ಜಯಚಾಮರಾಜ ಒಡೆಯರ್

(ಜಯಚಾಮರಾಜೇಂದ್ರ ಒಡೆಯರ್ ಇಂದ ಪುನರ್ನಿರ್ದೇಶಿತ)

ಜಯಚಾಮರಾಜ ಒಡೆಯರ್ [](ಜುಲೈ ೧೮, ೧೯೧೯-ಸೆಪ್ಟೆಂಬರ್ ೨೩, ೧೯೭೪) ಮೈಸೂರು ಸಂಸ್ಥಾನದ ೨೫ನೇ ಹಾಗು ಕೊನೆಯ ಮಹಾರಾಜ ಆಗಿದ್ದವರು. ಇವರು ೧೯೪೦ರಿಂದ ೧೯೫೦ರವರೆಗೆ ರಾಜ್ಯಬಾರ ನಡೆಸಿ, ೧೯೫೦ರಲ್ಲಿ ಭಾರತವು ಗಣರಾಜ್ಯವಾದಾಗ ಮೈಸೂರು ರಾಜ್ಯದ ಪ್ರಮುಖರಾಗಿ ೧೯೫೬ರವರೆಗು ಸೇವೆ ಸಲ್ಲಿಸಿದರು. ಕರ್ನಾಟಕ ಸ್ಥಾಪನೆಯ ನಂತರ ೧೯೬೪ರವರೆಗೆ ಅದರ ರಾಜ್ಯಪಾಲರಾಗಿದ್ದರು.[]

ಜಯಚಾಮರಾಜ ಒಡೆಯರ್ ಬಹದ್ದೂರ್
ಮೈಸೂರು ಮಹಾರಾಜ

ಆಳ್ವಿಕೆ ೧೯೪೦-೧೯೫೦
ಪೂರ್ವಾಧಿಕಾರಿ ನಾಲ್ವಡಿ ಕೃಷ್ಣರಾಜ ಒಡೆಯರು
ಉತ್ತರಾಧಿಕಾರಿ: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್
ಸಂತಾನ
ಗಾಯತ್ರಿ ದೇವಿ, ಮೀನಾಕ್ಷಿ ದೇವಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಕಾಮಾಕ್ಷಿದೇವಿ, ಇಂದ್ರಾಕ್ಷಿದೇವಿ, ವಿಶಾಲಾಕ್ಷಿ ದೇವಿ
ತಂದೆ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್
ತಾಯಿ ಯುವರಾಣಿ ಕೆಂಪು ಚೆಲುವಾಜ ಅಮ್ಮಣ್ಣಿ
ಜನನ ೧೮-೦೭-೧೯೧೯
ಮೈಸೂರು ಸಂಸ್ಥಾನ
ಮರಣ ೨೩-೦೯-೧೯೭೪
ಬೆಂಗಳೂರು
ಧರ್ಮ ಜನಪದ

ಇವರು ಯದುವಂಶದ ಕೊನೆಯ ದೊರೆ. ತತ್ತ್ವಜ್ಞಾನಿ. ಸಂಗೀತಜ್ಞ, ರಾಜನೀತಿಜ್ಞ, ಉದಾರ ದಾನಿ.

  • ಹುಟ್ಟಿದ್ದು 1919ರ ಜುಲೈ 18ರಂದು. ತಂದೆ ಯುವರಾಜ ಕಂಠೀರವ ನರಸಿಂಹರಾಜ ಒಡೆಯರು ತಾಯಿ ಕೆಂಪು ಚಲುವಾಜಮ್ಮಣ್ಣಿ :
  • ಆಧ್ಯಾತ್ಮಿಕ ಆಸಕ್ತಿಯನ್ನೂ ಸಂಗೀತದಲ್ಲಿ ಅಭಿರುಚಿಯನ್ನೂ ಉಂಟು ಮಾಡಿದವರು. ನಾಲ್ವಡಿ ಕೃಷ್ಣರಾಜ ಒಡೆಯರ್ ಇವರ ದೊಡ್ಡಪ್ಪ. ಪ್ರಾರಂಭಿಕ ಶಿಕ್ಷಣ ನಡೆದದ್ದು ರಾಜಮನೆತನದ ವಿಶೇಷ ಶಾಲೆಯಲ್ಲಿ. ತಮಗೆ ಸಂತಾನವಿಲ್ಲದಿದ್ದುದರಿಂದ ತಮ್ಮ ಕಿರಿಯ ಸಹೋದರರಾದ ನರಸಿಂಹರಾಜ ಒಡೆಯರವರ ಪುತ್ರರಾದ ಇವರನ್ನು ಪಟ್ಟಕ್ಕೇರಿಸುವ ಸಲುವಾಗಿ ಕೃಷ್ಣರಾಜ ಒಡೆಯರವರು ಇವರಿಗೆ ಇನ್ನೂ 15-16 ವರ್ಷ ವಯಸ್ಸಿದ್ದಾಗಲೇ ಮೈಸೂರಿನ ಲೋಕರಂಜನ ಮಹಲ್ ನಲ್ಲಿ ಒಂದು ವಿಶೇಷ ಶಾಲೆ ಏರ್ಪಡಿಸಿ ಶಿಕ್ಷಣ ಕೊಡಿಸಿದರು. ಮುಂದೆ ಇವರು ತಮ್ಮ 19ನೆಯ ವಯಸ್ಸಿನಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ.ಪದವಿ ಪಡೆದರು (1938). ಕನ್ನಡ-ಇಂಗ್ಲಿಷ್ ಭಾಷೆಗಳ ಜೊತೆಗೆ ರಾಜನೀತಿ ಮತ್ತು ಅರ್ಥಶಾಸ್ತ್ರಗಳನ್ನು ಅಭ್ಯಸಿಸಿದರು. ಉತ್ತಮ ಪಾಂಡಿತ್ಯಕ್ಕೆ ಮೀಸಲಾದ ಐದು ಬಹುಮಾನಗಳು ಸುವರ್ಣಪದಕಗಳೊಂದಿಗೆ ಇವರಿಗೆ ಲಬಿಸಿದುವು. ಇವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಹಿಸ್ಟಾರಿಕಲ್ ಅಸೋಸಿಯೇಷನ್ನಿನ ಗೌರವಾಧ್ಯಕ್ಷರೂ ಆಗಿದ್ದರು.
  • ಬನಾರಸ್ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರ್ ಆಫ್ ಲಾಸ್ ಪದವಿಯನ್ನೂ (1942) ಅಣ್ಣಾಮಲೈ ವಿಶ್ವವಿದ್ಯಾಲಯ ಡಿ.ಲಿಟ್. ಪದವಿಯನ್ನೂ (1955) ನೀಡಿ ಗೌರವಿಸಿದುವು. ಇದಕ್ಕೂ ಮುನ್ನ (1937) ಲಂಡನಿನ ಗಿಲ್ಡ್ ಹಾಲ್ ಸಂಗೀತಶಾಲೆಯ ಲೈಸೆನಿಯೇಟ್ ಪದವೀಧರರಾಗಿದ್ದ ಇವರು ಲಂಡನಿನ ಟ್ರಿನಿಟಿ ಸಂಗೀತ ಕಾಲೇಜಿನ ಗೌರವ ಫೆಲೊ ಆದದ್ದು 1945ರಲ್ಲಿ. ಇವರ ಪಾಂಡಿತ್ಯ ಮತ್ತು ಪ್ರತಿಭೆಗಳನ್ನು ಮನಗಂಡು ಆಸ್ಟ್ರೇಲಿಯದ ಕ್ವೀನ್ಸ್ ಲೆಂಡ್ ವಿಶ್ವವಿದ್ಯಾಲಯ ಇವರಿಗೆ ಡಿ.ಲಿಟ್. ಪದವಿ ನೀಡಿ (1936) ಸನ್ಮಾನಿಸಿತು. ಬ್ರಿಟಿಷ್ ಸರ್ಕಾರ ಇವರಿಗೆ 1945ರಲ್ಲಿ ಜಿ.ಸಿ.ಎಸ್.ಐ.ಬಿರುದನ್ನೂ 1946ರಲ್ಲಿ ಜಿ.ಸಿ.ಬಿ.ಬಿರುದನ್ನೂ ನೀಡಿತು.
  • ಜಯಚಾಮರಾಜರು ಮೈಸೂರಿನ ಪಟ್ಟಕ್ಕೆ ಬಂದದ್ದು 1940ರ ಸೆಪ್ಟೆಂಬರ್ 8ರಂದು. ವಿಶಾಲ ಕರ್ನಾಟಕವಾಗಬೇಕೆಂಬ ಕನಸನ್ನು ಇವರು ಬಹುಹಿಂದೆಯೇ ಕಂಡರು. ಈ ಕನಸು ನನಸಾಗುವುದಾದಲ್ಲಿ ತಮ್ಮ ರಾಜತ್ವವನ್ನು ತ್ಯಜಿಸಲೂ ಸಿದ್ಧವೆಂದು ಹೇಳಿದರು. ಇವರು ಮೈಸೂರು ಸಂಸ್ಥಾನದ ಅರಸರಾಗಿದ್ದುದು 1940ರಿಂದ 1947ರ ವರೆಗೆ. ಈ ಸಮಯದಲ್ಲಿ ಇವರು ಲಲಿತಕಲೆಗಳಿಗೆ ನೀಡಿದ ಪ್ರೋತ್ಸಾಹ ಸ್ಮರಣೀಯ. ಇವರ ಆಡಳಿತಕಾಲದಲ್ಲಿ ಜಯಚಾಮರಾಜ ಗ್ರಂಥಮಾಲಾ ಎಂಬ ಯೋಜನೆ ರೂಪುಗೊಂಡಿತು. ಈ ಯೊಜನೆಯ ಅಂಗವಾಗಿ ವೇದಶಾಸ್ತ್ರ, ಪುರಾಣ ಮುಂತಾದ ಉದ್ಗ್ರಂಥಗಳು ಪ್ರಸಿದ್ದ ಪಂಡಿತರಿಂದ ಕನ್ನಡಕ್ಕೆ ಅನುವಾದಗೊಂಡು ಪ್ರಕಟವಾದುವು. ಸ್ವಾತಂತ್ರ್ಯಾನಂತರ ಭಾರತ ಒಕ್ಕೂಟದಲ್ಲಿ ತಮ್ಮ ಸಂಸ್ಥಾನವನ್ನು ವಿಲೀನಗೊಳಿಸಲು ಮುಂದಾದವರಲ್ಲಿ ಇವರೇ ಮೊದಲಿಗರು.
  • ಭಾರತ ಗಣರಾಜ್ಯವಾದಾಗ ಇವರು ರಾಜಪ್ರಮುಖರಾದರು (1950-56). ರಾಜ್ಯಗಳ ಪುನರ್ವಿಂಗಡಣೆಯಾದಾಗ ವಿಶಾಲ ಮೈಸೂರಿನ (ಇಂದಿನ ಕರ್ನಾಟಕ) ಪ್ರಥಮ ರಾಜ್ಯಪಾಲರಾದರು (1956). ಈ ಹುದ್ದೆಯಲ್ಲಿರುವಾಗ ಅವರು ಸಂಬಳ ಸ್ವೀಕರಿಸಲಿಲ್ಲ. ಮುಂದೆ 1964ರಲ್ಲಿ ಮದ್ರಾಸಿನ ರಾಜ್ಯಪಾಲರಾಗಿ ನೇಮಕಗೊಂಡು ಕೆಲವು ಕಾಲ ಆ ಹುದ್ದೆಯಲ್ಲೂ ಇದ್ದರು.
  • ಇವರಿಗೆ ಇಬ್ಬರು ಮಡದಿಯರು, ಸತ್ಯಪ್ರೇಮಕುಮಾರಿ ಮತ್ತು ತ್ರಿಪುರಸುಂದರಮ್ಮಣ್ಣಿ, ಐದು ಮಂದಿ ಹೆಣ್ಣು ಮಕ್ಕಳಲ್ಲಿ ಈಗ ನಾಲ್ಕು ಮಂದಿ ಮಾತ್ರ ಇದ್ದಾರೆ. ಒಬ್ಬನೇ ಪುತ್ರ-ಶ್ರೀಕಂಠದತ್ತ ನರಸಿಂಹರಾಜ ಒಡೆಯರ್.
  • ತಮ್ಮ ಕೊನೆಯ ದಿವಸಗಳನ್ನು ಪುರಾಣ ಮತ್ತು ಧಾರ್ಮಿಕ ಗ್ರಂಥಗಳ ಶ್ರವಣದಲ್ಲೇ ಕಳೆಯುತ್ತಿದ್ದ ಇವರು ಶ್ವಾಸಕೋಶದ ಉರಿಯೂತಕ್ಕೆ ಬಲಿಯಾಗಿ 1974ರ ಸೆಪ್ಟೆಂಬರ್ 23ರಂದು ಬೆಂಗಳೂರಿನಲ್ಲಿ ನಿಧನರಾದರು
  • ಇವರು ರಾಜ್ಯಶಾಸ್ತ್ರ, ಚರಿತ್ರೆ, ಅರ್ಥಶಾಸ್ತ್ರ ಮತ್ತು ಆಫ್ರಿಕನ್ ವಿಷಯಗಳಲ್ಲಿ ವಿಶೇಷ ಪರಿಣಿತಿ ಪಡೆದರು. ಒಳ್ಳೆಯ ಕುದುರೆ ಸವಾರರು ಟೆನಿಸ್ ಮತ್ತು ರ್ಯಾಕೆಟ್ಸ್ ಆಟವಾಡುವುದರಲ್ಲಿ ನಿಪುಣರೂ ನುರಿತ ಶಿಕಾರಿಯೂ ಆಗಿದ್ದರು. ಓದಿನಂತೆ ಸಂಗೀತದಲ್ಲೂ ಇವರಿಗೆ ಅಮಿತ ಆಸಕ್ತಿ. ಪಿಯಾನೋ ಬಾರಿಸುವುದರಲ್ಲಿ ಒಳ್ಳೆಯ ಪರಿಣತಿ ಪಡೆದಿದ್ದರು. ಪಾಶ್ಚಾತ್ಯ ಸಂಗೀತದಲ್ಲಿ ಇವರಿಗೆ ವಿಶೇಷ ಆಸಕ್ತಿ ಇತ್ತು. ಅದನ್ನು ಕುರಿತಂತೆ ಭಾರತದಲ್ಲೇ ಅತಿ ದೊಡ್ಡದೆನಿಸುವ ಗ್ರಂಥ ಭಂಡಾರವನ್ನಿವರು ತಮ್ಮ ಅರಮನೆಯಲ್ಲಿ ಕೂಡಿಸಿದರು. ವಿಶ್ವದ ಹೆಸರಾಂತ ಸಂಗೀತಗಾರರೊಂದಿಗೆ ಇವರಿಗೆ ಸಂಪರ್ಕವಿತ್ತು. ಖ್ಯಾತ ಆಪೆರಗಳ ಕರ್ತೃವಾದ ಜರ್ಮನಿಯ ರಿಚರ್ಡ್ ವ್ಯಾಗ್ನರ್ (1813-1883), ಪ್ರಸಿದ್ದ ಜರ್ಮನ್ ಸಂಗೀತಗಾರ ಲಡ್ವಿಗ್ ಫಾನ್ ಬೇತೋವನ್ (1770-1827), ಬಾಕ್ ಮನೆತನದ ಸಂಗೀತ ವಿದ್ವಾಂಸರು ಮುಂತಾದವರು ಇವರ ಮೆಚ್ಚಿನ ಸಂಗೀತಗಾರರಾಗಿದ್ದರು.
  • ಭಾರತೀಯ ಸಂಸ್ಕೃತಿ ಮತ್ತು ತತ್ತ್ವಶಾಸ್ತ್ರದ ಅನಧಿಕೃತ ರಾಯಭಾರಿಯಾಗಿ ಇವರು ಅನೇಕ ಸಲ ದೇಶ ವಿದೇಶಗಳ ಪ್ರವಾಸ ಕೈಗೊಂಡಿದ್ದರು. ಆಗ ಇವರು ಅಲ್ಲಲ್ಲಿ ಮಾಡಿದ ಭಾಷಣಗಳು ವಿಚಾರಪೂರಿತವಾಗಿವೆ.
  • ವನ್ಯಮೃಗಗಳ ಬಗ್ಗೆ ಇವರಿಗೆ ಆಸಕ್ತಿ ಇತ್ತು. ಭಾರತೀಯ ವನ್ಯಮೃಗಗಳ ಮಂಡಳಿಯ ಅಧ್ಯಕ್ಷರಾಗಿದ್ದುದಲ್ಲದೆ ಮೈಸೂರು ನಗರದಲ್ಲಿನ ತಮ್ಮ ಸ್ವಂತ ಮೃಗಾಲಯವನ್ನು ಸರ್ಕಾರದ ಅಧೀನಕ್ಕೆ ವಹಿಸಿಕೊಟ್ಟು ಅದರ ಅಭಿವೃದ್ದಿಗೆ ಕಾರಣರಾದರು.
  • ಮೈಸೂರು ನಗರದಲ್ಲಿರುವ ಶ್ರೀ ಜಯಚಾಮರಾಜೇಂದ್ರ ಚಿತ್ರಶಾಲೆಗಾಗಿ ಇವರು ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿಕೊಟ್ಟರು. ಕೇಂದ್ರೀಯ ಆಹಾರ ಸಂಶೋಧನಾಲಯ, ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಮುಂತಾದವುಗಳಿಗಾಗಿ ನಿವೇಶನ ಮತ್ತು ಕಟ್ಟಡಗಳನ್ನು ಉದಾರವಾಗಿ ದಾನ ನೀಡಿದರು. ಇದಲ್ಲದೇ ತಮ್ಮ ಇನ್ನಿತರ ಕಟ್ಟಡ, ನಿವೇಶನಗಳನ್ನು ಸಾರ್ವಜನಿಕ ಉಪಯೋಗಕ್ಕಾಗಿ ದಾನ ಮಾಡಿರುವುದೂ ಉಂಟು.
  • ಮೈಸೂರು ನಗರದಲ್ಲಿ ಇವರು ಆಚರಿಸಿಕೊಂಡು ಬರುತ್ತಿದ್ದ ವೈಭವೋಪೇತ ದಸರಾ ಉತ್ಸವಕ್ಕೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಹತ್ತ್ವ ಬಂದಿತ್ತು. ಆಗ ಪ್ರತಿನಿತ್ಯ ಸಂಜೆ ಅರಮನೆಯಲ್ಲಿ ನಡೆಯುತ್ತಿದ್ದ ರಾಜಸಭೆಗಳು, ಮಹಾನವಮಿಯ ದಿನದ ಆಯುಧಪೂಜೆಗಳು, ವಿಜಯದಶಮಿಯ ದಿನದ ಜಂಬೂಸವಾರಿ-ಇವೆಲ್ಲವೂ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸಿತ್ತು.

ಸಾಹಿತ್ಯ ಸಾಧನೆ

ಬದಲಾಯಿಸಿ

ಅರಮನೆಯ ನುರಿತ ಪಂಡಿತರಲ್ಲಿ ಇವರು ಸಂಸ್ಕೃತ ಭಾಷೆಯನ್ನೂ ತತ್ತ್ವ ಗ್ರಂಥಗಳನ್ನೂ ಆಳವಾಗಿ ಅಭ್ಯಾಸ ಮಾಡಿದರು. ಹಠಯೋಗವನ್ನೂ ಸ್ವಲ್ಪ ಅಭ್ಯಾಸ ಮಾಡಿದ್ದುಂಟು. ಅನೇಕ ಸಂಸ್ಕೃತ ಗ್ರಂಥಗಳನ್ನು ಭಾಷಾಂತರಿಸಿದ್ದಾರೆ. ಅಲ್ಲದೇ ಇವರು ರಚಿಸಿದ ಕೃತಿಗಳಲ್ಲಿ ಮುಖ್ಯವಾದವು ; ದತ್ತಾತ್ರೇಯ-ದಿ ವೇ ಅಂಡ್ ದಿ ಗೋಲ್ (1956), ದಿ ಗೀತಾ ಅಂಡ್ ಇಂಡಿಯಾನ್ ಕಲ್ಚರ್, ಭಾರತೀಯ ಸೌಂದರ್ಯಶಾಸ್ತ್ರದ ಹಲವು ಮುಖಗಳು, ದಿ ರಿಲಿಜನ್ ಅಂಡ್ ದಿ ಮ್ಯಾನ್, ಆತ್ಮ ಮತ್ತು ಬ್ರಹ್ಮ.

ದತ್ತಾತ್ರೇಯ-ದಿ ವೇ ಅಂಡ್ ದಿ ಗೋಲ್

ಬದಲಾಯಿಸಿ

ಇವರ ಆಳವಾದ ತತ್ತ್ವಶಾಸ್ತ್ರಧ್ಯಯನದ ಫಲವೇ ಆಂಗ್ಲ ಭಾಷೆಯಲ್ಲಿ ರಚಿತವಾಗಿರುವ ದತ್ತಾತ್ರೇಯ-ದಿ ವೇ ಅಂಡ್ ದಿ ಗೋಲ್, ಇದಕ್ಕೆ ಭಾರತದ ರಾಷ್ಟ್ರಪತಿಗಳಾಗಿದ್ದ ಎಸ್. ರಾಧಾಕೃಷ್ಣನ್ ಅವರು ಮುನ್ನುಡಿ ಬರೆದಿದ್ದಾರೆ. ಇದು ಇವರು ರಚಿಸಿರುವ ಮೇಲ್ಮಟ್ಟದ ಗ್ರಂಥವೆನಿಸಿದೆ.

ದತ್ತಾತ್ರೇಯ ತತ್ತ್ವದ ಸ್ವರೂಪವನ್ನು ಕುರಿತು ಗ್ರಂಥಕರ್ತರ ಕಲ್ಪನೆ ಹೀಗಿದೆ:

ದತ್ತಾತ್ರೇಯ ಮಾನವರ ಆತ್ಮಗಳ ಬೇಟೆಗಾರ. ಆತನ ಬಳಿಯಿರುವ ನಾಲ್ಕು ನಾಯಿಗಳೆಂದರೆ ನಾಲ್ಕು ವೇದಗಳು. ಇವು ಸತ್ಯವನ್ನು ರಕ್ಷಿಸುತ್ತವೆ. ದತ್ತಾತ್ರೇಯನ ಕವಿ ಬಣ್ಣದ ಉಡುಪು ಸಂನ್ಯಾಸದ ಸಂಕೇತ ; ತ್ಯಾಗ ಮತ್ತು ನಿರ್ಲಿಪ್ತತೆಗಳಿಲ್ಲದೆ. ಪರಮ ಸತ್ಯದ ಸಾಕ್ಷಾತ್ಕಾರ ಅಸಂಭವ ಎಂಬುದನ್ನು ಇದು ಸೂಚಿಸುತ್ತದೆ.

ಏಕ ಏವ ತ್ರಿಧಾ ಸ್ಮøತ: ಎಂಬಂತೆ ದತ್ತಾತ್ರೇಯನ ಶರೀರ ಒಂದು, ಮುಖಗಳು ಮೂರು, ಇವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಪ್ರತಿನಿಧಿಸುತ್ತವೆ. ಕೈಗಳು ಆರು, ಬಲಗಡೆಯ ಮೂರು ಕೈಗಳಲ್ಲಿ ತ್ರಿಶೂಲ, ಜಪಮಾಲೆ ಮತ್ತು ಕಮಲಗಳೂ ಎಡಗಡೆಯ ಮೂರು ಕೈಗಳಲ್ಲಿ ಚಕ್ರ, ಶಂಖ, ಭಿಕ್ಷಾಪಾತ್ರೆಗಳೂ ಇವೆ. ದತ್ತಾತ್ರೇಯ ಒಂದೇ ಸತ್ಯ ಸ್ವರೂಪದ ಮೂರು ಕ್ರಿಯೆಗಳ (ಸೃಷ್ಟಿ, ಸ್ಥಿತಿ;, ಲಯ) ಸಂಕೇತ, ಕೈಗಳಲ್ಲಿನ ಶಂಖಚಕ್ರಗಳು ವಿಷ್ಣುವನ್ನೂ ತ್ರಿಶೂಲ ಭಿಕ್ಷಾಪಾತ್ರೆಗಳು ಶಿವನನ್ನೂ ಕಮಲ ಜಪಮಾಲೆಗಳು ಬ್ರಹ್ಮನನ್ನೂ ಸಂಕೇತಿಸುತ್ತವೆ. ಈ ತ್ರಿಮೂರ್ತಿಗಳ ಸಂಯೋಜಿತ ರೂಪವೇ ಭಾರತೀಯ ತತ್ತ್ವಶಾಸ್ತ್ರದ ಮೂರ್ತ ಸ್ವರೂಪ. ಇದೇ ದತ್ತಾತ್ರೇಯ ತತ್ತ್ವದ ಗುರಿ.

ಈ ಗ್ರಂಥದ ಐದು ಪ್ರಕರಣಗಳಲ್ಲಿ ಕ್ರಮವಾಗಿ ಮಾನವನಿಗೆ ಈಶ್ವರಾನುಗ್ರಹದ ಅಗತ್ಯತೆ, ದತ್ತಾತ್ರೇಯನ ಪರತತ್ತ್ವ ಸ್ವರೂಪ, ದತ್ತಾತ್ತೇಯ ಉಪೇಯ ಮತ್ತು ಉಪಾಯ ಎರಡೂ ಆಗಿದ್ದಾನೆ. ಎಂಬುದು, ದತ್ತಾ ದ್ವೈತಸ್ವರೂಪ ಮತ್ತು ಜೀವನ್ಮುಕ್ತ ಗೀತೆ ಇವು ಬರುತ್ತವೆ. ಅನಂತರ ಅವಧೂತ ಗೀತೆಗಳ ಭಾಷಾಂತರ, ಕಡೆಯಲ್ಲಿ ಇದಕ್ಕೆ ಹಿನ್ನೆಲೆಯಾಗಿ ದತ್ತಾದ್ವ್ಯೆತದ ತುಲನಾತ್ಮಕ ವಿಮರ್ಶೆ ಬಂದಿವೆ.

ದಿ ಗೀತಾ ಅಂಡ್ ಇಂಡಿಯನ್ ಕಲ್ಚರ್

ಬದಲಾಯಿಸಿ

ದಿ ಗೀತಾ ಅಂಡ್ ಇಂಡಿಯನ್ ಕಲ್ಚರ್ ಎಂಬುದು ಈ ದಿಶೆಯಲ್ಲಿ ಮತ್ತೊಂದು ಅವಲೋಕನೀಯ ಗ್ರಂಥ. ಇದು ಧರ್ಮ ಮತ್ತು ಗೀತೆ ಹಾಗೂ ಭಗವದ್ಗೀತೆಯಲ್ಲಿನ ಕ್ಷೇತ್ರ ಮತ್ತು ಕ್ಷೇತ್ರಜ್ಞ ಎಂಬ ಕಲ್ಪನೆಗಳ ಸ್ವರೂಪ ಎಂಬ ಎರಡು ಪ್ರಬಂಧಗಳ ಸಂಕಲನ.

  • ಒಡೆಯರ ಅಭಿಪ್ರಾಯದಂತೆ ಇಂದಿನ ಜಗತ್ತು ಐಹಿಕಕ್ಕೆ ಹೆಚ್ಚು ಬೆಲೆ ಕೊಡುತ್ತದೆ. ಇದರಿಂದ ಶಾಂತಿ ಸಮಾಧಾನಗಳು ಮರೆಯಾಗಿವೆ. ಗೊಂದಲ, ಅಶಾಂತಿ ತಾಂಡವವಾಡುತ್ತಿವೆ. ಇಂಥ ಸ್ಥಿತಿಯಲ್ಲಿ ಜಗತ್ತಿಗೆ ಶಾಂತಿಯ ಬೆಳಕನ್ನು ನೀಡಬಲ್ಲುದು ಭಾರತೀಯ ಸಂಸ್ಕೃತಿ ಮಾತ್ರ. ಎಲ್ಲ ಪ್ರಾಪಂಚಿಕ ಘಟನೆಗಳ ಹಿಂದೆ ಭಗವಂತನ ಅಭಯಹಸ್ತವೊಂದಿದೆ. ಅದು ನಿರ್ದೇಶನ ಮತ್ತು ಸಮಾಧಾನ ರೂಪದ್ದು. ಜಗತ್ತಿಗೆ ನಂಬಿಕೆ ನೀಡಿ ಧ್ಯಾನ ಮತ್ತು ಧರ್ಮದ ಅಖಂಡ ನಂಬಿಕೆಯ ತತ್ತ್ವಗಳ ಮಹತ್ವಪೂರ್ಣ ವಿಚಾರಧಾರೆಯನ್ನು ಹರಿಸಿದ್ದು ಭಾರತ. ಜಗತ್ತನ್ನು ವಿಜ್ಞಾನ ವಿಂಗಡಿಸಿ, ವಿಶ್ಲೇಷಿಸಿ, ಅಣು-ಪರಮಾಣು ಎಂದು ವಿಭಾಗಿಸಿ ನೋಡುತ್ತದೆ ; ಮಾನವನನ್ನು ಬೃಹತ್ ವಿಶ್ವದ ಹೊರಗೆ ನಿಲ್ಲಿಸಿ ನೋಡಲು ಯತ್ನಿಸುತ್ತದೆ; ಮಾನವನನ್ನು ಬೃಹತ್ ವಿಶ್ವದ ಹೊರಗೆ ನಿಲ್ಲಿಸಿ ನೋಡಲು ಯತ್ನಿಸುತ್ತದೆ. ಆದರೆ ಭಾರತ, ಇಡಿಯ ಸೃಷ್ಟಿಯನ್ನು ಪೂರ್ಣವೊಂದರ ಘಟಕವಾಗಿ ಕಂಡಿದೆ. ಅದೇ ಉಪನಿಷತ್ತಿನ ಪೂರ್ಣಮುದ: ಪೂರ್ಣಮಿದಂ ಎಂಬುದು. ವಿಶ್ವದ ಒಂದೊಂದು ಅಣುವೂ ಒಬ್ಬನೇ ಬ್ರಹ್ಮನ ಬೇರೆ ಬೇರೆ ರೂಪವೆಂದು ತಿಳಿದರೆ ಮಾನವರಲ್ಲಿ ಪರಸ್ಪರ ಘರ್ಷಣೆಗೆ ಅವಕಾಶವಿರದು.
  • ರಾಜಕೀಯ ಆರ್ಥಿಕ, ವೈಜ್ಞಾನಿಕ ಹಾಗೂ ತಾತ್ತ್ವಿಕ ಸಮಸ್ಯೆಗಳಿಂದ ಪರಸ್ಪರ ಸೌಹಾರ್ದ ಕಳಚುತ್ತಿರುವ ಈ ಸಮಯದಲ್ಲಿ ಭಾರತೀಯ ವಿಚಾರಧಾರೆ ಎಷ್ಟು ಅಗತ್ಯ ಎಂದು ತೋರಿಸುವುದೇ ಈ ಸಂಕಲನದ ಮುಖ್ಯ ಉದ್ದೇಶ.

ಸಂಗೀತಾಸಕ್ತಿ

ಬದಲಾಯಿಸಿ
  • ಒಡೆಯವರಿಗೆ ಸಂಗೀತವೆಂದರೆ ಪಂಚಪ್ರಾಣ. ಪ್ರತಿನಿತ್ಯ ಅವರು ಶಿವಪೂಜೆಗೆ ಕುಳಿತಾಗ ಸುಮಾರು 4-5 ಗಂಟೆಗಳ ವರೆಗೆ ಅರಮನೆಯ ಸಂಗೀತ ವಿದ್ವಾಂಸರು ಸರದಿಯ ಮೇಲೆ ಹಾಡುತ್ತಿದ್ದರು. ಈ ಕಾರ್ಯಕ್ರಮ ಒಂದೊಂದು ದಿನ ಬೆಳಗಿನ ಜಾವ 3-4 ಗಂಟೆಯಿಂದಲೇ ಪ್ರಾರಂಭವಾಗುತ್ತಿದ್ದುದು ಅಪರೂಪವಲ್ಲ. ಅನೇಕ ವಿದ್ವಾಂಸರನ್ನಿವರು ಆಸ್ಥಾನ ವಿದ್ವಾಂಸರನ್ನಾಗಿ ಮಾಡಿ ಗೌರವಿಸಿದುದೂ ಉಂಟು. ಸಂಸ್ಕೃತದಲ್ಲಿ ಇವರು ರಚಿಸಿರುವ ಸಂಗೀತ ಕೃತಿಗಳು ಸುಮಾರು 94 ಎನ್ನಲಾಗಿದೆ. ಇವುಗಳಲ್ಲಿ ಅನೇಕವು ಇನ್ನೂ ಅಚ್ಚಾಗಿಲ್ಲ. ಆದರೆ ಅನೇಕವನ್ನು ವಿದ್ವಾಂಸರು ಬಳಸಿಕೊಂಡು ಹಾಡುತ್ತಿದ್ದಾರೆ. ಪ್ರಾಯಃ ದೀಕ್ಷಿತ ಸಂಪ್ರದಾಯದವೆಂದು ಹೇಳಲಾಗಿರುವ ಇವರ ಕೀರ್ತನೆಗಳಲ್ಲಿ ಅಕ್ಷರಕ್ಕೆ ಹೆಚ್ಚು ಪ್ರಾಧಾನ್ಯ. ವಿದ್ಯಾರಾಜಯೋಗೀಂದ್ರ ಮುಂತಾದ ಸಂಕೇತಗಳು ಇವರ ಕೀರ್ತನೆಗಳ ಅಂಕಿತಗಳು. ಅವುಗಳಲ್ಲಿ ಕೆಲವು ಹೀಗಿವೆ :
  1. ಶ್ರೀಮಹಾಗಣಪತಿಂ ಭಜೇ ಹಂ(ಅಠಾಣ, ಆದಿತಾಳ)
  2. ಲಂಬೋದರ ಪಾಹಿ ಮಾಂ (ನಾರಾಯಣ ಗೌಳ, ಮಿಶ್ರಜಾತಿ, ತ್ರಿಪುಟ ತಾಳ)
  3. ಚಿಂತಯಾಮಿ ಜಗದಂಬಾ (ಹಿಂದೋಳ, ಮಿಶ್ರಜಾತಿ, ಝಂಪೆತಾಳ)
  4. ಸರಸ್ವತೀಂ ಭಗವತೀಂ ಸಮಾಮ್ಯಹಂ (ಹಂಸವಿನೋದಿನಿ, ಮಿಶ್ರ ಜಾತಿ ಝಂಪೆತಾಳ)
  5. ಬ್ರಹ್ಮಾಂಡವಲಯೇ, ಮಾಯೇ (ಮಾಂಡ್, ಆದಿತಾಳ)
  6. ಪನ್ನಗಶಯನ ಪರಿಪಾಹಿ ಮಾಂ (ಬ್ರಹಸ್ಪತಿ ಪ್ರಿಯ)
  7. ಶಿವಶಿವಶಿವ ಭೋ
  8. ಈಗ ಬಳಕೆಯಲ್ಲಿರುವ ರಾಗಗಳಲ್ಲದೆ ಬೃಹಸ್ಪತಿಪ್ರಿಯ ಮುಂತಾದ ಕೆಲವು ನೂತನ ರಾಗಗಳನ್ನೂ ಇವರು ಸೂಜಿಸಿದ್ದಾರೆ ಎನ್ನಲಾಗಿದೆ.
ಇವರ ಕೃತಿಗಳು ನಾದಮಾಧುರ್ಯಕ್ಕೆ, ಅರ್ಥಾಭಿವ್ಯಕ್ತಿಗೆ ಹೆಸರಾಗಿವೆ.[][]

ಹೆಚ್ಚಿನ ಓದಿಗೆ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. 'splendour of royal mysore the untold story of the wodeyars',By: Vikram sampat
  2. "'ಮೈಸೂರ್ ಅರಮನೆ ವೆಬ್ ಸೈಟ್'". Archived from the original on 11 ಏಪ್ರಿಲ್ 2015. Retrieved 10 ಮಾರ್ಚ್ 2015.
  3. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಯಚಾಮರಾಜ ಒಡೆಯರು
  4. ವಿಶಾಲ ಕರ್ನಾಟಕದ ಕನಸುಗಾರ;ವಿದ್ವಾನ್‌ ಎಂ.ಶಿವಕುಮಾರಸ್ವಾಮಿ;d: 14 ಜುಲೈ 2019
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: