מדינת ישראל
ಮೆದೀನತ್ ಯಿಸ್ರೇಎಲ್
دولة إسرائيل
ದವ್ಲತ್ ಇಸ್ರೇಇಲ್
State of Israel
ಇಸ್ರೇಲ್ ದೇಶದ ಧ್ವಜ ಇಸ್ರೇಲ್ ದೇಶದ ಚಿಹ್ನೆ
ಧ್ವಜ ಚಿಹ್ನೆ
ರಾಷ್ಟ್ರಗೀತೆ: Hatikvah
The Hope

Location of ಇಸ್ರೇಲ್

ರಾಜಧಾನಿ ಜೆರೂಸಲೆಮ್
/ 22,072) 31°47′N 35°13′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಹೀಬ್ರೂ, ಅರಬಿಕ್
ಸರಕಾರ ಸಂಸದೀಯ ಪ್ರಜಾತಂತ್ರ[೧]
 - ರಾಷ್ಟ್ರಪತಿ ಶಿಮೊನ್ ಪೆರೆಸ್
 - ಪ್ರಧಾನ ಮಂತ್ರಿ ಬೆನ್ಯಮಿನ್ ನೆತನ್ಯಾಹು
 - ಹಂಗಾಮಿ ಪ್ರಧಾನಮಂತ್ರಿ ತ್ಜೀಪಿ ಲಿವ್ನಿ
ಸ್ವಾತಂತ್ರ್ಯ ಯುನೈಟೆಡ್ ಕಿಂಗ್‍ಡಮ್ನಿಂದ 
 - ಘೋಷಣೆ ಮೇ ೧೪, ೧೯೪೮ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 20,770 / 22,072 ಚದರ ಕಿಮಿ ;  (151st)
  8,019 / 8,522 ಚದರ ಮೈಲಿ 
 - ನೀರು (%) ~2%
ಜನಸಂಖ್ಯೆ  
 - ೨೦೦೭ರ ಅಂದಾಜು 8,134,100[೨] (96th)
 - ೧೯೯೫ರ ಜನಗಣತಿ 5,548,523
 - ಸಾಂದ್ರತೆ 324 /ಚದರ ಕಿಮಿ ;  (34th)
839 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು $170.3 billion[೩] (53rd)
 - ತಲಾ $26,800[೪] (37th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೬)
0.927 (23rd) – ಉತ್ತಮ
ಕರೆನ್ಸಿ ಹೊಸ ಇಸ್ರೇಲಿ ಶೆಖೆಲ್ (₪) (NIS)
ಸಮಯ ವಲಯ Israel Standard Time (UTC+2)
 - ಬೇಸಿಗೆ (DST) (UTC+3)
ಅಂತರ್ಜಾಲ TLD .il
ದೂರವಾಣಿ ಕೋಡ್ +972

ಇಸ್ರೇಲ್ (יִשְׂרָאֵל, ಯಿಸ್ರೆಇಲ್), ಅಧಿಕೃತವಾಗಿ ಇಸ್ರೇಲ್ ರಾಜ್ಯ (מְדִינַת יִשְׂרָאֵל, ಮೆದೀನತ್ ಯಿಸ್ರೇಎಲ್; دَوْلَةْ إِسْرَائِيل, ದವ್ಲತ್ ಇಸ್ರೇಇಲ್), ಮೆಡಿಟೆರೇನಿಯ ಸಮುದ್ರಆಗ್ನೇಯಕ್ಕೆ ಇರುವ ಪಶ್ಚಿಮ ಏಷ್ಯಾದ ಒಂದು ದೇಶ. ಉತ್ತರಕ್ಕೆ ಲೆಬನನ್, ಪೂರ್ವಕ್ಕೆ ಸಿರಿಯ ಮತ್ತು ಜಾರ್ಡನ್, ನೈರುತ್ಯಕ್ಕೆ ಸಂಯುಕ್ತ ಅರಬ್ ಗಣರಾಜ್ಯ ಈಜಿಪ್ಟ್ ದೇಶಗಳೊಂದಿಗೆ ಗಡಿಯನ್ನು ಇಸ್ರೇಲ್ ಹೊಂದಿದೆ. ಪ್ಯಾಲೆಸ್ತೈನ್ ರಾಷ್ಟ್ರೀಯ ಪ್ರಾಧಿಕಾರ ಆಡಳಿತ ನಡೆಸುವ ಪಶ್ಚಿಮ ದಂಡೆ ಮತ್ತು ಗಾಜಾ ಪಟ್ಟಿ ಕೂಡ ಪಕ್ಕದಲ್ಲಿ ಇವೆ. ಇದು ಪ್ರಪಂಚದ ಏಕೈಕ ಯಹೂದಿ ರಾಷ್ಟ್ರ. ಇಸ್ರೇಲ್ ಬೈಬಲಿನ ಕಾಲದಲ್ಲಿ ಯೆಹೂದಿ ಜನಸಮುದಾಯದ ಹೆಸರಾಗಿದ್ದು ಮುಂದೆ ಹೀಬ್ರೂ ರಾಜ್ಯಕ್ಕೂ ಇದೇ ಅಂಕಿತವಾಯಿತು. ಈ ಗಣರಾಜ್ಯವು 1948ರ ಮೇ 15ರಂದು ಅಸ್ತಿತ್ವಕ್ಕೆ ಬಂತು. . 1948ರ ವರೆಗೆ ಬ್ರಿಟಿಷ್ ರಕ್ಷಿತ ಪ್ರದೇಶವಾಗಿದ್ದ ಪ್ಯಾಲಿಸ್ಟೈನಿನ ಬಹುಭಾಗವೀಗ ಇಸ್ರೇಲಿನ ಭೂಭಾಗ. ವಿಸ್ತೀರ್ಣ 7,999 ಚ. ಮೈ. 1961ರ ಜನಗಣತಿಯ ಪ್ರಕಾರ ಪ್ರಜಾಸಂಖ್ಯೆ 21,79,491 ; ಇವರಲ್ಲಿ 19,32,357 ಜನ ಯೆಹೂದ್ಯರು ; 1,70,830 ಮಂದಿ ಮುಸ್ಲಿಮರು ; 50,543 ಕ್ರೈಸ್ತರು ; 24,282 ಮಂದಿ ಡ್ರೂಸ್ ಜನರು. ರಾಜಧಾನಿ ಜೆರೂಸಲೆಂ.

ಮೇಲ್ಮೈ ಲಕ್ಷಣಸಂಪಾದಿಸಿ

ಮೆಡಿಟರೇನಿಯನ್ ಕರಾವಳಿಯುದ್ಧಕ್ಕೂ ಮೈದಾನ ಪ್ರದೇಶವಿದೆ. ದಕ್ಷಿಣಕ್ಕೆ ಸಾಗಿದಂತೆ ಇದರ ಅಗಲ ಹೆಚ್ಚು (ಪರಮಾವಧಿ ಅಗಲ 20 ಮೈ.). ಎಸ್ಟ್ರೇಲನ್ ಮತ್ತು ಜೆಜೀಲ್ ಕಣಿವೆಗಳು ಉತ್ತರದಲ್ಲಿ ಆಕ್ರೆ ಮೈದಾನವನ್ನೂ ಜಾರ್ಡನ್ ಬಯಲನ್ನೂ ಕೂಡಿಸುತ್ತದೆ. ಉತ್ತರದ ಗ್ಯಾಲಿಲಿಯನ್ ಬೆಟ್ಟಗಳೇ ಇಸ್ರೇಲಿನಲ್ಲಿ ಅತ್ಯುನ್ನತ, ಶಿಖರಗಳ ಪೈಕಿ ಅತ್ಯಂತ ಎತ್ತರವಾದದ್ದು ಹರ್ ಮೇರಾನ್ (3,963'). ಜಾರ್ಡನ್ ಕಣಿವೆಯ ಉತ್ತರ ಭಾಗ ಸಮುದ್ರಮಟ್ಟಕ್ಕಿಂತ 500' ಎತ್ತರ; ಆದರೆ ಗ್ಯಾಲಿಲೀ ಸಮುದ್ರದ ಬಳಿಯಲ್ಲಿ ಅದು 696' ತಗ್ಗು. ನಿರ್ಜೀವ ಸಮುದ್ರದ ಮಟ್ಟ ಮೆಡಿಟರೇನಿಯನ್ ಸಮುದ್ರಮಟ್ಟಕ್ಕಿಂತ ಕೆಳಕ್ಕೆ 1,302'. ಅಕಾಬ ಖಾರಿಯವರೆಗೂ ರಿಫ್ಟ್ ಕಣಿವೆ ಹಬ್ಬಿದೆ. ಇದರ ನಡುಭಾಗ ಉಬ್ಬು (ಸಮುದ್ರ ಮಟ್ಟದಿಂದ 500'). ನೆಗೆವ್ (ದಕ್ಷಿಣ) ಪ್ರದೇಶ ಒಣನೆಲ. ಈ ಪ್ರದೇಶದ ವಾಯವ್ಯಭಾಗ ಮರಳುಕಲ್ಲುಭೂಮಿ. ಇಸ್ರೇಲ್-ಲೆಬನಾನ್-ಸಿರಿಯ ಗಡಿಗಳ ಉತ್ತರದಲ್ಲಿ ಜಾರ್ಡನ್ ನದಿಯ ಉಗಮ. ಇದು ಹುಲ ಸಾಗರವನ್ನೂ ಗ್ಯಾಲಿಲೀ ಸಮುದ್ರವನ್ನು ಹೊಕ್ಕು ಹರಿದು, ಜಾರ್ಡನ್ ದೇಶ ಪ್ರದೇಶ ಮಾಡಿ, ವೃತ ಸಮುದ್ರದಲ್ಲಿ ಕೊನೆಗೊಳ್ಳುತ್ತದೆ. ಇಷ್ಟಾದರೂ ನಿರ್ಜೀವ ಸಮುದ್ರದ ನೀರು ದಡ ಉಕ್ಕಿ ಹರಿಯದಿರುವುದಕ್ಕೆ ಅಲ್ಲಿನ ಹೆಚ್ಚು ನೀರು ಆವಿಯಾಗುವುದೇ ಕಾರಣ. ಆದ್ದರಿಂದ ಆ ಸಮುದ್ರದ ನೀರಿನ ಲವಣ ಸಾಂದ್ರೀಕರಣ ಸಾಗರದ ಸರಾಸರಿಗಿಂತ ಎಂಟು ಪಟ್ಟು ಹೆಚ್ಚು. ಇಸ್ರೇಲಿನ ಇತರ ನದಿಗಳು ಸಣ್ಣ. ಇವುಗಳ ಪೈಕಿ ಹೆಸರಿಸಬಹುದಾದವು ಎರಡು ಮಾತ್ರ : ಹೈಫದ ಬಳಿಯಲ್ಲೂ ಟೆಲ್ ಅವೀವ್‍ನಲ್ಲೂ ಅನುಕ್ರಮವಾಗಿ ಸಮುದ್ರ ಪ್ರವೇಶ ಮಾಡುವ ಕ್ವಿಸನ್ ಮತ್ತು ಯಾರ್ಕನ್. ಟೆಲ್ ಅವೀವ್ ಮತ್ತು ಚೆರೂಸಲೆಂ ನಗರಗಳಿಗೆ ಯಾರ್ಕನ್ ನದಿಯಿಂದ ನೀರು ಸರಬರಾಜು. ಉತ್ತರ ನೆಗೆವ್ ಪ್ರದೇಶದಲ್ಲಿ ನೀರಾವರಿಗೂ ಯಾರ್ಕನ್ನೇ ಆಸರೆ.

ವಾಯುಗುಣಸಂಪಾದಿಸಿ

ಇಸ್ರೇಲಿನ ಉತ್ತರ ಭಾಗದಲ್ಲಿ ಮೆಡಿಟರೇನಿಯನ್ ವಾಯುಗುಣವಿದೆ. ಈ ಪ್ರದೇಶದ ಉತ್ತರದ ಮೈದಾನದಲ್ಲಿ ಮಳೆ 24", ದಕ್ಷಿಣಕ್ಕೆ ಸಾಗಿದಂತೆ ಕಡಿಮೆಯಾಗುತ್ತದೆ. ಗ್ಯಾಲಿಲಿಯನ್ ಬೆಟ್ಟಗಳಲ್ಲಿ ವರ್ಷಕ್ಕೆ 40". ಚೆರೂಸಲೆಂನಲ್ಲಿ 24". ಕರಾವಳಿಗಿಂತ ಜಾರ್ಡನ್ ಕಣಿವೆ ಹೆಚ್ಚ್ಚು ಬಿಸಿ, ಹೆಚ್ಚು ಶುಷ್ಕ. ನಿರ್ಜೀವಸಮುದ್ರದಲ್ಲಿ ವರ್ಷಕ್ಕೆ 2"-4" ಮಳೆ. ಅಕ್ಟೋಬರಿನಿಂದ ಏಪ್ರಿಲ್ ವರೆಗೆ ಲಘುವರ್ಷಕಾಲ ; ಡಿಸೆಂಬರ್ ಜನವರಿಗಳಲ್ಲಿ ಮಳೆ ಪರಮಾವಧಿ, ಒಣ ಬಿಸಿ ಬೇಸಗೆಯಲ್ಲಿ ನಡುಹಗಲಿನ ಉಷ್ಣತೆ 29o-38o ಸೆ (85o-100o ಫ್ಯಾ.) ವ್ಯಾಪ್ತಿಯಲ್ಲಿರುತ್ತದೆ. ಕರಾವಳಿಯಲ್ಲಿ ವಾಸಿ (15o-18o ಸೆ). ಚಳಿಗಾಲದಲ್ಲಿ ಆಗೊಮ್ಮೆ ಈಗೊಮ್ಮೆ ಇಲ್ಲಿನ ಬೆಟ್ಟಗಳ ಮೇಲೆ ಶೈತ್ಯ ತರಂಗಗಳು ಹಬ್ಬುವುದುಂಟು. ಆದರೆ ಕರಾವಳಿಯಲ್ಲೂ ಜಾರ್ಡನ್ ಕಣಿವೆಯಲ್ಲೂ ಇವು ಸುಳಿಯುವುದಿಲ್ಲ. ಬೇಸಗೆಯಲ್ಲಿ ಅರಬ್ಬೀ ಮರುಭೂಮಿಯಿಂದಲೋ ಸಿನಾಯ್‍ನಿಂದಲೋ ಒಣಗಾಳಿ ಬಿಸಿ ಬಿಸಿ ಹವೆಯನ್ನು ಹಬ್ಬಿಸುತ್ತದೆ.

ಸಸ್ಯ, ಪ್ರಾಣಿವರ್ಗಸಂಪಾದಿಸಿ

ಇಲ್ಲಿನ ಸ್ವಾಭಾವಿಕ ಸಸ್ಯಗಳೆಲ್ಲ ಅದೃಶ್ಯವಾಗಿದೆ. ಕಾರಣ ಬೇಸಾಯ, ಆಡುಗಳ ಕಾಟ, ಗ್ಯಾಲಿಲಿ, ಷರಾನ್‍ಗಳಲ್ಲಿ ತಮ್ಮ ಪೂರ್ವಜರ ಪ್ರತಿ ನಿಧಿಗಳಾಗಿ ಅಲ್ಲಲ್ಲಿ ಓಕ್ ಮರಗಳು ಒಂಟೊಂಟಿಯಾಗಿ ನಿಂತಿವೆ. ಕಾರ್ಮೆಲ್ ಶಿಖರದ ಮೇಲೆ ಅಲೆಪ್ಪೊ ಪೈನ್ ಮರಗಳು ಇನ್ನೂ ಸಾಯದಿವೆ. ಜೆರೂಸಲೆಂನಲ್ಲೂ ನ್ಯಾಜರತ್‍ನಲ್ಲೂ ಹೊಸದಾಗಿ ಇಷ್ಟಿಷ್ಟು ಕಾಡು ಬೆಳೆದಿದೆ. ಕರಾವಳಿಯ ಮರಳು ಗುಡ್ಡೆಗಳಲ್ಲೂ ನೆಗೆವ್‍ನಲ್ಲೂ ಮರುಭೂಮಿಯ ಕುರುಚಲು ಮಾತ್ರ ಬೆಳೆಯುವುದು ಸಾಧ್ಯ.

ಬೆಳೆ, ಖನಿಜಸಂಪಾದಿಸಿ

ಗೋಧಿ, ಬಾರ್ಲಿ, ಹತ್ತಿ, ಹೊಗೆಸೊಪ್ಪು, ಬೀಟ್‍ರೂಟ್, ನೆಲಗಡಲೆ, ಹಣ್ಣು - ಇವು ಮುಖ್ಯ ಬೆಳೆ, ಪೊಟಾಷ್, ಬ್ರೊಮೈನ್, ಕಾಗೆಬಂಗಾರ, ಗಂಧಕ, ಕಾಸ್ಟಿಕ್ ಸೋಡ, ಪೆಟ್ರೋಲ್, ಇವು ಖನಿಜಗಳು. ಹೀಬ್ರೂ ಅಧಿಕೃತ ಭಾಷೆ. ಎರಡು ಸಮಾನಾಂತರ ನೀಲಿಪಟ್ಟೆಗಳ ನಡುವೆ ಬಿಳಿಯ ಮೈಮೇಲೆ ಷಟ್ಕೋನ ನಕ್ಷತ್ರವಿರುವ ಇಸ್ರೇಲೀ ಬಾವುಟಕ್ಕೆ ಪ್ರಖ್ಯಾತ ದಿವ್ಯಜ್ಞಾನಿಯಾದ ಡೇವಿಡ್ ದೊರೆಯ ಧ್ವಜದ ಹೋಲಿಕೆಯಿದೆ. ಟೆಲ್ ಅವೀವ್, ಹೈಫ, ರಾಮತ್‍ಗಾನ್ ಮುಖ್ಯ ನಗರಗಳು, ಹೈಫ, ಜಾಫಗಳು ಮುಖ್ಯ ಬಂದರುಗಳು.

ಆರ್ಥಿಕ ವ್ಯವಸ್ಥೆಸಂಪಾದಿಸಿ

ಇಸ್ರೇಲಿನ ಆರ್ಥಿಕ ಚಟುವಟಿಕೆ ಪ್ರಾರಂಭದಿಂದಲೂ ಎರಡು ಸಮಸ್ಯೆಗಳನ್ನು ಎದುರಿಸುತ್ತ ಬಂದಿದೆ. ಮೊದಲನೆಯದು, ಸತತವಾದ ಯುದ್ಧಭಯ. ಎರಡನೆಯದು, ಹೆಚ್ಚುತ್ತಿರುವ ವಲಸೆಗಾರರು. ಇಂಥ ಕಠಿಣ ಪರಿಸ್ಥಿತಿಯಲ್ಲೂ ಈ ಸಣ್ಣ ರಾಷ್ಟ್ರ ಸಾಧಿಸುತ್ತಿರುವ ಆರ್ಥಿಕ ಪ್ರಗತಿ ಗಮನಾರ್ಹ. 1966-67ರಲ್ಲಿ ಮಾತ್ರ ಇಸ್ರೇಲ್ ಸ್ವಲ್ಪ ಮಟ್ಟಿಗಿನ ಆರ್ಥಿಕ ಕುಸಿತವನ್ನೆದುರಿಸಬೇಕಾಗಿ ಬಂತು. ಈ ವರ್ಷದಲ್ಲಿ ಆರ್ಥಿಕ ಪ್ರಗತಿ ಕುಂಠಿತಗೊಂಡಿತು. 1967ರ ಜೂನ್‍ನಲ್ಲಿ ಪ್ರಾರಂಭವಾದ ಯುದ್ಧದಿಂದಾಗಿ ಇಸ್ರೇಲಿನ ಆರ್ಥಿಕ ಚಟುವಟಿಕೆ ಉತ್ತೇಜನ ಪಡೆದುಕೊಂಡಿತೆಂದು ಹೇಳಬಹುದು. ಇಸ್ರೇಲಿ ಪೌಂಡ್ ಇಲ್ಲಿನ ನಾಣ್ಯ. 1 ಇಸ್ರೇಲಿ ಪೌಂ = 100 ಅಗುರಟ್ (ಏಕವಚನ : ಅಗೊರ), 1, 5, 10, 25 ಅಗುರಟ್, 1/2 ಪೌಂ. ನಾಣ್ಯಗಳೂ 1, 5, 10, 50 ಪೌಂ. ನೋಟುಗಳೂ ಚಲಾವಣೆಯಲ್ಲಿದೆ. ವಿನಿಮಯ ದರ : 8.40 ಇಸ್ರೇಲಿ ಪೌಂ. = 1 ಪೌಂ. ಸ್ಟರ್ಲಿಂಗ್. 3.50 ಇಸ್ರೇಲಿ ಪೌಂ. = 1 ಡಾಲರ್

ಕೃಷಿಸಂಪಾದಿಸಿ

ಇಸ್ರೇಲಿನ ಕೃಷಿ ವಿಧಾನದಲ್ಲಿ ಗಣನೀಯ ಬದಲಾವಣೆಗಳಾಗಿವೆ. ಇಲ್ಲಿನ ಕೃಷಿಯ ಒಂದು ಪ್ರಮುಖ ಅಂಶವೆಂದರೆ, ಆಧುನಿಕ ಕೃಷಿ ವಿಧಾನಗಳಿಗೆ ಹೊಂದಿಕೊಳ್ಳಲು ಸಹಾಯಕವಾಗುತ್ತಿರುವ ಸಹಕಾರಿ ಬೇಸಾಯಕ್ರಮ. ಇಲ್ಲಿ ಅನೇಕ ವಿಧವಾದ ಸಹಕಾರಿ ಬೇಸಾಯ ಪದ್ಧತಿಗಳಿವೆ. ಇವೆಲ್ಲಕ್ಕೂ ಆಧಾರಭೂತವಾಗಿ ಮೊಷಾವ್ ಮತ್ತು ಕಿಬುಟ್ಜ್ ಎಂಬ ಎರಡು ಹಿಡುವಳಿ ವ್ಯವಸ್ಥೆಗಳಿವೆ. ಮೊಷಾವ್ ಎಂಬುದು ಸಣ್ಣ ಹಿಡುವಳಿದಾರರ ಸಹಕಾರಿ ಬೇಸಾಯ ಗ್ರಾಮ. ಇಲ್ಲಿನ ಪ್ರತಿ ಹಿಡುವಳಿಯೂ ಸಮಾನ ಪ್ರಮಾಣದ್ದಾಗಿದ್ದು, ರೈತ ತನ್ನ ಪಾಲಿನ ಭೂಮಿಯ ಮೇಲೆ ಸಾಕಷ್ಟು ಶ್ರಮಪಟ್ಟು ದುಡಿಯುತ್ತಾನೆ. ತನ್ನ ಜಮೀನಿನ ಉತ್ಪಾದನೆಗೆ ರೈತನೇ ಜವಾಬ್ದಾರನಾಗಿದ್ದರೂ ಗ್ರಾಮ ಸಹಕಾರಿ ವ್ಯವಸ್ಥೆ ಈತನಿಗೆ ಆರ್ಥಿಕ ಭದ್ರತೆ ನೀಡುವ ಹೊಣೆ ಹೊರುತ್ತದೆ. ಅದು ಈತನಿಗೆ ಹಣವನ್ನೂ ಉತ್ಪನ್ನಕ್ಕೆ ಮಾರುಕಟ್ಟೆಯನ್ನೂ ಒದಗಿಸುತ್ತದೆ. ಕಿಬುಟ್ಜ್ ಎಂಬುದು ಇನ್ನೊಂದು ಬಗೆಯ ಹಿಡುವಳಿ ವ್ಯವಸ್ಥೆ. ಇದು ಇಸ್ರೇಲಿಗೇ ವಿಶಿಷ್ಟವಾದ ಸಾಮೂಹಿಕ ಹಿಡುವಳಿ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಸಂಪತ್ತನ್ನು ಸಾಮೂಹಿಕವಾಗಿ ರೂಢಿಸಿ, ಶ್ರಮವನ್ನು ಸಾಮೂಹಿಕವಾಗಿ ವಿನಿಯೋಗಿಸಿ, ಆದಾಯ ವ್ಯಯಗಳನ್ನು ಸಾಮೂಹಿಕವಾಗಿ ನಿರ್ವಹಿಸಿ, ಬೇಸಾಯ ನಡೆಸಲಾಗುತ್ತದೆ. ಪ್ರತಿಯೊಬ್ಬ ರೈತನೂ ತನ್ನ ಶಕ್ತ್ಯನುಸಾರ ಕೆಲಸ ಮಾಡಬೇಕು. ಆತನಿಗೆ ಕೂಲಿಯ ರೂಪದಲ್ಲಿ ಹಣ ಕೊಡಲಾಗುವುದಿಲ್ಲ. ಆದರೆ ಕಿಬುಟ್ಜ್ ಆತನಿಗೆ ಅಗತ್ಯವಿರುವ ಇಲ್ಲ ಜೀವನೋಪಯೋಗಿ ವಸ್ತುಗಳನ್ನೂ ಒದಗಿಸುತ್ತದೆ. ಇವೆರಡು ಕ್ರಮಗಳು ಬಹಳ ಮಟ್ಟಿಗೆ ಇಸ್ರೇಲಿನಲ್ಲಿ ಜಾರಿಯಲ್ಲಿವೆ. ಇಸ್ರೇಲಿನ ಬೇಸಾಯ ಯೋಗ್ಯಭೂಮಿ 1948-49ರಲ್ಲಿ 4 ಲಕ್ಷ ಎಕರೆಯಿದ್ದು, ಅದು 1965-66ರಲ್ಲಿ 10 ಲಕ್ಷ ಎಕರೆಗೆ ಏರಿತು. ಇದರಲ್ಲಿ ಸುಮಾರು 4 ಲಕ್ಷ ಎಕರೆಗಳಿಗೆ ನೀರಾವರಿ ಸೌಲಭ್ಯವಿದೆ. ಕೃಷಿಯ ಉತ್ಪನ್ನವನ್ನು ವರ್ಷಂಪ್ರತಿ 8%-10% ರಷ್ಟು ಹೆಚ್ಚಿಸುವ ಆಶಯವನ್ನಿಟ್ಟುಕೊಳ್ಳಲಾಗಿದೆ. ಇಸ್ರೇಲಿನ ಅತಿಮುಖ್ಯ ಬೆಳೆಯೆಂದರೆ ಜಂಬೀರ ಹಣ್ಣು. ಇವನ್ನು ಹೆಚ್ಚಾಗಿ (ಒಟ್ಟು ಉತ್ಪನ್ನದ 45%) ನಿರ್ಯಾತ ಮಾಡಲಾಗುತ್ತಿದೆ. 1966-67ರಲ್ಲಿ 10,82,000 ಟನ್‍ಗಳಷ್ಟು ಜಂಬೀರ ಫಲಗಳನ್ನು ಉತ್ಪಾದಿಸಲಾಗಿತ್ತು. ಬ್ರಿಟನ್, ಪಶ್ಚಿಮ ಜರ್ಮನಿ ಮತ್ತು ಫ್ರಾನ್ಸ್ ಮುಖ್ಯ ಗ್ರಾಹಕ ರಾಷ್ಟ್ರಗಳು.

ಕೈಗಾರಿಕೆಸಂಪಾದಿಸಿ

ತೀವ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಉದ್ಯೋಗಾವಕಾಶ ಒದಗಿಸಿಕೊಡುವ ದೃಷ್ಟಿಯಿಂದ ಇಸ್ರೇಲು ಕೈಗಾರಿಕೆಗಳಿಗೆ-ಮುಖ್ಯವಾಗಿ ಸಣ್ಣ ಕೈಗಾರಿಕೆಗಳಿಗೆ-ಪ್ರಾಧಾನ್ಯ ಕೊಡುತ್ತ ಬಂದಿದೆ. 1960ರ ಕೈಗಾರಿಕೆ ಸಮೀಕ್ಷೆಯನ್ವಯ 83%ರಷ್ಟು ಕೈಗಾರಿಕೆಗಳಲ್ಲಿ 14ಕ್ಕಿಂತಲೂ ಕಡಿಮೆ ಕೆಲಸಗಾರರಿದ್ದರು. 1966ರಲ್ಲಿ ಕೈಗಾರಿಕಾರಂಗದಲ್ಲಿ 2,25,000 ಜನ ಕೆಲಸ ಮಾಡುತ್ತಿದ್ದರು. ವಜ್ರದ ಕತ್ತರಿಸಾಣೆ. ಜವಳಿ, ರಾಸಾಯನಿಕ ವಸ್ತು, ಕಾಗದ, ಟೈರ್, ವಿದ್ಯುತ್ ಸಲಕರಣೆ-ಇವು ಮುಖ್ಯ ಕೈಗಾರಿಕೆಗಳು. ಆಮದು ಮಾಡಿಕೊಂಡ ಪಟ್ಟೆಗಳಿಂದ ಆಕ್ರೆಯಲ್ಲಿ ಉಕ್ಕು ಉತ್ಪಾದಿಸಲಾಗುತ್ತಿದೆ. ದಕ್ಷಿಣ ಆರಾಡ್‍ನಲ್ಲಿ ಕೃತಕ ಗೊಬ್ಬರ ಹಾಗೂ ಗಂಧಕದ ಆಸಿಡ್ ತಯಾರಿಸುವ ಕಾರ್ಖಾನೆ ನಿರ್ಮಿಸುವ ಯತ್ನ ನಡೆದಿದೆ. ಇಸ್ರೇಲಿನ ಕೈಗಾರಿಕಾ ವ್ಯವಸ್ಥೆಯನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ಹೆಚ್ಚಿನ ಕೂಲಿ. ಬಂಡವಾಳದ ಕೊರತೆ ಹಾಗೂ ಆಮದಿನ ಅವಲಂಬನೆ. ವಿದ್ಯುತ್ತಿನ ಬೇಡಿಕೆ ಹೆಚ್ಚುತ್ತಿರುವುದರಿಂದ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಗಮನ ಕೊಡಲಾಗಿದೆ. 1960-64ರ ಅವಧಿಯಲ್ಲಿ ಇದು ದ್ವಿಗುಣಗೊಂಡು 456 ಕೋಟಿ. ಕಿ. ವಾ. ಮುಟ್ಟಿತು. ಇಸ್ರೇಲಿನ 1967ರ ತೈಲೋತ್ಪಾದನೆ 1,35,400 ಟನ್. ಮೃತ ಸಮುದ್ರ ಪ್ರದೇಶದಲ್ಲಿ ಪೊಟಾಷ್, ಮೆಗ್ನೀಸಿಯಂ, ಬ್ರೋಮೈಡ್‍ಗಳ ಮತ್ತು ನೆಗೇವ್‍ನಲ್ಲಿ ತಾಮ್ರ, ಫಾಸ್‍ಫೇಟ್‍ಗಳ ಉತ್ಪಾದನೆಯನ್ನು ವೃದ್ಧಿಗೊಳಿಸಲಾಗುತ್ತಿದೆ. 1961ರಲ್ಲಿ ನೆಗೆವ್‍ನ ಫಾಸ್‍ಫೇಟ್ ಉತ್ಪಾದನೆ 2,25,000 ಟನ್. ಮತ್ತೊಂದು ಮುಖ್ಯ ಕೈಗಾರಿಕೆಯೆಂದರೆ ವಜ್ರದ್ದು. ಈ ಕೈಗಾರಿಕೆಯಲ್ಲಿ 10,000ಕ್ಕೂ ಮಿಕ್ಕು ಕೆಲಸಗಾರರಿದ್ದಾರೆ.

ಹಣಕಾಸುಸಂಪಾದಿಸಿ

ಬ್ಯಾಂಕ್ ಆಫ್ ಇಸ್ರೇಲ್ ಇಲ್ಲಿನ ಕೇಂದ್ರೀಯ ಬ್ಯಾಂಕು, 28 ವಾಣಿಜ್ಯ ಬ್ಯಾಂಕುಗಳೂ 8 ಅಡಮಾನ ಬ್ಯಾಂಕುಗಳೂ 18 ಸಹಕಾರಿ ಪತ್ತಿನ ಸಂಘಗಳೂ ಇವೆ. ಇಸ್ರೇಲಿನದು ಮಿಶ್ರ ಆರ್ಥಿಕ ವ್ಯವಸ್ಥೆ. ಖಾಸಗಿ ಹಾಗೂ ಸರ್ಕಾರಿ ಹಣನಿಯೋಜನೆ ನಡೆಯುತ್ತಿದೆ. ವಿಶ್ವದ ನಾನಾಕಡೆ ಇರುವ ಯೆಹೂದ್ಯರು ಇಸ್ರೇಲಿನಲ್ಲಿ ಹಣ ಹೂಡುತ್ತಾರೆ ; ಇದಕ್ಕೆ ಹಣ ನೀಡುತ್ತಾರೆ. ವಿದೇಶೀ ಬಂಡವಾಳ ನಿಯೋಜನೆಯೂ ಕಡಿಮೆಯಿಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ಪಶ್ಚಿಮ ಮರ್ಜನಿಗಳು ಈ ರಾಷ್ಟ್ರಕ್ಕೆ ಹೆಚ್ಚಾಗಿ ಆರ್ಥಿಕ ನೆರವು ನೀಡಿದೆ. ವಿದೇಶೀ ವ್ಯಾಪಾರ ರಂಗದಲ್ಲಿ ಇಸ್ರೇಲ್ ಸತತವಾಗಿ ಪ್ರತಿಕೂಲ ಪಾವತಿ ಶಿಲ್ಕಿನ ಸಮಸ್ಯೆ ಎದುರಿಸಬೇಕಾಗಿದೆ. ಅಭಿವೃದ್ಧಿಗಾಗಿ ಇದು ಹೆಚ್ಚಾಗಿ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿರುವುದೇ ಕಾರಣ. 1967ರಲ್ಲಿ ನಿರ್ಯಾತದ ಮೌಲ್ಯ 50ಕೋಟಿ ಡಾಲರ್ ; ಆಯಾತ 71 ಕೋಟಿ ಡಾಲರ್. ಉತ್ಪಾದಿತ ವಸ್ತು, ಸಿಮೆಂಟ್, ಉಕ್ಕು, ಕಬ್ಬಿಣ, ಚರ್ಮ ಮುಂತಾದವು ಆಯಾತ. ಜವಳಿ, ಖನಿಜ ವಸ್ತು, ಈಳೆಜಾತಿ ಹಣ್ಣು, ರಾಸಾಯನಿಕ ಪದಾರ್ಥ ಮತ್ತು ವಜ್ರ ಇವು ನಿರ್ಯಾತ.

ಆಡಳಿತ ಹಾಗೂ ಸಾಮಾಜಿಕ ವ್ಯವಸ್ಥೆಸಂಪಾದಿಸಿ

ಇಸ್ರೇಲ್ ಒಂದು ಗಣರಾಜ್ಯ. ಅಲ್ಲಿ ಲಿಖಿತ ಸಂವಿಧಾನವಿಲ್ಲ. ಸರ್ವೋಚ್ಚ ಅಧಿಕಾರ ಕ್ನೆಸೆಟ್ಟಿಗೆ ಸೇರಿದ್ದು. ಅದು ಅನುಪಾತಿ ಪ್ರಾತಿನಿಧ್ಯವನ್ನನುಸರಿಸಿ, ಸಾರ್ವತ್ರಿಕವಾಗಿ, ವಯಸ್ಕರ (18 ವರ್ಷಕ್ಕೆ ಕಡಿಮೆಯಿಲ್ಲದವರು) ಮತದಾನದಿಂದ ಆರಿಸಿ ಬಂದ ಪ್ರತಿನಿಧಿಗಳ ಸಭೆ. ಅದರ ಕಾಲಾವಧಿ ನಾಲ್ಕು ವರ್ಷ. ರಾಷ್ಟ್ರಾಧ್ಯಕ್ಷನ ಚುನಾವಣೆ ಐದು ವರ್ಷಕ್ಕೊಂದು ಸಲ. ಪ್ರಧಾನಿ ಮತ್ತು ಅವನ ಮಂತ್ರಿಮಂಡಲ ಕ್ನೆಸೆಟ್ಟಿಗೆ ಹೊಣೆ. ನ್ಯಾಯಾಂಗದಲ್ಲಿ ಪೌರಸಭಾ ನ್ಯಾಯಾಲಯಗಳೂ ದಂಡಾಧಿಕಾರಿ (ಮ್ಯಾಜಿಸ್ಟ್ರೇಟ್) ನ್ಯಾಯಾಲಯಗಳೂ ಜಿಲ್ಲಾ ನ್ಯಾಯಾಲಯಗಳೂ ತುದಿಯಲ್ಲಿ ಸರ್ವೋಚ್ಚ ನ್ಯಾಯಲಯವೂ ಇದೆ ; ಮತಧರ್ಮ ವಿಷಯಗಳಲ್ಲಿ ಯೆಹೂದ್ಯರಿಗೆ. ಮುಸ್ಲಿಮರಿಗೆ ಮತ್ತು ಕ್ರೈಸ್ತರಿಗೆ ಪ್ರತ್ಯೇಕ ನ್ಯಾಯಾಲಯಗಳಿವೆ. ಮತಕ್ಕೆ ಸಂಬಂಧಿಸಿದ ವಿಷಯಗಳಿಗೆ ಪ್ರತ್ಯೇಕ ಮಂತ್ರಿಯಿದ್ದಾನೆ; ಕ್ರೈಸ್ತರಿಗೆ, ಮುಸ್ಲಿಮರಿಗೆ ಮತ್ತು ಯೆಹೂದ್ಯರಿಗೆ ಪ್ರತ್ಯೇಕ ಇಲಾಖೆಗಳಿವೆ. 5-14 ವರ್ಷಗಳ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣವುಂಟು. ಮತೀಯ ಪಾಠಶಾಲೆಗಳೂ ಇವೆ. 1925ರಲ್ಲಿ ಸ್ಥಾಪಿತವಾದ ಹೀಬ್ರೂ ವಿಶ್ವವಿದ್ಯಾಲಯ, ಉಚ್ಚ ವಿದ್ಯಾಶಿಕ್ಷಣಕ್ಕೆ ಮತ್ತು ಸಂಶೋಧನೆಗೆ ಮೀಸಲಾದ ಸ್ವತಂತ್ರ ಸಂಸ್ಥೆ, ಜೆರೂಸಲೆಂನಲ್ಲಿದೆ. ಸಮಾಜ ಕ್ಷೇಮಕ್ಕೆ ಹೆಚ್ಚು ಗಮನ ಕೊಡಲಾಗಿದೆ. ಸುಸಜ್ಜಿತವಾದ ಅನೇಕ ಆಸ್ಪತ್ರೆಗಳಿವೆ. ಮುದುಕರು, ರೋಗಿಗಳು ಮತ್ತು ಅಂಗವಿಕಲರಿಗಾಗಿ ಮುಲ್ಟಾನ್ ಎಂಬ ಸಂಸ್ಥೆಯಿದೆ. ಅಂತರರಾಷ್ಟ್ರೀಯ ಯೆಹೂದ್ಯ ಸ್ತ್ರೀ ಸಂಘ ಅನೇಕ ಶಿಶು ಸಂರಕ್ಷಣಾಲಯಗಳನ್ನೂ ಶಿಶುವಿಹಾರಗಳನ್ನೂ ಕಿಂಡರ್ ಗಾರ್ಟನ್ ಶಾಲೆಗಳನ್ನೂ ಕಸಬು ಶಿಕ್ಷಣ ಶಾಲೆಗಳನ್ನೂ ದಾದಿಯರ ತರಬೇತಿ ಕೇಂದ್ರಗಳನ್ನೂ ನಡೆಸುತ್ತದೆ. ರಾಷ್ಟ್ರೀಯ ವಿಮಾ ಕಾಯಿದೆಯಲ್ಲಿ ವೃದ್ಧಾಪ್ಯ ವೇತನ, ಉತ್ತರಜೀವಿಗಳ ವಿಮೆ, ಪ್ರಸೂತಿ ವಿಮೆ. ಕುಟುಂಬ ಭತ್ಯೆ ಮುಂತಾದವಕ್ಕೆ ಅವಕಾಶ ಕೊಟ್ಟಿದೆ. ಕೆಲವು ವಿಶಿಷ್ಟ ಸೇವಾವಸತಿಗಳಿವು : 1 ಕಿಬುಟ್ಜ್ ಮತ್ತು ಕ್ವುಟ್ಜ. ಇವು ಸಾಮುದಾಯಿಕ ವಸತಿಗಳು. ಇಲ್ಲಿ ಸ್ವತ್ತು, ಗಳಿಕೆ ಎಲ್ಲವೂ ಎಲ್ಲರಿಗೂ ಸೇರಿದ್ದು ಕಾರ್ಯಗಳ ವ್ಯವಸ್ಥೆಯೂ ಸಾಮೂಹಿಕವಾಗಿಯೇ ನಡೆಯುತ್ತದೆ. 2 ಮೋಷಾವ್ ಆವ್ಡಿಂ. ಇವು ಶ್ರಮಿಕ ಹಿಡುವಳಿದಾರರ ಸಹಕಾರ ವಸತಿಗಳು; ಸದಸ್ಯರೆಲ್ಲರಿಗೂ ಪರಸ್ಪರ ಸಹಾಯ ಮತ್ತು ಅನುಕೂಲಾವಕಾಶಗಳೊದಗಬೇಕೆಂಬ ಉದ್ದೇಶದಿಂದ ನಿರ್ಮಿತವಾದವು. ಕೂಲಿಯ ಕೆಲಸಗಾರರಿಗೆ ಇಲ್ಲಿ ಅವಕಾಶವಿಲ್ಲ. 3 ಮೋಷಾವ್ ಷಿಟೂಫಿ ; ಕಿಬುಟ್ಜ್‍ನಂತೆಯೇ ಇವೂ ಸಾಮುದಾಯಿಕ ವಸತಿಗಳು. ಆದರೆ ಇವುಗಳಲ್ಲಿ ಪ್ರತಿಯೊಂದು ಸಂಸಾರಕ್ಕೂ ಪ್ರತ್ಯೇಕ ವಸತಿಗೃಹವಿದೆ ; ಗೃಹಕೃತ್ಯವನ್ನೆಲ್ಲ ಸಂಸಾರದವರೇ ನಿರ್ವಹಿಸಬೇಕು. 4 ಮೋಷಾವ್ : ಸಣ್ಣ ಹಿಡುವಳಿದಾರರ ವಸತಿಗಳು. ಕೂಲಿ ಕೆಲಸಗಾರರಿಗೆ ಇಲ್ಲಿ ಅವಕಾಶವಿದೆ. 5 ಮೋಷಾವ : ಇಲ್ಲಿ ಭೂಮಿ ಮತ್ತು ಇತರ ಆಸ್ತಿಗಳ ಖಾಸಗಿ ಒಡೆತನವಿದೆ. ಪ್ರತಿಯೊಬ್ಬನೂ ತನ್ನ ಯೋಗಕ್ಷೇಮವನ್ನು ತಾನೇ ಸಾಧಿಸಿಕೊಳ್ಳಬೇಕು. ರಾಜ್ಯದ ರಕ್ಷಣಾ ವ್ಯವಸ್ಥೆ ಬಲು ಸಮರ್ಪಕ. ಪ್ರತಿ ಯುವಕನೂ ಕಡ್ಡಾಯವಾಗಿ ಸೈನಿಕ ಶಿಕ್ಷಣ ಪಡೆಯಬೇಕು. ಯೆಹೂದ್ಯರು ದೇಶಕ್ಕೆ ವಲಸೆ ಬರುವುದನ್ನು ಪ್ರೋತ್ಸಾಹಿಸಿ ನಿಯಂತ್ರಿಸುವ ಮತ್ತು ಅವರ ಹೊಸ ಪೌರತ್ವವನ್ನು ಭದ್ರಪಡಿಸುವ ಕೆಲಸವನ್ನು ಪ್ಯಾಲಿಸ್ಟೈನ್ ಯೆಹೂದ್ಯ ನಿಯೋಗ ನಡೆಸುತ್ತಿದೆ. ಯಿಸ್ಟಾಡ್ರೂಟ್ ಎಂಬ ಯೆಹೂದ್ಯ ಕಾರ್ಮಿಕ ಮಹಾಪರಿಷತ್ತು 1920ರಲ್ಲಿ ಸ್ಥಾಪಿತವಾಯಿತು. 1965ರಲ್ಲಿ ಅದರ ಸದಸ್ಯರ ಸಂಖ್ಯೆ 9,15,000 ; ಅದರಲ್ಲಿ 40,000 ಅರಬ್ಬರೂ ಇದ್ದರು.

ಇತಿಹಾಸಸಂಪಾದಿಸಿ

ಪ್ರಾಕ್ತನ ಚರಿತ್ರೆಸಂಪಾದಿಸಿ

ಈ ದೇಶದ ಪ್ರಾಕ್ತನ ಶಾಸ್ತ್ರದ ಶಾಸ್ತ್ರೀಯವಾದ ಅಭ್ಯಾಸ ಆರಂಭವಾದದ್ದು 19ನೆಯ ಶತಮಾನದ ಮಧ್ಯಭಾಗದಲ್ಲಿ. ಆಗಿನಿಂದ ಈಗಿನ ವರೆಗೂ ಅನೇಕ ಪ್ರಾಕ್ತನ ಸಂಶೋಧನ ಸಂಸ್ಥೆಗಳೂ ಪ್ರಾಕ್ತನ ಶಾಸ್ತ್ರಜ್ಞರೂ ತೋರಿದ ವಿಶೇಷ ಆಸ್ಥೆಯ ಫಲವಾಗಿ ಹಲವಾರು ಉತ್ಖನನಗಳೂ ಸಂಶೋಧನೆಗಳೂ ನಡೆದು ಈಗ ಇಲ್ಲಿನ ಪ್ರಾಚೀನ ಚರಿತ್ರೆಯ ಅನೇಕ ವಿವರಗಳು ತಿಳಿದು ಬಂದಿವೆ.

ಹಳೆಯ ಶಿಲಾಯುಗಕ್ಕೆ ಸೇರಿದ ಅಬೆವಿಲಿಯನ್ ಮತ್ತು ಅಷೂಲಿಯನ್ ಹಂತದ ಕೈಗೊಡಲಿಗಳು ಇಲ್ಲಿ ದೊರಕಿರುವ ಅವಶೇಷಗಳಲ್ಲಿ ಅತ್ಯಂತ ಪ್ರಾಚೀನ. ಇವು ಸುಮಾರು 2,50,000 ವರ್ಷಗಳಿಂದಲೂ ಮೊದಲಿನವೆಂಬುದು ಅಭಿಪ್ರಾಯ. ಚಕ್ಕೆ ಕಲ್ಲಿನಾಯುಧಗಳ ತಯೇಷಿಯನ್ ಮತ್ತು ಮುಸ್ಟೀರಿಯನ್ ಸಂಸ್ಕøತಿಗಳ ಅವಶೇಷಗಳನ್ನು ಮೌಂಟ್ ಕಾರ್ಮೆಲ್ ಪರ್ವತದ ಗುಹೆಗಳಲ್ಲಿ ಡರೊಥಿ ಗ್ಯಾರಡ್ ಎಂಬ ವಿದೂಷಿ ಕಂಡುಹಿಡಿದಳು. ಪಶ್ಚಾದುಷೋ ಮಾದರಿಯ (ನಿಯಾಂಡರ್ಥ ಲಾಯಿಡ್) ಮತ್ತು ಆಧುನಿಕ ಮಾನವ ವರ್ಗದ ಮಿಶ್ರಸಂತತಿಯ ಜನ ಈ ಸಂಸ್ಕøತಿಯ ಕರ್ತೃಗಳಾಗಿದ್ದರೆಂಬುದು ಅವರ ಆಸ್ತಿಗಳ ಅವಶೇಷಗಳಿಂದ ಗೊತ್ತಾಗಿದೆ. ಹಳೆಯ ಶಿಲಾಯುಗದ ಅಂತ್ಯ ಶಿಲಾಯುಗಕ್ಕೆ ಸುಮಾರು 50,000 ವರ್ಷಗಳ ಆರಿಗ್ನೇಷಿಯನ್ ಸಂಸ್ಕøತಿಯ ಅವಶೇಷಗಳೂ ಅನಂತರ ಸುಮಾರು 20,000 ವರ್ಷಗಳ ಆಟ್ಲಿಟಿಯನ್ ಸಂಸ್ಕøತಿಯ ಅವಶೇಷಗಳೂ ಇಲ್ಲಿ ದೊರಕಿವೆ.

ಮಧ್ಯ ಶಿಲಾಯುಗದ ಅವಶೇಷಗಳು ಮೊದಲು ವಾಡಿಎಲ್ ನಟೂಫ್ ಎಂಬಲ್ಲಿ ದೊರಕಿದುದರಿಂದ ಆ ಸಂಸ್ಕøತಿಗೆ ನಟೂಫಿಯನ್ ಎಂದು ಹೆಸರಾಯಿತು. ಇಸ್ರೇಲಿನ ಅನೇಕ ಪ್ರದೇಶಗಳಲ್ಲಿ ದೊರಕಿರುವ, ಸುಮಾರು ಕ್ರಿ. ಪೂ. 10,000-6,000 ಅವಧಿಗೆ ಸೇರಿರುವ ಈ ಸಂಸ್ಕøತಿಯ ಜನ ಆಹಾರ ಸಂಗ್ರಹಣ ದೆಸೆಯಿಂದ ಮುನ್ನಡೆದು ಆಹಾರೋತ್ಪಾದನೆಯನ್ನು ಮೊತ್ತಮೊದಲಿಗೆ ಪ್ರಾರಂಭಿಸಿದರು. ವ್ಯವಸಾಯ ಮಾಡಿ ಬೆಳೆಸಿದ ಪೈರುಗಳನ್ನು ಚಕಮಕಿಕಲ್ಲಿನ ಹಲ್ಲುಗಳಿದ್ದ ಕುಡುಗೋಲುಗಳಿಂದ ಕುಯ್ಯುತ್ತಿದ್ದುದೂ ದುಷ್ಟಪ್ರಾಣಿಗಳನ್ನು ಪಳಗಿಸಿ ಸಾಕುತ್ತಿದ್ದುದೂ ಈ ಜನರ ವಿಶಿಷ್ಟ ಸಾಧನೆಗಳು.

ನೂತನ ಶಿಲಾಯುಗದ ಅತ್ಯಂತ ಪ್ರಾಚೀನವಾದ ಮತ್ತು ವಿಶದವಾಗಿ ಸಂಶೋಧಿಸಲ್ಪಟ್ಟಿರುವ ನೆಲೆಗಳಲ್ಲಿ ಮುಖ್ಯವಾದ ಜೆರಿಕೊ ಈ ದೇಶದಲ್ಲಿವೆ. ಮೊತ್ತ ಮೊದಲಿಗೆ ಅಂಚುಗಳನ್ನು ನಯವಾಗಿಸಿದ ಕಲ್ಲಿನ ಆಯುಧಗಳನ್ನು ಉಪಯೋಗಿಸುತ್ತಿದ್ದ ಈ ಜನ ಕ್ರಿ. ಪೂ 6-5ನೆಯ ಸಹಸ್ರಮಾನಗಳಲ್ಲಿ ಬೃಹತ್ತಾದ ವರ್ತುಳಾಕಾರದ ಶಿಲಾ ಸಮಾಧಿಗಳಲ್ಲಿ ಸತ್ತವರನ್ನು ಹಿಡಿಯುತ್ತಿದ್ದರು. ಕ್ರಿ.ಪೂ. 5000ದ ಸುಮಾರಿನಲ್ಲಿ ಮಡಕೆಗಳ ಉಪಯೋಗವೂ ಕಲ್ಲಿನ ಗೋಡೆ ಕಂದಕಗಳಿಂದ ರಕ್ಷಿತವಾದ ಗ್ರಾಮೀಣ ಜೀವನವೂ ರೂಢಿಗೆ ಬಂದುವು. ಆಹಾರೋತ್ಪಾದನೆ, ಕೈಗಾರಿಕೆ, ವಾಣಿಜ್ಯ ಇವರ ಮುಖ್ಯ ಸಾಧನೆಗಳು.

ತಾಮ್ರ ಶಿಲಾಯುಗದ ಸಂಸ್ಕøತಿಯ ಅವಶೇಷಗಳು ಫಸ್ಸೂಲ್ ಎಂಬಲ್ಲಿ ಮೊದಲಿಗೆ ದೊರಕಿದರು ಅನಂತÀರ ಇತರ ಅನೇಕ ನೆಲೆಗಳಲ್ಲೂ ದೊರಕಿವೆ. ವಿವಿಧ ಹಂತಗಳಲ್ಲಿ ಬೆಳೆದು ಬಂದ ಈ ಸಂಸ್ಕøತಿ ಈಜಿಪ್ಟಿನಲ್ಲೂ ಕಂಡುಬಂದಿದೆ. ಇದು ಕ್ರಿ. ಪೂ. 3100ರ ಹೊತ್ತಿಗೆ ಕೊನೆಗೊಂಡಿತೆಂದು ಹೇಳಬಹುದು. ತಾಮ್ರದ ಉಪಯೋಗ ರೂಢಿಗೆ ಬಂದದ್ದರ ಗುರುತಾಗಿ ಈ ಲೋಹದ ಎರಡು ಕೊಡಲಿಗಳೂ ಮತ್ತೆ ಕೆಲವು ಅವಶೇಷಗಳೂ ದೊರಕಿವೆ. ಮಡಕೆಗಳ ಮೇಲೆ ವರ್ಣಚಿತ್ರ ಬಿಡಿಸುವ ರೂಢಿ ಈ ಕಾಲದಲ್ಲೇ ಆರಂಭವಾಯಿತು.

ಇಸ್ರೇಲಿನ ಕಂಚಿನ ಯುಗ ಕ್ರಿ. ಪೂ. 3000-1200ರಲ್ಲಿ ರೂಢಿಯಲ್ಲಿತ್ತು. ಆ ಕಾಲವನ್ನು ಕಂಚಿನಯುಗ ಆದಿ, ಮಧ್ಯ ಮತ್ತು ಅಂತ್ಯಕಾಲಗಳೆಂದು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ. ಫಸ್ಸೂಲ್ ಮೈದಾನಪ್ರದೇಶದಲ್ಲಿರುವ ನೆಲೆ. ಪ್ಯಾಲಿಸ್ಟೈನಿನ ಈ ಕಾಲದ ಬಹು ಸಂಖ್ಯಾತ ನೆಲೆಗಳು ಬೆಟ್ಟಗಳ ಶಿಖರಗಳ ಮೇಲೂ ತಪ್ಪಲುಗಳಲ್ಲೂ ಇವೆ. ಮೆಗಡ್ಡೋ ಖಿರ್ಬೆಟ್-ಕೆರಕ್, ಲಚಿಪ್ ಮುಂತಾದ ಈ ಕಾಲದ ನೆಲೆಗಳಲ್ಲಿ ಚಕಮಕಿ ಕಲ್ಲಿನಾಯುಧಗಳ ಬಳಕೆಯೂ ಇತ್ತು. ಕೆಂಪು ಮತ್ತು ಕಪ್ಪು ಬಣ್ಣದ ಹೊಸ ಬಗೆಯ ಮಡಕೆಗಳು ಕ್ರಿ. ಪೂ. 2500 ಸುಮಾರಿಗೆ ಬಳಕೆಗೆ ಬಂದುವು. ಅದರ ನೆಲೆಗಳ ರಕ್ಷಣೆಗೆ ಕೋಟೆ ಕೊತ್ತಲುಗಳು ನಿರ್ಮಿತವಾದುವು.

ಈ ಕಾಲದಲ್ಲಿ ನೆರೆಹೊರೆಯ ರಾಜ್ಯಗಳೊಂದಿಗೆ, ಮುಖ್ಯವಾಗಿ ಈಜಿಪ್ಟ್ ಸಿರಿಯ ಮೆಸೊಪೊಟೇಮಿಯಗಳೊಂದಿಗೆ, ಬಿರುಸಿನ ವ್ಯಾಪಾರ ಸಾಗಿತ್ತು. ಬ್ಯಾಬಿಲೋನಿಯನ್ನರ ಕೀಲಾಕಾರ (ಕ್ಯುನಿಫಾರಂ ಲಿಪಿ) ಬರಹ ರೂಢಿಗೆ ಬಂತು. ಮೆಗಿಡ್ಡೊ ನೆಲೆಯಲ್ಲಿ ದೊರಕಿರುವ ಚಿನ್ನದ ಮತ್ತು ದಂತದ ವಸ್ತುಗಳು ಈ ಯುಗದ ಅಂತ್ಯದಲ್ಲಿ ನೆಲೆಸಿದ್ದ ಉನ್ನತ ಮಟ್ಟದ ಸಂಸ್ಕøತಿಯ ಪ್ರತೀಕಗಳು. ದಂತದ ವಸ್ತುಗಳ ಮೇಲೆ ಸಿಂಹವೇ ಮುಂತಾದ ಪ್ರಾಣಿಗಳ ಚಿತ್ರಗಳನ್ನು ಕೊರೆದಿದೆ. ಉತ್ಸವ ದೃಶ್ಯಗಳೂ ಹಲವು ಕಂಡುಬಂದಿವೆ. ಗೆಜೆರ್, ಜೆರೂಸಲೆಂ, ಲಚಿಷ್ ಮುಂತಾದೆಡೆಗಳಲ್ಲಿದ್ದಂತೆ ಮೆಗಿಡ್ಡೊದಲ್ಲಿ ಸಹ ಈ ಕಾಲದ ಒಂದು ಬೃಹತ್ತಾದ ನೀರಿನ ಕಾಲುವೆಯನ್ನು ಮನೆಗಳ ತಳಭಾಗದಲ್ಲಿ ನಿರ್ಮಿಸಿ ಬೆಟ್ಟದಿಂದ ಕುಡಿಯುವ ನೀರನ್ನು ಪೂರೈಸುತ್ತಿದ್ದರು. ಇದು ಕಂದಕದಂತೆ ನಗರವನ್ನು ಬಳಸಿದ್ದರಿಂದ ರಕ್ಷಣೆಯೂ ಒದಗಿತ್ತು. ಈಜಿಪ್ಟಿನಲ್ಲಿರುವ ಅಮರ್ನ ಪತ್ರಗಳಿಂದ ತಿಳಿದುಬರುವಂತೆ ಅನೇಕ ಸಣ್ಣಪುಟ್ಟ ರಾಜರು ಅಧಿಕಾರದಲ್ಲಿದ್ದುಕೊಂಡು ತಮ್ಮತಮ್ಮಲ್ಲೇ ಕಚ್ಚಾಡುತ್ತಿದ್ದುದಲ್ಲದೆ ಈಜಿಪ್ಟ್ ಮೆಸೊಪೊಟೇಮಿಯ ಮತ್ತು ಅಸ್ಸೀರಿಯದ ರಾಜರುಗಳ ಪ್ರಭಾವಕ್ಕೊಳಪಟ್ಟಿದ್ದರು. ಕ್ರಿ. ಪೂ. 1200ರ ಸುಮಾರಿಗೆ ಈ ಪ್ರದೇಶದಲ್ಲಿ ಕಬ್ಬಿಣದ ಬಳಕೆ ಹಬ್ಬಿತು. ಸ್ವಲ್ಪ ಕಾಲಾನಂತರ ಇಸ್ರೇಲಿನ ಹೆಸರಿಗೆ ಕಾರಣರಾದ ಇಸ್ರೇಲಿಗಳು ಅಥವಾ ಹೀಬ್ರೂಗಳು ಈ ದೇಶಕ್ಕೆ ಪ್ರವೇಶಿಸಿದರು. ಇವರ ಕಾಲದಲ್ಲಿ ಜನಜೀವನರೀತಿ ಹೆಚ್ಚೇನೂ ಬದಲಾಗದಿದ್ದರೂ ಮುಖ್ಯವಾಗಿ ಹಿಟೈಟ್ ಸಾಮ್ರಾಜ್ಯದ ಪತನಾನಂತರ ಕಬ್ಬಿಣ ಲೋಹಗಾರಿಕೆ ಎಲ್ಲೆಡೆಯಲ್ಲೂ ಪ್ರಸರಿಸಲಾರಂಭಿಸಿತು. ಟೆಲ್-ಎಲ್-ಫುಲ್ ಎಂಬಲ್ಲಿನ ಭೂಉತ್ಖನನದಿಂದ ಗೊತ್ತಾಗಿರುವಂತೆ ಈ ಕಾಲದವರು ಸರಳ ಗ್ರಾಮೀಣ ಸಂಸ್ಕøತಿ. ಇವರು ಹೊಸರೀತಿಯ ಮತ್ತು ಆಕಾರದ ಮಡಕೆ ಕುಡಿಕೆಗಳನ್ನೂ ನೂಲುವ ತಕಲಿಗಳನ್ನೂ ಉಪಯೋಗಿಸುತ್ತಿದ್ದರು. ಈ ಕಾಲದಲ್ಲಿ ರಾಜಕೀಯ ಸಾಮಾಜಿಕ ಹಾಗೂ ಬೌದ್ಧಿಕ ಚಟುವಟಿಕೆಗಳು ನೆರೆಹೊರೆಯ ಜನಾಂಗಗಳಿಂದ ಪ್ರಭಾವಿತವಾಗಿ ಮುಂದುವರಿದವು. ಈ ಕಾಲದ ಬಹು ಮುಖ್ಯ ಸಾಧನೆಗಳೆಂದರೆ ನೆರೆಯ ಫಿಲಿಸ್ಟೈನರ ಪ್ರಭಾವದಿಂದ ಬಂದ ಅಕ್ಷರಪದ್ಧತಿಯ ಬರವಣಿಗೆಗೆ, ಮಸಿ ಮತ್ತು ಲೇಖನಿಯ ಉಪಯೋಗ. ಕ್ರಿ. ಪೂ. 8ನೆಯ ಶತಮಾನದ ಅಂತ್ಯದಲ್ಲಿ ಅಸ್ಸೀರಿಯನ್ನರಿಂದಲೂ 6ನೆಯ ಶತಮಾನದಲ್ಲಿ ಬ್ಯಾಬಿಲೋನಿಯನ್ನರಿಂದಲೂ ಪರ್ಷಿಯನ್ನರಿಂದಲೂ 4ನೆಯ ಶತಮಾನದಲ್ಲಿ ಗ್ರೀಕರಿಂದಲೂ ಇಸ್ರೇಲು ಪರಾಜಯಹೊಂದಿತು.

ಈಚಿನ ಚರಿತ್ರೆಸಂಪಾದಿಸಿ

ಈಗ ಇಸ್ರೇಲ್ ಇರುವ ಪ್ರದೇಶಕ್ಕೆ ಪ್ರಾಚೀನ ಕಾಲದಲ್ಲಿ ಕೇನನ್ ಎಂಬ ಹೆಸರಿತ್ತು; ಅನಂತರ ಇದು ಪ್ಯಾಲಿಸ್ಟೈನ್ ಆಯಿತು. ಯೆಹೂದ್ಯರು ಈಜಿಪ್ಟನ್ನು ಬಿಟ್ಟು, ಸಿನಾಯ್ ಮರಳುಗಾಡುಗಳಲ್ಲಿ ಅಲೆದು, ಪ್ಯಾಲಿಸ್ಟೈನಿಗೆ ಬಂದು, ಅಲ್ಲಿ ಮೊದಲ ಬಾರಿಗೆ ಸ್ವತಂತ್ರ ಜನಾಂಗವಾಗಿ ಬಾಳಿದರು; ವಿಶ್ವದಲ್ಲೆ ಹೆಸರಾದ ಸಂಸ್ಕøತಿ ಬೆಳೆಸಿದರು. ಯೆಹೂದ್ಯ ಪ್ರವಾದಿಗಳು, ಪುರೋಹಿತರು, ಕವಿಗಳು, ದಾರ್ಶನಿಕರು ಬದುಕಿ ಗ್ರಂಥರಚನೆ ಮಾಡಿದ್ದು ಇಲ್ಲಿ.

ಪ್ರಾಚೀನ ಇಸ್ರೇಲಿನಲ್ಲಿ ಮೊದಲು ರಾಜ್ಯ ಸ್ಥಾಪಿಸಿದವನು ಸಾಲ್. ಅವನ ತರುವಾಯ ರಾಜ್ಯವಾಳಿದ ಡೇವಿಡ್ ಈ ರಾಷ್ಟ್ರವನ್ನು ಬಲಪಡಿಸಿದ; ಜೆರೂಸಲೆಂ ನಗರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡ. ಮುಂದೆ ರಾಜ್ಯವಾಳಿದ ಸಾಲಮನ್ ತಾಮ್ರದ ಸ್ತಂಭಗಳಿದ್ದ ದೇವಸ್ಥಾನವನ್ನು ರಾಜಧಾನಿಯಲ್ಲಿ ಕಟ್ಟಿಸಿದ. ಆದರೆ ಮೇಲಿಂದ ಮೇಲೆ ನುಗ್ಗಿ ಬರುತ್ತಿದ್ದ ದಾಳಿಕಾರರು ಅನೇಕ ಸಲ ಈ ದೇಶವನ್ನು ಗೆದ್ದು ಆಳಿದರು. ಇಸ್ರೇಲ್ ಪಶ್ಚಿಮದ ಫಲವತ್ತಾದ ನೈಲ್ ನದೀ ಬಯಲಿನಲ್ಲೂ ಪೂರ್ವದಲ್ಲಿನ ಅಷ್ಟೇ ಫಲವತ್ತಾದ ಯೂಫ್ರೆಟೀಸ್ ನದೀ ಪ್ರದೇಶದಲ್ಲೂ ಇದ್ದ ಬಲಿಷ್ಠ ರಾಜ್ಯಗಳ ನಡುವಣ ಕಾಲ್ಚೆಂಡಾಯಿತು. ಅಸ್ಸೀರಿಯನ್ನರು, ಬ್ಯಾಬಿಲೋನಿಯನ್ನರು ಪರ್ಷಿಯನ್ನರು, ಗ್ರೀಕರು, ರೋಮನರು-ಹೀಗೆ ಒಬ್ಬರಾದ ಮೇಲೊಬ್ಬರು ಇಸ್ರೇಲನ್ನು ಗೆದ್ದು ಆಕ್ರಮಿಸಿದರು. ಮುಂದೆ ಇದು ಆಟೋಮನ್ ಸಾಮ್ರಾಜ್ಯದ ಭಾಗವಾಗಿದ್ದು, ಕೊನೆಗೆ ತುರ್ಕಿ ರಾಜ್ಯಕ್ಕೆ ಸೇರಿಹೋಯಿತು. ಈ ಆಕ್ರಮಣಗಳ ನಡುವೆ ಇಸ್ರೇಲ್ ಕೊಂಚ ಕಾಲ ಮಾತ್ರ ಸ್ವಾತಂತ್ರ್ಯ ಪಡೆದಿತ್ತು; ಉಳಿದ ಕಾಲಗಳಲ್ಲಿ, ಶತ್ರುಗಳು ದೇಶವನ್ನು ನಾಶಗೊಳಿಸುತ್ತಿದ್ದಾಗಲೂ ಯೆಹೂದ್ಯರ ತಾಯ್ನಾಡಿನ ಮಮತೆ ಕುಗ್ಗಲಿಲ್ಲ; ಗೋಳುಗೋಡೆಯ (ವೇಲಿಂಗ್ ವಾಲ್) ಎದುರು ನಿಂತು ಪರದಾಸ್ಯಕ್ಕಾಗಿ ಪ್ರಲಾಪಿಸಿ, ವಿಮೋಚನೆಗಾಗಿ ದೇವರಿಗೆ ಮೊರೆಯಿಡುತ್ತಿದ್ದರು.

ಈ ಚಾರಿತ್ರಿಕ ಪರಿಸ್ಥಿತಿಗಳಿಂದಾಗಿ ಯೆಹೂದ್ಯರು ತಮ್ಮ ತಾಯ್ನಾಡನ್ನು ತೊರೆದು, ತಮ್ಮದೆಂದು ಹೇಳಿಕೊಳ್ಳುವ ದೇಶವಿಲ್ಲದೆ, ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲೂ ಹರಡಿ ಹೋಗಬೇಕಾಯಿತು. ಶತಮಾನಗಳ ಕಾಲ ಅವರ ಈ ಸ್ಥಿತಿ ಮುಂದುವರೆಯಿತು. ಹತ್ತೊಂಬತ್ತನೆಯ ಶತಮಾನದ ಕೊನೆಯ ವರ್ಷಗಳಲ್ಲಿ ಯೆಹೂದ್ಯರು ತಮ್ಮದೇ ಆದ ಸ್ವಾಸ್ಥ್ಯವೊಂದರ ರಚನೆಗಾಗಿ ಚಳವಳಿ ಹೂಡಿದರು. ಆ ಚಳವಳಿಯ ಪ್ರವರ್ತಕ ಟೆಯೋಡೋರ್ ಹೆಟ್ರ್ಸಲ್. ಕ್ರೌರ್ಯಕ್ಕೆ ಗುರಿಯಾಗಿ ಹರಡಿ ಹಂಚಿಹೋಗಿದ್ದ ಯೆಹೂದ್ಯರಿಗೆ ಪ್ಯಾಲಿಸ್ಟೈನಿನಲ್ಲಿ ಒಂದು ನೆಲೆಯ ನಿರ್ಮಾಣವೇ ಈ ಚಳವಳಿಯ ಗುರಿ. ಸ್ವಪ್ರೇರಣೆಯಿಂದ ಹಿತೈಷಿಗಳು ಕೊಟ್ಟ ಹಣ, ರಾತ್‍ಚೈಲ್ಡ್ ನೀಡಿದ ಉದಾರ ಧನಸಹಾಯ ಇವುಗಳಿಂದ ಯೆಹೂದ್ಯ ರಾಷ್ಟ್ರೀಯ ಸಹಾಯನಿಧಿಯೊಂದು ನಿರ್ಮಿತವಾಯಿತು. ಇದರಿಂದ ಪ್ಯಾಲಿಸ್ಟೈನಿನಲ್ಲಿ ನೆಲೆಸಬಯಲಿಚ್ಛಿಸಿದವರಿಗೋಸ್ಕರ ಭೂಮಿಯನ್ನು ಕೊಳ್ಳಲನುಕೂಲವಾಯಿತು. ಈ ಅನುಕೂಲವನ್ನೊದಗಿಸುವುದಕ್ಕಾಗಿ 1908ರಲ್ಲಿ ಜಾಫದಲ್ಲಿ ಒಂದು ಯೆಹೂದ್ಯ ಸ್ವಾಸ್ಥ್ಯವಾದಿ ನಿಯೋಗ ರಚಿಸಲಾಯಿತು.

ಎರಡು ಮಹಾಯುದ್ಧಗಳ ಪರಿಣಾಮಸಂಪಾದಿಸಿ

1914ರಲ್ಲಿ ಪ್ರಾರಂಭವಾದ ಮೊದಲನೆಯ ಮಹಾಯುದ್ಧದ ಕಾಲದಲ್ಲಿ ಅನುಕೂಲ ಸಂದರ್ಭ ಒದಗಿತು. ಜರ್ಮನರ ಪಕ್ಷ ವಹಿಸಿದ್ದ ತುರ್ಕರು ಪ್ಯಾಲಿಸ್ಟೈನ್ ಆಕ್ರಮಿಸಿದರು. ಯೆಹೂದ್ಯರ ನೈತಿಕ ಬೆಂಬಲ ಗಳಿಸುವುದಕ್ಕಾಗಿ ಬ್ರಿಟಿಷ್ ಸರ್ಕಾರ ಯೆಹೂದ್ಯ ಸ್ವಾಸ್ಥ್ಯನೀತಿಗೆ ಮನ್ನಣೆ ಕೊಡುವುದಾಗಿ ತಿಳಿಯಪಡಿಸಿತು. ಈ ವಿಷಯವಾಗಿ ಮಿತ್ರರಾಷ್ಟ್ರಗಳೊಡನೆ ವಿಚಾರ ವಿನಿಮಯ ನಡೆಸಿದ ಮೇಲೆ 1917ರಲ್ಲಿ ಬ್ಯಾಲ್ಪುರ್ ಘೋಷಣೆ ಹೊರಬಂತು; ಅದರಲ್ಲಿ ಗ್ರೇಟ್ ಬ್ರಿಟನ್ ಮತ್ತು ಇತರ ಕೆಲವು ಮಿತ್ರರಾಷ್ಟ್ರಗಳು ಯೆಹೂದ್ಯರಿಗಾಗಿ ಪ್ಯಾಲಿಸ್ಟೈನಿನಲ್ಲಿ ಒಂದು ನೆಲೆಸುನಾಡನ್ನು ರಚಿಸುವ ಯೋಜನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದುವು. ಅರಬ್ ರಾಷ್ಟ್ರೀಯ ಮುಖಂಡರೂ ಇದನ್ನು ಸ್ವಾಗತಿಸಿದರು. 1919ರ ಜನವರಿ 3ರಂದು, ಪ್ಯಾರಿಸ್ ಶಾಂತಿ ಸಮ್ಮೇಳನದಲ್ಲಿ ಅರಬ್ ರಾಷ್ಟ್ರಗಳ ಪ್ರಧಾನ ನಿಯೋಗಿಯೂ ಇದನ್ನು ಒಪ್ಪಿದ. ಪ್ಯಾಲಿಸ್ಟೈನು ಬ್ರಿಟನ್ನಿನ ರಕ್ಷಿತ ಪ್ರದೇಶವಾಗಿರಬೇಕೆಂದು ಈ ಘೋಷಣೆಯಲ್ಲಿ ಸೂಚಿಸಲಾಗಿತ್ತು. ಇಲ್ಲಿ ಯೆಹೂದ್ಯರಿಗಾಗಿ ಒಂದು ಹೊಸ ರಾಜ್ಯ ನಿರ್ಮಿಸುವ ಜವಾಬ್ದಾರಿಯನ್ನು ಇಂಗ್ಲೆಂಡಿಗೆ ವಹಿಸಿಕೊಡಲಾಯಿತು. ರಾಷ್ಟ್ರಸಂಘದ (ಲೀಗ್ ಆಫ್ ನೇಷನ್ಸ್) ನಿರ್ಣಯದಂತೆ ಇದನ್ನು ಬ್ರಿಟನ್ನಿಗೆ ವಹಿಸಿಕೊಟ್ಟದ್ದು 1922ರಲ್ಲಿ.

ಅರಬ್ಬರ ಮತ್ತು ಯೆಹ್ಯೂದರ ಹಕ್ಕುಬಾಧ್ಯತೆಗಳನ್ನು ಪರಿಗಣಿಸಿ ಅವುಗಳಿಗೆ ಅನುಸಾರವಾದ ರೀತಿಯಲ್ಲಿ ಇಬ್ಬರಿಗೂ ಸ್ವಾತಂತ್ರ್ಯ ಕೊಡುವ ವಿಷಯದಲ್ಲಿ ಅನುಸರಿಸಬೇಕಾದ ಮಾರ್ಗವನ್ನು ಬ್ರಿಟಿಷ್ ಸರ್ಕಾರ ಹುಡುಕುತ್ತಿತ್ತು. ಅರಬ್ ಪ್ಯಾಲಿಸ್ಟೈನ್, ಯೆಹೂದ್ಯ ಪ್ಯಾಲಿಸ್ಟೈನ್ ಎಂಬುದಾಗಿ ಆ ಸಣ್ಣ ರಾಜ್ಯವನ್ನು ಇಬ್ಭಾಗ ಮಾಡುವ ಯೋಚನೆಯೂ ಇತ್ತು. ಆದರೆ ಇದಕ್ಕೆ ತೊಡಕುಗಳಿದ್ದುವು. ಅರಬ್ಬರ ಹಾಗೂ ಯೆಹೂದ್ಯರ ಎರಡು ಪ್ರಬಲ ಗುಂಪುಗಳು ಮೊದಲೇ ಯೋಚಿಸಿದಂತೆ ಸ್ಪಷ್ಟವಾಗಿ ಬೇರ್ಪಟ್ಟಿರಲಿಲ್ಲ. ಯೆಹೂದ್ಯರಿಗೆ ಅತ್ಯಂತ ಪವಿತ್ರಕ್ಷೇತ್ರವಾದ ಜೆರೂಸಲೆಂನಲ್ಲೇ ಬಹುಸಂಖ್ಯಾತ ಅರಬ್ಬರಿದ್ದರು. ಇದು ತಮ್ಮ ರಾಜ್ಯದಲ್ಲಿ ಸೇರಲೇಬೇಕೆಂದು ಯೆಹೂದ್ಯರ ಆಗ್ರಹ. ಅರಬ್ಬರು ಮಂಡಿಸಿದ ವಾದವೂ ನ್ಯಾಯವಾಗಿತ್ತು. ಪ್ರತ್ಯೇಕ ಇಸ್ರೇಲ್ ರಾಜ್ಯ ರಚನೆಗೆ ಅವರು ಅನೇಕ ಆಕ್ಷೇಪಣೆಗಳನ್ನೆತ್ತಿದರು. ಹೊಸ ರಾಜ್ಯ ರಚನೆಯ ಹಂಚಿಕೆಯಾದದ್ದು ರಾಜಕೀಯ ಒತ್ತಾಯದಿಂದ. ಅದು ಅರಬ್ ರಾಜ್ಯಗಳ ಕ್ಷೇಮ ಮುನ್ನಡೆಗಳನ್ನು ತಡೆಗಟ್ಟುವ ಕುಟಿಲ ಪ್ರಯತ್ನ. ಪ್ಯಾಲೆಸ್ಟೈನಿನ ಜನಸಂಖ್ಯೆಯಲ್ಲಿ ಶೇ. 90ರಷ್ಟು (ಹೊರದೇಶಗಳಿಂದ ಯೆಹೂದ್ಯರು ವಲಸೆ ಬರುವ ಮುನ್ನ) ಜನ ಅರಬ್ಬರೇ ಇದ್ದರು. ಏಳನೆಯ ಶತಮಾನದಲ್ಲಿ ಅದನ್ನು ರೋಮನ್ನರಿಂದ ವಶಪಡಿಸಿಕೊಂಡಾಗಿನಿಂದಲೂ ಅಲ್ಲಿ ಅರಬ್ಬರೇ ವಾಸಿಸುತ್ತಿದ್ದರು: ಈ ಅಸ್ವಾಭಾವಿಕ ಹಂಚಿಕೆಯಿಂದ ಅರಬ್ ಜನಾಂಗವನ್ನು ಇಬ್ಭಾಗಮಾಡಿದಂತಾಗುತ್ತದೆ; ಭಿನ್ನ ಭಿನ್ನ ರಾಷ್ಟ್ರಗಳಲ್ಲಿದ್ದ ಲಕ್ಷಾಂತರ ಯೆಹೂದ್ಯರು ವಲಸೆ ಬಂದದ್ದರಿಂದ ಈಗಾಗಲೇ ಎಷ್ಟೋ ಅರಬ್ಬರು ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ; ಮಧ್ಯ ಏಷ್ಯಕ್ಕೇ ಯೆಹೂದ್ಯರು ಅನ್ಯಜನರು. ಇದು ಅರಬ್ಬರ ವಾದ. ಆದರೆ ಈ ಮಧ್ಯೆ ಎರಡನೆಯ ಮಹಾಯುದ್ಧ ಪ್ರಾರಂಭವಾಯಿತು. ಅರಬ್-ಯೆಹೂದ್ಯರ ಪ್ರಶ್ನೆ ಮುಂದಕ್ಕೆ ಹೋಯಿತು. 1940ರ ಮುಂದಿನ ವರ್ಷಗಳಲ್ಲಿ ಹಿಟ್ಲರನ ಉನ್ಮಾದಕ್ಕೆ ಅರವತ್ತು ಲಕ್ಷ ಯೆಹೂದ್ಯರು ಬಲಿಯಾದರು. ಆಧುನಿಕ ಮಾನವನ ಸಂಸ್ಕøತಿಗೆ ಬೆಲೆಯೇನಾದರೂ ಇದೆಯೆ? ಎಂದು ವಿಶ್ವಾದ್ಯಂತ ಜನ ಶಂಕಿಸುವಂತಾಯಿತು. ಯೆಹೂದ್ಯರನ್ನು ನಾಶಗೊಳಿಸಿ ಅವರ ಪ್ರಶ್ನೆಯನ್ನು ಬಗೆಹರಿಸುವುದು ಹಿಟ್ಲರನ ರೀತಿ.

ಪ್ಯಾಲಿಸ್ಟೈನಿನಲ್ಲಿ ತಮ್ಮ ರಾಷ್ಟ್ರೀಯ ನೆಲೆಯನ್ನೂರಿಸಬೇಕೆಂದು ಬಹುಕಾಲದಿಂದ ಆಸೆ ಹೊಂದಿದ್ದು, ಯುರೋಪಿನಿಂದ ಅಧಿಕ ಸಂಖ್ಯೆಯಲ್ಲಿ ಇಲ್ಲಿ ಬಂದು ತುಂಬಿದ್ದ ಯೆಹೂದ್ಯರಿಗೂ ಅರಬ್ಬರಿಗೂ 1947ರಲ್ಲಿ ಯುದ್ಧವಾಯಿತು. ವಿಶ್ವಸಂಸ್ಥೆಯ ನಿರ್ಣಯಕ್ಕಾನುಸಾರವಾಗಿ ಅಲ್ಲಿ 1948ರ ಮೇ 14ರಂದು ಬ್ರಿಟಿಷರ ರಕ್ಷಣೆ ಕೊನೆಗೊಂಡು, ಮೇ 15ರಂದು ಪ್ಯಾಲಿಸ್ಟೈನಿನ ಉದಯವಾಯಿತು. ಅದು ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಿತು. 1949ರ ಜನವರಿಯ ವರೆಗೂ ಯುದ್ಧ ಮುಂದುವರೆಯಿತು. ಅರಬ್ ರಾಷ್ಟ್ರಗಳಿಗೂ ಇಸ್ರೇಲಿಗೂ ನಡುವೆ ಶಾಂತಿ ಕೌಲಿನ ಸಹಿಯಾಗಿಲ್ಲ; ರಾಜತಾಂತ್ರಿಕ ಸಂಬಂಧವಿಲ್ಲ. ವಿಶ್ವಸಂಸ್ಥೆ ನೇಮಿಸಿರುವ ಯುದ್ಧ ವಿರಾಮ ಮೇಲ್ವಿಚಾರಣಾ ವ್ಯವಸ್ಥೆ ಮುಂದುವರಿಯುತ್ತಿದೆ. 1967ರಲ್ಲಿ ಇಸ್ರೇಲಿಗೂ ನೆರೆಯ ಅರಬ್ ರಾಜ್ಯಗಳಿಗೂ ನಡುವೆ ನಡೆದ ಆರು ದಿನಗಳ ಯುದ್ಧದ ಫಲವಾಗಿ ಇಡೀ ಜೆರೂಸಲೆಂ, ಜಾರ್ಡನೆ ನದಿಯ ಪಶ್ಚಿಮ ದಂಡೆಯ ಪ್ರದೇಶ. ಸಿನಾಯ್ ಪರ್ಯಾಯದ್ವೀಪ ಮತ್ತು ಗೋಲನ್ ದಿಬ್ಬಗಳು ಇಸ್ರೇಲಿನ ವಶವಾದುವು. ಜೆರೂಸಲೆಂ ಅನ್ನು ಇಸ್ರೇಲ್ ರಾಜ್ಯದಲ್ಲಿ ತಕ್ಷಣವೇ ವಿಲೀನಗೊಳಿಸಲಾಯಿತು. ಉಳಿದ ಪ್ರದೇಶಗಳು ಇನ್ನೂ ಆಕ್ರಮಿತ ಪ್ರದೇಶಗಳಾಗಿ ಮುಂದುವರಿಯುತ್ತಿವೆ.

ಉಲ್ಲೇಖಗಳುಸಂಪಾದಿಸಿ

  1. "Israel". The World Factbook. Central Intelligence Agency. 2007-06-19. Retrieved 2007-07-20. Check date values in: |date= (help)
  2. "Main Indicators". Central Bureau of Statistics. 2013. Retrieved 2007-09-18. Check date values in: |date= (help)
  3. "Rank Order - GDP (purchasing power parity)". World Factbook. Central Intelligence Agency. 2007-08-16. Retrieved 2007-08-21. Check date values in: |date= (help)
  4. "Rank Order - GDP - per capita (PPP)". World Factbook. Central Intelligence Agency. 2007-08-16. Retrieved 2007-08-21. Check date values in: |date= (help)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಇಸ್ರೇಲ್&oldid=964930" ಇಂದ ಪಡೆಯಲ್ಪಟ್ಟಿದೆ