ಎನ್. ರಂಗನಾಥ ಶರ್ಮಾ

(ಎನ್. ರಂಗನಾಥಶರ್ಮ ಇಂದ ಪುನರ್ನಿರ್ದೇಶಿತ)

ಮಹಾಮಹೋಪಾಧ್ಯಾಯ ವಿದ್ವಾನ್ ಡಾ. ಎನ್. ರಂಗನಾಥ ಶರ್ಮಾ (ಜನನ:೧೯೧೬ , ಮರಣ: ಜನವರಿ ೨೫,೨೦೧೪) ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪ್ರಕಾಂಡ ಪಂಡಿತರಾಗಿದ್ದರು. ಈ ಎರಡು ಭಾಷೆಗಳ ವ್ಯಾಕರಣದ ವಿಚಾರದಲ್ಲಿ ಅವರಿಗೆ ಅಪ್ರತಿಮ ವೈದಗ್ಧ್ಯವಿತ್ತು. ಇವರು ಹಲವಾರು ವಿದ್ವತ್‍ಪೂರ್ಣ ಗ್ರಂಥಗಳನ್ನು ರಚಿಸಿದ್ದಾರೆ ಹಾಗೂ ಹಲವಾರು ಕೃತಿಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.

ಎನ್. ರಂಗನಾಥ ಶರ್ಮಾ
ಎನ್. ರಂಗನಾಥ ಶರ್ಮಾ ೨೦೧೨ರಲ್ಲಿ
ಜನನ೭-೧-೧೯೧೬
ನಡಹಳ್ಳಿ
ಮರಣ೨೫-೧-೨೦೧೪
ಮೈಸೂರು
ವೃತ್ತಿಭಾಷಾತಜ್ಞ, ಬರಹಗಾರ, ಸಂಶೋಧಕ, ಶಿಕ್ಷಕ
ರಾಷ್ಟ್ರೀಯತೆಭಾರತೀಯ
ಕಾಲ20ನೇ ಶತಮಾನ
ವಿಷಯಕನ್ನಡ ಸಾಹಿತ್ಯ
ಪ್ರಮುಖ ಪ್ರಶಸ್ತಿ(ಗಳು)ರಾಜ್ಯೋತ್ಸವ ಪ್ರಶಸ್ತಿ[]
ಬಾಳ ಸಂಗಾತಿಕಮಲಾಕ್ಷಮ್ಮ

ಪ್ರಭಾವಗಳು

www.vidwannrs.in

ವಿದ್ವಾನ್ ರಂಗನಾಥ ಶರ್ಮಾ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ ತಿಮ್ಮಪ್ಪ ಮತ್ತು ಜಾನಕಮ್ಮನವರ ಮಗನಾಗಿ ಜನವರಿ ೭, ೧೯೧೬ರಂದು ಹುಟ್ಟಿದರು.[][] ರಂಗನಾಥಶರ್ಮರ ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿಯಲ್ಲಿಯೂ, ಮಾಧ್ಯಮಿಕ ವಿದ್ಯಾಭ್ಯಾಸವು ಸೊರಬದಲ್ಲಿಯೂ ನೆರವೇರಿತು. ತಂದೆ ಹಾಗೂ ಚಿಕ್ಕಪ್ಪನವರು ಸಂಸ್ಕೃತದಲ್ಲಿ ಮಹಾನ್ ಪಂಡಿತರೆನಿಸಿದ್ದು ರಂಗನಾಥಶರ್ಮರ ಮೇಲೆ ಅಗಾಧ ಪ್ರಭಾವ ಬೀರಿತ್ತು. ಕಿತ್ತು ತಿನ್ನುವ ಬಡತನದ ಮಧ್ಯೆಯೂ ಬಾಲಕ ರಂಗನಾಥಶರ್ಮರಲ್ಲಿ ಓದಿನ ಹಂಬಲ ಮನೆಮಾಡಿತ್ತು. ಅವರಿಗೆ ಇಂಗ್ಲಿಷ್ ಕಲಿಯುವುದಕ್ಕೆ ತುಂಬಾ ಆಸೆ ಇತ್ತು. ಆದರೆ ಹೈಸ್ಕೂಲು ಸೇರಲು ಅವಕಾಶ ಇದ್ದುದು ಸಮೀಪವೆಂದರೆ ಶಿವಮೊಗ್ಗದಲ್ಲಿ ಮಾತ್ರ. ಜೊತೆಗೆ ಊಟ-ವಸತಿಯ ಯೋಚನೆಯೂ ದೊಡ್ಡದಾಗಿತ್ತು. ಹೀಗಾಗಿ, ಕನ್ನಡ-ಸಂಸ್ಕೃತಗಳನ್ನು ಅಧ್ಯಯನ ಮಾಡಿದರೆ ಉಪಾಧ್ಯಾಯರ ವೃತ್ತಿಯಾದರೂ ದೊರೆತು ಹೊಟ್ಟೆ ಹೊರೆದೀತೆಂಬ ಯೋಚನೆಯಲ್ಲಿ ಅಗಡಿ ''‘ಆನಂದವನ ಆಶ್ರಮ’''ವನ್ನು ಸೇರಿದರು. ಅಲ್ಲಿ ಸಂಸ್ಕೃತ ಕಲಿಯುವವರಿಗೆ ಉಚಿತ ಊಟ-ವಸತಿ ಇದ್ದದ್ದು ಅವರಿಗೆ ಆಕರ್ಷಕವಾದ ಆಹ್ವಾನವಾಗೇನೋ ಕಂಡುಬಂದಿತ್ತು. ಆದರೆ ಬಯಲು ಸೀಮೆಯು ಹುಡುಗನಿಗೆ ಅದು ಒಗ್ಗದ ಹವಾಮಾನವಾಗಿತ್ತು. ಹೀಗಾಗಿ ಮರಳಿ ಊರಿಗೆ ಬಂದು ಕೆಳದಿ ಸಂಸ್ಕೃತ ಪಾಠಶಾಲೆಗೆ ಸೇರಿದರು. ಅಲ್ಲಿ ಕಾವ್ಯಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂದಿನ ದಾರಿ ಹಿಡಿದದ್ದು ಬೆಂಗಳೂರಿನ ಜಯಚಾಮರಾಜೇಂದ್ರ ಕಾಲೇಜಿನತ್ತ. ಅಲ್ಲಿ ಹನ್ನೊಂದು ವರ್ಷ ಸತತ ಸಂಸ್ಕೃತ ಕಲಿಕೆ ನಡೆಸಿ ವ್ಯಾಕರಣ, ಅಲಂಕಾರ ಶಾಸ್ತ್ರದಲ್ಲಿ ಪಾಂಡಿತ್ಯ ಗಳಿಸಿದರು. ಜೊತೆಗೆ ಖಾಸಗಿಯಾಗಿ ಮದರಾಸಿನ ವಿಶ್ವವಿದ್ಯಾಲಯದ ಕನ್ನಡ ವಿದ್ವತ್ ಮತ್ತು ಮೈಸೂರಿನ ಕನ್ನಡ ಪಂಡಿತ ಪರೀಕ್ಷೆ ಪದವಿಗಳನ್ನು ತಮ್ಮದಾಗಿಸಿಕೊಂಡರು. ವಾರಾನ್ನ, ಭಿಕ್ಷಾನ್ನ, ಸ್ವಯಂ ಪಾಕಗಳ ಮೂಲಕ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಅವರು ಓದಿನಲ್ಲಿ ಮಾತ್ರ ಸದಾ ಮುಂದೆ ಇದ್ದರು. ಊಟಕ್ಕೆ ತಟ್ಟೆ ಇಲ್ಲದೆ, ಎಲೆಗೆ ಕಾಸಿಲ್ಲದೆ ನೆಲದ ಮೇಲೆ ಊಟ ಮಾಡಿದ ದಿನಗಳೂ ಇತ್ತು. ೧೯೪೧ರಲ್ಲಿ ಸಾಗರ ತಾಲೂಕು ಮಂಚಾಲೆಯ ಕಮಲಾಕ್ಷಮ್ಮನವರನ್ನು ವಿವಾಹವಾದರು. ರಂಗನಾಥ ಶರ್ಮ-ಕಮಲಾಕ್ಷಮ್ಮ ದಂಪತಿಗೆ ಇಬ್ಬರು ಗಂಡು ಮಕ್ಕಳೂ ಇಬ್ಬರು ಹೆಣ್ಣುಮಕ್ಕಳೂ ಇದ್ದಾರೆ. ಕಮಲಾಕ್ಷಮ್ಮನವರು ೧೯೭೩ರಲ್ಲಿ ಅನಾರೋಗ್ಯದಿಂದ ತೀರಿಕೊಂಡರು. ರಂಗನಾಥ ಶರ್ಮಾ ಡಿವಿಜಿಯವರ ಆಪ್ತ ಒಡನಾಡಿಯೂ ಆಗಿದ್ದರು.[][] ಇಂಥದೊಂದು ಒಡನಾಟದ ಉತ್ತುಂಗವನ್ನು ಮರುಳ ಮುನಿಯನ ಕಗ್ಗದಲ್ಲಿ ಕಾಣಬಹುದು. ಡಿವಿಜಿ ಕಾಲಕಾಲಕ್ಕೆ ಬರೆದಿರುವ ಕವಿತೆಗಳನ್ನು ಸಂಗ್ರಹಿಸಿ ಮರುಳ ಮುನಿಯನ ಕಗ್ಗದಲ್ಲಿ ಒಟ್ಟುಗೂಡಿಸಲಾಗಿದೆ. ಗೋಖಲೆ ಸಾರ್ವಜನಿಕ ಸಂಸ್ಥೆಯೊಂದಿಗೆ ಡಿವಿಜಿ ಅವರಿಗೆ ಸುದೀರ್ಘ ಕಾಲದ ಒಡನಾಟವಿದ್ದುದರಿಂದ ಅವರ ಸೊಸೆ ವಸಂತಮ್ಮ (ಬಿಜಿಎಲ್ ಸ್ವಾಮಿಯವರ ಧರ್ಮಪತ್ನಿ) ಕವಿತೆಗಳನ್ನು ಪ್ರಕಟಿಸುವ ಹಕ್ಕನ್ನು ಸಂಸ್ಥೆಗೆ ಬಿಟ್ಟುಕೊಟ್ಟರು. ಸಂಸ್ಥೆ ಇದಕ್ಕಾಗಿ ಸಮಿತಿಯೊಂದನ್ನು ರಚಿಸಿ ನಿಟ್ಟೂರು ಶ್ರೀನಿವಾಸ ರಾಯರನ್ನು ಅದರ ಅಧ್ಯಕ್ಷರನ್ನಾಗಿ ನೇಮಿಸಿತು. ಆ ಸಮಿತಿ ಡಿವಿಜಿಯವರ ಸಮಾನಮನಸ್ಕರೂ ಆಪ್ತರೂ ಆದಂಥ ಎನ್. ರಂಗನಾಥ ಶರ್ಮಾರವರಿಗೆ ಕವಿತೆಗಳ ಕರಡು ತಿದ್ದಲು ಅನುವು ಮಾಡಿಕೊಟ್ಟಿತು. ಎನ್. ರಂಗನಾಥ ಶರ್ಮಾರವರು ಕರಡು ತಿದ್ದುವ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಕೆಲವೆಡೆ ಅಕ್ಷರಗಳು ಸ್ಪಷ್ಟವಿರಲಿಲ್ಲ, ಇನ್ನು ಕೆಲವೆಡೆ ಪದಗಳು ಬಿಟ್ಟುಹೋಗಿದ್ದುವು. ಈ ಎಲ್ಲಾ ಲೋಪಗಳನ್ನು ಛಂದಸ್ಸಿಗೂ ಅರ್ಥಕ್ಕೂ ಚ್ಯುತಿಯಾಗದಂತೆ ರಂಗನಾಥ ಶರ್ಮಾರವರು ನಿವಾರಿಸಿದರು. ರಂಗನಾಥ ಶರ್ಮಾರವರು ಸೇರಿಸಿದ ಪದಗಳನ್ನೂ ಸಾಲುಗಳನ್ನೂ ಒಳಗೊಂಡ ಕವಿತೆಗಳನ್ನು ಅನುಬಂಧವಾಗಿ ಸೇರಿಸಿದ್ದಾರೆ. ಈ ವಿವರಗಳನ್ನು ಮರುಳ ಮುನಿಯನ ಕಗ್ಗದ ಮುನ್ನುಡಿಯಲ್ಲಿ ಓದಬಹುದು.[][][] ಅಲ್ಲದೆ ಡಿ.ವಿ.ಜಿಯವರು ತಮ್ಮ ಕೃತಿಗಳಿಗಾಗಿ ಶರ್ಮರ ಸಲಹೆ ಪಡೆಯುತ್ತಿದ್ದರು. ಶರ್ಮರು ಡಿವಿಜಿಗೆ ಸರಿಸಾಟಿಯಾದ ವ್ಯಕ್ತಿಯಿಲ್ಲ ಎನ್ನುವಾಗ ಒಳ್ಳೆಯ ಕನ್ನಡ ಏನೆಂಬುದನ್ನು ಶರ್ಮರ ಕನ್ನಡ ತೋರಿಸುತ್ತದೆ ಎಂಬುದು ಡಿ.ವಿ.ಜಿ. ಮತ್ತು ವಿದ್ವಾಂಸರ ಅಭಿಪ್ರಾಯ.

ವಿದ್ಯಾಭ್ಯಾಸ

ಬದಲಾಯಿಸಿ

ರಂಗನಾಥ ಶರ್ಮರು ನಡಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದರು. ಕೆಳದಿ ಸಂಸ್ಕೃತ ಪಾಠಶಾಲೆಯಲ್ಲಿ ಮೂರು ವರ್ಷ ಕಲಿತು ಪ್ರಥಮ ಹಾಗೂ ಕಾವ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಒಬ್ಬರೇ ಬೆಂಗಳೂರಿಗೆ ಬಂದು ವಾರಾನ್ನ ಮಾಡಿಕೊಂಡು, ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕೃತ ಮಹಾ ಪಾಠ ಶಾಲೆಯಲ್ಲಿ ಸಾಹಿತ್ಯ ಪರೀಕ್ಷೆ ಮುಗಿಸಿದರು. ಅಲ್ಲಿಯೇ ಮುಂದಿನ ಶಾಸ್ತ್ರಾಭ್ಯಾಸ ಮಾಡಿ ವ್ಯಾಕರಣ, ಅಲಂಕಾರ, ವೇದಾಂತ ಶಾಸ್ತ್ರಗಳಲ್ಲಿ ವಿದ್ವತ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಮುಂದಕ್ಕೆ ಸ್ವಂತ ಪ್ರಯತ್ನದಿಂದ ಕನ್ನಡ ವಿದ್ವಾನ್ ಪರೀಕ್ಷೆಯಲ್ಲಿಯೂ ಉತ್ತೀರ್ಣರಾದರು.

ಅಧ್ಯಾಪನ

ಬದಲಾಯಿಸಿ

ರಂಗನಾಥ ಶರ್ಮರು ಸ್ವಲ್ಪ ಕಾಲ ಪ್ರೌಢಶಾಲಾ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ, ಬೇಲೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಾಪಕರಾಗಿ ಉದ್ಯೋಗ ಕೈಗೊಂಡರು. ನಂತರ ತಾವು ಕಲಿತ ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕೃತ ಮಹಾವಿದ್ಯಾಲಯದಲ್ಲಿ ೧೯೪೮ರಲ್ಲಿ ವ್ಯಾಕರಣ ಅಧ್ಯಾಪಕರಾಗಿ ನೇಮಕಗೊಂಡರು. ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿ ೧೯೭೬ ರಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾದರು.[][][][೧೦]

ಕೃತಿಗಳು

ಬದಲಾಯಿಸಿ

ಸಂಸ್ಕೃತ ಕೃತಿಗಳು []

ಬದಲಾಯಿಸಿ
  • ಬಾಹುಬಲಿ ವಿಜಯಂ (ಐತಿಹಾಸಿಕ ನಾಟಕ, ೧೯೮೦
  • ಏಕಚಕ್ರಂ (ಪೌರಾಣಿಕ ನಾಟಕ, ೧೯೯೦)
  • ಗುರುಪಾರಮಿತ್ರ ಚರಿತಂ (೧೯೬೯)
  • ಗೊಮ್ಮಟೇಶ್ವರ ಸುಪ್ರಭಾತಂ (೧೯೮೧)
  • ಗೊಮ್ಮಟೇಶ ಪಂಚಕಂ ಬಗ್ಗೆ ಮಾಹಿತಿ ಕನ್ನಡ

ಕನ್ನಡ ಕೃತಿಗಳು []

ಬದಲಾಯಿಸಿ
  • ಭಾಷಾಂತರ ಪಥ (೧೯೪೯)
  • ಲೌಕಿಕ ನ್ಯಾಯಗಳು (೧೯೫೯)
  • ಹೊಸಗನ್ನಡ ವ್ಯಾಕರಣ
  • ವಾಲ್ಮೀಕಿ ಮುನಿಗಳ ಹಾಸ್ಯಪ್ರವೃತ್ತಿ
  • ವರದಹಳ್ಳಿ ಶ್ರೀಧರ ಸ್ವಾಮಿಗಳು
  • ಶ್ರೀ ಕಾಮಚಂದ್ರ (೧೯೮೨) - ಭಾಸ, ಕಾಳಿದಾಸ ಮತ್ತು ಭವಭೂತಿ ಕವಿಗಳ ಪ್ರಭೆಯಲ್ಲಿ
  • ಸೂಕ್ತಿವ್ಯಾಪ್ತಿ (೧೯೯೧)
  • ಉಪನಿಷತ್ತಿನ ಕಥೆಗಳು (೧೯೫೯)

ಭಾಷಾಂತರ ಕೃತಿಗಳು

ಬದಲಾಯಿಸಿ
  • ವಾಲ್ಮೀಕಿ ರಾಮಾಯಣ
  • ಅಮರಕೋಶ (೧೯೭೦)
  • ವಿದುರನೀತಿ (೧೯೭೩)
  • ಶ್ರೀಮದ್ಭಾಗವತದ ಹತ್ತನೆಯ ಸ್ಕಂದ (೧೯೭೮)
  • ಶ್ರೀವಿಷ್ಣುಪುರಾಣ (೧೯೫೯)
  • ವ್ಯಾಸತಾತ್ಪರ್ಯನಿರ್ಣಯ (೧೯೮೬)
  • ತೋಟಕಾಚಾರ್ಯರ ಶ್ರುತಿಸಾರ ಸಮುದ್ಧರಣ
  • ವಾಕ್ಯಪದೀಯದ ಬ್ರಹ್ಮಕಾಂಡ
  • ವಿದ್ಯಾರಣ್ಯರ ಪಂಚದಶಿ

ಸಂಪಾದಿತ ಕೃತಿಗಳು

ಬದಲಾಯಿಸಿ
  • ಭಗವಾನ್ ನಾಮಾವಳಿ
  • ಸುಭಾಷಿತ ಮಂಜರಿ
  • ಶ್ರೀಚಾಮರಾಜೋಕ್ತಿವಿಲಾಸ ರಾಮಾಯಣ
ಆಶು ಕವನ
ಚಪ್ಪಲಿಯೂ ಇರಲಿಲ್ಲ ,ರೊಕ್ಕ ಮೊದಲೇ ಇಲ್ಲ;

ಇಪ್ಪತ್ತುಮನೆಗಳಲಿ ಭಿಕ್ಷೆಯನುಬೇಡಿ,

ಸೊಪ್ಪು ಸಿಪ್ಪೆಗಳನು ಚಪ್ಪರಿಸಿ ತಿಂದೆಯಲೊ;

ಮುಪ್ಪಿನಲಿ ತೆಪ್ಪಗಿರು ಬೊಪ್ಪ ಮೇಲಿಹನು -ರಂಗನಾಥ ಶರ್ಮಾ

(ತಮ್ಮ ವಿದ್ಯಾಭ್ಯಾಸದ ಕಷ್ಟವನ್ನು ನೆನೆದು,ಅವರೇ ರಚಿಸಿದ ಚುಟುಕ) ರವೀಂದ್ರ ಭಟ್ಟ, ಪ್ರಜಾವಾಣಿ, ೨೬-೧-೨೦೧೪)

ರಂಗನಾಥ ಶರ್ಮರು ಕನ್ನಡದಲ್ಲಿ ೨೨, ಸಂಸ್ಕೃತದಲ್ಲಿ ೧೧ ಕೃತಿಗಳನ್ನು ರಚಿಸಿದ್ದಾರೆ. ೧೭ಕ್ಕೂ ಹೆಚ್ಚು ಕೃತಿಗಳನ್ನು ಅನುವಾದಿಸಿದ್ದಾರೆ. ಶ್ರೀಮದ್ ವಾಲ್ಮೀಕಿ ರಾಮಾಯಣ, ವಿಷ್ಣು ಪುರಾಣ, ಭಾಗವತಗಳನ್ನು ಆಧುನಿಕ ಕನ್ನಡದಲ್ಲಿ ಅನುವಾದಿಸಿದ್ದಾರೆ. ಅನೇಕ ಹಳಗನ್ನಡ ಕಾವ್ಯಗಳನ್ನು ಹೊಸಗನ್ನಡದಲ್ಲಿ ನೀಡಿದ್ದಾರೆ. ಸಂದರ್ಭಸೂಕ್ತಿ, ಸೂಕ್ತಿ-ವ್ಯಾಪ್ತಿ, ಅಮರಕೋಶ, ಭಗವದ್ಗೀತೆ, ವ್ಯಾಸತಾತ್ಪರ್ಯ ನಿರ್ಣಯ ಇವುಗಳ ಮೂಲ ಅನುವಾದಗಳು, ಸಂಸ್ಕೃತಂ ನಾಮ ದೈವೀವಾಕ್ , ಇತ್ಯಾದಿಗಳು ಇವರ ಸಂಸ್ಕೃತ ಕೃತಿಗಳಲ್ಲಿ ಪ್ರಸಿದ್ಧವಾದುವು. ರಂಗನಾಥ ಶರ್ಮರು ಶ್ರೀಮದ್ ಮಾಧವೀಯ ಶಂಕರ ದಿಗ್ವಿಜಯವನ್ನು ಸಂಗ್ರಹಿಸಿ ಶ್ರೀ ಶಂಕರಚರಿತಾಮೃತಮ್ ಎಂಬ ಶಂಕರರ ಜೀವನಚರಿತ್ರೆಯನ್ನು ಸಂಸ್ಕೃತದಲ್ಲಿ ಅನುಷ್ಟುಪ್ ಛಂದಸ್ಸಿನಲ್ಲಿ ಬರೆದು ಕನ್ನಡ ಅನುವಾದವನ್ನೂ ನೀಡಿದ್ದಾರೆ. ಡಿವಿಜಿಯವರ ಮುನ್ನುಡಿಯೊಂದಿಗೆ ಪ್ರಕಟಗೊಂಡ ರಂಗನಾಥ ಶರ್ಮರ ವಾಲ್ಮೀಕಿ ರಾಮಾಯಣ ಎಂಬ ಮೂಲ ರಾಮಾಯಣದ ಅನುವಾದ ಕೃತಿ ಅತ್ಯಂತ ಪ್ರಸಿದ್ಧವಾದುದು.[] ಅವರು ಮೂರು ಮೂರು ಕಾಂಡಗಳನ್ನೊಳಗೊಂಡಂತೆ ವಿಷ್ಣುಪುರಾಣ, ಶ್ರೀಮದ್ಭಾಗವತ, ಅಮರಕೋಶ ಮುಂತಾದುವುಗಳನ್ನು ಆಧರಿಸಿದ ಕೃತಿಗಳನ್ನೂ ರಚಿಸಿದರು.[][] ಶ್ರೀ ಶಂಕರ ಸೂಕ್ತಿಮುಕ್ತಾವಳಿ[] ಮತ್ತು ಭರ್ತೃಹರಿಯ ಕಾವ್ಯವನ್ನು ಆಧರಿಸಿದ ಅವರ ಗ್ರಂಥವೂ ಪ್ರಸಿದ್ಧವಾಗಿದೆ.[] ರಂಗನಾಥ ಶರ್ಮರು ಡಿವಿಜಿಯವರ ಮರಣಾನಂತರ ಮಂಕುತಿಮ್ಮನ ಕಗ್ಗದ ಮುಂದುವರಿದ ಭಾಗವಾದ ಮರುಳ ಮುನಿಯನ ಕಗ್ಗವನ್ನು ಸಂಪಾದಿಸಿ ಪ್ರಕಟಿಸಿದರು[] ರಂಗನಾಥ ಶರ್ಮರು ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿದರು. ಅವರಿಗೆ ಸಂಸ್ಕೃತ ಅಧ್ಯಾಪನಕ್ಕಾಗಿ ರಾಷ್ಟ್ರಪ್ರಶಸ್ತಿಯೂ ರಾಜ್ಯೋತ್ಸವ ಪ್ರಶಸ್ತಿಯೂ ದೊರೆತಿದೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಇತ್ತು ಗೌರವಿಸಿತು.[] ಲೌಕಿಕ ನ್ಯಾಯಗಳು ಎಂಬ ಕೃತಿಯಲ್ಲಿ ಶರ್ಮರು ಕನ್ನಡದಲ್ಲಿರುವ ೨೧೯ ನೀತಿಸೂತ್ರಗಳನ್ನು ವಿವರಿಸಿದ್ದಾರೆ.[೧೧] ಸಂಸ್ಕೃತ ಕೃತಿಗಳಲ್ಲಿ ಪ್ರಮುಖವಾದುವು ಬಾಹುಬಲಿ ವಿಜಯಂ ಎಂಬ ಐತಿಹಾಸಿಕ ನಾಟಕ (೧೯೮೦) ಮತ್ತು ಮಹಾಭಾರತಆದಿಪರ್ವವನ್ನು ಆಧರಿಸಿದ ಏಕಚಕ್ರಂ ಎಂಬ ಪೌರಾಣಿಕ ನಾಟಕ (೧೯೯೦).[೧೦][೧೨] ರಂಗನಾಥ ಶರ್ಮರು ೮೦ಕ್ಕೂ ಮಿಕ್ಕಿ ಕೃತಿಗಳನ್ನು ರಚಿಸಿದರು,[] ಅವುಗಳಲ್ಲಿ ೪೫ಕ್ಕೂ ಹೆಚ್ಚು ಕೃತಿಗಳು ಕನ್ನಡದಲ್ಲಿದ್ದುವು ಮತ್ತು ೧೦ ಸಂಸ್ಕೃತದಲ್ಲಿದ್ದುವು.[] ಶರ್ಮರು ಬರೆದ ಹೊಸಗನ್ನಡ ವ್ಯಾಕರಣ ೨೦೧೦ರಲ್ಲಿ ಪ್ರಕಟಗೊಂಡಿತು.[೧೩]

ಹಿರಿಯ ವಯಸ್ಸಿನಲ್ಲೂ ಕ್ರಿಯಾಶೀಲ

ಬದಲಾಯಿಸಿ

ತಮ್ಮ ೯೮ ನೇ ವಯಸ್ಸಿನ ಕೊನೆಯ ದಿನಗಳವರೆವಿಗೂ ಅವರು ತಮ್ಮ ಚುರುಕುತನವನ್ನು ಉಳಿಸಿಕೊಂಡಿದ್ದರು. ಮಾರ್ಚ್ 24, ೨೧೦೩ರಂದು ಡಿ. ವಿ. ಜಿ ಅವರ ಆತ್ಮೀಯ ಒಡನಾಡಿಯಾಗಿದ್ದ ವಿದ್ವಾನ್ ರಂಗನಾಥಶರ್ಮರಿಗೆ, ಮೈಸೂರಿನಲ್ಲಿ ನಡೆದ ಡಿ. ವಿ. ಜಿ ಅವರ ೧೨೫ನೇ ಜನ್ಮದಿನದ ನೆನಪಿನ ಸಮಾರಂಭದಲ್ಲಿ ಡಿ. ವಿ. ಜಿ. ಪ್ರಶಸ್ತಿ ಗೌರವವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ, ವಿದ್ವಾನ್ ರಂಗನಾಥಶರ್ಮರು ಸುಮಾರು ಒಂದು ಘಂಟೆಯ ಕಾಲ ವಿದ್ವತ್ಪೂರ್ಣವೂ, ಉಲ್ಲಾಸಪೂರ್ಣವೂ ಆದ ಉಪನ್ಯಾಸವನ್ನು ನೀಡಿದ್ದು ಈ ಹಿರಿಯರ ಚೈತನ್ಯಪೂರ್ಣ ವ್ಯಕ್ತಿತ್ವಕ್ಕೆ ಮೆರುಗು ಇಟ್ಟಂತೆ ಇತ್ತು.

ಸಜ್ಜನಿಕೆ

ಬದಲಾಯಿಸಿ

ಒಮ್ಮೆ ಶತಾವಧಾನಿ ಗಣೇಶ್, ಪತ್ರಕರ್ತ ಸಂತೋಷಕುಮಾರ ಗುಲ್ವಾಡಿ ಹಾಗೂ ಸೂರ್ಯ ಪ್ರಕಾಶ ಪಂಡಿತರು ಶರ್ಮರ ಮನೆಗೆ ಹೋಗಿದ್ದರು. ಸಾಕಷ್ಟು ನೈವೇದ್ಯ ಸೇವಿಸಿ, ಮಾತನಾಡಿ ಹೊರಟಾಗ ಗೇಟಿನವರೆಗೂ ಶರ್ಮರು ಬಂದರು. ಆಗ ಅಲ್ಲಿದ್ದ ವಾಹನವನ್ನು ಗಮನಿಸಿ ಗುಲ್ವಾಡಿ ಅವರಿಗೆ ನೀವೇ ಡ್ರೈವ್ ಮಾಡಿಕೊಂಡು ಬಂದಿರಾ ಎಂದು ಪ್ರಶ್ನಿಸಿದರು. ಇಲ್ಲ ಡ್ರೈವರ್ ಇದ್ದಾನೆ ಎಂದು ಗುಲ್ವಾಡಿ ಉತ್ತರಿಸಿದಾಗ "ಛೇ ಎಂತಹ ಕೆಲಸವಾಯಿತು. ಇಷ್ಟು ಹೊತ್ತು ಹೊರಗೆ ಕಾದಿದ್ದ ಚಾಲಕನಿಗೆ ಏನೂ ಕೊಡಲಿಲ್ಲವಲ್ಲ" ಎಂದು ಪೇಚಾಡಿದ ಶರ್ಮರು ಯಾರು ಎಷ್ಟೇ ಸಮಜಾಯಿಷಿ ಹೇಳಿದರೂ ಕೇಳದೆ ಚಾಲಕನನ್ನು ಕರೆದು ಹಣ್ಣು ಹಂಪಲು ಕೊಟ್ಟು ತಣಿಸಿದರು. ಶರ್ಮರದ್ದು ಈಗಲೂ ಅಂತದ್ದೇ ಮಗುವಿನಂತ ಮನಸ್ಸು.

ವಿದ್ವಾನ್ ಡಾ. ಎನ್. ರಂಗನಾಥ ಶರ್ಮಾ ೨೦೧೪ರ ಜನವರಿ ೨೫ರಂದು ೯೮ನೆಯ ವಯಸ್ಸಿನಲ್ಲಿ ಮೈಸೂರಿನ ಕುವೆಂಪುನಗರದಲ್ಲಿರುವ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು.[೧೪]

ರಂಗನಾಥ ಶರ್ಮರು ನಮ್ಮ ದೇಶದ ಅಗ್ರಮಾನ್ಯ ಸಂಸ್ಕೃತ ಮತ್ತು ಕನ್ನಡ ಪಂಡಿತರು. ವ್ಯಾಕರಣ, ಅಲಂಕಾರ, ವೇದಾಂತ ಶಾಸ್ತ್ರಗಳಲ್ಲಿ ಅವರಿಗೆ ಸಮಾನರು ವಿರಳ. ರಾಜ್ಯ ಮಟ್ಟದ ಮತ್ತು ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಅವರು ಗಳಿಸಿದ್ದಾರೆ. ರಂಗನಾಥ ಶರ್ಮರು ಕನ್ನಡ ಸಾಹಿತ್ಯ ಪರಿಷತ್ತಿನ ಹಳಗನ್ನಡ ಗ್ರಂಥ ಸಂಪಾದನಾ ಸಮಿತಿಗೆ ಅಧ್ಯಕ್ಷರಾಗಿ ಅನೇಕ ಗ್ರಂಥಗಳ ಪ್ರಕಟಣೆಗೆ ಕಾರಣಕರ್ತರಾದರು. ಐದನೆಯ ಅಖಿಲ ಕರ್ನಾಟಕ ಸಂಸ್ಕೃತ ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದುದಲ್ಲದೆ ಅನೇಕ ಮಠ ಮಂದಿರ, ಸಂಘ-ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ.

ಪ್ರಶಸ್ತಿಗಳು

ಬದಲಾಯಿಸಿ
  • ರಾಜ್ಯೋತ್ಸವ ಪ್ರಶಸ್ತಿ[][]
  • ಸಂಸ್ಕೃತ ಅಧ್ಯಾಪನಕ್ಕಾಗಿ ರಾಷ್ಟ್ರಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ[]
  • ಡಿವಿಜಿ ಬಳಗ ಕೊಡಮಾಡುವ ಡಿವಿಜಿ ಪ್ರಶಸ್ತಿಯ ಮೊದಲ ಗೌರವ [][]
  • ತಿರುಪತಿಯ ಸಂಸ್ಕೃತ ವಿಶ್ವವಿದ್ಯಾನಿಲಯದ "ಮಹಾಮಹೋಪಾಧ್ಯಾಯ" ಎಂಬ ಗೌರವ[][೧೫]
  • ಸಂಸ್ಕೃತ ಭಾಷಾ ವೈದಗ್ಧ್ಯಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ[][]
  • ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ (ಹೋನರಿಸ್ ಕಾಸಾ ಡಿ.ಲಿಟ್. ಪದವಿ)[][][][][೧೬]
  • ೨೦೧೦ರಲ್ಲಿ ಸಂಸ್ಕೃತದಲ್ಲಿನ ಬರವಣಿಗೆಗಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ನೀಡುವ ಪುಸ್ತಕ ಪ್ರಶಸ್ತಿ[೧೭]
  • ಆದಿಚುಂಚನಗಿರಿ ಮಹಾಸಂಸ್ಥಾನ ಕೊಡಮಾಡುವ ಚುಂಚಶ್ರೀ ಪ್ರಶಸ್ತಿ.
  • ರಾಷ್ಟ್ರಪತಿಗಳ ಗೌರವ ಪ್ರಶಸ್ತಿಪತ್ರ.
  • ವಿದ್ಯಾವಾರಿಧಿ ಬಿರುದು

ಮಾಹಿತಿ ಕೃಪೆ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. https://karnataka.gov.in/page/Awards/State%20Awards/Rajyotsava+Awards/en
  2. ೨.೦ ೨.೧ ೨.೨ "N. Rangnatha Sharma". Archived from the original on 2014-02-21. Retrieved 2014-04-18.
  3. ೩.೦ ೩.೧ ೩.೨ ೩.೩ ೩.೪ ೩.೫ ೩.೬ ೩.೭ ೩.೮ "NOTED SANSKRIT SCHOLAR RANGANATHA SHARMA DEAD". Star of Mysore. Mysore. January 25, 2014. Archived from the original on ಫೆಬ್ರವರಿ 1, 2014. Retrieved ಏಪ್ರಿಲ್ 18, 2014.
  4. ೪.೦೦ ೪.೦೧ ೪.೦೨ ೪.೦೩ ೪.೦೪ ೪.೦೫ ೪.೦೬ ೪.೦೭ ೪.೦೮ ೪.೦೯ "Scholar Ranganatha Sharma is dead", ದಿ ಹಿಂದು, Mysore, January 26, 2014
  5. ೫.೦ ೫.೧ ೫.೨ ೫.೩ ೫.೪ "DVG was a titan among Kannada writers, says Ranganatha Sharma", ದಿ ಹಿಂದು, Mysore, March 25, 2013
  6. ಎನ್. ರಂಗನಾಥ ಶರ್ಮಾ (1984). ಮರುಳ ಮುನಿಯನ ಕಗ್ಗಕ್ಕೆ ಮುನ್ನುಡಿ. ಕಾವ್ಯಾಲಯ ಪ್ರಕಾಶನ, ಮೈಸೂರು ಗೋಖಲೆ ಸಾರ್ವಜನಿಕ ಸಂಸ್ಥೆ.
  7. ರವೀಂದ್ರ ಭಟ್ಟ (ಜನವರಿ 26, 2014). "ಮಂಕುತಿಮ್ಮನ ತಮ್ಮ ರಂಗನಾಥ ಶರ್ಮಾ". ಬೆಂಗಳೂರು: ಪ್ರಜಾವಾಣಿ. Retrieved ಏಪ್ರಿಲ್ 07, 2014. {{cite news}}: Check date values in: |accessdate= (help)
  8. ರವೀಂದ್ರ ಭಟ್ಟ (ಜುಲಾಯಿ 15, 2012). "ಮಂಕುತಿಮ್ಮನ ಒಡನಾಡಿ ರಂಗನಾಥ ಶರ್ಮಾ". ಬೆಂಗಳೂರು: ಪ್ರಜಾವಾಣಿ. Archived from the original on 2016-03-04. Retrieved ಏಪ್ರಿಲ್ 07, 2014. {{cite news}}: Check date values in: |accessdate= and |date= (help)
  9. ೯.೦ ೯.೧ ೯.೨ "Ranganath Sharma to get DVG award", ದಿ ಹಿಂದು, Mysore, March 23, 2013
  10. ೧೦.೦ ೧೦.೧ S. Ranganath, V. N. Jha (ed.), "Contribution of Karnataka to Sanskrit Drama Since Independence", Sanskrit Writings in Independent India, p. 28
  11. T. V. V. S. (1987). Amaresh Datta (ed.). Aphorisms, Maxims and Proverbs (Kannada). Sahitya Akademi. p. 208. {{cite book}}: |work= ignored (help)
  12. N. Ranganatha Sharma (1990). Ekachakram. Bangalore: Akhila Karnataka Sanskrit Parishat.. With an appreciation by K. Krishnamurthy, p. viii.
  13. "Hosagannada Vyakarana". Archived from the original on 2014-03-10. Retrieved 2014-04-19.
  14. "Sanskrit scholar Ranganatha Sharma dead". Archived from the original on 2015-08-26. Retrieved 2014-04-19. {{cite news}}: line feed character in |title= at position 18 (help)
  15. ರಾಮಚಂದ್ರ ಹೆಗ್ಡೆ (January 26, 2014), "ನಾಡು ಕಂಡ ಶ್ರೇಷ್ಠ ವಿದ್ವಾಂಸ ರಂಗನಾಥ ಶರ್ಮ ಸ್ಮರಣೆ", OneIndia Kannada
  16. "Make Sanskrit the language of non-Brahmins: scholar", ದಿ ಹಿಂದು, Bangalore, November 10, 2012
  17. "Book awards", ದಿ ಹಿಂದು, Karnataka, March 6, 2012

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಹೆಚ್ಚಿನ ಓದು

ಬದಲಾಯಿಸಿ