ಜಿ.ಎನ್.ರಂಗನಾಥರಾವ್
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ರಂಗನಾಥರಾಯರಿಗೆ ಖಾದ್ರಿ ಪ್ರಶಸ್ತಿ
ಹಿರಿಯ ಪತ್ರಕರ್ತರಾದ ಜಿ.ಎನ್.ರಂಗನಾಥರಾವ್ ಅವರಿಗೆ ಈ ವರ್ಷದ (೨೦೦೯) ಖಾದ್ರಿ ಶಾಮಣ್ಣ ಪ್ರಶಸ್ತಿಯ ಗೌರವ ಸಂದಿದೆ. ‘ಸಂಯುಕ್ತ ಕರ್ನಾಟಕ’ ಬೆಂಗಳೂರು ಆವೃತ್ತಿಯಲ್ಲಿ ೧೯೬೨ರಲ್ಲಿ ಉಪಸಂಪಾದಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಜಿ.ಎನ್.ಆರ್. ಮುಂದೆ ‘ಪ್ರಜಾವಾಣಿ’ ಪತ್ರಿಕೆಗೆ ಸೇರ್ಪಡೆಯಾದರು. ಹಂತ ಹಂತವಾಗಿ ಔನ್ನತ್ಯ ಸಾಧಿಸಿದ ಜಿ.ಎನ್.ಆರ್. ಆ ಪತ್ರಿಕಾ ಸಮೂಹದ ‘ಕಾರ್ಯನಿರ್ವಾಹಕ ಸಂಪಾದಕ’ ಹುದ್ದೆಗೇರಿ ನಿವೃತ್ತರಾದರು. ಅವರು ‘ಪ್ರಜಾವಾಣಿ’ಯ ಸಾಪ್ತಾಹಿಕ ಪುರವಣಿಯ ಉಸ್ತುವಾರಿ ವಹಿಸಿಕೊಂಡ ಸಮಯದಲ್ಲಿ, ಸುಧಾ ವಾರ ಪತ್ರಿಕೆಯ ನೇತೃತ್ವ ವಹಿಸಿದ್ದ ಸಂದರ್ಭದಲ್ಲಿ ನೂರಾರು ಹೊಸ ಬರಹಗಾರರಿಗೆ ಉತ್ತೇಜನ ನೀಡಿದ್ದರು. ಅವರ ಒತ್ತಾಸೆಯಿಂದಲೇ ನಾನು (ಹಾಲ್ದೊಡ್ಡೇರಿ ಸುಧೀಂದ್ರ) ‘ಸುಧಾ’ ಯುಗಾದಿ ವಿಶೇಷಾಂಕಕ್ಕೆ (೨೦೦೦) ‘ಇಂಟರ್‌ನೆಟ್ ಎಂಬ ಮಾಯಾಜಾಲ’ ಎಂಬ ಅಂತರಜಾಲ ಕೈಪಿಡಿಯನ್ನು ರಚಿಸಿದ್ದು. ಹಾಗೆಯೇ ‘ವಿಜ್ಞಾನಕ್ಕೊಂದು ಬೆಳಕಿಂಡಿ’ಯ ಮೂಲಕ ಅವರು ನನ್ನನ್ನು ಕನ್ನಡ ಸಾರಸ್ವತ ಲೋಕಕ್ಕೆ ಅಂಕಣಕಾರನಾಗಿ ಪರಿಚಯಿಸಿದರು.
ಜಿ.ಎನ್.ಆರ್. ಅವರದು ಬಹುಮುಖ ಪ್ರತಿಭೆ. ‘ನವರಂಗ’ ಎಂಬ ಕಾವ್ಯನಾಮದಲ್ಲಿ ಕಾದಂಬರಿ, ವಿಡಂಬನಾ ಬರಹ, ಕತೆಗಳನ್ನು ರಚಿಸಿದ್ದಾರೆ. ನಾಟಕಗಳನ್ನು ಬರೆದಿದ್ದಾರೆ, ವಿಮರ್ಶೆಗಳನ್ನು ಮಂಡಿಸಿದ್ದಾರೆ. ಕಾವ್ಯಪ್ರೇಮಿಯಾದ ಜಿ.ಎನ್.ಆರ್. ಕವಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಪತ್ರಕರ್ತರ ಕಾಲೇಜುಗಳಲ್ಲಿ ಬೋಧಿಸುವುದರ ಜತೆಗೆ ಅವರ ಅನುಕೂಲಕ್ಕೆ ಪಠ್ಯ ಪುಸ್ತಕಗಳನ್ನು ರಚಿಸಿದ್ದಾರೆ. ಇಂದಿಗೂ ಕನ್ನಡ ಸಾಂಸ್ಕೃತಿಕ ಸಮಾರಂಭಗಳಿಗೆ ತಪ್ಪದೇ ಹಾಜರಿ ಹಾಕುವ ಜಿ.ಎನ್.ಆರ್. ತಮ್ಮ ಆಪ್ತ ಲೇಖಕ ಬಳಗಕ್ಕೆ ಸ್ಫೂರ್ತಿ ತುಂಬುವ ಸಹೃದಯಿ.
ಅವರ ವೃತ್ತಿಜೀವನದ ಆರಂಭದ ದಿನಗಳು ಹೇಗಿದ್ದವು? ಎಂಬುದನ್ನು ‘ಸುದ್ದಿಜೀವಿ’ ಎಂಬ ಪತ್ರಕರ್ತ ಹೆಚ್.ಆರ್.ನಾಗೇಶರಾವ್ [ಸಂಯುಕ್ತ ಕರ್ನಾಟಕ ಪತ್ರಿಕೆಯ ನಿವೃತ್ತ ಸ್ಥಾನಿಕ ಸಂಪಾದಕರು] ಅವರ ನೆನಪಿನ ಹೊತ್ತಿಗೆಗೆ ಬರೆದ ಲೇಖನದಲ್ಲಿ ಜಿ.ಎನ್.ಆರ್. ಅವರು ಸ್ವಾರಸ್ಯಕರವಾಗಿ ದಾಖಲಿಸಿದ್ದಾರೆ. ಆ ಲೇಖನದ ಆಯ್ದ ಭಾಗಗಳು ನಿಮ್ಮ ಓದಿಗೆ ......
ಸಂಕ ಎಂದರೆ ಮಲೆನಾಡಿನಲ್ಲಿ ಸೇತುವೆ, ನಮ್ಮನ್ನು ಮುಂದಕ್ಕೆ ದಾಟಿಸುವ ಮಾರ್ಗ. ಇದು ನಾವೆಲ್ಲ ಬಲ್ಲ ಅರ್ಥ. ಆದರೆ ಕನ್ನಡದ ಪತ್ರಿಕಾ ಪಾರಿಭಾಷಿಕ ನಿಘಂಟಿನಲ್ಲಿ ಇದಕ್ಕೆ ಬೇರೊಂದು ಅರ್ಥ ಕಾಣಿಸಿಕೊಂಡರೆ ನೀವು ಹುಬ್ಬೇರಿಸಬೇಕಿಲ್ಲ. ಏಕೆಂದರೆ ನಮ್ಮಲ್ಲಿ ಹಳೆಯ ತಲೆಮಾರಿನ ಪತ್ರಕರ್ತರಿಗೆ ‘ಸಂಕ’ ಎಂದರೆ ‘ಸಂಯುಕ್ತ ಕರ್ನಾಟಕ’ ಎಂದೇ ಅರ್ಥ.
ನಾನು ‘ಸಂಕ’ದ ಬಾಗಿಲಲ್ಲಿ ನಿಂತದ್ದು 1962ರಲ್ಲಿ. ಆಗ ರಂಗನಾಥ ದಿವಾಕರರು ಅದರ ಸಂಪಾದಕರು. ಆರ್.ಕೆ.ಜೋಶಿ ಸ್ಥಾನಿಕ ಸಂಪಾದಕರು. ಸುರೇಂದ್ರ ದಾನಿ ಸುದ್ದಿ ಸಂಪಾದಕರು. ಕೆ.ಶಾಮರಾವ್ ಪ್ರಧಾನ ವರದಿಗಾರರು.
‘ಸಂಕ’ ಎಂದ ಕೂಡಲೇ ಮೊದಲು ನನಗೆ ನೆನಪಾಗುವ ಎರಡು ಹೆಸರುಗಳೆಂದರೆ ಹೆಚ್.ಆರ್.ನಾಗೇಶರಾವ್ ಮತ್ತು ಕೆ.ಅನಂತಸುಬ್ಬರಾವ್. ಇಬ್ಬರದೂ ಸಜ್ಜನಿಕೆಗೆ ಸಾಕಾರವಾದ ವ್ಯಕ್ತಿತ್ವ. ಇಬ್ಬರೂ ತಂಪು ಹೊತ್ತಿನಲ್ಲಿ ನೆನೆಯಬೇಕಾದ ಹೆಸರುಗಳು. ‘ಸಂಕ’ದಲ್ಲಿ ನನ್ನ ಓರಿಗೆಯವರೆಂದರೆ ಜಿ.ಎಸ್.ಸದಾಶಿವ. ಸ್ವಲ್ಪ ಚಿಕ್ಕವನು ಖಾದ್ರಿ ಎಸ್.ಅಚ್ಯುತನ್. ಸದಾಶಿವ ನನಗಿಂತ ಸ್ವಲ್ಪ ಮೊದಲು ಸೇರಿದವರು. ಅಚ್ಯುತ ನಂತರ ನಮ್ಮನ್ನು ಸೇರಿಕೊಂಡವನು. ಆದರೆ ಇಬ್ಬರೂ ನನಗಿಂತ ಮೊದಲೇ ‘ಸಂಕ’ ದಾಟಿದವರು. ಯುವ ಪಾಳೆಯದ ಇನ್ನಿಬ್ಬರು ರಂಗನಾಥ್ ಮತ್ತು ಪೂರಾನಾ. ಇನ್ನು ಅರ್ಚಕ ವೆಂಕಟೇಶ, ಎಸ್.ವ್ಯಾಸರಾವ್, ವಿ.ಅರ್.ಶ್ಯಾಮ್ (ಇಂದಿರಾತನಯ), ಎನ್.ವಿ.ಜೋಶಿ ನಮ್ಮ ಸೀನಿಯರ್ಸ್. ನಾಗೇಶರಾವ್ ನಾನು ಸೇರಿದಾಗ ಚೀಫ್-ಸಬ್ ನ್ಯೂಸ್ ಡೆಸ್ಕಲ್ಲಿ.
‘ಸಂಕ’ದ ಮಣ್ಣಿನ ಗುಣವೋ, ಏನೋ? ಅಲ್ಲಿ ಆಗಾಗ ಕಂಪನಗಳಾಗುತ್ತಿದ್ದವು. ನಾನು ಸೇರಿದ ಕೆಲವೇ ದಿನಗಳಲ್ಲಿ ಅಂಥ ಒಂದು ಕಂಪನವಾಗಿ ಆರ್.ಕೆ.ಜೋಶಿ ಮತ್ತು ದಾನಿ ತೌರಿಗೆ (ಹುಬ್ಬಳ್ಳಿಗೆ) ವಾಪಸಾದರು. ಈ ಎರಡು ಕುರ್ಚಿಗಳಿಗೆ ಶಾಮರಾವ್ ಮತ್ತು ನಾಗೇಶರಾವ್ ಅಗತ್ಯ ಕಂಡು ಬಂದಿರಬೇಕು. ನಾಗೇಶರಾವ್‍ಗೆ ಇದು ಬಡ್ತಿಯೊ, ಏನೊ ತಿಳಿಯಲಿಲ್ಲ. (ಏಕೆಂದರೆ ಆಗೆಲ್ಲಾ ಬಡ್ತಿ ಎಂದರೆ ಕೇವಲ ಜುಟ್ಟಿಗೆ ಮಲ್ಲಿಗೆ ಹೂವಷ್ಟೆ). ಆದರೂ ಸುದ್ದಿ ಸಂಪಾದಕರಾಗಿ ನಾಗೇಶರಾವ್ ನಮಗೆ ಅಂದಿನಿಂದ ಹೆಚ್ಚು ಹತ್ತಿರದವರಾದರು.
ಅಂದು ‘ಸಂಕ’ದ ಸಂಪಾದಕೀಯ ವಿಭಾಗ ನಾಲ್ಕು ಗೋಡೆಗಳ ಮಧ್ಯದ ಒಂದು ದೊಡ್ಡ ಹಜಾರ. ಜೈಲಿನಂಥ ದೊಡ್ಡ ಗೋಡೆಗಳು. ಗವ್ ಎಂದು ಕವಚಿಕೊಳ್ಳುವಂಥ ದಟ್ಟ ನೀಲಿ ಬಣ್ಣದ ಗೋಡೆಗಳು. ಈ ಹಜಾರಕ್ಕೆ ಮುಂದುಗಡೆ ಹೆಬ್ಬಾಗಿಲು ಮತ್ತು ಪಕ್ಕದಿಂದ ಎರಡು ಕಡೆ ಪ್ರವೇಶಾವಕಾಶ. ಮುಂಬಾಗಿಲಿನಲ್ಲಿ ರಂಗನಾಥ ದಿವಾಕರರ ಕಚೇರಿ. ಹಾಗಾಗಿ ಆ ಕಡೆಯಿಂದ ಸಂಪಾದಕೀಯಕ್ಕೆ ಪ್ರವೇಶವಿಲ್ಲ. ಪಕ್ಕದ ಒಂದು ಬಾಗಿಲಿನಿಂದ ಪ್ರವೇಶಿಸಬೇಕಾದರೆ ಶಾಮರಾಯರ ಚೇಂಬರ್ ಮೂಲಕವೇ ಬರಬೇಕು. ಇನ್ನೊಂದು ಬಾಗಿಲಿನಿಂದಾದರೆ ಕಂಪೋಜಿಂಗ್ ದಾಟಿ ಬರಬೇಕಿತ್ತು. ನಾವೆಲ್ಲ ಕಂಪೋಜಿಂಗ್ ಮೂಲಕವೇ ಹೋಗಿ-ಬಂದು ಮಾಡುತ್ತಿದ್ದೆವು. ಈ ಎರಡು ಬಾಗಿಲ ಹೊರತು ಸಂಪಾದಕೀಯ ವಿಭಾಗಕ್ಕೆ ಕಿಟಕಿಗಳಾಗಲಿ, ಬೆಳಕಿಂಡಿಗಳಾಗಲಿ, ವಾತಾಯನಗಳಾಗಲಿ ಇರಲೇ ಇಲ್ಲ. ಎಲ್ಲ ಕಡೆಯಿಂದ ಬರುವ ಗಾಳಿ-ಬೆಳಕನ್ನು ಸ್ವೀಕರಿಸುವ ಧ್ಯೇಯದಲ್ಲಿ ಆ ಮಠಕ್ಕೆ ನಂಬಿಕೆ ಇದ್ದಂತಿರಲಿಲ್ಲ. ಹೊರಗಿನ ಬೆಳಕಿಗೆ ಗಡಿಪಾರು, ಕತ್ತಲು ಕವಿದ ಪ್ರಪಂಚದಲ್ಲಿ ಟ್ಯೂಬ್ ಲೈಟುಗಳದೇ ಎಲ್ಲ ಕಾರುಬಾರು, ಎಲ್ಲ ಪಾರುಪತ್ಯೆ. ಕತ್ತು ತಗ್ಗಿಸಿ ಬರೆಯುವುದಷ್ಟೇ ನಮ್ಮ ಕೆಲಸ. ಕತ್ತೆತ್ತಿದರೆ ಶಾಮರಾಯರ ದುರಾಗ್ರಹ ದೃಷ್ಟಿಗೆ ಢಿಕ್ಕಿ ಹೊಡೆಯುವ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಹೆದರಿಕೆ! ಇಂಥ ದಯನೀಯ ವಾತಾವರಣದಲ್ಲಿ, ನಾಗೇಶರಾಯರ ಇರುವಿಕೆಯೇ ಹಿತಕರವಾಗಿರುತ್ತಿತ್ತು.
ನಾಗೇಶರಾಯರದು ಪತ್ತೇದಾರಿ ಕಣ್ಣುಗಳು. ಕೈ ಖಾಲಿಯಾಗಿ, ಬಿಡುಬೀಸಾಗಿ ಕುಳಿತ ಉಪಸಂಪಾದಕರಿಗೂ ಅವರಿಗೂ ಗಳಸ್ಯ-ಕಂಠಸ್ಯ! ಆಪ್ತವಾಗಿ ಕುಶಲೋಪರಿ ವಿಚಾರಿಸುತ್ತಲೇ ಕೈಗೆ ಕೆಲಸ ಕೊಡುತ್ತಿದ್ದರು. ‘ನಿಧಾನವಾಗಿ ಮಾಡಿ, ಅರ್ಜೆಂಟೇನೂ ಇಲ್ಲ’ ಎಂದು ಹೇಳಲು ಮರೆಯುತ್ತಿರಲಿಲ್ಲ. ‘ನಾವು ಬುದ್ಧಿಜೀವಿಗಳು, ನಮ್ಮನ್ನು ಕೂಲಿಯವರ ಥರಾ ನಡೆಸಿಕೊಳ್ಳುತ್ತಿದ್ದಾರಲ್ಲ’ ಎಂದು ನಮಗೆಲ್ಲ ಒಳಗೊಳಗೇ ಕೋಪ. ಕೆಲವರು ಅವರಿಗೆ ‘ಮೇಸ್ತ್ರಿ’ ಎಂಬ ಅಭಿದಾನವನ್ನೂ ಕೊಟ್ಟುಬಿಟ್ಟಿದ್ದರು. ನಾಗೇಶರಾಯರಿಗೆ ನಮ್ಮ ಅಸಮಧಾನ ಗೊತ್ತಿದ್ದರೂ ನಕ್ಕು ಬಿಡುತ್ತಿದ್ದರು. ಶಾ.ರಾ.ರು ಯಾವಾಗ ಬೇಕಾದರೂ ತಮ್ಮ ಕೊಠಡಿಯ ರೆಕ್ಕೆ ಬಾಗಿಲು ತೆಗೆದು ನೋಡಿದಾಗ ಉಪಸಂಪಾದಕರೆಲ್ಲ ಕತ್ತು ತಗ್ಗಿಸಿ ಬರೆಯುತ್ತಿರಬೇಕು. ಇಲ್ಲವಾದಲ್ಲಿ ನಾಗೇಶರಾಯರಿಗೆ ಬುಲಾವ್. ಖಾಲಿ ಕೈ ಉಪಸಂಪಾದಕನಿಂದ ಅನುವಾದಿಸಲು ‘ಸ್ಟೇಟ್ಸ್‍ಮನ್’ ಪತ್ರಿಕೆಯ ಸಂಪಾದಕೀಯ ಪುಟದ ಲೇಖನ ಕಳುಹಿಸುತ್ತಿದ್ದರು. ಅಂದು ಅವನು ಆ ಲೇಖನ ಅನುವಾದಿಸಿಯೇ ಮನೆಗೆ ಹೋಗಬೇಕು. ಅದಕ್ಕೆ ಮುನ್ನ ಪಾಳಿ ಮುಗಿದರೂ ಹೋಗುವಂತಿಲ್ಲ. ಶಾ.ರಾ. ಹದ್ದಿನ ಕಣ್ಣಿನಿಂದ ಪಾರಾಗಲು ಕೈ ಖಾಲಿಯಿದ್ದಾಗ ಸಹೋದ್ಯೋಗಿಗಳು ಕೆಲವರು ‘ಶ್ರೀ ರಾಮ ನಾಮ’ ಬರೆಯುತ್ತಿದ್ದುದೂ ಉಂಟು. ಶಾ.ರಾ. ಹದ್ದಿನ ಕಣ್ಣುಗಳಿಂದ ತಪ್ಪಿಸಲೆಂದೇ ನಾಗೇಶರಾಯರು ನಮ್ಮ ಕೈ ಬರಿದಾಗಿರದಂತೆ ನೋಡಿಕೊಳ್ಳುತ್ತಿದ್ದರು. ಬೆಳಗಿನ ಪಾಳಿಯಲ್ಲಿ ಇದು ಸಾಮಾನ್ಯವಾಗಿರುತ್ತಿತ್ತು. ‘ನಿಧಾನವಾಗಿ ಮಾಡಿ, ಅರ್ಜೆಂಟಿಲ್ಲ’ ಎಂದು ನಾಗೇಶರಾಯರು ಪಿಸುಗುಟ್ಟುತ್ತಿದ್ದುದರ ರಹಸ್ಯ ನಮಗೆ ಕ್ರಮೇಣ ಗೊತ್ತಾಯಿತು. ಆತುರದ ತೀರ್ಮಾನಕ್ಕೆ ಬಂದವರು ನಾಚಬೇಕಾಯಿತು.
ನಾಗೇಶರಾಯರು ಮೃದು ಭಾಷಿ ಮತ್ತು ಮಿತ ಭಾಷಿ. ಟೀಕೆ, ನಿಂದನೆ, ಭರ್ತ್ಸನೆಗಳು ಅವರ ಬಾಯಿಂದ ಕೇಳಿ ಬರುತ್ತಲೇ ಇರಲಿಲ್ಲ. ಬೇರೆಯವರದಕ್ಕೆ ಅವರೂ ಕಿವುಡಾಗಿರುತ್ತಿದ್ದರು. ಹಾಗೆಂದು ನಿರ್ಲಿಪ್ತರೂ ಅಲ್ಲ, ಹೇಳಬೇಕಾದುದ್ದನ್ನು ಹೇಳಿಯೇ ಹೇಳುತ್ತಿದ್ದರು. ಅವರ ಕ್ವಿನೈನ್ ಲೇಪಿತ ಸೌಮ್ಯ ನುಡಿಯ ಸವಿ, ಸಿಹಿ ಮುಗಿದ ಮೇಲೆ ಅನುಭವಕ್ಕೆ ಬರುತ್ತಿತ್ತು. ಹಾಗೆಂದು ಸುಖಾಸುಮ್ಮನೆ ಹೊಗಳಿದವರೂ ಅಲ್ಲ, ಮಾತಿನಂತೆ ಕೆಲಸದಲ್ಲೂ ಶಿಸ್ತು, ಅಚ್ಚುಕಟ್ಟು. ಸಹೋದ್ಯೋಗಿಗಳಿಂದಲೂ ಇದೇ ಸಮಯ, ಶಿಸ್ತುಗಳನ್ನು ನಿರೀಕ್ಷಿಸುತ್ತಿದ್ದರು.
ಒಮ್ಮೆ ಸಂಪಾದಕೀಯ ವಿಭಾಗದಲ್ಲಿ ಕೊಂಚ ಕಂಪನವಾಯಿತು. ಅಂದರೆ ಸ್ವಲ್ಪ ಬದಲಾವಣೆಗಳು. ಈ ಬದಲಾವಣೆಗಳು ಶಾ.ರಾ. ಮೂಗಿನ ನೇರಕ್ಕಿದ್ದು, ಇದರಿಂದ ಕೆಲವರಿಗೆ ಅಸಮಾಧಾನವಾಗಿತ್ತ್ತು. ಆಗ ನನಗೆ ರಾತ್ರಿ ಪಾಳಿ. ಮರುದಿನ ಒಂದು ಪ್ರಮುಖ ಸುದ್ದಿ ‘ಸಂಕ’ದಲ್ಲಿ ಬರಲಿಲ್ಲ. ಬೆಳಿಗ್ಗೆ ಹತ್ತರ ಸಮಯ. ನಾನು ಅದೇ ತಾನೆ ಎದ್ದಿದ್ದೆ. ಶಾ.ರಾ.ರಿಂದ ಮನೆಗೇ ಬುಲಾವ್. ‘ಈ ಕ್ಷಣ ಕರೆದುಕೊಂಡು ಬಾ’ ಎಂದು ಕಾರು ಕಳುಹಿಸಿದ್ದರು. ಡ್ರೈವರ್ ನೇರವಾಗಿ ಶಾ.ರಾ. ಮನೆಗೆ ಕರೆದುಕೊಂಡು ಹೋದ. ಕೋಪದಿಂದ ಕೆಂಡಾಮಂಡಲವಾಗಿದ್ದ ಶಾ.ರಾ. ಪಡಸಾಲೆಯಲ್ಲೇ ಕೋರ್ಟ್ ಮಾರ್ಶಲ್ ಶುರು ಮಾಡಿದರು. ‘ನನ್ನ ವಿರುದ್ಧ ನಿಲ್ಲೋ ಅಷ್ಟು ಧೈರ್ಯ ಬಂತೆ, ನಿನಗೆ’? ಎಂದೆಲ್ಲ ಎದುರು ನಿಂತ ನನ್ನ ಮೇಲೆ ಹರಿಹಾಯ್ದ್ರರು. ತಾತ್ಪರ್ಯ ಇಷ್ಟೆ. ಹಿಂದಿನ ದಿನದ ಬದಲಾವಣೆಗಳಿಂದ ಅಸಮಾಧಾನ ಹೊಂದಿದ್ದ ನಾನು ಆ ಮಹತ್ವದ ಸುದ್ದಿಯನ್ನು ತಮ್ಮ ಗಮನಕ್ಕೆ ತರಲಿಲ್ಲವೆಂದೂ, ಅದನ್ನು ಬರೆದುಕೊಡಲಿಲ್ಲವೆಂದೂ, ಆಗ ಮುಖ್ಯ ಉಪಸಂಪಾದಕರಾಗಿದ್ದವರು ನನ್ನ ಕುತ್ತಿಗೆಗೆ ಲೋಪವನ್ನು ಕಟ್ಟಿ ಬೀಸುವ ದೊಣ್ಣೆಯಿಂದ ಅವರು ಪಾರಾಗಿದ್ದರು. ವಾಸ್ತವದಲ್ಲಿ ನಾನು ಆ ಸುದ್ದಿಯನ್ನು ಮುಖ್ಯ ಉಪಸಂಪಾದಕರ ಗಮನಕ್ಕೆ ತಂದಿದ್ದರೂ ಅದೇನು ಅಂಥಾ ಮಹತ್ವದ ಸುದ್ದಿಯಲ್ಲವೆಂದು ಅವರು ಬದಿಗೆ ತೆಗೆದಿಟ್ಟಿದ್ದರು. ನನ್ನ ವಿವರಣೆ, ಸಮಜಾಯಿಷಿ ಯಾವುದನ್ನೂ ಶಾ.ರಾ. ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಸ್ವಹಸ್ತದಲ್ಲಿ ಸಹಿ ಹಾಕಿ ನೋಟೀಸನ್ನೂ ನೀಡಿದರು.
ನಾನು ನಾಗೇಶರಾಯರಿಗೆ ಎಲ್ಲವನ್ನೂ ತಿಳಿಸಿ, ‘ನಾನು ತಪ್ಪು ಮಾಡಿಲ್ಲ. ನನಗೆ ನೋಟೀಸ್ ಕೊಟ್ಟಿರೋದು ನ್ಯಾಯವಲ್ಲ, ಅದಕ್ಕೆ ನಾನು ಉತ್ತರ ಕೊಡುವುದಿಲ್ಲ’ ಎಂದು ಸ್ವಲ್ಪ ಜೋರಾಗಿಯೇ ಹೇಳಿದೆ. ನನ್ನ ಮಾತನ್ನು ಸಾವಧಾನದಿಂದ ಕೇಳಿಸಿಕೊಂಡ ನಾಗೇಶರಾಯರು -
‘ಅಷ್ಟೇ ತಾನೆ ಬಿಡಿ, ಅದೊಂದು ಸಣ್ಣ ಕಿಡಿ’ ಎಂದರು.
‘ಸಣ್ಣದೇನು ಬಂತು ಸರ್, ಸುಡ್ತಿದೆಯಲ್ಲ’ ಎಂದೆ.
‘ಇಲ್ಲ, ಸುಡುವ ಶಕ್ತಿ ಅದಕ್ಕಿಲ್ಲ. ಅದೊಂದು ಸಣ್ಣ ಕಿಡಿ. ಸಣ್ಣದು’ ಎಂದು ಒತ್ತಿ ಹೇಳಿದರು.
ನಾನು ಮತ್ತಷ್ಟು ನೊಂದುಕೊಂಡು, ಇವರಿಂದ ನನಗೆ ಸಹಾಯವಾಗದೆಂದು ಹತಾಶನಾದೆ. ಮುಂದಿನದನ್ನು ಎದುರಿಸಲು ಸಿದ್ಧನಾದೆ. ಕೆಲಸ ಹೋಯಿತು ಎಂದು ಕೊಂಡು ಆ ಅಂತಿಮ ಕ್ಷಣಕ್ಕಾಗಿ ಎದುರು ನೋಡುತ್ತಾ ಕುಳಿತೆ. ಹದಿನೈದು ದಿನ ಕಳೆದು ತಿಂಗಳಾಯಿತು. ಆ ಅಂತಿಮ ಕ್ಷಣ ನನಗೆ ಬರಲೇ ಇಲ್ಲ.ಕಾರಣ ನಂತರ ತಿಳಿಯಿತು. ಹಿಂದಿನ ದಿನದ ಬದಲಾವಣೆಯಿಂದ ತನಗೇ ಅಸಮಾಧಾನವಾಗಿತ್ತೆಂದು ನನ್ನ ವಿರುದ್ಧ ದೂರು ಕೊಟ್ಟಿದ್ದ ಮುಖ್ಯ ಉಪಸಂಪಾದಕರೇ ನಾಗೇಶರಾಯರ ಹತ್ತಿರ ಅಲವತ್ತುಕೊಂಡಿದ್ದರು. ಸೂಕ್ತ ಸಮಯದಲ್ಲಿ ನಾಗೇಶರಾಯರು ಶಾ.ರಾ. ಅವರಿಗೆ ವಿಷಯ ತಿಳಿಸಿದ್ದರು. ಹೀಗಾಗಿ ಶಾ.ರಾ. ಸುಮ್ಮನಾಗಿದ್ದರು. ಹೀಗಾಗಿ ನನಗೆ ಆ ಅಂತಿಮ ಕ್ಷಣ ಬರಲೇ ಇಲ್ಲ. ಇದು ನಾಗೇಶರಾಯರು ಸತ್ಯ, ನ್ಯಾಯಗಳನ್ನು ಎತ್ತಿ ಹಿಡಿಯುತ್ತಿದ್ದ ಪರಿ.
ಕಾಫಿ, ಯಾರಿಗೆ ಬೇಡ? ಆದರೆ ನಾಗೇಶರಾವ್ ಕಾಫಿ ಕೊಡಿಸ್ತಾರೆ ಅಂದ್ರೆ ನಾವೆಲ್ಲ ಹಿಂಜರೀತಿದ್ದೆವು.ನಮ್ಮಲ್ಲೊಬ್ಬ ವರದಿಗಾರರಿದ್ದರು. ಬಾಲಿಶ ಪ್ರವೃತ್ತಿ ಇನ್ನೂ ಹೋಗಿರದಿದ್ದುದರಿಂದ ‘ಬಾಲಕ’ ಎಂಬ ಅಡ್ಡ ಹೆಸರು ಅವನಿಗಂಟಿಕೊಂಡಿತ್ತು. ಶಾ.ರಾ. ಅವರ ‘ನೀಲಿ ಕಣ್ಣಿನ ಹುಡುಗ’ ಆತ. ಕಚೇರಿಗೆ ಬಂದೊಡನೆ ವರದಿ ಬರೆಯುವ ಮುನ್ನ ತಾನು ವರದಿ ಮಾಡಲು ಹೋದ ಸಮಾರಂಭದ ಆಗುಹೋಗುಗಳ ರನ್ನಿಂಗ್ ಕಾಮೆಂಟರಿ ಕೊಡುವುದು ಆತನ ಚಟ. ಸಂಪಾದಕೀಯ ಕೊಠಡಿಯಲ್ಲಿ ಇದೊಂದು ಅಸಹನೀಯ ತಲೆನೋವಾಗಿತ್ತು. ವರದಿ ಬರೆದು ಕೊಟ್ಟು ಮನೆಗೆ ಹೋಗಬಾರದೆ? ಎಂದು ಗೊಣಗಿಕೊಳ್ಳುತ್ತಿದ್ದೆವು. ಇಂಥ ಸಂದರ್ಭಗಳಲ್ಲಿ ನಾಗೇಶರಾವ್ ಈ ಬಗೆಯ ‘ತುಡುಗು’ ವರದಿಗಾರರನ್ನು ಹಾದಿಗೆ ತರುತ್ತಿದ್ದ ರೀತಿಯನ್ನು ನಾನು ಮರೆಯಲಾರೆ.ನಮಗೆಲ್ಲರಿಗೂ ತೊಂದರೆಯಾಗುತ್ತಿದೆಯೆಂಬುದು ನಾಗೇಶರಾಯರ ಗಮನಕ್ಕೆ ಬಂದೊಡನೆ, ಆ ‘ತುಡುಗು’ ವರದಿಗಾರನನ್ನು ನಾಗೇಶರಾಯರು ತಮ್ಮ ಮೇಜಿನ ಬಳಿಗೆ ಕರೆಯುತ್ತಿದ್ದರು. ‘ಬನ್ನಿ, ನೀವು ಕಾಫಿ ಕುಡಿದೇ ಇಲ್ಲ. ಹೀಗೆ ಒಂದೇ ಸಮನೆ ಕೆಲಸ ಮಾಡಿದರೆ ಹೇಗೆ’? ಎಂದು ತೆಪ್ಪಗೆ ಕೂಡಿಸಿಕೊಂಡುಬಿಡುತ್ತಿದ್ದರು. ಕಾಫಿ ಬರುವವರೆಗೂ ಆ ಮನುಷ್ಯ ಬಾಯಿ ಮುಚ್ಚಿಕೊಂಡು ಅವರ ಮುಂದೆ ಕುಳಿತಿರುತ್ತಿದ್ದ. ಡಬ್ಬಲ್ ಶುಗರ್ ಕಾಫಿ ಬಂದು ಆತ ಕುಡಿದದ್ದೇ ತಡ ‘ಆಯಿತು, ನೀವಿನ್ನು ವರದಿ ಬರೆದು ಕೊಟ್ಟು ಹೋಗಿ’ ಎನ್ನುತ್ತಿದ್ದರು ನಾಗೇಶರಾಯರು. ನಮಗೆ ಆಶ್ಚರ್ಯ. ಶಾ.ರಾ.ರಿಗೂ ಬಗ್ಗದ ಆ ‘ತುಡುಗು ದನ’ಕ್ಕೆ ಇವರು ಮೂಗುದಾರ ಹಾಕಿದ್ದು ಹೇಗೆ? ಇದಕ್ಕೆ ನಾಗೇಶರಾವ್ ಉತ್ತರ: ‘ಚಿಲ್ಡ್ರೆನ್ ಲೈಕ್ ಮೋರ್ ಶುಗರ್’.
ಈಗಿನ ಹಾಗೆ, ಆಗ ಪತ್ರಿಕಾ ಕಚೇರಿಗಳಲ್ಲಿ ಉಪಸಂಪಾದಕರು ಬರೆದುದ್ದಕ್ಕೆಲ್ಲಾ ಮಣೆ ಹಾಕುತ್ತಿರಲಿಲ್ಲ. ಎಸ್.ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದ ದಿನಗಳವು. ಶರಾವತಿ ಯೋಜನೆ ಭ್ರಷ್ಟಾಚಾರದ ಬಗ್ಗೆ ಹುಯಿಲೋ, ಹುಯಿಲು. ಆಗ, ನಾನೊಂದು ‘ವಿಡಂಬನೆ’ ಬರೆದು ‘ಪ್ರಕಟಣೆಗಾಗಿ’ ಎಂದು ನಾಗೇಶರಾಯರ ಕೈಯ್ಯಲ್ಲಿಟ್ಟೆ. ಎರಡೇ ದಿನಗಳಲ್ಲಿ ‘ಚೆನ್ನಾಗಿದೆ - ಪ್ರಕಟಿಸಲು ಸಾಧ್ಯವಿಲ್ಲ’ ಎಂಬ ಷರಾದೊಂದಿಗೆ ನಾಗೇಶರಾಯರು ಅದನ್ನು ನನಗೆ ಹಿಂದಿರುಗಿಸಿದರು.ನಂತರ, ನಾನು ಅದನ್ನು ‘ವಿನೋದ’ ಹಾಸ್ಯ ಮಾಸಿಕ ಪತ್ರಿಕೆಗೆಂದು ಸಂಪಾದಕ ಜಿ.ನಾರಾಯಣ ಅವರ ಕೈಯ್ಯಲ್ಲಿಟ್ಟೆ. ನಾರಾಯಣ ಆ ಕಾಲಕ್ಕೆ ಸಕ್ರಿಯ ಕಾಂಗ್ರೆಸ್ ಸದಸ್ಯರು. ಆದರೂ ಆ ವಿಡಂಬನೆ ‘ವಿನೋದ’ದಲ್ಲಿ ಪ್ರಕಟವಾಯಿತು.ಅದನ್ನು ಓದಿದ್ದ ನಾಗೇಶರಾವ್ ತಾವೇ ಬಂದು ನನ್ನ ಕೈಕುಲುಕೆ ‘ನಿಮ್ಮ ಬರವಣಿಗೆ ನನಗಿಷ್ಟವಾಯಿತು. ಆದರೂ ತುಂಬಾ ತೀಕ್ಷ್ಣವಾದ ವಿಡಂಬನೆ. ಜಿ.ನಾರಾಯಣರ ಧೈರ್ಯವನ್ನು ನಾನು ಮೆಚ್ಚುತ್ತೇನ್’ ಎಂದರು.
ನಾಗೇಶರಾವ್ ಸ್ವತಃ ಸದಭಿರುಚಿಯ ಸಾಹಿತ್ಯದಲ್ಲಿ ಒಲವುಳ್ಳ ಲೇಖಕರಾಗಿದ್ದರು. ನಾಟಕ, ಕಾದಂಬರಿ, ನಗೆಬರಹ ಮೊದಲಾದ ಪ್ರಕಾರಗಳಲ್ಲಿ ಪ್ರಯೋಗ ಮಾಡಿದ್ದರು. ಅವರ ನಗೆ ಬರಹಗಳ ಒಂದೆರಡು ಸಂಕಲನಗಳೂ ಪ್ರಕಟವಾಗಿದ್ದವು. ಎಲ್ಲ ಪತ್ರಕರ್ತರಿಗಾಗುವಂತೆ, ವೃತ್ತಿಯ ಭರಾಟೆಯಿಂದ ಅವರೊಳಗಿನ ಲೇಖಕ ಹೆಚ್ಚು ಪ್ರಕಾಶಕ್ಕೆ ಬರಲೇ ಇಲ್ಲ.ಹೀಗೊಂದು ದಿನ ‘ಸಂಕ’ ದಾಟಿ ನಾನೂ ಎಂ.ಜಿ.ರೋಡ್ ತಲುಪಿದೆ. ಆದರೆ ನನ್ನ ಈ ಸಂಕ ದಾಟುವಿಕೆಯ ಹಂತ ಅಷ್ಟೇನೂ ಹಿತಕರವಾಗಿರಲಿಲ್ಲ. ನನ್ನ ರಾಜೀನಾಮೆ ಪತ್ರ ನೋಡಿದ್ದೇ ತಡ, ಶಾ.ರಾ. - ‘ರಂಗನಾಥ ರಾವ್, ಇಫ್ ಐ ಮೈಂಡ್ ಐ ಕೆನ್ ಮೇಕು ಯುವರ್ ಕೆರಿಯರ್ ಆರ್ ಮಾರ್ ಯುವರ್ ಕೆರಿಯರ್ .. ಹೋಗು ಕೆಲಸ ಮಾಡು ಹೋಗು ...’ - ಹೀಗೆ ಹೇಳುವಾಗ ಅವರು ಥರಥರ ಕಂಪಿಸುತ್ತಿದ್ದರು. ನಾನು ‘ಮಾರೋ ಗೋಲಿ’ ಎಂದವನೇ ಎಂ.ಜಿ.ರೋಡ್ ಸೇರಿಕೊಂಡೆ. ಹೀಗಾಗಿ ಹೊರಟು ಬರುವಾಗ ಯಾರಿಗೂ ಹೇಳಲಾಗಿರಲಿಲ್ಲ.
ಮುಂದೊಂದು ದಿನ ನಾಗೇಶರಾಯರು ಸಿಕ್ಕಾಗ ಮುಗುಳ್ನಗುತ್ತಲೇ ‘ಸೋ, ಯು ಹ್ಯಾವ್ ರೀಚ್ಡ್ ಯುವರ್ ಡೆಸ್ಟಿನೇಶನ್. ಒಳ್ಳೇದಾಗಲಿ’ ಎಂದರು. ---