ಗಣೇಶಪಾಲ್ ದೇವಸ್ಥಾನ
ಗಣೇಶಪಾಲ್ ಎನ್ನುವುದು ಒಂದು ಗಣಪತಿಯ ದೇವಸ್ಥಾನವಾಗಿದೆ.[೧] ಇದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿನ ಹಿತ್ಲಳ್ಳಿ ಎಂಬ ಗ್ರಾಮದಲ್ಲಿದ್ದು, ಸಿರ್ಸಿ ತಾಲೂಕಿನಿಂದ ಸುಮಾರು ೩೦ ಕಿ.ಮೀ ಹಾಗೂ ಯೆಲ್ಲಾಪುರದಿಂದ ೩೪ ಕಿಲೋಮೀಟರ್ ದೂರದಲ್ಲಿದೆ.[೨][೩][೪] ಇಲ್ಲಿಗೆ ಹೋಗುವ ದಾರಿಯಲ್ಲಿ ಸುತ್ತಲು ಗೂಂಡಾರಣ್ಯವಿದ್ದು, ಹಿರಿದಾದ ಮರಗಳು ಕಾಣಲು ಸಿಗುತ್ತದೆ. ಆದರೆ ಇಲ್ಲಿ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದಾಗಿದೆ. ಶಿರಸಿ ಮತ್ತು ಯೆಲ್ಲಾಪುರ ಜನರ ಆರಾಧ್ಯದೈವವಾದ ಈ ಗಣಪತಿಗೆ ಜನರು ಬಂದು ಪೂಜೆ ಸಲ್ಲಿಸಿ ತಮ್ಮ ಮನದಿಷ್ಟಾರ್ಥವನ್ನು ಬೇಡಿಕೊಳ್ಳುತ್ತಾರೆ.
ಇತಿಹಾಸ
ಬದಲಾಯಿಸಿಗಣೇಶಪಾಲ್ಗೆ ೩೦೦ ವರ್ಷಗಳ ಇತಿಹಾಸವಿದೆ.[೫] ಈ ಪ್ರದೇಶದ ಮಹಿಮೆಯ ಬಗ್ಗೆ ಮತ್ತು ಗಣಪತಿ ಬಂದು ನೆಲೆಸಿದ ಬಗ್ಗೆ ಒಂದು ಸತ್ಯವಾದ ಕಥೆ ಇದೆ. ಅದೇನೆಂದರೆ: ೧೮ ನೇ ಶತಮಾನದ ಆಸುಪಾಸಿನಲ್ಲಿ ಕಟ್ಟಿನಹಕ್ಲು ಕುಟುಂಬದ ಹಿರಿಯರಾದ ಪುಟ್ಟಯ್ಯ ಹೆಗಡೆಯವರಿಗೆ ಒಂದು ದಿನ ಕನಸಿನಲ್ಲಿ ಗಣಪತಿ ವಿಗ್ರಹ ಇರುವ ಜಾಗ ಹಾಗೂ ಅದನ್ನು ಸ್ಥಾಪಿಸುವಂತೆ ಸೂಚನೆ ಬಂತು. ಮೊದಲನೆಯ ದಿನ ಪುಟ್ಟಯ್ಯ ಹೆಗಡೆಯವರು ಇದನ್ನು ನಂಬಲಿಲ್ಲ. ಮಾರನೆಯ ದಿನ ಮತ್ತೆ ಕನಸಿನಲ್ಲಿ ಬಂದು ವಿಗ್ರಹ ಸ್ಥಾಪಿಸುವಂತೆ ಕೇಳಿಕೊಂಡಾಗ, ಅದೇ ಪಕಾರ ಅವರು ಮಾಡಿದರು.[೬] ಮಾರನೆ ದಿನ ಹೆಗಡೆಯವರು ಖುಷಿಯಿಂದ ಕುಟುಂಬದವರೊಡಗೂಡಿ ಕನಸಿನಲ್ಲಿ ಸೂಚಿನೆ ಸಿಕ್ಕ ಸ್ಥಳಕ್ಕೆ ಹೋದಾಗ ಅಲ್ಲಿ ವಿಗ್ರಹ ಕಂಡು ಆಶ್ಚರ್ಯವಾಗಿತ್ತು. ಆ ವಿಗ್ರಹವನ್ನು ಎತ್ತಿ ತರಲು ಪ್ರಯತ್ನ ಪಟ್ಟಾಗ ಅದನ್ನು ಕದಲಿಸಲು ಸಾಧ್ಯವಾಗದೆ ಭಾರವಾದ ಮನಸ್ಸಿನಿಂದಲೇ ಮನೆಗೆ ಬಂದರು. ಅದೇ ದಿನ ರಾತ್ರಿ ಮತ್ತೆ ಗಣಪತಿ ಕನಸಿನಲ್ಲಿ ಬಂದು ಹೆಗಡೆಯವರೊಬ್ಬರೆ ಬಂದು ತನ್ನನ್ನು ಕೊಂಡೊಯ್ಯುವಂತೆ ಸೂಚಿಸಿತು. ಇದರಿಂದ ಸಂತೋಷಗೊಂಡ ಹೆಗಡೆ ಅವರು ಬೆಳಿಗ್ಗೆ ಬೇಗ ಎದ್ದು ಶುದ್ಧ ಮನಸ್ಸಿನಿಂದ, ಭಕ್ತಿಯಿಂದ ಗಣಪತಿಯ ಮೂರ್ತಿ ಇರುವಲ್ಲಿಗೆ ಹೋದರು. ಗಣಪತಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಮೂರ್ತಿಯನ್ನು ಎತ್ತಲು ಹೋದರು. ಆಗ ಸಲೀಸಾಗಿ ಅಷ್ಟುದೊಡ್ಡ ಮೂರ್ತಿಯನ್ನು ಎತ್ತಲು ಅವರು ಶಕ್ತರಾದರು. ಹೆಗಡೆಯವರು ಗಣೇಶನ ಮೂರ್ತಿಯನ್ನು ಹೊತ್ತು ಶಾಲ್ಮಲಾ ನದಿಯನ್ನು ದಾಟುತ್ತಿರುವಾಗ, ನದಿಯ ಮದ್ಯಭಾಘದಲ್ಲಿಯೇ ಗಣಪತಿ ಪ್ರತ್ಯಕ್ಷನಾಗಿ ತನ್ನನ್ನು ಅಲ್ಲಿಯೇ ಸ್ಥಾಪಿಸುವಂತೆ ಹೇಳಿ ಅಲ್ಲೇ ನೆಲೆನಿಂತನು. ಗಣಪತಿಯು ಹೆಗಡೆಯವರ ಭಕ್ತಿಗೆ ಸಂತೋಷಗೊಂಡು ವರ ಕೇಳು ಎನ್ನಲು ಹೆಗಡೆಯವರು ತಮ್ಮ ಕುಟುಂಬದ ಮೇಲೆ ಯಾವಾಗಲೂ ನಿನ್ನ ಅನುಗ್ರಹವಿರಲಿ ಭಗವಂತ ಎಂದು ಬೇಡಿಕೊಂಡರು.
ವಿಶೇಷತೆ
ಬದಲಾಯಿಸಿಗಣೇಶಪಾಲ್ನ ವಿಶೇಷತೆ ಎಂದರೆ ಇಲ್ಲಿ ನಾವು ಬೇರೆ ದೇವಸ್ಥಾನದ ಹಾಗೆ ಯಾವುದೇ ಕಟ್ಟಡವನ್ನು ನೋಡಲಿಕ್ಕೆ ಸಾಧ್ಯವಿಲ್ಲ. ಇಲ್ಲಿ ಸಿಮೆಂಟಿನ ಅಗಲವಾದ ಕಟ್ಟೆಯ ಮೇಲೆ ಗಣಪತಿಯನ್ನು ಸ್ಥಾಪಿಸಿದ್ದಾರೆ. ಸುತ್ತಲೂ ಶಾಲ್ಮಲಾ ನದಿಯಿದೆ.[೭] ಕಟ್ಟೆಯಮೇಲೆ ಗಣಪತಿ ಮಾತ್ರವಲ್ಲದೇ ದೊಡ್ಡದಾದ ಶಿವಲಿಂಗ, ಎದುರುಗಡೆ ನಂದಿಯನ್ನು ಸ್ಥಾಪಿಸಿದ್ದಾರೆ.[೮] ವರ್ಷಪೂರ್ತಿ ಸುತ್ತಲೂ ಶಾಲ್ಮಲಾ ನದಿ ಜುಳುಜುಳು ಹರಿಯುತ್ತಿರುತ್ತದೆ.
ಈ ವಿಗ್ರಹಕ್ಕೆ ಯಾವುದೇ ಗುಡಿ ಗೋಪುರವಿಲ್ಲ. ಮಳೆಗಾಲದಲ್ಲಿ ಈ ವಿಗ್ರಹದ ಮೇಲೆ ನಾಲ್ಕೈದು ಅಡಿಯಷ್ಟು ನೀರು ಹರಿದರೂ ವಿಗ್ರಹ ಮಾತ್ರ ಅಚಲವಾಗಿರುತ್ತದೆ. ಒಂದು ವೇಳೆ ನೀರಲ್ಲಿ ತೇಲಿದರು ಕೂಡ ತಾನಿರುವ ಜಾಗವನ್ನು ಹೆಗಡೆಯವರಿಗೆ ತಿಳಿಸಿ ಅವರು ತೆಪ್ಪದ ಮೇಲೆ ಹೋಗಿ ಅದನ್ನು ತಂದು ಅದೇ ಜಾಗದಲ್ಲಿ ಇಡುತ್ತಿದ್ದರಂತೆ. ಅಂತೆಯೇ ಆ ಕುಟುಂಬ ಇವತ್ತಿಗೂ ಈ ಗಣಪತಿಯ ಸನ್ನಿಧಿಯಲ್ಲಿ ಸದಾಕಾಲ ತಮ್ಮ ಸೇವೆಯನ್ನು ಸಲ್ಲಿಸುತ್ತಲೇ ಬಂದಿದೆ.
ಪ್ರತಿ ವರ್ಷ ಮಾಘ ಶುದ್ಧ ಚೌತಿಯಂದು ಇಲ್ಲಿ ಹವನ, ಜಾತ್ರೆ ನಡೆಯುತ್ತದೆ. ಸಾವಿರಾರು ಭಕ್ತರು ಆಗಮಿಸಿ ಗಣಪತಿಯ ಕೃಪೆಗೆ ಪಾತ್ರರಾಗುತ್ತಾರೆ.
ಗಣೇಶ ಪಾಲ್ ದೇವಸ್ಥಾನಕ್ಕೆ ಅನೇಕ ಭಕ್ತರು ನಾನಾ ತರಹದ ಹರಕೆಯನ್ನು ಹೊತ್ತುಕೊಂಡು ಇಷ್ಟಾರ್ಥ ನೆರವೇರಿದ ಮೇಲೆ ಬಂದು ಹರಕೆಯನ್ನು ತೀರಿಸಿಕೊಳ್ಳುತ್ತಾರೆ. ಇಲ್ಲಿ ಮದುವೆ, ಮುಂಜಿ ಮುಂತಾದ ಮಂಗಳಕಾರ್ಯಗಳನ್ನೂ ಮಾಡುತ್ತಾರೆ. ಸುಮಾರು ಮಾರ್ಚ್ ತಿಂಗಳಿಂದ ಮೇ ತಿಂಗಳವರೆಗೂ, ಪ್ರತಿದಿನ ಒಂದಿಲ್ಲೊಂದು ಮಂಗಳ ಕಾರ್ಯ ನಡೆಯುತ್ತದೆ. ಗಣಪತಿ ಕಟ್ಟೆ ಮದ್ಯದಲ್ಲಿ , ಹೋಮ, ಹವನ ಇತ್ಯಾದಿಗಳನ್ನು ಮಾಡಲು ಜಾಗದ ವ್ಯವಸ್ಥೆ ಇದೆ. ಸುತ್ತಲೂ ಮರಳಿನ ಸಮತಟ್ಟಾದ ಜಾಗವಿದ್ದು, ಸುಮಾರು ನಾಲ್ಕು- ಐದು ಸಾವಿರ ಜನರು ಸೇರಿದರೂ ಜಾಗದ ಕೊರತೆಯಾಗುವುದಿಲ್ಲ. ವಿಶಾಲವಾದ ಅಡುಗೆ ಮನೆ, ಅಡುಗೆ ಮಾಡಲು ಮಣ್ಣಿನ ಒಲೆ, ಬೀಸುಕಲ್ಲುಗಳು, ನೀರಿನ ವ್ಯವಸ್ಥೆ ಎಲ್ಲವೂ ಇದೆ. ಬೇಸಿಗೆಯಲ್ಲಿ ಚಪ್ಪರವನ್ನು ಹಾಕಿ ಮಲಗುವ ಕೋಣೆ, ಊಟದ ಕೋಣೆ ಎಲ್ಲವನ್ನು ಊರಿನ ಜನರು ತಯಾರು ಮಾಡಿ ಇಡುತ್ತಾರೆ. ಇಲ್ಲಿ ಯಾರು ಬೇಕಾದರೂ ಬಂದು ಪೂಜೆ ಮಾಡಿ ಹೋಗಬಹುದು.
ಮಳೆ ಕಡಿಮೆ ಬಂದರೆ ಅಥವಾ ಕಾಲಕ್ಕೆ ಸರಿಯಾಗಿ ಮಳೆ ಶುರುವಾಗದೆ ಇದ್ದರೆ ಇಲ್ಲಿ ಪರ್ಜನ್ಯವನ್ನು ಮಾಡುತ್ತಾರೆ. ಅಂದರೆ ಗಣಪತಿಯ ಸುತ್ತಲೂ ಹರಿಯುವ ನೀರನ್ನು ಬಿಂದಿಗೆಯಲ್ಲಿ ತಂದು ದೇವರಿಗೆ ಅಭಿಷೇಕ ಮಾಡುತ್ತಾರೆ. ಅಭಿಷೇಕ ಮಾಡಿದ ನೀರು ತಿರುಗಿ ಹೊಳೆಗೆ ಹರಿದು ಸೇರಿದಾಗ ಸಾಕಷ್ಟು ಮಳೆಯಾಗುತ್ತದೆ ಎಂದು ಮೊದಲಿನಿಂದಲೂ ಇಲ್ಲಿನ ಭಕ್ತರು ನಂಬಿದ್ದಾರೆ. ಅನೇಕರು ಮಕ್ಕಳಿಗೆ ಮದುವೆ ಆಗದಿದ್ದರೆ ಗಣಪತಿಯ ಸನ್ನಿದಿಯಲ್ಲಿ ಮದುವೆಮಾಡಿ ಕೊಡುತ್ತೇವೆ ಎಂಬ ಹರಕೆಯನ್ನು ಹೊತ್ತು ಕೊಳ್ಳುತ್ತಾರೆ. ನಂತರ ಅಲ್ಲಿಯೇ ಮದುವೆ ಮಾಡುತ್ತಾರೆ.
ಇಲ್ಲಿ ವರ್ಷದಲ್ಲಿ ಆರು ತಿಂಗಳ ಕಾಲ ಅಂದರೆ ನವೆಂಬರ್ ಇಂದ ಮೇ ವರೆಗೆ ದಿನನಿತ್ಯ ದೇವರ ದರ್ಶನ ಹಾಗೂ ಪೂಜೆ ನಡೆಯುತ್ತದೆ.[೯] ಮಳೆಗಾಲದಲ್ಲಿ ಗಣಪತಿ ಮುಳುಗುವಷ್ಟು ಸುತ್ತಲೂ ನೀರು ತುಂಬಿರುವುದರಿಂದ, ಆರು ತಿಂಗಳು ಗಣಪತಿಯ ಹತ್ತಿರ ಹೋಗಿ ಯಾವುದೇ ಪೂಜೆ ಮಾಡಲು ಸಾಧ್ಯವಾಗುವುದಿಲ್ಲ. ಗಣೇಶ್‌ಪಾಲ್ ಪರಿಸರದ ನಡುವೆ ಇರುವುದರಿಂದ ಗುಡ್ದಚಾರಣ ಮಾಡುವವರು ಮತ್ತು ಪರಿಸರ ಸ್ನೇಹಿಗಳು ಆಯ್ಕೆ ಮಾಡಲು ಉತ್ತಮ ಜಾಗವಾಗಿದೆ.
ಚಿತ್ರೀಕರಣದ ಸ್ಥಳ
ಬದಲಾಯಿಸಿಇಲ್ಲಿ ಹಲವಾರು ಕನ್ನಡ ಚಲನಚಿತ್ರಗಳ ಚಿತ್ರೀಕರಣವೂ ಆಗಿದೆ.[೧೦]
ಪ್ರಯಾಣ
ಬದಲಾಯಿಸಿಶಿರಸಿಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲೂ ಪ್ರಯಾಣ ಮಾಡಬಹುದಾಗಿದೆ ಮತ್ತು ಶಿರಸಿಯಿಂದ ಬೆಳಿಗ್ಗೆ ಮತ್ತು ಸಾಯಂಕಾಲ ಎರಡು ಬಸ್ಸುಗಳು ಇವೆ. ಅದಲ್ಲದೆ ಸ್ವಂತ ವಾಹನದಲ್ಲೂ ಕೂಡ ಹೋಗಬಹುದು. ಶಿರಸಿ-ಯೆಲ್ಲಾಪುರದ ಕಡೆಯಿಂದಲೂ ಗಣೇಶಪಾಲ್‌ಗೆ ಬರಬಹುದಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ https://kannada.news18.com/news/uttara-kannada/shri-holedande-ganesh-pal-temple-sirsi-history-location-in-banks-of-shalmala-river-1021946.html
- ↑ https://kannada.news18.com/news/uttara-kannada/shri-holedande-ganesh-pal-temple-sirsi-history-location-in-banks-of-shalmala-river-1021946.html
- ↑ https://kannada.news18.com/news/uttara-kannada/shri-holedande-ganesh-pal-temple-sirsi-history-location-in-banks-of-shalmala-river-1021946.html
- ↑ https://www.tripadvisor.in/Attraction_Review-g2288612-d8129452-Reviews-Ganesh_Pal-Yellapur_Uttara_Kannada_District_Karnataka.html