ಕರ್ನಾಟಕದ ಸಂಸ್ಕೃತಿ

ಕರ್ನಾಟಕದ ಸಂಸ್ಕೃತಿ : ‘ಸಂಸ್ಕೃತಿ’ ಎಂಬ ಶಬ್ದದ ಅರ್ಥ ಬಹು ವ್ಯಾಪಕವಾಗಿ ಬೆಳೆಯುತ್ತ ಬಂದಿದೆ; ಹೊಸ ಹೊಸ ಅರ್ಥಗಳನ್ನು ಒಳಗೊಂಡಿದೆ. ಸಮಷ್ಟಿ ಜೀವನದ ಅಂತರಂಗದ ಸಾಧನೆಗೆ ಸಹಕಾರಿಯಾದ ಸಾಮಗ್ರಿಗಳಿಂದ ಹಿಡಿದು, ವ್ಯಷ್ಟಿ ಜೀವನದ ವಿಕಾಸಕ್ಕೆ ಕಾರಣವಾದ ಸಂಸ್ಕಾರದವರೆಗೆ ಈ ಪದದ ಅರ್ಥ ಬೆಳೆದಿದೆ. ವ್ಯಕ್ತಿಯ ವಿಕಾಸಕ್ಕೆ ಕಾರಣವಾಗುವ ಸಾಮಾಜಿಕ ಪರಿಕರಗಳು ಸಹ ಸಂಸ್ಕೃತಿಯಲ್ಲಿಯೇ ಸಮಾವೇಶಗೊಳ್ಳುತ್ತವೆ. ಈ ಅರ್ಥದಲ್ಲಿ ಅದನ್ನು ಕೆಲವು ವೇಳೆ ದೇಶವಾಚಕವಾಗಿ ಬಳಸುವುದುಂಟು. ಒಟ್ಟು ಜನಜೀವನದ ಅಂತರಂಗದ ಅನುಭವ ಇಲ್ಲಿ ಪ್ರಧಾನವಾದ ಅಂಶವಾಗಿ ಗೋಚರವಾಗುತ್ತದೆ. ಆಯಾ ಪ್ರದೇಶ, ಭಾಷೆ, ಧರ್ಮಗಳ ಜನರು ತಂತಮ್ಮ ಬಹುಮುಖ ಸಮಸ್ಯೆಗಳಿಗೆ ಉತ್ತರವನ್ನು ಕಾಣಬಯಸುವ ಅಂತರಂಗದ ಸಾಧನೆಯೇ ಸಂಸ್ಕೃತಿಯ ಮೂಲಸಾಮಗ್ರಿ.

ಸಾವಿರಾರು ವರ್ಷಗಳಿಂದ ಬಾಳಿ, ಬದುಕಿನಲ್ಲಿ ಬಿಳಲು ಬಿಟ್ಟು, ವಿಸ್ತಾರವಾಗಿ ಬೆಳೆದು ನೆರಳನ್ನೀಯುತ್ತ ಸಾರ್ಥಕ ಮಾರ್ಗದಲ್ಲಿ ನಡೆದಿರುವ ಕರ್ನಾಟಕ ಸಂಸ್ಕೃತಿ ಒಂದು ಸನಾತನ ವೃಕ್ಷ. ಕಾಲದಿಂದ ಮತ್ತು ಸತ್ತ್ವದಿಂದ ಅದು ಸನಾತನ; ಆದರೆ ಅದರ ಚೇತನ ನಿತ್ಯನೂತನ. ಇಂದ ಅರಳುತ್ತಿವೆ. ನಿರಂತರವಾಗಿ ಬೆಳೆದುಬಂದ ಭಾರತೀಯ ಪರಂಪರೆಯಿಂದ ಅದು ಪೋಷಿತವಾಗುತ್ತದೆ.

ಭಾರತೀಯ ಸಂಸ್ಕೃತಿ ಮತ್ತು ಕರ್ನಾಟಕದ ಸಂಸ್ಕೃತಿ ಬದಲಾಯಿಸಿ

ನಿಜವಾಗಿ ನೋಡಿದರೆ ಕರ್ನಾಟಕ ಸಂಸ್ಕೃತಿ ಎಂಬುದು ಭಾರತೀಯ ಸಂಸ್ಕೃತಿಗಿಂತ ಭಿನ್ನವಾದುದೇನಲ್ಲ. ಭರತಖಂಡದ ಒಂದು ಅವಿಭಾಜ್ಯ ಅಂಗವಾಗಿರುವ ಕರ್ನಾಟಕ ತನ್ನ ಆಶಯ ಆಶೋತ್ತರಗಳಲ್ಲಿ, ಅವುಗಳ ಸಾಧನೆಯ ಮಾರ್ಗದಲ್ಲಿ, ಅನುಭವದ ಅಭಿವ್ಯಕ್ತಿಯ ಮಾಧ್ಯಮವನ್ನು ರೂಪಿಸಿಕೊಳ್ಳುವ ಕುಶಲಕಲೆಯಲ್ಲಿ ಭಾರತೀಯ ಮನೋಧರ್ಮವನ್ನೇ ಅವಲಂಬಿಸಿ ಬೆಳೆಯಿತು. ಆದರೆ ಅದರ ಪ್ರಾದೇಶಿಕ ವೈವಿಧ್ಯಕ್ಕೆ ತನ್ನ ವಿಶಿಷ್ಟ ಸ್ವರೂಪವನ್ನಿತ್ತು ಅದರ ಶ್ರೀಮಂತಿಕೆಗೆ ಕಾರಣವಾಯಿತು.

ಕರ್ನಾಟಕವನ್ನಾಳಿದ ವಿವಿಧ ರಾಜವಂಶಗಳು, ಈ ನಾಡಿಗೆ ಬಂದ ಮತ್ತು ಇಲ್ಲಿಯೇ ಹುಟ್ಟಿ ಬೆಳೆದ ಧಾರ್ಮಿಕ ಆಂದೋಲನಗಳು, ಜನಪದವನ್ನು ಅವು ರೂಪಿಸಿದ ಬಗೆ, ಸಾಹಿತ್ಯ ಮತ್ತು ಜನಪದ ಸಾಹಿತ್ಯಗಳು ಪಡೆದ ಅಭಿವ್ಯಕ್ತಿ. ವಾಸ್ತುಶಿಲ್ಪ, ಶಿಲ್ಪ ಸಂಗೀತ ನೃತ್ಯ ಚಿತ್ರಾದಿ ಕುಶಲ ಕಲೆಗಳ ಸಾಧನೆ-ಈ ಎಲ್ಲ ಅಂಶಗಳಲ್ಲಿಯೂ ಕರ್ನಾಟಕದ ವೈಶಿಷ್ಟ್ಯವನ್ನು ಗುರುತಿಸಬಹುದು. ಮುಖ್ಯವಾಗಿ ಇಲ್ಲಿ ಕಾಣುವುದು ಒಂದು ಸಮನ್ವಯ ಮತ್ತು ಸಾಮರಸ್ಯ ದೃಷ್ಟಿ.

ರಾಜಕೀಯ ಚರಿತ್ರೆಯನ್ನು ನೋಡಿದರೆ ಕದಂಬರು, ಗಂಗರು ಅಥವಾ ಅವರಿಗಿಂತ ಹಿಂದಿನ ಶಾತವಾನರಿಂದ ಹಿಡಿದು, ಕೆಳದಿ ಮೈಸೂರು ಅರಸರವರೆಗೂ ಎಲ್ಲ ರಾಜವಂಶಗಳೂ ಉದಾತ್ತ ಹಿನ್ನೆಲೆಯಲ್ಲಿಯೇ ಬೆಳೆದುಬಂದುವು. ತಮ್ಮ ಜಾತಿ ಮತ ಭಾವಗಳಲ್ಲಿ ಅಂಧರಾಗಿ ಇತರರನ್ನು ಹಿಂಸಿಸಲು ಹೊರಟ ರಾಜರು ಈ ದೀರ್ಘ ಇತಿಹಾಸದಲ್ಲಿ ಅಪ್ಪಿತಪ್ಪ್ಪಿ ಕೂಡ ಕಾಣಸಿಗಲಾರರೆಂಬುದು ಗಮನಾರ್ಹವಾದ ಸಂಗತಿ. ಈ ನೆಲದ ಗುಣವೇ ಅದೆನ್ನುವಷ್ಟರ ಮಟ್ಟಿಗೆ ಸಮನ್ವಯ ಮತ್ತು ಸಾಮರಸ್ಯ ಭಾವನೆಯನ್ನು ಅವರು ರೂಪಿಸಿಕೊಂಡರು. ರಾಜರ ವೈಯಕ್ತಿಕ ಬಲವನ್ನು ಅವಲಂಬಿಸಿ ಒಂದೊಂದು ಕಾಲದಲ್ಲಿ ಒಂದೊಂದು ಧರ್ಮಕ್ಕೆ ಹೆಚ್ಚು ಪ್ರೋತ್ಸಾಹ ಸಿಕ್ಕಿರಬಹುದು. ಒಂದೇ ವಂಶದಲ್ಲಿಯೂ ಒಬ್ಬೊಬ್ಬ ರಾಜರು ಒಂದೊಂದು ಧರ್ಮಕ್ಕೆ ಹೆಚ್ಚಾಗಿ ಒಲಿಯುತ್ತಿದ್ದುದೂ ಉಂಟು. ರಾಷ್ಟ್ರಕೂಟ ರಾಜರಲ್ಲಿ ಅನೇಕರು ಹಿಂದೂ ಧರ್ಮವನ್ನು ಅದರಲ್ಲಿಯೂ ವಿಶೇಷವಾಗಿ ಶೈವಧರ್ಮವನ್ನು ಅವಲಂಬಿಸಿದ್ದರೆ, ನೃಪತುಂಗ ಜೈನ ಧರ್ಮಕ್ಕೆ ಮನಸೋತಿದ್ದ. ಹೊಯ್ಸಳ ಒಂದನೇ ಬಲ್ಲಾಳ ಶೈವನಾದರೆ, ಅವನ ತಮ್ಮ ವಿಷ್ಣುವರ್ಧನ ವೈಷ್ಣವ. ಅದು ಅವರ ವೈಯಕ್ತಿಕ ಒಲವು. ಆದರೆ ಸಾರ್ವತ್ರಿಕವಾಗಿ ಅವರು ಸರ್ವಧರ್ಮ ರಕ್ಷಕರೆಂಬುದನ್ನು ಮರೆತಿರಲಿಲ್ಲ. ಹೆಚ್ಚೆಂದರೆ ತಾವು ಒಲಿದ ಧರ್ಮಕ್ಕೆ ಸ್ವಲ್ಪ ಹೆಚ್ಚು ಪ್ರೋತ್ಸಾಹ ಕೊಟ್ಟಿರಬಹುದು. ಆದರೆ ಇತರ ಧರ್ಮಗಳ ಮೇಲೆ ದ್ವೇಷವನ್ನು ಸಾಧಿಸಿದ ದುರ್ಘಟನೆ ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಒಮ್ಮೆಯೂ ಸಂಭವಿಸಲಿಲ್ಲ. ಚಾಳಕ್ಯರು, ಗಂಗರು, ಹೊಯ್ಸಳರು, ವಿಜಯನಗರದ ಅರಸರು, ಕೆಳದಿಯ ನಾಯಕರು-ಈ ಎಲ್ಲ ಅರಸುಮನೆತನಗಳಿಗೂ ಈ ಮಾತನ್ನು ಅನ್ವಯಿಸಬಹುದು.

ರಾಜಕೀಯ ಚರಿತ್ರೆಯಲ್ಲಿ ಉದ್ದಕ್ಕೂ ಕಾಣುವ ಒಂದು ಪ್ರಧಾನವಾದ ಅಂಶವೆಂದರೆ ಯುದ್ಧಗಳು. ಇದು ಕರ್ನಾಟಕಕ್ಕೆ ಮಾತ್ರವಲ್ಲ. ಇಡೀ ಭರತಖಂಡಕ್ಕೆ ಅಥವಾ ಪ್ರಾಚೀನ ಪ್ರಪಂಚಕ್ಕೆಲ್ಲ ಅನ್ವಯಿಸುವ ಮಾತು. ಅಂದಿನ ರಾಜಕೀಯ ವ್ಯವಸ್ಥೆಯಲ್ಲಿ ಅದು ಅನಿವಾರ್ಯವಾಗಿತ್ತು. ಇಂಥ ವೀರಜೀವನದಲ್ಲಿಯೂ ಕರ್ನಾಟಕದ ಸಾಧನೆ ಅನುಪಮವಾದುದು. ಅಖಿತ ಭಾರತ ವ್ಯಾಪ್ತಿಯ ಮನ್ನಣೆಯನ್ನು ಪಡೆದಂಥ ವೀರರು ಈ ನಾಡಿನಲ್ಲಿ ಆಗಿಹೋದರು. ಕದಂಬ ವಂಶದ ಸ್ಥಾಪಕನಾದ ಮಯೂರಶರ್ಮನಿಂದ ಹಿಡಿದು ಅವಿರತವಾಗಿ ಬೆಳೆದುಬಂದ ಈ ವೀರ ಪರಂಪರೆಯಲ್ಲಿ ಕೆಲವು ಹೆಸರುಗಳನ್ನು ಸ್ಮರಿಸಿಕೊಳ್ಳಬಹುದಾದರೆ ಎರಡನೆಯ ಪುಲಕೇಶಿ, ಧ್ರುವ ಧಾರಾವರ್ಷ, ಮೂರನೆಯ ಗೋವಿಂದ, ಆರನೆಯ ವಿಕ್ರಮ, ವಿಷ್ಣುವರ್ಧನ, ಎರಡನೆಯ ಬಲ್ಲಾಳ, ಮುಮ್ಮಡಿ ಬಲ್ಲಾಳ, ಕುಮಾರರಾಮ, ಇಮ್ಮಡಿ ಪ್ರೌಢದೇವರಾಯ, ಕೃಷ್ಣದೇವರಾಯ-ಈ ಒಂದೊಂದು ಹೆಸರೂ ಪರಾಕ್ರಮದ ಸಂಕೇತವಾಗಿದೆ. ಕೆಲವರ ಕಾಲದಲ್ಲಂತೂ ಉತ್ತರ ಭಾರತವೂ ತತ್ತರಿಸಿತು. ಕನ್ನಡ ಸೈನಿಕರ ಕುದುರೆಗಳು ಗಂಗಾನದಿಯಲ್ಲಿ ಮಿಂದು ಹಿಮಾಲಯದ ತಪ್ಪಲನ್ನು ಕಂಡವು. ನೇಪಾಳದವರೆಗೂ ಕನ್ನಡ ರಾಜವಂಶಗಳ ಪ್ರಭಾವ ಹಬ್ಬಿತು. ಅಲ್ಲಿಯೇ ಕೆಲವರು ನೆಲೆಸಿ ತಮ್ಮ ಶಾಖೆಯನ್ನು ಪ್ರಾರಂಭಿಸಿದಂತೆಯೂ ತೋರುತ್ತದೆ. ನಾನ್ಯ ದೇವನನ್ನು ರಾಜನನ್ನಾಗಿ ಪಡೆದು ಆಳಿದ ಕರ್ಣಾಟಕ ರಾಜವಂಶವೊಂದು ನೇಪಾಳದಲ್ಲಿ ಕಂಡುಬರುತ್ತದೆ. ಹಾಗೆಯೇ ಬಂಗಾಳದ ಸೇನರು. ಜೋಧಪುರ ಮತ್ತು ಬಿಕನೀರಿನ ರಾಠೋಡರು ಕರ್ನಾಟಕ ವಂಶಕ್ಕೆ ಸೇರಿದವರು.

ಕರ್ನಾಟಕದ ರಾಜರು ಧರ್ಮವಿಜಯಿಗಳಾಗಿದ್ದರು. ಶತ್ರುಗಳೊಡನೆ ಹೋರಾಡುತ್ತಿದ್ದಾಗಲೂ ಉದಾತ್ತ ಆದರ್ಶ ಅವರ ಕಣ್ಣ ಮುಂದಿರುತ್ತಿತ್ತು. ವಿಜಯಿಗಳಾದಾಗಲೂ ಕ್ಷಮಾಗುಣ ಅವರ ಪರಾಕ್ರಮಕ್ಕೆ ಅಲಂಕಾರಪ್ರಾಯವಾಗಿ ಶೋಭಿಸುತ್ತಿತ್ತು. ಶರಣಾಗತ ರಕ್ಷಣೆ ಕರ್ನಾಟಕದ ರಾಜರುಗಳಲ್ಲಿ ಕಂಡುಬರುವ ಬಹುದೊಡ್ಡ ಗುಣ. ಕೆಳದಿಯ ರಾಣಿ ಚೆನ್ನಮ್ಮನ ಸಾಹಸವನ್ನು ಸ್ಮರಿಸಿಕೊಳ್ಳಬಹುದು. ಶಿವಾಜಿಮಗನಿಗೆ ಆಶ್ರಯವನ್ನು ಕೊಟ್ಟು ಆಕೆ ಅದಕ್ಕಾಗಿ ಔರಂಗ್ಜೇಬನನ್ನು ದಿಟ್ಟತನದಿಂದ ಎದುರಿಸಿದುದು ಮಾತ್ರವಲ್ಲದೆ ಸೋಲಿಸಿ ಹಿಮ್ಮೆಟ್ಟಿಸಲು ಸಮರ್ಥಳಾದಳೆಂಬುದು ನೈತಿಕ ಬಲದ ಮಹಾವಿಜಯವನ್ನು ಸಾರಿಹೇಳುತ್ತದೆ. ಕೆಳದಿಯ ಶಿವಪ್ಪನಾಯಕನೂ ಈ ಸಂದರ್ಭದಲ್ಲಿ ಸ್ಮರಣೀಯ ವ್ಯಕ್ತಿ.

ಪ್ರಾಚೀನ ರಾಜ್ಯಪದ್ಧತಿಯಲ್ಲಿ ರಾಜವಂಶಗಳ ಶಕ್ತಿ. ನಾಡಿನ ಆಗುಹೋಗುಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿತ್ತು. ನಾಡಿನ ರಾಜಕೀಯ ಚರಿತ್ರೆಯೆಂದರೆ ರಾಜವಂಶಗಳ ಚರಿತ್ರೆಯೇ. ಆದರೂ ಜನಜೀವನದ ಎಲ್ಲ ಅಂಶಗಳನ್ನೂ ಅದು ವ್ಯಾಪಿಸಲಿಲ್ಲ. ಜನಪದ ಜೀವನದ ಅಂತರಂಗವನ್ನು ಆವರಿಸಿದ್ದು ರಾಜ್ಯಶಕ್ತಿಯಲ್ಲ ; ಧರ್ಮಶಕ್ತಿ. ರಾಜರು ಸಹ ಅದಕ್ಕೆ ಅಧೀನರಾಗಿ ನಡೆಯುತ್ತಿದ್ದರು. ಆಡಳಿತ ಕ್ರಮವನ್ನೂ ಆರ್ಥಿಕ ರೀತಿನೀತಿಗಳನ್ನೂ ರೂಪಿಸುವುದರಲ್ಲಿ ಸಹ ರಾಜನಿಗೆ ಧರ್ಮಶಾಸ್ತ್ರಗಳೇ ಮಾರ್ಗದರ್ಶಕವಾಗಿದ್ದುವು. ರಾಜ್ಯಶಕ್ತಿ ಧರ್ಮಶಕ್ತಿಗೆ ಅಧೀನವಾಗಿ ನಡೆಯುತ್ತಿತ್ತು.

ಶಾಸನಗಳಿಂದಲೂ ಈ ಅಂಶ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಕರ್ನಾಟಕ ಸಂಸ್ಕೃತಿಯ ಸ್ವರೂಪವನ್ನು ತಿಳಿಯುವುದಕ್ಕೆ ಶಾಸನಗಳು ಅಮೂಲ್ಯವಾದ ಆಧಾರಗಳಾಗಿ ಪರಿಣಮಿಸಿವೆ. ಊರಿನ ಮತ್ತು ನಾಡಿನ ರಕ್ಷಣೆಗಾಗಿ, ಕೆಡುಕಿನ ನಾಶಕ್ಕಾಗಿ, ಒಳಿತಿನ ಸಂವರ್ಧನೆಗಾಗಿ ನಾಡಿನ ವೀರರು ತಮ್ಮನ್ನು ಅರ್ಪಿಸಿಕೊಳ್ಳುತ್ತಿದ್ದ ಧರ್ಮ ವೀರತ್ವವನ್ನು ಅಸಂಖ್ಯಾತ ವೀರಗಲ್ಲುಗಳು ತೋರಿಸಿಕೊಡುತ್ತವೆ. ದಾನಶಾಸನ ದತ್ತಿಶಾಸನಗಳನ್ನು ನೋಡಿದಾಗ ನಾಡಿನ ಧಾರ್ಮಿಕ ಜೀವನದ ವಿವಿಧ ಮುಖಗಳ ಪರಿಚಯವಾಗುತ್ತದೆ. ರಾಜರು ಸಾಮಂತರು ಅಧಿಕಾರಿಗಳು ರಾಣಿಯರು ಮಾತ್ರವಲ್ಲದೆ ಸಾಮಾನ್ಯ ಕೆಲಸಗಾರರೂ ಸೇವಕರೂ ದಾನವಿತ್ತು ಶಾಸನಸ್ಥರಾಗಿರುವುದು ಕರ್ನಾಟಕದ ಶಾಸನಗಳಲ್ಲಿ ಕಂಡುಬರುವ ವಿಶೇಷ ಅಂಶ. ಧರ್ಮಸಮನ್ವಯಾಗಿ ಶಾಸನಗಳು ಸಾಧಿಸಿರುವ ರೀತಿ ಕರ್ನಾಟಕದ ಶಾಸನಗಳ ಇನ್ನೊಂದು ಪ್ರಮುಖ ಸಾಧನೆ. ಸರ್ವಧರ್ಮಧೇನು ನಿವಹಕ್ಕಾಡುಂಬೊಲಂ ಬೆಳ್ವೂಲಂ- ಎಂದು ಒಂದು ಶಾಸನ ಹೇಳುವ ಮಾತನ್ನು ಇಡೀ ಕರ್ನಾಟಕಕ್ಕೇ ಅನ್ವಯಿಸಬಹುದು. ನಾಡಿನ ಇತಿಹಾಸದ ಪ್ರಾರಂಭದಲ್ಲಿಯೇ ಜೈನಧರ್ಮ ಇಲ್ಲಿ ಕಾಲಿಟ್ಟು ಇನ್ನೆಲ್ಲೂ ಸಿಕ್ಕದಿರುವ ರಕ್ಷಣೆಯನ್ನು ಪಡೆದು ಬೆಳೆಯಿತು. ಬೌದ್ಧಧರ್ಮದ ಪ್ರಚಾರಕ್ಕೂ ಇದು ಕೇಂದ್ರವಾಗಿತ್ತೆಂಬುದು ಇಲ್ಲಿ ದೊರೆಯುವ ಅಶೋಕನ ಶಾಸನಗಳಿಂದ ವ್ಯಕ್ತವಾಗುತ್ತದೆ. ಅನಂತರ ಶೈವಧರ್ಮ ವಿಶೇಷ ಪ್ರಾಬಲ್ಯಕ್ಕೆ ಬಂತು. ಶ್ರೀ ಶಂಕರಾಚಾರ್ಯರ ಕಾವ್ಯಕ್ಷೇತ್ರದ ಕೇಂದ್ರವಾಗಿ ಅವರ ಒಂದು ಮಠ ಇಲ್ಲಿ ಸ್ಥಾಪಿತವಾಯಿತು. ಶ್ರೀ ರಾಮಾನುಜರನ್ನು ಅವರ ಜನ್ಮಭೂಮಿಯಾದ ತಮಿಳುನಾಡನ್ನು ಹೊರದೂಡಲು ಕನ್ನಡ ದೇಶ ಅವರಿಗೆ ಆಶ್ರಯವನ್ನಿತ್ತು ಶ್ರೀವೈಷ್ಣವಧರ್ಮವನ್ನು ಸ್ವಾಗತಿಸಿತು. ಮಧ್ವಾಚಾರ್ಯರಂತೂ ಕನ್ನಡ ಗರ್ಭದಿಂದಲೇ ಮೂಡಿಬಂದವರು. ಈ ಎಲ್ಲ ಧರ್ಮಗಳನ್ನೂ ಸಮಾನ ಭಾವನೆಯಿಂದ ಕಾಣುವ ಸಮನ್ವಯ ಸಂಸ್ಕೃತಿ ಕರ್ನಾಟಕದ ಸಹಜಗುಣ.

ಜನಪದ ಸಂಸ್ಕೃತಿಯ ಸ್ವರೂಪವನ್ನೂ ಸಾರವನ್ನೂ ಇನ್ನೂ ಸಾರವತ್ತಾಗಿ ಮತ್ತು ಜೀವಂತವಾಗಿ ತೋರಿಸಿಕೊಡುವ ಮಾಧ್ಯಮವೆಂದರೆ ಜನಪದ ಸಾಹಿತ್ಯ. ಸಮಷ್ಟಿ ಮನಸ್ಸಿನ ನೇರವಾದ ಅಭಿವ್ಯಕ್ತಿ ಇದು. ಸಾಮಾನ್ಯ ಜನಗಳ ಅನುಭವಗಳಿಂದ ಮತ್ತು ಆಶೋತ್ತರಗಳಿಂದ ಇದು ಸಹಜವಾಗಿ ಹುಟ್ಟುತ್ತದೆ. ಕರ್ನಾಟಕ ಜನಪದ ಸಾಹಿತ್ಯ ವಿಪುಲತೆ ವೈವಿಧ್ಯಗಳಲ್ಲಿ ಅಪಾರವಾಗಿರುವಂತೆ, ಸತ್ತ್ವದಲ್ಲಿ ಮಹೋನ್ನತವೂ ಮಹತ್ತ್ವ ಪೂರ್ಣವೂ ಆಗಿದೆ. ಬಹುಮುಖವಾದ ಜೀವನದ ಹರಹನ್ನೂ ಹಾಸುಬೀಸುಗಳನ್ನೂ ಶಕ್ತಿ ಸಂಪನ್ನವಾದ ರೀತಿಯಲ್ಲಿ ಜನಸಾಮಾನ್ಯರ ಭಾಷೆ ಹಿಡಿದಿಟ್ಟಿರುವ ಪವಾಡ ಇಲ್ಲಿಯ ಜನಪದ ಸಾಹಿತ್ಯದಲ್ಲಿ ಕಾಣುತ್ತದೆ. ಲಾವಣಿಗಳು, ಗರತಿಯ ಹಾಡುಗಳು, ಕೋಲಾಟದ ಪದಗಳು ನಲ್ಲಹರಕೆಗಳು ದೇವರಗುಡ್ಡರ ಪದಗಳು ಮೊದಲಾದವು ಜನಪದ ಸಾಹಿತ್ಯದ ವೈಶಿಷ್ಟ್ಯಕ್ಕೆ ಕರ್ನಾಟಕದ ಕೊಡುಗೆಗಳೆನ್ನಬಹುದು. ಯಕ್ಷಗಾನ ಬಯಲಾಟಗಳು, ತೊಗಲು ಬೊಂಬೆಯ ಆಟ, ಹುಲಿವೇಷ ಸುಗ್ಗಿಯ ಕುಣಿತ-ಮೊದಲಾದ ಜನಪದ ನೃತ್ಯಗಳನ್ನು ಇಲ್ಲಿ ಸ್ಮರಿಸಿಕೊಳ್ಳಬೇಕಾಗುತ್ತದೆ. ಜನತೆಯ ಸಂಸ್ಕೃತಿಯನ್ನು ಪ್ರತಿಬಿಂಬಿಸಿರುವ ಅಷ್ಟೇ ಪ್ರಭಾವಶಾಲಿಯಾದ ಇನ್ನೊಂದು ಮುಖ, ಪ್ರೌಢಸಾಹಿತ್ಯ, ಇದಕ್ಕೆ ಹಿನ್ನಲೆಯಾಗಿ ವಿವಿಧ ಧರ್ಮಪರಂಪರೆಗಳೂ ಬೆಳೆದುಬಂದುವು. ಜನಜೀವನದ ಅಂತರಂಗದ ಸಂಸ್ಕಾರಗಳನ್ನೂ ಅದಕ್ಕನುಗುಣವಾದ ಬಹಿರಂಗದ ನಡೆನುಡಿಗಳನ್ನೂ ರೂಪುಗೊಳಿಸುವುದರಲ್ಲಿ ಧರ್ಮ ಮತ್ತು ಸಾಹಿತ್ಯಗಳ ಸ್ಥಾನ ಅತಿ ಪ್ರಬಲವಾದುದು. ಕರ್ನಾಟಕದಲ್ಲಿ ಇವೆರಡೂ ಒಂದಕ್ಕೊಂದು ಪುರಕವಾದುವು; ಒಂದೇ ಶಕ್ತಿಯ ಎರಡು ಮುಖಗಳಾಗಿ ಪರಿಣಮಿಸಿದವು. ಸಾಹಿತ್ಯಕ್ಕೆ ಧರ್ಮ ಪ್ರೇರಕಶಕ್ತಿಯಾಯಿತು; ಧರ್ಮಕ್ಕೆ ಸಾಹಿತ್ಯ ಪುರಕಶಕ್ತಿಯಾಯಿತು. ಜನತೆಯ ಜಾಗೃತಿಗಾಗಿ ಇವೆರಡೂ ಮೀಸಲಾದುವು.

೧೨ನೆಯ ಶತಮಾನವಂತೂ ಭರತಖಂಡದ ಧಾರ್ಮಿಕ ಮತ್ತು ಸಾಹಿತ್ಯ ಇತಿಹಾಸದಲ್ಲಿಯೇ ಒಂದು ಅದ್ವಿತೀಯವಾದ ಯುಗ. ಭರತಖಂಡ ಆ ಕಾಲದಲ್ಲಿ ಕಂಡರಿಯದಂಥ ಸಾಮಾಜಿಕ ಮತ್ತು ಧಾರ್ಮಿಕ ಸಮತೆಯನ್ನು ಬೋಧಿಸಿದುದಲ್ಲದೆ ಸಾಧಿಸಿಯೂ ತೋರುವ ಅಪೂರ್ವ ಅವಕಾಶ ಕರ್ನಾಟಕಕ್ಕೆ ಬಂತು. ಅದನ್ನು ತಂದುಕೊಟ್ಟವರು ಬಸವಣ್ಣನವರು ಮತ್ತು ಶರಣರು. ಅಸ್ಪೃಶ್ಯತೆಯ ನಿರ್ಮೂಲನ, ಕಾಯಕದ ಮಹತ್ತ್ವ ಮೊದಲಾದ ಅವರ ಕ್ರಾಂತಿಕಾರಕ ಸಾಧನೆಗಳು ಕರ್ನಾಟಕ ಸಂಸ್ಕೃತಿಯ ಒಂದು ಮಹತ್ತರ ಘಟ್ಟ. ಅವರ ಆ ಪುಣ್ಯಸಾಹಸದ ಫಲವಾಗಿ ರೂಪುಗೊಂಡಿದ್ದು ವಚನ ಸಾಹಿತ್ಯ. ಈ ವಚನಗಳದು ಬಹುಶಃ ಇನ್ನಾವ ಭಾರತೀಯ ಭಾಷೆಗೂ ಇಲ್ಲದ ಒಂದು ವಿಶಿಷ್ಟ ರೂಪ. ಇವು ಒಂದು ಹೊಸ ವೀರಶೈವ ಧರ್ಮ ಪರಂಪರೆಯ ಮೇಲ್ಮೆಗೆ ನಾಂದಿಯಾಯಿತು.

ಕರ್ನಾಟಕದ ಗರ್ಭದಿಂದ ಆವಿರ್ಭವಿಸಿದ ಇನ್ನೊಬ್ಬ ಆಚಾರ್ಯ ಮಧ್ವರು ಪ್ರತಿಪಾದಿಸಿದ ತತ್ತ್ವಸಿದ್ಧಾಂತದ ಮೇಲೆ ಬೆಳೆದು ಪುರಂದರಾದಿ ದಾಸರ ಕೀರ್ತನೆಗಳಿಗೆ ಕಾರಣವಾದ ದಾಸಸಾಹಿತ್ಯ ಕನ್ನಡದ ಇನ್ನೊಂದು ವೈಶಿಷ್ಟ್ಯ. ಅಂತೆಯೇ ನಿಜಗುಣ ಶಿವಯೋಗಿಗಳೇ ಮೊದಲಾದ ಸಂತರಿಂದ ಬೆಳೆದುಬಂದ ತತ್ತ್ವಸಾಹಿತ್ಯ ಅಗಾಧವಾದುದು. ಚಂಪು ರಗಳೆ ಷಟ್ಪದಿ ಸಾಂಗತ್ಯ ತ್ರಿಪದಿ ವಚನ ಹಾಡು-ಈ ಮೊದಲಾದ ವೈವಿಧ್ಯಗಳು ಕನ್ನಡ ಸಾಹಿತ್ಯ ಸಾಧನೆಯ ವಿಶಿಷ್ಟ ಅಂಶಗಳು. ಪ್ರಯೋಗಶೀಲತೆ ಕನ್ನಡ ಸಾಹಿತ್ಯದ ದಾರಿದೀಪ; ಪರಿಪಕ್ವ ಅನುಭವ ಆ ದಾರಿಯಲ್ಲಿ ಮುನ್ನಡೆಸುವ ಚೈತನ್ಯಶಕ್ತಿ.

ಇತರ ಕಲೆಗಳಲ್ಲಿಯೂ ಕರ್ನಾಟಕ ಸಂಸ್ಕೃತಿಯ ಅಭಿವ್ಯಕ್ತಿ ಹಲವಾರು ರೂಪಗಳಲ್ಲಿ ಬೆಳೆದುಬಂದಿದೆ. ವಾಸ್ತುಶಿಲ್ಪ, ಶಿಲ್ಪ, ಸಂಗೀತ, ನೃತ್ಯ, ಚಿತ್ರ ಈ ಎಲ್ಲ ಕಲೆಗಳಲ್ಲೂ ಇದರ ಅಭಿವ್ಯಕ್ತಿಯ ಅನೇಕ ಮುಖಗಳು ಕಂಡುಬರುತ್ತವೆ. ಜನರ ಸೌಂದರ್ಯದೃಷ್ಟಿ ಮತ್ತು ಉದಾತ್ತವಾದ ಮನೋಧರ್ಮ ಇವುಗಳಲ್ಲಿ ಉಜ್ಜ್ವಲವಾಗಿ ವ್ಯಕ್ತವಾಗಿದೆ. ಯಾವುದೇ ಕಲಾಕೃತಿ ಮಹೋನ್ನತವಾಗಬೇಕಾದರೆ ತಾನು ಹುಟ್ಟಿದ ಪರಿಮಿತವಾದ ಪರಿಸರವನ್ನು ಮೀರಿ ಬೆಳೆದು ವಿಶ್ವವ್ಯಾಪಕವಾಗಬೇಕು; ಮತ್ತು ವೈಯಕ್ತಿಕತೆಯಿಂದ ಮೇಲೇರಿ ಸರ್ವಸಾಧಾರಣವಾದ ಮಾನವೀಯ ಭಾವಗಳನ್ನು ಮಿಡಿಯಬೇಕು. ಈ ಅಂಶಗಳನ್ನು ಕರ್ನಾಟಕದ ಕಲಾಕೃತಿಗಳು ಸಾಧಿಸಿ ತೋರಿಸಿವೆ. ಎತ್ತರದ ಗಿರಿಶಿಖರದ ಮೇಲೆ ನಿಂತಿರುವ ಬೃಹತ್ ಭವ್ಯ ಗೊಮ್ಮಟೇಶ್ವರನನ್ನು ಕಂಡಾಗ, ಅಪೂರ್ವವಾದ ರೀತಿಯಲ್ಲಿ ಎರಡು ದೇವಾಲಯಗಳನ್ನು ಒಟ್ಟಾಗಿ ಸೇರಿಸಿದ ಹೊಯ್ಸಳೇಶ್ವರ ದೇವಾಲಯವನ್ನು ಪ್ರವೇಶಿಸಿದಾಗ, ಇಡೀ ಕಲ್ಲುಗುಡ್ಡವನ್ನೇ ಕೊರೆದು ನಿರ್ಮಿಸಿದ ಆಭೂತಪೂರ್ವವಾದ ಕೈಲಾಸದೇವಾಲಯದ ಬಳಿ ಸಾರಿದಾಗ, ಅಪಾರ ಅನುಕಂಪೆಯ ಚೈತನ್ಯ ಮೂರ್ತಿಯಾದ ಬೋಧಿಸತ್ತ್ವ ಪದ್ಮಪಾಣಿಯ ಪ್ರಭಾವಲಯಕ್ಕೆ ಒಳಗಾದಾಗ, ಎಲಿಫೆಂಟ ಗುಹೆಯನ್ನು ಹೊಕ್ಕು ಸೃಷ್ಟಿಸ್ಥಿತಿಪ್ರಳಯಗಳ ಸಾಂಕೇತಿಕ ನಿರೂಪಣೆಯ ಮಹಾ ಕಲಾಕೃತಿಯಾದ ತ್ರಿಮೂರ್ತಿಯ ಮುಂದೆ ನಿಂತಾಗ-ದೇಶಕಾಲಗಳ ಪರಿಮಿತ ವಲಯದಿಂದ ಮೇಲೇರಿ ವಿಶ್ವಮಾನವನ ಮಹತ್ಸಾಧನೆಯ ಸಾಕ್ಷಾತ್ಕಾರವನ್ನು ಪಡೆಯುತ್ತೇವೆ. ಕರ್ನಾಟಕ ಸಂಸ್ಕೃತಿಯ ಈ ಶಿಖರಗಳನ್ನು ಕಂಡು ಫರ್ಗೂಸನ್, ಹ್ಯಾವೆಲ್, ಕಸಿನ್ಸ್‌, ಪರ್ಸಿ ಬ್ರೌನ್, ಚಾಲ್ರ್ಸ್‌ ಫ್ಯಾಬ್ರಿ ಮೊದಲಾದ ಅನೇಕ ಪಾಶ್ಚಾತ್ಯ ತಜ್ಞರು ಮಾರುಹೋಗಿದ್ದಾರೆ.

ಕರ್ನಾಟಕದ ಕಲಾಕೃತಿಗಳು ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡಿವೆ. ಆದರೆ ಆ ಸ್ವಂತಿಕೆ ಅವುಗಳ ಸುತ್ತಕಟ್ಟಿದ ಒಂದು ಬೇಲಿಯಾಗಿರದೆ, ಮೇಲೇರುವ ನಿಚ್ಚಣಿಗೆಯಾಗಿ ಪರಿಣಮಿಸಿದೆ. ವೈಶಿಷ್ಟ್ಯವೆನ್ನುವುದು ಇತರರಿಂದ ಸಂಪೂರ್ಣ ಭಿನ್ನವಾಗಿರಲೇಬೇಕೆಂಬ ವಿಕೃತ ಸಿದ್ಧಾಂತಕ್ಕೆಡೆಕೊಡಬಾರದು. ಕರ್ನಾಟಕದ ಕಲೆಗಳು ಮತ್ತು ಅವುಗಳನ್ನು ರೂಪಿಸಿದ ಜೀವನದೃಷ್ಟಿ ಸಹ ಇದರಿಂದ ಮುಕ್ತವಾಗಿವೆ. ಇತರ ಶೈಲಿಗಳಲ್ಲಿ ಕಾಣುವ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡು ಮತ್ತು ಅರಗಿಸಿಕೊಂಡು ಅವು ಪರಿಪುಷ್ಟವಾಗಿ ಬೆಳೆದಿವೆ. ಕಲಾವಂತಿಕೆಗಿರಬೇಕಾದ ಈ ಉದಾರಮನೋಭಾವದ ವಿಕಾಸಕ್ಕೆ ಕರ್ನಾಟಕ ಪೋಷಕ ಭೂಮಿಯಾಗಿ ಪರಿಣಮಿಸಿತು. ಧರ್ಮದಲ್ಲಿಯೇ ಆಗಲಿ, ಸಾಹಿತ್ಯದಲ್ಲಿಯೇ ಆಗಲಿ, ಇತರ ಯಾವ ಕಲಾಮಾಧ್ಯಮಗಳಲ್ಲಿಯೇ ಆಗಲಿ ಇನ್ನೊಂದು ಕಡೆಯಿಂದ ಒಳ್ಳೆಯದನ್ನು ತೆಗೆದುಕೊಳ್ಳಲು ಇದು ಎಂದೂ ಹಿಂದೆಮುಂದೆ ನೋಡಿಲ್ಲ. ಇದು ಅನುಕರಣೆಯಲ್ಲ, ಗುಣಗ್ರಾಹಿತನ, ಕರ್ನಾಟಕ ಒಳ್ಳೆಯದನ್ನೆಲ್ಲ ಗ್ರಹಿಸಿತು; ಅನುಕರಿಸಲಿಲ್ಲ; ತನ್ನ ಪುನರನುಭವದಿಂದ ನೂತನವಾಗಿ ಸೃಷ್ಟಿಸಿತು. ಆದುದರಿಂದ ಕರ್ನಾಟಕ ಸಂಸ್ಕೃತಿಯಲ್ಲಿ ಮತ್ತು ಅದರ ಕಲಾಭಿವ್ಯಕ್ತಿಯಲ್ಲಿ ಎಲ್ಲ ಒಳ್ಳೆಯ ಅಂಶಗಳೂ ಸಮಾವೇಶಗೊಂಡುವು. ವಿಪುಲವೂ ವೈವಿಧ್ಯಪೂರ್ಣವೂ ವಿಸ್ತಾರವೂ ವ್ಯಾಪಕವೂ ಗಂಭೀರವೂ ಪೂರ್ಣದೃಷ್ಟಿ ಸಮನ್ವಿತವೂ ಆಗಿ ಬೆಳೆಯಲು ಈ ಮನೋಧರ್ಮ ಕಾರಣವಾಯಿತು.

ಒಂದು ಸಂಸ್ಕೃತಿಯ ಹಿರಿಮೆ ಇರುವುದು ಅದರ ಶಿಖರಗಳಲ್ಲಿ ಮಾತ್ರವಲ್ಲ. ಅದರತ್ತ ಏರುವ ಒಂದೊಂದು ಹೆಜ್ಜೆಯಲ್ಲಿಯೂ ಅದು ವ್ಯಕ್ತವಾಗುತ್ತದೆ. ಪರಿಪಕ್ವ ಮನಸ್ಸಿನ ಪರಿಣತ ಫಲ ಸಂಸ್ಕೃತಿ. ಇದರ ಹಿನ್ನೆಲೆಯನ್ನು ಒಳಗೊಂಡ ಕಲಾಕೃತಿಗಳು ಕಲಾವಿದನ ಪ್ರತಿಭೆಯ ಪ್ರತಿನಿಧಿ ಮಾತ್ರವಲ್ಲದೆ ಜನಾಂಗದ ನಿಧಿಯೂ ಆಗುತ್ತವೆ. ಅವುಗಳ ವಿಕಾಸದಲ್ಲಿ ಜನಜೀವನದ ಪ್ರತಿಬಿಂಬವನ್ನೇ ಕಾಣುತ್ತೇವೆ. ಈ ಅರ್ಥದಲ್ಲಿ ಕಲೆ ಎನ್ನುವುದು ಸಮಾಜದ ಆತ್ಮಕಥೆ. ಕರ್ನಾಟಕದ ಕಲೆಗಳಿಗೆ ಈ ಮಾತು ಸಂಪೂರ್ಣವಾಗಿ ಅನ್ವಯಿಸುತ್ತದೆ. ಕನ್ನಡನಾಡಿನ ಆತ್ಮಕಥೆಯನ್ನು ಹೇಳುವ ಶಕ್ತಿಸಾಧನಗಳಾಗಿ ಅವು ಉಳಿದಿವೆ. ಆಂತರಂಗಿಕ ಅನುಭವದ ಆಧ್ಯಾತ್ಮಿಕ ಸಾಧನೆಗಳು, ಧಾರ್ಮಿಕ ಆಚರಣೆಗಳು, ಹಬ್ಬ ಹರಿದಿನಗಳು, ಸಾಹಿತ್ಯಕಲೆಗಳು-ಮೊದಲಾದವುಗಳಿಂದ ಹಿಡಿದು ಬಹಿರಂಗದ ಪರಿಕರಗಳೆನ್ನ ಬಹುದಾದ ಬಟ್ಟೆ ನೇಯುವುದು- ಬುಟ್ಟಿ ಹೆಣೆಯುವುದು. ಬಣ್ಣಹಾಕುವುದರ ವರೆಗಿನ ಎಲ್ಲ ಚಟುವಟಿಕೆಗಳೂ ವಿಶಾಲವಾದ ಅರ್ಥದಲ್ಲಿ ಈ ವಲಯದೊಳಕ್ಕೇ ಬರುತ್ತವೆ. ಜೀವನದ ಎಲ್ಲ ಅಂಗಗಳಲ್ಲಿಯೂ ಊರುಗಳ ಮತ್ತು ವ್ಯಕ್ತಿಗಳ ಹೆಸರುಗಳಲ್ಲಿಯೂ ನಾಡಿನ ಸಂಸ್ಕೃತಿಯ ಆತ್ಮಕಥೆ ಮಿಡಿಯುತ್ತಿದೆ.

ಬದಲಾಗುತ್ತಿರುವ ಸನ್ನಿವೇಶಕ್ಕೆ ಅನುಗುಣವಾಗಿ ಜನಜೀವನ ಹೊಂದಿಕೊಳ್ಳಬೇಕಾಗುತ್ತದೆ. ಹೊಸ ಹೊಸ ವಿಚಾರಗಳ ಮಥನದಿಂದ ಅನೇಕ ಹಳೆಯ ನಂಬಿಕೆಗಳು ಕುಸಿಯುತ್ತವೆ; ಹೊಸ ಬೆಳಕು ಮೂಡುತ್ತದೆ. ಅದು ಅನಿವಾರ್ಯ ಮತ್ತು ಅಗತ್ಯ; ಹಣ್ಣೆಲೆ ಉದುರಿ ಹೊಸ ಎಲೆ ಚಿಗುರುವಂತೆ ಸಹಜವೂ ಹೌದು. ವೃಕ್ಷ ಜೀವಂತವಾಗಿರುವುದರ ಲಕ್ಷಣ ಅದು. ಕರ್ನಾಟಕ ಸಂಸ್ಕೃತಿ ಇಂಥ ಜೀವಂತ ಲಕ್ಷಣವನ್ನು ಪಡೆದು ಹೊಸ ಹೊಸ ಚಿಗುರನ್ನು, ಹೂವುಹಣ್ಣುಗಳನ್ನು ಅರಳಿಸುತ್ತ ಬಂದಿದೆ. ತಳದಲ್ಲಿರುವ ತಾಯಿಬೇರಿನ ಸತ್ತ್ವದಿಂದ ಮೇಲೆ ಪಲ್ಲವಿಸಿ ನಿತ್ಯನೂತನವಾಗಿ ನಳನಳಿಸುತ್ತಿದೆ.

ಇಂದಿನ ಜಾಗತೀಕರಣ ಮತ್ತು ಅಭಿವೃದ್ಧಿ ಬಲಗಳ ಒತ್ತಡದ ಪರಿಸರದಲ್ಲಿ ಕರ್ನಾಟಕ ನವೀನ ಸಂಸ್ಕೃತಿಯ ಆವಿರ್ಭಾವದ ಯುಗಕ್ಕೆ ಪ್ರವೇಶಿಸಿದೆ. ಬೆಂಗಳೂರು ಸಿಲಿಕಾನ್ ನಗರವಾಗಿ ಭಾರತತಂತ್ರಜ್ಞಾನದ ರಾಜಧಾನಿ ಎನಿಸಿಕೊಂಡಿದೆ. ಇತರ ನಗರಗಳೂ ಆ ದಾರಿಯಲ್ಲಿವೆ. ಎಲ್ಲೆಡೆ ಶಕ್ತಿಉತ್ಪಾದನಾ ಉದ್ಯಮಗಳು, ಮತ್ತು ಪ್ರಾಕೃತಿಕ ಸಂಪನ್ಮೂಲಗಳನ್ನು ಹೊರತೆಗೆಯುವ ಉದ್ಯಮಗಳು ಬೆಳೆಯುತ್ತಿವೆ. ಇದರಿಂದ ಭೂಮಿಯ ಬಳಕೆಯ ಬಗ್ಗೆ ಒತ್ತಡ ಹೆಚ್ಚಿದೆ. ರಾಜ್ಯದೊಳಗಿನ ಅಪಾರ ಬಂಡವಾಳ ಹರಿದು ಬರುತ್ತಿರುವುದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗಿ ಜೀವನ ಶೈಲಿಯಲ್ಲಿ ಬದಲಾವಣೆಗಳಾಗುತ್ತಿವೆ. ಶಿಕ್ಷಣ ಕ್ಷೇತ್ರ ಅಪೂರ್ವ ಪ್ರಗತಿ ಸಾಧಿಸುತ್ತಿದೆ. ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆಗಳು, ತಲ್ಲಣ ಅನುಭವಿಸುತ್ತಿವೆ. ಬಡವ-ಬಲ್ಲಿದರ ನಡುವೆ ಅಂತರ ಹೆಚ್ಚಿದೆ. ಕನ್ನಡ ಭಾಷೆ, ಹೊರಗಿನ ಒತ್ತಡದಿಂದ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಈ ಸವಾಲು ಮತ್ತು ಜವಾಬುಗಳ ಯುಗದಲ್ಲಿ ಭಾರತೀಯ ಸಂಸ್ಕೃತಿಯ ಹೊಸ ಮಾರ್ಪಾಡಿನೊಂದಿಗೆ ಕರ್ನಾಟಕ ಸಂಸ್ಕೃತಿಯೂ ಹೆಜ್ಜೆ ಹಾಕುತ್ತಿದೆ- ಯಶಸ್ವಿಯಾಗಿ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: