ಜೋರ್ಡಾನ್

ಪಶ್ಚಿಮ ಏಷ್ಯಾದಲ್ಲಿರುವ ದೇಶ
(ಜಾರ್ಡನ್ ಇಂದ ಪುನರ್ನಿರ್ದೇಶಿತ)

ಜೋರ್ಡಾನ್ (ಅರಾಬಿಕ್ ಹೆಸರು - الأردنّ ಅಥವಾ ಅಲ್-ಉರ್ದುನ್ನ್)ಅಥವಾ ಜಾರ್ಡನ್ ಪಶ್ಚಿಮ ಏಷ್ಯಾಅರಬ್ ಪ್ರದೇಶದಲ್ಲಿನ ಒಂದು ರಾಷ್ಟ್ರ. ಜೋರ್ಡಾನಿನ ಉತ್ತರಕ್ಕೆ ಸಿರಿಯಾ, ಈಶಾನ್ಯಕ್ಕೆ ಇರಾಖ್, ಪಶ್ಚಿಮದಲ್ಲಿ ಇಸ್ರೇಲ್ ಮತ್ತು ವೆಸ್ಟ್ ಬ್ಯಾಂಕ್ ಹಾಗೂ ದಕ್ಷಿಣ ಮತ್ತು ಪೂರ್ವದಲ್ಲಿ ಸೌದಿ ಅರೇಬಿಯಾ ರಾಷ್ಟ್ರಗಳಿವೆ. ಜೋರ್ಡಾನ್ ಇಸ್ರೇಲ್ ಜೊತೆಗೆ ಮೃತ ಸಮುದ್ರದ ಎಲ್ಲೆಗಳನ್ನು ಹಂಚಿಕೊಂಡಿದೆ. ಅಖಾಬಾ ಖಾರಿಯು ಜೋರ್ಡಾನ್, ಇಸ್ರೇಲ್, ಈಜಿಪ್ಟ್ ಮತ್ತು ಸೌದಿ ಅರೇಬಿಯಾಗಳಿಗೆ ಹೊಂದಿಕೊಂಡಿದೆ.

ಜೋರ್ಡಾನಿನ ಹಸಿಮಿಯ ಸಂಸ್ಥಾನ
المملكة الأردنية الهاشمية
Al-Mamlakah al-Urdunniyyah al-Hāšimiyyah
Anthem:  عاش المليك
"ಅರಸನು ದೀರ್ಘಾಯುವಾಗಲಿ"
Location of ಜೋರ್ಡಾನ್
Capitalಅಮ್ಮಾನ್
Largest cityರಾಜಧಾನಿ
Official languagesಅರಾಬಿಕ್
Demonym(s)Jordanian
Governmentಸಾಂವಿಧಾನಿಕ ಅರಸೊತ್ತಿಗೆ
ಅಬ್ದುಲ್ಲಾ -II
ನಾದೆರ್-ಅಲ್-ದಹಾಬಿ
ಸ್ವಾತಂತ್ರ್ಯ
• ಬ್ರಿಟಿಷ್ ಆಡಳಿತದ ಅಂತ್ಯ

ಮೇ 25 1946
• Water (%)
ನಗಣ್ಯ
Population
• July 2007 estimate
5,924,000 (110ನೆಯದು)
• 2004 census
5,100,981
GDP (PPP)2005 estimate
• Total
$27.96 ಬಿಲಿಯನ್ (97ನೆಯದು)
• Per capita
$4,900 (103ನೆಯದು)
Gini (2002–03)38.8
medium
HDI (2004)Increase 0.760
Error: Invalid HDI value · 86ನೆಯದು
Currencyಜೋರ್ಡಾನಿನ ದಿನಾರ್ (JOD)
Time zoneUTC+2 (UTC+2)
• Summer (DST)
UTC+3 (UTC+3)
Calling code962
Internet TLD.jo
  1. Also serves as the Royal anthem.

ಜಾರ್ಡನಿನ ವ್ಯವಹಾರ ಭಾಷೆ ಅರಬ್ಬೀ.

ಭೌತಿಕ ಭೂವಿವರಣೆ

ಬದಲಾಯಿಸಿ

ಗ್ಯಾಲಲೀ ಸಮುದ್ರದಿಂದ ಆಕಬ ಕೊಲ್ಲಿಯವರೆಗಿನ ಸೀಳುಕಣಿವೆ ಜಾರ್ಡನಿನ ಮೇಲ್ಮೈಯ ಲಕ್ಷಣವನ್ನು ನಿರ್ಣಯಿಸಿದೆ. ಜಾರ್ಡನ್ ನದಿಯ ಪಶ್ಚಿಮಕ್ಕಿರುವ ಪ್ರದೇಶದ ಲಕ್ಷಣವನ್ನು ಅಲ್ಲಿಯ ಜುಡೀಯನ್ ಬೆಟ್ಟಗಳಲ್ಲಿ ಕಾಣಬಹುದು. ಇವುಗಳ ಕಲ್ಲಿನ ಪದರಗಳು ಈಶಾನ್ಯ ಮತ್ತು ನೈಋತ್ಯ ದಿಕ್ಕುಗಳ ಕಡೆಗೆ ವಿಮುಖಾವನತವಾಗಿವೆ. ಇವು ಹೆಚ್ಚಾಗಿ ವಿಚ್ಛೇದನಗೊಂಡಿವೆ. ಸುಣ್ಣಕಲ್ಲುಗಳು ಮತ್ತು ಉಸುಕು ಕಲ್ಲುಗಳಿರುವ ಹೊರ ಮೈ ಹಳ್ಳತಿಟ್ಟುಗಳಿಂದ ಕೂಡಿದೆ. ಸೀಮೆಸುಣ್ಣದ ಮೇಲ್ಮೈಯುಳ್ಳ ಪ್ರದೇಶಗಳು ಅಲೆಯಲೆಯಾಗಿವೆ. ಬೆಟ್ಟಗಳ ಅತ್ಯುನ್ನತ ಶಿಖರ ತಾಲ್ ಅಸುರ್ (೩,೮೦೫`). ಮಣ್ಣುಗಳ ರಚನೆ ಬಹಳ ತೆಳುಪು, ನಿಸ್ಸಾರಭೂತ. ಗ್ಯಾಲಿಲೀ ಸಮುದ್ರದಿಂದ ಮೃತ್ಯು ಸರೋವರಕ್ಕೆ ನೆಲ ಇಳಿಜಾರಾಗಿದೆ. ಸಮುದ್ರಮಟ್ಟದಿಂದ ೬೯೬` ಕೆಳಗೆ ಗ್ಯಾಲಿಲೀ ಸಮುದ್ರವಿದೆ. ಮೆಡಿಟರೇನಿಯನ್ ಸಮುದ್ರದ ಮಟ್ಟದಿಂದ ೧,೩೦೦` ಕೆಳಗೆ ಮೃತ್ಯು ಸರೋವರವಿದೆ. ಪ್ರಪಂಚದಲ್ಲೇ ಅತ್ಯಂತ ತಗ್ಗಿನ ಒಣನೆಲ ಇರುವುದು ಈ ಕಣಿವೆಯಲ್ಲೇ. ಮೃತ್ಯು ಸರೋವರದಿಂದ ದಕ್ಷಿಣಕ್ಕೆ ವಾಡಿ ಅರಬಾ ಎನ್ನಿಸಿಕೊಳ್ಳುವ ಈ ಗರ್ತ ಕ್ರಮವಾಗಿ ಏರುತ್ತ ಸಾಗಿ ಮೃತ್ಯುಸರೋವರದ ದಕ್ಷಿಣದ ತುದಿಗೂ ಆಕಬ ಖಾರಿಗೂ ಮಧ್ಯದಲ್ಲಿ ಸಮುದ್ರ ಮಟ್ಟವನ್ನು ಮುಟ್ಟುತ್ತದೆ. ಜಾರ್ಡನ್ ನದಿಯ ಪೂರ್ವಕ್ಕೆ ಇರುವ ಟ್ರಾನ್ಸ್‍ಜಾರ್ಡನಿಯನ್ ಪ್ರಸ್ಥಭೂಮಿಗಳ ಸರಾಸರಿ ಎತ್ತರ ೩,೦೦೦`. ಉತ್ತರದಲ್ಲಿ ಬೆಟ್ಟಗಳು ೪,೦೦೦`ಗೂ ದಕ್ಷಿಣದಲ್ಲಿ ೫,೪೦೦`ಗೂ ಹೆಚ್ಚು ಎತ್ತರವಾಗಿ ಉಂಟು. ಪೂರ್ವಕ್ಕೆ ಸಾಗಿದಂತೆ ನೆಲ ಇಳಿಜಾರಾಗುತ್ತದೆ. ಜಾರ್ಡನ್ ನದಿಯ ಪೂರ್ವ ದಂಡೆಯ ೪/೫ ಭಾಗ ಮರಳುಕಾಡು.

ಜಾರ್ಡನಿನ ಮುಖ್ಯ ನದಿ ಜಾರ್ಡನ್. ಇದು ಇಸ್ರೇಲಿನಿಂದ ಈ ದೇಶವನ್ನು ಉತ್ತರದಲ್ಲಿ ಪ್ರವೇಶಿಸಿ, ದಕ್ಷಿಣಾಭಿಮುಖವಾಗಿ ಹರಿದು ಮೃತ್ಯು ಸರೋವರವನ್ನು ಸೇರುತ್ತದೆ. ಇದರ ಮುಖ್ಯ ಉಪನದಿ ಯಾರ್ಮೂಕ್. ೫೫ ಮೈ. ಉದ್ದವಾಗಿಯೂ ೧೦ ಮೈ. ಅಗಲವಾಗಿಯೂ ಇರುವ ಮೃತ್ಯುಸರೋವರ ಭೂಮಿಯ ಅತ್ಯಂತ ತಗ್ಗಿನ ಪ್ರದೇಶ. ಇದರ ನೀರಿನ ಮಟ್ಟ ಸಮುದ್ರಮಟ್ಟಕ್ಕಿಂತ ೧,೨೯೦` ತಗ್ಗಿನಲ್ಲಿದೆ. ಇದರ ಅತ್ಯಂತ ಆಳದ ಸ್ಥಳ ಸಮುದ್ರ ಮಟ್ಟದಿಂದ ೨,೫೯೮`ಕೆಳಗೆ ಇದೆ. ಇದರ ಖನಿಜಾಂಶ ೩೦%.

ವಾಯುಗುಣ

ಬದಲಾಯಿಸಿ

ಜಾರ್ಡನ್ ನದಿಯ ಪಶ್ಚಿಮ ದಂಡೆಯ ಪ್ರದೇಶದಲ್ಲಿಯದು ಸುಧಾರಿತ ಮೆಡಿಟರೇನಿಯನ್ ವಾಯುಗುಣ. ಚಳಿಗಾಲದಲ್ಲಿ ಮಳೆ ಸಾಧಾರಣ. ಬೇಸಗೆ ಹೆಚ್ಚು ಉಷ್ಣ, ಹೆಚ್ಚು ಶುಷ್ಕ, ಜಾರ್ಡನ್ ಕಣಿವೆಯಲ್ಲಿ ಮಳೆ ಅತ್ಯಲ್ಪ. ಬೇಸಗೆ ಬಲು ಉಷ್ಣ. ಚಳಿಗಾಲ ಹಿತಕರ. ಪೂರ್ವ ದಂಡೆಯ ಬೆಟ್ಟ ಸೀಮೆಯಲ್ಲಿ ಜೂಡೀಯದಲ್ಲಿರುವಂಥ ವಾಯುಗುಣವಿದೆ. ಆದರೆ ಮಳೆ ಕಡಿಮೆ, ಬೇಸಗೆ ತೀವ್ರ. ಮರುಭೂಮಿ ಪ್ರದೇಶ ಬಲು ತಾಪಕರ; ಅಲ್ಲಿಯದು ಒಣ ಹವೆ. ಮಳೆ ಇಲ್ಲವೇ ಇಲ್ಲವೆನ್ನಬಹುದು. ಉಷ್ಣತೆಯ ಅಂತರ ಬಲು ಹೆಚ್ಚು. ವಾರ್ಷಿಕ ಮಳೆ ಉತ್ತರದ ಎತ್ತರದ ನೆಲದಲ್ಲಿ ೩೦”. ಪೂರ್ವದಂಡೆಯ ಬೆಟ್ಟಸೀಮೆಯಲ್ಲಿ ೨೦","ಹುಲ್ಲುಗಾವಲಿನಲ್ಲಿ ೮”, ದಕ್ಷಿಣ ಜಾರ್ಡನ್ ಕಣಿವೆಯಲ್ಲಿ ೪”. ಪೂರ್ವದ ಮರುಭೂಮಿಯಲ್ಲಿ ವರ್ಷಗಟ್ಟಲೆ ಮಳೆಯೇ ಬೀಳುವುದಿಲ್ಲ.

ಸಸ್ಯಪ್ರಾಣಿ ವರ್ಗಗಳು

ಬದಲಾಯಿಸಿ

ಇಸ್ರೇಲಿನಲ್ಲಿ ಇರುವ ಸಸ್ಯಪ್ರಾಣಿವರ್ಗಗಳು ಇಲ್ಲೂ ಉಂಟು. ವಾಯುಗುಣಕ್ಕೆ ಅನುಸಾರವಾಗಿ ಸಸ್ಯವರ್ಗ ವ್ಯತ್ಯಾಸವಾಗುತ್ತದೆ. ನೈಸರ್ಗಿಕ ಸಸ್ಯವರ್ಗ ಎಷ್ಟೋ ಕಡೆಗಳಲ್ಲಿ ಹಾಳಾಗಿಹೋಗಿದೆ. ಜಾಬಲ್ ಅಜಲೂನ್ ಪ್ರದೇಶ ಪ್ರಮುಖವಾದ ಅರಣ್ಯಪ್ರದೇಶ. ಆದ್ರ್ರತೆಯುಳ್ಳ ಬೆಟ್ಟಸೀಮೆಯಲ್ಲೂ ಅರಣ್ಯ ಕಂಡುಬರುತ್ತದೆ. ಇಲ್ಲಿಯ ಪ್ರರೂಪಿ ಸಸ್ಯವರ್ಗವೆಂದರೆ ಹುಲ್ಲುಗಾವಲು. ಇದು ಮಳೆಗೆ ಅನುಗುಣವಾಗಿ ವ್ಯತ್ಯಾಸವಾಗುತ್ತದೆ. ವಸಂತಕಾಲದಲ್ಲಿ ಉತ್ತರ ಭಾಗಗಳ ದಿನ್ನೆಗಳಲ್ಲಿ ಹಸಿರು ಮತ್ತು ಹೂಗಿಡಗಳು ತುಂಬಿರುತ್ತವೆ. ತಾಳೆಯ ಜಾತಿಯ ಮರಗಳು ಮರುಭೂಮಿಯಲ್ಲಿ ಇವೆ. ತಗ್ಗುಪ್ರದೇಶಗಳಲ್ಲಿ ಚಕ್ಕೋತನಸೊಪ್ಪಿನ ಜಾತಿಯ ಗಿಡಗಳ ಪೊದೆಗಳಿವೆ. ಜಾರ್ಡನಿನಲ್ಲಿ ೬೦೦ ಕ್ಕಿಂತ ಹೆಚ್ಚು ಬಗೆಯ ಕಶೇರಕಗಳುಂಟು. ಹೈರಾಕ್ಸ್, ಕತ್ತೆಕಿರುಬ, ಗೆeóÉಲ್, ಮುಖಮಲ್ ಹೆಗ್ಗಣ, ಮರುಭೂಮಿಯನರಿ, ಮುಂಗುಸಿ-ಇವು ಇಲ್ಲಿಯ ಪ್ರಾಣಿಗಳಲ್ಲಿ ಹಲವು. ನವಿಲು, ರಣಹದ್ದು, ಬುಲ್‍ಬುಲ್ ಮುಂತಾದ ಪಕ್ಷಿಗಳುಂಟು.

ಆರ್ಥಿಕತೆ

ಬದಲಾಯಿಸಿ

ಜಾರ್ಡನ್ ಪರಂಪರೆಯಾಗಿ ವ್ಯವಸಾಯವನ್ನು ಅವಲಂಬಿಸಿದ ದೇಶ. ದೇಶದ ಒಟ್ಟು ಭೂಮಿಯಲ್ಲಿ ಶೇ.೪.೮ ರಷ್ಟು ನೆಲ ಮಾತ್ರ (೪,೩೫೨ ಚ.ಕಿಮೀ.) ಸಾಗುವಳಿಗೆ ಒಳಪಟ್ಟಿದೆ. ೨೫,೦೦೦ ಹೆಕ್ಟೇರ್‍ಗೆ ನೀರಾವರಿ ಸೌಲಭ್ಯವುಂಟು. ೪೧,೧೨೧ ಹೆಕ್ಟೇರ್ ಜಮೀನು ಸಾಗುವಳಿ ಮಳೆಯನ್ನೇ ಅವಲಂಬಿಸಿದೆ. ಪೂರ್ವದ ಘೋರ್ ನೀರಾವರಿ ಯೋಜನೆ ೧೯೫೮ ರಲ್ಲಿ ಆರಂಭವಾಯಿತು. ಇದು ಅತ್ಯಂತ ದೊಡ್ಡ ನೀರಾವರಿ ಯೋಜನೆ. ಯಾರ್ಮೂಕ್ ನದಿಯ ನೀರನ್ನು ಬಳಸಿಕೊಳ್ಳಲು ೪೩ ೩/೪ ಮೈ. ಉದ್ದದ ಕಾಲುವೆ ತೋಡಲಾಗಿದೆ. ಈ ಯೋಜನೆಯಿಂದ ೩೦,೦೦೦ ಎಕರೆ ನೆಲಕ್ಕೆ ನೀರಾವರಿ ಸೌಲಭ್ಯ ಒದಗಿದೆ. ಪಶ್ಚಿಮಘೋರ್‍ನಲ್ಲಿ ವಾಡಿ ಅಲ್ ಫರಿಯಾದಿಂದ ೨,೪೦೦ ಎಕರೆ ನೆಲ ನೀರಾವರಿಗೆ ಒಳಪಟ್ಟಿದೆ. ದೇಶದ ಜನಸಂಖ್ಯೆಯ ಆವಶ್ಯಕತೆಯ ದೃಷ್ಟಿಯಿಂದ ಇಲ್ಲಿ ಸಾಗುವಳಿಯ ನೆಲ ಬಹಳ ಕಡಿಮೆ. ದೇಶದ ಬಹುಭಾಗ ಮರುಭೂಮಿ. ಗೋಧಿ, ಬಾರ್ಲಿ, ಅವರೆಕಾಳು, ಗೋವಿನಜೋಳ, ಚನ್ನಂಗಿ ಕಾಳು, ಎಳ್ಳು, ತಂಬಾಕು, ಹತ್ತಿ, ಸಾರ್ಗಂ-ಇವು ಮುಖ್ಯ ಬೆಳೆಗಳು. ಪಶ್ಚಿಮ ಜಾರ್ಡನಿನಲ್ಲಿ ದ್ರಾಕ್ಷಿ, ಆಲಿವ್, ಅಂಜೂರ ಬೆಳೆಯುತ್ತವೆ. ಬಾಳೆ, ಉತ್ತತ್ತಿ, ನಿಂಬೆ, ಕಿತ್ತಳೆ, ಹೇರಳೆ ಮುಂತಾದವು ನೀರಾವರಿ ಇದ್ದಲ್ಲಿ ಚೆನ್ನಾಗಿ ಬೆಳೆಯುತ್ತವೆ.

ಜಾರ್ಡನಿನ ಮುಖ್ಯ ಖನಿಜಸಂಪತ್ತು ಪೊಟಾಷ್ ಮತ್ತು ರಂಜಕ. ಪೊಟಾಷ್ ಮೃತ್ಯು ಸರೋವರದಲ್ಲಿ ಹೇರಳವಾಗಿ ಸಿಗುತ್ತದೆ. ಉತ್ತಮ ದರ್ಜೆಯ ರಂಜಕವನ್ನು ಇಟಲಿ, ಜೆಕೋಸ್ಲೊವಾಕಿಯ, ಜಪಾನ್ ಮತ್ತು ಭಾರತ ದೇಶಗಳಿಗೆ ನಿರ್ಯಾತಮಾಡುತ್ತಾರೆ. ತಾಮ್ರ ಮತ್ತು ಮ್ಯಾಂಗನೀಸ್ ಸ್ವಲ್ಪ ಪರಿಮಾಣಗಳಲ್ಲಿ ದೊರಕುತ್ತವೆ. ಇಲ್ಲಿ ದೊರೆಯುವ ಕಬ್ಬಿಣದ ಅದಿರು ಉತ್ತಮ ದರ್ಜೆಯದಾದರೂ ಇದು ಚದರಿಹೋಗಿದೆ. ಇದನ್ನು ಕರಗಿಸಲು ಇಂಧನ ದೊರಕುವುದಿಲ್ಲ. ಕೆಲವು ತೈಲ ಶುದ್ಧೀಕರಣ ಕೇಂದ್ರಗಳೂ ಜಾರ್ಡನಿನಲ್ಲಿ ಸ್ಥಾಪಿತವಾಗಿವೆ. ಸಂಗಮರವರಿ ಕಲ್ಲನ್ನು ತೆಗೆಯುವ ಮತ್ತು ಅದನ್ನು ಹೊಳಪುಮಾಡುವ ಉದ್ಯಮವೂ ಉಂಟು. ಹಿಟ್ಟಿನಗಿರಣಿ, ಆಲಿವ್ ಎಣ್ಣೆಯ ಗಿರಣಿ, ಸಾಬೂನು ಕಾರ್ಖಾನೆ, ನೂಲಿನ ಗಿರಣಿ ಮತ್ತು ಕಟ್ಟಡಕ್ಕೆ ವಸ್ತು ತಯಾರಿಸುವ ಕಾರ್ಖಾನೆ ಮತ್ತು ಚರ್ಮ ಹದ ಮಾಡುವ ಕಾರ್ಖಾನೆಗಳು ಇವೆ.

ರಾಜಧಾನಿಯಾದ ಅಮ್ಮಾನ್ ನಗರಕ್ಕೆ ಎಲ್ಲ ಪ್ರಮುಖ ಪಟ್ಟಣಗಳಿಂದಲೂ ಪಕ್ಕಾ ರಸ್ತೆಗಳಿವೆ. ಅಮ್ಮಾನ್ ಮತ್ತು ಜೆರೊಸಲೆಮ್‍ನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಪಶ್ಚಿಮ ಏಷ್ಯದ ಇತರ ರಾಷ್ಟ್ರಗಳಿಂದ ಈ ದೇಶಕ್ಕೆ ನಿತ್ಯವೂ ವಿಮನಗಳು ಸಂಚರಿಸುತ್ತವೆ.

ವ್ಯಾಪಾರ : ಹಣ್ಣುಹಂಪಲುಗಳು, ಆಲಿವ್ ಎಣ್ಣೆ, ತರಕಾರಿ ಇವು ಪ್ರಮುಖ ನಿರ್ಯಾತ ವಸ್ತುಗಳು. ಗೊಬ್ಬರ, ಸಂಗಮರವರಿ ಕಲ್ಲು, ಸುಣ್ಣ ಮತ್ತು ಸಿಮೆಂಟ್ ಇಲ್ಲಿಂದ ನೆರೆಯ ಅರಬ್ ರಾಷ್ಟ್ರಗಳಿಗೆ ರಫ್ತಾಗುತ್ತವೆ. ನೂಲು, ಉರುವಲು, ಎಣ್ಣೆ, ಮೋಟಾರು ವಾಹನಗಳು ಮತ್ತು ಅವುಗಳ ಬಿಡಿಭಾಗಗಳು, ಯಂತ್ರಗಳು, ಕಬ್ಬಿಣ-ಉಕ್ಕು, ಆಹಾರ ಧಾನ್ಯ-ಇವು ಈ ದೇಶದ ಮುಖ್ಯ ಆಮದುಗಳು.

ಜಾರ್ಡನಿನ ನಾಣ್ಯ ಜಾರ್ಡನಿಯನ್ ದೀನಾರ (ಎ.ಆ.). ೧,೦೦೦ ಫಿಲ್ಗಳು ಒಂದು ಎ.ಆ.ಗೆ ಸಮ. (ಎಂ.ಎಫ್.ಕೆ.)

ಇತಿಹಾಸ

ಬದಲಾಯಿಸಿ

ಜಾರ್ಡನ್ ಪ್ರದೇಶದಲ್ಲಿ ಪ್ರಾರಂಭಕಾಲದಿಂದಲೂ ಆದಿ ಮಾನವ ವಾಸಿಸುತ್ತಿದ್ದನೆಂಬುದಕ್ಕೆ ಸಾಕಷ್ಟು ಮಾಹಿತಿಗಳಿವೆ. ಉತ್ತರ ಅಫ್ರಿಕದಲ್ಲಿ ರೂಢಿಯಲ್ಲಿದ್ದ ಪೂರ್ವಶಿಲಾಯುಗ ಸಂಸ್ಕøತಿಗಳು ಈಜಿಪ್ಟಿನ ಮಾರ್ಗವಾಗಿ ಜಾರ್ಡನ್ ಪ್ರದೇಶವನ್ನು ಪ್ರವೇಶಿಸಿದುವು. ಇಲ್ಲಿಯ ಅಲ್-ಉಬೇದಿಯ ಎಂಬಲ್ಲಿ ಆಸ್ಟ್ರಲೊ-ಪಿತಿಕಲ್ ವರ್ಗಕ್ಕೆ ಸೇರಿದ ಆದಿಮಾನವನ ದೇಹದ ಪಳೆಯುಳಿಕೆಗಳೂ ಆಗಿನ ಕಲ್ಲಿನಾಯುಧಗಳೂ ದೊರಕಿವೆ. ಜಾರ್ಡನಿನ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿರುವ ಮರಳ್ಗಾಡು ಪ್ರದೇಶದಲ್ಲಿ ಪೂರ್ವಶಿಲಾಯುಗದ ಬೇಟೆಗಾರರು ಅಲೆದಾಡುತ್ತಿದ್ದುದಕ್ಕೆ ಆಧಾರಗಳಿವೆ. ಪೂರ್ವಶಿಲಾಯುಗದ ಮೊದಲ ಹಂತವಾದ ಅಬ್ಬೆವಿಲಿಯನ್ ಸಂಸ್ಕøತಿಯ ಒರಟಾದ ಕೈಕೊಡಲಿಗಳು ಇಲ್ಲಿಯ ಪ್ಲೀಸ್ಟೊಸೀನ್ ಯುಗದ ಪ್ಲೂವಿಯಲ್ ಪದರಗಳಲ್ಲಿ ದೊರಕಿವೆ. ೧೯೫೬ ರಲ್ಲಿ ಅಜûರಕ್ ಎಂಬಲ್ಲಿ ಅಷ್ಯೂಲಿಯನ್ ಸಂಸ್ಕøತಿಯ ಕೈ ಕೊಡಲಿಗಳು ಹೆಚ್ಚಾಗಿ ಕಂಡುಬಂದು, ದ್ವಿತೀಯ ಹಂತದಲ್ಲೂ ಆದಿಮಾನವ ಈ ಪ್ರದೇಶದಲ್ಲಿ ನೆಲಸಿದ್ದ ಅಂಶವನ್ನು ಸ್ಥಿರಗೊಳಿಸುತ್ತವೆ. ಆ ಕಾಲದ ಅನೇಕ ನೆಲೆಗಳು ಪೂರ್ವದ ಮರಳ್ಗಾಡಿನಲ್ಲಿವೆ. ಆಗ್ನೇಯ ಭಾಗದಲ್ಲಿರುವ ಜಬಾಲ್-ಟುಬೆಕ್ ಪ್ರದೇಶದಲ್ಲಿ ಪೂರ್ವ-ಮಧ್ಯಶಿಲಾಯುಗಗಳ ಹಂತದಲ್ಲಿ ಅನಂತರದ ಕಾಲದ ಎಲ್ಲ ಶಿಲಾಯುಗ ಸಂಸ್ಕøತಿಗಳಿಗೂ ಸೇರಿದ ಕಲ್ಲುಬಂಡೆಗಳ ಮೇಲೆ ಮಾಡಿದ ಕೆತ್ತನೆಗಳು ಕಂಡುಬಂದಿವೆ

ಜೆರಿಕೋ (ಈಗಿನ ಟೆಲ್-ಎಸ್-ಸುಲ್ತಾನ್) ಪರಿಸರದಲ್ಲಿ ಮಧ್ಯಶಿಲಾಯುಗದ ಬೇಟೆಗಾರರು ನೆಲಸಿದ್ದಕ್ಕೆ ಮಾಹಿತಿಗಳು ದೊರಕಿವೆ. ಇಲ್ಲಿ ೧೯೨೯ ರಿಂದ ೧೯೩೬ ರವರೆಗೆ ಜಾನ್ ಗಾಸ್ರ್ಟಾಂಗ್ ಮತ್ತು ೧೯೫೨ ರಲ್ಲಿ ಕೆತಲಿನ್ ಕೆನ್ಯಾನ್ ಭೂಶೋಧನೆಗಳನ್ನು ನಡೆಸಿದರು. ಮಧ್ಯ ಶಿಲಾಯುಗದ ಬೇಟೆಗಾರರು ಬದಲಾಗುತ್ತಿದ್ದ ವಾತಾವರಣ ಮತ್ತು ವಾಯುಗುಣಗಳಿಂದಾಗಿ ಅಲೆಮಾರಿ ಜೀವನ ಮತ್ತು ಆಹಾರಸಂಗ್ರಹದ ಹಂತದಿಂದ ಮುಂದುವರಿದು, ಒಂದೆಡೆಯಲ್ಲಿ ನೆಲೆ ನಿಂತು ಆಹಾರ ಉತ್ಪಾದಿಸುವ ಹಂತವನ್ನು ಕ್ರಮೇಣ ತಲಪಿದರೆಂದೂ ಗ್ರಾಮೀಣ ಜೀವನವನ್ನು ರೂಢಿಸಿಕೊಂಡರೆಂದೂ ಈ ಶೋಧನೆಗಳಿಂದ ತಿಳಿದುಬರುತ್ತದೆ. ಬದಲಾದ ಈ ಸಾಂಸ್ಕøತಿಕ ವಿಧಾನವನ್ನು ನವಶಿಲಾಯುಗ ಸಂಸ್ಕøತಿಯೆಂದು ಕರೆಯುತ್ತಾರೆ. ಈ ಸಂಸ್ಕøತಿಯ ಎರಡು ಹಂತಗಳನ್ನು ಇಲ್ಲಿ ಗುರುತಿಸಲಾಗಿದೆ. ಕಂದಕವೊಂದರಲ್ಲಿ ಸುತ್ತುವರಿಯಲ್ಪಟ್ಟ ಕಲ್ಲಿನ ರಕ್ಷಣಾ ಕೋಟೆಯೊಳಗೆ ನಿರ್ಮಿಸಿದ ಗುಡಿಸಲುಗಳಲ್ಲಿ ಜನರು ವಾಸಿಸುತ್ತಿದ್ದುದು ಮೊದಲನೆಯ ಹಂತ. ಇವರು ಬೇಟೆಯಿಂದ ಆಹಾರ ಸಂಗ್ರಹಣೆ ಮಾಡುತ್ತಿದ್ದರೂ ಆಹಾರೋತ್ಪಾದನೆಯ ಮೊದಲ ಪ್ರಯತ್ನಗಳು ಇಲ್ಲಿ ಕಂಡುಬರುತ್ತವೆ. ಆಗಿನ ಜನರು ಕಲ್ಲಿನಲ್ಲಿ ಕೊರೆದು ನಿರ್ಮಿಸಿದ ಪಾತ್ರೆಗಳನ್ನು ಬಳಸುತ್ತಿದ್ದರು. ಎರಡನೆಯ ಹಂತದಲ್ಲಿ ಗ್ರಾಮೀಣ ಜೀವನದಲ್ಲಿ ಹಲವು ಸುಧಾರಣೆಗಳಾದುವು. ಜೇಡಿಮಣ್ಣಿನಲ್ಲಿ ಮಾಡಿ ಸುಟ್ಟ ಮಡಕೆಗಳ ಉಪಯೋಗ ಪ್ರಾರಂಭವಾಯಿತು. ಕಾರ್ಬನ್-೧೪ ಕಾಲನಿರ್ಣಯ ವಿಧಾನದಿಂದ ಮೊದಲ ಹಂತವನ್ನು ಕ್ರಿ.ಪೂ.೪ ನೆಯ ಸಹಸ್ರಮಾನಕ್ಕೆ ನಿರ್ದೇಶಿಸಲಾಗಿದೆ. ಈಚೆಗೆ ದಕ್ಷಿಣ ಜಾರ್ಡನಿನ ಪೆಟ್ರಾ ಮತ್ತು ವಾಡಿ ಷಯಿಬ್ ನೆಲೆಗಳಲ್ಲಿ ನವಶಿಲಾಯುಗದ ಮೊದಲ ಹಂತದ ಸಂಸ್ಕøತಿಯ ಕುರುಹುಗಳು ಕಂಡುಬಂದಿವೆ. ದೇಶದ ವಿವಿಧ ಭಾಗಗಳಲ್ಲಿ ಹರಡಿರುವ ಬೃಹತ್ ಸಮಾಧಿ ಸಂಸ್ಕøತಿಯ ಅವಶೇಷಗಳು ಈ ಕಾಲಕ್ಕೆ ಸೇರುತ್ತವೆ.

ಕ್ರಿ.ಪೂ.೪,೫೦೦-೩,೦೦೦ ಕ್ಕೆ ಸೇರಿದ ತಾಮ್ರಶಿಲಾಯುಗದ ಸಂಸ್ಕøತಿಯ ಅವಶೇಷಗಳು ಟೆಲ್-ಎಲ್-ಅಜ್ಜುಲ್ ನೆಲೆಯಲ್ಲಿ ೧೯೩೦-೩೪ ಮತ್ತು ೧೯೩೮ ರಲ್ಲಿ ವಿಲಿಯಮ್ ಫ್ಲಿಂಡರ್ಸ್‍ಪೆಟ್ರಿ ನಡೆಸಿದ ಸಂಶೋಧನೆಗಳಿಂದ ದೊರೆತಿವೆ. ಜೆರಿಕೋ ಬಳಿ ಇರುವ ಟೆಲೈಲತ್-ಎಲ್-ಫಸ್ಸುಲ್ ನೆಲೆಯಲ್ಲಿ ೧೯೩೦-೩೮, ೧೯೬೦ ಮತ್ತು ೧೯೬೭ ರಲ್ಲಿ ನಡೆಸಿದ ಭೂಶೋಧನೆಗಳಿಂದ ಕ್ರಿ.ಪೂ. ಸು.೩,೫೦೦ ಕ್ಕೆ ನಿರ್ದೇಶಿಸಬಹುದಾದ ಈ ಸಂಸ್ಕøತಿಯ ಕಾಲದಲ್ಲಿ ಮಣ್ಣಿನ ಗೋಡೆಗಳಿಂದ ನಿರ್ಮಿಸಲಾದ ವಾಸಗೃಹಗಳು ಇದ್ದುದು ಗೊತ್ತಾಗಿದೆ. ಆ ಗೋಡೆಗಳ ಮೇಲೆ ವಿವಿಧ ಬಣ್ಣಗಳಿಂದ ಚಿತ್ರಗಳನ್ನು ರಚಿಸಲಾಗಿತ್ತು. ಆ ವೇಳೆಗೆ ವ್ಯವಸಾಯ ಬಹಳ ಸುಧಾರಿಸಿತ್ತು.

ಅನಂತರ ಕಾಲದ ಕಂಚಿನ ಯುಗ ಸಂಸ್ಕøತಿಯನ್ನು ಆದಿ, ಮಧ್ಯ, ಅಂತ್ಯ ಎಂದು ಮೂರು ಹಂತಗಳಾಗಿ ವಿಭಾಗಿಸಲಾಗಿದೆ. ಕಂಚಿನ ಯುಗದ ಅದಿ ಕಾಲದಲ್ಲಿ (ಕ್ರಿ.ಪೂ.೩,೦೦೦-೨,೧೦೦) ಆಯ್, ಟೆಲ್-ಎಲ್-ಫರಾ, ಧಿಬಾನ್ ಮುಂತಾದ ನೆಲೆಗಳಲ್ಲಿ ಜನವಸತಿಯಿತ್ತು. ಆಯ್ ನೆಲೆಯಲ್ಲಿ ಕ್ರಿ.ಪೂ. ೨,೯೦೦-೨,೫೦೦ ರ ಕಾಲಕ್ಕೆ ಸೇರಿದ, ಮೂರು ಸುತ್ತಿನ ಕೋಟೆಯಿಂದ ರಕ್ಷಿತವಾದ, ಗ್ರಾಮದಲ್ಲಿ ಒಂದು ದೇವಾಲಯ, ಅರಮನೆ ಮತ್ತು ಇತರ ವಾಸಗೃಹಗಳಿದ್ದುವು. ಟೆಲ್-ಎಲ್-ಫರಾದಲ್ಲಿ ಕ್ರಿ.ಪೂ.೪ ನೆಯ ಸಹಸ್ರಮಾನಕ್ಕೆ ಸೇರಿದ ಗ್ರಾಮೀಣ ಜೀವನದ ಹಂತದ ತರುವಯ ಕಂಚಿನ ಯುಗದ ಆದಿಕಾಲದಲ್ಲಿ ಕೋಟೆಯಿಂದ ರಕ್ಷಿತವಾದ ಗ್ರಾಮ ಸ್ಥಾಪಿತವಾಯಿತು.

ಜನಜೀವನವಿಧಾನಗಳಲ್ಲಿ ಉಂಟಾಗುತ್ತಿದ್ದ ಸುಧಾರಣೆಗಳ ಪರಿಚಯ ಈ ಎಲ್ಲ ನೆಲೆಗಳಲ್ಲೂ ನಡೆಸಿದ ಉತ್ಖನನಗಳಿಂದ ದೊರಕುತ್ತದೆ. ನೆರೆಯ ಈಜಿಪ್ಟ್ ಮತ್ತು ಇರಾಕ್‍ಗಳಲ್ಲಿ ನಾಗರಿಕ ಹಂತದತ್ತ ಮುನ್ನಡೆಯುತ್ತಿದ್ದ ಸಂಸ್ಕøತಿಯ ಕುರುಹುಗಳು ಇಲ್ಲೂ ಕಂಡುಬರುತ್ತವೆ. ಈ ಹಂತದ ಸಂಸ್ಕøತಿಯ ಕುರುಹುಗಳು ದೇಶಾದ್ಯಂತ ಕಂಡುಬಂದಿವೆಯಾದರೂ, ಪ್ರಸ್ಥಭೂಮಿ ಪ್ರದೇಶದಲ್ಲಿ-ಯಾರ್ಮೂಕ್‍ನಿಂದ ಷೋಬಕ್‍ವರೆಗೂ-ಅನೇಕ ಗ್ರಾಮಗಳ ಅವಶೇಷಗಳು ಕಂಡುಬಂದಿರುವುದು ಗಮನಾರ್ಹ. ಬೈಬಲಿನಲ್ಲಿ ರಾಜಮಾರ್ಗವೆಂದು ಕರೆಯಲಾದ ವ್ಯಾಪಾರಮಾರ್ಗ ಈ ಗ್ರಾಮಗಳ ಮೂಲಕ ಹಾದುಹೋಗುತ್ತಿತ್ತು.

ತರುವಾಯದ ಕಂಚಿನ ಯುಗದಲ್ಲಿ-ಮಧ್ಯ ಮತ್ತು ಅಂತ್ಯಕಾಲಗಳಲ್ಲಿ (ಕ್ರಿ.ಪೂ.೨೧೦೦-೧೨೦೦)-ಅಮೊರೈಟ್, ಹೈಕ್ಸಾಸ್ ಮತ್ತು ಈಜಿಪ್ಟಿಯನ್ನರ ದಾಳಿಗಳಿಗೆ ಜಾರ್ಡನ್ ತುತ್ತಾಯಿತು. ಟೆಲ್-ಎಲ್-ಅಜ್ಜುಲ್‍ನ ಭೂಶೋಧನೆಗಳಲ್ಲಿ ಈ ಕಾಲಕ್ಕೆ ಸೇರಿದ ಕೋಟೆಯಿದ್ದ ದೊಡ್ಡ ಗ್ರಾಮವೊಂದರ ಅವಶೇಷಗಳು ದೊರಕಿವೆ. ಒಂದರ ಅನಂತರ ಒಂದರಂತೆ ಅಸ್ತಿತ್ವದಲ್ಲಿದ್ದ ಐದು ಅರಮನೆಗಳ ಅವಶೇಷಗಳೂ ಹಲವು ಚಿನ್ನದ ಆಭರಣಗಳ ರಾಶಿಗಳೂ ಅಲ್ಲಿ ಕಂಡುಬಂದಿರುವುದರಿಂದ ಅಲ್ಲಿಯ ಸಂಪದ್ಭರಿತ ಸಮಾಜದ ಪರಿಚಯವಾಗುತ್ತದೆ. ಷೆಜೆಮ್ (ಈಗಿನ ಬಲಾಟಾ) ನೆಲೆಯಲ್ಲಿ ೧೯೧೩-೩೪ ರ ನಡುವೆ ಜರ್ಮನರೂ ಈಚೆಗೆ ಅಮೆರಿಕನರೂ ಸಂಶೋಧನೆ ನಡೆಸಿದ್ದಾರೆ. ಅಲ್ಲಿದ್ದ ಗ್ರಾಮದ ಸುತ್ತಲೂ ಬಲವಾದ, ೬` ಎತ್ತರದ, ಇಳಿಜಾರಾದ ಕೋಟೆಗೋಡೆಯಿದ್ದುದು ತಿಳಿದುಬಂದಿದೆ. ಅದೇ ಕಾಲಕ್ಕೆ ಸೇರಿದ ಕಲ್ಲಿನ ಫಲಕವೊಂದರ ಮೇಲೆ ವಿಶ್ವದಲ್ಲೇ ಅತ್ಯಂತ ಪ್ರಾಚೀನವಾದ ಅಕ್ಷರ ಲಿಪಿ ಕಂಡುಬಂದಿದೆ.

ಕಂಚಿನ ಯುಗದ ಅಂತ್ಯಕಾಲದಲ್ಲಿ ಸ್ಥಾಪಿತವಾದ ಬೆತೆಲ್‍ನಲ್ಲಿ ೧೯೩೪ ರಲ್ಲಿ ಆಲ್‍ಬ್ರೈಟರ ಉತ್ಖನನಗಳಿಂದ ಕ್ರಿ.ಪೂ.೨೦೦೦ ದಿಂದ ಕ್ರಿಸ್ತಶಕೆಯ ಆರಂಭದವರೆಗೂ ಅಸ್ತಿತ್ವದಲ್ಲಿದ್ದ ನಗರದ ಅವಶೇಷಗಳು ದೊರಕಿವೆ. ಆಗ ಕ್ಯಾನನೈಟ್ ಪಂಗಡದವರು ಅಲ್ಲಿ ನೆಲಸಿದ್ದರು. ಅದೇ ಸುಮರಿನಲ್ಲಿ ಅಮ್ಮಾನ್ ಬಳಿಯ ಒಂದು ನೆಲೆಯಲ್ಲಿ ಈಜಿಪ್ಟ್, ಮೈಸಿನೆ ಮತ್ತು ಸೈಪ್ರಸ್‍ಗಳಿಂದ ಆಮದು ಮಾಡಿಕೊಂಡ ವಸ್ತುಗಳನ್ನು ಉಪಯೋಗಿಸುತ್ತಿದ್ದ ದೇವಾಲಯದ ಅವಶೇಷಗಳು ಕಂಡುಬಂದಿವೆ. ಪ್ರಮುಖ ವಿಶ್ವಧರ್ಮಗಳ ಪವಿತ್ರ ಕ್ಷೇತ್ರವಾದ ಜೆರೊಸಲೆಮ್ ಸಹ ಆ ಕಾಲದಲ್ಲಿ ಅಸ್ತಿತ್ವಕ್ಕೆ ಬಂತು. ಆ ಪ್ರದೇಶದಲ್ಲಿ ೨೮೬೪ ರಿಂದ ಆಗಾಗ್ಗೆ ಉತ್ಖನನಗಳು ನಡೆದಿವೆ. ಕ್ಯಾನನೈಟ್ ಪಂಗಡದ ಜನರು ಈಗಿನ ಜೆರೊಸಲೆಮ್‍ನ ಆಗ್ನೇಯಕ್ಕಿರುವ ಓಫೆಲ್ ಗುಡ್ಡದ ಮೇಲೆ ನೆಲಸಿದ್ದರು. ಕ್ರಿ.ಪೂ.೨೦೦೦ ದ ಸುಮಾರಿನಲ್ಲಿ ಡೇವಿಡನ ನಾಯಕತ್ವದಲ್ಲಿ ಇಸ್ರೇಲಿಗಳು ಅದನ್ನು ಗೆದ್ದುಕೊಂಡರು. ಅದರ ಉತ್ತರ ಭಾಗದಲ್ಲಿ ಸಾಲೊಮನ್ ನಿರ್ಮಿತ ದೇವಾಲಯವೊಂದಿದೆ.

ಹಳೆಯ ಒಡಂಬಡಿಕೆಯಲ್ಲಿ ಜಾರ್ಡನ್ ಪ್ರದೇಶದ ಬಗ್ಗೆ ಅನೇಕ ಉಲ್ಲೇಖಗಳುಂಟು. ಆಗಿದ್ದ ರಾಜ್ಯಗಳಲ್ಲಿ ಉತ್ತರದ ಗಿಲಿಯಟ್, ಮಧ್ಯಭಾಗದ ಮೋಆಬ್ ಮತ್ತು ಮಿಡಿಯನ್ (ಅಮ್ಮಾನ್), ದಕ್ಷಿಣದ ಎಡೋಮ್ ಮುಖ್ಯವಾದವು. ಇಸ್ರೇಲಿಗಳು ದೇಶಭ್ರಷ್ಟರಾದ ಕಾಲದಲ್ಲಿ ಈಜಿಪ್ಟಿನಿಂದ ಜಾರ್ಡನ್ ಪ್ರದೇಶದ ಮೂಲಕ ಹಾದುಹೋಗುವಾಗ ಅವರು ಅಮೊರೈಟ್ ಪಂಗಡದವರನ್ನು ಹೆಷ್ಬಾನಿನಲ್ಲಿ ಸೋಲಿಸಿದರಲ್ಲದೆ ಗಿಲಿಯಡ್ ರಾಜ್ಯವನ್ನು ಆಕ್ರಮಿಸಿಕೊಂಡರು. ಗಾಡ್, ರೂಬೆಮ ಮತ್ತು ನಾನ್ಸೆ ಪಂಗಡಗಳ ಜನರು ಅಮೊನೈಟ್, ಅಮೊರೈಟ್ ಮತ್ತು ಬಷನ್ ಪ್ರದೇಶಗಳಲ್ಲಿ ನೆಲಸಿ, ತಾವು ನಾಶಮಾಡಿದ್ದ ಅನೇಕ ನಗರಗಳನ್ನು ಪುನರ್‍ನಿರ್ಮಿಸಿದರು. ಧಿಬಾನ್‍ನಲ್ಲಿ ದೊರಕಿರುವ ಮೆಷಾ ಶಿಲೆಯ ಮೇಲೆ ಕ್ರಿ.ಪೂ.೮೫೦ ಕ್ಕೆ ಸೇರಿದ, ಹೀಬ್ರೂವನ್ನು ಹೋಲುವ ಲಿಪಿಯಲ್ಲಿ ಬರೆದ ಕ್ಯಾನನೈಟ್ ಶಾಸನ ಮೋಅಬ್ ರಾಜ್ಯದ ಮೇಲೆ ಓಮ್ರಿ ನಡೆಸಿದ ಆಕ್ರಮಣದ ವಿಚಾರವನ್ನು ಹೇಳುತ್ತದೆ.

ಕ್ರಿ.ಪೂ.೧೩೦೦ ರಿಂದ ೧೦೦೦ ರ ವರೆಗಿನ ಕಾಲದಲ್ಲಿ ಈ ಪ್ರದೇಶದ ಮೇಲೆ ಇಕ್ಕೆಲಗಳಿಂದಲೂ ದಾಳಿಗಳು ನಡೆಯುತಿದ್ದವು. ಮೋಅಬ್ ಮತ್ತು ಎಡೋಮ್ ರಾಜ್ಯಗಳನ್ನು ಡೇವಿಡ್ ಆಕ್ರಮಿಸಿ, ಮೋಅಬ್‍ನ ಮೂರನೆಯ ಎರಡು ಭಾಗದ ಜನರನ್ನೂ ಎಡೋಮ್‍ನ ಎಲ್ಲ ಜನರನ್ನೂ ಕೊಂದ. ಅಮ್ಮಾನ್ ಶತ್ರು ವಶವಾದರೂ ಕ್ರಿ.ಪೂ.೯೬೦ ರ ವೇಳೆಗೆ ಮತ್ತೆ ಸ್ವಾತಂತ್ರ ಗಳಿಸಿಕೊಂಡಿತು. ತೀರ ಪ್ರದೇಶದ ಎಜಿಯನ್ ಗೆಬರ್ ಎಂಬಲ್ಲಿ ಸಾಲೊಮನ್ ಒಂದು ಬಂದರನ್ನು ನಿರ್ಮಿಸಿದ. ಜುಡಾ ಮತ್ತು ಎಡೋಮ್‍ಗಳ ನಡುವೆ ಸತತ ಹೋರಾಟ ನಡೆಯುತ್ತಿತ್ತು. ಹಿಬ್ರೂ ದೊರೆ ಅಮ್‍ಜóಯ ಸಲಾವನ್ನು (ಪೆಟ್ರಾ) ಆಕ್ರಮಿಸಿಕೊಂಡು, ೧೦,೦೦೦ ಜನರನ್ನು ಕೊಂದುಹಾಕಿದ. ಅನಂತರ ಎಡೋಮ್‍ವರೆಗಿನ ಪೂರ್ವಭಾಗವನ್ನು ಅಸ್ಸಿರಿಯನ್ ದೊರೆ ೩ ನೆಯ ಅದಾದ್ನಿರಾರಿ (ಕ್ರಿ.ಪೂ.೮೧೧-೭೮೨) ಗೆದ್ದರೂ ಮತ್ತೆ ಅಲ್ಲಿ ದಂಗೆಗಳಾದವು. ೩ ನೆಯ ಟಿಗ್ಲಾತ್ ಪಿಲೇಸರ್ (ಕ್ರಿ.ಪೂ.೭೪೫-೭೨೭)ಅವನ್ನು ಅಡಗಿಸಿದ. ಕ್ರಿ.ಪೂ.೬೧೨ ರಲ್ಲಿ ಅಸ್ಸಿರಿಯನ್ ಚಕ್ರಾಧಿಪತ್ಯ ಅಳಿಯುವವರೆಗೂ ಈ ಪ್ರದೇಶ ಅವರ ವಶದಲ್ಲಿ ಉಳಿದಿತ್ತು. ಅನಂತರ ಬ್ಯಾಬಿಲೋನಿಯ ಮತ್ತು ಪರ್ಷಿಯಗಳ ವಶವಾಗಿದ್ದ ಜಾರ್ಡನ್ ಕ್ರಿ.ಪೂ.೫ ನೆಯ ಶತಮಾನದ ಕೊನೆಯಲ್ಲಿ ನಬಾಟೇಯನರ ಅಧೀನವಾಯಿತು. ಆಗ ಪೆಟ್ರಾ ಅವರ ರಾಜಧಾನಿಯಾಯಿತು.

ಅಸ್ಸಿರಿಯನರ ಅನಂತರ ಸ್ವಲ್ಪಕಾಲ ನಿಯೋಬ್ಯಾಬಿಲೋನಿಯನರು ಮತ್ತು ಪರ್ಷಿಯನರು ಜಾರ್ಡನನ್ನು ಆಳಿದರು. ಗ್ರೀಕರ ಆಗಮನದವರೆಗೆ ದೇಶದಲ್ಲಿ ಯಾವ ಪ್ರಗತಿಯೂ ಕಂಡುಬರಲಿಲ್ಲ. ಗ್ರೀಕರ ಆಳ್ವಿಕೆಯ ಕಾಲದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಲಾಯಿತು. ಅನೇಕ ಪಟ್ಟಣಗಳು ನಿರ್ಮಾಣವಾದುವು. ವ್ಯಾಪಾರ ವೃದ್ಧಿಗೊಂಡಿತು.

ಕ್ರಿ.ಪೂ.೬೪-೬೩ರಲ್ಲಿ ಜಾರ್ಡನ್ ರೋಮನರ ಆಕ್ರಮಣಕ್ಕೆ ಒಳಗಾಯಿತು. ಇವರ ಆಳ್ವಿಕೆಯ ಕಾಲದಲ್ಲೂ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿಯುಂಟಾಯಿತು. ಕ್ರಿ.ಶ.೩೨೩ ರ ಅನಂತರ ಕ್ರೈಸ್ತಮತಕ್ಕೆ ಮನ್ನಣೆ ದೊರೆಕಿತು. ಅನೇಕ ಚರ್ಚುಗಳ ನಿರ್ಮಾಣವಾಯಿತು. ಬೆತ್ಲೆಹೆಮ್ ಇಂದಿಗೂ ಕ್ರೈಸ್ತರ ಒಂದು ಧಾರ್ಮಿಕ ಕ್ಷೇತ್ರ ೬ ಮತ್ತು ೭ ನೆಯ ಶತಮಾನಗಳಲ್ಲಿ ಜಾರ್ಡನ್ ಪರ್ಷಿಯನರ ದಾಳಿಗಳಿಗೆ ತುತ್ತಾಯಿತು. ಬಿಜಾóಂಟಿನ್ ದೊರೆ ಹೆರಾಕ್ಲಿಯಸ್ ಪರ್ಷಿಯನರನ್ನು ಸೋಲಿಸಿ ದೇಶದಲ್ಲಿ ಕಾನೂನು ಮತ್ತು ಶಾಂತಿ ನೆಲಸುವಂತೆ ಮಾಡಿದ. ಆದರೆ ೬೩೬ ರಲ್ಲಿ ಮುಸ್ಲಿಮರು ಇದನ್ನು ಜಯಿಸಿದರು. ದಮಾಸ್ಕಸಿನಿಂದ ಆಳುತ್ತಿದ್ದ ಉಮೈಯದ್ ಕಲೀಫರು ಜಾರ್ಡನ್ ಮರುಭೂಮಿಯಲ್ಲಿ ಅನೇಕ ಅರಮನೆಗಳನ್ನು ಕಟ್ಟಿಸಿದರು. ಅನೇಕ ರೋಮನ್ ಕೋಟೆಗಳನ್ನು ಪುನರ್‍ನಿರ್ಮಿಸಲಾಯಿತು. ಅಬ್ಬಾಸಿದರು ಬಾಗ್ದಾದಿನಲ್ಲಿ ತಮ್ಮ ರಾಜಧಾನಿಯನ್ನು ಸ್ಥಾಪಿಸಿಕೊಂಡ ಮೇಲೆ ಜಾರ್ಡನಿನ ಬೆಳವಣಿಗೆ ಕುಂಠಿತಗೊಂಡಿತು. ಅನಂತರ ಜಾರ್ಡನ್ ಪ್ರಾಂತ್ಯದ ಮೇಲೆ ಧರ್ಮಯೋಧರು (ಕ್ರುಸೇಡರ್ಸ್) ದಾಳಿ ಮಾಡಿ ಹಲವು ಭಾಗಗಳನ್ನು ಗೆದ್ದುಕೊಂಡು ಅನೇಕ ಕಟ್ಟಡಗಳನ್ನು ಮತ್ತು ರೈಲುಮಾರ್ಗಗಳನ್ನು ನಿರ್ಮಿಸಿದರು. ಆದರೆ ಅವರು ಹಿಂದಿರುಗಿದ ಮೇಲೆ ಜಾರ್ಡನಿನ್ ಇತಿಹಾಸ ಅಂಥ ವಿಶೇಷ ಘಟನೆಗಳಿಂದ ಕೂಡಿರಲಿಲ್ಲ. ಹದಿನಾರನೆಯ ಶತಮಾನದಲ್ಲಿ ಜಾರ್ಡನ್ ಆಟೋಮನ್ (ತುರ್ಕಿ) ರಾಜನ ಅಧಿಕಾರಕ್ಕೆ ಒಳಪಟ್ಟು ಡಮಾಸ್ಕಸ್‍ನ ವಿಲಾಯತ್ ಆಯಿತು.

ಒಂದನೆಯ ಮಹಾಯುದ್ಧದ ಕಾಲದಲ್ಲಿ ಬ್ರಿಟನ್ ಮತ್ತು ಅರಬ್ ಸೈನ್ಯಗಳು ಪ್ಯಾಲಸ್ಟ್ಯನನ್ನು ಗೆದ್ದುಕೊಂಡವು. ೧೯೨೦ ರಲ್ಲಿ ರಾಷ್ಟ್ರಗಳ ಕೂಟ (ಲೀಗ್ ಆಫ್ ನೇಷನ್ಸ್) ಪ್ಯಾಲಸ್ಟೈನನ್ನು ಪ್ರಾದೇಶಾಧೀನ ಪ್ರದೇಶವಾಗಿ ಬ್ರಿಟನಿಗೆ ವಹಿಸಿತು. ಈಗಿನ ಇಸ್ರೇಲ್ ಮತ್ತು ಜಾರ್ಡನ್ ಪ್ರದೇಶಗಳು ಬ್ರಿಟನಿನ ಅಧಿಕಾರಕ್ಕೆ ಒಳಪಟ್ಟಿದ್ದುವು. ಬ್ರಿಟನ್ ಹಾಷೆಮೈಟ್ ವಂಶಸ್ಥನಾದ ಅಬ್ದುಲ್ಲನನ್ನು ಜಾರ್ಡನ್ ಮತ್ತು ಸುತ್ತಮುತ್ತಲ ಪ್ರದೇಶಗಳ ಸುಲ್ತಾನನಾಗುವಂತೆ ಒಡಂಬಡಿಸಿತು. ಅವನ ಆಳ್ವಿಕೆಗೆ ಒಳಪಟ್ಟ ಪ್ರದೇಶಕ್ಕೆ ಟ್ರಾನ್ಸ್‍ಜಾರ್ಡನ್ ಎಂದು ಹೆಸರಾಯಿತು. ಬ್ರಿಟಿಷರು ಟ್ರಾನ್ಸ್‍ಜಾರ್ಡನಿನ ರಕ್ಷಣೆಗಾಗಿ ಒಂದು ಅರಬ್ ಸೈನ್ಯವನ್ನು ರಚಿಸಿದರು. ಆ ಸೈನ್ಯದ ಮುಖ್ಯಾಧಿಕಾರಿಗಳು ಬ್ರಿಟಿಷರೇ ಆಗಿದ್ದರು. ಟ್ರಾನ್ಸ್‍ಜಾರ್ಡನನ್ನು ಒಂದು ಪ್ರತ್ಯೇಕ ದೇಶವೆಂದು ೧೯೨೩ ರಲ್ಲಿ ಪರಿಗಣಿಸಲಾಯಿತು. ಆದರೂ ಅದು ಬ್ರಿಟನಿನ ಅಧೀನತೆಯಲ್ಲಿ ಮುಂದುವರಿಯಿತು. ಟ್ರಾನ್ಸ್‍ಜಾರ್ಡನಿಗೆ ಸ್ವತಂತ್ರವಾಗಿ ಆಳಲು ಇನ್ನೂ ಶಕ್ತಿಯಿಲ್ಲವೆಂದು ಪರಿಗಣಿಸಲಾಗಿತ್ತು. ಮುಂದಿನ ಇಪ್ಪತ್ತು ವರ್ಷಗಳಲ್ಲಿ ಟ್ರಾನ್ಸ್‍ಜಾರ್ಡನ್ ಬ್ರಿಟನಿನ ಅಧಿಕಾರದಿಂದ ಸ್ವತಂತ್ರವಾಗಲು ಪ್ರಯತ್ನಪಟ್ಟಿತು. ೧೯೪೦ ರ ವೇಳೆಗೆ ಜಾರ್ಡನಿನಲ್ಲಿ ಕೇವಲ ಕೆಲವು ಬ್ರಿಟಿಷರು ಸಲಹೆಗಾರರಾಗಿ ಅರಬ್ ಸೈನ್ಯದ ಅಧಿಕಾರಿಗಳಾಗಿ ಇದ್ದರು. ೧೯೪೬ ರ ಮೇ ತಿಂಗಳಲ್ಲಿ ಅಬ್ದುಲ್ಲನನ್ನು ಟ್ರಾನ್ಸ್‍ಜಾರ್ಡನಿನ ದೊರೆಯೆಂದು ಘೋಷಿಸಲಾಯಿತು. ೧೯೪೮ ರಲ್ಲಿ ಬ್ರಿಟನ್ ಟ್ರಾನ್ಸ್‍ಜರ್ಡನಿನ ಪಶ್ಚಿಮ ಭಾಗದಲ್ಲಿದ್ದ ಪ್ಯಾಲಸ್ಟೈನ್‍ನ ಒಂದು ಭಾಗದ ಮೇಲೆ ತನ್ನ ಅಧಿಕಾರ ಕೊನೆಗಾಣಿಸಿತು. ಇಲ್ಲಿ ಯೆಹೂದ್ಯರು ಇಸ್ರೇಲ್ ರಾಜ್ಯ ಸ್ಥಾಪಿಸಿದರು. ಇಸ್ರೇಲ್‍ಗೂ ಅರಬ್ ರಾಷ್ಟ್ರಗಳಿಗೂ ನಡುವೆ ಆರಂಭವಾದ ಯುದ್ಧ, ವಿಶ್ವಸಂಸ್ಥೆ ನಡುವೆ ಪ್ರವೇಶಿಸಿದ್ದರಿಂದ ಕೊನೆಗೊಂಡಿತು. ಜಾರ್ಡನ್ ನದಿಯ ಪಶ್ಚಿಮ ಭಾಗದ ಪ್ರದೇಶ ಟ್ರಾನ್ಸ್‍ಜಾರ್ಡನಿಗೆ ಬಂತು. ಆ ದೇಶದ ಹೆಸರು ಟ್ರಾನ್ಸ್‍ಜಾರ್ಡನ್ ಎಂಬುದರಿಂದ ಜಾರ್ಡನ್ ಎಂದು ಬದಲಾಯಿತು.

೧೯೫೧ ರಲ್ಲಿ ಅಬ್ದುಲ್ಲ ಕೊಲೆಗೆ ಈಡಾದಾಗ ಅವನ ಮಗ ತಲಾಲ್ ರಾಜನಾದ. ಆದರೆ ತಲಾಲನ ಅನಾರೋಗ್ಯದಿಂದ ಆತ ದೊರೆಯಾಗಿರಲು ಸಾಧ್ಯವಾಗಲಿಲ್ಲ. ಸಂಸತ್ತು ಅವನನ್ನು ಪದಚ್ಯುತಗೊಳಿಸಿ ಅವನ ಮಗ ೧ ನೆಯ ಹುಸೇನನನ್ನು ದೊರೆಯಾಗಿ ನೇಮಿಸಿತು.

೧೯೪೮ ರಲ್ಲಿ ನಡೆದ ಇಸ್ರೇಲ್-ಅರಬ್ ಯುದ್ಧದಿಂದಾಗಿ ಅನೇಕ ಅರಬ್ ನಿರಾಶ್ರಿತರು ಜಾರ್ಡನಿಗೆ ಬಂದರು. ಜಾರ್ಡನ್ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿತು. ಆಗಿನಿಂದಲೂ ಜಾರ್ಡನ್ ಮತ್ತು ಇಸ್ರೇಲ್‍ಗಳ ನಡುವಣ ವೈಮನಸ್ಯ ಮುಂದುವರಿಯಿತು. ೧೯೫೫ ರಲ್ಲಿ ಜಾರ್ಡನ್‍ಗೆ ವಿಶ್ವಸಂಸ್ಥೆಯ ಸದಸ್ಯತ್ವ ದೊರಕಿತು.

ಜಾರ್ಡನಿನಲ್ಲಿ ಬ್ರಿಟಿಷರ ಪರಭಾವವನ್ನು ಸಂಪೂರ್ಣವಾಗಿ ಕೊನೆಗಾಣಿಸಲು ಅನೇಕ ದಂಗೆಗಳು ಎದ್ದುವು. ೧೯೫೬ ರಲ್ಲಿ ದೊರೆ ಹುಸೇನ್ ಜಾರ್ಡನಿನ ಬ್ರಿಟಿಷ್ ಮಹಾದಂಡನಾಯಕನನ್ನು ವಜ ಮಾಡಿದರು. ಜಾರ್ಡನಿನ ರಕ್ಷಣೆಗಾಗಿ ೧೯೪೮ ರಲ್ಲಿ ಬ್ರಿಟನಿನೊಡನೆ ಮಾಡಿಕೊಂಡಿದ್ದ ಒಪ್ಪಂದವನ್ನು ೧೯೫೭ ರಲ್ಲಿ ಕೊನೆಗೊಳಿಸಲಾಯಿತು. ೧೯೬೭ ರಲ್ಲಿ ಇಸ್ರೇಲಿನೊಂದಿಗೆ ನಡೆದ ಯುದ್ಧದಲ್ಲಿ ಜಾರ್ಡನ್ ನದಿಯ ಪಶ್ಚಿಮ ದಂಡೆಯ ಪ್ರದೇಶವನ್ನೆಲ್ಲ ಇಸ್ರೇಲ್ ಆಕ್ರಮಿಸಿಕೊಂಡಿತು. ಜೆರೊಸೆಲಮ್ ಹಳೆ ನಗರ ಇಸ್ರೇಲಿನ ಭಾಗವಾಯಿತು. ಉಳಿದ ಭಾಗವೆಲ್ಲ ಇಸ್ರೇಲಿ ಆಕ್ರಮಿತ ಪ್ರದೇಶ ಎನಿಸಿಕೊಂಡಿತು. ಪ್ಯಾಲಸ್ಟೀನಿಯನ್ ಗೆರಿಲಾ ಕಾರ್ಯಾಚರಣೆಗೆ ಜಾರ್ಡನ್ ನೆಲೆಯಾಯಿತು. ಸರ್ಕಾರಕ್ಕೂ ಗೆರಿಲಾಗಳಿಗೂ ನಡುವೆ ಘರ್ಷಣೆಗಳು ಮುಂದುವರಿದುವು. ಇವು ಅಂತರ್ಯುದ್ಧವಾಗಿ ಪರಿಣಮಿಸಿದುವು (೧೯೭೦). ೧೯೭೧ರಲ್ಲಿ ಸರ್ಕಾರ ವಿಜಯ ಗಳಿಸಿತು. ೧೯೭೩ ರಲ್ಲಿ ನಡೆದ ಅರಬ್-ಇಸ್ರೇಲಿ ಯುದ್ಧದಲ್ಲಿ ಜಾರ್ಡನ್ ಭಾಗವಹಿಸಲಿಲ್ಲ.

ಈಗ ಜಾರ್ಡನಿನಲ್ಲಿರುವುದು ಸಂವಿಧಾನಬದ್ಧ ರಾಜತ್ವ. ಹುಸೇನ್ ಜಾರ್ಡನಿನ ದೊರೆಯಾಗಿ ಮುಂದುವರಿಯುತ್ತಿದ್ದಾರೆ. ವಿಧಾನಮಂಡಲದಲ್ಲಿ ಎರಡು ಸದನಗಳುಂಟು. ಕೆಳಸದನದಲ್ಲಿ ೬೦ ಜನ ಚುನಾಯಿತ ಸದಸ್ಯರಿರುತ್ತಾರೆ. ಮೇಲಿನದು ಸೆನೆಟ್ ಸಭೆ. ಸೆನೆಟ್‍ನ ಎಲ್ಲ ೩೦ ಜನ ಸದಸ್ಯರೂ ದೊರೆಯಿಂದ ನಾಮಕರಣ ಹೊಂದುತ್ತಾರೆ.

ಇದನ್ನೂ ನೋಡಿ

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: