ಅಲ್ಬರ್ಟ್ ಐನ್ಸ್ಟೈನ್
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಆಲ್ಬರ್ಟ್ ಐನ್‍ಸ್ಟೀನ್ (ಮಾರ್ಚ್ ೧೪, ೧೮೭೯ - ಏಪ್ರಿಲ್ ೧೮, ೧೯೫೫) ೨೦ನೇ ಶತಮಾನದ ಜರ್ಮನಿ ಮೂಲದ ಭೌತವಿಜ್ಞಾನಿ. ಇವರು ಸಾಪೇಕ್ಷತ ಸಿದ್ಧಾಂತವನ್ನು (ಥಿಯರಿ ಆಫ್ ರಿಲೇಟಿವಿಟಿ) ಜಗತ್ತಿನ ಮುಂದಿಟ್ಟವರು. ಕ್ವಾಂಟಮ್ ಭೌತಶಾಸ್ತ್ರ, ಸ್ಟ್ಯಾಟಿಸ್ಟಿಕಲ್ ಮೆಕ್ಯಾನಿಕ್ಸ್ ಹಾಗೂ ವಿಶ್ವಶಾಸ್ತ್ರ (ಕಾಸ್ಮಾಲಜಿ)ಗಳಲ್ಲಿ ಕೂಡ ಮಹತ್ತರವಾದ ಕಾಣಿಕೆ ನೀಡಿದ್ದಾರೆ. ೧೯೨೧ರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದ್ಯುತಿವಿದ್ಯುತ್ ಪರಿಣಾಮ ಬಣ್ಣಿಸಿದ ಇವರ ವಾದ ಹಾಗೂ ಸೈದ್ಧಾಂತಿಕ ಭೌತಶಾಸ್ತ್ರಕ್ಕೆ ಇವರು ಸಲ್ಲಿಸಿದ ಸೇವೆಗೆ ಈ ಪ್ರಶಸ್ತಿ ನೀಡಲಾಯಿತು.
) (ಅಲ್ಬರ್ಟ್ ಐನ್ಸ್ಟೈನ್ | |
---|---|
ಜನನ | ಮಾರ್ಚ್ ೧೪, ೧೮೭೯ ಉಲ್ಮ್, ವುರ್ಟಮ್‍ಬರ್ಗ್, ಜರ್ಮನಿ |
ಮರಣ | ಏಪ್ರಿಲ್ ೧೮, ೧೯೫೫ ಪ್ರಿನ್ಸ್‍ಟನ್, ನ್ಯೂ ಜರ್ಸಿ |
ವಾಸ | ಜರ್ಮನಿ, ಇಟಲಿ, ಸ್ವಿಟ್ಜರ್‍ಲ್ಯಾಂಡ್, ಯುಎಸ್ಎ |
ರಾಷ್ಟ್ರೀಯತೆ | ಜರ್ಮನಿ (೧೮೭೯-೯೬, ೧೯೧೪-೩೩) ಸ್ವಿಟ್ಜರ್‍ಲ್ಯಾಂಡ್ (೧೯೦೧-೫೫) ಯುಎಸ್‍ಎ (೧೯೪೦-೫೫) |
ಕಾರ್ಯಕ್ಷೇತ್ರಗಳು | ಭೌತಶಾಸ್ತ್ರ |
ಸಂಸ್ಥೆಗಳು | Swiss Patent Office (Berne) Univ. of Zürich Charles Univ. Kaiser Wilhelm Inst. Univ. of Leiden ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್‍ಡ್ ಸ್ಟಡೀಸ್ |
ಅಭ್ಯಸಿಸಿದ ಸಂಸ್ಥೆ | ETH Zürich |
ಪ್ರಸಿದ್ಧಿಗೆ ಕಾರಣ | ಸಾಮಾನ್ಯ ಸಾಪೇಕ್ಷತ ಸಿದ್ಧಾಂತ, ವಿಶೇಷ ಸಾಪೇಕ್ಷತ ಸಿದ್ಧಾಂತ Brownian motion, ಫೋಟೊ ಎಲೆಕ್ಟ್ರಿಕ್ ಎಫೆಕ್ಟ್ |
ಗಮನಾರ್ಹ ಪ್ರಶಸ್ತಿಗಳು | ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ (೧೯೨೧) ಕೊಪ್ಲೆ ಪದಕ (೧೯೨೫) ಮ್ಯಾಕ್ಸ್ ಪ್ಲಾಂಕ್ ಪದಕ (೧೯೨೯) |
ಅವರ ವಿಶ್ವವಿಖ್ಯಾತ ಸಮೀಕರಣ :
ಬದಲಾಯಿಸಿ೧೯೧೬ರಲ್ಲಿ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ (ಜನರಲ್ ರಿಲೇಟಿವಿಟಿ ಥಿಯರಿ) ಬಿತ್ತರಿಸಿದ ನಂತರ ಐನ್‍ಸ್ಟೈನ್ ವಿಶ್ವದಾದ್ಯಂತ ವಿಜ್ಞಾನಿಯೊಬ್ಬರಿಗೆ ಅಸಾಮಾನ್ಯವಾದ ಪ್ರಸಿದ್ಧಿಯನ್ನು ಪಡೆದರು. ವರ್ಷಗಳು ಕಳೆದಂತೆ ಇವರ ಪ್ರಸಿದ್ಧಿ ಜಗತ್ತಿನ ಯಾವುದೇ ವಿಜ್ಞಾನಿಗಿಂತ ಹೆಚ್ಚಾಯಿತು. ಜಗತ್ತಿನ ಅತಿ ದೊಡ್ಡ ಮೇಧಾವಿಯಾಗಿ ಚಿರಪರಿಚಿತರಾದರು. ಇಂದಿಗೂ ಭೌತಶಾಸ್ತ್ರ ಕ್ಷೇತ್ರದಲ್ಲಿ ಐನ್‍ಸ್ಟೈನ್ ಅವರು ಮಾಡಿರುವ ಸಂಶೋಧನೆಗಳಿಂದ ಅವರನ್ನು "ಭೌತಶಾಸ್ತ್ರದ ಜನಕ" ಎಂದೇ ವಿಜ್ಞಾನಿಗಳು ಗೌರವಿಸುತ್ತಾರೆ. ಅವರನ್ನು ಗೌರವಿಸುವ ಸಲುವಾಗಿ ಮೂಲ ವಸ್ತುವೊಂದಕ್ಕೆ 'ಐನ್‍ಸ್ಟೈನಿಯಮ್' ಎಂದು ಹೆಸರಿಡಲಾಗಿದೆ.
೨೦ ನೆಯ ಶತಮಾನದ ಅತ್ಯಂತ ಜನಪ್ರಿಯವ್ಯಕ್ತಿ, ಐನ್ಸ್ಟೈನ್,' :
ಬದಲಾಯಿಸಿಇಸಾಕ್ ನ್ಯೂಟನ್ ನ ಸಿದ್ಧಾಂತವನ್ನು ಮತ್ತಷ್ಟು ಉತ್ತಮಪಡಿಸಿ, ಭೌತಶಾಸ್ತ್ರೀಯ ಸಂಶೋಧನೆಯ ಜಗತ್ತಿನಲ್ಲಿ ಮಹತ್ವದ ಮೈಲುಗಲ್ಲುಗಳನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭೌತಶಾಸ್ತ್ರದ ಕಡೆ ಅವರ ಒಲವು, ಅಪಾರ ಬುದ್ಧಿಮತ್ತೆ ಹಾಗೂ ಕಾರ್ಯತತ್ಪರತೆ ಒಂದು ಹೊಸಲೋಕವನ್ನೇ ಅವರ ಮುಂದೆ ತೆರೆದಿಟ್ಟಿತು. ತೊದಲು ನುಡಿಯುತ್ತಿದ್ದ ಬಾಲಕ, ಸಂಶೋಧನಶೀಲತೆಯಂತಹ ಅದ್ವಿತೀಯ ಗುಣಗಳಿಂದ ಶ್ರೇಷ್ಠ ಪ್ರಾಧ್ಯಾಪಕನಾದದ್ದು, ಅಪೂರ್ವ ಸಂಶೋಧಕನಾದದ್ದೂ, ಚಾರಿತ್ರ್ಯಕ ಸತ್ಯ.
ಬಾಲ್ಯ ಮತ್ತು ವಿದ್ಯಾಭ್ಯಾಸ
ಬದಲಾಯಿಸಿಐನ್ಸ್ಟೈನ್, ಜನಿಸಿದ್ದು ಜರ್ಮನಿಯ ವುಟೆನ್ ಬರ್ಗ್ ನ ಉಲ್ಮ್ ಎಂಬ ಹಳ್ಳಿಯಲ್ಲಿ. ೧೮೭೯ ರ ಮಾರ್ಚ್ ೧೪ರಂದು. ತಂದೆ, ಹರ್ಮನ್ ಐನ್‍ಸ್ಟೈನ್. ತಾಯಿ, ಪೌಲಿನ್ ಐನ್‍ಸ್ಟೈನ್. ಬಾಲ್ಯದಲ್ಲಿ ಅವರನ್ನು ಕಾಡಿದ ಸಮಸ್ಯೆಯೆಂದರೆ ತೊದಲುವಿಕೆ. ಮನೆಯ ಸದಸ್ಯರೆಲ್ಲಾ ಬಹಳ ನೊಂದುಕೊಂಡಿದ್ದರು. ತಮ್ಮ ಜರ್ಮನ್ ಮಾತೃಭಾಷೆಯನ್ನು ಚೆನ್ನಾಗಿ ಕಲಿತರು. ಮ್ಯುನಿಕ್ ನಲ್ಲಿ ಮನೆತನದ ಎಲೆಕ್ಟ್ರಿಕಲ್ ಉಪಕರಣಗಳ ತಯಾರಿಕೆಯ ಸಂಸ್ಥೆಯನ್ನು ತಂದೆ ಹಾಗೂ ಚಿಕ್ಕಪ್ಪನವರು ಸೇರಿ ಸ್ಥಾಪಿಸಿದ್ದರು. ಪರಿವಾರವೆಲ್ಲಾ ಇಟಲಿಗೆ ಹೋಗಿ ನೆಲೆಸುವ ಆತುರದಲ್ಲಿತ್ತು. ಅಗ ಐನ್‍ಸ್ಟೈನ್ ರವರಿಗೆ ೬ ವರ್ಷ ವಯಸ್ಸು. ಐನ್‍ಸ್ಟೈನ್ ಝೂರಿಚ್ ನ "ಸ್ವಿಸ್ ಫೆಡರಲ್ ತಾಂತ್ರಿಕ ಸಂಸ್ಥೆ"ಗೆ ಅರ್ಜಿ ಸಲ್ಲಿಸಿದರು. ಅವರ ಬಳಿ ಸೆಕೆಂಡರಿಶಾಲೆಯ ಪ್ರಮಾಣಪತ್ರವಿರಲಿಲ್ಲ. ೧೬ ವರ್ಷವಯಸ್ಸಿನ ಐನ್‍ಸ್ಟೈನ್ ಪ್ರವೇಶ ಪರೀಕ್ಷೆಯಲ್ಲಿ ನಾಪಾಸಾದರು. ಸೆಕೆಂಡರಿ ವಿಧ್ಯಾಭ್ಯಾಸಕ್ಕೆ 'ಹ್ಯಾರೋ' ಸ್ಕೂಲಿಗೆ ಹೋಗಿ ಭರ್ತಿಯಾದರು. "ವಿದ್ಯುತ್‍ಕಾಂತೀಯ ಸಿದ್ಧಾಂತ" ( ಎಲೆಕ್ಟ್ರೋ ಮ್ಯಾಗ್ನೆಟಿಕ್ ಸಿದ್ಧಾಂತ)ದಲ್ಲಿ ವಿಶೇಷ ಆಸಕ್ತಿ ಬೆಳೆಯಿತು. ೧೮೯೬ ರಲ್ಲಿ ಪದವಿ ದೊರೆಯಿತು. ಐನ್‍ಸ್ಟೈನ್ ರಿಗೆ ಗಣಿತಶಾಸ್ತ್ರದಲ್ಲಿ ವಿಶೇಷ ಪರಿಣತಿ ಇದೆ ಎನ್ನುವ ಸತ್ಯ ಅರಿವಾಗಿದ್ದು ಆನಂತರವೇ. ೧೯೦೦ ರಲ್ಲಿ ಭೌತಶಾಸ್ತ್ರದಲ್ಲಿ ಪದವಿ ಸಿಕ್ಕಿತು. ೧೯೦೧ ರಲ್ಲಿ "ಸ್ವಿಸ್ ಪೌರತ್ವ"ವನ್ನು ಪಡೆದುಕೊಂಡರು. ಜರ್ಮನ್ ಇಟ್ಯಾಲಿಯನ್ ಭಾಷೆಗಳ ಜೊತೆಗೆ ಆಂಗ್ಲ ಭಾಷೆಯನ್ನು ಚೆನ್ನಾಗಿ ಅಭ್ಯಾಸಮಾಡಿದರು. ಉಪಾಧ್ಯರ ವೃತ್ತಿಗೆ ಅರ್ಜಿಹಾಕಿ ೨ ವರ್ಷ ಅಲೆದಲೆದು ಸೋತುಹೋದರು. ನೌಕರಿ ಸಿಗುವುದು ಕಠಿಣವಾಗಿತ್ತು. ಕೊನೆಗೆ 'ಬರ್ನ್' ನಗರದ "ಪೇಟೆಂಟ್ ಆಫೀಸ್"ನಲ್ಲಿ ಕೆಲಸ ದೊರೆಯಿತು. ಐನ್‍ಸ್ಟೈನ್ ಗೆ ಭೌತಶಾಸ್ತ್ರದಲ್ಲಿ ಅಗಾಧ ಪ್ರತಿಭೆ ಇತ್ತು. ಅವರ ವ್ಯವಸಾಯವೂ ಆ ನಿಟ್ಟಿನಲ್ಲೇ ಭರದಿಂದಲೇ ಸಾಗಿತ್ತು. "ಅನಾಲೆಂಡರ್ ಫಿಸಿಕ್" ಎಂಬ ಜರ್ಮನಿಯ ಪ್ರತಿಶ್ಠಿತ ಭೌತಶಾಸ್ತ್ರದ ಪತ್ರಿಕೆಗೆ ತಮ್ಮ ಪ್ರಬಂಧವನ್ನು ಪ್ರಕಟಿಸಲು ಕಳಿಸಿಕೊಟ್ಟರು. ಇವರ ಪ್ರಗತಿಪರ ಸಂಶೋಧನಾ ತತ್ವಗಳು ಭೌತಶಾಸ್ತ್ರದ ವಲಯದಲ್ಲಿ ಎಲ್ಲರ ಗಮನವನ್ನೂ ಸೆಳೆದವು. ತಮ್ಮ ೨೬ ನೆಯ ವರ್ಷ ವಯಸ್ಸಿನಲ್ಲೇ ಡಾಕ್ಟೊರೇಟ್ ಗಳಿಸಿದರು. ೧೯೧೧ ರಲ್ಲಿ ಜುರಿಚ್ ನಗರದ ವಿಶ್ವವಿದ್ಯಾಲಯದಲ್ಲಿ ಸಹ-ಪ್ರಾಧ್ಯಾಪಕ ವೃತ್ತಿ ಸಿಕ್ಕಿತು.
ಉದ್ಯೋಗ
ಬದಲಾಯಿಸಿಪಾಲಿಟೆಕ್ನಿಕ್ ವ್ಯಾಸಂಗ ಮುಗಿಯುವಾಗ ಐನ್ಸ್ಟೈನನ ಪ್ರಾಯ ಇಪ್ಪತ್ತು ವರ್ಷ. ಮುಂದೆ ಜೀವನ ನಿರ್ವಹಣೆ ನಡೆಯಲು ಸಂಪಾದನೆ ಅಗತ್ಯವಾಗಿತ್ತು. ಸ್ವಲ್ಪ ಕಾಲ ಉಪಾಧ್ಯಾಯ ವೃತ್ತಿಯನ್ನು ಹಿಡಿದ. 1902ರಲ್ಲಿ ಬರ್ನ್ ಪಟ್ಟಣದಲ್ಲಿ ಏಕಸ್ವ ಕಚೇರಿಯಲ್ಲಿ (ಪೇಟೆಂಟ್ ಆಫೀಸ್) ಏಕಸ್ವ ಪರೀಕ್ಷಕನಾಗಿ ನೇಮಕಗೊಂಡ. ಅಲ್ಲಿ ವಿಶೇಷ ಕೆಲಸವಿಲ್ಲದಿದ್ದುದರಿಂದ ಐನ್ಸ್ಟೈನನಿಗೆ ತನ್ನ ವ್ಯಾಸಂಗವನ್ನು ಯಾವ ಅಡಚಣೆಯೂ ಇಲ್ಲದೆ ಮುಂದುವರಿಸಲು ಅನುಕೂಲವಾಯಿತು. ಇದೇ ವೇಳೆಗೆ ಆ ಮೊದಲು ಜೂ಼ರಿಕ್ ಪಾಲಿಟೆಕ್ನಿಕಿನಲ್ಲಿ ತನ್ನ ಸಹಪಾಠಿಯಾಗಿದ್ದ ಮಿಲೇವಮ್ಯೂಟ್ರಿಷ್ ಎಂಬಾಕೆಯನ್ನು ಮದುವೆಯಾದ. ಆಕೆಯೂ ಭೌತವಿಜ್ಞಾನದಲ್ಲಿ ಆಸಕ್ತಳಾಗಿದ್ದುದೇ ಮದುವೆಗೆ ಮುಖ್ಯ ಕಾರಣ. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಆದರೆ ದಾಂಪತ್ಯಜೀವನ ಮೊದಲು ನಿರೀಕ್ಷಿಸಿದಷ್ಟು ತೃಪ್ತಿಕರವಾಗಿ ಸಾಗಲಿಲ್ಲ. ಗಂಡಹೆಂಡಿರ ಮನೋದೃಷ್ಟಿ ಅನೇಕ ರೀತಿಯಲ್ಲಿ ಸರಿ ಹೊಂದದೆ ಕಾಲಕ್ರಮೇಣ ಸಂಸಾರದಲ್ಲಿ ಅಹಿತ ವಾತಾವರಣವೇರ್ಪಟ್ಟಿತು. ಆದರೆ ಐನ್ಸ್ಟೈನ್ ತನ್ನ ಸಂಶೋಧನ ಕಾರ್ಯಗಳಲ್ಲಿಯೇ ನಿರತನಾಗಿ ಇದನ್ನು ಮರೆಯುತ್ತಿದ್ದ.
ವೈವಾಹಿಕ ಜೀವನ
ಬದಲಾಯಿಸಿ'ಮಿಲೆವಾ ಮ್ಯಾರಿಕ್' ಎಂಬ ಜರ್ಮನ್ ಹುಡುಗಿಯ ಜೊತೆ ೧೯೦೩ ರಲ್ಲಿ ಮದುವೆಯಾಯಿತು. ಹಾನ್ಸ್ ಮತ್ತು ಎಡ್ವರ್ಡ್ ಎಂಬ ಎರಡುಮಕ್ಕಳು ಜನಿಸಿದರು. ವಿವಾಹದ ಮೊದಲೆ ಒಬ್ಬ ಮಗಳು ಜನಿಸಿದ್ದಳು. ಆ ಮದುವೆ ವಿವಾಹ ವಿಚ್ಛೇದನೆಯಲ್ಲಿ ಕೊನೆಗೊಂಡಿತು. ೧೯೧೯ ರಲ್ಲಿ ಎಲ್ಯಾ ಲೊವೆಂಥಾಲ್ ಎಂಬ ಮಹಿಳೆಯ ಜೊತೆ ಮರುಮದುವೆಯಾದರು. ಐನ್‍ಸ್ಟೈನ್ ರ ನೆರಳಿನಂತೆ ಅವರ ಬಾಳಿನಲ್ಲಿ ಸಮರಸ ಹೊಂದಿಸಿದ ಎಲ್ಯಾ, ಖಾಯಿಲೆಯಿಂದ ಬಳಲಿ, ೧೯೩೬ ರಲ್ಲಿ ಅಸುನೀಗಿದರು.
ಸಾಪೇಕ್ಷವಾದ
ಬದಲಾಯಿಸಿದಿನಗಳು ಕಳೆದಂತೆ ಐನ್ಸ್ಟೈನ್ನ ಸಂಶೋಧನೆ ಮತ್ತು ಚಿಂತನೆ ಹೆಚ್ಚು ಹೆಚ್ಚು ಭರದಿಂದ ಮುಂದುವರಿದುವು. 1905ರಲ್ಲಿ ಮಹತ್ತ್ವಪುರಿತವಾದ ನಾಲ್ಕು ಸಂಶೋಧನ ಲೇಖನಗಳನ್ನು ಪ್ರಕಟಿಸಿದ. ಇವುಗಳಲ್ಲಿ ಎರಡು ವಿಶಿಷ್ಟ ಸಾಪೇಕ್ಷ ಸಿದ್ಧಾಂತಕ್ಕೆ ಸಂಬಂಧಿಸಿದವು; ಉಳಿದೆರಡು ಕ್ರಮವಾಗಿ ಬ್ರೌನಿಯನ್ ಚಲನೆ ಮತ್ತು ದ್ಯುತಿವಿದ್ಯುತ್ಕ್ರಿಯೆಗಳಿಗೆ ಸಂಬಂಧಿಸಿದವು. ಈ ಲೇಖನಗಳಿಂದ ಐನ್ಸ್ಟೈನ್ ಜಗದ್ವಿಖ್ಯಾತನಾದ. ಇವುಗಳಿಂದ ಅವನಿಗೆ ಲಭಿಸಿದ ಗೌರವ ಪರಂಪರೆಗಳಲ್ಲಿ ಹೆಸರಾಂತವು-ಜೂ಼ರಿಕ್ ವಿಶ್ವವಿದ್ಯಾನಿಲಯ ನೀಡಿದ ಡಾಕ್ಟರೇಟ್ ಪದವಿ ಮತ್ತು 1910-11ರಲ್ಲಿ ಅದೇ ವಿಶ್ವವಿದ್ಯಾನಿಲಯ ನೀಡಿದ ಭೌತವಿಜ್ಞಾನ ಪ್ರಾಧ್ಯಾಪಕತ್ವದ ಆಹ್ವಾನ. ಐನ್ಸ್ಟೈನ್ ಇದನ್ನು ಸ್ವೀಕರಿಸಿದ. 1911ರಲ್ಲಿ ವಿಸ್ತೃತ ಸಾಪೇಕ್ಷ ಸಿದ್ಧಾಂತದ (ಜನರಲ್ ರಿಲೆಟಿವಿಟಿ) ಮೊದಲ ಹಂತವೆಂದು ಪರಿಗಣಿಸಬಹುದಾದ ಗುರುತ್ವತೂಕ ಮತ್ತು ಜಡತ್ವತೂಕಗಳ ಸಾಮ್ಯಕ್ಕೆ ಸಂಬಂಧಿಸಿದಂತೆ ಒಂದು ಮುಖ್ಯ ಲೇಖನವನ್ನು ಪ್ರಕಟಿಸಿದ. 1914ರಲ್ಲಿ ಅಂದರೆ ಮೊದಲ ಮಹಾಯುದ್ಧ ಪ್ರಾರಂಭಕ್ಕೆ ಸ್ವಲ್ಪ ಮುಂಚೆ ಬರ್ಲಿನ್ನಿನ ಪ್ರಷ್ಯನ್ ವಿಜ್ಞಾನ ಅಕಾಡೆಮಿ ಐನ್ಸ್ಟೈನನನ್ನು ಅದರ ಭೌತವಿಜ್ಞಾನ ಸಂಸ್ಥೆಯ ನಿರ್ದೇಶಕನನ್ನಾಗಿ ನೇಮಿಸಿ ಅವನಿಗೆ ಆಹ್ವಾನವನ್ನು ಕಳುಹಿಸಿತು. ಅದನ್ನು ಸ್ವೀಕರಿಸಿದ ಅವನು ಬರ್ಲಿನ್ ನಗರವನ್ನು ಸೇರಿದ. ಇಲ್ಲಿ ಅವನ ಸಂಶೋಧನೆಗಳು ಮುಂದುವರಿದುವು. ವಿಸ್ತೃತ ಸಾಪೇಕ್ಷಸಿದ್ಧಾಂತಕ್ಕೆ ಸಂಬಂಧಿಸಿದ ಲೇಖನಗಳನ್ನು 1915-16 ರಲ್ಲಿಯೂ ವ್ಯಾಪಕವಾದ ಈ ಸಿದ್ಧಾಂತದಿಂದ ವಿಶ್ವ ರಚನೆ ಮತ್ತು ಸ್ವರೂಪಕ್ಕೆ ಸಂಬಂಧಪಟ್ಟಂತೆ ಲಭಿಸುವ ತೀರ್ಮಾನಗಳನ್ನು 1917ರಲ್ಲಿಯೂ ಪ್ರಕಟಿಸಿದ. ಬರ್ಲಿನ್ ನಗರಕ್ಕೆ ಬಂದು ನೆಲೆಸಿದ ತರುವಾಯವೂ ಐನ್ಸ್ಟೈನನ ದಾಂಪತ್ಯ ಜೀವನ ಸುಖಮಯವಾಗಿರಲಿಲ್ಲ. ಮನೆಯ ವಾತಾವರಣ ಇನ್ನಷ್ಟು ಕಹಿಯಾಯಿತು. ಬೇರೆ ಮಾರ್ಗವಿಲ್ಲದೆ 1919ರಲ್ಲಿ ಮೊದಲ ವಿವಾಹವನ್ನು ವಿಚ್ಛೇದಿಸಿ ಅದೇ ವರ್ಷ ತನ್ನ ಸೋದರಮಾವನ ಮಗಳಾದ ಎಲ್ಲಾಳನ್ನು ಮದುವೆಯಾದ.
ಪರ್ಯಟನೆ
ಬದಲಾಯಿಸಿಮೊದಲನೆಯ ಮಹಾಯುದ್ಧ ಮುಗಿಯಿತು. ಸಾರಿಗೆ ಸಂಪರ್ಕ ಸುಗಮವಾದದ್ದರಿಂದ ಐನ್ಸ್ಟೈನ್ ಬ್ರಿಟನ್ ಮತ್ತು ಅಮೆರಿಕ ದೇಶಗಳಿಗೆ ಭೇಟಿಯಿತ್ತು ಬರ್ಲಿನಿಗೆ ಮರಳಿದ. ಈ ವೇಳೆಗಾಗಲೇ ಆತನ ಕೀರ್ತಿ ಎಲ್ಲೆಲ್ಲಿಯೂ ಹರಡಿ ಅವನಿಗೆ ಅನೇಕ ರೀತಿಯ ಅಧಿಕ ಗೌರವ ಮನ್ನಣೆಗಳು ದೊರೆತವು. ದ್ಯುತಿ ವಿದ್ಯುತ್ಕ್ರಿಯೆ ಮತ್ತು ತಾತ್ತ್ವಿಕ ಭೌತವಿಜ್ಞಾನಗಳಿಗೆ ಸಂಬಂಧಿಸಿದ ಆತನ ಸಂಶೋಧನೆಗಳನ್ನು ಗಮನಿಸಿದ ಸ್ವೀಡಿಷ್ ರಾಯಲ್ ವಿಜ್ಞಾನ ಸಂಸ್ಥೆ 1921ರಲ್ಲಿ, ವಿಜ್ಞಾನಪ್ರಪಂಚದಲ್ಲಿ ಅತ್ಯಂತ ಗೌರವಪುರ್ವಕವಾದ ನೊಬೆಲ್ ಪಾರಿತೋಷಕವನ್ನು ನೀಡಿತು. ಮರುವರ್ಷ ಲೀಗ್ ಆಫ್ ನೇಷನ್ಸ್ ಸಂಸ್ಥೆಯ ಬೌದ್ಧಿಕ ಸಹಕಾರ ಸಂಘದ ಸದಸ್ಯನಾಗಿ ಚುನಾವಣೆಗೊಂಡ.
ಯೆಹೂದಿಗಳಿಗೆ ಪವಿತ್ರವಾದ ಪ್ಯಾಲೆಸ್ಟೈನ್ ದೇಶವನ್ನು ಐನ್ಸ್ಟೈನ್ ಸಂದರ್ಶಿಸಿದ್ದು 1922ರಲ್ಲಿ. ಅಲ್ಲಿನ ಪರಿಸ್ಥಿತಿಗಳ ಪರಿಶೀಲನೆಯಿಂದ ಅಲ್ಲೊಂದು ಯೆಹೂದಿ ರಾಷ್ಟ್ರವನ್ನು ಸ್ಥಾಪಿಸುವುದೇ ವಿಶ್ವ ಯೆಹೂದಿ ಪ್ರಶ್ನೆಗೆ ಸರಿಯಾದ ಪರಿಹಾರವೆಂಬ ತೀರ್ಮಾನಕ್ಕೆ ಬಂದ. ಸಹಜವಾಗಿಯೇ ಈ ಗುರಿಯನ್ನು ಸಾಧಿಸಲು ಹೋರಾಡುತ್ತಿದ್ದ ಸಯೋನಿಸ್ಟ್ ಚಳವಳಿಗೆ ತನ್ನ ಬೆಂಬಲ ನೀಡಿದ. ಆದರೆ ಈ ಯೆಹೂದಿ ರಾಷ್ಟ್ರ ಯಾವ ರೀತಿಯ ಸಂಕುಚಿತ ಭಾವನೆಯನ್ನೂ ಹೊಂದಿರಬಾರದು, ಪ್ಯಾಲಿಸ್ಟೈನ್ ಅರಬ್ಬರಿಗೂ ಈ ರಾಷ್ಟ್ರಗಳಲ್ಲಿ ಸಮಾನಸ್ಥಾನವಿರಬೇಕು, ಯೆಹೂದಿಗಳು ಮತ್ತು ಅರಬ್ಬರು ಸೌಹಾರ್ದದಿಂದ ಒಟ್ಟಿಗೆ ಬಾಳಬೇಕು-ಎಂಬ ತನ್ನ ಖಚಿತ ಅಭಿಪ್ರಾಯಗಳನ್ನು ಚಳವಳಿಯ ಮುಖಂಡನಾದ ವೀಸ್ಮನನಿಗೆ ಸ್ಪಷ್ಟವಾಗಿ ತಿಳಿಸಿದ. ಇದೇ ಅಭಿಪ್ರಾಯಗಳನ್ನು ಅನೇಕ ಸಾರ್ವಜನಿಕ ಸಭೆಗಳಲ್ಲೂ ವ್ಯಕ್ತಪಡಿಸಿದ.
ಅಮೆರಿಕ ಪೌರತ್ವ
ಬದಲಾಯಿಸಿವಿಸ್ತೃತ ಸಾಪೇಕ್ಷಸಿದ್ಧಾಂತ ಅಸ್ತಿತ್ವಕ್ಕೆ ಬಂದು ಅನೇಕ ರೀತಿಯಲ್ಲಿ ಸಮರ್ಥಿತವಾದ ಮೇಲೆ ಐನ್ಸ್ಟೈನ್ ತನ್ನ ಸಂಶೋಧನೆಗಳನ್ನು ಮುಂದುವರಿಸಿ ಸಮಗ್ರ ಅಥವಾ ಏಕೀಕೃತ ಕ್ಷೇತ್ರಸಿದ್ಧಾಂತವನ್ನು ನಿರ್ಮಿಸುವ ಪ್ರಯತ್ನಗಳನ್ನು ಕೈಗೊಂಡ. ಈ ದಿಕ್ಕಿನಲ್ಲಿ ಸಂಶೋಧನೆಗಳೇನೊ ಮುಂದುವರಿಯುತ್ತಿದ್ದುವು. ಆದರೆ ದೇಶದಲ್ಲಿ ನಾಜಿ಼ಗಳ ದೌರ್ಜನ್ಯ ಮತ್ತು ಹಿಂಸಾಕೃತ್ಯಗಳ ವಿರೋಧಿಗಳ ಬಗ್ಗೆ ಅವರ ಅಪಪ್ರಚಾರ, ಯೆಹೂದಿಗಳ ಬಗ್ಗೆ ದ್ವೇಷ ಇವೆಲ್ಲ ದಿನೇ ದಿನೇ ಹೆಚ್ಚುತ್ತ ಬಂದು ರಾಜಕೀಯ ವಾತಾವರಣ ಬಲುಮಟ್ಟಿಗೆ ಹದಗೆಟ್ಟಿತು. ವಿಶ್ವವಿದ್ಯಾನಿಲಯಗಳಲ್ಲಿ ಕೂಡ ಬೌದ್ಧಿಕ ವಾತಾವರಣ ಬಲುಮಟ್ಟಿಗೆ ಕಲುಷಿತವಾಯಿತು. 1930-32 ಅಮೆರಿಕಕ್ಕೆ ಎರಡು ಸಲ ಭೇಟಿಕೊಟ್ಟು ಹಿಂತಿರುಗಿದ ಅನಂತರ ಇನ್ನು ಹೆಚ್ಚು ಕಾಲ ಜರ್ಮನಿಯಲ್ಲಿ ತಾನಿರುವುದು ಸಾಧ್ಯವಿಲ್ಲ, ಹಾಗೆ ಇರುವುದು ಕ್ಷೇಮಕರವೂ ಅಲ್ಲ ಎಂಬುದು ಸ್ಪಷ್ಟವಾಯಿತು. ಭಾರವಾದ ಹೃದಯದಿಂದ ಜರ್ಮನಿ ದೇಶವನ್ನು ತೊರೆಯಬೇಕಾಯಿತು. ಆಗ ಐನ್ಸ್ಟೈನನನ್ನು ಪ್ರೀತಿವಿಶ್ವಾಸಗಳಿಂದ ಸ್ವಾಗತಿಸಿದ್ದು (1935) ಅಮೆರಿಕ ದೇಶ. ಅಲ್ಲಿನ ವಿಜ್ಞಾನಿಗಳು ಮತ್ತು ಸರ್ಕಾರ ಈತನನ್ನು ಬಹಳ ಗೌರವದಿಂದ ಬರಮಾಡಿಕೊಂಡರು. ಪ್ರಿನ್ಸ್‌ಟನ್ನಿನಲ್ಲಿರುವ ಪ್ರೌಢವ್ಯಾಸಂಗ ಸಂಸ್ಥೆಯ ಆಜೀವಾಂತ ಸದಸ್ಯನಾಗಿ ಈತನನ್ನು ನೇಮಿಸಿದ್ದು ಮಾತ್ರವಲ್ಲ, ಸಂಶೋಧನೆಯನ್ನು ಮುಂದುವರಿಸಲು ಬೇಕಾಗುವ ಸಕಲ ಸೌಕರ್ಯಗಳನ್ನೂ ಒದಗಿಸಿಕೊಟ್ಟರು. ಪ್ರತಿಭೆಯ ವಿಕಾಸ ನಿರ್ವಿಘ್ನವಾಗಿ ಮುಂದುವರಿಯಲು ಅವಕಾಶ ಒದಗಿತು. ಐನ್ಸ್ಟೈನನ ಉಳಿದ ಜೀವನಾವಧಿ ಕಳೆದದ್ದು ಇಲ್ಲಿಯೇ. 1940ರಲ್ಲಿ ಈತನನ್ನು ಅಮೆರಿಕ ದೇಶ ತನ್ನ ಪ್ರಜೆಯಾಗಿ ಸ್ವೀಕರಿಸಿತು.
ಎರಡನೆಯ ಮಹಾಯುದ್ಧ
ಬದಲಾಯಿಸಿಈ ಮಧ್ಯೆ 1939ನೆಯ ಸೆಪ್ಟೆಂಬರಿನಲ್ಲಿ ಎರಡನೆಯ ಮಹಾಯುದ್ಧ ಪ್ರಾರಂಭವಾಯಿತು. ಇಷ್ಟರಲ್ಲೇ ಯುರೋಪಿನ ಅನೇಕ ಪ್ರಮುಖ ವಿಜ್ಞಾನಿಗಳು ನಾಜಿ ಮತ್ತು ಫಾಸಿಸ್ಟ್ ದೌರ್ಜನ್ಯಗಳಿಂದ ತಪ್ಪಿಸಿಕೊಂಡು ಅಮೆರಿಕದಲ್ಲಿ ಬಂದು ನೆಲೆಸಿದರು. ಇವರು ಮತ್ತು ಅಮೆರಿಕದ ಕೆಲವು ಪ್ರಮುಖ ವಿಜ್ಞಾನಿಗಳು ಅಂದಿನ ಅಂತಾರಾಷ್ಟ್ರೀಯ ಪರಿಸ್ಥಿತಿಯನ್ನು ಗಮನಿಸಿ ಎಲ್ಲ ದೃಷ್ಟಿಯಿಂದಲೂ ಅಮೆರಿಕ ದೇಶ ಪರಮಾಣುಬಾಂಬು ತಯಾರಿಕೆಯ ದಿಕ್ಕಿನಲ್ಲಿ ಪ್ರಯತ್ನವನ್ನು ಪ್ರಾರಂಭಿಸುವುದು ಒಳ್ಳೆಯದೆಂಬ ತೀರ್ಮಾನಕ್ಕೆ ಬಂದರು. ತಮ್ಮ ಸಲಹೆಗಳ ಪರವಾಗಿ ಅಧ್ಯಕ್ಷ ರೂಸ್ವೆಲ್ಟ್‌ರವರಿಗೆ ಐನ್ಸ್ಟೈನ್ ಕಾಗದ ಬರೆಯುವಂತಾದರೆ ತಮ್ಮ ಪ್ರಯತ್ನ ಸಫಲವಾಗುವುದೆಂದು ಫರ್ಮಿ, ಸಿಲಾರ್ಡ್, ಟೆಲ್ಲರ್ ಮುಂತಾದ ಅನೇಕ ಪ್ರಮುಖ ವಿಜ್ಞಾನಿಗಳು ಭಾವಿಸಿದರು. ತಮ್ಮ ಸಲಹೆಗಳನ್ನು ಐನ್ಸ್ಟೈನನಿಗೆ ವಿವರಿಸಿ ಈ ಬಗ್ಗೆ ಅಧ್ಯಕ್ಷರಿಗೆ ತಮ್ಮೆಲ್ಲರ ಪರವಾಗಿ ಕಾಗದವೊಂದನ್ನು ಬರೆಯಬೇಕೆಂದು ಮನವಿ ಮಾಡಿಕೊಂಡಾಗ ಸ್ವಭಾವತಃ ಶಾಂತಿಪ್ರಿಯ ಹಾಗೂ ಶಾಂತಿವಾದಿಯಾದ ಈತ ಒಂದು ಧರ್ಮಸಂಕಟದ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಆದರೆ ಅಂದಿನ ಸಮಯ ಸಂದರ್ಭಗಳನ್ನೆಲ್ಲ ಕೂಲಂಕಷವಾಗಿ ಪರ್ಯಾಲೋಚಿಸಿ ಪರಮಾಣು ಬಾಂಬು ತಯಾರಿಕೆ ಪ್ರಯತ್ನವನ್ನು ಅಮೆರಿಕ ಕೈಗೊಳ್ಳುವುದು ಎಲ್ಲ ಜನರ ಹಿತ ದೃಷ್ಟಿಯಿಂದಲೂ ಸರಿ ಎಂಬ ತೀರ್ಮಾನಕ್ಕೆ ಆತ ಬಂದ. ಇದಲ್ಲದಿದ್ದರೆ ನಾಜಿ಼ ಜರ್ಮನಿ ಈ ಸಿದ್ಧಿ ಪಡೆಯುವುದು ನಿಶ್ಚಯ, ಇದರಿಂದ ಪ್ರಪಂಚವಿನಾಶ ಕಟ್ಟಿಟ್ಟದ್ದು ಎಂಬುದು ಆತನ ಮನಸ್ಸಿನ ಹಿನ್ನೆಲೆಯಲ್ಲಿದ್ದ ಭಾವ. ವಿಜ್ಞಾನಿಗಳ ಪರವಾಗಿ ಅಧ್ಯಕ್ಷ ರೂಸ್ವೆಲ್ಟರಿಗೆ ಕಾಗದ ಬರೆದು ಬಹುಶಃ ಈಗಾಗಲೇ ಜರ್ಮನಿ ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ಕೈಗೊಂಡು ಮುಂದುವರಿದಿರಬಹುದೆಂದೂ ಅಮೆರಿಕ ಯೋಗ್ಯ ಪ್ರಯತ್ನಗಳನ್ನು ಕೈಗೊಳ್ಳದಿದ್ದಲ್ಲಿ ಮುಂದೆ ವಿಪರೀತ ಅನಾಹುತಕ್ಕೆ ಎಡೆಯಾಗುವುದೆಂದೂ ಸ್ಪಷ್ಟವಾಗಿ ತಿಳಿಸಿದ. ಈ ಕಾಗದವನ್ನು ಅಪಾರ್ಥಮಾಡಿಕೊಂಡ ಅನೇಕರು ಐನ್ಸ್ಟೈನನನ್ನು ಬಲುಕಟುವಾಗಿ ಟೀಕಿಸಿ ಪರಮಾಣು ಬಾಂಬಿನ ತಯಾರಿಕೆಯ ನೈತಿಕ ಜವಾಬ್ದಾರಿ ಆತನದೇ ಎಂದು ತೀವ್ರ ವಾಗಿ ದೂಷಿಸಿದ್ದಾರೆ. ಈ ಟೀಕೆಗಳಿಗೆ ಉತ್ತರವಾಗಿ ಜಪಾನ್ ದೇಶದ ಪತ್ರಿಕಾ ಸಂಪಾದಕ ರೊಬ್ಬರಿಗೆ ಬರೆದ ಪತ್ರದಲ್ಲಿ ಐನ್ಸ್ಟೈನ್ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾನೆ. ಶಾಂತಿಸ್ಥಾಪನೆ ಮತ್ತು ಶಾಂತಿಪಾಲನೆಯಲ್ಲಿ ತನಗೆ ಅಚಲವಾದ ನಂಬಿಕೆ ಇರುವುದಾದರೂ ಜನಜೀವನವನ್ನೇ ಹಾಳು ಮಾಡುವ ದುರುದ್ದೇಶವುಳ್ಳ ರಾಕ್ಷಸೀಬಲಗಳನ್ನು ಎದುರಿಸುವಾಗ ಎಲ್ಲ ವಿಧವಾದ ಅಸ್ತ್ರಗಳನ್ನೂ ಬಳಸುವುದು ಅನಿವಾರ್ಯವೆಂಬ ಅಂಶ ಆ ಪತ್ರದಲ್ಲಿ ನಿರೂಪಿತವಾಗಿದೆ.
ಬೌದ್ಧಿಕ ಜೀವನ ಮತ್ತು ಸಾಧನೆ
ಬದಲಾಯಿಸಿಐನ್ಸ್ಟೈನನ ಕ್ಷೇತ್ರ ತಾತ್ತ್ವಿಕ ಭೌತಶಾಸ್ತ್ರವಿಜ್ಞಾನಕ್ಕೇ ಬಹು ಪಾಲು ಮೀಸಲು. ಆದರೆ ಆತನ ಕುತೂಹಲಕ್ಕೆ ಮೇರೆ ಇರಲಿಲ್ಲ. ವಿಜ್ಞಾನ ಮೀಮಾಂಸೆ, ರಾಜಕೀಯ ಮತ್ತು ಧಾರ್ಮಿಕ ಪ್ರಶ್ನೆಗಳು, ಯೆಹೂದಿ ಪ್ರಶ್ನೆ, ನಿಶ್ಯಸ್ತ್ರೀಕರಣ, ಶಾಂತಿಸ್ಥಾಪನೆ, ವಿಶ್ವಸರ್ಕಾರ, ಜೀವನದರ್ಶನ- ಇವೆಲ್ಲ ವಿಚಾರಗಳಲ್ಲಿಯೂ ಆಳವಾಗಿ ಚಿಂತಿಸಿ ಖಚಿತ ಅಭಿಪ್ರಾಯಗಳನ್ನು ಆತ ತಳೆದಿದ್ದನಲ್ಲದೆ ಯುಕ್ತಕಂಡಲ್ಲಿ ಅವನ್ನು ವ್ಯಕ್ತಪಡಿಸಿಯೂ ಇದ್ದ. ಐನ್ಸ್ಟೈನನ ಮುಖ್ಯ ಕೊಡುಗೆ ಸಾಪೇಕ್ಷಸಿದ್ಧಾಂತ ಮತ್ತು ಅದರ ಬೆಳೆವಣಿಗೆ. ಆದರೆ ಶಕಲಸಿದ್ಧಾಂತದ (ಕ್ವಾಂಟಂ ಥಿಯೊರಿ) ಪ್ರಾರಂಭದ ದೆಸೆಯಲ್ಲಿ ಈತ ಅದರಲ್ಲಿ ಸಾಕಷ್ಟು ಭಾಗವಹಿಸಿದ್ದ. ಹಾಗಿದ್ದರೂ 1925ರ ಅನಂತರ ಹೈಸನ್ಬರ್ಗನ ಅನಿಶ್ಚಿತತ್ವ ನಿಯಮದ ಆಧಾರದ ಮೇಲೆ ಬೆಳೆದ ಹೊಸ ಶಕಲ ಸಿದ್ಧಾಂತದ ಬಗ್ಗೆ ಈತನಿಗೆ ಅಷ್ಟಾಗಿ ಸಹಾನುಭೂತಿ ಇರಲಿಲ್ಲ. ಅದರಲ್ಲಿಯೂ ಈ ಸಿದ್ಧಾಂತದ ಸಂಭವನೀಯಾತ್ಮಕ ವಿವರಣೆ ಮತ್ತು ವ್ಯಾಖ್ಯೆಗಳಲ್ಲಿ ಸ್ವಲ್ಪವೂ ನಂಬಿಕೆ ಇರಲಿಲ್ಲ. ಇದೊಂದು ಕೇವಲ ತಾತ್ಕಾಲಿಕ ಪರಿಹಾರ ಎಂದೇ ಈತನ ನಂಬಿಕೆಯಾಗಿತ್ತು. ಈ ಸಿದ್ಧಾಂತ ಮತ್ತು ಇತರ ಮೂಲ ಸಿದ್ಧಾಂತಗಳನ್ನು ಒಳಗೊಂಡ ಒಂದು ಸಮಗ್ರ ಕ್ಷೇತ್ರಸಿದ್ಧಾಂತದ ನಿರ್ಮಾಣ ಅಗತ್ಯ ಮತ್ತು ಸಾಧ್ಯ, ಈ ಸಮಗ್ರ ಸಿದ್ಧಾಂತ ಸಂಭವನೀಯಾತ್ಮಕವಾಗಿರದೆ, ನಿರ್ಣಯಾತ್ಮಕವಾಗಿಯೇ ಇರುತ್ತದೆ ಎಂದು ಐನ್ಸ್ಟೈನನ ದೃಢ ನಂಬಿಕೆ. ವಿಜ್ಞಾನ ಮೀಮಾಂಸೆಯ ಮುಖ್ಯ ಭಾಗಗಳಲ್ಲೊಂದಾದ ವಿಜ್ಞಾನದ ವಿಚಾರ ಮಾರ್ಗದ ಬಗ್ಗೆ ಐನ್ಸ್ಟೈನ್ ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದ್ದಾನೆ. ವಿಜ್ಞಾನದ ಬೆಳೆವಣಿಗೆ ಮತ್ತು ಸ್ವರೂಪಗಳನ್ನು ಗಮನಿಸಿದರೆ ವೈಜ್ಞಾನಿಕ ಸಿದ್ಧಾಂತಗಳಿಗೆ ಅನುಭವಲಭ್ಯ ವಿಷಯಗಳೇ ಅಲ್ಲದೆ ಕೆಲವು ಮೂಲ ಪರಿಕಲ್ಪನೆ ಮತ್ತು ಮೂಲಭಾವನೆಗಳು ಆಧಾರವಾಗಿರುವುದು ಕಂಡುಬರುತ್ತದೆ. ಐನ್ಸ್ಟೈನನ ಪ್ರಕಾರ ಈ ಪರಿಕಲ್ಪನೆ ಮತ್ತು ಭಾವನೆಗಳು ತಾರ್ಕಿಕದೃಷ್ಟಿಯಿಂದ ಅತಿಸರಳವಾಗಿಯೂ ಪರಸ್ಪರ ಸಮಂಜಸವಾಗಿಯೂ ಇರಬೇಕು. ಇವನ್ನು ಯಾವ ರೀತಿಯಿಂದಲೂ ಇಂದ್ರಿಯಗೋಚರ ವಿಷಯಗಳಿಂದ ಉತ್ಪತ್ತಿಸುವುದು ಸಾಧ್ಯವಿಲ್ಲ. ವಿಜ್ಞಾನಿ ತನ್ನ ಬುದ್ಧಿ ಮತ್ತು ಪ್ರತಿಭಾಶಕ್ತಿಯಿಂದ ಇವನ್ನು ಅನಿರ್ಬಂಧಿತವಾಗಿ ಸೃಜಿಸುತ್ತಾನೆ. ಆದರೆ ಇವು ಭಾವನೆಗಳಾಗಿ ಯಥಾರ್ಥ ಜ್ಞಾನವನ್ನು ನೀಡಲು ಸಹಾಯಕಾರಿಯಾಗಬೇಕಾದರೆ ವಾಸ್ತವವಿಷಯಗಳೊಂದಿಗೆ ಸಂಬಂಧ ಪಡೆಯಬೇಕು; ಈ ಸಂಬಂಧದ ಅರಿವು ನಮ್ಮ ಪ್ರಜ್ಞೆಗೆ ಸ್ವಯಂಗೋಚರವಾಗುತ್ತದೆಯೇ ವಿನಾ ತಾರ್ಕಿಕ ತೀರ್ಮಾನವಾಗಿ ಲಭಿಸುವುದಿಲ್ಲ. ಈ ಭಾವನೆಗಳ ಯಥಾಥರ್ಯ್‌ಕ್ಕೆ ಈ ಸಂಬಂಧವೊಂದೇ ಸಾಲದು. ಇವು ಯಾವ ರೀತಿಯಲ್ಲೂ ಅನುಭವಸಿದ್ಧವಾದ ಯಥಾರ್ಥ ವಿಷಯಗಳಿಗೆ ವಿರೋಧವಾಗಿರಬಾರದು ಮತ್ತು ಇವುಗಳಿಂದ ಲಭಿಸುವ ತೀರ್ಮಾನಗಳು ಅನುಭವ ಸಮರ್ಥನೀಯವಾಗಿರಬೇಕು.
ಸಾಮಾನ್ಯವಾಗಿ ಬಹುತೇಕ ವಿಜ್ಞಾನಿಗಳು ರಾಜಕೀಯ ಮತ್ತು ಸಾಮಾಜಿಕ ವ್ಯವಹಾರಗಳಿಂದ ದೂರವಿರುವುದನ್ನು ಕಾಣುತ್ತೇವೆ. ಐನ್ಸ್ಟೈನನ ಅಭಿಪ್ರಾಯದಲ್ಲಿ ವಿಜ್ಞಾನಿಗಳು ಮತ್ತು ಇತರ ಬುದ್ಧಿಜೀವಿಗಳು ಈ ವ್ಯವಹಾರಗಳಲ್ಲಿ ನೇರವಾಗಿ ಭಾಗವಹಿಸದಿದ್ದರೂ ಇವುಗಳ ಬಗ್ಗೆ ಆಲೋಚಿಸಿ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಅಗತ್ಯ ಎಂದಿತ್ತು. ಲೇಖನ ಮತ್ತು ಸಾರ್ವಜನಿಕ ಭಾಷಣಗಳ ಮೂಲಕ ರಾಜಕೀಯ ಮತ್ತು ಸಾಮಾಜಿಕ ಪ್ರಶ್ನೆಗಳ ಬಗ್ಗೆ ತನ್ನ ಅಭಿಪ್ರಾಯಗಳನ್ನು ಐನ್ಸ್ಟೈನ್ ವ್ಯಕ್ತಪಡಿಸುತ್ತಿದ್ದ. ಚಿಕ್ಕಂದಿನಿಂದಲೂ ಸಮಾಜದ ದರಿದ್ರ ಮತ್ತು ಶೋಷಿತ ವರ್ಗಗಳ ಬಗ್ಗೆ ಆತನಿಗೆ ಒಂದು ವಿಧವಾದ ಸಹಜ ಅನುಕಂಪವಿತ್ತು. ಸಮಾಜದಲ್ಲಿ ವರ್ಗವರ್ಗಗಳಿಗಿರುವ ಅಂತರ ಭೇದಭಾವನೆಗಳು, ಆರ್ಥಿಕ ಮತ್ತು ಸಾಮಾಜಿಕ ಶೋಷಣೆ-ಇವನ್ನು ಆತ ಸರ್ವಥಾ ಸಹಿಸುತ್ತಿರಲಿಲ್ಲ. ರಷ್ಯಾದಲ್ಲಿ ಕಮ್ಯೂನಿಸಂ ತತ್ತ್ವಗಳಿಗನುಸಾರವಾಗಿ ಸ್ಥಾಪಿತವಾದ ಸಮತಾವಾದಿ ಸಮಾಜ ವ್ಯವಸ್ಥೆಯನ್ನು ಆತ ಒಪ್ಪಲಿಲ್ಲ. ಒಂದು ರೀತಿಯ ಪ್ರಜಾಸತ್ತಾತ್ಮಕ ಸಮತಾವಾದದಲ್ಲಿ ಅವನಿಗೆ ನಂಬಿಕೆ ಇತ್ತು; ನೈತಿಕದೃಷ್ಟಿಯಿಂದ ಈ ವಾದ ಅತಿ ಸಮರ್ಥನೀಯವೆಂದು ಭಾವಿಸಿದ್ದ. ಪ್ರತಿಯೊಬ್ಬನಿಗೂ ಕನಿಷ್ಠ ಜೀವನಸೌಲಭ್ಯಗಳನ್ನು ಒದಗಿಸುವುದು ಸಮಾಜದ ಹೊಣೆ, ಅವನವನ ಶಕ್ತಿಸಾಮಥಾರ್ಯ್‌ನುಸಾರ ವ್ಯಕ್ತಿತ್ವದ ಬೆಳೆವಣಿಗೆಗೆ ಪ್ರತಿಯೊಬ್ಬನಿಗೂ ಅವಕಾಶವಿರಬೇಕು; ಅವನ ಮೂಲಹಕ್ಕುಗಳನ್ನು ಯಾವ ವಿಧದಲ್ಲೂ ಕುಂಠಿತಮಾಡದೆ ಅವನ್ನು ಸಂರಕ್ಷಿಸುವುದು ಸಮಾಜ ಮತ್ತು ಸರ್ಕಾರದ ಕರ್ತವ್ಯ ಎಂದು ಅನೇಕ ಸಂದರ್ಭಗಳಲ್ಲಿ ಅವನ್ನು ಶ್ರುತಪಡಿಸುವುದಿತ್ತು. ಪ್ರತಿಯೊಬ್ಬ ವ್ಯಕ್ತಿಗೂ ಎಲ್ಲ ವಿಧವಾದ ಸ್ವಾತಂತ್ರ್ಯ, ಅದರಲ್ಲೂ ಅವನಿಗೆ ಇಷ್ಟ ಬಂದ ಕ್ಷೇತ್ರದಲ್ಲಿ ಅನ್ವೇಷಣೆ ಮಾಡಲು ಮತ್ತು ಅನ್ವೇಷಣೆಯ ತೀರ್ಮಾನಗಳನ್ನು ಅಭಿವ್ಯಕ್ತಪಡಿಸಲು, ಸಂಪುರ್ಣ ಬೌದ್ಧಿಕ ಸ್ವಾತಂತ್ರ್ಯವಿರಬೇಕೆಂಬುದು ಈತನ ಬಲು ಖಚಿತವಾದ ನಿಲುವು. ಆದ್ದರಿಂದ ವ್ಯಕ್ತಿಸ್ವಾತಂತ್ರ್ಯ ವಿರೋಧಿಗಳಾದ ಇಟಲಿ ದೇಶದ ಫ್ಯಾಸಿಸ್ಟ್ ಮತು ಜರ್ಮನಿಯ ನಾಜಿ಼ ಸರ್ಕಾರಗಳನ್ನು ಈತ ಬಲು ತೀವ್ರವಾಗಿ ಖಂಡಿಸಿದ. ಮಾನವ ಸಹೋದರತ್ವದ ಆದರ್ಶದಲ್ಲಿ ಅವನಿಗೆ ಅಪಾರ ನಂಬಿಕೆ. ಅನೇಕ ಸಂದರ್ಭದಲ್ಲಿ ಅಮೆರಿಕದ ಬಿಳಿಯ ಜನರು ನೀಗ್ರೋಗಳ ಬಗ್ಗೆ ತೋರುತ್ತಿದ್ದ ಅವಹೇಳನ ಮನೋಭಾವವನ್ನು ಸಹಿಸಲಾರದೆ ಖಂಡಿಸುತ್ತಿದ್ದ.
ಸ್ವಭಾವತಃ ಮಾನವ ಹಿತಚಿಂತಕನಾದ ಐನ್ಸ್ಟೈನನಿಗೆ ಚಿಕ್ಕಂದಿನಿಂದಲೇ ಮಿಲಿಟರಿ ಶಿಸ್ತು ಎಂದರೆ ಜುಗುಪ್ಸೆ ಮತ್ತು ವಿರೋಧ. ಎರಡು ಮಹಾಯುದ್ಧಗಳಿಂದ ಸಂಭವಿಸಿದ ಅಪಾರ ಕಷ್ಟನಷ್ಟಗಳನ್ನು ಕಣ್ಣಾರೆ ಕಂಡಮೇಲಂತೂ ಈ ಯುದ್ಧ ವಿರೋಧಿಭಾವ ಅತಿಯಾಗಿ ಬಲಗೊಂಡಿತು. ಪ್ರಪಂಚದ ಭವಿಷ್ಯ ಮತ್ತು ಎಲ್ಲ ಜನರ ಹಿತದೃಷ್ಟಿಯಿಂದ ಸಾರ್ವತ್ರಿಕ ನಿಶ್ಯಸ್ತ್ರೀಕರಣ ಅತ್ಯಗತ್ಯ; ಯುದ್ಧಸಂಭವನೆಯ ಮೂಲ ಕಾರಣಗಳನ್ನೆ ನಿರ್ಮೂಲಗೊಳಿಸಬೇಕು; ಶಾಂತಿಯನ್ನು ಸ್ಥಾಪಿಸಿ ಅದರ ಪಾಲನೆಗೆ ವಿಶ್ವಸರ್ಕಾರವನ್ನು ಸ್ಥಾಪಿಸಬೇಕು; ಎಲ್ಲ ರಾಷ್ಟ್ರಗಳೂ ಇದರ ಅಧೀನಕ್ಕೆ ಒಳಪಡಬೇಕು ಎಂದು ಅನೇಕ ಸಲ ಒತ್ತಿ ಒತ್ತಿ ತನ್ನ ಅಭಿಪ್ರಾಯಗಳನ್ನು ತಿಳಿಸಿದ. ರಾಷ್ಟ್ರರಾಷ್ಟ್ರಗಳ ನಡುವೆ ಉದ್ಭವಿಸುವ ಸಮಸ್ಯೆಗಳನ್ನು ವಿಶ್ವಸರ್ಕಾರದ ನೆರವಿನಿಂದ ಶಾಂತಿಯುತವಾಗಿ ಪರಿಹರಿಸಬೇಕು; ಇಂಥ ಸಂದರ್ಭದಲ್ಲಿ ಮಹಾತ್ಮಗಾಂಧಿ ತೋರಿಸಿಕೊಟ್ಟಿರುವ ಶಾಂತಿಮಾರ್ಗವನ್ನು ಅನುಸರಿಸುವುದು ಸೂಕ್ತವೆಂದು ವಾದಿಸಿದ. ಗಾಂಧಿ ಬಗ್ಗೆ ಐನ್ಸ್ಟೈನನಿಗೆ ಅಪಾರ ಗೌರವವಿತ್ತು. ಐನ್ಸ್ಟೈನ್ ಜನ್ಮತಃ ಯೆಹೂದಿ. ಆದರೆ ತನ್ನ ಮತ, ಧರ್ಮ ಮತ್ತು ಆಚರಣೆಗಳಿಗೆ ಆತ ಎಂದೂ ಕಟ್ಟು ಬೀಳದೆ ಒಂದು ವಿಧವಾದ ಸ್ವತಂತ್ರ ಮನೋಭಾವವನ್ನೇ ತಳೆದಿದ್ದ. ಸದಾ ಆತ ಒಬ್ಬ ಬುದ್ಧಿಜೀವಿಯಾಗಿಯೇ ಉಳಿದ. ಹೀಗೆಂದ ಮಾತ್ರಕ್ಕೆ ಅವನು ನಾಸ್ತಿಕನಲ್ಲ. ಅವನಿಗೆ ಎಲ್ಲ ಮತಗಳ ಮೂಲ ಭಾವನೆಗಳ ಬಗ್ಗೆ ಗೌರವವಿತ್ತು. ಮತ, ಧರ್ಮ ಮತ್ತು ದೇವರು ಇವುಗಳ ಬಗ್ಗೆ ಅವನ ಕಲ್ಪನೆಯೇ ಬೇರೆ. ದೇವರು ಎಂದರೆ ಸತ್ಯ ಸೌಂದರ್ಯಗಳ ಮೂರ್ತರೂಪ ಹಾಗೂ ಆಧ್ಯಾತ್ಮಿಕ ಸ್ವರೂಪಿಯಾದ ಶಕ್ತಿ ಎಂಬುದೇ ಅವನ ಕಲ್ಪನೆ. ಈ ಶಕ್ತಿ ಅನುಭವಾತೀತವಲ್ಲ. ವಿಶ್ವ ಹಾಗು ನಮ್ಮ ಭಾವನೆಗಳಲ್ಲಿ ನಾವು ಕಾಣುವ ಅದ್ಭುತ ರಚನೆ ಮತ್ತು ಭವ್ಯತೆ ಈ ಆದಿಶಕ್ತಿಯ ಅರಿವನ್ನು ಮೂಡಿಸುತ್ತವೆ. ಇಂಥ ಅರಿವು ನಮ್ಮಲ್ಲಿ ಒಂದು ವಿಧವಾದ ಪುಜ್ಯ ಅಂದರೆ ಆಸ್ತಿಕ ಮನೋಭಾವವನ್ನು ಉಂಟು ಮಾಡುತ್ತದೆ ಎಂದು ಆತನ ನಂಬಿಕೆ. ಕೇವಲ ಭಯ ಭಾವನೆಯಿಂದಾಗಲಿ ಅಥವಾ ನೀತಿ ಸಂರಕ್ಷಣೆಗಾಗಲೀ ಹುಟ್ಟಿಕೊಂಡ ಮಾತುಗಳು ಅಷ್ಟೇನೂ ಶ್ರೇಷ್ಠವಲ್ಲ ಜೀವನದ ಪರಮಮೌಲ್ಯ ಮತ್ತು ಗುರಿಗಳ ಪ್ರಜ್ಞೆಯನ್ನು ಒದಗಿಸಿ ಅವು ನಮ್ಮ ಅಂತರಾಳದಲ್ಲಿ ರೂಢವಾಗಿ ಆತ್ಮಪರಿಶುದ್ಧತೆಯನ್ನು ಸಾಧಿಸಲು ಸಹಾಯಕವಾಗುವ ಮತವೇ ಅತಿ ಶ್ರೇಷ್ಠವೆಂದು ಅವನು ಭಾವಿಸಿದ್ದ. ಸತ್ಯಾನ್ವೇಷಣೆ, ಪರಮ ಮೌಲ್ಯಗಳ ಅರಿವು, ಜೀವನದಲ್ಲಿ ಅವುಗಳ ಸಾಧನೆಗಾಗಿ ಪ್ರಯತ್ನ-ಇದೇ ಧರ್ಮ, ಇದೇ ಆಸ್ತಿಕತೆ ಎಂದು ಅವನ ಭಾವನೆ.
ಇಂದ್ರಿಯಗೋಚರವಾದ ವಿಷಯಗಳನ್ನೆಲ್ಲ ಸುವ್ಯವಸ್ಥಿತವಾಗಿ ಒಟ್ಟುಗೂಡಿಸಿ ಅವನ್ನು ಅರ್ಥಪುರ್ಣವಾಗಿ ವಿವರಿಸುವುದೇ ವಿಜ್ಞಾನದ ಗುರಿ. ಇದನ್ನು ಸಾಧಿಸಲು ವಿಜ್ಞಾನ ಅನುಸರಿಸುವ ವಿಧಾನ ನಮಗೆ ಜೀವನದ ಪರಮಾಕಾಂಕ್ಷೆಗಳ ಅರಿವನ್ನು ಕೊಡಲು ಅಶಕ್ಯ. ಈ ಅರಿವನ್ನು ಒದಗಿಸುವ ಅನುಭವಮೂಲವೇ ಬೇರೆ ಎಂಬುದು ಐನ್ಸ್ಟೈನನ ಅಭಿಪ್ರಾಯ. ಈ ದೃಷ್ಟಿಯಿಂದ ಅವನು ವಿಜ್ಞಾನ ಮತ್ತು ಆಸ್ತಿಕತೆಗಳ ಸಂಬಂಧವನ್ನು ವಿವೇಚಿಸಿ ಅವುಗಳ ನಡುವೆ ಯಾವ ವಿಧವಾದ ತಿಕ್ಕಾಟಕ್ಕೂ ಆಸ್ಪದವಿಲ್ಲ; ಅವೆರಡೂ ಪರಸ್ಪರ ಪುರಕ; ಎರಡನ್ನೂ ಸಂಗತಗೊಳಿಸಿ ಸಮಗ್ರಜೀವನ ದರ್ಶನವನ್ನು ರೂಪಿಸುವುದು ಸಾಧ್ಯ ಮತ್ತು ಅತ್ಯಗತ್ಯ ಎಂದು ತನ್ನ ಹಲವಾರು ಲೇಖನಗಳಲ್ಲಿ ಬರೆದಿದ್ದಾನೆ.
ಐನ್ಸ್ಟೈನ್ ತನ್ನ ಅನುಭವ, ಚಿಂತನೆ ಮತ್ತು ಅನ್ವೇಷಣೆಗಳ ಬಗ್ಗೆ ಮಾತನಾಡುತ್ತ ತನ್ನ ಇಡೀ ಜೀವನಕ್ಕೆ ಸ್ಫೂರ್ತಿಯನ್ನು ಒದಗಿಸಿ ಮಾರ್ಗದರ್ಶನ ನೀಡಿದ ಉದಾತ್ತ ಮೌಲ್ಯಗಳ ಬಗ್ಗೆ ಈ ರೀತಿ ನುಡಿದಿದ್ದಾನೆ; “ನನ್ನ ಜೀವನದ ಹಾದಿಯನ್ನು ಬೆಳಗಿಸಿ ಹಸನ್ಮುಖಿಯಾಗಿ ಮತ್ತೆ ಮತ್ತೆ ಜೀವನವನ್ನು ಎದುರಿಸಲು ಧೈರ್ಯ ತಂದುಕೊಟ್ಟ ಪರಮ ಮೌಲ್ಯಗಳೆಂದರೆ ದಯೆ, ಸೌಂದರ್ಯ ಮತ್ತು ಸತ್ಯ’
ಪ್ರಶಸ್ತಿ
ಬದಲಾಯಿಸಿ೪೨ ವರ್ಷವಯಸ್ಸಿನ ಐನ್‍ಸ್ಟೈನ್ ರವರಿಗೆ ಫೊಟೊ ಎಲೆಕ್ಟ್ರಿಕಲ್ ಎಫೆಕ್ಟ್ (ದ್ಯುತಿವಿದ್ಯುತ್ ಪರಿಣಾಮ) ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದಕ್ಕೆ ನೊಬೆಲ್ ಪ್ರಶಸ್ತಿ ದೊರೆಯಿತು. ಅವರ ಪ್ರಶಸ್ತಿಯ ಬಹುಪಾಲು ನಗದುಹಣವೆಲ್ಲಾ ಅವರ ಪತ್ನಿಯ ವಿವಾಹವಿಚ್ಛೇದನದ ಪರಿಹಾರಧನ ಕೊಡುವುದರಲ್ಲೇ ವ್ಯಯವಾಯಿತು. ಆಗ ಜರ್ಮನಿಯ ಯಹೂದ್ಯರಿಗೆ ಹಿಟ್ಲರ್ ನ ಕಿರುಕುಳ ಶುರುವಾಗಿತ್ತು. ೧೯೨೧ ರಲ್ಲಿ ಪ್ರಥಮವಾಗಿ ನ್ಯೂಯಾರ್ಕ್ ಗೆ ಭೇಟಿಕೊಟ್ಟರು. ಮನೆ ಖರೀದಿಸಿದರು. ೧೯೪೦ ರಲ್ಲಿ ಅಮೆರಿಕದ ಪೌರತ್ವ ಪಡೆದ ಅವರು ತಮ್ಮ ಜೀವನದ ಶೇಷಭಾಗವನ್ನು ಅಲ್ಲೇ ಕಳೆದರು. ೨ನೇ ವಿಶ್ವ ಸಮರದ ಸಮಯದಲ್ಲಿ ಅಣುಬಾಂಬ್, ನ ಹಾನಿಕರ ಪರಿಣಾಮಗಳನ್ನು ಜನರಿಗೆಲ್ಲಾ ಪ್ರಸಾರ ಮಾಡುತ್ತಿದ್ದರು. ಆ ಸಮಯದಲ್ಲಾಗಲೇ ಹಿಟ್ಲರ್ ಆಡಳಿತದಲ್ಲಿದ್ದ ಜರ್ಮನಿಯು ಅಣ್ವಸ್ತ್ರಕ್ಕಾಗಿ ಪೈಪೋಟಿ ನೆಡೆಸುತಿತ್ತು. ೧೯೩೯ರಲ್ಲಿ ಲಿಯೋ ಸಿಲ್ಲಾರ್ಡ್ ಎಂಬ ವಿಜ್ಞಾನಿಯನ್ನು ಒಳಗೊಂಡಿದ್ದ ಹಂಗೇರಿಯ ವಿಜ್ಞಾನಿಗಳ ಗುಂಪೊಂದು ನಾಜಿಗಳ ಈ ಕೃತ್ಯದ ಬಗ್ಗೆ ಅಮೆರಿಕವನ್ನು ಎಚ್ಚರಿಸಲು ಯತ್ನಿಸುತ್ತಿದ್ದರು. ಪರಮಾಣು ವಿದಳನ ಕ್ರಿಯೆಯ ಹಿಂದಿದ್ದ ಸಿದ್ಧಾಂತವನ್ನು ತಿಳಿದಿದ್ದ ಲಿಯೋ ಸಿಲ್ಲಾರ್ಡ್ ಹಾಗೂ ಯೂಜಿನ್ ವಿಜಿನರ್ ಎಂಬ ವಿಜ್ಞಾನಿಗಳು ಈ ಬಗ್ಗೆ ಐನ್‍ಸ್ಟೈನ್ ರನ್ನು ಜುಲೈ ೯, ೧೯೩೯ರಂದು ಭೇಟಿಮಾಡಿದರು. ಐನ್‍ಸ್ಟೈನ್ ರವರು ಸಿಲ್ಲಾರ್ಡ್ ಜೊತೆ ಸೇರಿ ಅಣ್ವಸ್ತ್ರದ ಸಾಧ್ಯತೆಯನ್ನು ವಿವರಿಸಿ ಆಗಿನ ಅಮೆರಿಕದ ಅಧ್ಯಕ್ಷರಾಗಿದ್ದ ರೂಸ್ವೆಲ್ಟ್ ಅವರಿಗೆ ಪತ್ರ ಬರೆದರು. ಅಮೆರಿಕದ ವಿಜ್ಞಾನಿಗಳು ಅಣುಬಾಂಬನ್ನು ತಯಾರಿಸಿ ಜಪಾನ್ ನ ನಾಗಸಾಕಿ ಮತ್ತು ಹಿರೋಷಿಮಾ ನಗರಗಳ ಮೇಲೆ ಎಸೆದದ್ದರಿಂದ, ಸಹಸ್ರಾರು ಜನರ ಪ್ರಾಣವನ್ನು ಆಹುತಿಯನ್ನಾಗಿ ತೆಗೆದುಕೊಂಡಿತ್ತು. ಈ ಘಟನೆಯಿಂದ ಘಾಸಿಗೊಂಡಿದ್ದ ಐನ್‍ಸ್ಟೈನ್ ರು ಎಲ್ಲಾ ವಿಜ್ಞಾನಿಗಳಿಗೂ ಕರೆಕೊಟ್ಟು ಅಣುವಿಜ್ಞಾನವನ್ನು, ಜಾಗತಿಕ ಶಾಂತಿ ಹಾಗೂ ಮಾನವನ ಒಳಿತಿಗಾಗಿಯೇ ಉಪಯೋಗಿಸಲು ಭಿನ್ನವಿಸಿಕೊಂಡರು.
ಶತಮಾನದ ಮಹಾವಿಜ್ಞಾನಿ
ಬದಲಾಯಿಸಿಸನ್. ೨೦೦೦ ದಲ್ಲಿ, ಪ್ರಖ್ಯಾತ "ಟೈಮ್ಸ್ ಪತ್ರಿಕೆ"ಯ ೨೦ ನೆಯ ಶತಮಾನದ ಅತ್ಯಂತ ಪ್ರಖ್ಯಾತ ವ್ಯಕ್ತಿಯನ್ನು ನಿರ್ಧರಿಸುವಲ್ಲಿ ನಡೆಸಿದ ವಿಶ್ವದಾದ್ಯಂತದ ಸಮೀಕ್ಷೆಯಲ್ಲಿ 'ಐನ್‍ಸ್ಟೈನ್ ' ರೇ ಪ್ರಚಂಡ ಬಹುಮತದಿಂದ ಚುನಾಯಿತರಾದರು. ಐನ್‍ಸ್ಟೈನ್ , ತಮ್ಮ ನಾಲ್ಕೂವರೆ ದಶಕಗಳ ಸೇವೆ, ವೃತ್ತಿಗೌರವಗಳಿಂದ ಮನುಕುಲದ ಒಳಿತಿಗಾಗಿ ಮಾಡಿದ ಸೇವೆಗಳನ್ನು ಜನಸ್ತೋಮ ಸ್ಮರಿಸಿತು. ಅದಕ್ಕಾಗಿಯೇ ಅವರಿಗೆ ಅಗ್ರಸ್ಥಾನ ! ಐನ್‍ಸ್ಟೈನ್ ರವರಿಗೆ ದೊರೆತ ಗೌರವ ಪ್ರಶಸ್ತಿಗಳು, ಅಸಂಖ್ಯ.
ಉಲ್ಲೇಖಗಳು
ಬದಲಾಯಿಸಿಬಾಹ್ಯ ಸಂಪರ್ಕಗಳು
ಬದಲಾಯಿಸಿFind more about Albert Einstein at Wikipedia's sister projects | |
Media from Commons | |
Quotations from Wikiquote | |
Source texts from Wikisource |
- ಅಲ್ಬರ್ಟ್ ಐನ್ಸ್ಟೈನ್ at Curlie
- Works by Albert Einstein at Project Gutenberg
- Works by or about ಅಲ್ಬರ್ಟ್ ಐನ್ಸ್ಟೈನ್ at Internet Archive
- Works by ಅಲ್ಬರ್ಟ್ ಐನ್ಸ್ಟೈನ್ at LibriVox (public domain audiobooks)
- Einstein's Personal Correspondence: Religion, Politics, The Holocaust, and Philosophy Shapell Manuscript Foundation
- Federal Bureau of Investigation file on Albert Einstein
- Einstein and his love of music, Physics World
- ಅಲ್ಬರ್ಟ್ ಐನ್ಸ್ಟೈನ್ on Nobelprize.org including the Nobel Lecture 11 July 1923 Fundamental ideas and problems of the theory of relativity
- Albert Einstein Archives Online (80,000+ Documents) Archived 11 August 2011 ವೇಬ್ಯಾಕ್ ಮೆಷಿನ್ ನಲ್ಲಿ. (MSNBC, 19 March 2012)
- Einstein's declaration of intention for American citizenship on the World Digital Library
- Albert Einstein Collection at Brandeis University
- The Collected Papers of Albert Einstein "Digital Einstein" at Princeton University
- Newspaper clippings about ಅಲ್ಬರ್ಟ್ ಐನ್ಸ್ಟೈನ್ in the 20th Century Press Archives of the ZBW
- Home page of Albert Einstein at The Institute for Advanced Study
- Albert – The Digital Repository of the IAS, which contains many digitized original documents and photographs
- ಅಲ್ಬರ್ಟ್ ಐನ್ಸ್ಟೈನ್ ಐ ಎಮ್ ಡಿ ಬಿನಲ್ಲಿ