ಜೆರಿಕೋ - ಪ್ರಾಚೀನ ಅವಶೇಷಗಳಿಗಾಗಿ ಪ್ರಸಿದ್ಧವಾಗಿರುವ ಜಾರ್ಡನಿನ ಒಂದು ಪಟ್ಟಣ. ಜೆರೊಸಲೆಮ್‍ನ ಈಶಾನ್ಯಕ್ಕೆ 23 ಕಿ.ಮೀ. ದೂರದಲ್ಲಿದೆ. ಇದರ ಅರಬ್ಬೀ ಹೆಸರು ಅರೀಹ.

ಇತಿಹಾಸ

ಬದಲಾಯಿಸಿ

1967ರಲ್ಲಿ ಇಸ್ರೇಲ್ ಇದನ್ನು ಆಕ್ರಮಿಸಿಕೊಂಡಿತು. ಇದು ಕೆಳ ಜಾರ್ಡನ್ ಕಣಿವೆ ಪ್ರದೇಶದ ಬಹು ಮುಖ್ಯ ಆಯಕಟ್ಟು ಪ್ರದೇಶ. ಹಳೆಯ ಒಡಂಬಡಿಕೆಯ ಜಾಷುಅ ಪುಸ್ತಿಕೆಯಲ್ಲಿ ಈ ನಗರದ ಉಲ್ಲೇಖ ಬರುತ್ತದೆ. ಪ್ರಾಚೀನ ಜೆರಿಕೋ ನಗರದ ಅವಶೇಷಗಳು ಮೂರು ವಿಭಾಗಗಳಲ್ಲಿವೆ. ಕಾಲಕಾಲಕ್ಕೆ ನಗರ ಸ್ಥಳಾಂತರಗೊಳ್ಳುತ್ತಿದ್ದದ್ದು ಇದಕ್ಕೆ ಕಾರಣ. ಇಂದಿನ ಜೆರಿಕೋದಿಂದ 2 ಕಿ.ಮೀ. ಉತ್ತರಕ್ಕೆ ಅತ್ಯಂತ ಪ್ರಾಚೀನ ಜೆರಿಕೋವಿನ ಅವಶೇಷಗಳಿವೆ.

ಉತ್ಖನನ

ಬದಲಾಯಿಸಿ

ಜೆರಿಕೋ ನಗರವನ್ನು ಅನೇಕ ಪುರಾತತ್ವಜ್ಞರು ಶಾಸ್ತ್ರೀಯವಾಗಿ ಅಗೆದಿದ್ದಾರೆ. ಚಾಲ್ರ್ಸ್ ವಾರೆನ್ 1868ರಲ್ಲೂ ಅರ್ನೆಸ್ಟ್ ಸೆಲಿನ್ 1907ರಲ್ಲೂ ಉತ್ಖನನ ಮಾಡಿದರು. ಅನಂತರ ಜೂನ್ ಗಾಸ್ರ್ಟಾಂಗ್ 1930-36ರ ಅವಧಿಯಲ್ಲಿ ಉತ್ಖನನ ಮಾಡಿ ಈ ನಗರ ಕ್ರಿ.ಪೂ. 1400ರ ವೇಳೆಗೆ ನಾಶವಾಗಿದ್ದಿರಬಹುದೆಂದು ಊಹಿಸಿದರು. ಅಲ್ಲದೆ, ಈ ಸ್ಥಳ ಅತ್ಯಂತ ಪ್ರಾಚೀನವಾದ್ದೆಂದೂ ನೂತನ ಶಿಲಾಯುಗದಲ್ಲೇ ಇಲ್ಲಿ ಮಾನವ ವಾಸಿಸುತ್ತಿದ್ದನೆಂದೂ ಗಾಸ್ರ್ಟಾಂಗ್ ಪ್ರಕಟಿಸಿದರು. ಇದೇ ನಗರದಲ್ಲಿ 1952-58ರ ಅವಧಿಯಲ್ಲಿ ಸಂಶೋಧನೆ ನಡೆಸಿದ ಕ್ಯಾಥಲಿನ್ ಕೆನ್ಯಾನ್ ಎಂಬಾಕೆ ಅನೇಕ ಹೊಸ ವಿಷಯಗಳನ್ನು ಹೊರಗೆಡವಿದಳು. ಇಲ್ಲಿ ದೊರೆತ ಅವಶೇಷಗಳನ್ನು ಕಾರ್ಬನ್-14 ಪರೀಕ್ಷೆಗೆ ಗುರಿಪಡಿಸಲಾಯಿತು. ಈ ಎಲ್ಲ ಸಂಶೋಧನೆಗಳಿಂದ ಜೆರಿಕೋ ಬಗ್ಗೆ ತಿಳಿದುಬಂದಿರುವ ವಿಷಯ ಇಷ್ಟು; ಮಾನವನ ಅತ್ಯಂತ ಪ್ರಾಚೀನ ನೆಲೆಗಳಲ್ಲಿ ಜೆರಿಕೋ ಒಂದು. ಸೂಕ್ಷ್ಮ ಶಿಲಾಯುಗದ (ಕ್ರಿ.ಪೂ. ಸು. 8000) ಮತ್ತು ನೂತನ ಶಿಲಾಯುಗದ ಮೊದಲ ಹಂತದ (ಕ್ರಿ.ಪೂ. ಸು. 7000) ಅವಶೇಷಗಳು ಇಲ್ಲಿ ಸಿಕ್ಕಿವೆ. ಮಣ್ಣಿನ ಇಟ್ಟಿಗೆಗಳಿಂದ ಕಟ್ಟಿದ ಮನೆಗಳು ಪ್ರಾಥಮಿಕ ನಾಗರಿಕ ಘಟ್ಟಗಳನ್ನು (ಕ್ರಿ.ಪೂ. ಸು. 3200) ಸೂಚಿಸುತ್ತವೆ. ಊರ ಸುತ್ತಲೂ ರಕ್ಷಣೆಗಾಗಿ ಗೋಡೆ ಕಟ್ಟಿದ ಕುರುಹು ಇಲ್ಲಿ ಸಿಕ್ಕಿದೆ. ಇಂಥ ಗೋಡೆಯ ನಿರ್ಮಾಣ ಜಗತ್ತಿನಲ್ಲಿ ಇದೇ ಅತ್ಯಂತ ಪ್ರಾಚೀನವೆಂದು ಹೇಳಲಾಗಿದೆ.

ಗ್ರಾಮದ ಪಶ್ಚಿಮ ಭಾಗದಲ್ಲಿ ಬಂಡೆಯಿಂದ ಕಡಿಯಲ್ಪಟ್ಟ ಕಂದಕವೊಂದಿತ್ತು. ಇದು 27 ಅಗಲ 8 ಆಳ ಇತ್ತು. ಇದರ ಹೊರಭಾಗದಲ್ಲಿ ಕಲ್ಲಿನ ಗೋಪುರದಂಥ ಕಟ್ಟಡ 25 ಎತ್ತರ 30 ಅಗಲವಾಗಿತ್ತು.

ನೂತನ ಶಿಲಾಯುಗದ ಗ್ರಾಮ ಸಾಕಷ್ಟು ದೊಡ್ಡದಾಗಿಯೇ ಇತ್ತು. ಕ್ರಿ.ಪೂ. 4000ದ ವೇಳೆಗೆ ನಗರವಾಸಿಗಳಾಗಿದ್ದ ಜೆರಿಕೋ ಪ್ರಜೆಗಳು ತಾಮ್ರ ಮತ್ತು ಕಂಚಿನ ಉಪಯೋಗವನ್ನು ಕಂಡುಕೊಂಡಿದ್ದರು. ಕ್ರಿ.ಪೂ. 2200ರ ವೇಳೆಗೆ ಸಿರಿಯ ಮತ್ತು ಪ್ಯಾಲಸ್ಟೈನ್ ಭಾಗದಿಂದ ಏರಿ ಬಂದ ಜನ ಜೆರಿಕೋ ನಗರವನ್ನು ವಶಪಡಿಸಿಕೊಂಡರು. ಕ್ರಿ.ಪೂ. 1700ರಲ್ಲಿ ಏಷ್ಯದ ಕಡೆಯಿಂದ ಬಂದ ಹಿಕ್ಕೋಸರು ನಗರವನ್ನು ಆಕ್ರಮಿಸಿಕೊಂಡರು. ಇವರೇ ಆ ನಗರದಲ್ಲಿ ಅನೇಕ ಬೃಹದಾಕಾರದ ಕೋಟೆಗಳನ್ನು ನಿರ್ಮಿಸಿದರು. ಊರಿನ ಹೊರವಲಯದಲ್ಲಿ ದೊರೆತ ಅನೇಕ ಮುಚ್ಚಿದ ಸಮಾಧಿಗಳು ಈ ಕಾಲದವೇ. ಈ ಸಮಾಧಿಗಳಲ್ಲಿ ನಿತ್ಯೋಪಯೋಗದ ಅನೇಕ ಹೆಣಿಗೆ ವಸ್ತುಗಳೂ ನೇಯ್ದ ಬಟ್ಟೆಗಳೂ ಸಿಕ್ಕಿವೆ. ಒಟ್ಟಿನಲ್ಲಿ ಇಲ್ಲಿ ಮಾನವನ ಪ್ರಥಮವಾಸದಿಂದ ಇಂದಿನವರೆಗಿನ ಎಲ್ಲ ಹಂತಗಳ ಅವಶೇಷಗಳೂ ದೊರೆತು, ಇವು ನಾಗರಿಕತೆಯ ಬೆಳೆವಣಿಗೆಯನ್ನು ಗುರುತಿಸುವಲ್ಲಿ ಸಹಾಯಕವಾಗಿವೆ.


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜೆರಿಕೋ&oldid=1082553" ಇಂದ ಪಡೆಯಲ್ಪಟ್ಟಿದೆ