ಕೃತ್ತಿವಾಸ
ಕೃತ್ತಿವಾಸ ಬಂಗಾಳೀ ಸಾಹಿತ್ಯದಲ್ಲಿ ಪ್ರಾಚೀನತಮವೂ ಜನಾದರಣೀಯವೂ ಆಗಿರುವ ರಾಮಾಯಣವನ್ನು ರಚಿಸಿದ ಕವಿ. ಕೃತ್ತಿವಾಸ ಓಝಾ,[೧] ಕೃತ್ತಿವಾಸ ಪಂಡಿತ ಎಂದೂ ಈತನಿಗೆ ಹೆಸರುಗಳಿವೆ.
ಕುಟುಂಬ
ಬದಲಾಯಿಸಿಈತ ಕುಲೀನ ಬ್ರಾಹ್ಮಣ. ಈತನ ಮುತ್ತಜ್ಜನ ತಂದೆ ದೊಡ್ಡ ಆಸ್ಥಾನ ವಿದ್ವಾಂಸನಾಗಿದ್ದು ಹೂಗ್ಲಿಯ ತೀರದಲ್ಲಿರುವ ಪೂಲಿಯಾ ಎಂಬ ಹಳ್ಳಿಯಲ್ಲಿ ಬಂದು ನೆಲೆಸಿದನಂತೆ. ಮುರಾರಿ ಕೃತ್ತಿವಾಸನ ಅಜ್ಜ. ದಕ್ಷಿಣ ದೇಶದ ಯಾತ್ರೆಗೆ ಹೊರಟ ಸಂದರ್ಭದಲ್ಲಿ ಜನಿಸಿದ ತನ್ನ ಮೊಮ್ಮಗನಿಗೆ ಆತ ಕೃತ್ತಿವಾಸ ಎಂದು ಶಿವನ ಸ್ಮರಣೆ ತರುವ ಹೆಸರನ್ನಿಟ್ಟನಂತೆ. ಕೃತ್ತಿವಾಸನ ತಂದೆ ವನಮಾಲಿ ಪಂಡಿತ. ತಾಯಿ ಮಾಲಿನೀ. ಆರು ಜನ ಸಹೋದರರಲ್ಲಿ ಈತನೇ ಹಿರಿಯ. ಇವನಿಗೊಬ್ಬ ಮಲತಂಗಿಯೂ ಇದ್ದಳು.
ವಿದ್ಯಾಭ್ಯಾಸ ಮತ್ತು ಜೀವನ
ಬದಲಾಯಿಸಿಕೃತ್ತಿವಾಸ ತನ್ನ ಹನ್ನೊಂದನೆಯ ವಯಸ್ಸಿನಲ್ಲಿ ಉತ್ತರ ಬಂಗಾಳಕ್ಕೆ ಬಂದು ವಿದ್ಯಾಭ್ಯಾಸ ಮುಗಿಸಿಕೊಂಡು ಗೌಡದೇಶದ ದೊರೆಯ ಆಸ್ಥಾನಕ್ಕೆ ಹೋದ. ಅಲ್ಲಿ ತನ್ನ ಆಶುಕವಿತ್ವದಿಂದ ಅರಸನನ್ನು ಮೆಚ್ಚಿಸಿ ಅವನಿಂದ ಬಹುಮಾನಿತನಾಗಿ ಅವನ ಅಪೇಕ್ಷೆಯಂತೆ ಜನಪ್ರಿಯ ರಾಮಾಯಣ ಒಂದನ್ನು ಬರೆಯಲು ಸಂಕಲ್ಪಿಸಿದ..[೨] ಭಣಿತಿಯಲ್ಲಿ (ಕಾವ್ಯದಲ್ಲಿನ ಆತ್ಮವೃತ್ತಭಾಗ) ಬರುವ ಈ ವಿವರಣೆಯ ಆಧಾರದ ಮೇಲೆ ಕೆಲವು ವಿದ್ವಾಂಸರು ಲೆಕ್ಕಹಾಕಿ, ಕವಿಯ ಜನನಕಾಲವನ್ನು 1380 ಎಂದೂ ಮತ್ತೆ ಕೆಲವರು 1442 ಎಂದೂ ಉಳಿದ ಕೆಲವರು ಈತ ಹದಿನೈದನೆಯ ಶತಮಾನದ ಉತ್ತರಾರ್ಧದವನೆಂದೂ ವಾದಿಸಿದ್ದಾರೆ. ಇಷ್ಟಲ್ಲದೆ ಕವಿಯ ಬಗ್ಗೆ ಬೇರೆ ಯಾವ ನಿಖರವಾದ ಸಮಾಚಾರವೂ ತಿಳಿದುಬಂದಿರುವುದಿಲ್ಲ.
ಕೃತಿಗಳು
ಬದಲಾಯಿಸಿಕೃತ್ತಿವಾಸರಾಮಾಯಣವೆಂದು ಪ್ರಸಿದ್ಧವಿರುವ ಗ್ರಂಥದ ಮೂಲ ಹೆಸರು ರಾಮಪಾಂಚಾಲೀ,[೧], ಪಾಂಚಾಲೀ ಎಂದರೆ ಆಖ್ಯಾನ ಕಾವ್ಯ. ಕವಿ ಇದನ್ನು ಪಯಾರ್ ಎಂಬ ಮಾತ್ರಾಛಂದಸ್ಸಿನಲ್ಲಿ ಜನತೆಯ ಭಾಷೆಯಲ್ಲಿ ರಚಿಸಿದ್ದಾನೆ. ಈ ಕಥನಕಾವ್ಯ ಲಿಪಿಬದ್ಧವಾದದ್ದು ಕವಿ ಕಾಲವಶನಾದ ಎರಡು ಶತಮಾನಗಳ ಅನಂತರ ಎಂದು ಊಹಿಸಬಹುದು. ಈಗ ದೊರೆತಿರುವ ಹಸ್ತಲಿಖಿತ ಪ್ರತಿಗಳಲ್ಲಿ ಪ್ರಾಚೀನತಮವಾದುದು ಇನ್ನೂರು ವರ್ಷಗಳಷ್ಟು ಹಿಂದಿನದಿರಬಹುದು. ಆದ್ದರಿಂದ ಇದರಲ್ಲಿ ಕೃತ್ತಿವಾಸನ ಮೂಲಭಾಷೆಯಾಗಲೀ ಕಥೆಯಾಗಲೀ ಎಷ್ಟರಮಟ್ಟಿಗೆ ಉಳಿದುಬಂದಿದೆ ಎನ್ನುವುದು ವಿಚಾರಾರ್ಹ. ಅದ್ಭುತಾಚಾರ್ಯನೆಂಬಾತ ಬರೆದ ರಾಮಾಯಣದ ಕೆಲವೊಂದು ಭಾಗವೂ ಹದಿನೆಂಟನೆಯ ಶತಮಾನದ ಕವಿಚಂದ್ರ ಬರೆದಿರಬಹುದಾದ ಕೆಲವಾರು ಭಾಗಗಳೂ ಈಗ ಪ್ರಚಲಿತವಿರುವ ಕೃತ್ತಿವಾಸ ರಾಮಾಯಣದಲ್ಲಿ ಸೇರಿಹೋಗಿವೆ. ಹೀಗಾಗಿ ಪ್ರಾಮಾಣಿಕ ಸಂಸ್ಕರಣ ಇನ್ನೂ ದೊರೆತಿಲ್ಲ. ದೊರೆಯುತ್ತಿಲ್ಲ. ಮೊದಲಿಗೆ ಈ ಕೃತಿ 1803ರಲ್ಲಿ ಶ್ರೀರಾಮಪುರ ಮಿಷನ್ ಪ್ರೆಸ್ಸಿನಲ್ಲಿ ಅಚ್ಚಾಯಿತು. ಪೂರ್ಣಚಂದ್ರ ಡೇ ಎಂಬುವರು ಸಂಪಾದಕರಾಗಿರುವ ಚಕ್ರವರ್ತಿ ಚಟರ್ಜಿ ಅಂಡ್ ಕಂಪನಿಯವರು ಪ್ರಕಟಿಸಿರುವ ರಾಮಪಾಂಚಾಲೀ ಎಂಬುದು ಈಗ ಅತ್ಯಂತ ಪ್ರಚಾರದಲ್ಲಿದೆ.
ಕೃತ್ತಿವಾಸ ರಾಮಾಯಣದ ಕಥೆ ಮುಖ್ಯವಾಗಿ ವಾಲ್ಮೀಕಿ ರಾಮಾಯಣದ ಗೌಡೀಯ ಪಾಠಕ್ಕನುಸಾರವಾಗಿದ್ದರೂ ಅದರ ಅನುವಾದವಲ್ಲ. ಋಷ್ಯಶೃಂಗರ ಪತ್ನಿ ಶಾಂತಾ ದಶರಥನ ಮಗಳು; ಪೂರ್ವಜನ್ಮದಲ್ಲಿ ಕುಶಧ್ವಜನ ಮಗಳಾಗಿದ್ದ ವೇದವತಿಯೇ ಸೀತೆ; ಜನಕಮಹಾರಾಜ ಮೇನಕೆಯ ಸೌಂದರ್ಯದಿಂದ ಕಾಮವಶನಾದಾಗ ಸ್ಖಲಿತವಾದ ಆತನ ವೀರ್ಯ ಭೂಮಿಯಲ್ಲಿ ಬಿದ್ದು ಡಿಂಬವಾಗಿದ್ದು ಯಜ್ಞಕ್ಕಾಗಿ ಭೂಶೋಧ ಮಾಡುತ್ತಿರುವಾಗ ಜನಕನಿಗೆ ಸಿಕ್ಕಿತು-ಅದೇ ಭೂಮಿಜೆ ಸೀತೆ ಎಂಬ ವೃತ್ತಾಂತ; ಕಾಲನೇಮಿಯ ಪ್ರಕರಣ-ಮುಂತಾದ ಎಷ್ಟೋ ವಿಷಯಗಳು ಗೌಡೀಯ ವಾಲ್ಮೀಕಿ ರಾಮಾಯಣದಿಂದ ಬಂದವು. ಆದರೆ ಹರಿಶ್ಚಂದ್ರ, ಸೌದಾಸ, ದಿಲೀಪ, ರಘು, ಅಜ ಮುಂತಾದ ರಘುವಂಶದ ರಾಜರ ಇತಿಹಾಸದ ವರ್ಣನೆ ಪದ್ಮಪುರಾಣದಿಂದ ಪ್ರಭಾವಿತವಾಗಿದೆ; ಕಾಳಿದಾಸನ ರಘುವಂಶದ ಪ್ರಭಾವವೂ ಸಾಕಷ್ಟಿದೆ. ದಶರಥ ಶನಿಯಿಂದ ವರವನ್ನು ಪಡೆದದ್ದು, ದಶರಥ ಹಾಗೂ ಜಟಾಯುವಿನ ಮೈತ್ರಿ, ದುಂದುಭಿ ಎಂಬ ಗಂಧರ್ವಿ ಮಂಥರೆಯಾಗಿ ಜನಿಸುವುದು- ಮುಂತಾದುವು ಪದ್ಮಪುರಾಣಾನುಸಾರ ವರ್ಣಿತವಾಗಿವೆ. ಸ್ಕಾಂದಪುರಾಣದ ನಾಗರ ಖಂಡದಲ್ಲಿ ಬರುವ ವರ್ಣನೆಗೆ ಹೋಲಿಸಿ ನೋಡಿದರೆ ದಶರಥ ಶನಿದೇವನಿಂದ ವರ ಪಡೆದ ಕಥಾನಿರೂಪಣೆಯ ಪ್ರೇರಣೆ ಅಲ್ಲಿಯದೇ ಎನಿಸುತ್ತದೆ. ವಾಲ್ಮೀಕಿ ರಾಮಾಯಣದಲ್ಲಿಲ್ಲದ ಎಷ್ಟೋ ಪ್ರಸಂಗಗಳು ಕೃತ್ತಿವಾಸನ ರಾಮಾಯಣದಲ್ಲಿ ಬಂದಿವೆ. ದಶರಥ ಯಜ್ಞರಕ್ಷಣೆಗಾಗಿ ರಾಮಲಕ್ಷ್ಮಣರನ್ನು ಕರೆಯಲು ಬಂದ ವಿಶ್ವಾಮಿತ್ರರಿಗೆ ಮೋಸ ಮಾಡಿ ಅವರೊಂದಿಗೆ ಭರತ ಶತ್ರುಘ್ನರನ್ನು ಕಳುಹಿಸುವುದು; ಸೀತೆಯ ಪೂರ್ವರಾಗ; ಬೇರೆ ಬೇರೆ ಸಂದರ್ಭಗಳಲ್ಲಿ ಕೈಕೇಯಿ ಎರಡು ವರಗಳನ್ನು ಮುಡಿಪಾಗಿ ಪಡೆದಿದ್ದು; ರಾಮನಿಗೂ ಗುಹ ನಿಷಾದನಿಗೂ ವನವಾಸಕ್ಕೆ ಮುಂಚೆಯೇ ಇದ್ದ ಸ್ನೇಹಸಂಬಂಧ; ವಾಲಿ ಕೃಷ್ಣಾವತಾರದಲ್ಲಿ ಭಿಲ್ಲನಾಗಿ ಸೇಡು ತೀರಿಸಿಕೊಳ್ಳುವನೆಂದು ರಾಮನಿಗೆ ತಾರಾದೇವಿ ಕೊಟ್ಟ ಶಾಪ; ಹನುಮಂತನಿಗೂ ನಳನಿಗೂ ನಡೆದ ಕಲಹ, ಅನ್ನೋದಕವನ್ನೂ ನಿದ್ರೆಯನ್ನೂ ತ್ಯಜಿಸಿ ಹದಿನಾಲ್ಕು ವರ್ಷ ಬ್ರಹ್ಮಚರ್ಯ ಪಾಲನ ಮಾಡಿದ ಲಕ್ಷ್ಮಣನ ಸಂಯಮ; ಮಹೀರಾವಣನ ಕಥೆ; ಸೇತುವೆಯನ್ನು ಮುರಿದುಹಾಕಿದ್ದು, ಸೀತೆಯನ್ನು ಮರಳಿ ಕಾಡಿಗೆ ಕಳುಹಿಸುವಲ್ಲಿ ಪ್ರಚಲಿತವಿರುವ ಅಗಸನ ದೂರು ಮತ್ತು ಗುಪ್ತಚರರಿಂದ ಲೋಕಾಪವಾದದ ಸಂಗತಿಯನ್ನು ತಿಳಿಯುವುದರ ಜೊತೆಗೆ ಸೀತೆಯೇ ಬರೆದ ರಾವಣನ ಚಿತ್ರವನ್ನು ಕಂಡು ಶಂಕೆಗೊಳಗಾದದ್ದು; ಕುಶಲವರ ಕಾಳಗ-ಮುಂತಾದ ಹಲಕೆಲವು ಪ್ರಸಂಗಗಳು ಇದಕ್ಕೆ ನಿದರ್ಶನ.
ಪ್ರಭಾವಗಳು
ಬದಲಾಯಿಸಿಕೃತ್ತಿವಾಸ ರಾಮಾಯಣದ ಮೇಲೆ ಶೈವ, ಶಾಕ್ತ, ಪ್ರಭಾವಗಳು ಸಾಕಷ್ಟು ಬಿದ್ದಿವೆ. ಹನುಮಂತ ಶಿವನ ಅವತಾರ ಎಂದಿರುವುದು, ಮಹೀರಾವಣನ ಪ್ರಸಂಗದಲ್ಲಿ ಶಿವ ಮತ್ತು ರಾಮ ಇಬ್ಬರ ಐಕ್ಯವನ್ನು ತೋರುವುದು. ಸೇತುನಿರ್ಮಾಣ ಸಂದರ್ಭದಲ್ಲಿ ಶಿವನನ್ನು ಪ್ರತಿಷ್ಠಾಪಿಸಿ ಪೂಜಿಸುವುದು- ಮುಂತಾದವು ಶೈವಪ್ರಭಾವಕ್ಕೆ ಸಾಕ್ಷಿಯಾಗಿದ್ದರೆ ರಾವಣನ ರಕ್ಷಣೆಗಾಗಿ ಶಿವ ಹೋಗಬೇಕೆಂದು ಯುದ್ಧಕಾಂಡದಲ್ಲಿ ಪಾರ್ವತಿ ಆಗ್ರಹಪಡಿಸುವುದು, ಚಾಮುಂಡೀರೂಪಿಣಿಯಾದ ದೇವಿ ಲಂಕಾಪ್ರವೇಶ ಮಾಡಲಿದ್ದ ಹನುಮಂತನನ್ನು ತಡೆಹಿಡಿಯುವುದು ರಾಮನಿಂದ ಪೂಜಿತಳಾದ ದೇವಿ ಪ್ರಸನ್ನಳಾಗಿ ರಾಮನಿಗೆ ವಿಜಯವನ್ನು ತಂದುಕೊಡುವುದು- ಇವೇ ಮೊದಲಾದ ಪ್ರಸಂಗಗಳು ಶಾಕ್ತ ಪ್ರಭಾವಕ್ಕೆ ಸಾಕ್ಷಿಯಾಗಿವೆ.
ರಾಮಭಕ್ತಿಯ ಪ್ರಚಾರ ಕೂಡ ಕೃತ್ತಿವಾಸನ ರಚನೆಯ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿದೆ. ರಾಮನಾಮಸ್ಮರಣೆಯಿಂದ ವಾಲ್ಮೀಕಿ ಉದ್ಧಾರನಾದನೆಂಬುದು, ಬ್ರಹ್ಮಹತ್ಯಾದೋಷನಿವಾರಣೆಗಾಗಿ ದಶರಥನಿಗೆ ಮೂರು ಸಲ ರಾಮನಾಮವನ್ನುಚ್ಚರಿಸಲು ಹೇಳಿದ ತಮ್ಮ ಮಗನಾದ ಲೋಮಶ ರಾಮನಾಮಕ್ಕೆ ಅಪಚಾರವೆಸಗಿದನೆಂದು ಸಿಟ್ಟಿನಿಂದ ವಸಿಷ್ಠರು ಆತನನ್ನು ಶಪಿಸಿದ್ದು, ಹನುಮಂತನ ಹೃದಯದಲ್ಲಿ ರಾಮನಾಮ ಅಂಕಿತವಾಗಿತ್ತೆಂಬುದು-ಮುಂತಾದುವು ಮಾತ್ರವಲ್ಲ. ರಾವಣನ ಮಗನಾದ ವೀರಬಾಹು ರಾಮನಲ್ಲಿ ವಿಷ್ಣು ಚಿಹ್ನೆಗಳನ್ನು ಗುರುತಿಸಿ ಯುದ್ಧದಿಂದ ವಿರತನಾದುದು, ವಿಭೀಷಣನ ಮಗನಾದ ತರಣೀಸೇನ ವೈಷ್ಣವ ಚಿಹ್ನೆಗಳನ್ನು ಧರಿಸಿ ರಥ, ತುರಗ, ಪತಾಕಾದಿಗಳ ಮೇಲೆ ರಾಮನಾಮವನ್ನು ಅಂಕಿತಗೊಳಿಸಿಕೊಂಡು ರಾಮಭಕ್ತನಾಗಿದ್ದುದು, ರಾಮ ದಯಾಳುವೆಂದೂ ಅವತರಿಸಿ ಬಂದಿರುವ ಮಹಾವಿಷ್ಣುವೆಂದೂ ಮನಸಾ ಸ್ಮರಿಸಿ ಯುದ್ಧಕ್ಷೇತ್ರದಲ್ಲಿ ನತಮಸ್ತಕನಾಗಿ ನಿಂತ ರಾವಣನ ಪಾತ್ರನಿರೂಪಣೆ-ಮುಂತಾಗಿ ರಾಕ್ಷಸರನ್ನೂ ರಾಮಭಕ್ತರನ್ನಾಗಿ ಚಿತ್ರಿಸಿರುವುದು ರಾಮಭಕ್ತಿಯ ಪ್ರಭಾವ. ಇಲ್ಲಿ ಶುಕಸಾರಣರೂ ರಾಮ ಭಕ್ತಿಯ ಪ್ರಭಾವಕ್ಕೊಳಗಾದ ರಾವಣನ ಗುಪ್ತಚರರಾಗಿದ್ದಾರೆ.
ಬಂಗಾಳದಲ್ಲಿ ಮಾತ್ರ ಪ್ರಚಲಿತವಿರುವ ಕೆಲವು ಜನಪದ ಗೀತೆಗಳ ಪ್ರಭಾವವನ್ನೂ ಕೃತ್ತಿವಾಸನ ರಾಮಪಾಂಚಾಲಿಯಲ್ಲಿ ಕಾಣಬಹುದು. ಋಷಿಮುನಿಗಳು ಶೋಧಿಸಿಟ್ಟ ಮುಹೂರ್ತದಲ್ಲೇ ರಾಮಸೀತೆಯರ ವಿವಾಹವಾಗಿಬಿಟ್ಟರೆ ಎಂದೆಂದಿಗೂ ಅವರ ವಿಯೋಗವಾಗಲಿಕ್ಕಿಲ್ಲವೆಂದು ಯೋಚಿಸಿ ದೇವತೆಗಳು ಸಭೆ ಸೇರಿ ಮುಹೂರ್ತವನ್ನು ತಪ್ಪಿಸಲು ಚಂದ್ರನನ್ನು ಮಿಥಿಲೆಗೆ ಕಳಿಸಿದ್ದು ಮತ್ತು ಚಂದ್ರ ನರ್ತಕಿಯಾಗಿ ಬಂದು ಎಲ್ಲರ ಮನಸ್ಸನ್ನೂ ಆಕರ್ಷಿಸಿ ಮುಹೂರ್ತವನ್ನು ಮರೆಸಿದ್ದು ಇವು ಇಲ್ಲಿ ಮಾತ್ರ ಬಂದಿರುವ ಘಟನೆಗಳು.ಬ್ರಹ್ಮದೇವನನ್ನು ಕುರಿತು ತಪಸ್ಸು ಮಾಡಿದ ರಾವಣ ಅಮರತ್ವವನ್ನು ವರವಾಗಿ ಕೇಳಿದಾಗ ಬ್ರಹ್ಮ ಅದು ಅಸಾಧ್ಯವಾದುದೆಂದು ಹೇಳಿ ಪರ್ಯಾಯವಾಗಿ ಬ್ರಹ್ಮಾಸ್ತ್ರವನ್ನು ಕೊಟ್ಟು, ಇದನ್ನು ಜೋಪಾನವಾಗಿ ಕಾಪಾಡಿಟ್ಟುಕೋ. ಇದರಿಂದಲ್ಲದೆ ಬೇರೆ ಅಸ್ತ್ರಶಸ್ತ್ರಗಳಿಂದ ಕತ್ತರಿಸಿ ಹಾಕಿದರೂ ನಿನ್ನ ತಲೆಗಳೂ ಭುಜಗಳೂ ಬೆಳೆಯುವುವೆಂದು ವರ ಕೊಟ್ಟಿದ್ದು; ಆ ಬ್ರಹ್ಮಾಸ್ತ್ರವನ್ನು ರಾವಣ ಮಂಡೋದರಿಯ ಕೈಯಲ್ಲಿ ರಕ್ಷಿಸಿಟ್ಟುಕೊಳ್ಳಲು ಕೊಟ್ಟದ್ದು, ರಾವಣನ ಸಂಹಾರ ಏನು ಮಾಡಿದರೂ ಸಾಧ್ಯವಾಗಲಿಕ್ಕಿಲ್ಲವೆಂದು ತೋರಿಬಂದಾಗ ವಿಭೀಷಣ ಈ ಗುಟ್ಟನ್ನು ರಾಮನಿಗೆ ತಿಳಿಸಿದ್ದು; ಆಗ ರಾಮನಿಂದ ಆಜ್ಞಪ್ತನಾಗಿ ಹನುಮ ಬ್ರಾಹ್ಮಣವೇಷದಲ್ಲಿ ಮಂಡೋದರಿಯ ಬಳಿ ಬಂದು ಮಾತುಮಾತಿನಲ್ಲಿ ಮಂಡೋದರಿಯಿಂದ ಬ್ರಹ್ಮಾಸ್ತ್ರವಿರುವ ಗುಪ್ತಸ್ಥಾನವನ್ನು ಪತ್ತೆಹಚ್ಚಿ, ಕಂಬದಲ್ಲಿ ಬಚ್ಚಿಟ್ಟ ಆ ಅಸ್ತ್ರವನ್ನು ಅಪಹರಿಸಿ ತಂದದ್ದು-ಮುಂತಾದ ಘಟನಾವಳಿಗಳನ್ನಿಲ್ಲಿ ನೆನೆಯಬಹುದು.
ರಾವಣನ ಸಂಹಾರದ ಅನಂತರ ಯುದ್ಧಭೂಮಿಗೆ ಧಾವಿಸಿ ಬಂದ ಮಂಡೋದರಿಯನ್ನು ಸೀತೆ ಎಂದು ಭ್ರಮಿಸಿದ ರಾಮ ಸೌಭಾಗ್ಯವತೀ ಭವ ಎಂದು ಆಶೀರ್ವದಿಸಿ ಆದ ಪ್ರಮಾದಕ್ಕೆ ಪರಿಹಾರವಾಗಿ ರಾವಣನ ಚಿತೆ ಸದಾ ಉರಿಯುತ್ತಿರಲೆಂದು ಅನುಗ್ರಹಿಸಿದ್ದು ಮತ್ತು ಒತ್ತಾಯಪಡಿಸಿ ಮಂಡೋದರಿಗೂ ವಿಭೀಷಣನಿಗೂ ಮದುವೆ ಮಾಡಿಸಿದ್ದು-ಈ ಮೊದಲಾದ ಘಟನೆಗಳೂ ಗಮನಾರ್ಹವಾಗಿವೆ. ಮಂಡೋದರಿಯೂ ಅನ್ಯರಾಕ್ಷಸಿಯರೂ ನಿನಗೆ ಪತಿಸುಖ ಬಹು ಸ್ವಲ್ಪಕಾಲವಿರಲಿ ಎಂದು ಸೀತೆಗೆ ಶಾಪವಿತ್ತದ್ದು ಇಲ್ಲಿ ವರ್ಣಿತವಾಗಿದೆ. ಬಂಗಾಳದಲ್ಲಿ ಅತ್ಯಂತ ಜನಾದರಣೀಯವಾದ ಈ ರಾಮಪಾಂಚಾಲೀ ಅನಂತರದ ಸಾಹಿತ್ಯದ ಮೇಲೂ ಸಾಕಷ್ಟು ಪ್ರಭಾವವನ್ನು ಬೀರಿದೆ.
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ Sen, Sukumar (1991, reprint 2007). Bangala Sahityer Itihas, Vol.I, (Bengali), Kolkata: Ananda Publishers, ISBN 81-7066-966-9, pp.105-10
- ↑ Sen, Sukumar (1979) [1960]. History of Bengali (3rd ed.). ನವ ದೆಹಲಿ: Sahitya Akademi. pp. 63–65. ISBN 81-7201-107-5.