ಕದಂಬ ಮನೆತನ
ಕದಂಬ ಮನೆತನ : ಪಶ್ಚಿಮ ಕರ್ನಾಟಕದಲ್ಲಿ ಪ್ರ.ಶ. ೪-೭ನೆಯ ಶತಮಾನದವರೆಗೆ ಸ್ವತಂತ್ರರಾಗಿಯೂ ೧೦-೧೩ನೆಯ ಶತಮಾನದವರೆಗೆ ಹಾನುಗಲ್ಲು, ಗೋವ ಮುಂತಾದ ಕಡೆಗಳಲ್ಲಿ ಬಹುತೇಕ ಸಾಮಂತರು ಅಥವಾ ಮಾಂಡಲಿಕರಾಗಿಯೂ ಆಳಿದ ಒಂದು ರಾಜಮನೆತನ. ಈ ಮನೆತನದ ಅರಸರಿಗೆ ಸಂಬಂಧಿಸಿದ ಶಾಸನಗಳು ಮತ್ತು ದಿನಾಂಕಗಳನ್ನು ಆಯಾ ಅರಸರ ಆಳ್ವಿಕೆಯ ವರ್ಷ ಮಾಸ ಪಕ್ಷ ದಿನಗಳ ಎಣಿಕೆಯಲ್ಲಿ ನಿರೂಪಿಸಿರುವುದರಿಂದ ಇವಕ್ಕೆ ಸಮಾನವಾದ ತಾರೀಖುಗಳನ್ನು ನಿಷ್ಕರ್ಷಿಸುವುದು ಕಷ್ಟವೆಂದು ಹೇಳಲಾಗಿದೆ. ಆದರೂ ಸ್ಥೂಲವಾಗಿ ಇವರು ಮೇಲೆ ಸೂಚಿಸಿದ ಅವಧಿಯಲ್ಲಿ ಆಳ್ವಿಕೆ ನಡೆಸಿದರೆಂದು ಸ್ವೀಕರಿಸಬಹುದಾಗಿದೆ.
Kadambas of Banavasi ಬನವಾಸಿ ಕದಂಬರು | |||||||||
---|---|---|---|---|---|---|---|---|---|
345–525 | |||||||||
Status | Empire (Subordinate to Pallava until 345) | ||||||||
Capital | ಬನವಾಸಿ | ||||||||
Common languages | ಸಂಸ್ಕೃತ ಕನ್ನಡ | ||||||||
Religion | ಹಿಂದೂ ಧರ್ಮ ಜೈನ ಧರ್ಮ | ||||||||
Government | Monarchy | ||||||||
Maharaja | |||||||||
• 345–365 | Mayurasharma | ||||||||
• | Krishna Varma II | ||||||||
History | |||||||||
• Earliest Kadamba records | 450 | ||||||||
• Established | 345 | ||||||||
• Disestablished | 525 | ||||||||
|
ಉಗಮ
ಬದಲಾಯಿಸಿಕದಂಬ ಮನೆತನದ ಉಗಮವಾದದ್ದು ಹೇಗೆಂಬ ಬಗ್ಗೆ ಅನೇಕ ಐತಿಹ್ಯಗಳಿವೆ. ತ್ರಿಲೋಚನ ಕದಂಬನೆಂಬವನು ಈ ಮನೆತನದ ಮೂಲಪುರುಷನೆಂಬುದು ಒಂದು ಕಥೆ. ಅವನಿಗೆ ನಾಲ್ಕು ಕೈ, ಮೂರು ಕಣ್ಣು. ಶಿವನ ಬೆವರು ಕದಂಬ ವೃಕ್ಷದ ಕೆಳಗೆ ಬಿದ್ದು ಆತ ಹುಟ್ಟಿದ. ಆದ್ದರಿಂದಲೇ ಅವನ ವಂಶಸ್ಥರಿಗೆ ಕದಂಬರೆಂದು ಹೆಸರಾಯಿತು. ಅವನ ಮಗ ಮಯೂರವರ್ಮ ಕದಂಬ ರಾಜ್ಯಸ್ಥಾಪಕ. ಮಯೂರವರ್ಮನೇ ಕದಂಬ ವೃಕ್ಷದ ಕೆಳಗೆ ಹುಟ್ಟಿದನೆಂದು ಇನ್ನೊಂದು ಐತಿಹ್ಯ ಸಾರುತ್ತದೆ. ಅವನಿಗೂ ಹಣೆಯ ಮೇಲೆ ಕಣ್ಣಿದ್ದುದರಿಂದ ಕಿರೀಟವನ್ನು ಮುಡಿಯ ಮೇಲೆ ಕಟ್ಟಬೇಕಾಯಿತಂತೆ. ಪರಶುರಾಮಕ್ಷೇತ್ರ ಸೃಷ್ಟಿಯಾದ ಮೇಲೆ ಶಿವಪಾರ್ವತಿಯರು ಸಹ್ಯಾದ್ರಿಯ ಸುಂದರ ಪ್ರದೇಶಕ್ಕೆ ಬಂದಿದ್ದರೆಂದೂ ಅಲ್ಲಿ ಇವರಿಗೆ ಹುಟ್ಟಿದ ಮಗುವೇ ಕದಂಬ ವಂಶದ ಆದ್ಯಪುರುಷನೆಂದೂ ಇನ್ನೊಂದು ಕಥೆಯಿದೆ. ಆದರೆ ಇಂಥ ಕಥೆಗಳೆಲ್ಲ ಕದಂಬರ ಆಡಳಿತ ಆರಂಭವಾದ ಅನೇಕ ವರ್ಷಗಳ ಮೇಲೆ ಹುಟ್ಟಿ ಕೊಂಡವಾದ್ದರಿಂದ ಇವಕ್ಕೆ ಹೆಚ್ಚಿನ ಬೆಲೆ ಕೊಡಬೇಕಾದುದಿಲ್ಲ. ಕದಂಬ ಪುಷ್ಪ ಪಾರ್ವತಿಗೆ ಪ್ರಿಯವಾದುದರಿಂದ ಶಿವಸಂಬಂಧವಾದ ಇಂಥ ಕಥೆಗಳು ಹುಟ್ಟಿ ಕೊಂಡಿರಬಹುದು ಎಂಬುದು ಇತಿಹಾಸಕಾರರ ಅಭಿಪ್ರಾಯ. ಕಥೆಗಳು ಹೇಗಾದರೂ ಇರಲಿ. ಮಯೂರಶರ್ಮನೇ ಈ ರಾಜವಂಶದ ಸ್ಥಾಪಕನೆಂಬುದು ಕಾಕುತ್ಸವರ್ಮನ ತಾಳಗುಂದದ ಶಾಸನದಿಂದ ಗೊತ್ತಾಗುತ್ತದೆ. ಈತ ಮಾನವ್ಯಗೋತ್ರದ ಹಾರಿತೀವಂಶಸ್ಥ ಬ್ರಾಹ್ಮಣನೆಂದೂ ವೇದ ವಿದ್ಯಾಭ್ಯಾಸಕ್ಕಾಗಿ ಪಲ್ಲವರ ರಾಜಧಾನಿಯಾಗಿದ್ದ ಕಂಚಿಗೆ ಹೋಗಿದ್ದಾಗ ಅಲ್ಲಿಯ ರಾಜಭಟನೊಬ್ಬನಿಂದ ಅವಮಾನಕ್ಕೆ ಗುರಿಯಾದುದರ ಫಲವಾಗಿ ಅಸ್ತ್ರವಿದ್ಯೆ ಕಲಿತು ದಂಡುಕಟ್ಟಿ ದಾಳಿ ಮಾಡಿ ಗಡಿನೆಲವನ್ನಾಕ್ರಮಿಸಿ ಕೊಂಡನೆಂದೂ ಗೊತ್ತಾಗುತ್ತದೆ. ಮಗ್ಗುಲ ಮುಳ್ಳಾಗಿದ್ದ ಮಯೂರಶರ್ಮನ ವಿರೋಧ ಕಟ್ಟಿಕೊಳ್ಳಬಾರದೆಂಬ ಉದ್ದೇಶದಿಂದ ಪಲ್ಲವರು ಅವನಿಗಷ್ಟು ಪ್ರದೇಶ ಬಿಟ್ಟುಕೊಟ್ಟರು. ಆದರೆ ಸಾಮಂತನಾಗಿರುವುದು ಅವನಿಗೆ ಹಿಡಿಸಲಿಲ್ಲ. ಸ್ವಲ್ಪ ಕಾಲದಲ್ಲೇ ಆತ ಸ್ವಾತಂತ್ರ್ಯ ಘೋಷಿಸಿಕೊಂಡ. ಸು. ನಾಲ್ಕನೆಯ ಶತಮಾನದ ಚಂದ್ರವಳ್ಳಿಯ ಶಾಸನದ ಪ್ರಕಾರ ಆತತ್ರೈಕೂಟಕ, ಅಭೀರ, ಪಲ್ಲವ, ಪಾರಿಯಾತ್ರಕ, ಶಕಸ್ಥಾನ, ಮೋಕರಿ, ಪುನ್ನಾಟ, ಸಾಯಿಂದಕ (ಸೇಂದ್ರಕ), ಪಾರಿಯಾತ್ರಕ ಮುಂತಾದ ರಾಜ್ಯಗಳನ್ನು ಸೋಲಿಸಿದ. ಆರಾವಳಿಯಿಂದ ವಿಂಧ್ಯದವರೆಗೆ ಇದ್ದದ್ದು ಸಾಯಿಂದಕರ ರಾಜ್ಯ. ಕಾವೇರಿ-ಕಪಿನಿಗಳ ನಡುವಣ ರಾಜ್ಯ ಪುನ್ನಾಟ. ಮೋಕರಿಗಳು ಆಳುತ್ತಿದ್ದ ಉಜ್ಜಯಿನಿ ಮತ್ತು ರಾಜಸ್ಥಾನಗಳ ವರೆಗೆ ಈತ ತನ್ನ ರಾಜ್ಯ ವಿಸ್ತರಿಸಿದನೇ ಎಂಬುದು ಸಂದೇಹಾಸ್ಪದ. ಅಂತೂ ಈ ನಾನಾ ರಾಜ್ಯಗಳ ಅರಸರೊಂದಿಗೆ ಈತ ಘರ್ಷಣೆ ನಡೆಸಿರಬಹುದೆಂಬುದಾಗಿ ಹೇಳಬಹುದಾಗಿದೆ.
ವಂಶಾಡಳಿತ
ಬದಲಾಯಿಸಿಕದಂಬರ ಮೊದಲ ದೊರೆ ಮಯೂರಶರ್ಮನಾದರೂ (೩೨೫-೪೫) ಅವನ ಅನಂತರ ಬಂದವರು ತಮ್ಮ ಹೆಸರುಗಳ ಕೊನೆಯ ಶಬ್ದವನ್ನು ವರ್ಮನೆಂದು ಬದಲಾಯಿಸಿಕೊಂಡು ತಮ್ಮದು ನಾಯಕರಾಜವಂಶವೆಂದು ಸ್ಥಿರಪಡಿಸಿಕೊಂಡರು. ಈ ವಂಶದಲ್ಲಿ ಬಂದ ಅರಸರ ಪೈಕಿ ಕಾಕುತ್ಸ್ಥವರ್ಮ (ಸು. ೪೦೫) ಪ್ರಸಿದ್ಧ. ಈತ ಪಲ್ಲವರೊಂದಿಗೆ ಯುದ್ಧ ಮಾಡಿ, ನೆರೆಯ ಅರಸರೊಂದಿಗೆ ವಿವಾಹಸಂಬಂಧ ಬೆಳೆಸಿ ಹೀಗೆ ನಾನಾ ಉಪಾಯಗಳಿಂದ ರಾಜ್ಯ ವಿಸ್ತರಿಸಿದ. ಇವನ ಮಗಳನ್ನು ಗುಪ್ತವಂಶದ ದೊರೆಯಾದ ಕುಮಾರಗುಪ್ತನ ಮಗನಿಗೆ ಕೊಟ್ಟು ಮದುವೆ ಮಾಡಿದನೆಂದು ಗೊತ್ತಾಗುತ್ತದೆ. ಇವನ ಮಗ ಶಾಂತಿವರ್ಮ (ಸು. ೪೩೦) ಬನವಾಸಿಯಲ್ಲಿ ಆಳ್ವಿಕೆ ಮುಂದುವರಿಸಿದ. ಇನ್ನೊಬ್ಬ ಮಗ ಒಂದನೆಯ ಕೃಷ್ಣವರ್ಮ; ತ್ರಿಪರ್ವತದಲ್ಲಿ ರಾಜ್ಯವಾಳ ತೊಡಗಿದ. ಇವನ ವಂಶವೂ ಮುಂದುವರಿಯಿತು. ಶಾಂತಿವರ್ಮನ ಅನಂತರ ಬಂದ ಮೃಗೇಶ (ಸು. ೪೫೫) ಪಲ್ಲವ ರೊಂದಿಗೂ ಗಂಗರೊಂದಿಗೂ ಯುದ್ಧ ಮಾಡಿದ. ಸಾಮಾನ್ಯವಾಗಿ ಪ್ರತಿಯೊಬ್ಬ ಅರಸನೂ ಪಲ್ಲವರೊಂದಿಗೆ ಯುದ್ಧ ಮಾಡುತ್ತಲೆ ಇದ್ದನೆನ್ನಬಹುದು. ಮೃಗೇಶನ ಕಾಲದಲ್ಲಿ ಕದಂಬ ರಾಜ್ಯ ಇನ್ನೂ ವಿಸ್ತರಿಸಿತು. ಬನವಾಸಿಯ ಜೊತೆಗೆ ಪಲಾಶಿಕಾ ಎಂಬುದು (ಈಗಿನ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿರುವ ಹಳ್ಳಿ) ಎರಡನೆಯ ರಾಜಧಾನಿಯಾಯಿತು. ಮೃಗೇಶನ ಮಗ ರವಿವರ್ಮ. ಅವನ ಮಗ ಹರಿವರ್ಮ. ಶಾಂತಿವರ್ಮನ ವಂಶದಲ್ಲಿ ಹರಿವರ್ಮನೇ ಕೊನೆಯ ದೊರೆ. ಕ್ರಮೇಣ ಪ್ರಬಲರಾಗುತ್ತಿದ್ದ ಚಾಳುಕ್ಯರ ಒಂದನೇ ಪುಲಕೇಶಿ ಇವನನ್ನು ಸೋಲಿಸಿ ಆ ಪ್ರದೇಶಕ್ಕೆ ತಾನೇ ದೊರೆಯಾದ. ಕೃಷ್ಣವರ್ಮನ ವಂಶದ ರಾಜ್ಯವೂ ಚಾಳುಕ್ಯರ ಆಘಾತವನ್ನೆದುರಿಸಲಾರದೆ ಹೋಯಿತು. ಆದ್ಯ ಕದಂಬರನ್ನು ಬಾದಾಮಿಯ ಚಾಳುಕ್ಯರು ರಾಜ್ಯಭ್ರಷ್ಟರನ್ನಾಗಿ ಮಾಡಿದಾಗ ಅವರಿಗೆ ಸಾಮಂತಿಕೆಗಿಂತಲೂ ಕೆಳಗಿನ ಸ್ಥಾನ ಸಿಕ್ಕಿತು. ಆದರೆ ಕ್ರಮೇಣ ಅವರ ಸಂತತಿಯವರು ಹಾನುಗಲ್ಲು ಮತ್ತು ಗೋವೆ ಪ್ರದೇಶಗಳಲ್ಲಿ ಸಾಮಂತ ಪದವಿಯನ್ನು ಗಳಿಸಿ ಮಹಾ ಮಂಡಲೇಶ್ವರರಾದರು. ಇಂದ್ರವರ್ಮ, ಆರ್ಯವರ್ಮ, ಅಜವರ್ಮ, ರವಿವರ್ಮ, ಬೊಪ್ಪವ್ವೆ ಎಂಬ ಕದಂಬ ಅಧಿಕಾರಿಗಳು ಪ್ರ.ಶ. ೮೫೫ ರಿಂದ ೯೬೩ರವರೆಗೆ ಅನುಕ್ರಮವಾಗಿ ಬನವಾಸಿ ಪ್ರದೇಶದಲ್ಲಿ ಅಧಿಕಾರಿಗಳಾಗಿದ್ದರು. ಇಂದ್ರವರ್ಮನ ಅಧಿಕಾರ ಆರಂಭವಾದದ್ದು ರಾಷ್ಟ್ರಕೂಟ ನೃಪತುಂಗನ ಸಾರ್ವಭೌಮತ್ವದಲ್ಲಿ. ಕಿ.ಶ. ೯೬೬ರಲ್ಲಿ ರಾಷ್ಟ್ರಕೂಟರು ದುರ್ಬಲರಾದುದರಿಂದ ಪುನಃ ಕದಂಬರು ತಲೆ ಎತ್ತಿದರು. ಕಲ್ಯಾಣದ ಚಾಳುಕ್ಯರ ಎರಡನೆಯ ತೈಲಪನಿಗೆ ಅಲ್ಪಕಾಲದಲ್ಲಿಯೇ ಅವರು ಸಾಮಂತರಾಗಬೇಕಾಯಿತು. ಅವರ ಸಾರ್ವಭೌಮತ್ವ ೧೧೬೩ರ ವರೆಗೆ ನಡೆಯಿತು. ಆಮೇಲೆ ಕಳಚುರ್ಯ ಬಿಜ್ಜಳ ಮತ್ತು ಅವನ ವಂಶಜರೂ ಬಳಿಕ ೧೧೮೧ ರಿಂದ ೧೨೦೦ರವರೆಗೆ ಪುನಃ ಕಲ್ಯಾಣ ಚಾಳುಕ್ಯ ನಾಲ್ಕನೆಯ ಸೋಮೇಶ್ವರನೂ ಸಾರ್ವಭೌಮರಾದರು. ೧೨೧೩ ರಿಂದ ದೇವಗಿರಿಯ ಸೋಪುಣಯಾದವರ ಚಕ್ರವರ್ತಿತ್ವ ಕರ್ಣಾಟಕದ ಈ ಭಾಗದ ಮೇಲೆ ನಡೆಯಿತು. ಅವರ ಕೊನೆಗಾಲ ೧೨೯೪. ಆಮೇಲೆ ಕದಂಬರು ಸ್ವತಂತ್ರರಾದರು. ಆದರೆ ೧೩೪೭ರ ಹೊತ್ತಿಗೆ ವಿಜಯನಗರದ ಹರಿಹರ ದೊರೆಯ ತಮ್ಮ ಮಾರಪ್ಪ ಕದಂಬರ ಆಳ್ವಿಕೆಗೆ ಕೊನೆಯದಾಗಿ ಇತಿಶ್ರೀ ಬರೆದ.
ವಿಸ್ತಾರ
ಬದಲಾಯಿಸಿಹಾನುಗಲ್ಲಿಂದ ಆಳುತ್ತಿದ್ದ ಬನವಾಸಿಯ ಕದಂಬರಿಗೆ ಬನವಾಸಿ ಮಂಡಲದ ೧೨೦೦೦, ಹಾನುಗಲ್ಲಿನ 500 ಮತ್ತು ಹೈವದ 500 ಗ್ರಾಮಗಳು ಸೇರಿದ್ದುವು. ಗೋವೆಯ ಕದಂಬರಿಗೆ ೧೩೦೫೦ ಗ್ರಾಮಗಳ ರಾಜ್ಯವಿತ್ತು. ೧೪೦೦ ಗ್ರಾಮಗಳ ಉತ್ತರ ಕೊಂಕಣದ ಮೇಲೂ ಅವರ ಪ್ರಭಾವ ಬಹಳ ಕಾಲ ಅಪ್ರತಿಭಟನೀಯವಾಗಿತ್ತು. ಹೈವದ ಮೇಲಿನ ಹಾನುಗಲ್ ಕದಂಬರ ಪ್ರಭುತ್ವ ಕೆಲಸಂದರ್ಭಗಳಲ್ಲಿ ಶಿಥಿಲವಾದದ್ದುಂಟು. ಆದರೂ ಒಟ್ಟಿನಲ್ಲಿ ಕದಂಬ ಸಂತಾನದ ಎರಡು ಪೀಳಿಗೆಗಳು ಆದ್ಯಕದಂಬ ಮಹಾರಾಜ್ಯದ ಮಲೆನಾಡು ಕರಾವಳಿ ಭಾಗಗಳನ್ನು ಹಂಚಿಕೊಂಡ ಹಾಗೆ ಸಾಮಂತಿಕೆಯಿಂದಾದರೂ ಸು. ನಾನೂರು ವರ್ಷಗಳ ಕಾಲ ಆಳಿದ್ದು ಸ್ಪಷ್ಟ. ಏಕಾವಧಿಯಲ್ಲಿ ಇಬ್ಬರು ಕದಂಬರಾಜರ ಹೆಸರುಗಳು ರಾಜ್ಯಭಾರದಲ್ಲಿ ಉಕ್ತವಾಗಿದ್ದರೆ ಅವರು ಸೋದರ ಸಮಾನಾಧಿಕಾರದಿಂದ ಪಿತ್ರಾರ್ಜಿತ ರಾಜ್ಯದ ಭಿನ್ನ ಭಾಗಗಳನ್ನು ಒಂದೇ ಅಥವಾ ಭಿನ್ನ ರಾಜಧಾನಿಗಳಿಂದ ಆಳುತ್ತಿದ್ದರೆಂದು ತಿಳಿಯಬೇಕು. ಈಗ ಬನವಾಸಿ ಊರು ಉತ್ತರ ಕನ್ನಡ ಜಿಲ್ಲೆಯಲ್ಲಿದೆ; ಹಾನುಗಲ್ಲು ಧಾರವಾಡ ಜಿಲ್ಲೆಯಲ್ಲಿದೆ. ಹಲಸಿ ೧೨೦೦ವನ್ನು ಒಳಗೊಂಡಿದ್ದ ಗೋವೆಯ ಕದಂಬ ರಾಜ್ಯಕ್ಕೆ ಇಂದಿನ ಬೆಳಗಾವಿ ಜಿಲ್ಲೆಯ ಬಹುಭಾಗ ಸೇರಿತ್ತು.
ಆದ್ಯಕದಂಬರಿಗೆ ಬಾಣ, ಸೇಂದ್ರಕ, ಭೋಜ, ಮಹಾರಥಿ, ಶಕಪಲ್ಲವ, ಪಾರಿಯಾತ್ರಕ, ತ್ರೈಕೂಟಾಭೀರ, ಕೇಕೆಯ, ಆಳುಪ ಮತ್ತು ಮೋಕರಿಗಳು ಕಪ್ಪಕಾಣಿಕೆಗಳನ್ನು ಕೊಡುತ್ತಿದ್ದರು.ತಲಕಾಡಿನ ಗಂಗ ದೊರೆ ಅವಿನೀತ ಐದನೆಯ ಶತಮಾನದಲ್ಲಿ ಪುನ್ನಾಡಿನ ಕದಂಬರ ಅಳಿಯನಾದಾಗ ಪುನ್ನಾಟಕ ಮೇಲಿನ ದೊರೆತನವನ್ನು ಕದಂಬರಿಂದ ಪಡೆದ. ಇಂದಿನ ಮೈಸೂರು ಜಿಲ್ಲೆಯ ಪ್ರದೇಶ ಅಂದು ಬಯಲುನಾಡು ೫೩೦೦ ಅಥವಾ ಪುನ್ನಾಡು (ಪುನ್ನಾಟ) ಆಗಿತ್ತು. ಹೆಗ್ಗಡದೇವನಕೋಟೆ ತಾಲ್ಲೂಕಿನ ಕೀರ್ತಿಪುರ (ಕಿತ್ತೂರು) ಪುನ್ನಾಡ ಕದಂಬ ಶಾಖೆಯ ರಾಜಧಾನಿಯಾಗಿತ್ತು. ರಾಷ್ಟ್ರವರ್ಮ, ನಾಗದತ್ತ, ಭುಜಗ ಮತ್ತು ರವಿದತ್ತ ಈ ಕದಂಬರು ಪುನ್ನಾಡಿನ ಕದಂಬ ಶಾಖೆಯ ಮೊದಲ ದೊರೆಗಳು. ಪುನ್ನಾಟ ಕದಂಬ ಶಾಖೆಯ ಸ್ಕಂದವರ್ಮನಿಂದ ಗಂಗರಿಗೆ ಅಲ್ಲಿಯ ದೊರೆತನ ಹೋದರೂ ಪುನಃ ಆತನ ಪೀಳಿಗೆಯ ರವಿಯಮ್ಮರಸ ಮುಂತಾದ ಕದಂಬರು ಸು. ೧೦-೧೧ನೆಯ ಶತಮಾನಗಳ ನಡುವೆ ಪುನ್ನಾಡನ್ನು ಆಳತೊಡಗಿದ ಉಲ್ಲೇಖವಿದೆ. ಎರಡನೆಯ ಸ್ಕಂದವರ್ಮ ಕದಂಬ ಅಲ್ಲಿ ೧೦೭೯ರಲ್ಲಿ ಆಳುತ್ತಿದ್ದ. ೧೦೯೦ರಲ್ಲಿ ಅವನ ಮಗ ಕಾಂತಿವರ್ಮ ಕದಂಬ ಪಟ್ಟಕ್ಕೇರಿದ. ಮೈಸೂರು ಜಿಲ್ಲೆಯ ಕಿಕ್ಕಿನಾಡು ಅಥವಾ ಕಿಕಿರೆ ಮತ್ತು ಕೇರಳದ ತೆರುಮಂಗಳಗಳು ಅವನ ತಂದೆಯ ಕಾಲದಿಂದ ಉಪರಾಜಧಾನಿಗಳಾಗಿದ್ದುವು. ಇರಿವ ಚೆಲ್ಲಮ ಅವನ ಮಗ. ೧೧೩೮ರ ಶಾಸನ ಮುಕ್ಕಣ್ಣ ಕದಂಬನನ್ನು ಉಲ್ಲೇಖಿಸುತ್ತದೆ. ೧೩೯೩ರಲ್ಲಿ ಮಹಾರಾಜಾಧಿರಾಜ ಕದಂಬರಾಯ ಒಡಿಯ ಅಯ್ಯ ಅಲ್ಲಿ ವಿಜಯನಗರದ ಸಾಮಂತನಾಗಿ ದೊರೆತನ ಮಾಡುತ್ತಿದ್ದ. ಕೊಡಗಿನ ಆದ್ಯ ದೊರೆಗಳು ಕದಂಬರು. ಬೇಲೂರಿನಲ್ಲಿ ಹೊಯ್ಸಳರಿಗಿಂತ ಮೊದಲು ಕದಂಬ ಶಾಖೆ ಆಳುತ್ತಿತ್ತು. ಬಂಕಾಪುರ, ಉಚ್ಚಂಗಿ, ನಾಗರಖಂಡ, ರಾಯಚೂರು, ನೂರುಂಬಾಡ, ಚಂದಾವರಗಳಲ್ಲಲ್ಲದೆ ಕಳಿಂಗದ ಗಂಗರಸರ ಸಾಮಂತಿಕೆಯಲ್ಲಿ ಕೂಡ ಕದಂಬ ಉಪಮನೆತನವೊಂದು ರಾಜ್ಯಭಾರ ಮಾಡುತ್ತಿತ್ತು.
ಆಡಳಿತ
ಬದಲಾಯಿಸಿಆದ್ಯ ಸಾರ್ವಭೌಮ ಕದಂಬರಲ್ಲಿ ಜಾತೀಯತೆ ಮತೀಯತೆಗಳ ಪೂರ್ವಗ್ರಹಗಳಿರಲಿಲ್ಲ. ಅವರ ಶಾಸನಗಳಲ್ಲಿ ತಮ್ಮ ವರ್ಣ, ಜಾತಿ, ಮತಗಳಿಗೆ ಸೇರದವರ ಮತಧಾರ್ಮಿಕ ಸಂಸ್ಥೆಗಳಿಗೆ ದತ್ತಿದಾನಗಳನ್ನು ಕೊಟ್ಟ ಉಲ್ಲೇಖವಿದೆ.
ಕದಂಬ ಕುಂತಳೇಶ್ವರರು ಧರ್ಮಶಾಸ್ತ್ರೋಕ್ತವಾದ ರಾಜಧರ್ಮ ಪರಂಪರೆಗೆ ಅಧೀನರಾಗಿ ರಾಜ್ಯಭಾರ ನಡೆಸುತ್ತಿದ್ದರಲ್ಲದೆ ನಿರಂಕುಶಪ್ರಭುಗಳಾಗಿರಲಿಲ್ಲ. ಜನಮತಕ್ಕೆ ಅವರು ಬಹಳ ಬೆಲೆ ಕೊಡುತ್ತಿದ್ದರೆಂಬುದು ಶಾಸನಸಿದ್ಧ. ಅವರು ಸ್ವತಃ ಸಾಮಾನ್ಯ ಪ್ರಜೆ ಪಾಲಿಸಬೇಕಾದ ಎಲ್ಲ ನೀತಿನಿಯಮಗಳಿಗೂ ಬದ್ಧರಾಗಿದ್ದರು. ವಿದ್ಯೆ, ವಿವೇಕ, ಶೌರ್ಯ, ಔದಾರ್ಯ, ದಾನ, ಧರ್ಮ, ಸತ್ಯ, ನ್ಯಾಯನಿಷ್ಠೆ ಮುಂತಾದ ಸದ್ಗುಣಗಳಿಂದ ಅವರು ಜನಪ್ರಿಯರಾಗಿದ್ದರು. ಭಗೀರಥ, ರಘು, ಕಾಕುತ್ಸ್ಥಾದಿ ಹೆಸರುಗಳು ಸೂಚಿಸುವಂತೆ ರಾಮರಾಜ್ಯದ ಆದರ್ಶವನ್ನು ಅವರು ತಮ್ಮೆದುರಿಟ್ಟು ಕೊಂಡು ಪ್ರಜಾಪಾಲನೆ ಮಾಡುತ್ತಿದ್ದರು.
ಕದಂಬರ ಮಂತ್ರಿಗಳು ವಯೋವೃದ್ಧರೂ ಜ್ಞಾನವೃದ್ಧರೂ ಅನುಭವಸ್ಥರೂ ಪ್ರಜಾಹಿತೈಷಿಗಳೂ ಆಗಿದ್ದರು. ಹರಿವರ್ಮ ಮತ್ತು ಶಿವಚಿತ್ತದ ಶಾಸನಗಳು ಈ ಮಾತಿಗೆ ಪ್ರಮಾಣಗಳಾಗಿವೆ. ಕೆರೆ, ಕಾಲುವೆ, ರಸ್ತೆ, ಸಾಲುಮರ, ಅರವಟ್ಟಿಗೆ, ಧರ್ಮಛತ್ರ, ಮಠ, ದೇವಾಲಯಗಳ ರಚನೆಯಲ್ಲಿ ಕದಂಬ ರಾಜರಾಣಿಯರು ಉತ್ಸುಕರಾಗಿದ್ದರು. ಆದುದರಿಂದ ಪ್ರಜೆಗಳೂ ಅಧಿಕಾರಿಗಳೂ ಹೆಚ್ಚಿನ ರಾಜನಿಷ್ಠೆಯುಳ್ಳವರಾಗಿದ್ದರು. ಆದ್ಯಕದಂಬ ಮಹಾರಾಜರ ಆಸ್ಥಾನದಲ್ಲಿ ಸಾಮಂತರು, ಮಂತ್ರಿಗಳು, ಸಾಮಾಜಿಕ ಮುಖಂಡರು, ಪ್ರಾಧಿಕಾರಿಗಳು, ಪುರೋಹಿತ (ರಾಜಗುರುಗಳು), ಪಂಡಿತರು ಮತ್ತು ಕಲಾವಿದರು ವಿರಾಜಿಸುತ್ತಿದ್ದರು. ಕರ್ಣಾಟಕಸಾರ್ವಭೌಮರ ದರ್ಬಾರಿನ ಮಾದರಿಗಳ ಮೂಲವಿರುವುದು ಆದ್ಯಕದಂಬರ ಸಾರ್ವಭೌಮ ಆಸ್ಥಾನದಲ್ಲಿ. ರಾಜಸಭೆಯಲ್ಲಿ ಸಾರ್ವಭೌಮರೂ ಸಾಮಂತರೂ ರಾಜಕೀಯ, ಔದ್ಯಮಿಕ, ಕಾಯಿದೆ ಸುವ್ಯವಸ್ಥೆಗಳ ಬಗೆಗಿನ ಸಮಸ್ಯೆಗಳನ್ನು ಚರ್ಚಿನ ನಿರ್ಣಯಕ್ಕೆ ಬಂದ ಕೂಡಲೇ ಅದರಂತೆ ಆಚರಿಸಲು ಪ್ರಾಧಿಕಾರಿಗಳಿಗೆ ಆಜ್ಞೆ ಮಾಡಲಾಗುತ್ತಿತ್ತು; ಅಂಥ ದೊಡ್ಡ ಸಮಸ್ಯೆಗಳಿಲ್ಲದಾಗ ತತ್ತ್ವ ಸಾಹಿತ್ಯ ವಿಮರ್ಶೆಗಳಿಗೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತಿದ್ದವು; ಶಾಸ್ತ್ರಜ್ಞರು ಅವುಗಳಲ್ಲಿ ಭಾಗವಹಿಸುತ್ತಿದ್ದರು. ವಿದ್ವಾಂಸರಿಗೆ ಭೂದಾನ, ಧನದಾನ, ಕರಮುಕ್ತತೆಗಳನ್ನು ನೀಡಲಾಗುತ್ತಿತ್ತು. ರಾಜ್ಯಕ್ಕೆ ಸಂಬಂಧಿಸಿದ ದೈನಂದಿನ ವಿಷಯಗಳ ವ್ಯವಹಾರದಲ್ಲಿ ಐವರು ಸದಸ್ಯರ ಮಂತ್ರಿಸಂಪುಟವೊಂದು ಮಹಾರಾಜನಿಗೆ ನೆರವೀಯುತ್ತಿತ್ತು. ಮನೆವೆರ್ಗಡೆ, ತಂತ್ರಪಾಲ, ಪ್ರಧಾನ, ಕ್ರಮುಕಪಾಲ, ಸಭಾಕಾರ್ಯ ಸಚಿವ ಎಂಬವು ಅವರ ಪದಾಭಿಧಾನಗಳು. ಅವರ ಸಲಹೆಗಳನ್ನು ಮಹಾರಾಜ ಹೆಚ್ಚಾಗಿ ಒಪ್ಪಿ ನಿರ್ಣಯಕ್ಕೆ ಬರುತ್ತಿದ್ದ. ಏಕೆಂದರೆ ಅವರ ಆಯ್ಕೆ ಹಿರಿಯರಿಂದ ಅತ್ಯಂತ ಸಪರೀಕ್ಷಿತವಾಗಿ ನಡೆದದ್ದಾಗಿರುತ್ತಿತ್ತು.
ಕದಂಬರ ಮಂತ್ರಿಗಳು ಶಾಸನಗಳು ಹೇಳುವಂತೆ ಪ್ರಶಾಸನಪಂಡಿತರೂ ನೀತಿಬದ್ಧರೂ ವ್ಯಕ್ತಿತ್ವಸಂಪನ್ನರೂ ಬಹುಮುಖ ಪ್ರತಿಭಾವಂತರೂ ಸುಸಂಸ್ಕೃತರೂ ಮಹಾಮನರೂ ಆಗಿರುತ್ತಿದ್ದರು. ನ್ಯಾಯದರ್ಶನ, ಅಲಂಕಾರಶಾಸ್ತ್ರ (ಸಾಹಿತ್ಯ ವಿಮರ್ಶೆ) ಮತ್ತು ರಾಜನೀತಿಶಾಸ್ತ್ರ ಗಳಲ್ಲಿ ಅವರು ವಿಶೇಷಜ್ಞರಾಗಿರುತ್ತಿದ್ದರು. ನಾಗರಿಕ ಸೈನಿಕ ಆಡಳಿತಗಳೆರಡರಲ್ಲೂ ಅವರು ತಜ್ಞರು. ಮಹಾರಾಜನೊಡನೆ ಎಷ್ಟೋ ಸಲ ಮಂತ್ರಿಗಳೂ ಯುದ್ಧಕಾಲದಲ್ಲಿ ರಣರಂಗಕ್ಕೆ ಹೋಗಿ ಸೈನ್ಯ ವಿಭಾಗಗಳ ನೇತೃತ್ವ ವಹಿಸುತ್ತಿದ್ದುದುಂಟು.
ಆದ್ಯಕದಂಬ ಸಚಿವಾಲಯದಲ್ಲಿ ರಹಸ್ಯಾಧಿಕೃತರೆಂಬ ಖಾಸಗಿ ಕಾರ್ಯದರ್ಶಿ ಗಳಿರುತ್ತಿದ್ದರು ಎಂಬುದನ್ನು ಮಾಂಧಾತೃವರ್ಮನ ಶಾಸನವೊಂದು ತಿಳಿಸುತ್ತದೆ. ಖಾಸಗಿ ಕಾರ್ಯದರ್ಶಿ ಮುಖ್ಯಕಾರ್ಯದರ್ಶಿಗೂ ಮುಖ್ಯಕಾರ್ಯದರ್ಶಿ ಕಂದಾಯ ಶಾಖೆಯ ಪ್ರಾಧಿಕಾರಿಗಳಿಗೂ ರಾಜಾಜ್ಞೆಯನ್ನು ಕೂಡಲೇ ಜಾರಿಗೆ ತರಲೆಂದು ಮುಟ್ಟಿಸುತ್ತಿದ್ದರು. ಆಮೇಲೆ ಪ್ರಾಧಿಕಾರಿಗಳು ಅದನ್ನು ಜಾರಿಗೆ ತರುವ ಮೊದಲು ಲೆಕ್ಕಿಗರ (ಗುಮಾಸ್ತರ) ವರ್ಗಕ್ಕೆ ತಿಳಿಸಿ ಅವರ ಮೂಲಕ ದಾಖಲೆ ಮಾಡಿಸುತ್ತಿದ್ದರು.
ರಾಜ್ಯಾಂಗ ಶಾಸಕಾಂಗಗಳು ಧರ್ಮಶಾಸ್ತ್ರಾಧೀನವಾಗಿದ್ದುದರಿಂದ ಅವುಗಳ ಪ್ರಕಾರ ರಾಜಾಜ್ಞೆ (ಸರಕಾರಿ ಆಜ್ಞೆ) ಹೊರಡಿಸುವುದು ಮತ್ತು ಕಾರ್ಯಾಂಗ ಅದನ್ನು ಜಾರಿಗೆ ತರುವುದು ಸಂಪ್ರದಾಯ. ನ್ಯಾಯಾಧಿಕರಣಗಳದು ಕೋರ್ಟುಗಳ ಸ್ಥಾನ. ರಾಜಸಭೆ ಅತ್ಯುಚ್ಚನ್ಯಾಯಾಧಿಕರಣ. ಕೆಳಗಿನ ನ್ಯಾಯ (ಧರ್ಮ) ಅಧಿಕರಣಗಳಿಂದ ಕಳಿಸಲಾದ ಮಹತ್ವದ ಪ್ರಕರಣಗಳನ್ನು ಮಾತ್ರ ಅದು ನಿರ್ಣಯಕ್ಕೆ ತೆಗೆದುಕೊಳ್ಳುತ್ತಿತ್ತು. ಪ್ರಕರಣ ಜಾತಿಗಳ ಪ್ರಕಾರ ನ್ಯಾಯಾಧಿಕರಣಗಳ ವಿಶಿಷ್ಟವರ್ಗಗಳಿದ್ದುವು. ಹೊಡೆದವನಿಗೆ ಮೂರು (ಬಂಗಾರದ) ಗದ್ಯಾಣಗಳ ದಂಡ. ಕೊಲೆಗಡುಕನಾದಾತ ಸರ್ಕಾರಕ್ಕೆ 50 ಗದ್ಯಾಣಗಳನ್ನೂ ಹತನ ಕುಟುಂಬಕ್ಕೆ ೧೦೦ ಗದ್ಯಾಣಗಳನ್ನೂ ತೆರಬೇಕಾಗಿತ್ತು. ಶಠಾಪರಾಧಿಗಳನ್ನು ಅಗ್ನಿಪರೀಕ್ಷೆಗೂ ಆಪುರ್ವವಾಗಿ ಗುರಿಪಡಿಸಲಾಗುತ್ತಿತ್ತು.
ರಾಜಕೀಯ ವಿಭಾಗಗಳು
ಬದಲಾಯಿಸಿಸಾಮ್ರಾಜ್ಯ, ಪ್ರಾಂತ್ಯಗಳು, ರಾಜ್ಯಗಳು, ವಿಷಯಗಳು, ಗ್ರಾಮಗಳು ಮತ್ತು ಕುಲಗಳು ರಾಜಕೀಯ ವಿಭಾಗಗಳಾಗಿದ್ದುವು. ಸಾಮಂತ ಕದಂಬರು ತಮ್ಮ ವಿಷಯ (ಜಿಲ್ಲೆ)ಗಳನ್ನು ಕಂಪಣಗಳನ್ನಾಗಿಯೂ ಕಂಪಣಗಳನ್ನು ಗ್ರಾಮಗಳನ್ನಾಗಿಯೂ ವಿಂಗಡಿಸಿಕೊಂಡಿದ್ದರು; ಮನ್ನೆಯನೇ ಕಂಪಣಾಧಿಪತಿ. ಸಾಮ್ರಾಜ್ಯಕ್ಕೆ ಪುರ್ವ ಪಶ್ಚಿಮ ದಕ್ಷಿಣ ಉತ್ತರಗಳೆಂಬ ನಾಲ್ಕು ಪ್ರಾಂತ್ಯಗಳು. ಸಾರ್ವಭೌಮನ ನಿಕಟ ಸಂಬಂಧಿಕರು ಅವುಗಳ ರಾಜಪ್ರತಿನಿಧಿಗಳು. ವಿಷಯ ಮತ್ತು ಗ್ರಾಮಗಳ ಗಡಿಗಳಿಗೆ ಸ್ಥಿರತೆ ಹೆಚ್ಚಾಗಿತ್ತು. ರಾಜ್ಯವೊಂದು ನಾಡು ಅಥವಾ ಮಂಡಲ. ಸಾಮಂತ ಕದಂಬರಿಗೂ ಚಕ್ರವರ್ತಿಗಳಿಗೂ ನಡುವೆ ಕೆಲವೊಮ್ಮೆ ರಾಜ ಪ್ರತಿನಿಧಿಗಳು ಮತ್ತು ಹೆಚ್ಚಾಗಿ ರಾಜ್ಯಪಾಲರು ಇರುತ್ತಿದ್ದರು. ಪೆರ್ಜುಂಕ, ವಡ್ಡರಾವುಳ, ಕಿರುಕುಳ, ಬಿಳ್ಕೊಡೆ ಮತ್ತು ಪನ್ನಯ ಎಂಬ ಪಂಚವಿಧ ತೆರಿಗೆಗಳನ್ನು ರಾಜ್ಯಪಾಲ ವಸೂಲು ಮಾಡಿ ಚಕ್ರವರ್ತಿಯ ಬೊಕ್ಕಸಕ್ಕೆ ಮುಟ್ಟಿಸುತ್ತಿದ್ದ. ಸಾಮಂತ ಕದಂಬರೂ ಬೇಕಾದಾಗ ರಾಜ್ಯಪಾಲರನ್ನು ಒಳ ಆಡಳಿತಕ್ಕಾಗಿ ನಿಯಮಿಸಿಕೊಳ್ಳುತ್ತಿದ್ದರು. ಅವರ ಮಹಾಮಂಡಲದ ಒಳ ಆಡಳಿತದಲ್ಲೂ ನೆರೆಹೊರೆಯ ಸಾಮಂತರೊಡನೆ ವ್ಯವಹರಿಸುವುದರಲ್ಲೂ ಅವರು ಸಂಪುರ್ಣ ಸ್ವತಂತ್ರರಾಗಿದ್ದರು. ಗ್ರಾಮದ ಉತ್ಪನ್ನದಲ್ಲಿ ಆರನೆಯ ಒಂದಂಶ ರಾಜನಿಗೆ ಸಲ್ಲುತ್ತಿದ್ದ ಕಂದಾಯ. ವ್ಯಾಪಾರ ಮುಂತಾದ ವೃತ್ತಿಗಳಲ್ಲಿದ್ದವರು ಕರ ಕೊಡಬೇಕಾಗಿತ್ತು. ಅವರವರ ವೃತ್ತಿಸ್ವಾತಂತ್ರ್ಯವನ್ನು ಕಾಪಾಡುವುದು ರಾಜನ ಮುಖ್ಯ ಕರ್ತವ್ಯವಾಗಿತ್ತು.
ಸಂಸ್ಕೃತಿ ಮತ್ತು ಧರ್ಮ
ಬದಲಾಯಿಸಿಮಯೂರಶರ್ಮನ ಕಾಲದಲ್ಲಿ ಪ್ರಾಕೃತವೇ ಅಧಿಕೃತ ಭಾಷೆಯಾಗಿತ್ತು. ಅನಂತರ ಕಾಕುತ್ಸ್ಥವರ್ಮನ ಕಾಲದವರೆಗೆ ಸಂಸ್ಕೃತ ಆ ಸ್ಥಾನವನ್ನು ಪಡೆದಿತ್ತು. ಮೊದಲ ಬಾರಿಗೆ ಕನ್ನಡ ಅಧಿಕೃತ ರಾಜ್ಯಭಾಷೆಯಾದದ್ದು ಕಾಕುತ್ಸ್ಥವರ್ಮನ ಕಾಲದಲ್ಲಿ. ಕಾಳಿದಾಸನೆಂಬ ಕವಿ ಕುಂತಳೇಶ್ವರ ದೌತ್ಯವೆಂಬ ಕಾವ್ಯವನ್ನು ರಚಿಸಿದ್ದು ರಘು ಚಕ್ರವರ್ತಿಯ ಸಾಂಸ್ಕೃತಿಕ ಔನ್ನತ್ಯವನ್ನು ನೋಡಿ ಹೋದ ಮೇಲೆ. ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ ಎಂದು ಪ್ರ.ಶ. ೯೪೧ರ ಸುಮಾರಿಗೆ ಮಹಾಕವಿ ಪಂಪ ಹೇಳಿದ್ದು ಬನವಾಸಿ ಪನ್ನಿರ್ಛಾಸಿರದ ಬನವಾಸಿ ರಾಜಧಾನಿಯಲ್ಲಿ ಅಜವರ್ಮ ಕದಂಬನೆಂಬ ದುರ್ಬಲ ದೊರೆ ಅಧಿಕಾರ ನಡೆಸುತ್ತಿದ್ದ ಅವಧಿಯನ್ನು ಸೂಚಿಸುತ್ತದೆ. ಅಂದು ರಾಷ್ಟ್ರಕೂಟರು (೭೫೩-೯೭೧) ಈ ಪ್ರದೇಶದ ಸಮ್ರಾಟರಾಗಿದ್ದರು. ಆದರೂ ಬನವಾಸಿ ಮಂಡಲದ ಪುಲಿಗೆರೆಯ ತಿರುಳ್ಗನ್ನಡ ಪಂಪನಿಗೆ ಅನುಕರಣೀಯವಾಯಿತು. ಅವನ ಮಹಾಕಾವ್ಯಗಳು ಪ್ರದರ್ಶಿಸುವುದು ಕದಂಬಗನ್ನಡವನ್ನು. ತನ್ನ ವಂಶದಲ್ಲಿ ಪ್ರಖ್ಯಾತನಾಗಿದ್ದ ರಘುವರ್ಮನಂತೆ ಹಾನಿಗಲ್ ಪೀಳಿಗೆಯ ಕೀರ್ತಿವರ್ಮ ತನ್ನ ಅಪಾರ ಪಾಂಡಿತ್ಯದಿಂದ ಸರ್ವಜ್ಞನೆನಿಸಿಕೊಂಡಿದ್ದ. ಗೋವೆಯ ಕದಂಬ ವಿಜಯಾದಿತ್ಯನಿಗೆ ಸರಸ್ವತೀಭೂಷಣ ಎಂಬ ಬಿರುದಿತ್ತು. ಬನವಾಸಿ ರಾಜಧಾನಿಯಿಂದ ಆಳುತ್ತಿದ್ದ ಕೀರ್ತಿವರ್ಮನ ಕಾಲದಲ್ಲಿ ರಾಜ್ಯಪಾಲನಾಗಿದ್ದ ಲಕ್ಷ್ಮನೃಪನ ಬನವಾಸಿ ಕೋಶಾಧಿಕಾರಿ ಶಾಂತಿನಾಥ ಸುಕುಮಾರಚರಿತವನ್ನು ಬರೆದ. ಬನವಾಸಿಯ ರಾಜ್ಯಪಾಲ ನಾಗಿದ್ದ ಉದಯಾದಿತ್ಯಗಂನ (೧೦೭೦-೭೬) ಸಂಧಿ ವಿಗ್ರಹಕನಾಗಿ ಬನವಾಸಿ ಮಂಡಲದಲ್ಲಿದ್ದ ನಾಗವರ್ಮಾಚಾರ್ಯ ಚಂದ್ರಚೂಡಾಮಣಿ ಎಂಬ ಕೃತಿಯನ್ನು ರಚಿಸಿದ. ಹಾನುಗಲ್ಲಿನ ಕೀರ್ತಿದೇವಕದಂಬನ ದರ್ಬಾರಿನಲ್ಲಿ ಹರಿವರ್ಮ ಆಸ್ಥಾನ ಕವಿಯಾಗಿದ್ದ. ಹಾವೇರಿಯ ಒಂದು ಶಾಸನದ ಪ್ರಕಾರ ನಾರಾಯಣದೇವ ಒಬ್ಬ ಪ್ರಸಿದ್ಧ ಕವಿ. ಹಾನುಗಲ್ಲಿನ ಕಾಮದೇವನ ಆಸ್ಥಾನದಲ್ಲಿದ್ದ ಕವಿ ರಾಜನೆಂಬ ವಿದ್ವಾಂಸ ರಾಘವ ಪಾಂಡವೀಯಂ ಎಂಬ ದ್ವ್ಯಾಶ್ರಯ ಕಾವ್ಯ ರಚಿಸಿದ. ಮಠ, ದೇವಾಲಯ, ಬ್ರಹ್ಮಪುರಿ, ಅಗ್ರಹಾರಗಳು, ವಿದ್ಯಾಪೀಠಗಳು ಮುಂತಾದವುಗಳಿಂದ ಕೂಡಿದ್ದ ಬನವಾಸಿ, ತಾಳಗುಂದ, ಕುಪ್ಪಟೂರು (ಕುಂತಳನಗರ), ಬಳ್ಳಿಗಾಮಿ ಮುಂತಾದ ನಗರಗಳು ಆದಿಯಿಂದಲೂ ಹೆಸರಾಗಿದ್ದುವು. ಬ್ರಹ್ಮಪುರಿಗಳು ಸ್ನಾತಕೋತ್ತರ ಶಿಕ್ಷಣಕೇಂದ್ರಗಳು. ಈ ವಿದ್ಯಾಪೀಠಗಳಲ್ಲಿ ವೇದ, ಶಾಸ್ತ್ರ, ಪುರಾಣ, ಶಿಲ್ಪ, ತತ್ತ್ವ ಜ್ಞಾನ, ಯೋಗ, ಧರ್ಮ ಮುಂತಾದ ವಿಷಯಗಳನ್ನು ಪಾತ್ರಾಪಾತ್ರ ವಿವೇಕದ ನಿಷ್ಪಕ್ಷಪಾತ ನಿಯಮದಂತೆ ಸ್ವದೇಶ ವಿದೇಶಗಳಿಂದ ಬಂದ ಜಿಜ್ಞಾಸುಗಳಿಗೆ ಕಲಿಸಲಾಗುತ್ತಿತ್ತು. ರಾಜಮಹಾರಾಜರೂ ಮಹಾವಣಿಗ್ಜನರೂ ಇವುಗಳ ಪೋಷಕರು; ಅಷ್ಟಾಂಗಯೋಗದ ಅಚರಣೆಯನ್ನಿಟ್ಟುಕೊಂಡಿದ್ದ ಶರಶಕ್ತಿಸಂಪನ್ನರಾದ ಮಹಾಜನರು ಇವುಗಳ ಆಡಳಿತಗಾರರು. ಪ್ರಾಧ್ಯಾಪಕರೂ ಶಿಕ್ಷಕರೂ ಅವರಿಂದ ಪೋಷಿತರು. ಆದರೆ ಶಿಷ್ಯವರಣದಲ್ಲಿ ಮತ್ತು ಶಿಕ್ಷಣಕ್ರಮದಲ್ಲಿ ಸಂಪುರ್ಣ ಸ್ವತಂತ್ರರು. ಅವರ ಸದಾಚಾರ ಸರ್ವವಂದ್ಯವಾಗಿತ್ತು. ವಿದ್ಯಾರ್ಥಿಗಳು ಗುರುಗಳ ಅಂತೇವಾಸಿಗಳು; ವಿದ್ಯೆ ಶುಲ್ಕರಹಿತ.
ಧರ್ಮ
ಬದಲಾಯಿಸಿಕದಂಬರು ವೈದಿಕ ಸ್ಮಾರ್ತರು. ಅವರು ಬನವಾಸಿಯಿಂದ ಆಳತೊಡಗುವ ಮೊದಲೇ ಬೌದ್ಧಮತ ಪ್ರಚಾರ ಅಲ್ಲಿ ಬೇಕಾದಷ್ಟು ನಡೆದಿತ್ತು. ಅನಂತರ ಜೈನ ಗುರುಗಳೂ ದಯಮಾಡಿದರು. ಪ್ರ.ಶ. ಏಳನೆಯ ಶತಮಾನದಲ್ಲಿ ಬೌದ್ಧಮತ ಅನವತಿಗೀಡಾಯಿತು. ಅನಂತರ ವೈದಿಕ, ಜೈನಧರ್ಮಗಳೇ ಸತತವಾಗಿ ಮುಂಬರಿದವು. ಪಾಶುಪತ, ಶಾಕ್ತ, ಪಾಂಚರಾತ್ರ, ಕಾಳಾಮುಖ, ಕಾಪಾಲಿಕ ಪಂಥಗಳು ಆಮೇಲೆ ಇಲ್ಲಿ ತಲೆಹಾಕಿದರೂ ಬಹಳ ಕಾಲ ಪ್ರಭಾವಿಗಳಾಗಿ ಉಳಿಯಲಿಲ್ಲ. ಲಕುಲೀಶ ಪಾಶುಪತ ಮತ್ತು ಕಾಳಾಮುಖ ಪಂಥಗಳ ಗುರುಗಳಲ್ಲಿ ಅನೇಕರು ನಿಗಮ ವಿಮುಖರಾಗಿ, ಕೇವಲಾಗಮಿಗಳಾಗಿ, ಸು. ಹದಿಮೂರನೆಯ ಶತಮಾನದಲ್ಲಿ ಕ್ರಮೇಣ ವೀರಶೈವ ಗುರುಗಳ ಪರಂಪರೆಯ ಜನಕರಾದರೆಂಬುದು ಕೆಲವಿದ್ವಾಂಸರ ಊಹೆ. ವೀರಶೈವೋದಯ ಕ್ರಮಶಃ ಜೈನಾಸ್ತವನ್ನು ಮುಂದೆ ತೀವ್ರಗೊಳಿಸಿತು. ಹ್ಯುಯೆನ್ ತ್ಸಾಂಗ್ ಬಣ್ಣಿಸಿದ ಕೊಂಕಣಪುರದ (ಬನವಾಸಿ)ಉತ್ಖನನವಾದರೆ ಬೌದ್ಧ ವಿಹಾರಗಳ ಅವಶೇಷಗಳನ್ನು ಬಹುಶಃ ತೋರಿಸೀತು. ಜೈನ ಬಸದಿಗಳನ್ನು ಬನವಾಸಿ ಪನ್ನಿರ್ಛಾಸಿರದಲ್ಲಿ ಈಗಲೂ ಕಾಣಬಹುದು. ಅಲ್ಲಿ ಇಲ್ಲಿ ವಿರಳವಾಗಿ ಭೈರವ ಪುಜಾಸ್ಥಾನಗಳಿವೆ. ಇವು ಕಾಪಾಲಿಕ ಪಂಥದ ಅವಶೇಷ. ಹಾಗೇ ವೀರಭದ್ರ ದೇವಾಲಯಗಳು ವೀರಶೈವ ಪಂಥದ ಗುರುತುಗಳೆನ್ನಬಹುದು. ಸೋದೆಯಲ್ಲಿರುವ ಜೈನಮಠ ಸು. ೭ನೆಯ ಶತಮಾನದಲ್ಲಿ ಅಕಳಂಕ ಗುರು ಪರಂಪರೆಯನ್ನು ಸ್ಥಾಪಿಸಿದ ದೊಡ್ಡ ಜೈನ ವಿದ್ವದ್ಯತಿಯಾದ ಆದ್ಯ ಅಕಳಂಕನ ಕುರುಹಾಗಿದೆ. ತತ್ಸಮಕಾಲೀನವಾದ ವೈದಿಕ ಸ್ಮಾರ್ತ ಮಠಗಳು ಈಗಲೂ ಜೀವಂತವಾಗಿವೆ. ತಾಳಗುಂದದ ಸಮೀಪದಲ್ಲಿರುವ ಬಳ್ಳಿಗಾಮಿಯ ಅವಶೇಷಗಳು ಉಕ್ತ ವಿವಿಧ ಮತಗಳ ಮತ್ತು ಪಂಥಗಳ ಕುರುಹುಗಳನ್ನು ತೋರಿಸುತ್ತದೆ. ಅವುಗಳಲ್ಲಿ ಹಲವು ೧೨ನೆಯ ಶತಮಾನದ ಮತ್ತು ಅದಕ್ಕೂ ಹಿಂದಿನವು. ಅಲ್ಲದೆ ಅವು ಪರಮತಸಹಿಷ್ಣುತೆಯ ಪರಮಪ್ರಮಾಣಗಳಾಗಿವೆ.
ಛಾಯಾಂಕಣ
ಬದಲಾಯಿಸಿ-
Early coin of the Kadamba king Shanthivarma or Mrigeshavarma. Obverse shows the 5th century Kannada legend "Sri Manarashi", an epithet of the king. The coin cannot be attributed properly in the absence of any records that mentions this title.
-
Early coin of the Kadamba king Krishnavarma (ruled c. 516–540), who has an epithet "sri dosharashi. The reverse of the coin has the legend Shri shashankaha, Shashanka means "moon" in Sanskrit
-
Gold coins issued by King Toyimadeva of Kadamba Dynasty, 1048 - 1075 A.D