ಶಿವರಾಮ ಕಾರಂತ

ಭಾರತೀಯ ಸಾಹಿತಿ
(ಕೋಟ ಶಿವರಾಮ ಕಾರಂತ ಇಂದ ಪುನರ್ನಿರ್ದೇಶಿತ)

ಕೋಟಾ ಶಿವರಾಮ ಕಾರಂತ (ಅಕ್ಟೋಬರ್ ೧೦, ೧೯೦೨-ಸೆಪ್ಟೆಂಬರ್ ೧೨, ೧೯೯೭)- "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೆಯೇ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ.[][]

ಶಿವರಾಮ ಕಾರಂತ
ಶಿವರಾಮ ಕಾರಂತ
ಜನನಅಕ್ಟೋಬರ್ ೧೦, ೧೯೦೨*
ಸಾಲಿಗ್ರಾಮ, ಉಡುಪಿ ಜಿಲ್ಲೆ
ಮರಣಡಿಸೆಂಬರ್ ೯,೧೯೯೭
ಮಣಿಪಾಲ, ಉಡುಪಿ
ವೃತ್ತಿಲೇಖಕ
ರಾಷ್ಟ್ರೀಯತೆಭಾರತೀಯ
ಕಾಲ(ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
ಪ್ರಕಾರ/ಶೈಲಿಕಥೆ, ಕವನ, ಕಾದಂಬರಿ, ನಾಟಕ, ಯಕ್ಷಗಾನ
ವಿಷಯಕರ್ನಾಟಕ, ಜೀವನ
ಸಾಹಿತ್ಯ ಚಳುವಳಿನವೋದಯ

ಪ್ರಭಾವಿತರು
  • ಪೂರ್ಣಚಂದ್ರ ತೇಜಸ್ವಿ

ಸಹಿ

shivaramkarantha.in
ಗೊಂಡಾರಣ್ಯ
ಚೋಮನ ದುಡಿ

ಜೀವನ

  • ಜ್ಞಾನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ ೧೯೦೨, ಅಕ್ಟೋಬರ್ ೧೦ರಂದು. ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿಯಾಗಿ ಬಾಳಿ, ತಮ್ಮ ಜೀವಿತಾವಧಿಯಲ್ಲಿ ಸುಮಾರು ೪೨೭ ಪುಸ್ತಕಗಳನ್ನು ರಚಿಸಿದರು. ಅವುಗಳಲ್ಲಿ ಕಾದಂಬರಿಗಳು ೪೭. ತಮ್ಮ ೯೬ನೆಯ ವಯಸ್ಸಿನಲ್ಲೂ ಹಕ್ಕಿಗಳ ಕುರಿತು ಒಂದು ಪುಸ್ತಕವನ್ನು ಬರೆದಿದ್ದು, ಇದು ವಿಶ್ವ ದಾಖಲೆಗೆ ಅರ್ಹವಾಗಿರುವ ಒಂದು ಸಾಧನೆ ಎನ್ನಬಹುದು. ಸಾಹಿತಿಯಾಗಿ ಶಿವರಾಮ ಕಾರಂತರು ಪ್ರಸಿದ್ಧಿಯಾಗಿರುವಂತೆ, ಇತರ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡಿದವರು. ಕರ್ನಾಟಕದ ಪ್ರಮುಖ ಕಲೆಯಾದ ಯಕ್ಷಗಾನದ ಉಳಿವಿಗೆ ಪ್ರಯತ್ನಿಸಿ, ಅದರಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದರು. ತಾವೇ ಸ್ವತಃ ನೃತ್ಯವನ್ನು ಕಲಿತು, ಬ್ಯಾಲೆಯಲ್ಲೂ ಗಂಭೀರ ಪ್ರಯೋಗ ಮತ್ತು ಪ್ರಯತ್ನ ಮಾಡಿದ್ದರು.
  • ಯುವಕರಾಗಿದ್ದಾಗ, ಸಮಾಜ ಸುಧಾರಣೆಗೂ ಕೈ ಹಾಕಿ, ವೇಶ್ಯಾ ವಿವಾಹಗಳನ್ನು ಮಾಡಿಸಿದ್ದರು! ಯಕ್ಷಗಾನ ತಂಡಗಳನ್ನು ಕಟ್ಟಿಕೊಂಡು ದೇಶ ವಿದೇಶಗಳಲ್ಲಿ ಈ ಕಲೆಯನ್ನು ಪ್ರಚುರಪಡಿಸಲು ಯತ್ನಿಸಿದರು. ಮಕ್ಕಳಲ್ಲಿದ್ದ ಪ್ರತಿಭೆ ಅರಳಿಸಲು ಪುತ್ತೂರಿನಲ್ಲಿ ಬಾಲವನ ಎಂಬ ಅಸಂಪ್ರದಾಯಿಕ ಶೈಕ್ಷಣಿಕ ಕೇಂದ್ರವನ್ನು ತೆರೆದಿದ್ದರು. ಪುತ್ತೂರಿನಲ್ಲಿ ಒಂದು ಮುದ್ರಣಾಲಯ ತೆರೆದು, ತಮ್ಮ ಪುಸ್ತಕಗಳನ್ನು ಮುದ್ರಿಸುತ್ತಿದ್ದರಲ್ಲದೆ, ತಮ್ಮ ಹಲವು ಕಾದಂಬರಿಗಳಿಗೆ ತಾವೇ ಮುಖಪುಟದ ಚಿತ್ರಗಳನ್ನೂ ಬರೆದು ಮುದ್ರಿಸಿದ ಬಹುಮುಖ ಪ್ರತಿಭೆ ಇವರದ್ದು! ಬಹುಶಃ ಮುಖಪುಟ ಚಿತ್ರ ಬರೆದು ಪ್ರಕಟಿಸಿದ ಕನ್ನಡದ ಪ್ರಥಮ ಪ್ರಮುಖ ಸಾಹಿತಿ ಇವರೊಬ್ಬರೇ.
  • ನಿರಂತರ ಪ್ರಯೋಗಶೀಲರಾಗಿದ್ದ ಕೋಟ ಶಿವರಾಮ ಕಾರಂತ ಅವರು ಕನ್ನಡ ಚಿತ್ರರಂಗದಲ್ಲಿ ಕೂಡ ತಮ್ಮ ಪ್ರಯೋಗವನ್ನು ಆರಂಭ ಮಾಡಿದ್ದು. ಮೂಕಿ ಚಿತ್ರ ನಿರ್ಮಾಣಕ್ಕೆ ಕೈಹಾಕುವ ಮೂಲಕ. ಹರಿಜನರ ಬದುಕನ್ನು ಆಧರಿಸಿದ್ದ ಡೊಮಿಂಗೋ (೧೯೩೦) ಚಿತ್ರವನ್ನು ತಾವೇ ಚಿತ್ರೀಕರಿಸಿ, ಅಭಿನಯಿಸಿ ನಿರ್ದೇಶಿಸಿದ್ದರು. ಅನಂತರ ಭೂತರಾಜ್ಯ (೧೯೩೧) ಎಂಬ ಮೂಕಿ ಚಿತ್ರಗಳನ್ನು ಸಹ ನಿರ್ಮಿಸಿದರು.[]

ಪರಿಸರ ಹೋರಾಟ

ಕಾರಂತರ ಕಾದಂಬರಿಗಳುದ್ದಕ್ಕೂ ಪರಿಸರದ ಚಿತ್ರಣ ಗಾಢವಾಗಿದೆ. ನಿಜ ಜೀವನದಲ್ಲೂ ಪರಿಸರದ ಉಳಿವಿಗೆ ಹೋರಾಡಿದ ಕಾರಂತರು, ಕೈಗಾ ಅಣುವಿದ್ಯುತ್ ಸ್ಥಾವರದ ವಿರುದ್ಧ ಹೋರಾಟಕ್ಕೆ ನಾಯಕತ್ವ ವಹಿಸಿದ್ದು ಪ್ರಖ್ಯಾತವಾಗಿದೆ. ಮಕ್ಕಳಿಂದ, ವಯೋವೃದ್ಧರವರೆಗೆ ಸಾಹಿತ್ಯ ಕೃಷಿ ಮಾಡಿದ, ಚಿಂತಿಸಿದ ಕಾರಂತರು ಇಡೀ ದೇಶದ ದೊಡ್ಡ ನಿಧಿಯಾಗಿದ್ದರು. ಕರ್ನಾಟಕದ ಮೂಲೆ ಮೂಲೆ, ಭಾರತದ ಬಹುತೇಕ ಸ್ಥಳಗಳು, ವಿದೇಶಗಳ ಸಾಂಸ್ಕೃತಿಕ ಕೇಂದ್ರಗಳಿಗೆ ಸುತ್ತುತ್ತ, ತಮ್ಮ ಕೊನೆಗಾಲದವರೆಗೂ ಪ್ರವಾಸ ಮಾಡಿದ್ದರು. ವಯಸ್ಸಿನ ದಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದ ಪ್ರೀತಿಯ "ಕಾರಂತಜ್ಜ" ಆಗಿದ್ದರು. ವಿಶ್ವ ಪ್ರೇಮಿ ಹಾಗೂ ಮಹಾ ಮಾನವತಾವಾದಿ ಆಗಿದ್ದ ಕಾರಂತರು ಜ್ಞಾನ ಕ್ಷಿತಿಜವನ್ನು ಎಂಟು ದಿಕ್ಕಿಗೆ ಚಾಚಿದ ಅಕ್ಷರ ಪ್ರೇಮಿಯಾಗಿದ್ದರು.

ಸಾಲಿಗ್ರಾಮದಲ್ಲಿ ಸ್ಮಾರಕ

ಡಾ. ಕಾರಂತರ ಹುಟ್ಟೂರಾದ ಸಾಲಿಗ್ರಾಮದಲ್ಲಿ (ಉಡುಪಿ ಜಿಲ್ಲೆ), ಕಾರಂತ ಸ್ಮೃತಿಚಿತ್ರ ಶಾಲೆ ಎಂಬ ಸುಂದರ ಬಹುಮಹಡಿ ಕಟ್ಟಡದಲ್ಲಿ, ಕಾರಂತರ ಕುರಿತಾದ ಹಲವಾರು ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ಅವರ ಕಾದಂಬರಿಗಳ ಆಶಯದ ದೊಡ್ಡ ದೊಡ್ಡ ಭಿತ್ತಿ ಚಿತ್ರಗಳು, ಯಕ್ಷಗಾನದ ದಿರಿಸುಗಳು, ಕಾದಂಬರಿಗಳ ಹಳೆಯ ಪ್ರತಿಗಳು, ಕಾರಂತರು ಬರೆದ ಚಿತ್ರಗಳು, ಅವರು ಉಪಯೋಗಿಸುತ್ತಿದ್ದ ಲೇಖನಿ ಮತ್ತಿತರ ವಸ್ತುಗಳನ್ನೊಂಡ ಸುಂದರ ವಸ್ತು ಸಂಗ್ರಹಾಲಯ ಇದು. ಸಾಲಿಗ್ರಾಮದ ಪೇಟೆಯಲ್ಲಿ ಹೆದ್ದಾರಿಯ ಬದಿಯಲ್ಲೇ ಇರುವ ಈ ಕಟ್ಟಡವನ್ನು ಕಂಡರೆ, ಕಾರಂತರ ಬಗ್ಗೆ ಅಭಿಮಾನ ಉಕ್ಕುತ್ತದೆ. ಮಾಲಿನಿಮಲ್ಯ ಅವರು ನೋಡಿಕೊಳ್ಳುತ್ತಿರುವ ಈ ಸಂಗ್ರಹಾಲಯವನ್ನು ನೋಡಲು ಸದಾ ಅವಕಾಶವಿದೆ.

ಬಾಲ್ಯ,ವಿದ್ಯಾಭ್ಯಾಸ

ಕಡಲ ತೀರದ ಭಾರ್ಗವ ಎಂದು ಪ್ರಖ್ಯಾತಿಯನ್ನು ಪಡೆದ ಶಿವರಾಮ ಕಾರಂತರು ಉಡುಪಿ ಜಿಲ್ಲೆಯ ಕೋಟ ಎಂಬಲ್ಲಿ ೧೯೦೨ರ ಅಕ್ಟೋಬರ್ ೧೦ರಂದು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಶೇಷ ಕಾರಂತರು ,ತಾಯಿ ಲಕ್ಶ್ಮೀ ಕಾರಂತರು. ೯ ಮಕ್ಕಳ ಕುಟುಂಬದಲ್ಲಿ ಶಿವರಾಮ ಕಾರಂತರು ೪ನೇಯ ಮಗ. ಶಿವರಾಮ ಕಾರಂತರ ಅಣ್ಣ ಮದರಾಸ ಸರಕಾರದಲ್ಲಿ ಸಚಿವರಾಗಿದ್ದರು. ಇನ್ನೊಬ್ಬ ಅಣ್ಣ ವಾಸುದೇವ ಕಾರಂತರು ಲೇಖಕರೂ ,ಆದ್ಯಾತ್ಮ ವಿಷಯಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದಾರೆ.
ಶೇಷ ಕಾರಂತರು ಶಾಲಾ ಶಿಕ್ಷಕರಾಗಿದ್ದು ದೊಡ್ದ ಕುಟುಂಬವನ್ನು ಸಾಕಲು ಅಸಾಧ್ಯವಾದಾಗ ಕೆಲಸ ಬಿಟ್ಟು ಜವಳಿ ಅಂಗಡಿ ಆರಂಭಿಸಿದರು.ಇಂಗ್ಲೀಷರನ್ನು ಕಂಡರೆ ಅಸಹ್ಯಪಡುತಿದ್ದ ಕಾಲದಲ್ಲಿ ಶೇಷರು ಅವರ ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಕಳುಹಿಸಿದರು. ಕುಂದಾಪುರದ ಶಾಲೆಯಲ್ಲಿ ೧೯೨೦ ರಲ್ಲಿ ಶಿವರಾಮ ಕಾರಂತರು ತಮ್ಮ ಎಸ್.ಎಸ್.ಎಲ್.ಸಿ ಪರೀಕ್ಶೆಯನ್ನು ಬರೆದು ಮುಗಿಸಿದರು. ತಮ್ಮ ಶಾಲೆಯಲ್ಲಿ ರಂಗರಾಯರು ಕಾರಂತರ ಮೊದಲ ಗುರುಗಳಾಗಿ ಕಾರಂತರಿಗೆ ಬೆಂಬಲ ನೀಡಿದರು. ಮುದ್ದಣ ಕವಿಯ ಗುರುವಾಗಿದ್ದ ಮಳಲಿ ಸುಬ್ಬರಾಯರು ಸಹ ಶಿವರಾಮ ಕಾರಂತರಿಗೆ ಗುರುವಾಗಿದ್ದರು. ಮಳಲಿ ಸುಬ್ಬರಾಯರು ಮೂಲತ: ಯಕ್ಷಗಾನ ರಚನೆ ಮಾಡಬಲ್ಲವರಾಗಿದ್ದು ಯಕ್ಷಗಾನದ ಬಗ್ಗೆ ಶಿವರಾಮರಿಗೆ ಆಸಕ್ತಿ ಮೂಡಲು ಮುಖ್ಯ ಕಾರಣರಾದರು.
ಶಿವರಾಮ ಕಾರಂತರಿಗೆ ಪರಿಸರವೆಂದರೆ ಬಹಳ ಪ್ರೀತಿ. ಅವರು ಬಾಲ್ಯದಲ್ಲಿ ಕೆರೆಗಳನ್ನು ಏರಿ,ಸಮುದ್ರತೀರ,ಮರದ ನೆರಳಿನ ಪ್ರದೇಶಗಳಲ್ಲಿ ಸಮಯವನ್ನು ಕಳೆಯುತ್ತಿದ್ದರು. ಆಧುನಿಕ ವಿದ್ಯಾಭ್ಯಾಸ ಕೇವಲ ಹೊಟ್ಟೆಪಾಡಿಗಾಗಿ ಎನ್ನುವುದು ಅವರ ಅಭಿಪ್ರಾಯ. ನಿಜವಾದ ವ್ಯಕ್ತಿತ್ವದ ವಿಕಸನವಾದರೆ ಅದೇ ನಿಜವಾದ ಶಿಕ್ಷಣವೆನ್ನುವುದು ಅವರ ಅಭಿಪ್ರಾಯವಾಗಿತ್ತು. ೧೯೨೦ರಲ್ಲಿ ಗಾಂಧೀಜಿಯವರು ಸ್ವತಂತ್ರ ಹೋರಾಟದಲ್ಲಿ ಶಾಲಾ ಮಕ್ಕಳು ಬಾಗವಹಿಸಬೇಕೆಂದು ಕರೆಕೊಟ್ಟಾಗ ಕಾರಂತರೂ ಚಳವಳಿಯಲ್ಲಿ ಭಾಗವಹಿಸಿದ್ದರು.
ಕಾರಂತರು ಅಪ್ಪ ಹಾಕಿದ ಆಲದ ಮರಕ್ಕೆ ಎಂದೂ ಜೋತು ಬಿದ್ದವರಲ್ಲ. ಅವರ ಇಡೀ ಬದುಕು ಹಲವಾರು ಪ್ರಯೋಗಗಳಿಂದ ಕೂಡಿದೆ. ಅನುಭವ ಬೆಳೆದಂತೆಲ್ಲ ಅವರು ಹಲವು ಬಾರಿ ತಮ್ಮ ಹಿಂದಿನ ನಿಲುವುಗಳನ್ನು ಬದಲಾಯಿಸಿಕೊಂಡಿದ್ದಾರೆ. ಮನುಷ್ಯ ಎಷ್ಟು ಕಲಿತರೂ ಕಲಿಯಬೇಕಾದದ್ದೇ ಬಹಳ ಎಂದು ನಂಬಿರುವ ಕಾರಂತರಿಗೆ ಈ ಬದುಕೇ ಒಂದು ಪಾಠಶಾಲೆಯಾಗಿದೆ. ಚಿಕ್ಕಂದಿನಲ್ಲೇ ಶಾಲೆ ಬಿಟ್ಟು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಅವರು ಮುಂದೆ ಎಲ್ಲ ಜ್ಞಾನಶಾಖೆಗಳಲ್ಲೂ ಆಸಕ್ತಿ ಬೆಳೆಸಿಕೊಂಡದ್ದು, ಸ್ವಂತವಾಗಿ ಕಲಿತದ್ದು, ಕಲಿತದ್ದನ್ನು ಸರಳವಾದ ಕನ್ನಡದಲ್ಲಿ ಮಾತನಾಡಿದ್ದು, ಬರೆದದ್ದು ಈಗ ದಾಖಲೆಯಾಗಿದೆ. ಸಹಜವಾಗಿಯೇ ಅವರಿಗೆ ಹಲವಾರು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟುಗಳು, ಜ್ಞಾನಪೀಠ ಪ್ರಶಸ್ತಿಯೂ ಸೇರಿದಂತೆ ಹಲವು ಹತ್ತು ಪ್ರಶಸ್ತಿಗಳು ಲಭ್ಯವಾಗಿವೆ. ಅಸಂಖ್ಯ ಗೋಷ್ಠಿಗಳ ,ಸಮ್ಮೇಳನಗಳ ಅಧ್ಯಕ್ಷ ಪಟ್ಟಗಳು, ಸನ್ಮಾನಗಳು ಕಾರಂತರನ್ನು ಹುಡುಕಿಕೊಂಡು ಬಂದೆವೆ. ತುರ್ತುಪರಿಸ್ಥಿತಿಯಲ್ಲಿ ಇಂದಿರಾ ಸರ್ವಾಧಿಕಾರವನ್ನು ಧಿಕ್ಕರಿಸಿ ಕಾರಂತರು ಪದ್ಮಭೂಷಣ ಪ್ರಶಸ್ತಿಯನ್ನು ಕೇಂದ್ರ ಸರಕಾರಕ್ಕೆ ವಾಪಸು ಮಾಡಿದ್ದು ಕೂಡ ಇತಿಹಾಸದಲ್ಲಿ ಸೇರಿಹೋಗಿದೆ.
ಸಾಹಿತ್ಯ, ರಂಗಭೂಮಿ, ಚಲನಚಿತ್ರ, ವಿಜ್ಞಾನ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಭಾಷೆ, ಸಂಸ್ಕøತಿ ಹೀಗೆ ಪಟ್ಟಿ ಬೆಳೆಯುತ್ತದೆ. ಕಾರಂತರು ‘ ಬಾಲ ಪ್ರಪಂಚ’, ‘ವಿಜ್ಞಾನ ಪ್ರಪಂಚ’ಗಳನ್ನು ಬರೆದಿದ್ದಾರೆ. ಸಿರಿಗನ್ನಡ ಅರ್ಥಕೋಶವನ್ನು ತಯಾರಿಸಿದ್ದಾರೆ. ಯಕ್ಷಗಾನ ಕುರಿತ ಪುಸ್ತಕಗಳನ್ನು ಬರೆದಿದ್ದಾರೆ. ಸ್ವತಃ ಹಲವು ಪ್ರಯೋಗಗಳನ್ನು ಮಾಡಿದ್ದಾರೆ. ಶಿಲ್ಪಕಲೆ, ಚಿತ್ರಕಲೆ ಕುರಿತ ಪುಸ್ತಕಗಳನ್ನು ಬರೆದಿದ್ದಾರೆ, ಸ್ವತಃ ಚಿತ್ರಗಳನ್ನು ಬರೆದಿದ್ದಾರೆ. ಚಲನಚಿತ್ರ ನಿರ್ಮಿಸಿದ್ದಾರೆ. ಐವತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ.

ಕೃತಿಗಳು

ಕವನ ಸಂಕಲನಗಳು

  1. ರಾಷ್ಟ್ರಗೀತ ಸುಧಾಕರ
  2. ಸೀಳ್ಗವನಗಳು

ಕಾದಂಬರಿಗಳು

  1. ಅದೇ ಊರು, ಅದೆ ಮರ
  2. ಅಳಿದ ಮೇಲೆ
  3. ಅಂಟಿದ ಅಪರಂಜಿ
  4. ಆಳ, ನಿರಾಳ
  5. ಇದ್ದರೂ ಚಿಂತೆ
  6. ಇನ್ನೊಂದೇ ದಾರಿ
  7. ಇಳೆಯೆಂಬ
  8. ಉಕ್ಕಿದ ನೊರೆ
  9. ಒಡಹುಟ್ಟಿದವರು
  10. ಒಂಟಿ ದನಿ
  11. ಔದಾರ್ಯದ ಉರುಳಲ್ಲಿ
  12. ಕಣ್ಣಿದ್ದೂ ಕಾಣರು
  13. ಕನ್ನಡಿಯಲ್ಲಿ ಕಂಡಾತ
  14. ಕನ್ಯಾಬಲಿ
  15. ಕರುಳಿನ ಕರೆ
  16. ಕೇವಲ ಮನುಷ್ಯರು
  17. ಗೆದ್ದ ದೊಡ್ಡಸ್ತಿಕೆ
  18. ಗೊಂಡಾರಣ್ಯ
  19. ಜಗದೋದ್ಧಾರ ನಾ
  20. ಜಾರುವ ದಾರಿಯಲ್ಲಿ
  21. ದೇವದೂತರು
  22. ಧರ್ಮರಾಯನ ಸಂಸಾರ
  23. ನಷ್ಟ ದಿಗ್ಗಜಗಳು
  24. ನಂಬಿದವರ ನಾಕ, ನರಕ
  25. ನಾವು ಕಟ್ಟಿದ ಸ್ವರ್ಗ
  26. ನಿರ್ಭಾಗ್ಯ ಜನ್ಮ
  27. ಬತ್ತದ ತೊರೆ
  28. ಭೂತ
  29. ಮರಳಿ ಮಣ್ಣಿಗೆ
  30. ಮುಗಿದ ಯುದ್ಧ
  31. ಮೂಜನ್ಮ
  32. ಮೈ ಮನಗಳ ಸುಳಿಯಲ್ಲಿ
  33. ಮೊಗ ಪಡೆದ ಮನ
  34. ವಿಚಿತ್ರ ಕೂಟ
  35. ಶನೀಶ್ವರನ ನೆರಳಿನಲ್ಲಿ
  36. ಸನ್ಯಾಸಿಯ ಬದುಕು
  37. ಸಮೀಕ್ಷೆ
  38. ಸರಸಮ್ಮನ ಸಮಾಧಿ
  39. ಸ್ವಪ್ನದ ಹೊಳೆ
  40. ಹೆತ್ತಳಾ ತಾಯಿ

ಚಲನಚಿತ್ರವಾಗಿರುವ ಕಾದಂಬರಿಗಳು

  1. ಕುಡಿಯರ ಕೂಸು (ಚಲನಚಿತ್ರವಾಗಿದೆ)
  2. ಚಿಗುರಿದ ಕನಸು(ಚಲನಚಿತ್ರವಾಗಿದೆ)
  3. ಚೋಮನ ದುಡಿ(ಚಲನಚಿತ್ರವಾಗಿದೆ)
  4. ಬೆಟ್ಟದ ಜೀವ(ಚಲನಚಿತ್ರವಾಗಿದೆ)
  5. ಮೂಕಜ್ಜಿಯ ಕನಸುಗಳುಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

ನಾಟಕ

  1. ಅವಳಿ ನಾಟಕಗಳು
  2. ಏಕಾಂಕ ನಾಟಕಗಳು
  3. ಐದು ನಾಟಕಗಳು
  4. ಕಟ್ಟೆ ಪುರಾಣ
  5. ಕಠಾರಿ ಭೈರವ
  6. ಕರ್ಣಾರ್ಜುನ
  7. ಕೀಚಕ ಸೈರಂಧ್ರಿ
  8. ಗರ್ಭಗುಡಿ
  9. ಗೀತ ನಾಟಕಗಳು
  10. ಜಂಬದ ಜಾನಕಿ
  11. ಜ್ಯೂಲಿಯಸ್ ಸೀಸರ್
  12. ಡುಮಿಂಗೊ
  13. ದೃಷ್ಟಿ ಸಂಗಮ
  14. ನವೀನ ನಾಟಕಗಳು
  15. ನಾರದ ಗರ್ವಭಂಗ
  16. ಬಿತ್ತಿದ ಬೆಳೆ
  17. ಬೆವರಿಗೆ ಜಯವಾಗಲಿ
  18. ಬೌದ್ಧ ಯಾತ್ರಾ
  19. ಮಂಗಳಾರತಿ
  20. ಮುಕ್ತದ್ವಾರ
  21. ಯಾರೊ ಅಂದರು
  22. ವಿಜಯ
  23. ವಿಜಯ ದಶಮಿ
  24. ಸರಳ ವಿರಳ ನಾಟಕಗಳು
  25. ಸಾವಿರ ಮಿಲಿಯ
  26. ಹಣೆ ಬರಹ
  27. ಹಿರಿಯಕ್ಕನ ಚಾಳಿ
  28. ಹೇಗಾದರೇನು?
  29. ಹೇಮಂತ

ಸಣ್ಣ ಕತೆ

  • ಕವಿಕರ್ಮ
  • ತೆರೆಯ ಮರೆಯಲ್ಲಿ
  • ಹಸಿವು
  • ಹಾವು

ಹರಟೆ/ವಿಡಂಬನೆ

  • ಗ್ನಾನ
  • ಚಿಕ್ಕ ದೊಡ್ಡವರು
  • ದೇಹಜ್ಯೋತಿಗಳು ಮತ್ತು ಪ್ರಾಣಿ ಪ್ರಬಂಧಗಳು
  • ಮೈಗಳ್ಳನ ದಿನಚರಿಯಿಂದ
  • ಮೈಲಿಕಲ್ಲಿನೊಡನೆ ಮಾತುಕತೆಗಳು
  • ಹಳ್ಳಿಯ ಹತ್ತು ಸಮಸ್ತರು

ಪ್ರವಾಸ ಕಥನ

  • ಅಪೂರ್ವ ಪಶ್ಚಿಮ
  • ಅರಸಿಕರಲ್ಲ
  • ಅಬೂವಿನಿಂದ ಬರಾಮಕ್ಕೆ
  • ಪಾತಾಳಕ್ಕೆ ಪಯಣ
  • ಪೂರ್ವದಿಂದ ಅತ್ಯಪೂರ್ವಕ್ಕೆ
  • ಯಕ್ಷರಂಗಕ್ಕಾಗಿ ಪ್ರವಾಸ

ಆತ್ಮಕಥನ

  • ಸ್ಮೃತಿಪಟಲದಿಂದ (೧,೨,೩)
  • ಹುಚ್ಚು ಮನಸ್ಸಿನ ಹತ್ತು ಮುಖಗಳು

ಜೀವನ ಚರಿತ್ರೆ

  • ಕಲಾವಿದ ಕೃಷ್ಣ ಹೆಬ್ಬಾರರು

ಕಲಾಪ್ರಬಂಧ

  • ಕಲೆಯ ದರ್ಶನ
  • ಕರ್ನಾಟಕದಲ್ಲಿ ಚಿತ್ರಕಲೆ
  • ಚಾಲುಕ್ಯ ವಾಸ್ತು ಮತ್ತು ಶಿಲ್ಪ
  • ಚಿತ್ರಶಿಲ್ಪ, ವಾಸ್ತುಕಲೆಗಳು
  • ಜಾನಪದ ಗೀತೆಗಳು
  • ಭಾರತೀಯ ಚಿತ್ರಕಲೆ
  • ಭಾರತೀಯ ಶಿಲ್ಪ
  • ಯಕ್ಷಗಾನ ಬಯಲಾಟ
  • ಸೌಂದರ್ಯ ಪ್ರಜ್ಞೆಯನ್ನು ಬೆಳೆಯಿಸಲು

ವೈಜ್ಞಾನಿಕ

  • ಅದ್ಭುತ ಜಗತ್ತು (೧. ವಿಚಿತ್ರ ಖಗೋಲ, ೨. ನಮ್ಮ ಭೂಖಂಡಗಳು)
  • ಉಷ್ಣವಲಯದ ಆಗ್ನೇಸ್ಯ
  • ಪ್ರಾಣಿ ಪ್ರಪಂಚದ ವಿಸ್ಮಯಗಳು
  • ಮಂಗನ ಕಾಯಿಲೆ
  • ವಿಜ್ಞಾನ ಮತ್ತು ಅಂಧಶೃದ್ಧೆ
  • ವಿಶಾಲ ಸಾಗರಗಳು
  • ಹಿರಿಯ ಕಿರಿಯ ಹಕ್ಕಿಗಳು

ಇತರ

  • ಪ್ರಜಾಪ್ರಭುತ್ವವನ್ನು ಕುರಿತು
  • ಬಾಳ್ವೆಯೇ ಬೆಳಕು
  • ಬಾಳ್ವೆಯೇ ಬೆಳಕು ಅಥವಾ ಜೀವನ ಧರ್ಮ
  • ಮನೋದೇಹಿಯಾದ ಮಾನವ
  • ವಿಚಾರಶೀಲತೆ
  • ವಿಚಾರ ಸಾಹಿತ್ಯ ನಿರ್ಮಾಣ
  • ಸ್ವಾರ್ಥಿ ಮಾನವ

ಸಂಪಾದನೆ

  • ಐರೋಡಿ ಶಿವರಾಮಯ್ಯ ಬದುಕು, ಬರಹ
  • ಕೌಶಿಕ ರಾಮಾಯಣ
  • ಪಂಜೆಯವರ ನೆನಪಿಗಾಗಿ

ವಿಶ್ವಕೋಶ

  • ಕಲಾ ಪ್ರಪಂಚ
  • ಪ್ರಾಣಿ ಪ್ರಪಂಚ
  • ಬಾಲ ಪ್ರಪಂಚ (೧,೨,೩)
  • ವಿಜ್ಞಾನ ಪ್ರಪಂಚ (೧,೨,೩,೪)

ನಿಘಂಟು

  • ಸಿರಿಗನ್ನಡ ಅರ್ಥಕೋಶ

ಅನುವಾದ

  • ಕೀಟನಾಶಕಗಳ ಪಿಡುಗುಗಳು
  • ಕೋಟ ಮಹಾಜಗತ್ತು
  • ಜನತೆಯೂ ಅರಣ್ಯಗಳೂ
  • ನಮ್ಮ ಪರಮಾಣು ಚೈತನ್ಯ—ಉತ್ಪಾದನಾ ಸಾಧನಗಳು
  • ನಮ್ಮ ಶಿಕ್ಷಣ ಪದ್ಧತಿಯ ಸಮಸ್ಯೆಗಳೂ, ಭವಿಷ್ಯವೂ
  • ನಮ್ಮ ಸುತ್ತಲಿನ ಕಡಲು
  • ನಮ್ಮೆಲ್ಲರಿಗೂ ಒಂದೇ ಭವಿಷ್ಯ
  • ಪರಮಾಣು – ಇಂದು ನಾಳೆ
  • ಪಂಚ ಋತು
  • ಬೆಳೆಯುತ್ತಿರುವ ಸಮಸ್ಯೆ
  • ಭಾರತದ ಪರಿಸರ – ದ್ವಿತೀಯ ಸಮಿಕ್ಷೆ
  • ಭಾರತದ ಪರಿಸರದ ಪರಿಸ್ಥಿತಿ – ೧೯೮೨ – ಪ್ರಜೆಯ ದೃಷ್ಟಿಯಲ್ಲಿ
  • ಭಾರತ ವರ್ಷದಲ್ಲಿ ಬ್ರಿಟಿಷರು
  • ಯಾರು ಲಕ್ಷಿಸುವರು?
  • ಶ್ರೀ ರಾಮಕೃಷ್ಣರ ಜೀವನ ಚರಿತೆ

ಮಕ್ಕಳ ಪುಸ್ತಕಗಳು

  • ಅನಾದಿ ಕಾಲದ ಮನುಷ್ಯ
  • ಒಂದೇ ರಾತ್ರಿ ಒಂದೇ ಹಗಲು
  • ಗಜರಾಜ
  • ಗೆದ್ದವರ ಸತ್ಯ
  • ಢಂ ಢಂ ಢೋಲು
  • ನರನೋ ವಾನರನೋ
  • ಮರಿಯಪ್ಪನ ಸಾಹಸಗಳು
  • ಮಂಗನ ಮದುವೆ
  • ಸೂರ್ಯ ಚಂದ್ರ
  • ಹುಲಿರಾಯ
  • ಕನ್ನಡ ನಾಡು ಮತ್ತು ಕನ್ನಡಿಗರ ಪರಂಪರೆಗೆ ಸಂಬಂಧಿಸಿದ ೧೦ ಪುಸ್ತಕಗಳು
  • ಐಬಿಎಚ್, ಮೂಲವಿಜ್ಞಾನ ಪಾಠಮಾಲೆ ಹಾಗು ‘ಇಕೊ’ ದವರಿಗಾಗಿ ಮಾಡಿದ ಅನುವಾದಗಳು : ಸುಮಾರು ೧೩೩
  • ‘ಇಕೊ’ ದವರಿಗಾಗಿ ಮಾಡಿದ ಸಂಪಾದಿತ ಪುಸ್ತಕಗಳು : ೪೨

ಶೈಕ್ಷಣಿಕ ಕೃತಿಗಳು

ಮಕ್ಕಳ ಶಿಕ್ಷಣ

  • ಓದುವ ಆಟ
  • ಗೃಹ ವಿಜ್ಞಾನ (೧,೨,೩)
  • ಚಿತ್ರಮಯ ದಕ್ಷಿಣ ಕನ್ನಡ
  • ಚಿತ್ರಮಯ ದಕ್ಷಿಣ ಕನ್ನಡ – ಅಂದು, ಇಂದು
  • ಚಿತ್ರಮಯ ದಕ್ಷಿಣ ಹಿಂದುಸ್ತಾನ
  • ನಾಗರಿಕತೆಯ ಹೊಸ್ತಿಲಲ್ಲಿ
  • ರಮಣ ತಾತ
  • ಸ್ನೀತಿ (೧,೨,೩)
  • ಸಾಮಾನ್ಯ ವಿಜ್ಞಾನ (೧,೨,೩)
  • ಸಿರಿಗನ್ನಡ ಪಾಠಮಾಲೆ (೧,೨,೩,೪,೫,೬,೭)
  • ಹೂಗನ್ನಡ ಪಾಠಮಾಲೆ (೧,೨,೩,೪,೫,೬,೭,೮)

ವಯಸ್ಕರ ಶಿಕ್ಷಣ

  • ಅಳಿಲ ಭಕ್ತಿ ಮಳಲ ಸೇವೆ
  • ಕರ್ನಾಟಕದ ಜಾನಪದ ಕಲೆಗಳು
  • ಕೋಳಿ ಸಾಕಣೆ
  • ಜೋಗಿ ಕಂಡ ಊರು
  • ದಕ್ಷಿಣ ಹಿಂದುಸ್ತಾನದ ನದಿಗಳು
  • ದೇವ ಒಲಿದ ಊರು
  • ಬೇರೆಯವರೂ ಸರಿ ಇರಬಹುದು
  • ಹುಟ್ಟು ಸಾವು ಒಟ್ಟು ಒಟ್ಟು

ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃತಿಗಳು

  • Folk Art of Karnataka
  • Karnataka Paintings
  • My Concern for Life, Literature and Art
  • Picturesque South Kanara
  • Yakshagana

ಕಾರಂತರ ಕೆಲವು ಚಿಂತನೆಗಳು

  • ನಾನು ದೇವರನ್ನು ನಂಬುವುದಿಲ್ಲ. ಏಕೆಂದರೆ ನಾನು ನೋಡಿಲ್ಲ. ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಂಬುವುದಿಲ್ಲ. ರಾಮಕೃಷ್ಣ ಪರಮಹಂಸರು ನಂಬಿದ್ದರು. ಅದನ್ನು ತಪಸ್ಸಿನಿಂದ ಕಂಡುಕೊಂಡರು. ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ. ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣಲೀಲಾ ನೆನಪಿಗೆ ಬರುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಾವು ನಂಬಿ ಬಂದಿದ್ದೇವೆ. ಆದರೆ ಆ ರೀತಿ ಆಗಿಲ್ಲ. ನನಗೆ ಅನುಕೂಲವಾದಾಗ ಮಾತ್ರ ದೇವರನ್ನು ನಂಬುತ್ತೇನೆ ಎಂಬುದು ಸರಿಯಲ್ಲ.
  • ಸಾಹಿತಿಗಳಿಗೆ ಸಮಾಜದಲ್ಲಿ ಬೇರೆ ಪಾತ್ರವೇನೂ ಇಲ್ಲ. ಸಾಹಿತಿ ಲೋಕೋದ್ಧಾರಕ ಎಂಬ ಭಾವನೆ ಏನೂ ಬೇಡ. ಆತನೂ ನಿಮ್ಮ ಹಾಗೆ ಮನುಷ್ಯ. ಬದುಕಿನ ಬಗ್ಗೆ ತನ್ನ ಅನುಭವವನ್ನು ಮಾತ್ರ ಹೇಳುತ್ತಾನೆ. ಪರಿಹಾರ ಸೂಚಿಸುವುದಲ್ಲ. ಆತ ಬರೆದ ಮಾತ್ರಕ್ಕೆ ಮಹಾನುಭಾವ ಆಗೋಲ್ಲ. ಬರೆಯದವರೂ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ. ಮರ ತಾನಾಗಿ ಬೆಳೆಯುತ್ತದೆ. ಆ ರೀತಿ ಮನುಷ್ಯ ಬೆಳೆಯಲಾರ. ನಮ್ಮ ಬದುಕು ಆರಂಭವಾಗುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಜೀವರಾಶಿ ಇಲ್ಲಿತ್ತು ಎಂಬುದನ್ನು ತಿಳಿದರೆ ಸಾಕು.
  • ಸಮಾಜ ನನ್ನನ್ನು ಹೇಗೆ ಕಂಡಿತು - ಎಂದು ನಾನು ತಿಳಿದುಕೊಳ್ಳುವ ಬಗೆ ಹೇಗೆ? ಒಂದು ಗ್ರಂಥದ ಸಾವಿರ ಪ್ರತಿಗಳು ಹತ್ತು ವರ್ಷಗಳಲ್ಲಿ ಖರ್ಚಾದರೆ, ಅವನ್ನು ಓದಿದವರಲ್ಲಿ ಹತ್ತು ಮಂದಿ ನನಗೆ ಪತ್ರ ಬರೆದರೆ, ಅದರಿಂದ ಜನಗಳು ನನ್ನನ್ನು ಮೆಚ್ಚುತ್ತಿದ್ದಾರೆ- ಎಂದು ತಿಳಿಯಲು ಸಾಧ್ಯವೇ? ನಾವು ಬರೆಯುವುದು ಸಾಮಾಜಿಕರೊಡನೆ ಸಂಭಾಷಿಸುವುದಕ್ಕಾಗಿ. ಈ ಸಂಭಾಷಣೆ ಏಕಮುಖಿಯಾದದ್ದು. ನಾವೇನೋ ಗ್ರಂಥಗಳಲ್ಲಿ ಅನೇಕ ವಿಚಾರಗಳನ್ನು ಮಂಡಿಸುತ್ತೇವೆ; ಓದುಗರು ನಮ್ಮ ಕಣ್ಮುಂದೆ ಇರುವುದಿಲ್ಲ.
  • ಅವರ ಮನಸ್ಸಿನಲ್ಲಿ ಓದುತ್ತ, ಓದುತ್ತ ಯಾವೆಲ್ಲ ಪ್ರತಿಕ್ರಿಯೆಗಳಾಗುತ್ತವೆ ಎಂದು ತಿಳಿಯುವ ಬಗೆ ಹೇಗೆ? ಆರಂಭದಿಂದಲೂ ನನ್ನ ಪುಸ್ತಕಗಳನ್ನು ಪತ್ರಿಕೆಗಳಿಗೆ ವಿಮರ್ಶೆಗೆ ಕಳುಹಿಸುವ ಪರಿಪಾಠವನ್ನು ನಾನು ಇರಿಸಿಕೊಳ್ಳದ್ದರಿಂದ, ವಿಮರ್ಶಕರು ಏನು ಹೇಳುತ್ತಾರೆಂಬುದು ಕೂಡಾ ನನಗೆ ತಿಳಿಯದ ಸಂಗತಿ. ಯಾರು ಏನನ್ನೇ ಹೇಳಲಿ, ನನಗೆ ತೋಚಿದಂತೆ ಬರೆಯುತ್ತೇನೆ- ಎಂದು ಬರೆಯುವ ನನಗೆ ಜನಾದರಣೆಯ ವಿಚಾರ ತಿಳಿಯುವುದು ಕಷ್ಟ.
  • ವಿಕ್ರಯಗೊಳ್ಳುವ ಪುಸ್ತಕಗಳ ಸಂಖ್ಯೆಯಿಂದ ನಾನು ಅದನ್ನು ತರ್ಕಿಸುವುದಾದರೆ, ನನ್ನ ಜನಪ್ರಿಯತೆಗೆ ಬೇಕಾದ ಆಧಾರ ಸಿಗುವಂತಿಲ್ಲ. ಒಂದು ಕಾದಂಬರಿಯ ಸಾವಿರ ಪ್ರತಿಗಳು ಹತ್ತು ವರ್ಷಗಳಲ್ಲಿ ವಿಕ್ರಯಗೊಳ್ಳುವ, ಅಥವಾ ಅದರ ಭರ ಒಂದಿಷ್ಟು ಹೆಚ್ಚಿಗಿದ್ದರೂ, ಒಂದು ಪುಸ್ತಕದ ಮರು ಮುದ್ರಣ ವರ್ಷಕ್ಕೆ ನೂರು ಪ್ರತಿಗಳಿಗಿಂತ ಹೆಚ್ಚಿಗೆ ವಿಕ್ರಯಗೊಳ್ಳದಾಗ, ಅಲ್ಲಿ ಇಲ್ಲಿ, ನನ್ನನ್ನು ಜನರು ಭಾಷಣಗಳ ಕಾಲದಲ್ಲಿ ಸುಪ್ರಸಿದ್ಧ ಸಾಹಿತಿ ಎಂದು ಕರೆದರೂ, ಅಂಥ ಪ್ರಸಿದ್ಧಿಯ ಗಾತ್ರ ಸಾಕಷ್ಟು ಕುಬ್ಜವಾದದ್ದು ಎಂಬ ಅಭಿಪ್ರಾಯ ನನಗೆ.
  • ಆ ದೃಷ್ಟಿಯಿಂದ ದಿವಂಗತ ಅ.ನ.ಕೃಷ್ಣರಾಯರು ಬರೆದ ಕಾದಂಬರಿಗಳು ನನಗಿಂತ ಎಷ್ಟೋ ಪಾಲು ಹೆಚ್ಚಿನ ಜನಾಕರ್ಷಣೆಯನ್ನು ಪಡೆದಿವೆ. ನನ್ನ, ಅವರ ಓದುಗರು ಯಾರು ಎಂಬುದನ್ನು ಕೂಡ ವಿಂಗಡಿಸಿ ತಿಳಿಯುವುದು ಕಷ್ಟ. ಅಂಥ ಓದುಗರು ಪ್ರಬುದ್ಧ ರೋ, ಅಪ್ರಬುದ್ಧರೋ, ಹೆಂಗಸರೋ, ಗಂಡಸರೋ, ತರುಣರೋ, ವೃದ್ಧರೋ, ಗಂಭೀರ ವಿಚಾರಕ್ಕೆ ಮನಸ್ಸು ಕೊಡುವವರೋ, ಅನುಭವ ಸಾಮ್ಯತೆ ಪಡೆದವರೋ, ಚಿಂತನಶೀಲರೋ, ಅಲ್ಲದವರೋ- ಇಂಥ ಯಾವೊಂದು ಸಂಗತಿಗಳನ್ನೂ ಎಣಿಸದೆ ಜನಮನ್ನಣೆಯ ತೂಕವನ್ನು ಅಳೆಯುವುದು ಅಸಾಧ್ಯ. ಆದಷ್ಟು ಕಡಿಮೆ ತಿನ್ನಿ. ನಾಲಗೆ ರುಚಿಗಾಗಿ ಸಿಕ್ಕಿದ್ದನ್ನೆಲ್ಲಾ ತಿನ್ನುವುದಲ್ಲ. ಮನಬಂದ ಕೆಲಸವನ್ನೆಲ್ಲಾ ಮಾಡುವುದಲ್ಲ. ಇದು ನನ್ನ ಆರೋಗ್ಯದ ರಹಸ್ಯ.
  • ವಿಕಿಕೋಟ್‍ನಲ್ಲಿ ಶಿವರಾಮ ಕಾರಂತರ ಉಕ್ತಿಗಳು.

ವಿದ್ವಾಂಸರ ಕಣ್ಣಲ್ಲಿ ಕಾರಂತರ ಸಾಹಿತ್ಯ

  • ಶ್ರೀ ಶಿವರಾಮ ಕಾರಂತರು ನಮ್ಮ ತಲೆಮಾರಿನ ಕನ್ನಡದ ಕ್ರಾಂತಿಪುರುಷರಲ್ಲಿ ಒಬ್ಬರು. ಅವರ ಪ್ರತಿಭೆಗೆ ಅಳವಡದ ಕಲೆಯಿಲ್ಲ. ಅವರ ಲೇಖನಿಯಿಂದ ಸತತವಾಗಿ ಹೊರಬೀಳುತ್ತಿರುವ ಕೃತಿಗಳಲ್ಲಿ ಹಲವನ್ನು ಓದಿ ಮೆಚ್ಚಿರುವ ಅನೇಕ ಮಂದಿ ಕನ್ನಡಿಗರಲ್ಲಿ ನಾನೂ ಒಬ್ಬ. ದೂರದಿಂದ ಮಾತ್ರ ವಲ್ಲದೆ ಹತ್ತಿರದಿಂದಲೂ ಅವರ ಬಹುಮುಖವಾದ ಕಾರ್ಯೋತ್ಸಾಹವನ್ನು ಆಗಾಗ ವೀಕ್ಷಿಸಿ ಬೆರಗಾಗಿದ್ದೇನೆ; ಅವರ ಪರಿಚಯ ಭಾಗ್ಯವನ್ನೂ ಕೆಲವು ಮಟ್ಟಿಗೆ ಪಡೆದು ನನ್ನ ಅನುಭವ ಆನಂದಗಳನ್ನೂ ಹೆಚ್ಚಿಸಿಕೊಂಡಿದ್ದೇನೆ.
  • ನಿಸರ್ಗವೇ ನಮ್ಮ ಎದುರಿಗೆ ಸುರುಳಿ ಬಿಚ್ಚಿಕೊಂಡು ಸಾಗುತ್ತಿದ್ದರೆ ಉಂಟಾಗಬಹುದಾದ ಅನುಭವ ಕಾರಂತರ ಕೃತಿಗಳನ್ನು ಓದುತ್ತಿರುವಾಗ ನನಗೆ ಅನೇಕ ವೇಳೆ ಲಭಿಸಿದೆ. ಅವರ ಬರಹದಲ್ಲಿ ಒಟ್ಟಿನ ಮೇಲೆ ಕಲೆಯ ನಿರ್ಮಿತಿಗಿಂತ ನಿಸರ್ಗದ ಆವಿಷ್ಕೃತಿ ಹೆಚ್ಚು. ಇಲ್ಲಿ ನಿಸರ್ಗವೆಂದರೆ ಕಡಲು, ಬೆಟ್ಟ, ಹೊಳೆ, ಕಾಡು ಮೊದಲಾದ ಅಚೇತನ ಪ್ರಕೃತಿ ಮಾತ್ರವಲ್ಲ, ವಿವಿಧ ವಿಚಿತ್ರವಾದ ಮಾನವಪ್ರಕೃತಿಯೂ ಅವರಲ್ಲಿ ಹಾಸುಹೊಕ್ಕಾಗಿ ಸೇರುತ್ತದೆ.
  • ಕಾರಂತರ ಬರವಣಿಗೆ ಬೆಳೆದಂತೆಲ್ಲ ಅವರ ಸಹಾನುಭೂತಿ ಶಕ್ತಿಯೂ ಬೆಳೆದು ಬಂದಿರುವಂತೆ ಕಾಣುತ್ತದೆ. ದುಡಿಮೆ ದುಃಖ ಇವೇ ತಮ್ಮ ಬಾಳಿನ ಸಾರವಾದರೂ ಅಚಲ ಶ್ರದ್ಧೆಯನ್ನು ಭದ್ರವಾಗಿ ನೆಮ್ಮಿ ನಿಲ್ಲುವ ಸ್ತ್ರೀಪಾತ್ರಗಳಲ್ಲಂತೂ ಕಾರಂತರಿಗೆ ಅಪಾರ ಗೌರವ. ಇಂಥ ಪಾತ್ರಗಳಿಂದ ಲೇ ಅವರ ಮಹಾಕೃತಿ ಮರಳಿ ಮಣ್ಣಿಗೆ, ನಂಬಿದವರ ನಾಕ-ನರಕ ಮೊದಲಾದವು ಅಮರವಾಗಿರುವುದು. ವಿಚಾರಪರರಾದ ಕಾರಂತರ ದೃಷ್ಟಿಯಲ್ಲಿ ಬಾಳ್ವೆಯೇ ಬೆಳಕು.
  • ಆದರೆ ಅನ್ಯರ ಬದುಕನ್ನು ಅರ್ಥಮಾಡಿಕೊಳ್ಳಬೇಕಾದರೆ ಅವರ ಸಾಂಪ್ರದಾಯಿಕವಾದ ನಂಬಿಕೆಗಳನ್ನು -ಅವು ತಮ್ಮವಲ್ಲದಿದ್ದರೂ- ಅರ್ಥಮಾಡಿಕೊಳ್ಳಬೇಕು ಎಂಬುದು ಕಾರಂತರ ಧೃಡತತ್ವ. ಡಾಂಭಿಕವರ್ತನೆಯನ್ನು, ಆಷಾಡಭೂತಿ ವಿದ್ಯೆಯನ್ನು ಕಂಡರೆ ಮಾತ್ರ ಅವರಿಗೆ ಎಂದಿಗೂ ಆಗದು. ಅದನ್ನು ವ್ಯಂಗ್ಯವಾಗಿ ವಾಚ್ಯವಾಗಿ ಅವರು ಖಂಡಿಸುತ್ತಲೇ ಇರುತ್ತಾರೆ.
  • ಇಷ್ಟಾದರೂ ಬದುಕಿನ ಅನಂತ ವಿವಿಧತೆಯನ್ನು ಅವರು ಚೆನ್ನಾಗಿ ಮನಗಂಡವರು; 'ಹಳ್ಳಿಯ ಹತ್ತು ಸಮಸ್ತರು' ಎಂಬ ಅಪೂರ್ವ ಕೃತಿ ಇದಕ್ಕೆ ಉತ್ತಮ ಸಾಕ್ಷಿ. ಕಾದಂಬರಿಯ ತಂತ್ರದ ಕಡೆ ಕಾರಂತರ ಗಮನ ಕಡಿಮೆ. ಆದರೆ ಮನಸ್ಸು ಮಾಡಿದರೆ ಅದರಲ್ಲಿ ಎಂಥ ಸಿದ್ಧಿಯನ್ನು ಅವರು ಮುಟ್ಟಬಲ್ಲರೆಂಬುದನ್ನು ಅವರ 'ಅಳಿದ ಮೇಲೆ' ಸಾರುತ್ತದೆ.

ಲೋಹಿಯಾರವರ ತತ್ವ ಚಿಂತನೆ,ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನದ ದೃಷ್ಟಿ ಮತ್ತು ಬದುಕಿನಲ್ಲಿನ ಪ್ರಯೋಗಶೀಲತೆ- ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮಗಳನ್ನುಂಟು ಮಾಡಿರುವಂಥವು. ಬಹುಶಃ ಮುಂಬರುವ ಕಲಾವಿದ ರಿಗೆ ಕನ್ನಡ ಸಾಹಿತ್ಯ ಸೃಷ್ಟಿಯಲ್ಲಿ ಚೈತನ್ಯಶಕ್ತಿಯಾಗಬಲ್ಲಂಥವು ಈ ಮೂರೇ.

ಯಾವ ಮಾನದಿಂದ ಅಳೆದರೂ ಕಾರಂತರು ವಿಶ್ವಲೇಖಕರ ಪಟ್ಟಿಯಲ್ಲಿ ಸೇರಬಲ್ಲವರು.

ಶಿವರಾಮ ಕಾರಂತರನ್ನು ನಿಮಗೆ ಪರಿಚಯ ಮಾಡಿಕೊಡುವುದೂ ಒಂದೇ, ನೇಸರನ್ನು ಸೊಡರಿನಿಂದ ತೋರಿಸುವುದೂ ಒಂದೇ.

ಬೆಟ್ಟ ಕಡಲಿನ ನಡುವೆ ಹುಟ್ಟಿದ ಈ ಚೈತನ್ಯ ಕಡಲಿನಷ್ಟೇ ವಿಸ್ತಾರವಾದ ಅನುಭವಗಳನ್ನು ತಮ್ಮ ಕೃತಿಗಳಲ್ಲಿ ಹಿಡಿದಿರಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕಾರಂತರ ನಿಧನದಿಂದ ಉಜ್ವಲವಾದ ಸೃಜನ ಪರಂಪರೆಯ ಒಂದು ತಲೆಮಾರಿನ ಮುಕ್ತಾಯದ ಶೂನ್ಯದೊಳಕ್ಕೆ ನಾವು ಪ್ರವೇಶಿಸಿದ ಅನುಭವವಾಗುತ್ತಿದೆ.

ಬಾಲವನ

  • ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶ್ರೀ. ಕೆ. ಶಿವರಾಮ ಕಾರಂತರ ಕರ್ಮಭೂಮಿಯೇ ಬಾಲವನ. ಪುತ್ತೂರಿನ ಕಾರಂತ ಬಾಲವನ Archived 2013-09-05 ವೇಬ್ಯಾಕ್ ಮೆಷಿನ್ ನಲ್ಲಿ. ಕಲಾ ಗ್ಯಾಲರಿ, ಗ್ರಂಥಾಲಯ, ವಸ್ತು ಸಂಗ್ರಹಾಲಯ, ನಾಟ್ಯ ಶಾಲೆ, ರಂಗ ಮಂದಿರ, ಆಟದ ಮೈದಾನ ಮತ್ತು ಈಜುಕೊಳವನ್ನು ಒಳಗೊಂಡಿದೆ. ಇವುಗಳ ವೀಕ್ಷಣೆಗೆ ಸಮಯಾವಕಾಶ ಈ ರೀತಿ ಇದೆ,
  • ಗ್ಯಾಲರಿ ಸಮಯ: 2..00 P.M – 6.00 P.M ಮತ್ತು 2..00 P.M – 6.00 P.M
  • ಮ್ಯೂಸಿಯಂನ ಸಮಯ: 9.30 A.M – 1.00 P.M ಮತ್ತು 2.00 P.M – 6.00 P.M
  • ಗ್ರಂಥಾಲಯದ ಸಮಯ: 10.00 A.M – 1.00 P.M ಮತ್ತು 3.30 P.M - 7.00 P.M

ಬಾಲವನದಲ್ಲಿ ಕಾರಂತಜ್ಜ

ಕಾರಂತರು ಕೆಲಕಾಲ ತರಂಗ ಸಾಪ್ತಾಹಿಕದ 'ಬಾಲವನ' - ಮಕ್ಕಳ ವಿಭಾಗದಲ್ಲಿ 'ಬಾಲವನದಲ್ಲಿ ಕಾರಂತಜ್ಜ' ಎಂಬ ಕಾಲಂ ನಡೆಸಿ ಕೊಡುತ್ತಿದ್ದರು. ಇದು ಬಹಳವಾಗಿ ಜನಪ್ರಿಯವಾಗಿತ್ತು. ಪುಟಾಣಿಗಳು ಕಳುಹಿಸಿದ ವಿಜ್ಞಾನ ಕುರಿತ ಪ್ರಶ್ನೆಗಳಿಗೆ ಕಾರಂತರು ಮಕ್ಕಳಿಗೆ ಅರ್ಥ ವಾಗುವಂತೆ ಸರಳ ರೀತಿಯಲ್ಲಿ ಉತ್ತರ ನೀಡುತ್ತಿದ್ದರು. ಆಗಿನ ತಲೆಮಾರಿನ ಕನ್ನಡಿಗರಿಗೆ ಕಾರಂತರು, 'ಕಾರಂತಜ್ಜ' ರೆಂದೇ ಚಿರಪರಿಚಿತ.[]

ಪ್ರಶಸ್ತಿ/ಪುರಸ್ಕಾರಗಳು

ನಿಧನ

  • ಅರ್ಥಪೂರ್ಣ ಬದುಕು ಕಳೆದ ಸಾಹಿತ್ಯ ದಿಗ್ಗಜ ಡಾ. ಶಿವರಾಮಕಾರಂತರು ೧೯೯೭ [] ಡಿಸೆಂಬರ್ ೦೯ ರಂದು ನಿಧನ ಹೊಂದಿದರು. ನಿಸರ್ಗದ ಚೆಲುವಿನೊಂದಿಗೆ ಅವಿರತವಾಗಿ ಸಾಹಿತ್ಯ ಸೃಷ್ಟಿಸಿದವರು ಕಾರಂತರು. ದೂರದ ಕೋಟದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಬಂದು ಪ್ರಕೃತಿಯ ಮಡಿಲಿನಲ್ಲಿ ಜೀವನದ ಹೋರಾಟದೊಂದಿಗೆ, ಸಮಗ್ರ ಕೋನವನ್ನು ಸ್ಪರ್ಷಿಸಿ ಧನ್ಯತೆಯ ಭಾವವನ್ನು ಕಾಣಲು ಸಾಧ್ಯವಾದ ದಿವ್ಯ ಕ್ಷೇತ್ರ.[]

ಪತ್ರಗಳಲ್ಲಿ ಕಾರಂತ

ಉಲ್ಲೇಖ

  1. "ಆರ್ಕೈವ್ ನಕಲು". Archived from the original on 2018-12-25. Retrieved 2015-09-24.
  2. http://www.thehindu.com/thehindu/mag/2002/10/13/storie/2002101300330300.htm
  3. "ಆರ್ಕೈವ್ ನಕಲು". Archived from the original on 2015-09-29. Retrieved 2015-03-21.
  4. "ಆರ್ಕೈವ್ ನಕಲು". Archived from the original on 2016-07-20. Retrieved 2015-03-21.
  5. http://m.rediff.com/news/dec/09kar.htm
  6. ಕಾರಂತರ ಬಗ್ಗೆ ನನ್ನದೊಂದು ಚಿಕ್ಕ ಬರಹ;ಗಗನಚುಕ್ಕಿ;ಲೇಖಕರು ರಾಷ್ಟ್ರಕವಿ ಕುವೆಂಪುರವರ ಮೊಮ್ಮಗಳು;GAGANACHUKKI;NOVEMBER 02, 2015

ಬಾಹ್ಯಸಂಪರ್ಕಗಳು

  1. 'ನೆನಪು ಕಹಿಯಲ್ಲ',ಪರಂಜ್ಯೋತಿ,ಮಯೂರ, ಜೂನ್,೨೦೧೬,ಪು.೧೫೩-೧೩೬
  2. . ಕಾರಂತರು ನಕ್ಕ ಸಮಯ![೧] Archived 2016-10-09 ವೇಬ್ಯಾಕ್ ಮೆಷಿನ್ ನಲ್ಲಿ.
  3. ಶಿವರಾಮ ಕಾರಂತರ ಆಪ್ತ ಸಹಾಯಕಿ 'ಮಾಲಿನಿ ಮಲ್ಯ' ನಿಧನ

ಈ‌ ಪುಟಗಳನ್ನೂ ನೋಡಿ

  • ಶಿವರಾಮ ಕಾರಂತರ ಕೃತಿಗಳು