂರು, ಮದ್ರಾಸ್ ಪ್ರಾಂತ್ಯ, ತಮಿಳುನಾಡು
ಮರಣಅಗಸ್ಟ್ ೮, ೨೦೧೬
ಉದ್ಯೋಗಚಲನಚಿತ್ರ ನಟಿ
ಸಕ್ರಿಯ ವರ್ಷಗಳು೧೯೬೩–೨೦೧೬
ಜೀವನ ಸಂಗಾತಿಸಾಯಿಪ್ರಸಾದ್

ಆರಂಭಿಕ ಜೀವನಸಂಪಾದಿಸಿ

ನವೆಂಬರ್ ೨, ೧೯೪೮ರಂದು ತಂಜಾವೂರಿನಲ್ಲಿ ಟಿ.ಕೆ.ರಾಮರಾಜನ್ ಮತ್ತು ಶಾಂತವಿ ದಂಪತಿಯ ಮಗುವಾಗಿ ಜನಿಸಿದ ಜ್ಯೋತಿಲಕ್ಷ್ಮಿಯವರಿಗೆ ಮೂವರು ಸಹೋದರರು ಮತ್ತು ನಾಲ್ವರು ಸಹೋದರಿಯರಿದ್ದಾರೆ. ಇವರ ಮೂಲ ಹೆಸರು ಜ್ಯೋತಿ. ತಂದೆ ಟಿ.ಕೆ.ರಾಮರಾಜನ್ ತಮಿಳು ಚಿತ್ರರಂಗದ ಒಬ್ಬ ಯಶಸ್ವಿ ನಿರ್ಮಾಪಕ. ತಮಿಳಿನ ಜನಪ್ರಿಯ ನಿರ್ದೇಶಕ ಮತ್ತು ನಿರ್ಮಾಪಕರಾದ ಟಿ.ಆರ್.ರಾಮಣ್ಣ ಮತ್ತು ಹೆಸರಾಂತ ನಟಿಯರಾದ ಟಿ.ಆರ್.ರಾಜಕುಮಾರಿ ಮತ್ತು ಇ.ವಿ.ಸರೋಜ ಇವರ ಹತ್ತಿರದ ಸಂಬಂಧಿಗಳು. ಮನೆಯಲ್ಲಿ ಸಿನೆಮಾ ವಾತಾವರಣವಿದ್ದುದರಿಂದ ಸಹಜವಾಗಿ ಬೆಳ್ಳಿತೆರೆಯಡೆಗೆ ಆಕರ್ಷಿತರಾದ ಜ್ಯೋತಿ ಐದು ವರ್ಷದವರಾಗಿದ್ದಾಗ ೧೯೫೪ರಲ್ಲಿ ತೆರೆಗೆ ಬಂದ ಟಿ.ಆರ್.ರಾಮಣ್ಣ ನಿರ್ದೇಶನದ ಎಂ.ಜಿ.ಆರ್. ಮತ್ತು ಶಿವಾಜಿ ಗಣೇಶನ್ ಒಟ್ಟಿಗೆ ಅಭಿನಯಿಸಿದ ಕೂಂಡುಕ್ಕಿಳಿ ಎಂಬ ತಮಿಳು ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ಚಿಕ್ಕಂದಿನಲ್ಲಿ ಭರತನಾಟ್ಯವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿದ್ದ ಜ್ಯೋತಿ ಬಾಲನಟಿಯಾಗಿ ಬೆರಳೆಣಿಕೆಯ ಚಿತ್ರಗಳಲ್ಲಿ ನಟಿಸಿದ್ದಾರೆ[೬].

ವೃತ್ತಿ ಜೀವನಸಂಪಾದಿಸಿ

ಬೆಳ್ಳಿತೆರೆಸಂಪಾದಿಸಿ

ಟಿ.ಆರ್.ರಾಮಣ್ಣ ನಿರ್ದೇಶನದ ಪೆರಿಯ ಇಡತು ಪೆಣ್(೧೯೬೩) ಚಿತ್ರದಲ್ಲಿ ಪ್ರಖ್ಯಾತ ಹಾಸ್ಯ ನಟ ನಾಗೇಶ್ ಅವರ ಜೋಡಿಯಾಗಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುವ ಮೂಲಕ ಜನಪ್ರಿಯತೆ ಪಡೆದ ಜ್ಯೋತಿಲಕ್ಷ್ಮಿ ಬಹಳ ಬೇಡಿಕೆಯ ಕಲಾವಿದೆಯಾದರು[೭]. ಪೆರಿಯ ಇಡತು ಪೆಣ್ ಚಿತ್ರದಲ್ಲಿ ಜ್ಯೋತಿಲಕ್ಷ್ಮಿಯವರ ಅಭಿನಯವನ್ನು ಮೆಚ್ಚಿದ ಎಂ.ಜಿ.ಆರ್, ತಮ್ಮ ಹೊಸಚಿತ್ರದ ನಾಯಕಿ ಪಾತ್ರದ ಹುಡುಕಾಟದಲ್ಲಿದ್ದ ಮಲಯಾಳಂನ ಹೆಸರಾಂತ ನಿರ್ದೇಶಕ ಎ.ವಿನ್ಸೆಂಟ್ ಅವರಿಗೆ ಜ್ಯೋತಿಲಕ್ಷ್ಮಿಯವರನ್ನು ಶಿಫಾರಸ್ಸು ಮಾಡಿದ್ದರು[೮]. ೧೯೬೫ರಲ್ಲಿ ಬಿಡುಗಡೆಯಾದ ಮುರಪ್ಪೆಣ್ಣು ಎಂಬ ಚಿತ್ರದಲ್ಲಿ ಆತ್ಮೀಯ ಗೆಳತಿಗಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡುವ ತ್ಯಾಗಮಯಿ ಪಾತ್ರದಲ್ಲಿ ಶ್ಲಾಘನೀಯ ಅಭಿನಯ ನೀಡಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತ ಯಶಸ್ಸು ಗಳಿಸಿದ ಈ ಚಿತ್ರ ವಿಮರ್ಶಕರಿಂದ ಮುಚ್ಚುಗೆ ಗಳಿಸಿದ್ದಲ್ಲದೇ ೧೯೬೫ರ ಸಾಲಿನ ರಾಷ್ಟ್ರಪ್ರಶಸ್ತಿಗೂ ಭಾಜನವಾಗಿತ್ತು[೭]. ಐತಿಹಾಸಿಕ ಚಿತ್ರ ಕುಂಜಲಿ ಮರಕ್ಕರ್(೧೯೬೭)ನ ಮೋಹಕ ಪಾತ್ರದಲ್ಲಿ ಪರಿಣಾಮಕಾರಿ ಅಭಿನಯ ನೀಡಿದ ಜ್ಯೋತಿಲಕ್ಷ್ಮಿ ನಗರಮೆ ನಂದಿ(೧೯೬೭) ಚಿತ್ರದಲ್ಲಿ ನಾಯಕನ ಪ್ರೀತಿಯ ತಂಗಿಯಾಗಿ ಭಾವಪೂರ್ಣ ಅಭಿನಯ ನೀಡಿದ್ದಾರೆ[೮][೯][೧೦]. ಇವುಗಳಲ್ಲಿ ಮುರಪ್ಪೆಣ್ಣು ಮತ್ತು ನಗರಮೆ ನಂದಿ ಚಿತ್ರಗಳು ಜ್ಞಾನಪೀಠ ಪ್ರಶಸ್ತಿ ವಿಜೇತ ಶ್ರೇಷ್ಠ ಮಲಯಾಳಂ ಸಾಹಿತಿ ಎಂ.ಟಿ.ವಾಸುದೇವನ್ ನಾಯರ್ ಅವರ ಕಥೆಯನ್ನು ಆಧರಿಸಿದ್ದವು ಎಂಬುದು ಗಮನಾರ್ಹ. ಕನ್ನಗಿ ಎಂಬ ಮಹಾಪತಿವೃತೆಯ ಜೀವನವನ್ನಾಧರಿಸಿದ ಕೊಡುಂಗಲ್ಲೂರಮ್ಮ(೧೯೬೮) ಚಿತ್ರದ ಋಣಾತ್ಮಕ ಛಾಯೆಯುಳ್ಳ ನರ್ತಕಿ ಮಾಧವಿಯ ಪಾತ್ರದಲ್ಲಿ ತಮ್ಮ ನೃತ್ಯ ಕೌಶಲ್ಯದಿಂದ ಗಮನ ಸೆಳೆದ ಜ್ಯೋತಿಲಕ್ಷ್ಮಿ ಇನ್ಸ್‌ಪೆಕ್ಟರ್(೧೯೬೮) ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡು ಗಮನಾರ್ಹ ಅಭಿನಯ ನೀಡಿದ್ದಾರೆ[೧೧].

ಪೆದ್ದಕ್ಕಯ್ಯ(೧೯೬೭) ಚಿತ್ರದಲ್ಲಿ ಹರನಾಥ್ ಅವರೊಂದಿಗೆ ನೃತ್ಯವೊಂದರಲ್ಲಿ ಅಭಿನಯಿಸುವ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಜ್ಯೋತಿಲಕ್ಷ್ಮಿ ಪುಣ್ಯವತಿ(೧೯೬೭) ಚಿತ್ರದಲ್ಲಿ ಶ್ರೀಮಂತ ಮುಗ್ಧ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡು ಚೊಕ್ಕದಾದ ಅಭಿನಯ ನೀಡಿದ್ದಾರೆ. ಈ ಚಿತ್ರದ ತಮಿಳು ಅವತರಣಿಕೆಯಾದ ಪೂವುಮ್ ಪೊಟ್ಟುಮ್(೧೯೬೮) ಚಿತ್ರದಲ್ಲೂ ಜ್ಯೋತಿಲಕ್ಷ್ಮಿಯವರೇ ಈ ಪಾತ್ರವನ್ನು ಗಮನಾರ್ಹವಾಗಿ ನಿರ್ವಹಿಸಿದ್ದರು. ೧೯೬೮ರಲ್ಲಿ ತೆರೆಗೆ ಬಂದ ಪಾಯಲ್ ಕಿ ಝಂಕಾರ್ ಜ್ಯೋತಿಲಕ್ಷ್ಮಿ ಅಭಿನಯಿಸಿದ ಮೊದಲ ಹಿಂದಿ ಚಿತ್ರ[೭]. ಪ್ರಖ್ಯಾತ ಗಾಯಕ ಮತ್ತು ನಟ ಕಿಶೋರ್ ಕುಮಾರ್ ಅವರಿಗೆ ನಾಯಕಿಯಾಗಿ ನಟಿಸಿ ತಮ್ಮ ಅದ್ಭುತ ನಾಟ್ಯ ಕೌಶಲ್ಯ ಮತ್ತು ಭಾವಪೂರ್ಣ ಭಾವಾಭಿನಯದ ಮೂಲಕ ಪಾತ್ರವನ್ನು ಸ್ಮರಣೀಯವಾಗಿಸಿದ್ದಾರೆ. ಜ್ಯೋತಿಲಕ್ಷ್ಮಿಯವರ ನಾಟ್ಯ ಕೌಶಲ್ಯದಿಂದ ಪ್ರೇರಿತರಾದ ಅಂದಿನ ಕೆಲವು ನಿರ್ದೇಶಕರು ಇವರಿಗೆ ತಮ್ಮ ಚಿತ್ರಗಳಲ್ಲಿ ವಿಭಿನ್ನ ಶೈಲಿಯ ನೃತ್ಯಗಳಲ್ಲಿ ಅಭಿನಯಿಸಲು ಅವಕಾಶಗಳನ್ನು ನೀಡಲಾರಂಭಿಸಿದರು. ಈ ಹೊತ್ತಿಗೆ ಜ್ಯೋತಿಲಕ್ಷ್ಮಿಯವರಿಗೆ ನಾಯಕಿಯಾಗಿ ಅವಕಾಶಗಳು ಗಣನೀಯವಾಗಿ ಕಡಿಮೆಯಾಗಿದ್ದವು. ತಮಿಳಿನ ಗಲಾಟ್ಟ ಕಲ್ಯಾಣಂ(೧೯೬೮) ಮತ್ತು ಅಡಿಮೈ ಪೆಣ್(೧೯೬೯) ಚಿತ್ರಗಳನ್ನು ಹೊರತುಪಡಿಸಿ ಜ್ಯೋತಿಲಕ್ಷ್ಮಿಯವರಿಗೆ ಗಮನಾರ್ಹ ಪಾತ್ರಗಳು ದೊರಕಲಿಲ್ಲ[೧೨].

೧೯೭೦ರ ದಶಕದ ಆರಂಭದಲ್ಲಿ ಜ್ಯೋತಿಲಕ್ಷ್ಮಿ ಬಹಳ ಬೇಡಿಕೆಯ ನೃತ್ಯ ತಾರೆಯಾಗಿ ರೂಪುಗೊಂಡಿದ್ದರು. ತಮಗೆ ಬಂದ ಎಲ್ಲಾ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ಜ್ಯೋತಿಲಕ್ಷ್ಮಿಯವರ ನೃತ್ಯಗಳು ಒಂದರ ನಂತರ ಒಂದರಂತೆ ಅಪಾರ ಯಶಸ್ಸು ಗಳಿಸತೊಡಗಿದ್ದವು. ನಾಯಕಿಯರು ಮೈತುಂಬ ಸೀರೆಯುಟ್ಟು ಮಡಿವಂತಿಕೆಯಲ್ಲಿರುವ ಕಾಲದಲ್ಲಿ ಹಾಡುಗಳ ತಾಳಕ್ಕೆ ತಕ್ಕಂತೆ ರಂಗು ರಂಗಿನ ತುಂಡುಡುಗೆ ಧರಿಸಿ ಹೆಜ್ಜೆ ಹಾಕುವ ಮೂಲಕ ಚಿತ್ರರಸಿಕರ ಎದೆಬಡಿತವನ್ನು ಹೆಚ್ಚಿಸಿದ್ದವರು ಜ್ಯೋತಿಲಕ್ಷ್ಮಿ. ತೆಲುಗು, ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ಜ್ಯೋತಿಲಕ್ಷ್ಮಿಯವರ ನೃತ್ಯ ಇದ್ದರೆ ಚಿತ್ರದ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವಷ್ಟರ ಮಟ್ಟಿಗೆ ಜ್ಯೋತಿಲಕ್ಷ್ಮಿ ಜನಪ್ರಿಯರಾಗಿದ್ದರು. ತೆಲುಗಿನಲ್ಲಂತೂ ಜ್ಯೋತಿಲಕ್ಷ್ಮಿಯವರ ನಾಟ್ಯ ನೋಡಲೆಂದೇ ಜನ ಚಿತ್ರಮಂದಿರಗಳಿಗೆ ಮುಗಿ ಬೀಳುತ್ತಿದ್ದರು. ಜ್ಯೋತಿಲಕ್ಷ್ಮಿಯವರ ನೃತ್ಯ ಇಲ್ಲದಿದ್ದರೆ ವಿತರಕರೂ ಚಿತ್ರವನ್ನು ಖರೀದಿಸಲು ಹಿಂದೆ ಮುಂದೆ ನೋಡುತ್ತಿದ್ದರು ಎನ್ನುವುದು ಇವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿ[೧೩]. ಶಾಸ್ತ್ರೀಯ, ಜಾನಪದ, ಪಾಶ್ಚಾತ್ಯ ಹೀಗೆ ಯಾವುದೇ ಶೈಲಿಯ ನೃತ್ಯವಾದರೂ ಅದಕ್ಕೆ ಜೀವತುಂಬಿ ನರ್ತಿಸುವ ಪರಿಗೆ ಜ್ಯೋತಿಲಕ್ಷ್ಮಿಯವರಿಗೆ ಅವರೇ ಸರಿಸಾಟಿಯಾಗಿದ್ದಾರೆ. ಅಡಿಮೈ ಪೆಣ್ ಚಿತ್ರದಲ್ಲಿ ಅಂದಿನ ಪ್ರಖ್ಯಾತ ತಾರೆ ಜಯಲಲಿತಾ ಅವರೊಂದಿಗೆ ನರ್ತಿಸಿದ ಕಾಲತ್ತೈ ವೆಂಡ್ರವನ್ ನೀ... ಚಿತ್ರದ ಯಶಸ್ಸಿಗೆ ಕಾರಣವಾದ ಪ್ರಮುಖ ಅಂಶಗಳಲ್ಲೊಂದಾಗಿತ್ತು[೧೪]. ಪಟ್ಟಣತ್ತಿಲ್ ಭೂತಮ್(೧೯೬೭) ಚಿತ್ರದ ಇದಳೈ ವೀರುತದು ರೋಜಾ..., ನೀರುಮ್ ನೆರುಪ್ಪುಮ್(೧೯೭೧) ಚಿತ್ರದ ಕಟ್ಟು ಮೆಲ್ಲ ಕಟ್ಟು... ಮತ್ತು ಇದ ಲೋಕಂ(೧೯೭೩) ಚಿತ್ರದ ಗುಡಿಲೋನ ನಾ ಸ್ವಾಮಿ... [೭] ಮುಂತಾದವು ಜ್ಯೋತಿಲಕ್ಷ್ಮಿಯವರ ಇನ್ನಿತರ ಪ್ರಮುಖ ನೃತ್ಯಗಳಾಗಿವೆ. ಕೇವಲ ಶೃಂಗಾರ ರಸದ ನೃತ್ಯಗಳಲ್ಲದೇ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಅನೇಕ ಹಾಡುಗಳಿಗೆ ಜ್ಯೋತಿಲಕ್ಷ್ಮಿ ನರ್ತಿಸಿದ್ದಾರೆ. ಪೌರಾಣಿಕ ಚಿತ್ರಗಳ ನಿರ್ಮಾಪಕರೂ ತಮ್ಮ ಚಿತ್ರಗಳಲ್ಲಿ ಜ್ಯೋತಿಲಕ್ಷ್ಮಿಯವರಿಗಾಗಿಯೇ ನೃತ್ಯವೊಂದನ್ನು ಸಂಯೋಜಿಸುತ್ತಿದ್ದರು. ತ್ಯಾಗಯ್ಯ(೧೯೮೧) ಚಿತ್ರದ ವೊಡನು ಜರಿಪೆ... ಜ್ಯೋತಿಲಕ್ಷ್ಮಿಯವರ ಶಾಸ್ತ್ರೀಯ ಶೈಲಿಯ ನಾಟ್ಯಗಳಿಗೆ ಉತ್ತಮ ನಿದರ್ಶನವಾಗಿದೆ[೬]. ದಕ್ಷಿಣ ಭಾರತದ ಮೇರು ಗಾಯಕಿಯರಾದ ಪಿ.ಸುಶೀಲಾ, ಎಸ್.ಜಾನಕಿ ಮತ್ತು ಎಲ್.ಆರ್.ಈಶ್ವರಿಯವರ ಅಸಂಖ್ಯ ಹಾಡುಗಳಿಗೆ ಜ್ಯೋತಿಲಕ್ಷ್ಮಿ ನರ್ತಿಸಿದ್ದಾರೆ. ಎಲ್.ಆರ್.ಈಶ್ವರಿಯವರ ಅಸಾಮಾನ್ಯ ಹಾಡುಗಾರಿಕೆಗೆ ಮೇಳೈಸಿದ ಜ್ಯೋತಿಲಕ್ಷ್ಮಿಯವರ ಅಪೂರ್ವ ನೃತ್ಯ ಚಿತ್ರರಸಿಕರಿಗೆ ರಸದೌತಣವಾಗಿತ್ತು[೬].

೭೦ರ ದಶಕದಲ್ಲಿ ಜನಪ್ರಿಯ ನೃತ್ಯ ತಾರೆಯಾಗಿದ್ದ ಜ್ಯೋತಿಲಕ್ಷ್ಮಿ ಅನೇಕ ಚಿತ್ರಗಳಲ್ಲಿ ಮಹಿಳಾ ಕೌಬಾಯ್ ಪಾತ್ರಗಳಲ್ಲಿಯೂ ಮಿಂಚಿದ್ದಾರೆ. ಕೆ.ಎಸ್.ಆರ್.ದಾಸ್ ಅವರ ಕೌಬಾಯ್ ಮಾದರಿಯ ಮೋಸಗಾಳ್ಳಕ್ಕು ಮೋಸಗಾಡು(೧೯೭೧) ಚಿತ್ರದಲ್ಲಿ ಜನಪ್ರಿಯ ತೆಲುಗು ನಟ ಕೃಷ್ಣ ಅವರೊಂದಿಗೆ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ ಜ್ಯೋತಿಲಕ್ಷ್ಮಿ ನಂತರದಲ್ಲಿ ಕೆಲವು ಮಹಿಳಾ ಪ್ರಧಾನ ಕೌಬಾಯ್ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ[೭]. ಕುದುರೆ ಏರಿ ಖಳರೊಂದಿಗೆ ಸರಿಸಮನಾಗಿ ಹೋರಾಡಿ ತಮ್ಮ ಬಂದೂಕಿನಿಂದ ಅವರನ್ನು ನಿರ್ದಾಕ್ಷಿಣ್ಯವಾಗಿ ಕೊಂದು ನ್ಯಾಯ ರಕ್ಷಣೆ ಮಾಡುವ ನಾಯಕಿಯ ಪಾತ್ರದಲ್ಲಿ ಜ್ಯೋತಿಲಕ್ಷ್ಮಿಯವರನ್ನು ಪ್ರೇಕ್ಷಕರು ಬಹಳ ಮೆಚ್ಚಿಕೊಂಡರು. ಕೆ.ಎಸ್.ಆರ್.ದಾಸ್ ಅವರ ಪಿಲ್ಲಾ ಪಿಡುಗ(೧೯೭೨) ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಬಹಳ ದೊಡ್ಡ ಯಶಸ್ಸು ಪಡೆಯಿತು. ಪಿಸ್ತೂಲ್ ವಾಲಿ ಎಂಬ ಹೆಸರಿನೊಂದಿಗೆ ಹಿಂದಿಗೆ ಡಬ್ ಆದ ಈ ಚಿತ್ರ ಹಿಂದಿ ಪ್ರೇಕ್ಷಕರನ್ನು ಗಮನ ಸೆಳೆಯಿತು. ಇದರಿಂದ ಪ್ರೇರಿತರಾದ ಕೆ.ಎಸ್.ಆರ್.ದಾಸ್ ಜ್ಯೋತಿಲಕ್ಷ್ಮಿಯವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡು ರಾಜಾ ಔರ್ ಜಾನಿ(೧೯೭೩) ಎಂಬ ಹಿಂದಿ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರವೂ ಸಾಹಸ ಪ್ರಧಾನ ಚಿತ್ರಗಳನ್ನು ಇಷ್ಟ ಪಡುವ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ಯಶಸ್ವಿಯಾಗಿತ್ತು. ಕೃಷ್ಣ ಅವರೊಂದಿಗೆ ಜೇಮ್ಸ್ ಬಾಂಡ್ ೭೭೭(೧೯೭೧), ಮೊನಗಾಡೊಸ್ತುನ್ನಾಡು ಜಾಗ್ರತ್ತ(೧೯೭೨) ಮತ್ತು ಹಂತಕುಲು ದೇವಾಂತಕುಲು(೧೯೭೨) ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಈ ಚಿತ್ರಗಳು ಹಿಂದಿ ಭಾಷೆಯಲ್ಲಿ ಡಬ್ ಆಗಿ ಅಲ್ಲೂ ಯಶಸ್ವಿಯಾಗಿವೆ. ದ್ವಾರಕೀಶ್ ನಾಯಕರಾಗಿ ಅಭಿನಯಿಸಿದ ಕನ್ನಡದ ಯಶಸ್ವಿ ಚಿತ್ರಗಳಾದ ಕುಳ್ಳ ಏಜೆಂಟ್ ೦೦೦(೧೯೭೨) ಮತ್ತು ಕೌಬಾಯ್ ಕುಳ್ಳ(೧೯೭೩) ಚಿತ್ರಗಳಲ್ಲಿ ಜ್ಯೋತಿಲಕ್ಷ್ಮಿ ನಾಯಕಿಯಾಗಿ ಅಭಿನಯಿಸಿದರು. ಕುಳ್ಳ ಏಜೆಂಟ್ ೦೦೦ ಚಿತ್ರದ ಆಡು ಆಟ ಆಡು... ಮತ್ತು ಕೌಬಾಯ್ ಕುಳ್ಳ ಚಿತ್ರದ ಸಿಂಗಾಪೂರಿಂದ ಬಂದ... ಗೀತೆಗಳು ಕನ್ನಡದ ಅಮರ ಗೀತೆಗಳಾಗಿವೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಿಗೆ ಡಬ್ ಆದ ಈ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶ ಗಳಿಸಿದವು. ಅನೇಕ ಚಿತ್ರಗಳಲ್ಲಿ ಖಳರ ಜೋಡಿಯಾಗಿ ಋಣಾತ್ಮಕ ಪಾತ್ರಗಳಲ್ಲಿಯೂ ಮಿಂಚಿರುವ ಜ್ಯೋತಿಲಕ್ಷ್ಮಿಯವರಿಗೆ ಅಂದಿನ ದಕ್ಷಿಣ ಭಾರತದ ಯಶಸ್ವಿ ನಾಯಕಿಯರಿಗಿದ್ದ ಜನಪ್ರಿಯತೆ ಮತ್ತು ಗೌರವವಿತ್ತು. ಜ್ಯೋತಿಲಕ್ಷ್ಮಿ ದಕ್ಷಿಣ ಭಾರತದ ಹೆಲೆನ್ ಎಂದೇ ಪ್ರಖ್ಯಾತರಾಗಿದ್ದರು[೬][೧೩]. ೧೯೭೩ರರಲ್ಲಿ ಜ್ಯೋತಿಲಕ್ಷ್ಮಿ ಎಂಬ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮದೇ ಹೆಸರಿನ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ ವಿರಳ ನಟಿ ಎಂಬ ಹೆಗ್ಗಳಿಕೆಗೆ ಜ್ಯೋತಿಲಕ್ಷ್ಮಿ ಪಾತ್ರರಾಗಿದ್ದಾರೆ.

೧೯೭೦ರ ದಶಕದ ಕೊನಯಾರ್ಧದಲ್ಲಿ ಜ್ಯೋತಿಲಕ್ಷ್ಮಿಯವರ ತಂಗಿ ಜಯಮಾಲಿನಿ ಕ್ಯಾಬರೆ ನರ್ತಕಿಯಾಗಿ ಪ್ರವರ್ಧಮಾನಕ್ಕೆ ಬಂದು ಯಶಸ್ವಿಯಾದದ್ದರಿಂದ ಜ್ಯೋತಿಲಕ್ಷ್ಮಿಯವರಿಗೆ ಅವಕಾಶಗಳು ಸ್ವಲ್ಪ ಕಡಿಮೆಯಾದರೂ ಅವರ ಜನಪ್ರಿಯತೆ ಸ್ವಲ್ಪವೂ ಕಡಿಮೆಯಾಗಲೇ ಇಲ್ಲ ಎನ್ನುವುದಕ್ಕೆ ಸಾಕ್ಷಿ ೧೯೮೦ರಲ್ಲಿ ಬಿಡುಗಡೆಯಾದ ಸರ್ದಾರ್ ಪಾಪರಾಯುಡು. ಎನ್.ಟಿ.ಆರ್ ಮತ್ತು ಶ್ರೀದೇವಿ ಅಭಿನಯದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಾಧಾರಣ ಯಶಸ್ಸು ಗಳಿಸಿದ್ದಾಗ ಚಿತ್ರದ ನಿರ್ಮಾಪಕರಾದ ದಾಸರಿ ನಾರಾಯಣ ರಾವ್ ಅವರು ಜ್ಯೋತಿಲಕ್ಷ್ಮಿಯವರ ಕುರಿತಾಗಿದ್ದ ಜ್ಯೋತಿಲಕ್ಷ್ಮಿಯವರೇ ಅಭಿನಯಿಸಿದ ಜ್ಯೋತಿಲಕ್ಷ್ಮಿ ಚೀರ ಕಟ್ಟಿಂದಿ... ಎಂಬ ಗೀತೆಯನ್ನು ಸೇರಿಸಿ ಚಿತ್ರವನ್ನು ಪುನಃ ಬಿಡುಗಡೆ ಮಾಡಿದರು[೬]. ಈ ಚಿತ್ರ ಅನೇಕ ಚಿತ್ರಮಂದಿರಗಳಲ್ಲಿ ೧೦೦ ದಿನಗಳ ಕಾಲ ಪ್ರದರ್ಶನಗೊಂಡು ಯಶಸ್ವಿಯಾಗುವ ಮೂಲಕ ಜ್ಯೋತಿಲಕ್ಷ್ಮಿಯವರ ಜನಪ್ರಿಯತೆಯನ್ನು ಮತ್ತೆ ಸಾಬೀತು ಪಡಿಸಿತು. ಜ್ಯೋತಿಲಕ್ಷ್ಮಿಯವರ ಹೆಸರಿನ ಸೀರೆಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡು ಬೇಡಿಕೆಯಲ್ಲಿ ಮಾರಾಟವಾಗಿದ್ದವು[೬]. ವಿವಾಹದ ನಂತರವೂ ಇದೇ ಬೇಡಿಕೆಯನ್ನು ಉಳಿಸಿಕೊಂಡ ಇವರು ೧೯೮೦ರ ದಶಕದಲ್ಲಿ ಬೇಡಿಕೆಯಲ್ಲಿದ್ದ ಕ್ಯಾಬರೆ ನರ್ತಕಿಯರಾದ ಸಿಲ್ಕ್ ಸ್ಮಿತಾ, ಅನುರಾಧ ಮತ್ತು ಡಿಸ್ಕೋ ಶಾಂತಿ ಮುಂತಾದವರೊಂದಿಗೆ ತೆರೆಯನ್ನು ಹಂಚಿಕೊಂಡಿದ್ದಾರೆ. ರಜನೀಕಾಂತ್, ಚಿರಂಜೀವಿ ಮುಂತಾದವ ಮೇರು ನಟರಿಂದ ಹಿಡಿದು ಹೊಸ ಪೀಳಿಗೆಯ ನಟರಾದ ವಿಕ್ರಮ್, ಅಜಿತ್, ವಿಜಯ್, ಕಾರ್ತಿ ಮತ್ತು ಜಯಮ್ ರವಿ ಮುಂತಾದವರೊಂದಿಗೆ ಹೆಜ್ಜೆ ಹಾಕಿದ್ದಾರೆ[೧೨]. ಜ್ಯೋತಿಲಕ್ಷ್ಮಿ ತಮ್ಮ ತಂಗಿ ಜಯಮಾಲಿನಿ ಮತ್ತು ಮಗಳು ಜ್ಯೋತಿಮೀನಾರೊಂದಿಗೆ ಅನೇಕ ಚಿತ್ರಗಳಲ್ಲಿ ಕುಣಿದಿದ್ದಾರೆ. ಜ್ಯೋತಿಲಕ್ಷ್ಮಿ ೧೯೭೦ ಮತ್ತು ೮೦ರ ದಶಕದ ನೃತ್ಯಾಸಕ್ತ ಅನೇಕ ಯುವಕ ಯುವತಿಯರಿಗೆ ಸ್ಪೂರ್ತಿಯಾಗಿದ್ದರು. ತೆಲುಗಿನ ಪ್ರಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಅವರ ಸೊಗಸಾದ ನೃತ್ಯಗಳ ಹಿಂದಿನ ಸ್ಪೂರ್ತಿ ಜ್ಯೋತಿಲಕ್ಷ್ಮಿ ಎಂಬುದು ಗಮನಾರ್ಹ ಸಂಗತಿ[೧೫]. ೨೦೧೫ರಲ್ಲಿ ಪುರಿ ಜಗನ್ನಾಥ್ ನಿರ್ದೇಶನದ ಜ್ಯೋತಿಲಕ್ಷ್ಮಿ ಚಿತ್ರ ಬಿಡುಗಡೆಗೆ ಮುನ್ನವೇ ಭಾರಿ ಹೆಸರು ಮಾಡಿತ್ತು ಎನ್ನುವುದು ಜ್ಯೋತಿಲಕ್ಷ್ಮಿ ಹೆಸರಿಗಿರುವ ಜನಪ್ರಿಯತೆಗೆ ಸಾಕ್ಷಿ[೧೬]. ತಮ್ಮ ವೃತ್ತಿ ಜೀವನದ ಕೊನೆಯ ಹಂತದಲ್ಲಿ ಜ್ಯೋತಿಲಕ್ಷ್ಮಿಯವರು ಅಭಿನಯಿಸುತ್ತಿದ್ದ ಬಹುತೇಕ ಚಿತ್ರಗಳು ಹಾಸ್ಯಪ್ರಧಾನವಾಗಿರುತ್ತಿದ್ದವು. ಇವರು ಅಭಿನಯಿಸಿದ ಕೊನೆಯ ಚಿತ್ರ ತ್ರಿಶಾ ಇಲ್ಲಾನ ನಯನತಾರ(೨೦೧೫)[೧೭].

ಸುಮಾರು ಐದು ದಶಕಗಳ ಕಾಲ ಚಿತ್ತಾಕರ್ಷಕ ಉಡುಗೆಗಳನ್ನು ತೊಟ್ಟು ನೃತ್ಯಗಳಿಂದ ಚಿತ್ರರಸಿಕರ ಮನರಂಜಿಸಿದ ಜ್ಯೋತಿಲಕ್ಷ್ಮಿ ತಮ್ಮ ನೇರವಂತಿಕೆ ಮತ್ತು ಪ್ರತಿಭೆಯಿಂದ ಜನಮಾನಸದಲ್ಲಿ ನೆಲೆನಿಂತ ಅಪೂರ್ವ ನಟಿ. ದಕ್ಷಿಣ ಭಾರತದ ಮೇರು ನಟರಾದ ಎಂ.ಜಿ.ಆರ್., ಎನ್.ಟಿ.ಆರ್., ಎ.ಎನ್.ಆರ್., ಶಿವಾಜಿ ಗಣೇಶನ್, ಪ್ರೇಮ್ ನಜೀರ್, ರಾಜ್ ಕುಮಾರ್, ಕೃಷ್ಣ, ಮಧು ಮತ್ತು ಜೈಶಂಕರ್ ಮುಂತಾದವರೊಂದಿಗೆ ಕುಣಿದಿರುವ ಜ್ಯೋತಿಲಕ್ಷ್ಮಿ ಟಿ.ಆರ್.ರಾಮಣ್ಣ, ಕೆ.ಎಸ್.ಆರ್.ದಾಸ್ ಸೇರಿದಂತೆ ಬಹುತೇಕ ಎಲ್ಲ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.

ಕಿರುತೆರೆಸಂಪಾದಿಸಿ

ಜ್ಯೋತಿಲಕ್ಷ್ಮಿಯವರು ಕಿರುತೆರೆಯಲ್ಲಿ ಸಕ್ರಿಯಯರಾಗಿ ತೊಡಗಿಸಿಕೊಂಡಿದ್ದರು. ತಮಿಳಿನ ಸನ್ ಟಿವಿ ವಾಹಿನಿಯಲ್ಲಿ ಪ್ರಸಾರವಾದ ವೇಲನ್ ಮತ್ತು ವಸಂತಂ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.

ವೈಯಕ್ತಿಕ ಜೀವನಸಂಪಾದಿಸಿ

ಪ್ರಸಿದ್ಧ ಚಲನಚಿತ್ರ ಛಾಯಾಗ್ರಹಕರಾದ ಸಾಯಿಪ್ರಸಾದ್ ಅವರನ್ನು ಪ್ರೀತಿಸಿ ವಿವಾಹವಾದ ಜ್ಯೋತಿಲಕ್ಷ್ಮಿ ತಮ್ಮ ಪತಿಯೊಂದಿಗೆ ಸಂತೃಪ್ತ ಜೀವನ ನಡೆಸಿದ್ದರು. ಈ ದಂಪತಿಯ ಏಕೈಕ ಪುತ್ರಿ ಜ್ಯೋತಿಮೀನಾ ಕೂಡ ಕೆಲವು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನರ್ತಕಿಯಾಗಿ ಅಭಿನಯಿಸಿದ್ದಾರೆ. ರಕ್ತ ಕ್ಯಾನ್ಸರ್ನಿಂದ ಬಳಲುತ್ತಿದ್ದ ಜ್ಯೋತಿಲಕ್ಷ್ಮಿ ಆಗಸ್ಟ್ ೯, ೨೦೧೬ ಮಂಗಳವಾರದಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ[೭].

ಜ್ಯೋತಿಲಕ್ಷ್ಮಿ ಅಭಿನಯದ ಕೆಲವು ಚಿತ್ರಗಳುಸಂಪಾದಿಸಿ

ತೆಲುಗುಸಂಪಾದಿಸಿ

  • ಪುಣ್ಯವತಿ(೧೯೬೭)-ಎನ್.ಟಿ.ಆರ್., ಕೃಷ್ಣಕುಮಾರಿ, ಹರನಾಥ್
  • ಜೇಮ್ಸ್ ಬಾಂಡ್ ೭೭೭(೧೯೭೧)-ಕೃಷ್ಣ
  • ಮೋಸಗಾಳ್ಳುಕು ಮೋಸಗಾಡು(೧೯೭೧)-ಕೃಷ್ಣ, ವಿಜಯನಿರ್ಮಲ
  • ಕೊರಾಡ ರಾಣಿ(೧೯೭೨)-ರಾಮಕೃಷ್ಣ
  • ಮೊನಗಾಡೊಸ್ತುನ್ನಾಡು ಜಾಗ್ರತ್ತ(೧೯೭೨)-ಕೃಷ್ಣ
  • ಹಂತಕುಲು ದೇವಾಂತಕುಲು(೧೯೭೨)-ಕೃಷ್ಣ
  • ಪಿಲ್ಲಾ ಪಿಡುಗ(೧೯೭೨)-ರಾಮಕೃಷ್ಣ
  • ಜ್ಯೋತಿಲಕ್ಷ್ಮಿ(೧೯೭೩)-ರಾಮಕೃಷ್ಣ
  • ಪಂಜರಮ್ಲೋ ಪಸಿಪಾಪ-(೧೯೭೩)-ರಾಮಕೃಷ್ಣ
  • ಗುಂಡೇಲು ತೀಸಿನ ಮೊನಗಾಡು(೧೯೭೪)-ಕಾಂತಾರಾವ್

ತಮಿಳುಸಂಪಾದಿಸಿ

  • ಪೂವುಮ್ ಪೊಟ್ಟುಮ್(೧೯೬೮)-ಎ.ವಿ.ಎಂ.ರಾಜನ್, ಭಾರತಿ, ಮುತ್ತುರಾಮನ್

ಕನ್ನಡಸಂಪಾದಿಸಿ

  • ಕುಳ್ಳ ಏಜೆಂಟ್೦೦೦(೧೯೭೨)-ದ್ವಾರಕೀಶ್
  • ಕೌಬಾಯ್ ಕುಳ್ಳ(೧೯೭೩)-ದ್ವಾರಕೀಶ್

ಮಲಯಾಳಂಸಂಪಾದಿಸಿ

  • ಮುರಪ್ಪೆಣ್ಣು(೧೯೬೫)-ಪ್ರೇಮ್ ನಜೀರ್, ಶಾರದಾ
  • ಕುಂಜಲ್ ಮರಕ್ಕರ್(೧೯೬೭)-ಪ್ರೇಮ್ ನಜೀರ್
  • ನಗರಮೇ ನಂದಿ(೧೯೬೭)-ಪ್ರೇಮ್ ನಜೀರ್, ಉಷಾನಂದಿನಿ, ಮಧು
  • ಕೊಡುಂಗಲ್ಲೂರಮ್ಮ(೧೯೬೮)-ಪ್ರೇಮ್ ನಜೀರ್, ಕೆ.ಆರ್.ವಿಜಯಾ

[೧೮]

ಹಿಂದಿಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

  1. "ರಕ್ತಕಣ್ಣೀರು ಸೇರಿ 300ಚಿತ್ರಗಳಲ್ಲಿ ನಟಿಸಿದ್ದ ಜ್ಯೋತಿಲಕ್ಷ್ಮಿ ನಿಧನ". ಉದಯವಾಣಿ. Archived from the original on 2016-08-15. Retrieved 2016-08-15.
  2. "ನಾಟ್ಯಮಯೂರಿ ಜ್ಯೋತಿಲಕ್ಷ್ಮಿಯ ಗೆಜ್ಜೆ ಗುರುತು". ಫಿಲ್ಮಿಬೀಟ್.
  3. "ಹಿರಿಯ ನಟಿ ಜ್ಯೋತಿಲಕ್ಷ್ಮಿ ಇನ್ನಿಲ್ಲ". ಪ್ರಜಾವಾಣಿ.
  4. "Actor Jyothilakshmi passes away". ದಿ ಹಿಂದು.
  5. "ಹಿರಿಯ ಪಂಚಭಾಷಾ ನಟಿ ಜ್ಯೋತಿಲಕ್ಷ್ಮಿ ವಿಧಿವಶ". ಕನ್ನಡಪ್ರಭ.
  6. ೬.೦ ೬.೧ ೬.೨ ೬.೩ ೬.೪ ೬.೫ "Evergreen seductress". Metro India News.[ಶಾಶ್ವತವಾಗಿ ಮಡಿದ ಕೊಂಡಿ]
  7. ೭.೦ ೭.೧ ೭.೨ ೭.೩ ೭.೪ ೭.೫ "Yesteryear's actor Jyothi Lakshmi no more". ಡೆಕ್ಕನ್ ಕ್ರೋನಿಕಲ್.
  8. ೮.೦ ೮.೧ "Jyothi Lakshmi impressed Malayalis with her grace and beauty". ದಿ ಹಿಂದು.
  9. "Kunjali Marakkar - 1967". ದಿ ಹಿಂದು.
  10. "Malayalees' dream city". ಫ್ರಂಟ್ ಲೈನ್.
  11. "KODUNGALLOORAMMA 1968". ದಿ ಹಿಂದು.
  12. ೧೨.೦ ೧೨.೧ "VETERAN GLAMOUR ACTRESS PASSES AWAY". ಕಾಲಿವುಡ್ ಎಕ್ಸಪ್ರೆಸ್.[ಶಾಶ್ವತವಾಗಿ ಮಡಿದ ಕೊಂಡಿ]
  13. ೧೩.೦ ೧೩.೧ "ಆಕೆ ಹಿರೋಯಿನ್ ಅಲ್ಲ ಹೀರೊ!... ದ್ವಾರಕೀಶ್".
  14. "Actor and dancer Jyothi Lakshmi dies at 63". ದಿ ಟೈಮ್ಸ್ ಆಫ್ ಇಂಡಿಯಾ.
  15. "Megastar's Jyothi Lakshmi Connection!". gulte.com.
  16. "Veteran actress Jyothi Lakshmi passes away". ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌.
  17. "Jyothi Lakshmi, popular actress of Tamil and Telugu movies passes away". ದಿ ಇಂಡಿಯನ್ ಎಕ್ಸ್‌ಪ್ರೆಸ್‌.
  18. "List of Malayalam Movies acted by Jyothilakshmi". ಮಲಯಾಳಂ ಮೂವಿ ಮ್ಯೂಸಿಕ್ ಡೇಟಾಬೇಸ್.