ಎಂ. ಆರ್. ವಿಠಲ್ (ಜುಲೈ ೧೯, ೧೯೦೮ - ಅಕ್ಟೋಬರ್ ೧೨, ೧೯೯೪) ಪ್ರಖ್ಯಾತ ಚಲನಚಿತ್ರ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.

ಮೈಸೂರು ರಾಘವೇಂದ್ರರಾವ್ ವಿಠಲ್
ಜನನಜುಲೈ ೧೯, ೧೯೦೮
ಮೈಸೂರು
ಮರಣಅಕ್ಟೋಬರ್ ೧೨, ೧೯೯೪
ವೃತ್ತಿಚಲನಚಿತ್ರ ನಿರ್ದೇಶಕರು

ಕನ್ನಡ ಚಿತ್ರರಂಗದ ನಿರ್ದೇಶಕರಲ್ಲಿ ಪ್ರಮುಖ ಹೆಸರಾದ ಮೈಸೂರು ರಾಘವೇಂದ್ರರಾವ್ ವಿಠಲ್ ೧೯೦೮ ಜುಲೈ ೧೯ರಂದು ಜನಿಸಿದರು. ಮೈಸೂರು ಮತ್ತು ಮದ್ರಾಸುಗಳಲ್ಲಿ ವ್ಯಾಸಂಗ ನಡೆಸಿದರು. ಆಟೋಮೊಬೈಲ್ ಮತ್ತು ಇಂಜಿನಿಯರಿಂಗ್ ಪದವೀಧರರಾದ ವಿಠಲ್ ಆ ಕ್ಷೇತ್ರದಲ್ಲಿ ಪ್ರಾಧ್ಯಾಪಕರಾಗಿಯೂ ಹೆಸರು ಮಾಡಿದರು. ೧೯೨೮ರಲ್ಲಿ ಕೊಲ್ಲಾಪುರದಲ್ಲಿ ಸ್ವಂತ ಕಾಲೇಜನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಅವರಿಗೆ ಧ್ವನಿಗ್ರಹಣದ ಬಗ್ಗೆ ಆಸಕ್ತಿ ಬೆಳೆಯಿತು.

ಚಿತ್ರರಂಗದಲ್ಲಿ

ಬದಲಾಯಿಸಿ

ಭಾರತೀಯ ಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಅವರ ಬಳಿ ಚಲನಚಿತ್ರ ಕಲೆಯನ್ನು ಕಲಿತ ಅವರುಲಾಹೋರಿಗೆ ತೆರಳಿ ಶಬ್ದ ಗ್ರಹಣವನ್ನು ವಿಶೇಷವಾಗಿ ಅಧ್ಯಯನ ಮಾಡಿದರು. ೧೯೩೮ ರಲ್ಲಿ ಆಗ್ ಎಂಬ ಹಿಂದಿ ಚಿತ್ರವನ್ನು ನಿರ್ದೇಶಿಸಿದರು. ಹಲವಾರು ತಮಿಳು ಮತ್ತು ಮಲೆಯಾಳಂ ಚಿತ್ರಗಳನ್ನು ನಿರ್ದೇಶಿಸಿದರು. ೧೯೫೨ ರಲ್ಲಿ ಬರ್ನಿಂಗ್ ಸಿಟಿ ಎಂಬ ಫ್ರೆಂಚ್ ಭಾಷೆಯ ಚಿತ್ರವನ್ನು ನಿರ್ದೇಶಿಸಿದರು. ವಿಠಲ್ ಕನ್ನಡ ಚಿತ್ರ್ರರಂಗಕ್ಕೆ ಬಂದಿದ್ದು ತಡವಾಗಿ. ಆದರೆ ಕನ್ನಡದಲ್ಲಿ ಅನೇಕ ಹೊಸ ಅಲೆಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ೧೯೬೩ರಲ್ಲಿ ವಾದಿರಾಜ್ ಮತ್ತು ಜವಾಹರ್ ನಿರ್ಮಾಣದ ನಂದಾದೀಪ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ನಕ್ಕರೆ ಅದೇ ಸ್ವರ್ಗ ಚಿತ್ರದ ಮೂಲಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನೂ, ಯಾರ ಸಾಕ್ಷಿ? ಚಿತ್ರದ ಮೂಲಕ ನಟಿ ಮಂಜುಳ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದ ಹೆಗ್ಗಳಿಕೆ ವಿಠಲ್ ಅವರದು . ‘ನಂದಾದೀಪ’, ‘ಮಿಸ್ ಲೀಲಾವತಿ’, ‘ಹಣ್ಣೆಲೆ ಚಿಗುರಿದಾಗ’, ‘ಪ್ರೊಫೆಸರ್ ಹುಚ್ಚುರಾಯ’, ‘ನಕ್ಕರೆ ಅದೇ ಸ್ವರ್ಗ’, ‘ಯಾರ ಸಾಕ್ಷಿ’, ‘ಕೂಡಿ ಬಾಳೋಣ’, ‘ಮಂಗಳ ಮಹೂರ್ತ’, ‘ಪ್ರೇಮಮಯಿ’, ‘ಮನಸ್ಸಿದ್ದರೆ ಮಾರ್ಗ’, ‘ಮಾರ್ಗದರ್ಶಿ’, ‘ವರದಕ್ಷಿಣೆ’, ‘ಕಣ್ಣಾಮುಚ್ಚಾಲೆ’, ‘ಎರಡುಮುಖ’ ಮುಂತಾದವು ವಿಠಲ್ ಅವರ ಪ್ರಮುಖ ಕನ್ನಡ ಚಿತ್ರಗಳು.

ಚಿತ್ರರಂಗದ ವ್ಯಾಖರಣ

ಬದಲಾಯಿಸಿ

ಚಲನಚಿತ್ರಗಳಿಗೆ ತನ್ನದೇ ಆದ ವ್ಯಾಕರಣವಿದೆ ಎಂದು ಪ್ರತಿಪಾದಿಸಿದ ಚಿಂತಕರಲ್ಲಿ ವಿಠಲ್ ಪ್ರಮುಖರು. ಪಾಶ್ಚಾತ್ಯ ಸಿನಿಮಾ ತಂತ್ರಜ್ಞಾನವನ್ನು ತಲಸ್ಪರ್ಶಿಯಾಗಿ ಅರಿತಿದ್ದ ವಿಠಲ್, ಭಾರತೀಯ ಪರಂಪರೆಯ ನೆಲೆಗಳನ್ನು ಬಲ್ಲವರಾಗಿದ್ದರು. ಹೀಗಾಗಿ ಅವರು ತಮ್ಮ ಚಿತ್ರಗಳಲ್ಲಿ ಚಿತ್ರಗೀತೆಗೆ ಮಾತ್ರವಲ್ಲ, ಸಂಗೀತ ಎಂಬ ಪರಿಕರಕ್ಕೇ ವಿಶೇಷ ಅರ್ಥ ಕೊಟ್ಟರು. ಹಿನ್ನೆಲೆ ಸಂಗೀತವನ್ನು ಅವರು ಬಳಸಿದ ಕ್ರಮ ವಿಶೇಷ ಅಧ್ಯಯನಕ್ಕೆ ಅರ್ಹವಾಗಿದೆ. ಹಾಗೇ ಕ್ಯಾಮರಾ ಮತ್ತು ಎಡಿಟಿಂಗ್ ಗಳಲ್ಲಿ ತಮಗಿದ್ದ ಪರಿಣತಿಯಿಂದ ಅವರು ಹತ್ತಾರು ಪ್ರಯೋಗಗಳಿಗೆ ಮುಂದಾದರು. 1986 ರಲ್ಲಿ ಹೈದರಾಬಾದಿನಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡು ಭಾರತೀಯ ಚಿತ್ರಗಳನ್ನು ವೀಕ್ಷಿಸಿ ಆತಂಕಗೊಂಡ ವಿಠಲ್ ಅವರು ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರಿಗೆ ಬರೆದಿದ್ದ ಪತ್ರದಲ್ಲಿ ಹೇಳಿದ್ದ ಮಾತುಗಳಿವು: “ಇಂದಿನ ಚಿತ್ರಗಳು ಭಾರತೀಯತೆ ಎಂಬುದನ್ನು ಭಾವುಕ ನೆಲೆಯಲ್ಲಿ ಮಾತ್ರ ನೋಡುತ್ತಿವೆ. ಅದಕ್ಕಿರುವ ಸಾಸ್ಕೃತಿಕ ಸೂಕ್ಷ್ಮಗಳು ಮರೆಯಾಗುತ್ತಿವೆ. ತಾಂತ್ರಿಕತೆಯ ಅಬ್ಬರ ಹೆಚ್ಚಿದಂತೆ ಚಲನಚಿತ್ರ ಕಸುಬುಗಾರಿಕೆ ಎಂಬುದೇ ಒಂದು ಕಾರ್ಖಾನೆಯಂತಾಗಬಹುದು. ತಾಂತ್ರಿಕತೆ ಚಿತ್ರ ವ್ಯಾಕರಣದೊಳಗೆ ಸೇರುತ್ತಿಲ್ಲ. ಹಾಗಾಗದಿದ್ದರೆ ಆ ಬೆಳವಣಿಗೆಗೆ ಮಾಧ್ಯಮದ ದೃಷ್ಟಿಯಿಂದ ಯಾವ ಅರ್ಥವೂ ಇಲ್ಲ”. ವಿಠಲ್ ಅವರು ಈ ಪ್ರಶ್ನೆ ಎತ್ತಿ ಮೂರು ದಶಕಗಳೇ ಕಳೆದುಹೋಗಿದೆ. ಅವರ ಆತಂಕಗಳೆಲ್ಲಾ ನಿಜವಾಗಿದೆ. ಇವತ್ತು ಕನ್ನಡ ಚಿತ್ರಗಳಲ್ಲಿ ಭಾಷೆಯ ದೃಷ್ಟಿಯಲ್ಲೂ ಕನ್ನಡ ಉಳಿದಿಲ್ಲ. ಭಾರತೀಯ ಚಿತ್ರರಂಗ ತಾಂತ್ರಿಕ ಚಮತ್ಕಾರಗಳಲ್ಲಿ ಮುಳುಗಿಹೋಗಿದೆ.

ಪ್ರಶಸ್ತಿ ಗೌರವಗಳು

ಬದಲಾಯಿಸಿ

ವಿಠಲ್ ಅವರಿಗೆ 1991 ನೆಯ ಸಾಲಿನ ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಲಭಿಸಿತ್ತು. ಅವರ ಹಲವಾರು ಚಿತ್ರಗಳು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದ್ದವು.

ತಮ್ಮ ಜೀವನದ ಕೊನೆಯ ದಿನಗಳನ್ನು ಬರೋಡಾದಲ್ಲಿ ಕಳೆದ ವಿಠಲ್ ೧೯೯೪ರ ಅಕ್ಟೋಬರ್ ೧೨ರಂದು ನಿಧನರಾದರು. ತಮ್ಮ ಉತ್ತಮ ಸಿನಿಮಾಗಳು ಮತ್ತು ಮಾಡಿದ ಕಾಯಕದಿಂದ ಅವರು ಅಮರರಾಗಿದ್ದಾರೆ.

ಎಂ.ಆರ್.ವಿಠಲ್ ನಿರ್ದೇಶನದ ಕನ್ನಡ ಚಿತ್ರಗಳು

ಬದಲಾಯಿಸಿ

ಎಂ.ಆರ್. ವಿಠಲ್ ಕುರಿತ ಕೃತಿ

ಬದಲಾಯಿಸಿ

ಎಂ.ಆರ್. ವಿಠಲ್ ಅವರ ಜೀವನ ಸಾಧನೆ ಕುರಿತಾಗಿ ಎನ್. ಎಸ್. ಶ್ರೀಧರಮೂರ್ತಿ ಅವರು 'ಪ್ರೇಮದ ಹಣತೆ' - ಎಂ.ಆರ್. ವಿಠಲ್ ಜೀವನ ಸಾಧನೆ ಎಂಬ ಕೃತಿ ರಚಿಸಿದ್ದಾರೆ.