ಖುಲ್ನಾ ಬಾಂಗ್ಲಾದೇಶದ ಒಂದು ನಗರ. ಖುಲ್ನಾ ವಿಭಾಗದ ಮತ್ತು ಜಿಲ್ಲೆಯ ಮುಖ್ಯ ಪಟ್ಟಣ. ಖುಲ್ನಾ ಢಾಕಾ ಮತ್ತು ಚಿತ್ತಗಾಂಗ್ ನಂತರ ಬಾಂಗ್ಲಾದೇಶದ ಮೂರನೇ ಅತಿ ದೊಡ್ಡ ನಗರವಾಗಿದೆ.[] ಭೈರಬ್ ನದಿಯ ದಂಡೆಯ ಮೇಲಿದೆ. ಇದೊಂದು ಮುಖ್ಯ ನದಿ ಬಂದರು, ವ್ಯಾಪಾರಕೇಂದ್ರ. ಇಲ್ಲಿಂದ ಜೆಸ್ಸೂರಿನ ಮುಖಾಂತರ ಭಾರತದ ಕಲ್ಕತ್ತಕ್ಕೆ ರೈಲ್ವೆ ಮತ್ತು ರಸ್ತೆ ಸಂಪರ್ಕವಿದೆ. ಜೆಸ್ಸೂರ್-ದರ್ಶನ ರೈಲ್ವೆಯ ಒಂದು ಮುಖ್ಯ ನಿಲ್ದಾಣವಾದ ಖುಲ್ನಾಗೂ, ಬಾಂಗ್ಲಾದೇಶದ ಇತರ ಮುಖ್ಯ ಸ್ಥಳಗಳಿಗೂ ಭೂಜಲ ಸಾರಿಗೆಮಾರ್ಗಗಳಿವೆ. ಸುಮಾರು 3 ಮೈ. ದಕ್ಷಿಣಕ್ಕೆ ಕಾಜಿಬಾಚಾ ನದಿಯ ಮೇಲೆ ನಿರ್ಮಾಣವಾಗಿರುವ ನೌಕಾಂಗಣ, 18 ಮೈ. ದಕ್ಷಿಣಕ್ಕೆ ಹೊಸದಾಗಿ ನಿರ್ಮಿತವಾದ ಚಲ್ನಾ ಬಂದರು[]-ಇವುಗಳಿಂದಾಗಿ ಖುಲ್ನಾದ ಜಲಸಾರಿಗೆ ವಿಶೇಷವಾಗಿ ವರ್ಧಿಸಿದೆ. ಖುಲ್ನಾ ಒಂದು ಮುಖ್ಯ ಕೈಗಾರಿಕಾ ಕೇಂದ್ರ ಕೂಡ ಹೌದು. ಸುಂದರಬನಗಳ ಅರಣ್ಯೋತ್ಪನ್ನವನ್ನಾಧರಿಸಿದ ಬೆಂಕಿಕಡ್ಡಿ ಕಾರ್ಖಾನೆಗಳೂ, ಹತ್ತಿ, ಸೆಣಬು ಮತ್ತು ಎಣ್ಣೆಗಿರಣಿಗಳೂ ಇಲ್ಲಿವೆ. ಪಾಕಿಸ್ತಾನದಿಂದ ಬಿಡುಗಡೆ ಹೊಂದಲು ಬಾಂಗ್ಲಾದೇಶ ಹೂಡಿದ ಹೋರಾಟದಲ್ಲಿ ಪ್ರಧಾನ ಮಂತ್ರಿ ಪಾತ್ರ ವಹಿಸಿದ ನಗರಗಳಲ್ಲಿ ಖುಲ್ನಾ ಒಂದು. ಜನಸಂಖ್ಯೆ 884,445 (2022).

ಖುಲ್ನಾ ಶಿಲ್ಪಶಾಸ್ತ್ರ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿನ ಒಂದು ಸ್ಮಾರಕ

ಖುಲ್ನಾ ಜಿಲ್ಲೆ

ಬದಲಾಯಿಸಿ

ಖುಲ್ನಾ ಜಿಲ್ಲೆಯ ವಿಸ್ತೀರ್ಣ 1,696.71 ಚ. ಮೈ. ಜನಸಂಖ್ಯೆ 2,613,385 (2022).[] ಜೆಸ್ಸೂರಿನಿಂದ ಪ್ರತ್ಯೇಕಿಸಿ ಈ ಜಿಲ್ಲೆಯನ್ನು ರಚಿಸಲಾದ್ದು 1882ರಲ್ಲಿ. ಇದು ಮೆಕ್ಕಲು ಮಣ್ಣಿನಿಂದಾಗಿರುವ ಪ್ರದೇಶ. ಇಲ್ಲಿ ಅನೇಕ ನದಿಗಳು ಹರಿಯುತ್ತವೆ. ಜಿಲ್ಲೆಯ ವಾಯುವ್ಯ ಭಾಗ ಉಳಿದ ಪ್ರದೇಶಕ್ಕಿಂತ ಎತ್ತರವಾಗಿದೆ. ಆಗ್ನೇಯ ಭಾಗ ತಗ್ಗು, ಜವುಗು; ಸುಂದರಬನಗಳಿಂದ ಕೂಡಿದೆ. ಇಲ್ಲಿ ಬೇಸಾಯ ಅಸಾಧ್ಯ; ಜನರಿಲ್ಲ. ಅಕ್ಕಿ, ಎಣ್ಣೆಬೀಜ, ಸೆಣಬು ಇಲ್ಲಿಯ ಮುಖ್ಯ ಬೆಳೆಗಳು. ನೀರಾವರಿ ಸೌಲಭ್ಯ ವಿಸ್ತರಿಸುತ್ತಿದೆ.

ಖುಲ್ನಾ ವಿಭಾಗ

ಬದಲಾಯಿಸಿ

ಖುಲ್ನಾ ವಿಭಾಗದ ವಿಸ್ತೀರ್ಣ 8,604 ಚ. ಮೈ. ಜನಸಂಖ್ಯೆ 17,416,645 (2022).[] ಖುಲ್ನಾ, ಜೆಸ್ಸೂರ್, ಕುಷ್ಟಿಯ ಇವು ಈ ವಿಭಾಗದಲ್ಲಿರುವ ಜಿಲ್ಲೆಗಳು. ೧೯೯೩ರಲ್ಲಿ ಖುಲ್ನಾ ವಿಭಾಗದಿಂದ ಬಾರಿಸಾಲ್ ವಿಭಾಗವನ್ನು ರಚಿಸಲಾಯಿತು.

ಉಲ್ಲೇಖಗಳು

ಬದಲಾಯಿಸಿ
  1. "Bangladesh–10 Largest Cities". Archived from the original on 13 February 2019. Retrieved 10 September 2019.
  2. "Mongla Port". Banglapedia. Retrieved 2017-07-24.
  3. Population and Housing Census 2022 National Report (PDF). Vol. 1. Bangladesh Bureau of Statistics. November 2023.
  4. National Report (PDF). Population and Housing Census 2022. Vol. 1. Dhaka: Bangladesh Bureau of Statistics. November 2023. p. 386. ISBN 978-9844752016.


ಹೊರಗಿನ ಕೊಂಡಿಗಳು

ಬದಲಾಯಿಸಿ


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಖುಲ್ನಾ&oldid=1258487" ಇಂದ ಪಡೆಯಲ್ಪಟ್ಟಿದೆ