ಆವರ್ತಮಾರುತ ವಾಯುಮಂಡಲದಲ್ಲಿ ಉಷ್ಣತೆ ಹೆಚ್ಚಾಗಿರುವ ಪ್ರದೇಶದಲ್ಲಿ ಕಡಿಮೆ ಒತ್ತಡವಿರುವ ಒಂದು ಕೇಂದ್ರದೆಡೆಗೆ ಎಲ್ಲ ಕಡೆಗಳಿಂದಲೂ ನುಗ್ಗುವ ಗಾಳಿ (Cyclone); ಸುಳಿಮಾರುತವೆಂದೂ, ಚಕ್ರವಾತವೆಂದೂ ಕರೆಯುತ್ತಾರೆ. ಪಶ್ಚಿಮ ಸಮುದ್ರ ಭಾಗಗಳ ಉತ್ತರಾರ್ಧಗೋಳದಲ್ಲಿ ಬೇಸಗೆಯಲ್ಲೂ ದಕ್ಷಿಣಾರ್ಧಗೋಳದಲ್ಲಿ ಚಳಿಗಾಲ ಮತ್ತು ವಸಂತದಲ್ಲೂ ಕಾಣಿಸಿಕೊಳ್ಳುವ ಇಂಥ ಮಾರುತವನ್ನು ಚಂಡಮಾರುತವೆಂದೂ (Tropical cyclone) ತುಫಾನು (ಟೈಫೋನ್) ಎಂದೂ ಕರೆಯುತ್ತಾರೆ. ಹರಿಕೇನ್‍ಗಿಂತ ಇನ್ನೂ ಬಿರುಸಾದ ಆದರೆ ಅಷ್ಟು ಹೊತ್ತು ಬೀಸದ ಒಂದು ಸುಂಟರಗಾಳಿ ಇದೆ. ಅದನ್ನು ಟಾರ್ನೆಡೊ ಎನ್ನುತ್ತಾರೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಇದನ್ನು ಗುರುತಿಸಿದ್ದಾರೆ. ಇದರ ವ್ಯಾಸ ಕೆಲವು ಅಡಿಗಳಿಂದ ಹಿಡಿದು ಹಲವು ಮೈಲಿಗಳವರೆಗೂ ಇರಬಹುದು.ಪೂರ್ಣ ಚಂದ್ರ ಒಂದು ಚಕ್ಕ ದಿನ ವೇಗ 200-300 ಕಿ.ಮೀ. ಸುಳಿ ಸುಳಿಯಾಗಿ ಎದ್ದು ಬೀಳುವ ಈ ಗಾಳಿ ಬಹಳ ಅನಾಹುತಗಳಿಗೆ ಕಾರಣವಾಗಿದೆ. ವಾಯುಮಂಡಲದ ಕೆಳಪದರಗಳಲ್ಲಿ ಕಡಿಮೆ ಒತ್ತಡವಿರುವ ಕಡೆ ಇದು ಸಾಮಾನ್ಯವಾಗಿ ಉದ್ಭವಿಸುತ್ತದೆ. ಕಡಿಮೆ ಒತ್ತಡದ ಪ್ರದೇಶ ಕೇಂದ್ರದಲ್ಲಿದ್ದು ಹೆಚ್ಚು ಒತ್ತಡದ ಗಾಳಿ ಅದನ್ನು ಸುತ್ತುವರಿದಿರುತ್ತದೆ. ಈ ಹೆಚ್ಚು ಒತ್ತಡದ ಗಾಳಿ ಕೇಂದ್ರದೆಡೆಗೆ ನುಗ್ಗಿ ಫೆರ್ಲ್‍ನ ನಿಯಮದ ಪ್ರಕಾರ ಅಪಸರಣಗೊಳ್ಳುತ್ತದೆ. ಆದ್ದರಿಂದ ಆವರ್ತಮಾರುತ ಭೂಮಿಯ ಸುತ್ತುವಿಕೆಗನುಗುಣವಾಗಿ ಉತ್ತರಾರ್ಧಗೋಳದಲ್ಲಿ ಅಪ್ರದಕ್ಷಿಣವಾಗಿಯೂ ದಕ್ಷಿಣಾರ್ಧಗೋಳದಲ್ಲಿ ಪ್ರದಕ್ಷಿಣ ರೂಪವಾಗಿಯೂ ಸುತ್ತುತ್ತವೆ.

ಸೆಪ್ಡೆಂಬರ್ ೪ ೨೦೦೩ ರಂದು ಐಸ್‍ಲ್ಯಾಂಡಿನ ಸಮೀಪದಲ್ಲಿ ಕಂಡುಬಂದ ಆವರ್ತಮಾರುತ
ಕೆನಡಾದಲ್ಲಿ ೨೦೦೭ರಲ್ಲಿ ಕಂಡುಬಂದ ಸುಂಟರಗಾಳಿ
ಚಂಡಮಾರುತ
ತುಫಾನು

ಆವರ್ತಮಾರುತ ಉಂಟಾಗಲು ಕಾರಣಗಳುಸಂಪಾದಿಸಿ

ಆವರ್ತಮಾರುತ ಉಷ್ಣವಲಯದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೇಸಗೆಯಲ್ಲಿ ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತದೆ. ಇದರ ಕಾರಣ ಸಮುದ್ರಗಳ ಮೇಲ್ಮೈಯಲ್ಲಿ ಆಗ ಉಂಟಾಗುವ ಶಾಖವೈಪರೀತ್ಯಗಳು. ಆವರ್ತಮಾರುತದ ವ್ಯಾಸ ಚಿಕ್ಕದಾಗಿದ್ದು ವಾಯುಮಂಡಲದಲ್ಲಿ ಕಂಬದೋಪಾದಿಯಲ್ಲಿ ಬಹಳ ಎತ್ತರದವರೆಗೂ ಪಸರಿಸುತ್ತದೆ. ಉಷ್ಣವಲಯದಲ್ಲಿ ಈ ಮಾರುತ ಬಹಳ ಬಿರುಸು ಮತ್ತು ವಿನಾಶಕಾರಿ. ಇದರ ಚಲನೆ ಸಾಮಾನ್ಯವಾಗಿ ಪಶ್ಚಿಮದ ಕಡೆಗೆ. ಇದರ ಅಡ್ಡಳತೆ ೮೦-೩೦೦ ಕಿ.ಮೀ.ವರೆಗೆ ಇರುತ್ತದೆ. ಒತ್ತಡ ಕೇಂದ್ರದಲ್ಲಿ ಅತ್ಯಂತ ಕಡಿಮೆ, ಹೊರಭಾಗಕ್ಕೆ ಹೋದಂತೆಲ್ಲ ಬಲು ಹೆಚ್ಚು. ಇದರ ವೇಗ ಗಂಟೆಗೆ ೧೦೦ ಕಿ.ಮೀ. ಗೂ ಹೆಚ್ಚು. ಸಮುದ್ರ ಪ್ರದೇಶಗಳ ಮೇಲೆ ಬಹಳ ಬಿರುಸಾಗಿದ್ದು ಭೂಪ್ರದೇಶವನ್ನು ತಲುಪಿದಂತೆಲ್ಲ ದುರ್ಬಲವಾಗುತ್ತದೆ. ಇದಕ್ಕೆ ಕಾರಣ, ಈ ಮಾರುತ ಭೂಮಿಯನ್ನು ತಲುಪುವ ವೇಳೆಗೆ ತೇವಾಂಶ ಹೋಗಿ ಭೂಮಿಯ ಮೇಲ್ಮೈಯೊಡನೆ ಘರ್ಷಣೆ ಹೊಂದುವುದು.
ಆವರ್ತಮಾರುತದ ಕೇಂದ್ರ ಪ್ರದೇಶದಲ್ಲಿ ಯಾವಾಗಲೂ ಶಾಂತಸ್ಥಿತಿಯಿರುತ್ತದೆ. ಈ ಶಾಂತಪ್ರದೇಶವನ್ನು ಆವರ್ತಮಾರುತದ ಕಣ್ಣು (ಐ ಆಫ್ ಸೈಕ್ಲೋನ್) ಎಂದು ಕರೆಯುತ್ತಾರೆ. ಇದನ್ನು ಹೆಚ್ಚು ಒತ್ತಡದ ಪ್ರಬಲ ಗಾಳಿ ಕೋಟೆಯಂತೆ ಸುತ್ತುವರಿದಿರುತ್ತದೆ. ಈ ಶಾಂತಪ್ರದೇಶದಲ್ಲಿ ಹವೆ ಸ್ವಚ್ಛವಾಗಿದ್ದು ಉಳಿದ ಕಡೆಗಳಲ್ಲಿ ಮೋಡಕವಿದ ಹಾಗೂ ಮಳೆಯಿಂದ ಕೂಡಿದ ವಾತಾವರಣವಿರುತ್ತದೆ. ಆವರ್ತ ಮಾರುತದ ಆಗಮನಕ್ಕೆ ಮೊದಲು ಹವೆ ಸ್ವಚ್ಛವಾಗಿ ಹಿತಕರವಾಗಿರುತ್ತದೆ. ಅನಂತರ ದಟ್ಟವಾದ ಮೋಡಕವಿದ ವಾತಾವರಣವುಂಟಾಗಿ ಧಾರಾಕಾರವಾಗಿ ಮಳೆಯಾಗುತ್ತದೆ. ಇಂಥ ಆವರ್ತಮಾರುತ ಪ್ರಪಂಚದ ವಿವಿಧ ಭಾಗಗಳಲ್ಲಿ ಗೋಚರಿಸಿ, ಅಧಿಕವಾಗಿ ಮಳೆ ಸುರಿಸುತ್ತವೆ. ಸಮುದ್ರದಲ್ಲಿರುವ ದ್ವೀಪಗಳಿಗೂ ಭೂಖಂಡಗಳ ತೀರಪ್ರದೇಶಗಳಿಗೂ ಉಷ್ಣವಲಯದ ಈ ಮಾರುತ ವಿನಾಶಕಾರಿಗಳಾಗಿವೆ. ಸಾಮಾನ್ಯವಾಗಿ ಇದು ಬಂಗಾಳಕೊಲ್ಲಿ, ಅರಬ್ಬೀ ಸಮುದ್ರ, ಪೂರ್ವ ಹಿಂದೂ ಮಹಾಸಾಗರ. ಮೆಕ್ಸಿಕೋದ ತೀರ ಪ್ರದೇಶ, ಚೀನಾ ಹಾಗೂ ಆಸ್ಟ್ರೇಲಿಯಗಳ ಪೂರ್ವ ತೀರಗಳಲ್ಲಿ ಉಂಟಾಗುತ್ತದೆ. ಭಾರತದ ದಕ್ಷಿಣ ಭಾಗದ ಪೂರ್ವ ತೀರದ ಮೇಲೆ ಇದರ ಪ್ರಭಾವ ಹೆಚ್ಚು. ಇದು ಬಂಗಾಳಕೊಲ್ಲಿಯಲ್ಲಿ ಹುಟ್ಟಿ ಪಶ್ಚಿಮದೆಡೆಗೆ ನುಗ್ಗುತ್ತದೆ. ದಕ್ಷಿಣ ಭಾರತದ ಹಲವಾರು ನದಿಗಳ ಮುಖಜ ಭೂಮಿಗಳಲ್ಲೂ ಅವುಗಳ ಕಣಿವೆಗಳಲ್ಲೂ ವಿಪರೀತವಾಗಿ ಮಳೆ ಸುರಿಸಿ, ಬೆಳೆಗಳಿಗೂ ಆಸ್ತಿಪಾಸ್ತಿಗಳಿಗೂ ಅಪಾರ ನಷ್ಟವುಂಟು ಮಾಡುತ್ತವೆ. ಕೆಲವುಸಾರಿ ಪ್ರಾಣಹಾನಿಗಳಾಗುವುದೂ ಉಂಟು. ಗಂಗಾನದಿ, ಮಹಾನದಿ, ಕೃಷ್ಣಾ, ಗೋದಾವರಿ, ಕಾವೇರಿ ನದಿಗಳ ಮುಖಜ ಭೂಮಿ ಹಾಗೂ ಮದ್ರಾಸು, ವಿಶಾಖಪಟ್ಟಣ ಮತ್ತು ಕೊಲ್ಕತ್ತ ನಗರಗಳು ಹಲವು ಸಾರಿ ಇಂಥ ಪಿಡುಗಿಗೊಳಗಾಗಿವೆ.

ನೋಡಿಸಂಪಾದಿಸಿ

ಉಲ್ಲೇಖಸಂಪಾದಿಸಿ

National Cyclone Mitigation Project