ಕ್ಷತ್ರಪರು

ಪಶ್ಚಿಮ ಮತ್ತು ಮಧ್ಯ ಭಾರತದ ಇಂಡೋ-ಸಿಥಿಯನ್ ಆಡಳಿತಗಾರರು (ಕ್ರಿಸ್ತ ಯುಗ 35-405)

ಕ್ಷತ್ರಪರು ಕ್ರಿಸ್ತಶಕದ ಪ್ರಾರಂಭದಲ್ಲಿ ಭಾರತದ ಪಶ್ಚಿಮ ಭಾಗದಲ್ಲಿ ಆಳಿದ ಶಕಮೂಲದ ರಾಜಮನೆತನಗಳು. ಕ್ಷತ್ರಪ ಎಂದರೆ ರಾಜ್ಯದ ರಕ್ಷಕನೆಂದರ್ಥ. ಕ್ರಿ.ಶ. ಸು. 70-80ರ ಕಾಲಕ್ಕೆ ಸೇರಿದ ಪೆರಿಪ್ಲಸ್ ಗ್ರಂಥದಲ್ಲಿ ಸೌರಾಷ್ಟ್ರ ಪ್ರದೇಶದಲ್ಲಿ ಮಂಬಾರಸನೆಂಬ ಶಕರಾಜ ಆಳುತ್ತಿದ್ದುದಾಗಿ ಹೇಳಲಾಗಿದೆ. ಉತ್ತರ ಕೊಂಕಣ ಪ್ರದೇಶದಲ್ಲಿ ಮಂಬಾರಸನ ಸಾಮಂತ ಸಂಡಾರೆಸ್ ಅಧಿಕಾರದಲ್ಲಿದ್ದ. 1ನೆಯ ಶತಮಾನದ ಅಂತ್ಯದಲ್ಲಿ ಕುಷಾಣರ ದೊರೆ 1ನೆಯ ಕನಿಷ್ಠ ಮಧ್ಯ-ಪಶ್ಚಿಮ ಭಾರತಗಳನ್ನು ಗೆದ್ದಾಗ ಮಂಬಾರಸ್ ಮನೆತನ ಕೊನೆಗೊಂಡಿರಬಹುದು. ಕುಷಾಣರ ಅಧೀನರಾಗಿ ಈ ಪ್ರದೇಶದಲ್ಲಿ ಆಳಿದ ಕ್ಷಹರಾತ ಕ್ಷತ್ರಪರು ಈ ವಂಶಕ್ಕೆ ಸೇರಿದವರೇ ಎಂಬ ಬಗ್ಗೆ ನಿಶ್ಚಿತವಾಗಿ ಏನೂ ತಿಳಿದುಬಂದಿಲ್ಲ. (ಸಿ.ವಿ.ಆರ್.)

ಕ್ಷಹರಾತ ಕ್ಷತ್ರಪರಲ್ಲಿ ಭೂಮಕ ಮೊದಲಿಗ, ಗುಜರಾತ್, ಕಾಠಿಯವಾಡ, ಮಾಲ್ವ ಮತ್ತು ಅಜ್ಮೀರ್ ಪ್ರದೇಶಗಳಲ್ಲಿ ಇವನ ನಾಣ್ಯಗಳು ದೊರಕಿವೆ. ಆ ಎಲ್ಲ ಪ್ರದೇಶಗಳೂ ಅವನ ವಶದಲ್ಲಿದ್ದಿರಬೇಕು. ಬ್ರಾಹ್ಮೀ ಮತ್ತು ಖರೋಪ್ಠೀ ಲಿಪಿಗಳನ್ನು ಅವರ ನಾಣ್ಯಗಳ ಮೇಲೆ ಬಳಸುತ್ತಿದ್ದರು. ಆಗಾಗ್ಗೆ ಗ್ರೀಕ್ ಲಿಪಿಯನ್ನೂ ಬಳಸುತ್ತಿದ್ದುದುಂಟು. 1ನೆಯ ಕನಿಷ್ಕ ಮರಣ ಹೊಂದಿದ ಅನಂತರ ಕ್ಷತ್ರಪರು ಬಹುಮಟ್ಟಿಗೆ ಸ್ವತಂತ್ರರಾದರು. ಭೂಮಕನ ತರುವಾಯ ಅದೇ ವಂಶದ ನಹಪಾನ ಕ್ಷತ್ರಪನಾಗಿ ಸ್ವಲ್ಪ ಕಾಲಾನಂತರ ಮಹಾಕ್ಷತ್ರಪನೆಂಬ ಬಿರುದು ಧüರಿಸಿದ. ಇವನ ಹಲವಾರು ನಾಣ್ಯಗಳಲ್ಲದೆ ಕೆಲವು ಶಾಸನಗಳು ದೊರಕಿವೆ. ಇವು ನಹಪಾನನ ಬಗ್ಗೆ ಮಾಹಿತಿಯನ್ನೊದಗಿಸುತ್ತವೆ. ಇವನ ಆಳ್ವಿಕೆಯ ಕಾಲ ನಿಶ್ಚಿತವಾಗಿ ಗೊತ್ತಿಲ್ಲ. ಈತ 119-125ರ ಸುಮಾರಿನಲ್ಲಿ ಅಧಿಕಾರದಲ್ಲಿದ್ದುದಾಗಿ ಇವನ ಶಾಸನಗಳಿಂದ ತಿಳಿದುಬರುತ್ತದೆ. ಉತ್ತರದಲ್ಲಿ ಅಜ್ಮೀರಿನಿಂದ ದಕ್ಷಿಣದಲ್ಲಿ ನಾಸಿಕ್ ಜಿಲ್ಲೆಯವರೆಗೂ ಇವನ ಅಧಿಕಾರ ವ್ಯಾಪಿಸಿತ್ತು. ಇವನ ಮಗಳಾದ ದಕ್ಷಮಿತ್ರಾಳ ಗಂಡ ರಿಷಭದತ್ತ ಮಹಾರಾಷ್ಟ್ರ ಪ್ರದೇಶದಲ್ಲಿ ಪ್ರಾಂತ್ಯಾಧಿಕಾರಿಯಾಗಿದ್ದ. ರಿಷಭದತ್ತ ಅನೇಕ ಹಿಂದೂ ಧರ್ಮಸಂಸ್ಥೆಗಳಿಗೂ ಬ್ರಾಹ್ಮಣರಿಗೂ ದಾನಗಳನ್ನು ನೀಡಿದುದಾಗಿ ಶಾಸನಗಳು ತಿಳಿಸುತ್ತವೆ. ಸಾತವಾಹನ ರಾಜ್ಯಕ್ಕೆ ಸೇರಿದ್ದ ಪುಣೆ ಮತ್ತು ನಾಸಿಕ ಜಿಲ್ಲೆಗಳನ್ನು ನಹಪಾನನ ಕಾಲದಲ್ಲಿ ಕ್ಷತ್ರಪರು ವಶಪಡಿಸಿಕೊಂಡಿದ್ದಿರಬೇಕು. 125ರ ಸುಮಾರಿನಲ್ಲಿ ಸಾತವಾಹನರಲ್ಲೆಲ್ಲ ಪ್ರಸಿದ್ಧನಾದ ಗೌತಮೀಪುತ್ರ ಸಾತಕರ್ಣಿ ನಹಪಾನನನ್ನು ಯುದ್ಧದಲ್ಲಿ ಸೋಲಿಸಿ ಕೊಂದುಹಾಕಿದಂತೆ ಕಾಣುತ್ತದೆ. ನಾಸಿಕ್ ಬಳಿಯ ಜೋಗಲತಂಬಿ ಎಂಬಲ್ಲಿ ದೊರಕಿದ ನಾಣ್ಯಗಳ ರಾಶಿಯಲ್ಲಿ ಗೌತಮೀಪುತ್ರ ಈ ವಿಜಯಾನಂತರ ಅದರ ಕುರುಹಾಗಿ ನಹಪಾನನ ನಾಣ್ಯಗಳ ಮೇಲೆ ತನ್ನ ಮುದ್ರೆಯನ್ನು ಅಚ್ಚು ಹಾಕಿಸಿ, ಆ ನಾಣ್ಯಗಳನ್ನು ಬಳಕೆಗೆ ತಂದುದಕ್ಕೆ ಸಾಕ್ಷ್ಯ ದೊರಕಿದೆ. ಆದರೂ ಸ್ವಲ್ಪ ಕಾಲದವರೆಗೂ ಕ್ಷಹರಾತರು ಗುಜರಾತ್ ಪ್ರದೇಶದಲ್ಲಿ ತಮ್ಮ ಆಳ್ವಿಕೆಯನ್ನು ಮುಂದುವರಿಸಿರಬಹುದು.

ಆದರೆ ಮಾಲ್ವ-ಉಜ್ವಯಿನಿ ಪ್ರದೇಶದಲ್ಲಿ ಕ್ಷತ್ರಪ ವಂಶದ ಕಾರ್ದಮಕ ಮನೆತನದವರು 2ನೆಯ ಶತಮಾನದ ಮೊದಲ ಭಾಗದಲ್ಲಿ ಅಧಿಕಾರಕ್ಕೆ ಬಂದರು. ಇವರ ಮೊದಲ ಕ್ಷತ್ರಪ ಚಷ್ಟನ. ಅನಂತರ ಇವನಿಗೆ ಮಹಾಕ್ಷತ್ರಪ ಪದವಿ ದೊರಕಿತು. ಇವನ ತಂದೆ ಸಾಮೊತಿಕನಿಗೆ ಯಾವ ಅಧಿಕಾರವೂ ಇದ್ದಂತೆ ಕಾಣ ಬಂದಿಲ್ಲ. ಚಷ್ಟನ ಮೊದಲಿಗೆ ತನ್ನ ಹಿರಿಯ ಮಗ ಜನದಾಮನನನ್ನೂ ಅವನ ಮರಣಾನಂತರ ಎರಡನೆಯ ಮಗ ರುದ್ರದಾಮನನನ್ನೂ ತನಗೆ ಸಹಾಯಕ್ಕಾಗಿ ಕ್ಷತ್ರಪನಾಗಿ ಆಯ್ದುಕೊಂಡಿದ್ದ. ಚಷ್ಟನ 130-31ರಲ್ಲಿ ಮಹಾಕ್ಷತ್ರಪನೂ ರುದ್ರದಾಮನ್ ಕ್ಷತ್ರಪನೂ ಆಗಿದ್ದುದಾಗಿ ಅಂಧೌ ಶಾಸನದಿಂದ ತಿಳಿಯುತ್ತದೆ.

ಚಷ್ಟನ-ರುದ್ರದಾಮರು ಸಾತವಾಹನ ದೊರೆಯನ್ನು ಸೋಲಿಸಿ, ಸಾತವಾಹನ ರಾಜ್ಯದ ಉತ್ತರ ಭಾಗಗಳನ್ನು ವಶಪಡಿಸಿಕೊಂಡರು. ಆ ವೇಳೆಗೆ ಉಜ್ಜಯಿನಿ ಅವರ ರಾಜಧಾನಿಯಾಗಿತ್ತು. ಗೌತಮೀಪುತ್ರನ ಮಗ ವಾಶಿಷ್ಠೀಪುತ್ರನಿಗೆ ಚಷ್ಟನ ತನ್ನ ಮಗಳನ್ನು ಕೊಟ್ಟು ವಿವಾಹಮಾಡಿದ. ಚಷ್ಟನನ ತರುವಾಯ 130-131ರ ಸುಮಾರಿನಲ್ಲಿ ರುದ್ರದಾಮನ್ ಮಹಾಕ್ಷತ್ರಪನಾದ. ಕ್ಷತ್ರಪವಂಶದಲ್ಲೇ ಪ್ರಸಿದ್ಧನಾದ ಇವನ ಬಗ್ಗೆ ನಾಣ್ಯ ವiತ್ತು ಶಾಸನಗಳು ಹೆಚ್ಚಿನ ಮಾಹಿತಿಗಳನ್ನೊದಗಿಸುತ್ತವೆ. ಚಂದ್ರಗುಪ್ತ ಮೌರ್ಯನಿಂದ ನಿರ್ಮಿತವಾಗಿದ್ದ ಸುದರ್ಶನ ತಟಾಕ ಒಡೆದುಹೋದಾಗ, ರುದ್ರದಾಮನ್ ಪ್ರಜೆಗಳ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸದೆ ತನ್ನ ಬೊಕ್ಕಸದ ಹಣದಿಂದ ರಿಪೇರಿ ಮಾಡಿಸಿದುದಾಗಿ 150-151ರ ಗಿರ್ನಾರಿನ ಸಂಸ್ಕøತ ಶಾಸನ ತಿಳಿಸುತ್ತದೆ. ಇವನು ಪಂಜಾಬಿನಿಂದ ಪುಣೆಯವರೆಗೆ ಪಶ್ಚಿಮ ಭಾರತವನ್ನೆಲ್ಲ ಗೆದ್ದುದಲ್ಲದೆ ದಕ್ಷಿಣಾಪಥೇಶ್ವರನಾದ ಸಾತಕರ್ಣಿಯನ್ನು ಸಂಪೂರ್ಣವಾಗಿ ಸೋಲಿಸಿದುದಾಗಿ ಹೇಳಿಕೊಂಡಿದ್ದಾನೆ. ರಣಪರಾಕ್ರಮಿಯಾಗಿದ್ದುದಲ್ಲದೆ ಸಂಸ್ಕøತ ಸಾಹಿತ್ಯಕ್ಕೆ ಆಶ್ರಯದಾತನೂ ಆಗಿದ್ದು ಸ್ವತಃ ಗದ್ಯಪದ್ಯ ಕೃತಿಗಳನ್ನು ರಚಿಸಿದುದಾಗಿ ತಿಳಿದು ಬರುತ್ತದೆ

ರುದ್ರದಾಮನನ ಅನಂತರ ಕೆಲವು ದುರ್ಬಲ ಕ್ಷತ್ರಪರು ಅಧಿಕಾರಕ್ಕೆ ಬಂದರೂ ಕ್ಷತ್ರಪರ ಪ್ರಾಬಲ್ಯ ಕ್ಷೀಣಗೊಂಡಿತು. ಇವರಲ್ಲಿ 1ನೆಯ ರುದ್ರಸಿಂಹ (ಸು.180-197) ಪ್ರಮುಖನಾಗಿದ್ದ. ಈ ವಂಶದ ಕೊನೆಯ ಕ್ಷತ್ರಪನಾದ ವಿಶ್ವಸೇನನ (293-305) ಬಗ್ಗೆ ಹೆಚ್ಚಿನ ವಿವರಗಳು ದೊರಕಿಲ್ಲ. ಪರ್ಷಿಯದ ಸಸ್ಸೇನಿಯನ್ ಪ್ರಭುಗಳಿಂದ ಇವರ ಆಡಳಿತ ಕೊನೆಗೊಂಡಿರಬಹುದು. 304-305ರಲ್ಲಿದ್ದ ಕ್ಷತ್ರಪ 2ನೆಯ ರುದ್ರಸಿಂಹನ ಬಗ್ಗೆ ಮಾಹಿತಿಗಳು ದೊರಕಿದರೂ ಅವನು ಚಷ್ಟನನ ವಂಶಸ್ಥನೆಂದು ಹೇಳಲು ಆಧಾರಗಳಿಲ್ಲ. ಕ್ರಮೇಣ ಕ್ಷತ್ರಪರು ದುರ್ಬಲರಾಗಿ ಅವರ ಪ್ರದೇಶವೆಲ್ಲ ಗುಪ್ತ ಸಾಮ್ರಾಜ್ಯದಲ್ಲಿ ಸೇರಿಹೋಯಿತು.

ಕ್ಷತ್ರಪರು ಪರಕೀಯರಾದರೂ ಭಾರತದ ರಾಜಕೀಯದಲ್ಲಿ ಬೆರೆತು ಭಾರತೀಯ ಸಂಸ್ಕøತಿಯನ್ನು ಅಳವಡಿಸಿಕೊಂಡು ಅದರಲ್ಲೇ ಲೀನವಾದರು. ಕ್ಷತ್ರಪರ ನಾಣ್ಯಗಳು: ಕ್ಷತ್ರಪರ ನಾಣ್ಯಗಳಲ್ಲಿ ಬೆಳ್ಳಿಯವೇ ಪ್ರಧಾನವಾಗಿದ್ದರೂ ಕೆಲವು ರಾಜರು ಮಿಶ್ರಲೋಹದ ನಾಣ್ಯಗಳನ್ನೂ ಹಾಕಿಸಿದ್ದಾರೆ. ಇವಲ್ಲದೆ ತಾಮ್ರದ ಕೆಲವು ನಾಣ್ಯಗಳೂ ಸೀಸದ ನಾಣ್ಯಗಳೂ ದೊರೆತಿವೆ.

ಇವರ ಕಾರ್ಷಪಣಗಳೆಂಬ ಬೆಳ್ಳಿ ನಾಣ್ಯಗಳು ತೂಕ, ರಚನೆ, ಆಕಾರ ಎಲ್ಲದರಲ್ಲಿಯೂ ಇಂಡೋಗ್ರೀಕರ ದ್ರಮ್ಮಗಳನ್ನೇ ಹೋಲುತ್ತವೆ. ಅಲ್ಲದೆ ನಾಣ್ಯದ ಮುಂಭಾಗದಲ್ಲಿ ರಾಜನ ತಲೆಯ ಪಡಿಯಚ್ಚು ಹಾಕಿಸುವ ಪದ್ಧತಿಯನ್ನು ಕ್ಷತ್ರಪರು ರೋಮನರ ದೀನಾರಗಳನ್ನು ನೋಡಿ ಅನುಸರಿಸಿರಬಹುದು. ನಾಣ್ಯದ ಹಿಂಭಾದಲ್ಲಿ ನಹಪಾಣನ ಕಾಲದಲ್ಲಿ ಬಾಣ, ಚಕ್ರ, ವಜ್ರಾಯುಧಗಳಿದ್ದುವು. ಚಷ್ಟನನ ಕಾಲದಲ್ಲಿ ಬಾಲಚಂದ್ರ ಮತ್ತು ಸೂರ್ಯ ಅಥವಾ ನಕ್ಷತ್ರಗಳೂ ಅನಂತರ ಇವುಗಳ ನಡುವೆ ಬರುವಂತೆ ಚೈತ್ಯವೂ ಇದ್ದುವು. ರಾಜನ ಮತ್ತು ಆತನ ತಂದೆಯ ಹೆಸರುಗಳನ್ನು ತಿಳಿಸುವ ಅಂಕನ ಮೊದಲು ಬ್ರಾಹ್ಮಿ, ಖರೋಷ್ಠಿ ಮತ್ತು ಗ್ರೀಕ್-ರೋಮನ್ ಲಿಪಿಗಳಲ್ಲಿರುತ್ತಿದ್ದುವು. ಕ್ರಮೇಣ ಖರೋಷ್ಠಿ ಲಿಪಿ ಬಿಟ್ಟು ಹೋಗಿ ಬ್ರಾಹ್ಮಿಯೊಂದೇ ಉಳಿದುಕೊಂಡಿತು; ಮುಂಭಾಗದಲ್ಲಿ ರಾಜನ ತಲೆಯ ಸುತ್ತಲೂ ಇರುತ್ತಿದ್ದ ಗ್ರೀಕ್-ರೋಮನ್ ಲಿಪಿ ಅರ್ಥವಿಲ್ಲದ ಬರಿಯ ಅಲಂಕಾರವಾಗಿ ಉಳಿದುಕೊಂಡಿತು. ನಾಣ್ಯಗಳಲ್ಲಿ ಕಾಲವನ್ನು ಕೊಟ್ಟಿರುವುದರಿಂದಲೂ ರಾಜನ ಮತ್ತು ಆತನ ತಂದೆಯ ಹೆಸರುಗಳು ಇರುವುದರಿಂದಲೂ ಕ್ಷತ್ರಪರಾಜರ ಪರಂಪರೆಯನ್ನೂ ಪ್ರತಿಯೊಬ್ಬ ರಾಜನ ಆಳ್ವಿಕೆಯ ಕಾಲವನ್ನೂ ನಿಖರವಾಗಿ ಗೊತ್ತುಪಡಿಸಲು ಸಾಧ್ಯವಾಗಿದೆ.

ಮಿಶ್ರಲೋಹದ ನಾಣ್ಯಗಳು ಮಾಳವ ಪ್ರಾಂತ್ಯದಲ್ಲಿ ಉಪಯೋಗದಲ್ಲಿದ್ದಂತೆ ಕಂಡು ಬರುತ್ತದೆ. ಈ ನಾಣ್ಯಗಳ ಹಿಂಭಾಗದಲ್ಲಿ ಬೆಳ್ಳಿ ನಾಣ್ಯಗಳಲ್ಲಿರುವಂತೆ ಚೈತ್ಯ, ಚಂದ್ರ, ಸೂರ್ಯರೂ ಬ್ರಾಹ್ಮಿ ಲಿಪಿಯ ಅಂಕನವೂ ಇದ್ದರೂ ಮುಂಭಾಗದಲ್ಲಿ ರಾಜನ ತಲೆಯ ಬದಲು ಗೂಳಿಯೋ ಆನೆಯೋ ಇರುತ್ತದೆ. (ಎಂ.ಎಚ್.)