ಉಜ್ಜೆಯನ್

(ಉಜ್ಜೆಯನ ಇಂದ ಪುನರ್ನಿರ್ದೇಶಿತ)

ಉಜ್ಜೆಯನ್ (ಹಿಂದಿ:उज्जैन) (ಇತರ ಹೆಸರುಗಳು: ಉಜೆಯನ್, ಉಜ್ಜೆಯನಿ, ಅವಂತಿ, ಅವಂತಿಕಾಪುರಿ), ಕೇಂದ್ರ ಭಾರತಮಾಲ್ವ ಪ್ರಾಂತ್ಯದಲ್ಲಿ ಕ್ಷಿಪ್ರ ನದಿಯ ಪೂರ್ವ ತಟದಲ್ಲಿರುವ ಪ್ರಾಚೀನ ನಗರ. ಈಗ ಇದು ಮಧ್ಯ ಪ್ರದೇಶ ರಾಜ್ಯದಲ್ಲಿದೆ. ಇದು ಉಜ್ಜೆಯನ್ ಜೆಲ್ಲೆಯ ಆಡಳಿತ ಕೇಂದ್ರವಾಗಿದೆ.

ಉಜ್ಜಯಿನಿ
उज्जैन
ಆವಂತಿಕಾ
ನಗರ
ಪವಿತ್ರ ಕ್ಷೇತ್ರ ಉಜ್ಜಯಿನಿ
ಶಿಪ್ರಾ ನದಿಯ ದಡದ ಶ್ರೀರಾಮ ಘಾಟ್
ಶಿಪ್ರಾ ನದಿಯ ದಡದ ಶ್ರೀರಾಮ ಘಾಟ್
Nickname: 
The City of Temples
ದೇಶ ಭಾರತ
ರಾಜ್ಯಮಧ್ಯ ಪ್ರದೇಶ
ಪ್ರಾಂತ್ಯಮಾಳ್ವ
ಜಿಲ್ಲೆಉಜ್ಜೈನ್Ujjain
Government
 • BodyUjjain Municipal Corporation
 • MayorRameshwar Akhand (BJP)
 • Municipal CommissionerShri Parmar
Area
 • Total೧೫೨ km (೫೯ sq mi)
 • Rank78th Largest city of India
Elevation
೫೨೨ m (೧,೭೧೩ ft)
Population
 (2011)[]
 • Total೫,೧೫,೨೧೫
 • Density೩,೪೦೦/km (೮,೮೦೦/sq mi)
Languages
 • Officialಹಿಂದಿ,
 • OtherMalvi
Time zoneUTC+5:30 (IST)
PIN
456001
Telephone code0734
Vehicle registrationMP-13
ClimateCfa (Köppen)
Precipitation960 millimetres (38 in)
Avg. annual temperature24.0 °C (75.2 °F)
Avg. summer max. temperatureMax.39 °C (102 °F)
Avg. summer min. temperatureMin.24 °C (75 °F)
Avg. winter max. temperatureMax.25 °C (77 °F)
Avg. winter min. temperatureMin.8 °C (46 °F)
Websiteujjain.nic.in
ಉಜ್ಜೆಯನ್
ಉಜ್ಜೆಯನ್
city
Population
 (2001)
 • Total೪,೨೯,೯೩೩
Websiteujjain.nic.in
मंगळनाथ मंदिर, उज्जैन
महांकाळाचे मंदिर
मंदिराचे प्रवेशद्वार
मंदिरातील शिवाची पिंड
An elephant near the Mahakaleshwar Temple
उज्जैन-नगरम्
Ujjain
उज्जैन-नगरम्
द्वादशज्योतिर्लिङ्गेषु अन्यतमः महाकालेश्वरः
देशःभारतम्
राज्यम्मध्यप्रदेशराज्यम्
मण्डलम्उज्जैनमण्डलम्
महानगरविस्तारः१५२ चतुरस्रकि.मी.
जनसङ्ख्या(२०११)५,१५,२१५
Government
 • Typeमहापौरपरिषद्-सर्वकारः(Mayor–council government)
 • Bodyउज्जैन म्युनिसिपल् कोर्पोरेशन्
 • महापौरःरामेश्वर अखण्ड
 • म्युनिसिपल कमीशनर्श्री परमार
Time zoneUTC+५:३० (भारतीयमानकसमयः(IST))
पिनकोड
४५६ ०XX
Area code०७३४
Vehicle registrationजीजे-१३
साक्षरता८५.५५%
भाषाःहिन्दी, आङ्ग्लं, मालवी
लिङ्गानुपातःपु.-५०%, स्त्री.-४७%
WebsiteUjjain Municipal Corporation

ಭೌಗೋಳಿಕ ವಿಸ್ತೀರ್ಣ

ಬದಲಾಯಿಸಿ

ಇದರ ಉತ್ತರದಲ್ಲಿ ಚಂಬಲ್ (ಚರ್ಮಣವತೀ) ನದಿ ಮತ್ತು ಆರಾವಳಿ (ಪಾರಿಯಾತ್ರಾ) ಪರ್ವತ ಶ್ರೇಣಿ, ದಕ್ಷಿಣದಲ್ಲಿ ನರ್ಮದಾ ನದಿ, ಪೂರ್ವದಲ್ಲಿ ವಿಂಧ್ಯಾಚಲ ಮತ್ತು ಪಶ್ಚಿಮದಲ್ಲಿ ಸೌರಾಷ್ಟ್ರ ಇವೆ. ಈ ನಗರ ಇಂದೋರಿನಿಂದ ಸು.55ಕಿಮೀ ಮತ್ತು ಭೋಪಾಲಿನಿಂದ 180ಕಿಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸು. 517ಮೀ. ಎತ್ತರದಲ್ಲಿದೆ. 6,091. ಚ,ಕಿಮೀ ವಿಸ್ತೀರ್ಣವಿದ್ದು ಜನಸಂಖ್ಯೆ 17,09,885 (2001) ಹೊಂದಿದೆ.

ಹೆಸರಿನ ಮಹತ್ಮೆ

ಬದಲಾಯಿಸಿ

ಉಜ್ಜಯಿನಿಗೆ ಪ್ರತಿ ಕಲ್ಪದಲ್ಲೂ ಬೇರೆ ಬೇರೆ ಹೆಸರುಗಳಿದ್ದವೆಂದು ತಿಳಿದು ಬರುತ್ತದೆ. ಮೊದಲ ಕಲ್ಪದಲ್ಲಿ ಸ್ವರ್ಣಶೃಂಗಾ (ಕನಕಶೃಂಗಾ), ಎರಡನೇ ಕಲ್ಪದಲ್ಲಿ ಕುಶಸ್ಥಲೀ, ಮೂರನೆಯ ಕಲ್ಪದಲ್ಲಿ ಅವಂತಿಕಾ, ನಾಲ್ಕನೆಯ ಕಲ್ಪದಲ್ಲಿ ಅಮರಾವತೀ, ಐದನೆಯ ಕಲ್ಪದಲ್ಲಿ ಚೂಡಾಮಣಿ ಮತ್ತು ಆರನೆಯ ಕಲ್ಪದಲ್ಲಿ ಪದ್ಮಾವತೀ ಎಂದಿತ್ತು. ಸೋಮದೇವನು ತನ್ನ ಕಥಾಸರಿತ್ಸಾಗರದಲ್ಲಿ ಈ ನಗರವನ್ನು ಭೋಗವತಿ, ಹಿರಣ್ಯಾವತಿ ಎಂದು ಕರೆಯುತ್ತಾನೆ. ಕವಿ ಕಾಳಿದಾಸನಂತೂ ಉಜ್ಜಯಿನಿಯನ್ನು ವಿಶಾಲಾ ಎಂದೇ ಕರೆದು ಇದರ ಸಮೃದ್ಧಿಯನ್ನು ಸೂಚಿಸುತ್ತಾನೆ. ಪ್ರತಿಕಲ್ಪ, ಕುಮುದ್ವತಿ ಮತ್ತು ಶಿವಪುರಿ ಇವು ಉಜ್ಜಯಿನಿಯ ಇತರ ಹೆಸರುಗಳು.

ಪುರಾಣ ಕಾಲದಲ್ಲಿ

ಬದಲಾಯಿಸಿ
  • ಪ್ರಸಿಧ್ಧವಾದ ಪುರಾತನ ಸಪ್ತ ಪುರಿಗಳಲ್ಲಿ ಉಜ್ಜಯಿನಿ ಒಂದು ಮುಖ್ಯ ನಗರವಾಗಿದ್ದು ಇಂದಿಗೂ ತನ್ನ ವಿಶಿಷ್ಟತೆಯನ್ನು ಕಾಪಾಡಿಕೊಂಡು ಬಂದಿದೆ. ಇದಕ್ಕೆ ಹಲವು ಧಾರ್ಮಿಕ ಹಾಗೂ ಪೌರಾಣಿಕ ಹಿನ್ನೆಲೆಗಳಿವೆ. ಸ್ಕಾಂದಪುರಾಣದ ಪ್ರಕಾರ ಅವಂತಿ ರಾಜ್ಯದ ರಾಜಧಾನಿ ಅವಂತೀಪುರ ವಾಗಿತ್ತು. ಇಲ್ಲಿ ತ್ರಿಪುರಾಸುರನ ಸಂಹಾರವಾದ ಮೇಲೆ, ಶಿವನ ವಿಜಯದಿಂದ ಇದಕ್ಕೆ ಉಜ್ಜಯಿನಿ (ಉತ್+ಜಯಿನಿ, ಶ್ರೇಷ್ಠ ರೀತಿಯಲ್ಲಿ ಜಯ ಗಳಿಸುವಂಥದು) ಎಂಬ ಹೆಸರು ಬಂದಿತು.
  • ಅನಂತರ ಶಿವನು ಇಲ್ಲಿ ವಾಸಿಸುತ್ತಿದ್ದನೆಂದು ಕಥೆ. ಮತ್ಸ್ಯಪುರಾಣದಲ್ಲಿ ಶಿವಮತ್ತು ಅಂಧಕನ (ಪಾರ್ವತಿಯಲ್ಲಿ ಆಸಕ್ತನಾಗಿ ಅಂಧಕಾರದಲ್ಲಿ ಮುಳುಗಿದ್ದ ದಾನವನ) ನಡುವೆ ಇಲ್ಲಿಯೇ ಯುದ್ಧವಾಯಿತೆಂದಿದೆ. ಪ್ರಹ್ಲಾದನೂ ಇಲ್ಲಿಯೇ ವಿಷ್ಣು ಮತ್ತು ಮಹಾ ಕಾಲೇಶ್ವರನ ದರ್ಶನ ಪಡೆದನೆಂದು ವಾಮನ ಪುರಾಣ ತಿಳಿಸುತ್ತದೆ. ಅವಂತೀಪುರಿಯು ಪಾಪಗಳನ್ನು ನಾಶಮಾಡಿ ಮುಕ್ತಿಯನ್ನು ಕೊಡುತ್ತದೆಂದು ಗರುಡ, ಅಗ್ನಿ ಮತ್ತು ಸೌರ ಪುರಾಣಗಳು ತಿಳಿಸುತ್ತವೆ.
  • ಇಲ್ಲಿಯ ಮಹರ್ಷಿ ಸಾಂದೀಪನಿ ಆಶ್ರಮದಲ್ಲಿ ಕೃಷ್ಣ ಮತ್ತು ಬಲರಾಮರು 14 ವಿದ್ಯೆ ಮತ್ತು 64 ಕಲೆಗಳನ್ನು ಅಭ್ಯಾಸ ಮಾಡಿದರೆಂದು ವಿಷ್ಣು, ಪದ್ಮ, ಆದಿ, ಬ್ರಹ್ಮಾಂಡ, ಬ್ರಹ್ಮವೈವರ್ತ ಪುರಾಣಗಳು ಹಾಗೂ ಭಾಗವತ ತಿಳಿಸುತ್ತವೆ. ಶಿವಪುರಾಣವು ಅವಂತಿಕಾ ನಗರ ಹಾಗೂ ಮಹಾಕಾಲೇಶ್ವರನ ಮಾಹಾತ್ಮ್ಯೆಯನ್ನು ವರ್ಣಿಸಿದೆ. ಲಿಂಗಪುರಾಣವು ಮಹಾಕಾಲನನ್ನು ಸಮಸ್ತ ಮೃತ್ಯುಲೋಕದ ಸ್ವಾಮಿಯೆಂದು ತಿಳಿಸುತ್ತದೆ.
  • ಇಡೀ ದೇಶವನ್ನೇ ದೇಹಾಕಾರದಲ್ಲಿ ನೋಡಿದರೆ, ಉಜ್ಜಯಿನಿ ಅದರ ನಾಭಿಯ ಪ್ರದೇಶವಾಗಿದೆ. ನಾಭಿಪ್ರದೇಶದಲ್ಲಿ ಮಹಾಕಾಲೇಶ್ವರ ನೆಲೆಸಿದ್ದಾನೆಂದು ವರಾಹಪುರಾಣ ಹೇಳುತ್ತದೆ. ಆದ್ದರಿಂದ ಇದಕ್ಕೆ ವೇದಾಂತದಲ್ಲಿ ಅಮೃತಸ್ಯ ನಾಭಿ, ಯೋಗದಲ್ಲಿ ಮಣಿಪುರ ಚಕ್ರ ಹಾಗೂ ಬೇರೆಡೆ ಮಾತೃ ಸ್ಥಾನ, ಜಗದ್ಧಾತ್ರಿ ಸ್ಥಾನ ಎಂದೂ ಕರೆಯುತ್ತಾರೆ. ಇಲ್ಲಿಯ ಮಹಾಕಾಲೇಶ್ವರ ಲಿಂಗವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದೆಂದು ಪರಿಗಣಿಸಿರುವುದರಿಂದಲೂ, ದಕ್ಷಿಣಾಮೂರ್ತಿಯೂ ಆದ್ದರಿಂದಲೂ, ಉಜ್ಜಯಿನಿ ಪುಣ್ಯಕ್ಷೇತ್ರವಾಗಿದೆ.
  • ಋಗ್ವೇದ ಸಂಹಿತೆಯಲ್ಲಿ ಐದು ಸಲ ಅವಂತಿ ಎಂಬ ಶಬ್ದ ಬಂದಿದ್ದರೂ ಅದು ಅವಂತಿ ನಗರ ಅಥವಾ ಅವಂತಿ ಪ್ರದೇಶವನ್ನು ಸೂಚಿಸುವುದಿಲ್ಲ. ಇದೇ ರೀತಿ ಯಜುರ್ವೇದ ಸಂಹಿತೆಗಳಲ್ಲೂ ಪ್ರಮುಖ ಬ್ರಾಹ್ಮಣ ಹಾಗೂ ಉಪನಿಷತ್ತುಗಳಲ್ಲೂ ಈ ಪದ ಅನೇಕ ಬಾರಿ ಬಂದರೂ ಅದರ ಅರ್ಥ ನಗರ/ಪ್ರದೇಶವನ್ನು ಸೂಚಿಸುವುದಿಲ್ಲ. ರಾಮಾಯಣದ ಕಿಷ್ಕಿಂಧಾ ಕಾಂಡದಲ್ಲಿ ರಾಮನು ದೂತರನ್ನು (ಸೀತೆಯನ್ನು ಹುಡುಕಲು) ಅವಂತಿಗೂ ಕಳಿಸಿದನೆಂದು ಹೇಳಿದೆ.
  • ಭಾರತದ ವನಪರ್ವದಲ್ಲಿ ಉಜ್ಜಯಿನಿಯ ಮಹಾಕಾಲ ತೀರ್ಥ ಹಾಗೂ ಕೋಟಿತೀರ್ಥದ ಉಲ್ಲೇಖವಿದೆ. ಉದ್ಯೋಗ ಪರ್ವದಲ್ಲಿ ಅವಂತಿಯ ರಾಜರಾದ ವಿಂದ ಮತ್ತು ಅನುವಿಂದರ ತಂಗಿ ಮಿತ್ರವಿಂದಾ ಕೃಷ್ಣನೊಡನೆ ವಿವಾಹವಾಗಿದ್ದ ಹಾಗೂ ಇಬ್ಬರೂ ರಾಜರು ಕೌರವರ ಪರವಾಗಿ ಯುದ್ಧದಲ್ಲಿ ಕಾದಿದ್ದ ವಿಚಾರ ಬರುತ್ತದೆ. ಮಹಾಭಾರತದ ಯುದ್ಧಾನಂತರ ಹೈಹಯ ವಂಶದ ಶಾಖೆಗಳಲ್ಲಿ ಒಂದಾದ ವೀರಹೋತ್ರ ಮನೆತನದ 20 ರಾಜರು ಉಜ್ಜಯಿನಿಯಲ್ಲಿ ಆಳಿದರೆಂದು ಹೇಳುತ್ತಾರೆ.
  • ಸಂಸ್ಕೃತದ ಕವಿಗಳಾದ ಭಾಸ, ಶೂದ್ರಕ,ಭವಭೂತಿ, ಬಿಲ್ಹಣ, ಕಲ್ಹಣ, ಅಮರಸಿಂಹ, ಪದ್ಮಗುಪ್ತ, ಸೋಮದತ್ತ, ಕಾಳಿದಾಸ, ಬಾಣ ಮುಂತಾದವರು ತಮ್ಮ ಕೃತಿಗಳಲ್ಲಿ ಅವಂತಿಯ ವರ್ಣನೆಯನ್ನು ವಿಪುಲವಾಗಿ ಮಾಡಿದ್ದಾರೆ. ಕಾಳಿದಾಸನಂತೂ ತನ್ನ ಮೇಘಸಂದೇಶದಲ್ಲಿ ಉಜ್ಜಯಿನಿಯ ಬಹಳ ಸುಂದರ ವರ್ಣನೆಯನ್ನು ಕೊಟ್ಟಿದ್ದಾನೆ. ಸ್ವರ್ಗವಾಸದಲ್ಲಿ ಪುಣ್ಯ ಪುರ್ತಿಕ್ಷಯವಾದ ಅನಂತರ ಭೂಮಿಯಲ್ಲಿ ಹುಟ್ಟಲೇಬೇಕಲ್ಲವೇ?
  • ಅದಕ್ಕಾಗಿ ಸ್ವರ್ಗವಾಸಿಗಳು ತಮ್ಮ ಉಳಿದ ಪುಣ್ಯವನ್ನೆಲ್ಲಾ ಒಟ್ಟುಗೂಡಿಸಿ ಭೂಮಿಯ ಮೇಲೊಂದು ಸ್ವರ್ಗವಿರಲೆಂದು ನಿರ್ಧರಿಸಿ ಉಜ್ಜಯಿನಿಯನ್ನು ಸ್ಥಾಪಿಸಿದರೆನ್ನುತ್ತಾನೆ, ಕಾಳಿದಾಸ. ವಿದೇಶೀ ಪ್ರವಾಸಿಗಳಾದ ಯುವಾನ್ಚಾಂಗ್, ಟಾಲಮಿ, ಪೆರಿಪ್ಲಸ್, ಬರ್ನಿಯರ್, ಆಲ್ಬೆರೂನಿ ಮತ್ತು ವಿದೇಶಿ ಲೇಖಕರು ಉಜ್ಜಯಿನಿಯ ಬಗ್ಗೆ ಬರೆದಿದ್ದಾರೆ.

ಭಾರತೀಯ ಜ್ಯೋತಿಶ್ಶಾಸ್ತ್ರದ ಪ್ರಕಾರ

ಬದಲಾಯಿಸಿ
  • ಭಾರತೀಯ ಜ್ಯೋತಿಶ್ಶಾಸ್ತ್ರದ ಪ್ರಕಾರವೂ ಉಜ್ಜಯಿನಿಗೆ ಮಹತ್ತ್ವವಿದೆ. ಭೂಮಧ್ಯರೇಖೆ ಉಜ್ಜಯಿನಿಯ ಮೂಲಕವೇ ಹಾದು ಹೋಗುತ್ತದೆ, ಇದು ಕರ್ಕಾಟಕ ವೃತ್ತದ ಮೇಲೆಯೇ ಇದೆ. ಇದರ ಉತ್ತರ ಅಕ್ಷಾಂಶ 23.11 ಇದ್ದು ಪೂರ್ವ ರೇಖಾಂಶ 75.45 ಇದೆ. ಅಂದರೆ ಭೂಮದ್ಯ ರೇಖೆ (ವಿಷುವತ್ ರೇಖಾ) ಲಂಕಾ, ಉಜ್ಜಯಿನಿಯಿಂದ ಮೇಲೆ ಹಾದು ಕುರುಕ್ಷೇತ್ರ ಮತ್ತು ಮೇರು ಪರ್ವತಕ್ಕೆ ಹೋಗುತ್ತದೆ.
  • ಇನ್ನೊಂದು ರೀತಿಯಲ್ಲಿ ನೋಡಿದರೆ, ಸೂರ್ಯ ಮಾರ್ಚ್ 21ಕ್ಕೆ ಸರಿಯಾಗಿ ಉತ್ತರ ಧ್ರುವದ (ಮೇರು ಪರ್ವತದ) ನೆತ್ತಿಯ ಮೇಲಿದ್ದರೆ, ಮೂರು ತಿಂಗಳ ಅನಂತರ ಸರಿಯಾಗಿ ಉಜ್ಜಯಿನಿಯ ತಲೆಯ ಮೇಲೆ ಉರಿಯುತ್ತಾನೆ. ಇದರಿಂದ ಕಾಲಗಣನೆಯನ್ನು ಉಜ್ಜಯಿನಿಯಿಂದ ಶುರುಮಾಡಿದರೇ ಅದು ಸಮರ್ಪಕವಾಗಿರುವುದೆಂದು ಅಭಿಮತ.
  • ಇದನ್ನು ಗ್ರೀನಿಜ್ ಎಂದೂ ಕರೆಯುತ್ತಾರೆ. ಕಾಲಜ್ಞಾನದ ಈ ಅದ್ಭುತ ವಿಶೇಷತೆಯಿಂದಾಗಿ ಇಲ್ಲಿಯ ಪ್ರಧಾನ ದೇವತೆ ಕಾಲವನ್ನೇ ಮೀರಿನಿಂತ ಮಹಾಕಾಲ. ಉಜ್ಜಯಿನಿ ಚಂದ್ರ ಮತ್ತು ಅಂಗಾರಕರ ಜನ್ಮಭೂಮಿ ಎಂಬ ನಂಬಿಕೆ ಇರುವುದರಿಂದ, ಭಾರತದ ತೀರ್ಥಯಾತ್ರೆಯೂ ಇಲ್ಲಿಂದಲೇ ಆರಂಭ. ಜಯಪುರದ ಜಯಸಿಂಹ (1728-34) ಇಲ್ಲಿ ಜಂತರ್ ಮಂತರ್ ಅಥವಾ ವೇದಶಾಲಾ ಎಂಬ ಖಗೋಳ ವೀಕ್ಷಣಾಲಯ ಕಟ್ಟಿಸಿದ.

ಇತಿಹಾಸ

ಬದಲಾಯಿಸಿ
  • ಐತಿಹಾಸಿಕವಾಗಿಯೂ ಉಜ್ಜಯಿನಿ ಎಂದಿನಿಂದಲೂ ಪ್ರಾಮುಖ್ಯವಾಗಿಯೇ ಇದೆ. ಉಜ್ಜಯಿನಿಯಲ್ಲಿ ಅನೇಕ ವಂಶೀಯರು ರಾಜ್ಯಭಾರ ಮಾಡಿದ್ದಾರೆ. ಕೆಲವೊಮ್ಮೆ ಉಜ್ಜಯಿನಿಗೆ ರಾಜಧಾನಿ ಪಟ್ಟವೂ ತಪ್ಪಿತ್ತು. ಬುದ್ಧನ ಕಾಲದಲ್ಲಿ (ಪ್ರ.ಶ.ಪು. ಸು. 6-5ನೆಯ ಶತಮಾನ) ಉಜ್ಜಯಿನಿಯನ್ನು ಚಂಡ ಪ್ರದ್ಯೋತನೆಂಬ ಪ್ರತಾಪಿ ರಾಜ ಆಳುತ್ತಿದ್ದ. ಪ್ರ.ಶ. ಪು. 273ರಲ್ಲಿ ಮಗಧರಾಜ ಬಿಂದುಸಾರನ ಆಳ್ವಿಕೆಗೆ ಉಜ್ಜಯಿನಿ ಸೇರಿತು.
  • ಆಗ ಅವನ ಮಗ ಅಶೋಕ ಇಲ್ಲಿಯ ಪ್ರಶಾಸಕನಾಗಿದ್ದ. ಮೌರ್ಯರ ನಂತರ ಉಜ್ಜಯಿನಿ ಪ್ರ.ಶ. ಪು. 63ರ ವರೆಗೆ ಶುಂಗರ ಅಧೀನದಲ್ಲಿತ್ತು. ಅನಂತರ ಕಣ್ವರು (ಪ್ರ.ಶ. ಪು.63-27), ಆಂಧ್ರ ಸಾತವಾಹನರು (ಪ್ರ.ಶ.ಪು. 27-19), ಶಕ-ಕ್ಷತ್ರಪರು (ಪ್ರ.ಶ.ಪು.19-ಪ್ರಶ.ಶ.119), ಗುಪ್ತರು (ಪ್ರ.ಶ. ಸು 400-477), ಹೂಣರ ಆಕ್ರಮಣ (ಪ್ರ.ಶ.ಶ.5ನೆಯ ಶತಮಾನ), ಹೂಣರ ಮಿಹಿರಕುಲನ ಸೋಲು (ಪ್ರ.ಶ. 528), ಉಪಗುಪ್ತರು (ಪ್ರ.ಶ.ಶ.603-), ಥಾಣೇಶ್ವರ ಹರ್ಷವರ್ಧನ ನ ಅಧೀನದಲ್ಲಿ (ಪ್ರ.ಶ.648ರ ವರೆಗೆ), ಅನಂತರ ಪ್ರತಿಹಾರರು, ಗಹಲ್ವಾಡರು, ರಾಷ್ಟ್ರಕೂಟರು, ಪರಮಾರರು (ಪ್ರ.ಶ. 825-1235) ಉಜ್ಜಯಿನಿಯನ್ನು ಆಳಿದರು.
  • ಮೇಲ್ಕಾಣಿಸಿದ ಕಾಲಮಾನದಲ್ಲಿ ಕೆಲವು ಗೊಂದಲಗಳಿದ್ದು, ವಿಕ್ರಮಾದಿತ್ಯನ ಕಾಲದ ಬಗ್ಗೆ ವಾದವಿವಾದಗಳಿಗೆ ಎಡೆಮಾಡಿಕೊಟ್ಟಿವೆ. ಆದರೂ ಹೆಚ್ಚು ಪ್ರಚಲಿತವಾಗಿ, ಒಪ್ಪಿಕೊಂಡಿರುವ ಬಹು ಮುಖ್ಯಸಂಗತಿಯೆಂದರೆ ವಿಕ್ರಮಾದಿತ್ಯನು ಪ್ರ.ಶ. ಪು. 57 ರಲ್ಲಿ ಶಕರನ್ನು ಗೆದ್ದು ಓಡಿಸಿ, ಹೊಸ ವಿಕ್ರಮ ಶಕೆಯನ್ನು ಶುರುಮಾಡಿದ್ದು. ವಿಕ್ರಮ ಶಕೆಯ ಆರಂಭ ಪ್ರ.ಶ. ಪು. 58 ಎಂದೇ ಆಗಿದೆ.
  • ಶೌರಿಯೂ ಉದಾರಿಯೂ ವಿದ್ವಾಂಸನೂ ನೀತಿಪರಾಯಣನೂ ವಿದ್ವಜ್ಜನ ಮಂಡಲಿಮಂಡಿತನೂ ಆದ ಇವನ ರಾಜ್ಯದಲ್ಲೇ ಕಾಳಿದಾಸನೂ ಸೇರಿದಂತೆ ನವರತ್ನಗಳಿದ್ದುದು. ಇನ್ನೊಬ್ಬ ಪ್ರಸಿದ್ಧ ರಾಜನೆಂದರೆ ಪರಮಾರ ವಂಶದ ಭೋಜ ರಾಜ (ಪ್ರ.ಶ. 1010-1055). ಇವನು ಮಹಾಕಾಲೇಶ್ವರ ಮಂದಿರದ ಜೀರ್ಣೋದ್ಧಾರ ಮಾಡಿದ ಹಾಗೂ ರಾಜಧಾನಿಯನ್ನು ಉಜ್ಜಯಿನಿಯಿಂದ ಧಾರ್ಗೆ ಸ್ಥಳಾಂತರಿಸಿದ. ಮುಂದಿನ 5 ಶತಕಗಳಲ್ಲಿ, ಅಂದರೆ ಪ್ರ.ಶ. 1235-1741ರ ವರೆಗೆ, ಉಜ್ಜಯಿನಿಯು ಅರಾಜಕತೆ ಮತ್ತು ಅಂಧಕಾರದಲ್ಲಿ ಮುಳುಗಿತ್ತು ಎನ್ನಬಹುದು.
  • ಈ ಕಾಲ ಪ್ರಾರಂಭವಾದದ್ದು 1235ರಲ್ಲಿ ಶಮ್ಸುದ್ದೀನ್ ಅಲ್ತಮಸ್‍ನ ದಾಳಿ, ಲೂಟಿ ಮತ್ತು ಮಹಾಕಾಲ ಮಂದಿರವನ್ನು ಧ್ವಂಸ ಮಾಡುವುದರಿಂದ. ಆನಂತರ ಮುಸ್ಲಿಮರ ದಾಳಿ ಮತ್ತು ದಬ್ಬಾಳಿಕೆ ಒಂದಲ್ಲಾ ಒಂದು ರೀತಿ ನಡೆದೇ ಇತ್ತು. 1235-1290ರ ವರೆಗೆ ಅರಾಜಕತೆ ತಾಂಡವವಾಡುತ್ತಿದ್ದರೆ, 1293 ಮತ್ತು 1291ರಲ್ಲಿ ಎರಡು ಸಲ ಜಲಾಲುದ್ದೀನ್ ಖಿಲ್ಜಿ ದಾಳಿ ಮಾಡಿದ. 1322ರಲ್ಲಿ ಉಜ್ಜಯಿನಿಯು ತುಘಲಕ್ ರಾಜ್ಯದ ಸುಬಾ ಆಯಿತು. 1390ರಲ್ಲಿ (ದೆಹಲಿಯ ಮೇಲೆ ತೈಮೂರ್ ಲಂಗ್ ದಾಳಿ ಮಾಡಿದಾಗ) ಇಲ್ಲಿಯ ಸುಬೇದಾರ ಸ್ವತಂತ್ರನಾದ. *1405ರಲ್ಲಿ ಹೋಶಂಗ್ಶಾ ರಾಜಧಾನಿಯನ್ನು ಉಜ್ಜಯಿನಿಯಿಂದ ಮಾಂಡವ್ಗೆ ವರ್ಗಾಯಿಸಿದ ಮೇಲೆ ಉಜ್ಜಯಿನಿಯ ಪ್ರಾಮುಖ್ಯ ಕಡಿಮೆಯಾಯಿತಾದರೂ ಪರಕೀಯತೆಯ ಸೋಂಕು ಮತ್ತು ದಬ್ಬಾಳಿಕೆಯ ಧೂಳು ಕಡಿಮೆಯಾಗಲಿಲ್ಲ. ಹೋಶಂಗ್ಶಾನ ಮಗ ಮಹಮ್ಮದ್ ಘೋರಿಯನ್ನು ಮಂತ್ರಿ ಮಹಮ್ಮದ್ ಖಿಲ್ಜಿ ಕೊಂದ, ಅವನ ಮಗ ಗಿಯಾಸುದ್ದೀನನಿಗೆ ಅವನ ಮಗ ನಾಸಿರುದ್ದೀನನೇ ವಿಷ ಕೊಟ್ಟ. ಈ ನಾಸಿರುದ್ದೀನನೋ ಕುಡುಕ, ಇಲ್ಲಿಯ ಕಾಲಿಯಾದಹ ಮಹಲ್‍ನ ಜಲಕುಂಡಗಳಲ್ಲಿ ಕೂತು ತನ್ನ ಬೇಗೆಯನ್ನು ಪರಿಹರಿಸಿಕೊಳ್ಳುತ್ತಿದ್ದ.
  • ಇವನ ಅನಂತರ ಸುಲ್ತಾನ್ ಮಹಮ್ಮದ್‍ನ (ದ್ವಿತೀಯ) ಕಾಲದಲ್ಲಿ ಅರಾಜಕತೆ ವಿಪರೀತವಾಗಿದ್ದನ್ನು ನೋಡಿ ಮಾಲ್ವಾ ಪ್ರದೇಶವನ್ನು ಗುಜರಾತಿನ ಬಹದ್ದೂರ್ ಶಾ ಗೆದ್ದುಕೊಂಡ (1510ರ ಅನಂತರ). ಇವನಿಂದ ದೆಹಲಿಯ ಹುಮಾಯೂನ್‍ನ ಕೈಗೆ ಹೋಯಿತು. ಅವನಿಂದ ಶೇರ್ ಶಾ (1543) ಉಜ್ಜಯಿನಿಯನ್ನು ತನ್ನ ಅಧೀನದಲ್ಲಿ ತೆಗೆದುಕೊಂಡು ಇಲ್ಲಿ ಬಾಜಬಹದ್ದೂರ್‍ನನ್ನು ಸುಬಾದಾರನನ್ನಾಗಿ ನೇಮಿಸಿದ.
  • ಈತನು ಗಾಯಿಕಾ ರೂಪಮತಿಯನ್ನು ಪ್ರೇಮಿಸಿ, ಅವಳನ್ನು ತನ್ನ ರಾಣಿಯಾಗಿ ಮಾಂಡೂವಿನಲ್ಲಿ ನೆಲೆಸಿದ್ದು ಒಂದು ರೋಚಕವಾದ ಪ್ರಣಯ ಕಥೆ. 1562ರಲ್ಲಿ ಅಕ್ಬರನ ವಶಕ್ಕೆ ಬಂದ ಮೇಲೆ, 1564ರಲ್ಲಿ ಅವನು ಉಜ್ಜಯಿನಿಯ ಕಾಲಿಯಾದಹ ಮಹಲ್‍ನಲ್ಲಿ ಕೆಲ ದಿನ ನೆಲಸಿದ್ದ. ಜಹಾಂಗೀರನೂ ಉಜ್ಜಯಿನಿಗೆ ಬಂದು ಇಲ್ಲಿಯ ಯೋಗಿ ಜದರೂಪ್ನ ದರ್ಶನ ಪಡೆದಿದ್ದ. 1720ರಲ್ಲಿ ಮೊಹಮ್ಮದ್ ಷಾ ಜಯಪುರದ ಜಯಸಿಂಹನಿಗೆ ಉಜ್ಜಯಿನಿಯ ಸುಬಾ ಒಪ್ಪಿಸಿದ.
  • ಇವನ ಮೇಲೆ ಮರಾಠರ ಆಕ್ರಮಣ ಶುರುವಾಗಿ, 1737ರಲ್ಲಿ ಬಾಜೀರಾವ್ ಪೇಶ್ವೆ ಮಾಲ್ವಾದ ಶಾಸಕನಾದ. ಮುಸ್ಲಿಮರ ದಾಳಿಗಳಿಂದ ಶುರುವಾದ ಈ ಗೊಂದಲಮಯ ವಾತಾವರಣ ಕೊನೆಯಾಗಿ, ಮಾಲ್ವಾದಲ್ಲಿ ರಾಜಕತೆಯ ಮತ್ತು ನೆಮ್ಮದಿ ನೆಲೆಸಿದ್ದು 1741ರ ಅನಂತರ ಜಯಸಿಂಹ ಮತ್ತು ಮರಾಠರೊಂದಿಗೆ ಸಂಧಿಯಾಗಿ ಮಾಲ್ವವನ್ನು ಸಿಂಧಿಯಗೆ ಒಪ್ಪಿಸಿದ ಮೇಲೆಯೇ. ಸಿಂಧಿಯ ರಾಜ್ಯದ ಪ್ರಥಮ ಸಂಸ್ಥಾಪಕ ರಾಣೋಜಿ ಸಿಂಧಿಯ ಆಳಿದಾಗ ಅವನ ಮಂತ್ರಿ ರಾಮಚಂದ್ರ ರಾವ್ ಸುಕ್ತಂಕರ್ ಉಜ್ಜಯಿನಿಯ ಮಂದಿರಗಳ ಜೀರ್ಣೋದ್ಧಾರ ಮಾಡಿದ.
  • 1810ರಲ್ಲಿ, ದೌಲತ್ರಾವ್ ಸಿಂದಿಯನ ಕಾಲದಲ್ಲಿ, ರಾಜಧಾನಿಯನ್ನು ಉಜ್ಜಯಿನಿಯಿಂದ ಗ್ವಾಲಿಯರ್‍ಗೆ ವರ್ಗಾಯಿಸಲಾಯಿತು. ರಾಣೋಜಿಯ ಅನಂತರ ಮಹಾದಜಿ (1761-94), ದೌಲತ್ರಾವ್ (1794-1827), ದತ್ತಕ ಪುತ್ರ ಜನಕೋಜಿ (ತಾಯಿ ಬೈಜಾಬಾಯಿಯ ಆಡಳಿತ ದಲ್ಲಿ, 1827-1843), ದತ್ತಕ ಜಿಯಾಜಿರಾವ್ (1843-86), ಮಾಧವರಾವ್ (1886-1925) ಮತ್ತು ಕೊನೆಯಲ್ಲಿ ಜೀವಾಜಿರಾವ್ ಸಿಂಧಿಯಾ (1925-48) ಗ್ವಾಲಿಯರ್‍ನಿಂದ ಆಳಿದರು. 1948ರಲ್ಲಿ ಸೃಷ್ಟಿಯಾದ ಮಧ್ಯ ಭಾರತ ರಾಜ್ಯದಲ್ಲಿ ಗ್ವಾಲಿಯರ್ ವಿಲೀನವಾಯಿತು.

ವ್ಯಾಪಾರ

ಬದಲಾಯಿಸಿ
  • ವ್ಯಾಪಾರೋದ್ದಿಮೆಗಳಲ್ಲೂ ಉಜ್ಜಯಿನಿ ಹಿಂದಿನಿಂದಲೂ ಪ್ರಸಿದ್ಧಿಯಾಗಿತ್ತು. ಬೌದ್ಧ ಕಾಲದಲ್ಲಿ ಮಗಧದ ರಾಜಗೃಹದಿಂದ ಗೋದಾವರೀ ಹತ್ತಿರವಿರುವ ಪ್ರತಿಷ್ಠಾನದ (ಪೈಠನ್) ವರೆಗೂ ಇದ್ದ ದಕ್ಷಿಣಾಪಥವೆಂಬ ವ್ಯಾಪಾರ ಮಾರ್ಗದಲ್ಲಿ ಉಜ್ಜಯಿನಿ ಒಂದು ಪ್ರಮುಖ ತಂಗುದಾಣವಾಗಿತ್ತು. ಇಲ್ಲಿಂದ ಗೋಮೇಧಿಕ ಕಲ್ಲು, ಪಿಂಗಾಣಿ ಸಾಮಾನು, ನಾಜೂಕಾದ ಮಲ್ಮಲ್, ಒಳ್ಳೆಯ ಹತ್ತಿ ಮುಂತಾದ ಅನೇಕ ವಸ್ತುಗಳನ್ನು ರಫ್ತು ಮಾಡಲು ಬೇರೀಗಾಜ್ಗೆ (ಭರುಕಚ್ಛ) ಸಾಗಿಸಲಾಗುತ್ತಿತ್ತು.
  • ಇಲ್ಲಿ ಗೋಮೇಧಿಕದ ಗಣಿಗಳಿದ್ದುವು. 2ನೆಯ ಶತಮಾನದಿಂದ 4ನೆಯ ಶತಮಾನದವರೆಗೆ ಶಕ ರಾಜ್ಯಭಾರದಲ್ಲಿ, ಅದರಲ್ಲೂ ಚಷ್ಟ ಮತ್ತು ರುದ್ರದಾಮರ ಆಳ್ವಿಕೆಯ ಕಾಲದಲ್ಲಿ, ಉಜ್ಜಯಿನಿ ಒಂದು ಮುಖ್ಯ ವ್ಯಾಪಾರ ಕೇಂದ್ರವಾಗಿದ್ದುರಿಂದಲೇ ಇದನ್ನು ಸಾರ್ವಭೌಮ ಎಂದೂ ಕರೆಯಲಾಗಿದೆ. ಈಗ ಬಟ್ಟೆಯ ಗಿರಣಿಗಳೂ, ಕಾರ್ಖಾನೆಗಳೂ ಇಲ್ಲಿ ಸ್ಥಾಪಿತವಾಗಿವೆ.

ಧಾರ್ಮಿಕ ಕೇಂದ್ರವಾಗಿ ಉಜ್ಜಯಿನಿ

ಬದಲಾಯಿಸಿ
  • ಧಾರ್ಮಿಕವಾಗಿ ನೋಡಿದರೆ ಉಜ್ಜಯಿನಿಯಲ್ಲಿ ಹಿಂದೂ, ಬೌದ್ಧ, ಜೈನ ಹಾಗೂ ಮುಸ್ಲಿಂ ಧರ್ಮಗಳು ಸಾಕಷ್ಟು ಮಾರ್ಪಾಡಾಗುತ್ತಾ ಬೆಳೆದು ಬಂದವು. ಉಜ್ಜಯಿನಿಯನ್ನು ಚಂಡ ಪ್ರದ್ಯೋತನೆಂಬ ಪ್ರತಾಪಿ ರಾಜ (ಪ್ರ.ಶ.ಪು.ಸು. 6-5ನೆಯ ಶತಮಾನ) ಆಳುತ್ತಿದ್ದಾಗಲೇ ಬುದ್ಧನ ಪ್ರಸಿದ್ಧಿ ಇಲ್ಲಿಯವರೆಗೂ ಹರಡಿತ್ತು. ಬುದ್ಧನನ್ನು ತನ್ನ ರಾಜ್ಯಕ್ಕೆ ಕರೆತರಲು ರಾಜ ತನ್ನ ಪುರೋಹಿತನಾಗಿದ್ದ ಮಹಾಕಾತ್ಯಾಯನನನ್ನು ಕಳುಹಿಸಿದ. ಮಹಾಕಾತ್ಯಾಯನನೋ ಮೂರು ವೇದಗಳಲ್ಲಿ ಪಾರಂಗತ, ಮಹಾ ಪಂಡಿತ.
  • ಅವನು ಬುದ್ಧನಿಂದ ಪ್ರಭಾವಿತನಾಗಿ, ತನ್ನ ಏಳು ಸಂಗಾತಿಗಳೊಂದಿಗೆ ಬೌದ್ಧಮತಾವಲಂಬಿಯಾದ. ವಾಪಸ್ಸು ಬರುವಾಗ ಶ್ರೇಷ್ಠಿಯ ಮಗಳೊಬ್ಬಳು ತನ್ನ ನೀಳವಾದ ಕೂದಲನ್ನೇ ಮಾರಿ ಈ ಭಿಕ್ಷುಗಳಿಗೆ ಊಟ ನೀಡಿದ್ದಳು. ಈ ಕಥೆಯನ್ನು ಕೇಳಿ, ರಾಜ ಅವಳನ್ನು ಮದುವೆಯಾದ, ತಾನೂ ಬೌದ್ಧನಾದ. ಅವರ ಮಗಳೆ ಮುಂದೆ ಕಾವ್ಯಗಳಲ್ಲಿ ಪ್ರಸಿದ್ಧಿಯಾದ ವಾಸವದತ್ತಾ. ಮಹಾಕಾತ್ಯಾಯನ ಬುದ್ಧನ ನೆಚ್ಚಿನ ಶಿಷ್ಯನಾಗಿ, ಬೌದ್ಧಗ್ರಂಥಗಳ ಪ್ರಸಿದ್ಧ ಭಾಷ್ಯಕಾರನಾದ.
  • ಅಶೋಕನು ಉಜ್ಜಯಿನಿಯ ಪ್ರಶಾಸಕನಾಗಿದ್ದಾಗ ವಿದಿಶೆಯ ಕನ್ಯೆಯೊಬ್ಬಳನ್ನು ಮದುವೆಯಾಗಿ ಅವಳಿಂದ ಮಹೇಂದ್ರ ಮತ್ತು ಸಂಘಮಿತ್ರ ಎಂಬ ಮಕ್ಕಳನ್ನು ಪಡೆದ. ಕಾಲಾಂತರದಲ್ಲಿ ಬೌದ್ಧಧರ್ಮ ಪ್ರಚಾರಕ್ಕೆ ಇವರನ್ನೇ ಶ್ರೀಲಂಕಕ್ಕೆ ಕಳಿಸಲಾಯಿತು. ಉಜ್ಜಯಿನಿಯ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಪರಮಾರ್ಥ (499-569) ಬೌದ್ಧಧರ್ಮ ಪಾರಂಗತನಾಗಿ ಮತ ಪ್ರಚಾರಕ್ಕಾಗಿ ಚೀನ ದೇಶದ ಕ್ಯಾಂಟನ್ನಲ್ಲಿ 23ವರ್ಷ ಕಾಲವಿದ್ದ.
  • ಇವನು ಅನೇಕ ಸಂಸ್ಕೃತ ಗ್ರಂಥಗಳನ್ನು ಚೀನಿ ಭಾಷೆಗೆ ಅನುವಾದ ಮಾಡಿದನಲ್ಲದೆ ಬೌದ್ಧ ದಾರ್ಶನಿಕ ವಸುಬಂಧನ ಚರಿತ್ರೆಯನ್ನು ಚೀನಿ ಭಾಷೆಯಲ್ಲಿ ಬರೆದ. ಇವನು ಚೀನಿ ಭಾಷೆಗೆ ಅನುವಾದಿಸಿದ (ಸು.560) ಸಾಂಖ್ಯಕಾರಿಕ ವೃತ್ತಿಯು ಶಂಕರಾಚಾರ್ಯರ ಪರಮ ಗುರುಗಳಾದ ಗೌಡಪಾದರು ಬರೆದಿದ್ದುದೆಂದು ಹೇಳಲಾಗಿದೆ. ಅನಂತರ ಉಜ್ಜಯಿನಿಯ ಅನೇಕ ಬೌದ್ಧ ಭಿಕ್ಷುಗಳು ಮಧ್ಯ ಏಷ್ಯಾಕ್ಕೆ ಪ್ರಚಾರಕ್ಕಾಗಿ ಹೋಗಿದ್ದರು.
  • ಭಿಕ್ಷುಗಳಾದ ಲುಯಿಪ, ಜಂಟುಪ ಮೊದಲಾದವರು ಉಜ್ಜಯಿನಿಯಲ್ಲಿ ನೆಲೆಸಿದ್ದರು. ಉಜ್ಜಯಿನಿಯ ಸೇಠ್ನ ಮಗಳು ಈಸಿದಾಸಿ (ರಿಸೀದಾಸಿ)ಗೆ ತಂದೆಯು ಮಾಡಿದ ಮೂರು ಮದುವೆಗಳೂ ಸಫಲವಾಗಲಿಲ್ಲ. ಕೊನೆಗೆ ಈಕೆ ಸಂನ್ಯಾಸಿನಿಯಾಗಿ (ಥೇರಿಯಾಗಿ), ಸಕಲ ವಿದ್ಯಾ ಪಾರಂಗತಳಾಗಿ, ಬೌದ್ಧರಲ್ಲಿ ಒಬ್ಬ ಗಣನೀಯ ಥೇರಿಯಾಗಿ ಉಳಿದಳು. ಉಜ್ಜಯಿನಿಯ ವೇಶ್ಯೆ ಅಭಯಮಾತಾ, ತನ್ನ ಸಖಿ ಅಭಯಥೇರೀಯ ಜೊತೆ ಮಗ ಅಭಯನನ್ನು ಅನುಸರಿಸಿ ಬೌದ್ಧ ಸಂನ್ಯಾಸಿಯಾದ ಪ್ರಸಂಗವೂ ಬರುತ್ತದೆ.
  • 7ನೆಯ ಶತಮಾನದಲ್ಲಿ ಭಿಕ್ಷು ಧರ್ಮರಕ್ಷಿತ ಇಲ್ಲಿಂದ ಚೀನಕ್ಕೆ ಬುದ್ಧನ ಸಂದೇಶ ತಲುಪಿಸಲು ಹೋಗಿದ್ದ. ಹೀಗಾಗಿ, ಬೌದ್ಧಧರ್ಮದ ಮೊದಲ ನೆಲಗಟ್ಟು, ತಿಳಿವಳಿಕೆ ಹಾಗೂ ಪ್ರಚಾರ ಕಾರ್ಯಗಳಲ್ಲಿ ಉಜ್ಜಯಿನಿಯ ಪಾತ್ರ ಮಹತ್ತ್ವದ್ದಾಗಿದೆ. ಹೀನಯಾನ 7ನೆಯ ಶತಮಾನದ ವರೆಗೂ ಇಲ್ಲಿ ಜನಪ್ರಿಯವಾಗಿತ್ತು. ಮಹಾಯಾನವು ವಜ್ರಾಯಾನ, ಸಿದ್ಧ ಮತ್ತು ತಾಂತ್ರಿಕ ಶೈವ ಸಂಪ್ರದಾಯಗಳಲ್ಲಿ ವಿಲೀನವಾಗಿತ್ತು. ಬೌದ್ಧಧರ್ಮ 12ನೆಯ ಶತಮಾನದವರೆಗೂ ಇಲ್ಲಿ ಪ್ರಚಲಿತವಾಗಿತ್ತು.
  • 24ನೆಯ ತೀರ್ಥಂಕರ ಮಹಾವೀರ ಉಜ್ಜಯಿನಿಯಲ್ಲಿ ಕೆಲ ಸಮಯ ತಪಸ್ಸು ಮಾಡಿದ್ದ. ಬಟ್ಟೆಯನ್ನೇ ಉಡದ ನಿರ್ಗಂಥ ಜೈನಿಗಳು ಕ್ರಮೇಣ ಒಂದು ತುಂಡು ಬಟ್ಟೆ ಉಟ್ಟು ಅರ್ಧ ಫಲಕರೆನಿಸಿಕೊಂಡುದು ಉಜ್ಜಯಿನಿಯಲ್ಲಿ. ಅಶೋಕನ ಮೊಮ್ಮಗ ಸಂಪ್ರತಿ ಜೈನ ಧರ್ಮ ಪ್ರಚಾರಕ್ಕಾಗಿ ಸೈನಿಕರನ್ನು ವೇಷ ಮರೆಸಿ ಕಳಿಸುತ್ತಿದ್ದ.
  • ಜೈನ ಸಾಹಿತ್ಯದಲ್ಲಿ ಮಹತ್ವಪೂರ್ಣ ಕೃತಿ ಭದ್ರಬಾಹು ಚರಿತ್ರ. ಅದರಲ್ಲಿ ಆಚಾರ್ಯ ಭದ್ರಬಾಹು ಉಜ್ಜಯಿನಿಗೆ ಚಂದ್ರಗುಪ್ತನ (ಮೌರ್ಯ ಚಂದ್ರಗುಪ್ತನೊ ಅಥವಾ ದ್ವಿತೀಯ ಚಂದ್ರಗುಪ್ತನೊ?) ದರ್ಬಾರಿಗೆ ಬಂದಾಗ ರಾಜನು ಜೈನಧರ್ಮವನ್ನು ಸ್ವೀಕರಿಸಿದ ವಿಷಯ ಬಂದಿದೆ. ತೀವ್ರ ಬರಗಾಲದ ಮುನ್ಸೂಚನೆಯಿಂದ ಭದ್ರಬಾಹುವು ತನ್ನ ಐನೂರು ಮುನಿಗಳೊಂದಿಗೆ ಶ್ರವಣಬೆಳಗೊಳಕ್ಕೆ ಬಂದುದು, ಬೇಡವೆಂದರೂ ಅಲ್ಲಿಯ ಗಿರಿಗೃಹದಲ್ಲಿ ಚಂದ್ರಗುಪ್ತನೂ ವಾಸಿಸತೊಡಗಿ ಅಲ್ಲೇ ಪ್ರಾಣ ಬಿಟ್ಟುದೂ ಈ ಚರಿತ್ರೆಯಲ್ಲಿ ಬಂದಿದೆ.
  • ಮಾಣಿಕ್ಯನಾಥ, ನಯನಾಥ, ಪ್ರಭಾಚಂದ್ರ, ಅಮಿತಗಲಿ, ಅಶ್ತಾರ, ಶೋಭನ, ಧನಪಾಲ ಮುಂತಾದ ಜೈನ ಸಾಧುಗಳು ಮತ್ತು ಪಂಡಿತರು ಧಾರಾ ನಗರದಿಂದ ಉಜ್ಜಯಿನಿಗೆ ಆಗಾಗ್ಗೆ ಬರುತ್ತಿದ್ದರು. ಶ್ವೇತಾಂಬರ ಪಂಥ ಇಲ್ಲಿ ಹೆಚ್ಚು ಪ್ರಚಲಿತವಾಗಿತ್ತು, ಅದರಲ್ಲೂ 12-16ನೆಯ ಶತಮಾನದವರೆಗೆ. ಇಲ್ಲಿಯ ಜ್ಯೋತಿರ್ಲಿಂಗ, ಮಹಾಕಾಲೇಶ್ವರ, ಮಹಾಕಾಳೀ, ಶಿವನ ಅಂಬುಮಯಿ ಮೂರ್ತಿ ಅಥವಾ ಪಂಚ ಗಂಗೆಗಳಲ್ಲಿ ಒಂದೆನಿಸಿದ ಶಿಪ್ರಾ ನದಿ, ಕಾಲ ಭೈರವ ಇವುಗಳಿಂದಾಗಿ ಅತ್ಯಂತ ಪ್ರಾಚೀನ ಕಾಲದಿಂದಲೂ ಉಜ್ಜಯಿನಿ ಹಿಂದೂಗಳ ಒಂದು ಪುಣ್ಯಕ್ಷೇತ್ರವೆನಿಸಿದೆ. ರಾಜಾ ಭರ್ತಹರಿ ತನ್ನ ರಾಜ್ಯವನ್ನೇ ತೊರೆದು ಅವಧೂತನಾಗಿ ನವನಾಥರ ವಜ್ರಯಾನ ಸಿದ್ಧ ಪಂಥವನ್ನು ಸೇರಿದ್ದು ಉಜ್ಜಯಿನಿಯಲ್ಲೆ.
  • ಆದಿ ಶಂಕರಾಚಾರ್ಯರು (788-820) ಉಜ್ಜಯಿನಿಗೆ ಬಂದಿದ್ದರೆಂದೂ, ಇಲ್ಲಿಯ ದತ್ತ ಅಖಾಡಾದಲ್ಲಿರುವ ಲಿಂಗವನ್ನು ಅವರೇ ಪ್ರತಿಷ್ಠಾಪಿಸಿದರೆಂದು ಹೇಳುತ್ತಾರೆ. ಇಲ್ಲಿಯ ಪಾಶುಪತಾಚಾರ್ಯರನ್ನು ಸೋಲಿಸಿ ಆ ಮತದಲ್ಲಿನ ಬದಲಾವಣೆಗಳಿಗೆ ಆಚಾರ್ಯರೇ ಕಾರಣರಾದರೆಂದು ತಿಳಿದುಬರುತ್ತದೆ. ಮಾಧವಾಚಾರ್ಯನ (ವಿಜಯನಗರದ ಸಾಯಣಾಚಾರ್ಯನ ಸಹೋದರ) ಶಂಕರ ದಿಗ್ವಿಜಯದಲ್ಲಿ ಶಂಕರಾಚಾರ್ಯರು ಅವಂತಿ ದೇಶದಲ್ಲಿ ಭಟ್ಟ ಭಾಸ್ಕರನ ಅನಂತರ ಬಾಣ, ಮಯೂರ ಮತ್ತು ದಂಡಿಯನ್ನು ವಾಕ್ಯಾರ್ಥದಲ್ಲಿ ಸೋಲಿಸಿದ್ದರೆಂದು ನಿರೂಪಿಸಲಾಗಿದೆ. *ಪಾಶುಪತರ ನಂಬಿಕೆ ಮತ್ತು ಆಚರಣೆಗಳಲ್ಲಿನ ಉಗ್ರತೆ ಕಡಿಮೆಯಾದುದು ಅನೇಕ ಕಾರಣಗಳಿಂದ-ಇಲ್ಲಿಯ ಹರಸಿದ್ಧಮಾತೆಯನ್ನು 33ನೆಯ ಶಕ್ತಿಪೀಠವಾಗಿ ಪರಿಗಣಿಸಿದ್ದು, ಗಢಕಾಳಿಕಾವನ್ನು ಕಾಮಕಲಾ ಕಾಳೀ ಎಂದೂ ಮಹಾಕಾಲ ಭೈರವನ ಸಂಗಾತಿಯೆಂದೂ ಗುರುತಿಸಿದ್ದು, ಗಢದ ಹಿಂದೆ ವಿಂಧ್ಯವಾಸಿನಿಯನ್ನು (ನಗರ ಕೋಟ್ ರಾಣಿ) ಸ್ಥಾಪಿಸಿದ್ದು, ಇವು ಕೆಲ ಕಾರಣಗಳು. ಕಾಳಿದಾಸ ಹೇಳಿದಂತೆ, ಉಜ್ಜಯಿನಿ ಮಹಾಕಾಲ ಮತ್ತು ವಿಷ್ಣುವಿನ ಸಂಗಮ ಸ್ಥಳ.
  • ಇದೇ ವಿಷಯ ಮಹಾಕಾಲ ಮಂದಿರದ ಹಿಂದಿರುವ ನಾಗಬಂಧ ಶಾಸನದಲ್ಲಿ (11-12ನೆಯ ಶತಮಾನ) ಬಂದಿದೆ. ಅದರ ಪ್ರಕಾರ ವಿಷ್ಣುವಿನ ಹೃದಯ ಕಮಲದಂತಿರುವ ವಿಶ್ವದ ಮಧ್ಯದಲ್ಲಿ ಮಹಾಕಾಲ ಶಿವನು ನೆಲೆಸಿದ್ದಾನೆ. ಹಾಗೂ ಸ್ಕಾಂದ ಪುರಾಣದಲ್ಲಿ ಹೇಳಿರುವಂತೆ ಶಿಪ್ರಾ ನದಿಯಲ್ಲಿ ವೈಷ್ಣವ ಮತ್ತು ಮಹೇಶ್ವರ ಜ್ವರಗಳು ಒಂದಾಗಿರುವ ವಿಷಯವೂ ಇದನ್ನೇ ಪ್ರತಿನಿಧಿಸುತ್ತದೆ. ನಾಥ ಸಂಪ್ರದಾಯದ ಪ್ರವರ್ತಕನೂ ಗೋರಖನಾಥನ ಗುರುವೂ ಆದ ಮತ್ಸೇಂದ್ರನಾಥ ಇಲ್ಲಿದ್ದನೆಂದು ಹೇಳುತ್ತಾರೆ.
  • 16ನೆಯ ಶತಮಾನದಲ್ಲಿ ಪುಷ್ಟಿಮಾರ್ಗ ಪ್ರವರ್ತಕರಾದ ವಲ್ಲಭಾಚಾರ್ಯರು ಇಲ್ಲಿಯ ಸಾಂದೀಪನಿ ಆಶ್ರಮದಲ್ಲಿ ತಮ್ಮ ಬೈಠಕ್ಕನ್ನು ಸ್ಥಾಪಿಸಿದ್ದರು. ಶ್ರೀನಾಥ್ಜೀ ಕಿ ಹವೇಲಿ, ಗೋವರ್ಧನನಾಥ್ಜೀ ಕಿ ಹವೇಲೀ, ಗೋಪಾಲ ಮಂದಿರಗಳು ಇಲ್ಲಿಯ ವೈಷ್ಣವ ಸಂಪ್ರದಾಯದ ನೆಲೆಯನ್ನು ತೋರಿಸುತ್ತವೆ. ಇವೇ ಅಲ್ಲದೆ, ಈಚೆಗಿನ ಆರ್ಯ ಸಮಾಜ, ರಾಧಾಸ್ವಾಮಿ ಸತ್ಸಂಗ, ರಾಮಕೃಷ್ಣ ಮಿಷನ್, ಥಿಯೊಸಾಫಿಕಲ್ ಸೊಸೈಟಿ, ಅರವಿಂದ ಸೊಸೈಟಿ, ಮುಕ್ತಾನಂದ ಮಿಷನ್ ಮುಂತಾದ ಅನೇಕ ಧರ್ಮ ಸಂಸ್ಥೆಗಳು ಉಜ್ಜಯಿನಿಯಲ್ಲಿ ಕಾರ್ಯನಿರತವಾಗಿವೆ.
  • ಆದರೂ ಇಲ್ಲಿಯ ಮಹಾಕಾಲ, ಚೌರಾಸೀ (84) ಸಿದ್ಧ ಅಥವಾ ಯೋಗ ಲಿಂಗಗಳು, ಪಂಚಕ್ರೋಶಿ ಯಾತ್ರಾ, ನಾಗ ಪಂಚಮಿಯಲ್ಲಿ ಮಹಾಕಾಲ ಮಂದಿರದ 2ನೆಯ ಮಹಡಿಯ ಮೇಲಿರುವ ನಾಗ ಸಂಧ್ಯೇಶ್ವರನ (ಕೇವಲ ವರ್ಷಕ್ಕೊಮ್ಮೆ) ದರ್ಶನ, ಕುಂಭಮೇಳ, ಹರಸಿದ್ಧಿ ಮಾತಾ ಎಲ್ಲವೂ ಉಜ್ಜಯಿನಿಯನ್ನು ಒಂದು ಮುಖ್ಯ ಶೈವ ಕ್ಷೇತ್ರವಾಗಿಸುತ್ತವೆ. ಉಜ್ಜಯಿನಿಯಲ್ಲಿ ಮುಸ್ಲಿಮ್ ಧರ್ಮವೂ ಬೆಳೆದಿದೆ. ಬೋಹ್ರಾಗಳು ಮೊಗಲರ ಕಾಲದಿಂದಲೂ ಇಲ್ಲಿ ನೆಲಸತೊಡಗಿದರು.
  • ಸಂಗಮವರಿ ಕಲ್ಲಿನ ರೋಜಾ ಮಸೀದಿ ಇವರ ಕೇಂದ್ರವಾಗಿದೆ. ಹಿಂದೂಗಳ ನಂತರ ಮುಸ್ಲಿಮರದೇ (ಶಿಯಾ ಮತ್ತು ಸುನ್ನಿ) ಜನಸಂಖ್ಯೆಯಲ್ಲಿ ಅತಿ ದೊಡ್ಡ ಗುಂಪು. ಪುರಾತತ್ತ್ವ ಇಲಾಖೆಯ ಉತ್ಖನನಗಳ ಪ್ರಕಾರ ಉಜ್ಜಯಿನಿಯ ಗಢಕಾಳಿಕಾ ಪ್ರದೇಶದಲ್ಲಿ ಪ್ರ.ಶ.ಪು. 8ನೆಯ ಶತಮಾನದ ಅವಶೇಷಗಳು ದೊರಕಿವೆ.
  • ಐದು ಮೈಲಿ ಉದ್ದದ ದಿಬ್ಬವನ್ನು ಮರ ಮತ್ತು ಮಣ್ಣುಗಳಿಂದ ನದಿಯ ದಂಡೆಯಲ್ಲಿ ಕಟ್ಟಿ ಪ್ರವಾಹದಿಂದ ರಕ್ಷಣೆ ಪಡೆಯುತ್ತಿದ್ದರೆಂದು ಪ್ರ.ಶ. ಪು. 5ನೆಯ ಶತಮಾನದ ಅವಶೇಷಗಳಿಂದ ತಿಳಿದುಬರುತ್ತದೆ. ಕಲ್ಲು, ಇಟ್ಟಿಗೆಗಳು, ಚಕ್ರ ಮತ್ತು ಕೈಯಿಂದ ತಯಾರಿಸಿದ ಮಡಕೆಗಳು, ಬೀಸುವ ಕಲ್ಲು, ಕಬ್ಬಿಣ ಮತ್ತು ದಂತದ ಮೊನೆಗಳಿರುವ ಬಾಣ, ದಂತ ಮುದ್ರೆಗಳು (ಪ್ರ.ಶ.ಪು. 3-2ನೆಯ ಶತಮಾನ) ಉತ್ಖನನಗಳಲ್ಲಿ ಸಿಕ್ಕಿವೆ.

ಸಂಸ್ಕೃತಿ ಮತ್ತು ಸಾಹಿತ್ಯ

ಬದಲಾಯಿಸಿ
  • ಸಾಂಸ್ಕೃತಿಕವಾಗಿ ಉಜ್ಜಯಿನಿ ಎಂದಿನಿಂದಲೂ ಉಚ್ಛ್ರಾಯ ಸ್ಥಿತಿಯಲ್ಲೇ ಇದ್ದಿತೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಕಾಶಿ ಮತ್ತು ಉಜ್ಜಯಿನಿ ನಾಗರಿಕತೆಯ ತೊಟ್ಟಿಲಾಗಿದ್ದುವು ಎನ್ನಬಹುದು. ಮಹಾಭಾರತದ ಕಾಲದಲ್ಲಿ ಸಾಂದೀಪನಿ ಆಶ್ರಮ ದೂರದ ದ್ವಾರಕ ಮತ್ತು ಮಥುರಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿತ್ತು. ಮೊದಲೇ ಹೇಳಿದಂತೆ, ಬುದ್ಧನ ಕಾಲದಲ್ಲಿ ರಾಜ ಚಂಡಪ್ರದ್ಯೋತ ಪ್ರಖ್ಯಾತನಾಗಿದ್ದ.
  • ಅಶೋಕ ಇಲ್ಲಿ ಪ್ರಶಾಸಕನಾಗಿದ್ದ, ಮತ್ತು ಎರಡು ಸಾವಿರ ವರ್ಷಗಳಿಗೂ ಹಿಂದೆಯೇ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ದನ್ವಂತರಿಯೇ ಮೊದಲಾದ ನವರತ್ನಗಳು ಪ್ರಸಿದ್ಧರಾಗಿದ್ದರು. ಇವೆಲ್ಲದರಿಂದ ಉಜ್ಜಯಿನಿಯ ಸಾಂಸ್ಕೃತಿಕ ನೆಲೆಯನ್ನು ಕಾಣಬಹುದು. ಕಾಶಿ ಶಾಸ್ತ್ರೀಯವಿದ್ಯೆಗಳ ತವರಾಗಿದ್ದರೆ ಉಜ್ಜಯಿನಿ ಸೃಜನಾತ್ಮಕ ಕಲೆಗಳ ಬೀಡಾಗಿ ಬೆಳಗಿತು. ಉಜ್ಜಯಿನಿಯ ಅನೇಕ ಹೆಸರುಗಳನ್ನೇ ನೋಡಿದರೆ, ಅವುಗಳಲ್ಲಿ ಐತಿಹಾಸಿಕ ಮೂಲಕ್ಕಿಂತಲೂ ಕಾವ್ಯಾತ್ಮಕ ಭಾವನೆಗಳೇ ಹೆಚ್ಚು ಅನಿಸುತ್ತದೆ.
  • ಭಾಸ, ಶೂದ್ರಕ, ಕಾಳಿದಾಸ, ರಾಜಶೇಖರ, ಭಾರವಿ, ಸುಬಂಧು, ದಂಡಿ, ಬಾಣ, ಭವಭೂತಿ, ಭತೃಹರಿ, ರಾಜ ಭೋಜ, ಪದ್ಮಗುಪ್ತ-ಪರಿಮಲ್ ಮುಂತಾದ ದೇಶದ ಅತ್ಯಂತ ಪ್ರಮುಖ ಸಂಸ್ಕೃತ ಕವಿ/ನಾಟಕಕಾರರುಗಳೆಲ್ಲಾ ಉಜ್ಜಯಿನಿಯವರೇ. ಸಾಹಿತ್ಯ ಪ್ರಪಂಚದಲ್ಲಿ ರಾಮಾಯಣ ಮತ್ತು ಮಹಾಭಾರತಗಳ ನಂತರ ಗುಣಾಢ್ಯನ ಬೃಹತ್ ಕಥಾ ಸಾಕಷ್ಟು ಕಲಾತ್ಮಕವಿದ್ದಿರಬೇಕು.
  • ಈಗ ಬೃಹತ್ ಕಥಾ ಉಪಲಬ್ಧವಿಲ್ಲದಿದ್ದರೂ ಅದನ್ನೇ ಅನುಸರಿಸಿ ಬರೆದ ಕ್ಷೇಮೇಂದ್ರನ ಬೃಹತ್ ಕಥಾಸರಿತ್ಸಾಗರ, ಸೋಮದೇವನ ಕಥಾಸರಿತ್ಸಾಗರ ಮತ್ತು ಜಯರಥನ ಹರಿಚರಿತ ಚಿಂತಾಮಣಿ ಜನಪ್ರಿಯವಾಗಿವೆ. ಗುಣಾಢ್ಯ ಉಜ್ಜಯಿನಿಯ ರಾಜನಾಗಿದ್ದ ಎನ್ನುತ್ತಾರೆ. ಐತಿಹಾಸಿಕ ಸತ್ಯ ಏನೇ ಇರಲಿ, ಬೃಹತ್ ಕಥೆಯಲ್ಲಿ ಬಂದಿರುವ ಉಜ್ಜಯಿನಿಯ ಪ್ರಣಯ ಕಥೆಗಳ ವಿವರಣೆಯನ್ನು ಭಾಸನ ಸ್ವಪ್ನ ವಾಸವದತ್ತ, ಹರ್ಷನ ರತ್ನಾವಳಿ ಮುಂತಾದ ನಾಟಕಗಳಲ್ಲಿ ನೋಡಬಹುದು. ಭತೃಹರಿಯು ಮಾಲ್ವಾ ದೇಶದ ಗಣಾಧಿಪತಿಯಾಗಿ 12 ವರ್ಷ ಆಳಿದ.
  • ತಮ್ಮ ವಿಕ್ರಮಾದಿತ್ಯನ ಮೇಲೆ ಅಸಾಧ್ಯ ಪ್ರೀತಿ ವಿಶ್ವಾಸಗಳಿದ್ದರೂ, ಹೆಂಡತಿ ಪಿಂಗಳಾಳ ಮಾಯಾಬಲೆಗೆ ಸಿಕ್ಕು ತಮ್ಮನನ್ನೇ ದೂರ ಮಾಡಿದ. ಹೆಂಡತಿಯ ಅನೈತಿಕತೆ ಬೆಳಕಿಗೆ ಬಂದಮೇಲೆ, ವೈರಾಗ್ಯ ತಾಳಿ ವಿಕ್ರಮಾದಿತ್ಯನಿಗೆ ರಾಜ್ಯ ಒಪ್ಪಿಸಿ, ತಾನು ಸಂನ್ಯಾಸಿಯಾಗಿ ಉಜ್ಜಯಿನಿಯ ಹತ್ತಿರದ ‘ಭರ್ತಹರಿ ಗುಹೆ’ಯೊಳಗೆ ನೆಲಸಿದ. ಇವನ ಶೃಂಗಾರ ಶತಕ, ವೈರಾಗ್ಯ ಶತಕ ಮತ್ತು ನೀತಿ ಶತಕ ಮಧುರವೂ, ಅನುಭವಪೂರ್ಣವೂ, ಅಮೂಲ್ಯವೂ ಆಗಿವೆ. ಜನಪ್ರಿಯವಾಗಿರುವ ಪಂಚತಂತ್ರದ ಕಥೆಗಳು ಶುರುವಾಗುವುದೂ ಉಜ್ಜಯಿನಿಯಿಂದಲೇ.
  • ವೇತಾಲ ಪಂಚವಿಂಶತಿ, ದ್ವಾತ್ರಿಂಶತಿಪುತ್ತಲಿಕ ಮತ್ತು ಶುಕಸಪ್ತತಿ ಮೊದಲಾದ ಭ್ರಮಾಲೋಕದ ಅದ್ಭುತ ಕಥೆಗಳು ಹುಟ್ಟಿದ್ದೂ ಉಜ್ಜಯಿನಿಯಲ್ಲೇ. ಬಾಣಭಟ್ಟನ ಕಾದಂಬರಿ ಗದ್ಯಕಾವ್ಯದ ಉತ್ಕೃಷ್ಟ ಉದಾಹರಣೆ. ಇದು ಹಾಗೂ ಹರ್ಷಚರಿತ ಅಪೂರ್ಣವಾಗಿವೆ. ಬಾಣನಿಗೆ ಉಜ್ಜಯಿನಿಯ ಮೇಲಿದ್ದ ಪ್ರೇಮವನ್ನು ಅವನ ಕಾದಂಬರಿಯಲ್ಲಿ ನೋಡಬಹುದು. ಕಿರಾತಾರ್ಜುನೀಯ ಎಂಬ ಮಹಾಕಾವ್ಯ ಬರೆದ ಭಾರವಿ ಉಜ್ಜಯಿನಿಯವನೆಂದೂ, ಕಾಳಿದಾಸನ ಸಮಕಾಲೀನನೆಂದೂ ಹೇಳುತ್ತಾರೆ. ಅವನು 500-550ರಲ್ಲಿ ಇದ್ದನೆಂದು ಇನ್ನೊಂದು ಮತ.
  • ಕಾಳಿದಾಸ ಉಪಮೆಗೆ ಪ್ರಸಿದ್ಧಿಯಾದರೆ, ದಂಡಿಯು ಪದಲಾಲಿತ್ಯಕ್ಕೆ. ಇವನು ಶಂಕರಾಚಾರ್ಯರೊಡನೆ ವಾಕ್ಯಾರ್ಥ ಮಾಡಿದ್ದನೆಂದು ಹೇಳಿರುವುದರಿಂದ ಇವನ ಕಾಲ ಎಂಟನೆಯ ಶತಮಾನ ಎನ್ನಬಹುದು. ಆದರೆ ಇವನು ಭಾಮಹನಿಗಿಂತ (700) ಹಿಂದಿದ್ದನೆಂದೂ ಸಿದ್ಧಪಡಿಸುತ್ತಾರೆ. ಇವನ ದಶಕುಮಾರಚರಿತ ಮತ್ತು ಕಾವ್ಯಾದರ್ಶ ಎಂಬ ಎರಡು ಗ್ರಂಥಗಳು ಉಪಲಬ್ಧವಿವೆ. ಕಾವ್ಯಾದರ್ಶ ಒಂದು ಉತ್ತಮ ಅಲಂಕಾರ ಗ್ರಂಥವೆಂದು ಪರಿಗಣಿಸಲಾಗಿದೆ.
  • ಇವರುಗಳೇ ಅಲ್ಲದೆ, ಸುಬಂಧು (ವಿಕ್ರಮಾದಿತ್ಯನ ಸಮಕಾಲೀನ, ವಾಸವದತ್ತ ಎಂಬ ಗದ್ಯಕಾವ್ಯ), ಮಹಾಕವಿ ಧನಪಾಲ (ರಾಜಾ ಭೋಜನ ಅಥವಾ ರಾಜ ಮುಂಜನ ಆಸ್ಥಾನ ಪಂಡಿತ, ತಿಲಕಮಂಜರಿ ಕಾವ್ಯ, ಕೊನೆಗೆ ಶೋಭನ ಜೊತೆಗೆ ಜೈನಧರ್ಮಿಯಾದ), ಆರ್ಯಸೂರ್ (5ನೆಯ ಶತಮಾನ, ಬೋಧಿಸತ್ವನ ಪೂರ್ವಜನ್ಮದ ವೃತ್ತಾಂತ ತಿಳಿಸುವ ಜಾತಕಮಲ ಎಂಬ ಗ್ರಂಥ), ಮಯೂರ ಕವಿ (ಬಾಣಭಟ್ಟನ ಸಮಕಾಲೀನ, ಜಟಿಲ ಕಾವ್ಯ ಮಯೂರಾಷ್ಟಕ), ವಾಲ್ಮೀಕಿಯ ಅಪರಾವತಾರ ಎನಿಸದ ಭರ್ತಮೆಂಠ್ (6ನೆಯ ಶತಮಾನ, ಕಾವ್ಯ ಹಯಗ್ರೀವವಧ) , ಸಿದ್ಧಸೇನ್ ದಿವಾಕರ್ (ಜೈನ ಸಾಹಿತ್ಯಕಾರ) ಮುಂತಾದ ಅನೇಕ ಕವಿಗಳು ಉಜ್ಜಯಿನಿಯಲ್ಲಿ ಬಾಳಿ ಬೆಳಗಿದರು.
  • ಕವಿಗಳೇ ಅಲ್ಲದೆ, ಉಜ್ಜಯಿನಿಯಲ್ಲಿ ಪ್ರಕಾಂಡ ಪಂಡಿತರೂ ಅನೇಕರಿದ್ದರು. ಉವಟನು (10-11ನೇ ಶತಮಾನ) ಶುಕ್ಲ ಯಜುರ್ವೇದೀಯ ಮಾಧ್ಯಂದಿನ (ವಾಜಸನೇಯಿ) ಸಂಹಿತದ ಭಾಷ್ಯ ಬರೆದು ಸುಪ್ರಸಿದ್ಧನಾದ. ಇದೇ ಶಾಖೆಯ ಶತಪಥ ಬ್ರಾಹ್ಮಣದ ಮೇಲೆ ಇಲ್ಲಿಯ ಹರಿಸ್ವಾಮಿ (ವಿಕ್ರಮಾದಿತ್ಯನ ಕಾಲ) ಭಾಷ್ಯ ಬರೆದಿದ್ದ. ಇವನ ಗುರು ಸ್ಕಂಧಸ್ವಾಮಿಯು ಋಗ್ವೇದ ಸಂಹಿತೆಯ ಮೇಲೆ ಬರೆದ ಭಾಷ್ಯವೂ ಪಾಂಡಿತ್ಯ ಪೂರ್ಣವಾದುದು.
  • ಇವರುಗಳ ಜೊತೆಗೆ ಬೌದ್ಧ ಧರ್ಮದ ಮಹಾಕಾತ್ಯಾಯನನ ಭಾಷ್ಯ, ಧರ್ಮಪಾಲನ ಜೈನ ಧರ್ಮಸಾಹಿತ್ಯ ಮುಂತಾದವುಗಳನ್ನೂ ನೆನಪಿಸಿಕೊಳ್ಳಬಹುದು. ರಸಾಯನ ಶಾಸ್ತ್ರ ಪಂಡಿತ ವ್ಯಾಡಿ ಉಜ್ಜಯಿನಿಯವನು. ವಿಕ್ರಮಾದಿತ್ಯನ ರಾಜಸಭೆಯಲ್ಲಂತೂ ನವರತ್ನಗಳೇ ಇದ್ದರೆಂದು ಜನ ಜನಿತವಾಗಿದೆ. ಇವರುಗಳು- ಧನ್ವಂತರಿ (ಆಯುರ್ವೇದ), ಕ್ಷಪಣಕ (ಜೈನ ಯತಿ), ಅಮರಸಿಂಹ (ಅಮರಕೋಶದ ಕರ್ತೃ), ಶಂಕುಕ (ಶಿಕ್ಷಾಚಾರ್ಯ, ಅಲಂಕಾರ ಶಾಸ್ತ್ರ), ವೇತಾಲಭಟ್ಟ (ಮಂತ್ರವಿದ್ಯಾ ಪ್ರವೀಣ, ನೀತಿಜ್ಞ), ಘಟಖರ್ಪರ (ಧನಶಾಸ್ತ್ರ), ಕಾಳಿದಾಸ (ಕವಿ),ವರ ಹಾಮಿಹಿರ (ಜ್ಯೋತಿರ್ವಿದ್ಯಾ) ಮತ್ತು ವರರುಚಿ (ವ್ಯಾಕರಣ).
  • ವಿಕ್ರಮಾದಿತ್ಯನ ತರಹ ಚಂಡಪ್ರದ್ಯೋತ, ರುದ್ರದಾಮನ್, ವಾಕ್ಪತಿರಾಜ ಮುಂಜ, ರಾಜಾ ಭೋಜ ಮುಂತಾದ ಅನೇಕ ರಾಜರು ಈ ಎಲ್ಲಾ ಕವಿ, ಪಂಡಿತ ಮತ್ತು ವಿಶೇಷಜ್ಞರನ್ನು ಪ್ರೋತ್ಸಾಹಿಸಿ, ಗೌರವಿಸಿ ಬೆಳೆಸಿದರು. ಕೊನೆಗೆ ಉಜ್ಜಯಿನಿಯ ನೆಲದ ಗುಣವೇನು ಎಂಬ ಪ್ರಶ್ನೆ ಏಳುವುದು ಸಹಜ. ಗುಣಾಢ್ಯನ ಬೃಹತ್ ಕಥಾದಿಂದ ಹಿಡಿದು ಮುಂದೆ ಬಂದಿರುವ ಅನೇಕ ಕಾವ್ಯ, ಕಥೆ, ನಾಟಕಗಳಿಗೆ, ಉಜ್ಜಯಿನಿಯ ಸೃಜನಾತ್ಮಕತೆಗೆ ಏನಾದರೂ ಮೂಲಭೂತವಾದ ಸ್ಫೂರ್ತಿ-ನೆಲೆ ಇದೆಯೇ ಎಂಬ ಪ್ರಶ್ನೆ ಏಳುವುದು ಸಹಜ.
  • ಇಲ್ಲಿಯ ಪ್ರಣಯ ಕಥೆಗಳು ಇಲ್ಲಿಯ ಸಾಹಸ ಕಥೆಗಳನ್ನೂ ಮೀರಿಸಿ ರೋಚಕವಾಗಿವೆ. ಇಲ್ಲಿಯ ಸಾಹಸ ಕಥೆಗಳನ್ನು ಬದಿಗಿಡ ಬಹುದು, ಸ್ಥಳ ಪುರಾಣ ಇತಿಹಾಸಗಳನ್ನು ಜನ ಮರೆಯಬಹುದು. ಆದರೆ ಇಲ್ಲಿಯ ಪ್ರಣಯ ಕಥೆಗಳನ್ನು ಮರೆಯುವುದು ಸಾಧ್ಯವೇ ಇಲ್ಲ. ಉಜ್ಜಯಿನಿಯ ಪ್ರಣಯ ಕಥೆಗಳು ಒಂದೇ ಎರಡೇ. ಇಲ್ಲಿಯ ಮಹಾಕಾಲವನದ ಅಪ್ಸರ ತೀರ್ಥದಲ್ಲಿ ಊರ್ವಶಿಯೇ ಬಂದು ರಾಜ ಪುರೂರವನ ಕೈ ಹಿಡಿದಳು; ತನ್ನ ನೀಳವಾದ ಕೂದಲನ್ನೇ ಮಾರಿ ಭಿಕ್ಷುಗಳಿಗೆ ಊಟ ಹಾಕಿದ್ದನ್ನು ಕೇಳಿ ಮನಸೋತ ರಾಜ ಆಕೆಯನ್ನು ಪಟ್ಟದ ರಾಣಿ ಮಾಡಿಕೊಂಡ;
  • ಆ ಪ್ರಣಯದ ಕುವರಿ ವಾಸವದತ್ತ್ತಾ ರಾಜ ಉದಯನ ಜೊತೆ ಓಡಿದಳು; ಇದೇ ರೀತಿ ವೇಶ್ಯೆಯ ಮಗಳು ವಸಂತಸೇನಾ-ಚಾರುದತ್ತರ ಪ್ರಣಯ, ಪದ್ಮಾವತಿ-ಬಿಂಬಸಾರರ ಪ್ರಣಯ; ರಾಜ ಚಂಡಪ್ರದ್ಯೋತ ಹಾಗೂ ಅಶೋಕ ಇವರ ಪ್ರಣಯ ಸಂಗಾತಿಗಳಾದ ವಿದಿಶಾ, ತೆಲಪ್ರನಾಲಿಯ ವೈಶ್ಯ ಕನ್ಯೆಯರು; ರಾಜ ಗರ್ಧವಿಲ್ಲ ಪ್ರೇಮಕ್ಕಾಗಿ ರಾಜ್ಯವನ್ನೇ ಪಣವಾಗಿಡಲು ತಯಾರಾಗಿದ್ದುದು; ಪರಮಾರ ರಾಜ ಮುಂಜ ಚಾಳುಕ್ಯ ರಾಜಕುವರಿ ಮೃಣಾಲವತಿಯ ಪ್ರೇಮ ಬಲೆಯಲ್ಲಿ ಸಿಕ್ಕಿ ಮೋಸಹೋದದ್ದು;
  • ರಾಜ ಸಿಂಧುರಾಜ ಮತ್ತು ನಾಗ ಶಶಿಪ್ರಭಾ ಇವರ ಪ್ರಣಯ; ರಾಜ ಭರ್ತೃಹರಿ ತನ್ನ ರಾಣಿ ಪಿಂಗಳಾ ಜೊತೆಯ ಪ್ರೇಮೋನ್ಮಾದದಲ್ಲಿ ಮೋಸ ಹೋಗಿ ಸಂನ್ಯಾಸಿಯಾದದ್ದು; ಇವಲ್ಲದೆ ಇನ್ನೂ ಅನೇಕಾನೇಕ ಪ್ರಣಯ ಕಥೆಗಳ ರೋಮಾಂಚನದ ಸುಖ, ವಿರಹದ ವ್ಯಥೆಯಿಂದ ಪುಳಕಿತವಾದ ಗಾಳಿಯೂ ಉಸಿರುತ್ತದೆ. ಇವೆಲ್ಲಾ ಇತಿಹಾಸ ತೆಗೆದಿಟ್ಟಿರುವ ಕಥೆಗಳು. ಇನ್ನು ಜನಪದದಲ್ಲಿ ಹಾಡಿರುವುವೆಷ್ಟೋ, ಜನಮನದಲ್ಲಿ ಕಾಡಿರುವುವೆಷ್ಟೋ, ಹಾಗೇ ಬಾಡಿರುವುವೆಷ್ಟೋ!
  • ಮಾಲ್ವಾದ ವಾತಾವರಣವೋ, ಶಿಪ್ರಾ ನದಿಯ ಮೇಲೆ ಬೀಸುವ ಗಾಳಿಯೋ, ಅದರಲ್ಲಿ ಸೂಸಿರುವ ರಸಿಕತೆಯೋ, ಇಲ್ಲಿ ತೂರಿಬಂದ ಮೇಘದೂತನ ಕಪ್ಪು ಛಾಯೆಯೋ, ವಿರಹ ವೇದನೆಯೋ, ಹಗಲುಗನಸು ಗಳೋ, ಇನ್ನೇನೋ ಒಟ್ಟಿನಲ್ಲಿ ಇಲ್ಲಿಯ ಇತಿಹಾಸದಲ್ಲ್ಲಿ ಸಾಹಸವಿದೆ, ರೋಮಾಂಚನೆವಿದೆ, ಕಥೆಗಳಲ್ಲಿ ಪ್ರಣಯ ಕೇಳಿ ಇದೆ, ಇಲ್ಲಿಯ ಜಾನಪದದಲ್ಲಿ ಭಾವನೆಯಿದೆ, ಕಲ್ಪನೆಯಿದೆ, ಗೀತೆಯಲ್ಲಿ, ಮಾತಿನಲ್ಲ್ಲಿ ಮಾಧುರ್ಯವಿದೆ, ಕುಡಿನೋಟದಲ್ಲಿ ಮಾದಕತೆಯಿದೆ, ಚಂಚಲತೆಯಿದೆ.
  • ಎಲ್ಲವೂ ಉಜ್ಜಯಿನಿ ಎಂಬ ಪುಷ್ಪ ಕರಂಡಿಕಾದಲ್ಲಿ ಒಟ್ಟು ಸೇರಿ ರಸಿಕತೆಯ ನಿತ್ಯ ನೂತನ ಘಮವನ್ನು ಸೂಸುತ್ತಲೇ ಇರುತ್ತವೆ! ಮೇಘದೂತದಲ್ಲಿ ಕಾಳಿದಾಸನೇ ಹೇಳಿರುವಂತೆ “ಓ, ಮೇಘವೇ! ಉಜ್ಜಯಿನಿಯ ರಮಣಿಯರ ನೋಟದಿಂದ ಪುಳಕಿತನಾಗದಿರೆ, ಆ ಮಿಂಚಿನ ಸೆಳೆತಕೆ ನಿನ್ನೆದೆ ಮಿಡಿಯದಿರೆ, ನಿನ್ನ ಬಾಳೇ ಬರಿದು!”.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು

ಬದಲಾಯಿಸಿ